Wednesday, 27th November 2024

ಹೃದಯಾಘಾತ ದೃಢೀಕರಣದ ವಿಧಾನಗಳು

ಸ್ವಾಸ್ಥ್ಯ ಸಂಪದ

Yoganna55@gmail.com

ಹೃದಯಾಘಾತಕ್ಕೆ ಚಿಕಿತ್ಸೆ ನೀಡುವ ಮುನ್ನ ಅದನ್ನು ರೋಗಿಯ ತೊಂದರೆಗಳು ಮತ್ತು ರೋಗಪತ್ತೆ ವಿಧಾನಗಳಿಂದ ದೃಢೀಕರಿಸಿ ಕೊಳ್ಳುವುದು ಅತ್ಯವಶ್ಯಕ. ಹೃದಯಾಘಾತದ ತೊಂದರೆಗಳು, ಅಡಚಣೆಗೀಡಾದ ಹೃದ ಯದ ನಿರ್ದಿಷ್ಟ ಶುದ್ಧ ರಕ್ತನಾಳ, ಹೃದಯಾಘಾತಕ್ಕೀಡಾದ ಭಾಗ, ತೀವ್ರತೆ, ವಯಸ್ಸು, ಜತೆಗೂಡಿದ ಪ್ರಚೋದಕ ಕಾಯಿಲೆಗಳು ಮತ್ತು ಕಾರಣಗಳನ್ನು ಅವಲಂಬಿ ಸುವುದರಿಂದ ಇವೆಲ್ಲವುಗಳನ್ನು ರೋಗಿಯ ತೊಂದರೆಗಳು ಮತ್ತು ನಿರ್ದಿಷ್ಟ ರೋಗ ಪತ್ತೆ ವಿಧಾನ ಗಳಿಂದ ದೃಢೀಕರಿಸಿಕೊಳ್ಳ ಲಾಗುತ್ತದೆ.

ಇವೆಲ್ಲವುಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು. ಹೃದಯದ ಯಾವ ಶುದ್ಧರಕ್ತನಾಳ ಅಡಚಣೆಗೀಡಾಗಿದೆ ಎಂಬುದು ರೋಗದ ತೀವ್ರತೆಯನ್ನು ನಿರ್ಧರಿಸುತ್ತದೆಯಾದುದರಿಂದ ಮೊದಲು ಇದರ ದೃಢೀಕರಣ ಅತ್ಯವಶ್ಯಕ. ಎಡ ಹೃತ್ ಶುದ್ಧರಕ್ತನಾಳದ ಕಾಯಿಲೆ (ಲೆಫ್ಟ್ ಕರೋನರಿ ಆರ್ಟರಿ ಡಿಸೀಸ್) ಹೃದಯದ ಪ್ರಮುಖ ಭಾಗವಾದ ಎಡಹೃತ್ಕುಕ್ಷಿಗೆ ಇದು ರಕ್ತಸರಬರಾಜನ್ನು ಮಾಡುವುದ ರಿಂದ ಹೃದಯದ ಶುದ್ಧರಕ್ತನಾಳಗಳಲ್ಲಿ ಇದು ಅತ್ಯಂತ ಪ್ರಮುಖ ರಕ್ತನಾಳವಾಗಿದೆ. ಈ ಶುದ್ಧರಕ್ತನಾಳ ಇನ್ನಿತರ ಹೃತ್ ಶುದ್ಧರಕ್ತನಾಳಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಯಿಲೆಗೀಡಾಗುತ್ತದೆ.

ಅಯೋರ್ಟಾದಿಂದ ಉದ್ಭವಿಸುವ ಈ ರಕ್ತನಾಳ ಕೆಳಗಿಳಿಯುವ ಎಡ ಶುದ್ಧರಕ್ತನಾಳ (ಲೆಫ್ಟ್ ಆಂಟೀರಿಯರ್ ಡಿಸೆಂಡಿಂಗ್ ಆರ್ಟರಿ) ಮತ್ತು ಬಾಗಿದ ಶುದ್ಧರಕ್ತನಾಳ (ಸರ್ಕಮ್ ಫ್ಲೆಕ್ಸ್ ಆರ್ಟರಿ) ಎಂಬ ೨ ಕವಲುಗಳಾಗಿ ವಿಜನೆಯಾಗಿ ಎಡ ಹೃದಯದ ಎಲ್ಲ ಭಾಗ ಗಳಿಗೂ ರಕ್ತ ಸರಬರಾಜು ಮಾಡುತ್ತದೆ. ದ್ವಿಭಜನೆ ಯಾಗುವ ಮುನ್ನದ ಭಾಗ ಪ್ರಧಾನಭಾಗವಾಗಿದ್ದು, ಈ ಭಾಗದ ಸಂಪೂರ್ಣ ಅಡಚಣೆಯಿಂದ ದಿಢೀರನೆ ಎಡಭಾಗದ ಹೃದಯಭಾಗಗಳಿಗೆಲ್ಲ ರಕ್ತ ಸರಬರಾಜು ನಿಂತು ಎಡ ಹೃತ್ಕುಕ್ಷಿ ಸ್ನಾಯು ಪೂರ್ಣ ಸಾವಿಗೀಡಾಗಿ ದಿಢೀರ್ ಸಾವನ್ನುಂಟುಮಾಡುತ್ತದೆ.

