Thursday, 19th September 2024

ಡಿಜಿಟಲ್ ಯುಗಕ್ಕೆ ಅಪ್‌ಡೇಟ್ ಆಗಬೇಕಿದೆ ಗೃಹ ಇಲಾಖೆ

ಅಶ್ವತ್ಥ ಕಟ್ಟೆ

ರಂಜಿತ್ ಹೆಚ್.ಅಶ್ವತ್ಥ 

ಕಳೆದ ಸುಮಾರು 15 ದಿನಗಳಿಂದ ರಾಜ್ಯದಲ್ಲಿ ಬರೀ ಡ್ರಗ್ಸ್‌ ಪ್ರಕರಣದ ಜಪವೇ ಆಗಿದೆ. ಈ ಪ್ರಕರಣದಲ್ಲಿ ದಿನಕ್ಕೊಂದು ಅಚ್ಚರಿ, ದಿನಕ್ಕೊಂದು ತಿರುವು ಹಾಗೂ ದಿನಕ್ಕೊಬ್ಬರ ವಿಚಾರಣೆ ನಡೆಯುತ್ತಲೇ ಇದೆ. ಮಾದಕ ವಸ್ತು ಸೇವನೆಯನ್ನು ಬುಡಮಟ್ಟದಿಂದ ತಗೆದು ಹಾಕುತ್ತೇವೆಂದು ವೀರಾವೇಷದ ಮಾತುಗಳು ಕೇಳಿ ಬರುತ್ತಿದೆ. ಆದರೆ ನಿಜವಾಗಿಯೂ ಇದು ಸಾಧ್ಯವೇ? ಎನ್ನುವ ಪ್ರಶ್ನೆಗೆ ಅನೇಕರಿಂದ ಬರುತ್ತಿರುವ ಉತ್ತರ ‘ಇಲ್ಲ’ ಎನ್ನುವುದು.

ಈ ರೀತಿ ಡ್ರಗ್ಸ್‌ ಪ್ರಕರಣದ ತಾರ್ತಿಕ ಅಂತ್ಯ ಕಾಣುವುದೇ ಎನ್ನುವ ಅನುಮಾನ ಸೃಷ್ಟಿಯಾಗಲು ಪ್ರಮುಖವಾಗಿ ಎರಡು ಕಾರಣ ಗಳಿವೆ. ಒಂದು ಕಳೆದ 15ರಿಂದ 20 ದಿನಗಳ ಸಮಯದಲ್ಲಿ ಹೋಗುತ್ತಿರುವ ಡ್ರಗ್ಸ್‌ ಪ್ರಕರಣದ ವೇಗ ನೋಡಿದರೆ, ಮುಂದಿನ ಕೇವಲ ದಿನದಲ್ಲಿ ರಾಜ್ಯದ ಅನೇಕ ‘ಪ್ರಭಾವಿ’ಗಳ ಹೆಸರು ಬರುವ ಅನುಮಾನವಿದೆ. ಒಂದು ವೇಳೆ ಈ ರೀತಿಯಾದರೆ, ಅದರಲ್ಲೂ ರಾಜಕಾರಣಿಗಳ ಅಥವಾ ಅವರ ಮಕ್ಕಳ ಹೆಸರು ತಳಕು ಹಾಕಿಕೊಂಡರೆ, ಈ ಪ್ರಕರಣದ ಅಲ್ಲಿಯೇ ನಿಲ್ಲುವುದಕ್ಕೆೆ ಸರ್ವ ಪ್ರಯತ್ನ ವನ್ನು ಸರ್ವಪಕ್ಷದವರು ಮಾಡುತ್ತಾರೆ.

