ಕಳಕಳಿ
ಸಾಗರ್ ಮುಧೋಳ
ನಮ್ಮ ಸರಕಾರಗಳು ಅತಿ ಕಡಿಮೆ ಗಮನ ಕೊಟ್ಟು, ಅತಿ ಕಡಿಮೆ ಬಜೆಟ್ ವಿತರಿಸಿ, ಆಯಕಟ್ಟಿನ ಜಾಗಗಳಿಗೆ ಅಪಾತ್ರರನ್ನು ನೇಮಿಸಿ, ಅತಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿಟ್ಟುಕೊಂಡು, ದೊಡ್ಡ ದೊಡ್ಡ ಭಾಷಣ ಬಿಗಿಯುವ ಯಾವುದಾದರೂ ಇಲಾಖೆಯಿದ್ದರೆ ಅದು ಉನ್ನತ ಶಿಕ್ಷಣ ಕ್ಷೇತ್ರ.
ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ದೇಶದ ಪ್ರತಿಷ್ಠಿತ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಐಐಟಿ ಧನ ಬಾದ್‌ಗೆ ಪ್ರವೇಶವನ್ನು ಪಡೆದಿದ್ದ. ಆದರೆ, 17500 ರುಪಾಯಿ ಪ್ರವೇಶಾತಿ ಶುಲ್ಕವನ್ನು ಪಾವತಿಸು ವಲ್ಲಿ ತಡ ಮಾಡಿದ ಕಾರಣ ಅವನಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆ ವಿದ್ಯಾರ್ಥಿ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ್‌ರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ಒಂದು ಮಹತ್ವದ ಆದೇಶವನ್ನು ನೀಡಿತು.
“ಈ ಪ್ರತಿಭಾವಂತ ವಿದ್ಯಾರ್ಥಿಯು ಅವಕಾಶ ವಂಚಿತನಾಗಲು ನಾವು ಬಿಡುವುದಿಲ್ಲ; ಸಮಾಜದ ಕೆಳಸ್ತರದ ಸಮುದಾಯಕ್ಕೆ ಸೇರಿದ್ದರೂ ಆತ ಎಲ್ಲ ಹಂತಗಳನ್ನೂ ದಾಟಿ ಐಐಟಿಗೆ ಪ್ರವೇಶ ಪಡೆದಿದ್ದಾನೆ. ಇಂಥ ಪ್ರತಿಭಾ ವಂತರಿಗೆ ಈ ಹಂತದಲ್ಲಿ ಅವಕಾಶ ತಪ್ಪಬಾರದು” ಎಂಬುದಾಗಿ ನ್ಯಾಯಾಧೀಶರು ಅಭಿಪ್ರಾಯಪಟ್ಟು, ಸಂವಿಧಾನ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಆ ವಿದ್ಯಾರ್ಥಿಗೆ ಹಾಲಿ ಸೆಮಿಸ್ಟರ್‌ನಲ್ಲಿಯೇ ಪ್ರವೇಶ ನೀಡುವಂತೆ ಸದರಿ ಶಿಕ್ಷಣ ಸಂಸ್ಥೆಗೆ ನಿರ್ದೇಶನವನ್ನು ನೀಡಿದರು. ತದನಂತರ, ಈ ವಿದ್ಯಾರ್ಥಿಯ ವಿದ್ಯಾಭ್ಯಾಸದ ಶುಲ್ಕವನ್ನು ಭರಿಸಲು ಉತ್ತರ ಪ್ರದೇಶ ಸರಕಾರ ಒಪ್ಪಿಕೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇಲ್ಲೊಂದು ಮಹತ್ವದ ಅಂಶವನ್ನು ಗಮನಿಸಬೇಕು: ವಿದ್ಯಾರ್ಥಿಯೊಬ್ಬ ಕಷ್ಟಪಟ್ಟು ಓದಿ, ಮೆರಿಟ್ ಆಧಾರದ
ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರವೂ ಓದಿನ ಅವಕಾಶಕ್ಕಾಗಿ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ಹೋರಾಟ ಮಾಡಬೇಕೇ? ಶುಲ್ಕ ಕಟ್ಟಲಾಗದ ಆರ್ಥಿಕ ಅಸಹಾಯಕತೆಯು ಅವನ ಪ್ರತಿಭೆಯನ್ನು ತಿಂದುಹಾಕ ಬಹುದೇ? ಹಾಗಂತ ಅವನು ಪ್ರವೇಶಾತಿ ಬಯಸಿದ್ದು ಯಾವುದೋ ಉದ್ಯಮಿಗಳು ನಡೆಸುವ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಅಲ್ಲ; ಸರಕಾರಗಳು ತಮ್ಮ ಸಾಧನೆಯ ದ್ಯೋತಕ ಎಂದು ಶ್ರೇಯಸ್ಸನ್ನು ತೆಗೆದು ಕೊಳ್ಳಲು ಹಾತೊರೆಯುವ ಐಐಟಿಯಲ್ಲಿ! ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯಕ್ಕೆ ನೇರವಾಗಿ ಒಳಪಡುವ ಐಐಟಿಯಲ್ಲಿ ಈ ತರಹದ ಅಚಾತುರ್ಯಕ್ಕೆ ಅಲ್ಲಿಯೇ ಕಡಿವಾಣ ಹಾಕಲು ಕನಿಷ್ಠಪಕ್ಷ ಒಂದು ತಜ್ಞರ ಸಮಿತಿ ಯಿಲ್ಲದಿರುವುದು, ಒಂದೊಮ್ಮೆ ಇದ್ದರೂ ಅದು ಕೆಲಸಕ್ಕೆ ಬಾರದಿರುವುದು ಈ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
Institutes of National Importance ದರ್ಜೆಯ ಐಐಟಿ, ಎನ್‌ಐಟಿ, ಐಐಎಮ್, ಐಐಐಟಿ, ಎನ್ ಎಲ್‌ಯು ಗಳಲ್ಲಿ ಅಧ್ಯಯನ ಮಾಡಬೇಕೆಂದರೆ ತಲೆಯ ತುಂಬಾ ಜ್ಞಾನವಿದ್ದರಷ್ಟೇ ಸಾಲದು, ಕಿಸೆಯ ತುಂಬಾ ದುಡ್ಡೂ ಇರಬೇಕು ಎಂಬುದು ಅಚ್ಚರಿಯಾದರೂ ಸತ್ಯ. ಆದರೆ, ಈ ಸಂಸ್ಥೆಗಳ ಶುಲ್ಕದ ವಿವರಗಳನ್ನು ಗಮನಿಸಿದರೆ, ಕಡುಬಡತನದ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳು ಇವುಗಳಲ್ಲಿ ಏಗಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುವುದು ಅತ್ಯಂತ ಸಹಜ.
ಇದಕ್ಕೆ ಸಲೀಸಾಗಿ ಹೇಳುವ ಒಂದು ಉಪಾಯ- ‘ಶೈಕ್ಷಣಿಕ ಸಾಲ’. ಇದು ಕೂಡ ಕೆಲವು ಶಿಕ್ಷಣ ಸಂಸ್ಥೆಗಳು ಬ್ಯಾಂಕು ಗಳೊಂದಿಗೆ ಮಾಡಿಕೊಳ್ಳುತ್ತಿರುವ ಅಪವಿತ್ರ ಮೈತ್ರಿ ಎನ್ನಬೇಕಾಗುತ್ತದೆ. Job Placement ಹೆಸರಿನಲ್ಲಿ ಪ್ರತಿಭಾವಂತರ ತಲೆಗೆ ಬೆಲೆಕಟ್ಟಿ ಮಾರಾಟ ಮಾಡುವ ಹುನ್ನಾರವಿದು. ನಂತರ ಇವರುಗಳೇ, “ಈ ದೇಶದಲ್ಲಿ ಪ್ರತಿಭಾ ಪಲಾಯನ ವಾಗುತ್ತಿದೆ, ಕೌಶಲ ಆಧರಿತ ಶಿಕ್ಷಣ ಬೇಕು, ಮತ್ತೊಂದು- ಮಗದೊಂದು” ಅಂತ ಹೇಳಿ ಬೊಬ್ಬೆ ಹೊಡೆಯುತ್ತಾರೆ. ಇದು ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರವೇ ಸೀಮಿತವಾಗಿಲ್ಲ; ಮಹಾನ್ ಸಮಾಜಸೇವೆಯ ಸೋಗು ಹಾಕಿಕೊಂಡು ಮೆರೆಯುವ ಒಂದಷ್ಟು ಖಾಸಗಿ ವಿಶ್ವವಿದ್ಯಾಲಯಗಳೂ ಇದಕ್ಕೆ ಹೊರತಾಗಿಲ್ಲ. ಈ ವಿಶ್ವ ವಿದ್ಯಾಲಯಗಳ ಶುಲ್ಕಗಳೇ ಈ ಮಾತಿಗೆ ಸಾಕ್ಷಿ. ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಡ್ಡಾಯ ಹಾಗೂ ಉಚಿತ’ ಎಂದು ಘೋಷಿಸುವ ನಮ್ಮ ಸರಕಾರಗಳ ಶಿಕ್ಷಣಪ್ರೇಮವು ಉನ್ನತ ಶಿಕ್ಷಣಕ್ಕೆ ಯಾಕೆ ಅನ್ವಯವಾಗುವುದಿಲ್ಲ? ಶಿಕ್ಷಣರಂಗವು ಸಂಪೂರ್ಣವಾಗಿ ಖಾಸಗಿ ದೊರೆಗಳ ಕೈವಶವಾಗಿಬಿಟ್ಟಿದೆ.