ಕೆಳಗಿಳಿಯುವ ಎಡ ಹೃತ್ ಶುದ್ಧರಕ್ತನಾಳವು ಎಡ ಹೃತ್ಕುಕ್ಷಿಯ ಎಲ್ಲ ಭಾಗಗಳಿಗೂ ರಕ್ತ ಸರಬರಾಜು ಮಾಡುವುದರಿಂದ ಇದರ ಸಂಪೂರ್ಣ ಅಡಚಣೆಯೂ ಹೃದಯ ಸ್ತಂಭನವನ್ನುಂಟು ಮಾಡ ಬಹುದು. ಇದರ ಕವಲುಗಳ ಅಡಚಣೆಯಿಂದ ಆಯಾಯ ಹೃದಯ ಭಾಗದ ಸಾವುಂಟಾಗುತ್ತದೆ. ಬಲ ಹೃತ್ ಶುದ್ಧರಕ್ತನಾಳದ ಕಾಯಿಲೆ (ರೈಟ್ ಕರೋನರಿ ಆರ್ಟರಿ ಡಿಸೀಸ್) ಈ ಹೃತ್ ಶುದ್ಧರಕ್ತನಾಳವೂ ಅಯೋರ್ಟಾದಿಂದ ಉದ್ಭವಿಸಿ, ಬಲಭಾಗದ ಬಹುಪಾಲು ಹೃದಯಕ್ಕೆ ಶುದ್ಧರಕ್ತವನ್ನು ಸರಬರಾಜು ಮಾಡುತ್ತದೆ. ಈ ರಕ್ತನಾಳದ ಅಡಚಣೆ ಬಲ ಹೃತ್ಕುಕ್ಷಿಯ ಹೃದಯಾಘಾತವನ್ನುಂಟುಮಾಡುತ್ತದೆ. ಈ ರಕ್ತನಾಳದ ಕಾಯಿಲೆ ಎಡ ಹೃತ್ ಶುದ್ಧರಕ್ತನಾಳದ ಕಾಯಿಲೆಗಿಂತ ವಿರಳ ಮತ್ತು ಅದಕ್ಕಿಂತ ಹೆಚ್ಚು ಗಂಭೀರ ಸ್ವರೂಪದ ಪರಿಣಾಮಗಳನ್ನುಂಟು ಮಾಡುವುದಿಲ್ಲ.

ಹೃದಯಾಘಾತದ ವಿಧಗಳು
ಹೃದಯಾಘಾತದಿಂದುಂಟಾಗುವ ಪರಿಣಾಮಗಳ ತೀವ್ರತೆ ಮತ್ತು ಸ್ವರೂಪವು, ಅದರ ವಿಧ, ವ್ಯಾಪ್ತಿ ಮತ್ತು ಸ್ಥಾನಗಳನ್ನು ಅವಲಂಬಿಸಿರುತ್ತವೆ. ಹೃದಯ ಸ್ನಾಯು ಅಥವಾ ಹೃದಯದ ಒಳ ಹೃದಯ ಪದರ ಸಾವಿಗೀಡಾಗಬಹುದು. ಇದನ್ನಾಧರಿಸಿ ಹೃದಯ ಸ್ನಾಯುವಿನ ನಿರಕ್ತಸಾವು (ಮಯೋಕಾರ್ಡಿಯಲ್ ಇನ್ ಫಾಕ್ಷನ್) ಮತ್ತು ಒಳ ಹೃದಯ ಪದರದ ನಿರಕ್ತಸಾವು (ಎಂಡೋಕಾರ್ಡಿಯಲ್ ಇನ್ ಫಾಕ್ಷನ್) ಎಂಬ ೨ ವಿಧಗಳಿವೆ. ಹೃದಯದ ಸ್ನಾಯುವಿನ ನಿರಕ್ತ ಸಾವಿನಲ್ಲಿ ಹೃದಯಸ್ನಾಯುವಿನ ಸಂಪೂರ್ಣ ದಪ್ಪ ಸಾವಿಗೀಡಾಗಬಹುದು (ಟ್ರಾನ್ಸ್ ಮ್ಯೂರಲ್ ಮಯೋಕಾರ್ಡಿಯಲ್ ಇನ್ ಫಾಕ್ಷನ್) ಅಥವಾ ಹೃದಯ ಸ್ನಾಯುವಿನ ಮೇಲ್ಭಾಗ ಸಾವಿಗೀಡಾಗ ಬಹುದು (ಎಪಿಕಾರ್ಡಿಯಲ್ ಇನ್ ಫಾಕ್ಷನ್).