ಒಂದು ವೇಳೆ ಸಿಸಿಬಿ ಪೊಲೀಸರು ಈ ಒತ್ತಡವನ್ನೆೆಲ್ಲ ಗೆದ್ದುಗೊಂಡು, ವಿಚಾರಣೆಯನ್ನು ಮುಂದುವರಿಸುವ ಪ್ರಯತ್ನಕ್ಕೆ ಮುಂದಾದರೆ, ಆ ತನಿಖಾ ತಂಡದ ಹಿರಿ ತಲೆಗಳಿಗೆ ‘ವರ್ಗಾವಣೆ’ ಎನ್ನುವ ತಲೆದಂಡವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನಮ್ಮ ದೇಶದಲ್ಲಿ ಯಾವುದೇ ವಿಷಯ ಕೊನೆಯಲ್ಲಿ ಅದು ರಾಜಕೀಯದ ನಂಟನ್ನು ಪಡೆಯುವುದು ಹೊಸದಲ್ಲ. ರಾಜಕೀಯ, ಧರ್ಮ, ಜಾತಿಯನ್ನು ಮೀರಿ ವಿಷಯಗಳನ್ನು ಯೋಚಿಸುವುದನ್ನು ಈಗಲೂ ನಮ್ಮಲ್ಲಿ ಬಿಟ್ಟಿಲ್ಲ. ಈಗಲೂ ಡ್ರಗ್ಸ್ ಕೇಸ್‌ನಲ್ಲಿ ರಾಗಿಣಿ ಬಂಧನಕ್ಕೆೆ ಒಳಗಾಗುತ್ತಿದ್ದಂತೆ, ಆಕೆ ಬಿಜೆಪಿಯ ಪರ ಪ್ರಚಾರ ಮಾಡಿದ್ದಳು ಎಂದು ಕಾಂಗ್ರೆಸ್ ಗುಂಪು ಸಾಮಾಜಿಕ
ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟರೆ, ಇನ್ನೊಂದು ಗುಂಪು ರಾಗಿಣಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,
ಸಿದ್ದರಾಮಯ್ಯ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೋವನ್ನು ಹರಿಬಿಟ್ಟರು. ಈ ರೀತಿ ರಾಜಕೀಯ
ನಂಟು ಪಡೆದು, ಒಬ್ಬ ರಾಜಕಾರಣಿಯ ಹೆಸರು ಈ ಪ್ರಕರಣದಲ್ಲಿ ಕಾಣಿಸಿಕೊಂಡರೆ, ಅಲ್ಲಿಗೆ ಪ್ರಕರಣದ ಅರ್ಧ ಕಥೆ ಮುಗಿದಂತೆ.

ಇದಿಷ್ಟೆ ಅಲ್ಲದೇ, ಈಗಲೂ ಡ್ರಗ್ಸ್‌ ಪ್ರಕರಣದ ಆರೋಪದಲ್ಲಿರುವ 13 ಜನರ ಪೈಕಿ ಕೇವಲ ಇಬ್ಬರಿಂದ ಮೂವರು ಮಾತ್ರ ಡ್ರಗ್ಸ್‌
ಖರೀದಿಸುತ್ತಿದ್ದರು. ಇನ್ನುಳಿದ ವರೆಲ್ಲ ಡ್ರಗ್ಸ್‌ ‌ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳು. ಅಂದರೆ ಇಡೀ ಬೆಂಗಳೂರಿನಲ್ಲಿ
ಕೇವಲ ಈ ಇಬ್ಬರು ಮೂವರಿಗೆ 10ಕ್ಕೂ ಹೆಚ್ಚು ಪೆಡ್ಲರ್‌ಗಳು ಡ್ರಗ್ಸ್‌ ‌ಸರಬರಾಜು ಮಾಡುತ್ತಿದ್ದರೆ? ಇಲ್ಲವೆಂದ ಮೇಲೆ ಈ ಜಾಲದಲ್ಲಿ ಇದ್ದರೂ, ಕಾಣಿಸದ ಕೈಗಳು ಯಾವುದು ಎನ್ನುವುದನ್ನು ತಿಳಿಯಬೇಕು. ಆದರೆ ಈ ರೀತಿ ತಿಳಿಯುವುದಕ್ಕೆ ಸಿಸಿಬಿ ಪೊಲೀಸರಿಗೆ ರಾಜಕೀಯ ಒತ್ತಡದೊಂದಿಗೆ ಮತ್ತೊಂದು ಸಮಸ್ಯೆಯಿದೆ. ಅದೇನೆಂದರೆ ನಮ್ಮ ರಾಜ್ಯ ಪೊಲೀಸರ ಬಳಿಯಿರುವ ಸೈಬರ್ ಕ್ರೈಂ ಟೀಂನದ್ದು. ರಾಜ್ಯದಲ್ಲಿ ಪ್ರತ್ಯೇಕ ಸೈಬರ್ ಕ್ರೈಂ ಟೀಮ್ ಒಂದನ್ನು ಹೆಸರಿಗೆ ಮಾಡಿದೆ. ಆದರೆ ಈ ತಂಡದಲ್ಲಿ ಆನ್‌ಲೈನ್ ವಂಚನೆಗಿಂತ ಮುಂದಿನ ಪ್ರಕರಣಗಳನ್ನು ನೋಡುವುದಕ್ಕೆೆ ಬೇಕಿರುವ ತಂತ್ರಜ್ಞಾನದ ವ್ಯವಸ್ಥೆಯಿಲ್ಲ. (ವಂಚನೆ ಪ್ರಕರಣಗಳು ಎಷ್ಟರ ಮಟ್ಟಿಗೆ ಪತ್ತೆಯಾಗುತ್ತಿವೆ ಎನ್ನುವುದು ಬೇರೆ ಮಾತು).