ಖಾಸಗಿ ವಿಶ್ವವಿದ್ಯಾಲಯಗಳು, ‘ಡೀಮ್ಡ್ ಟು ಬಿ’ ಹಣೆಪಟ್ಟಿಯ ಯೂನಿವರ್ಸಿಟಿಗಳು ಸಿಕ್ಕಸಿಕ್ಕ ಹಾಗೆ ತಲೆಯೆತ್ತು ತ್ತಿವೆ. ದೇಶದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ವೃತ್ತಿಪರ ಪದವಿಗಳ ಮಾನದಂಡಗಳನ್ನು ನಿರ್ಧರಿಸುವ AICTE, BCI, PCI, MCI ಗಳ ನಡುವಿನ ಪರಸ್ಪರ ಯೋಜನೆ ಮತ್ತು ನಿರ್ಣಯಗಳ ಕೊರತೆಯಂಥ ಸಮಸ್ಯೆಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಯುಜಿಸಿ ಅಽನಿಯಮದ ಸೆಕ್ಷನ್ ೨(ಎಫ್) ಮತ್ತು ೧೨-ಬಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮಾನ್ಯ ಮಾಡುವ ಪ್ರಕ್ರಿಯೆಯು ಹಲವು ನ್ಯೂನತೆಗಳಿಂದ ಕೂಡಿದೆ.
National Assessment and Accreditation Council (NAAC ) ನಡೆಸುವ ಶಿಕ್ಷಣ ಸಂಸ್ಥೆಗಳ ಪರಿ ವೀಕ್ಷಣೆಯು ಹಲವು ಬಾರಿ ಬೇರೆ ಬೇರೆ ರೀತಿಯ ಒತ್ತಡಗಳಿಗೆ ಒಳಗಾಗುತ್ತಲೇ ಇರುತ್ತದೆ. NIRF (National Institutional Ranking Frame work)ನ ಮಾನದಂಡಗಳಿಗೂ, ಜಾಗತಿಕ ಮಟ್ಟದಲ್ಲಿನ ಶಿಕ್ಷಣಸಂಸ್ಥೆಗಳ ‘ರ‍್ಯಾಂಕಿಂಗ್’ ಮಾನದಂಡಗಳಿಗೂ ತುಂಬಾ ಅಂತರವಿರುವುದು ಸುಸ್ಪಷ್ಟ.
ನಮ್ಮ ಸರಕಾರಗಳು ಅತಿ ಕಡಿಮೆ ಗಮನ ಕೊಟ್ಟು, ಅತಿ ಕಡಿಮೆ ಬಜೆಟ್ ವಿತರಿಸಿ, ಆಯಕಟ್ಟಿನ ಜಾಗಗಳಿಗೆ ಅಪಾತ್ರ
ರನ್ನು ನೇಮಿಸಿ, ಅತಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿಟ್ಟು ಕೊಂಡು, ದೊಡ್ಡ ದೊಡ್ಡ ಭಾಷಣ ಬಿಗಿಯುವ ಯಾವು ದಾದರೂ ಇಲಾಖೆಯಿದ್ದರೆ ಅದು ಉನ್ನತ ಶಿಕ್ಷಣ ಕ್ಷೇತ್ರ ಎನ್ನಲಡ್ಡಿಯಿಲ್ಲ. ಅಂದು ಉಚಿತ ಬಸ್‌ಪಾಸ್‌ಗೆ ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದ, ಬರಬೇಕಾದ ಶಿಷ್ಯವೇತನಕ್ಕೆ ಸ್ವಲ್ಪ ತಡವಾದರೂ ಅಧಿಕಾರಿಗಳಿಗೆ ಘೇರಾವ್ ಹಾಕುತ್ತಿದ್ದ ವಿದ್ಯಾರ್ಥಿ ಸಂಘಟನೆಗಳು, ಯುಜಿಸಿ ಎನ್‌ಇಟಿ ಪರೀಕ್ಷೆಗಳ ಸತತ ಮುಂದೂಡಿಕೆ, ನೀಟ್ ಹಗರಣ, ಯುಪಿಎಸ್‌ಸಿ ಗೊಂದಲಗಳಂಥ ಗಂಭೀರ ಸಮಸ್ಯೆಗಳಿಂದಾಗಿ ಪ್ರಖರ ಪ್ರತಿಭೆ ಮತ್ತು ಶಕ್ತಿಯುಳ್ಳ ಕಾಲೇಜು ವಿದ್ಯಾರ್ಥಿಗಳ ಬದುಕೇ ಅಸ್ತವ್ಯಸ್ತಗೊಳ್ಳುತ್ತಿದ್ದರೂ, ಕನಿಷ್ಠಪಕ್ಷ ತಮ್ಮ ದನಿಯನ್ನು ಜೋರು ಮಾಡದಿರುವುದು ಯಾವುದರ ಸೂಚನೆಯೋ?
(ಲೇಖಕರು ನ್ಯಾಯವಾದಿಗಳು)
ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್