ಹೃದಯಾಘಾತಕ್ಕೀಡಾದ ಹೃದಯದ ಭಾಗವನ್ನಾಧರಿಸಿ ಎಡ ಹೃತ್ಕುಕ್ಷಿಯ ಹೃದಯಾಘಾತ ಮತ್ತು ಬಲ ಹೃತ್ಕುಕ್ಷಿಯ ಹೃದಯಾಘಾತವೆಂಬ ಪ್ರಮುಖ ೨ ವಿಧಗಳಿವೆ. ಎಡ ಹೃತ್ಕುಕ್ಷಿಯು ಮುಂಭಾಗದ, ಎಡಭಾಗದ, ಹಿಂಭಾಗದ ಮತ್ತು ತಳಭಾಗದ ಗೋಡೆಗಳನ್ನೊಳಗೊಂಡಿದ್ದು, ಇವು ಪ್ರತ್ಯೇಕವಾಗಿ ಅಥವಾ ಜೋಡಿತವಾಗಿ ನಿರಕ್ತ ಸಾವಿಗೀಡಾಗಬಹುದಾಗಿದ್ದು, ಇವುಗಳನ್ನು
ಅನುಕ್ರಮವಾಗಿ ಎಡ ಹೃತ್ಕುಕ್ಷಿಯ ಮುಂಭಾಗದ ಗೋಡೆಯ ಹೃದಯಸ್ನಾಯುವಿನ ನಿರಕ್ತ ಸಾವು (ಆಂಟೀರಿಯರ್ ವಾಲ್ ಮಯೋಕಾರ್ಡಿಯಲ್ ಇನ್ ಫಾಕ್ಷನ್), ಹೊರಗೋಡೆಯ ಹೃದಯ ಸ್ನಾಯುವಿನ ನಿರಕ್ತ ಸಾವು (ಲ್ಯಾಟರಲ್ ವಾಲ್
ಮಯೋಕಾರ್ಡಿಯಲ್ ಇನ್ ಫಾಕ್ಷನ್), ತಳ ಗೋಡೆಯ ಹೃದಯಸ್ನಾಯುವಿನ ನಿರಕ್ತ ಸಾವು (ಇನ್‌ಫೀರಿಯರ್ ವಾಲ್ ಮಯೋಕಾರ್ಡಿಯಲ್ ಇನ್ ಫಾಕ್ಷನ್) ಮತ್ತು ಹಿಂಭಾಗದ ಗೋಡೆಯ ಹೃದಯಸ್ನಾಯುವಿನ ನಿರಕ್ತ ಸಾವು (ಪೋಸ್ಟೀರಿ
ಯರ್ ವಾಲ್ ಮಯೋಕಾರ್ಡಿಯಲ್ ಇನ್ ಫಾಕ್ಷನ್) ಎಂದು ಹೆಸರಿಸಲಾಗಿದೆ.