ಇದೀಗ ನಾನು ಪ್ರಸ್ತಾಪಿಸಲು ಹೊರಟಿರುವುದು ಡ್ರಗ್ಸ್‌ ಪ್ರಕರಣದ ಮೇಲಿರುವ ರಾಜಕೀಯ ಒತ್ತಡದ ಬಗ್ಗೆಯಲ್ಲ. ಬದಲಿಗೆ ರಾಜಕೀಯ ಒತ್ತಡವನ್ನು ಮೀರಿ, ಸರ್ವಪಕ್ಷ ಸಹಕಾರದೊಂದಿಗೆ (ಇದು ಸಾಧ್ಯವೇ ಎನ್ನುವುದು ಬೇರೆ ಮಾತು) ಪೊಲೀಸರಿಗೆ ಈ ರಾಜಕೀಯ ಒತ್ತಡವನ್ನು ಮೀರಿ ವಿಚಾರಣೆಗೆ ಪೊಲೀಸರಿಗೆ ಮುಕ್ತವಾಗಿ ಬಿಟ್ಟರೂ, ಇಂದಿನ ವ್ಯವಸ್ಥೆಯಲ್ಲಿ ಹಾಗೂ ರಾಜ್ಯ ಗೃಹ ಇಲಾಖೆಯ ಬಳಿಯಿರುವ ತಂತ್ರಜ್ಞಾನಗಳ ವ್ಯವಸ್ಥೆಯಲ್ಲಿ ಪ್ರಕರಣವನ್ನು ಬೇಧಿಸಲು ಸಾಧ್ಯವೇ ಎನ್ನುವುದು ಎಲ್ಲರ ಮುಂದಿ ರುವ ಪ್ರಶ್ನೆ. ರಾಜಕೀಯ ಮೀರಿದ ಒತ್ತಡ ಏನು ಎನ್ನುವುದನ್ನು ನೋಡುವುದಾದರೆ, ಮೊದಲಿಗೆ ಸಿಗುವುದು ತನಿಖಾಧಿಕಾರಿಗಳ ಬಳಿಯಿರುವ ಸಾಕ್ಷ್ಯಗಳ ಆಧಾರ. ಮತ್ತೊಂದು ರಾಜ್ಯ ಗೃಹ ಇಲಾಖೆಯಲ್ಲಿರುವ ತಂತ್ರಜ್ಞಾನದ ಕೊರತೆ. ಹೌದು, ಇದು ಬಹುತೇಕ ರಿಗೆ ಅಚ್ಚರಿಯಾದರೂ ನಿಜ.