ಹೃತ್ಕುಕ್ಷಿಯ ವಿಭಜಕ ನಿರಕ್ತ ಸಾವಿಗೀಡಾಗಬಹುದಾಗಿದ್ದು ಇದನ್ನು ವಿಭಜಕದ ನಿರಕ್ತ ಸಾವು (ಸೆಪ್ಟಲ್ ಇನ್ ಫಾಕ್ಷನ್) ಎನ್ನಲಾಗಿದೆ. ಹೃದಯದ ಒಳಪದರದ ನಿರಕ್ತಸಾವಿನಲ್ಲಿ ವಿದ್ಯುತ್ ಅಸ್ಥಿರತೆಗಳು ಮತ್ತು ಕವಾಟ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೃದಯ ಸ್ನಾಯುವಿನ ಸಂಪೂರ್ಣ ದಪ್ಪದ ನಿರಕ್ತಸಾವಿನಲ್ಲಿ ಅದರಲ್ಲೂ ಮುಂಭಾಗದ ಮತ್ತು ಹೊರಗೋಡೆಯ ನಿರಕ್ತಸಾವಿನಲ್ಲಿ ಹೃದಯದ ವಿಫಲತೆ ಮತ್ತು ದಿಢೀರ್ ಸಾವಿನ ಸಂಭವ ಹೆಚ್ಚು. ಎಡಹೃತ್ಕುಕ್ಷಿಯ ಒಂದಕ್ಕಿಂತ
ಹೆಚ್ಚು ಗೋಡೆಗಳು ಪೂರ್ಣವಾಗಿ ಸಾವಿಗೀಡಾಗಿದ್ದಲ್ಲಿ ಇದನ್ನು ವ್ಯಾಪಕ ಹೃದಯಸ್ನಾಯು ಸಾವು ಎನ್ನಲಾಗಿದ್ದು, ಇದೂ ದಿಢೀರ್ ಸಾವನ್ನುಂಟು ಮಾಡುತ್ತದೆ. ಎಡ ಹೃತ್ಕುಕ್ಷಿಯ ಕೆಳ ಗೋಡೆಯ ಅಥವಾ ಯಾವುದಾದರೊಂದು ಗೋಡೆಯ ಅಥವಾ
ಬಲ ಹೃತ್ಕುಕ್ಷಿಯ ನಿರಕ್ತ ಸಾವುಗಳಲ್ಲಿ ಸಾಮಾನ್ಯವಾಗಿ ಮಾರಣಾಂತಿಕ ಪರಿಣಾಮಗಳುಂಟಾಗುವುದಿಲ್ಲ.

ರೋಗ ತೊಂದರೆಗಳು
ಹೃದಯದ ಶುದ್ಧರಕ್ತನಾಳಗಳ ಕಾಯಿಲೆ ಹೃದಯಾ ಘಾತವನ್ನುಂಟುಮಾಡುವಷ್ಟು ಅಡಚಣೆ ಗೊಳ್ಳಲು ಹತ್ತಾರು ವರ್ಷಗಳೇ ಬೇಕಾಗುತ್ತದೆ. ತೊಂದರೆಗಳನ್ನು ಹೃದಯಾಘಾತ-ಪೂರ್ವ ರೋಗ ತೊಂದರೆಗಳು ಮತ್ತು ಹೃದಯಾಘಾತದ ರೋಗ ತೊಂದರೆಗಳು ಎಂದು ವಿಂಗಡಿಸಬಹುದಾಗಿದೆ.

ಹೃದಯಾಘಾತ-ಪೂರ್ವ ರೋಗ ತೊಂದರೆಗಳು
ಹೃದಯಾಘಾತ-ಪೂರ್ವ ಅವಧಿಯಲ್ಲಿ ಎದೆನೋವು, ಎದೆ ಬಡಿತ, ದೈಹಿಕ ಶ್ರಮದಿಂದ, ಮೆಟ್ಟಿಲುಗಳನ್ನು ಹತ್ತುವಾಗ ದಮ್ಮು, ಬೆವರು, ಸುಸ್ತು-ಸಂಕಟ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಎದೆನೋವು ಅತ್ಯಂತ ಪ್ರಮುಖವಾದ ತೊಂದರೆಯಾಗಿದ್ದು, ಇದು ನಡೆದಾಗ ಹೆಚ್ಚಾಗುತ್ತದೆ. ವಿಶ್ರಾಂತಿ ತೆಗೆದುಕೊಂಡಾಗ ಕಡಿಮೆಯಾಗುತ್ತದೆ. ೧೦-೧೫ ನಿಮಿಷಗಳ ಕಾಲ ಇದ್ದು ನಂತರ ಶಮನವಾಗುತ್ತದೆ. ಇದನ್ನು ‘ಆಂಜೈನಾ ಎದೆನೋವು’ ಎನ್ನಲಾಗುತ್ತದೆ.

ಕೆಲವರಲ್ಲಿ ಗ್ಯಾಸ್ಟ್ರಿಕ್ ತೊಂದರೆ ಹೋಲುವ ಎದೆ ಉರಿ, ಮೇಲಿನ ಹೊಟ್ಟೆ ನೋವು, ವಾಂತಿಗಳು ಕಾಣಿಸಿಕೊಳ್ಳಬಹುದು. ಈ ತೊಂದರೆಗಳನ್ನು ಗ್ಯಾಸ್ಟ್ರಿಕ್ ತೊಂದರೆಗಳೆಂದು ಭಾವಿಸಿ ಉದಾಸೀನ ಮಾಡಬಾರದು. ಈ ತೊಂದರೆಗಳು ಹೃದಯಸ್ನಾಯುವಿನ ರಕ್ತ ಕುಂದಿಕೆಯನ್ನು ಸೂಚಿಸುವುದರಿಂದ ಈ ಹಂತ ದಲ್ಲಿಯೇ ಕಾಯಿಲೆಗೆ ಸೂಕ್ತ ಚಿಕಿತ್ಸೆ ಮಾಡುವುದರಿಂದ ಸಂಭವನೀಯ ಹೃದಯಾಘಾತವನ್ನು ತಡೆಗಟ್ಟಬಹುದು.

ಹೃದಯಾಘಾತದ ರೋಗ ತೊಂದರೆಗಳು 
ಹೃದಯಾಘಾತವಾದ ತಕ್ಷಣ ಕಾಣಿಸಿಕೊಳ್ಳುವ ತೊಂದರೆಗಳಿವು. ತೀವ್ರ ಪ್ರಮಾಣದ, ಸಹಿಸಲಾಗದ ದಿಢೀರನೆ ಕಾಣಿಸಿಕೊಳ್ಳುವ ಎದೆನೋವು, ದಮ್ಮು, ಅತೀವ ಬೆವರುವಿಕೆ, ಸುಸ್ತು-ಸಂಕಟ, ಆತಂಕ ಇತ್ಯಾದಿ. ಕೆಲವರಲ್ಲಿ ಕೆಮ್ಮು, ರಕ್ತಯುಕ್ತ ಕಫ, ವಾಂತಿ
ಕಾಣಿಸಿಕೊಳ್ಳಬಹುದು. ಬಿ.ಪಿ. ಕುಸಿತ, ಹೃದಯದ ಬಡಿತದ ಕ್ಷೀಣತೆ, ಶ್ವಾಸಕೋಶಗಳಲ್ಲಿ ದ್ರವ ಸಂಗ್ರಹಣೆಯಿಂದ ಅವುಗಳಲ್ಲಿ ಕ್ರಿಪಿಟೇಷನ್ ಶಬ್ದಗಳು ಉಂಟಾಗುತ್ತವೆ. ಅಪರೂಪವಾಗಿ ಕೆಲವು ನಿಮಿಷ ಅಥವಾ ಗಂಟೆಗಳಲ್ಲಿ ಸಾವುಂಟಾಗಬಹುದು. ರಾತ್ರಿ ವೇಳೆ ಮಲಗಿರುವಾಗಲೆ ಸಾವು ಸಂಭವಿಸಬಹುದು. ದಿಢೀರ್ ಸಾವೇ ಮೊದಲ ರೋಗ ಲಕ್ಷಣವಾಗಬಹುದು.

ಹೃದಯದ ರವಾನಕ ವ್ಯವಸ್ಥೆ ಕಾಯಿಲೆಗೀಡಾಗಿದ್ದಲ್ಲಿ ಹೃದಯದ ಮಿಡಿತಾಜ್ಞೆಯ ಉತ್ಪತ್ತಿಯ ಅಥವಾ ಮತ್ತು ರವಾನೆಯ ಅವ್ಯವಸ್ಥೆಗಳು ಕಂಡು ಬರುತ್ತವೆ. ಎಡ ಹೃತ್ಕುಕ್ಷಿಯ ಸ್ನಾಯುವಿನ ವ್ಯಾಪಕ ಸಾವಿನಲ್ಲಿ ಹೃತ್ಕುಕ್ಷಿಯ ಮಿಡಿತೇರಿಕೆ ಮತ್ತು ಹೃತ್ಕು
ಕ್ಷಿಯ ಅದುರುವಿಕೆ (ವೆಂಟ್ರಿಕ್ಯುಲಾರ್ ಫಿಬ್ರಿ ಲೇಷನ್) ಗಳುಂಟಾಗಿ ದಿಢೀರ್ ಸಾವು ಸಂಭವಿಸಬಹುದು.

ಮೌನ/ಸುಪ್ತ ಹೃದಯಾಘಾತ
ಕೆಲವರಲ್ಲಿ ಯಾವ ರೋಗತೊಂದರೆಗಳೂ ಇಲ್ಲದೆ ಕಾಯಿಲೆ ಮೌನವಾಗಿ ಇರಬಹುದು. ದಿಢೀರನೆ ಹೃದಯಾಘಾತ ಅಥವಾ ಸಾವೇ ಮೊದಲ ರೋಗ ತೊಂದರೆಯಾಗಬಹುದು. ಸ್ಥೂಲದೇಹಿಗಳು, ಧೂಮಪಾನಿಗಳು ಮತ್ತು ಸಕ್ಕರೆ ಕಾಯಿಲೆಯವರಲ್ಲಿ ಈ ಸಾಧ್ಯತೆ ಹೆಚ್ಚಾಗಿರುವುದರಿಂದ ಅವರು ಆಗಿಂದಾಗ್ಗೆ ಸುಪ್ತ ಕಾಯಿಲೆಗಾಗಿ ಪರೀಕ್ಷಿಸಿಕೊಳ್ಳಬೇಕು.

ರೋಗಪತ್ತೆ ವಿಧಾನಗಳು
ಹೃತ್ ವಿದ್ಯುತ್ ನಕ್ಷೆ (ಇ.ಸಿ.ಜಿ,), ಥ್ರೆಡ್‌ಮಿಲ್ ಪರೀಕ್ಷೆ ಪ್ರತಿಧ್ವನಿತ ಹೃತ್ ಚಿತ್ರೀಕರಣ (ಇಕೋ ಕಾರ್ಡಿಯೋ ಗ್ರಾಂ), ಹೃದಯದ ಶುದ್ಧರಕ್ತನಾಳಗಳ ಚಿತ್ರೀಕರಣ (ಕರೊನರಿ ಆಂಜಿಯೋ ಗ್ರಾಂ) ಮತ್ತು ರಕ್ತದಲ್ಲಿ ಹೃದಯದ ಕಿಣ್ವಗಳನ್ನು ಅಳೆಯುವಿಕೆ
ಪರೀಕ್ಷೆ ಗಳಿಂದ ಹೃದಯಾಘಾತ-ಪೂರ್ವ ಹಂತದ ಕಾಯಿಲೆ ಮತ್ತು ಹೃದಯಾಘಾತವನ್ನು ದೃಢೀಕರಿಸಿ ಕೊಳ್ಳಲಾಗುತ್ತದೆ.

ಹೃತ್ ವಿದ್ಯುತ್ ನಕ್ಷೆ (ಇಸಿಜಿ- ಎಲೆಕ್ಟ್ರೋ ಕಾರ್ಡಿಯೋ ಗ್ರಾಂ) 
ಹೃದಯದ ರಕ್ತಕುಂದಿಕೆ ರೋಗವನ್ನು ದೃಢಿಕರಿಸಿಕೊಳ್ಳಲು ಲಭ್ಯವಿರುವ, ಅತ್ಯಂತ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಮಾಡ ಬಹುದಾದ ಪರೀಕ್ಷೆಯಿದು. ಹೃದಯದ ಕಾರ್ಯಅದರಲ್ಲಿ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯಿಂದ ಜರುಗುತ್ತಿದ್ದು, ಹೃದಯಾಘಾತದಿಂದ ಉಂಟಾ ಗುವ ವಿದ್ಯುತ್ ಅವ್ಯವಸ್ಥೆಗಳನ್ನು ವಿಶಿಷ್ಟ ಕಾಗದದ ಮೇಲೆ ನಕ್ಷೀಕರಿಸಿ ಹೃದಯಾಘಾತವನ್ನು
ತಿಳಿಯಲಾಗುತ್ತದೆ. ಹೃದಯದ ಯಾವ ಹೃತ್ಕುಕ್ಷಿ ಮತ್ತು ಯಾವ ಗೋಡೆ ಸಾವಿಗೀಡಾಗಿದೆ ಎಂಬುದನ್ನು ಈ ಪರೀಕ್ಷೆಯಿಂದಲೇ ಅರಿಯಬಹುದಾಗಿದೆ.

ಹೃದಯಸ್ನಾಯುವಿಗೆ ರಕ್ತ ಕಡಿಮೆಯಾಗಿದ್ದಲ್ಲಿ ಇಸಿಜಿಯಲ್ಲಿ ನಿರ್ದಿಷ್ಟ ಬದಲಾವಣೆಗಳು (ಟಿ ಅಲೆ ತಲೆಕೆಳಗಾಕುವಿಕೆ, ಎಸ್-ಟಿ ತುಂಡಿನ ಅದುಮಿಕೆ) ಮತ್ತು ಹೃದಯಸ್ನಾಯು ಸಾವಿಗೀಡಾ ಗಿದ್ದಲ್ಲಿ ವಿಭಿನ್ನ ಬದಲಾವಣೆಗಳು(ರೋಗದ ಕ್ಯೂ ಅಲೆ), ಎಸ್-ಟಿ ತುಂಡಿನ ಮೇಲೇರಿಕೆ ಮತ್ತು ಮೇಲ್ಮಖನಾಗಿ ಬಾಗಿರುವಿಕೆ) ಕಾಣಿಸಿಕೊಳ್ಳುತ್ತವೆ. ವಿದ್ಯುತ್ ಅಸ್ಥಿರತೆಗಳಿದ್ದಲ್ಲಿ ವಿಭಿನ್ನರೀತಿಯ ಲಯ ಮಿಡಿತಗಳು (ಅರ‍್ಹಿತ್ ಮಿಯ) ಕಂಡುಬರುತ್ತವೆ. ಥ್ರೆಡ್‌ಮಿಲ್ ಪರೀಕ್ಷೆ ಇಸಿಜಿಯಲ್ಲಿ ಅನುಮಾನಿತ ಬದಲಾವಣೆಗಳಿದ್ದು,
ಸುಪ್ತ ಹೃತ್ ಶುದ್ಧರಕ್ತನಾಳಗಳ ಕಾಯಿಲೆಯನ್ನು ಅನುಮಾನಿಸಿದ ಸಂದರ್ಭಗಳಲ್ಲಿ ಕಾಯಿಲೆ ದೃಢೀಕರಣಕ್ಕಾಗಿ ಈ ಪರೀಕ್ಷೆಯನ್ನು ಮಾಡಲಾಗುತ್ತದೆ.

ರೋಗಿಯನ್ನು ಯಂತ್ರದಿಂದ ಓಡುವಂತಾಗಿಸಿ, ಹೃದಯಕ್ಕೆ ಅತಿಯಾದ ದೈಹಿಕ ಶ್ರಮನೀಡಿ ಇಸಿಜಿಯನ್ನು ನಕ್ಷೀಕರಿಸಿ ಬದಲಾ ವಣೆಗಳನ್ನು ಗುರುತಿಸಿ, ರಕ್ತಪರಿಚಲನಾ ಪೂರೈಕಾ ಸಾಮರ್ಥ್ಯವನ್ನು ತಿಳಿಯಲಾಗುತ್ತದೆ. ಬಹುಪಾಲರಲ್ಲಿ ಕಾಯಿಲೆ ಯನ್ನು ಪತ್ತೆಮಾಡಲು ಇದು ಸಮರ್ಥ. ಹೃದಯಾಘಾತ ಪೂರ್ವ ಹಂತದ ರೋಗಿಗಳಲ್ಲಿ ಮಾತ್ರ ಕಾಯಿಲೆ ದೃಢೀಕರಣಕ್ಕಾಗಿ ಈ ಪರೀಕ್ಷೆ ಉಪಯುಕ್ತ. ಹೃದಯಾಘಾತ ಶಂಕಿತರಲ್ಲಿ ಮತ್ತು ಹೃದಯಾಘಾತಿಗಳಲ್ಲಿ ಈ ಪರೀಕ್ಷೆ ನಿಷಿದ್ಧ.

ಇಕೋ ಕಾರ್ಡಿಯೋಗ್ರಾಂ
ಹೃದಯದ ಮೇಲೆ ಶಬ್ದಾತೀತ ಅಲೆಗಳನ್ನು ಹಾಯಿಸಿ ಅಲ್ಲಿಂದ ಹೃದಯದ ರಚನೆ ಮತ್ತು ಕಾರ್ಯಗಳಿಗನುಗುಣವಾಗಿ ಪ್ರತಿಧ್ವನಿಸಿ ಬಂದ ಅಲೆಗಳನ್ನು ಪರದೆಯ ಮೇಲೆ ನಕ್ಷೀಕರಿಸಿ ಬದಲಾವಣೆಗಳನ್ನು ಗುರ್ತಿಸಿ ಕಾಯಿಲೆಯನ್ನು ನಿಖರಪಡಿಸಿಕೊಳ್ಳ ಲಾಗುತ್ತದೆ. ರಕ್ತ ಕುಂದಿಕೆ ಅಥವಾ ರಕ್ತ ಹೀನತೆಗೀಡಾದ ಹೃದಯದ ಭಾಗದ ಚಲನಕ್ರಿಯೆಗಳಲ್ಲಾಗುವ ವ್ಯತ್ಯಾಸಗಳನ್ನು ಗುರುತಿಸಿ ಕಾಯಿಲೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ. ಹೃದಯಾಘಾತ ಶಂಕಿತರಲ್ಲಿ ಹೃದಯದ ಸ್ನಾಯು ವಿನ ಸಾವಿನ ಭಾಗ, ಹೃದಯದ ವಿಫಲತೆ, ಕವಾಟಗಳ ವಿಫಲತೆ ಮತ್ತಿತರ ಅವಘಡಗಳನ್ನು ಈ ಪರೀಕ್ಷೆಯಿಂದ ತಿಳಿಯಲಾಗುತ್ತದೆ.

ಹೃದಯದ ಶುದ್ಧರಕ್ತನಾಳಗಳ ಚಿತ್ರೀಕರಣ(ಕರೋನರಿ ಆಜಿಯೋಗ್ರಾಂ)
ಹೃದಯದ ಶುದ್ಧರಕ್ತನಾಳಗಳ ಕಾಯಿಲೆಯನ್ನು ತಿಳಿಯಲು ಅತ್ಯಂತ ನಿಖರವಾದ ಪರೀಕ್ಷೆಯಿದು. ತೊಡೆಯ ಅಥವಾ ಮುಂದೋಳಿನ ರೇಡಿಯಲ್ ಶುದ್ಧರಕ್ತನಾಳದ ಮೂಲಕ ಕೆಥೆಟರ್ ಅನ್ನು ಹೃದಯದ ಶುದ್ಧರಕ್ತನಾಳಗಳಿಗೆ ಒಳತೂರಿಸಿ ಅವುಗಳಿಗೆ ಬಣ್ಣ ದ್ರವ್ಯವನ್ನು ನೀಡಿ ಅವುಗಳ ಚಿತ್ರವನ್ನು ಕ್ಯಾಥ್‌ಲಾಬ್ ಸಲಕರಣೆಯ ದೃಷ್ಟಿಪಟಲದ ಮೇಲೆ ಚಿತ್ರೀಕರಿಸಿ ಶುದ್ಧರಕ್ತನಾಳಗಳ ರಚನೆ, ಅಡಚಣೆ ಮತ್ತು ಅವುಗಳಲ್ಲಿ ಹರಿಯುವ ರಕ್ತಪರಿಚಲನೆಯನ್ನು ಅಧ್ಯಯನ ಮಾಡಿ ನ್ಯೂನತೆ ಯನ್ನು  ತಿಳಿಯಲಾಗುತ್ತದೆ. ಬಣ್ಣ ದ್ರವ್ಯಕ್ಕೆ ಅಲರ್ಜಿ, ಹೃದಯದ ಶುದ್ಧರಕ್ತನಾಳಗಳ ಹರಿಯುವಿಕೆ,ಅಪರೂಪವಾಗಿ ಸಂಭವಿಸ ಬಹುದಾದ ಅವಘಡಗಳು.

ಹೃತ್ ಶುದ್ಧರಕ್ತನಾಳಗಳ ಒಳಕ್ಕೆ ಅಲ್ಟ್ರಾಸೌಂಡ್ ಅನ್ನು ಅಳವಡಿಸಿ ಅಡಚಣೆಯನ್ನು ಚೆನ್ನಾಗಿ ಅಧ್ಯಯನ ಮಾಡಿ ಲೇಸರ್ ಕಿರಣಗಳಿಂದ ಜಿಡ್ಡು ಗೆಡ್ಡೆಯನ್ನು ಬಹು ಸಮರ್ಥವಾಗಿ ಒಡೆದು ಸರಿದೂಗಿಸುವ ಆಧುನಿಕ ತಂತ್ರಜ್ಞಾನ ಹಿಂದಿನ ತಂತ್ರಜ್ಞಾನ ಕ್ಕಿಂತ ಹೆಚ್ಚು ಸಾಮರ್ಥ್ಯ ಶಾಲಿಯಾಗಿದ್ದು, ಹೆಚ್ಚು ಶೇಕಡವಾರು ಯಶಸ್ವಿ ಫಲಿತಾಂಶ ಲಭಿಸುತ್ತದೆ. ಸಾಮಾನ್ಯರಲ್ಲಿಯೂ
ಅಲ್ಪ ಪ್ರಮಾಣದಲ್ಲಿ ಹೃದಯದ ಶುದ್ಧರಕ್ತನಾಳಗಳ ಅಡಚಣೆ ಇರಬಹುದು. ಶೇ ೭೦ಕ್ಕಿಂತ ಹೆಚ್ಚು ಇದ್ದರೆ ಮಾತ್ರ ಅಪಾಯ.

(ಮುಂದುವರೆಯುವುದು)