ಡ್ರಗ್ಸ್‌ ಪ್ರಕರಣದ ಹಿಂದೆ ರಾಜ್ಯ ಪೊಲೀಸರಿಗೆ ತಂತ್ರಜ್ಞಾನದ ಜಾಲವನ್ನು ಬೇಧಿಸುವುದೇ ಬಹುದೊಡ್ಡ ಸಮಸ್ಯೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಈ ವಿಷಯದ ಬಗ್ಗೆ ತಿಳಿದು ಕೊಂಡವರ ಬಗ್ಗೆ ಚರ್ಚಿಸುವಾಗ, ಬಹುತೇಕರು ಹೇಳಿದ ಈ ಅಂಶವನ್ನು ಆರಂಭದಲ್ಲಿ ನಿಜ ಎನಿಸಲಿಲ್ಲ. ಆದರೆ ನಂತರ, ಸೂಕ್ಷ್ಮವಾಗಿ ಇಡೀ ಪ್ರಕರಣವನ್ನು ನೋಡಿದಾಗ, ಪೊಲೀಸರಿಗೆ ಸಿಗಬಹುದಾದ ಬಹುತೇಕ ಡಿಜಿಟಲ್ ಸಾಕ್ಷ್ಯಗಳನ್ನು ಕಲೆ ಹಾಕಲು ನಮ್ಮ ಪೊಲೀಸರ ಬಳಿಕ ತಂತ್ರಜ್ಞಾನವಿಲ್ಲ. ಇದೀಗ ಇಡೀ ಪ್ರಕರಣವನ್ನು ಬೇಧಿಸಲು ಬೇಕಿರುವ ತಂತ್ರಜ್ಞಾನದ ಸಹಾಯವನ್ನು ಖಾಸಗಿ ಸಂಸ್ಥೆಗಳಿಗೆ ನೀಡಲು ಅವಕಾಶವಿದೆ. ಆದರೆ ಆ ತನಿಖಾ ಸಂಸ್ಥೆಗಳ ‘ವಿಶ್ವಾಸಾರ್ಹತೆ’ ಬಗ್ಗೆಯೂ ಪೊಲೀಸರು ಯೋಚಿಸಬೇಕಿದೆ. ಅಂದ ಹಾಗೇ ಈ ರೀತಿಯ ಸೈಬರ್‌ನಿಂದ ಆಗುವ ವಿಷಯಗಳನ್ನು ಕಲೆಹಾಕಲು ಅಗತ್ಯವಿರುವ ತಂತ್ರಜ್ಞಾನದ ವ್ಯವಸ್ಥೆ ಕೇಂದ್ರ ಗೃಹ ಇಲಾಖೆಯ ಬಳಿ ಇಲ್ಲವೆಂದಲ್ಲ. ಆದರೆ ಇಡೀ ಪ್ರಕರಣವನ್ನು ಸಿಸಿಬಿ ನಿಭಾಯಿಸುತ್ತಿರುವುದರಿಂದ, ಕೇಂದ್ರದ ಸಹಾಯ ಪಡೆಯುವುದು ಸುಲಭದ ಮಾತಾಗಿಲ್ಲ. ಇದೀಗ ಕೇಂದ್ರದ ಸೈಬರ್ ತಂಡದಿಂದ ಸಹಾಯ ಪಡೆಯಬೇಕೆಂದರೆ, ಪುನಃ ಹೊಸದಾ ಗಿಯೇ ಪ್ರಕರಣದ ವಿಚಾರಣೆ ಮಾಡಬೇಕಿದೆ. ಆದ್ದರಿಂದ ಇನ್ನಷ್ಟು ಸಮಯ ವ್ಯರ್ಥವಲ್ಲದೇ ಮತ್ತೇನು ಅಲ್ಲ ಎನ್ನುವುದು ಸ್ಪಷ್ಟ.

ಪ್ರಮುಖವಾಗಿ ಡ್ರಗ್ಸ್‌ ‌ ಪ್ರಕರಣದ ವಿಚಾರದಲ್ಲಿ ರಾಜ್ಯ ಪೊಲೀಸರ ಕೈಹಿಡಿಯುತ್ತಿರುವುದು, ವಾಟ್ಸ್ ಆ್ಯಪ್‌ನಲ್ಲಿ ಚಾಟ್ ಮಾಡಿ ಡಿಲಿಟ್ ಮಾಡಿರುವ ಚಾಟ್ ಹಿಸ್ಟರಿ, ಡಾರ್ಕ್ ವೆಬ್‌ನಲ್ಲಾಗಿರಬಹುದಾದ ವ್ಯವಹಾರ ಹಾಗೂ ಅತ್ಯಾಧುನಿಕ ಮೊಬೈಲ್‌ನಲ್ಲಿರುವ ಸುರಕ್ಷತಾ ಕ್ರಮಗಳು. ಮೊಬೈಲ್‌ನಲ್ಲಿರುವ ಡೆಟಾವನ್ನು ರಿಟ್ರೀವ್ ಮಾಡುವುದಕ್ಕೆ ವಿವಿಧ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಅತ್ಯಾಧುನಿಕ ಮೊಬೈಲ್ ನಲ್ಲಿ ಒಮ್ಮೆ ಅಳಿಸಿದ ಡೆಟಾವನ್ನು ಹಿಂಪಡೆಯಬೇಕು ಅಥವಾ ಪರಿಶೀಲನೆ ಮಾಡಬೇಕು ಎನ್ನುವುದಕ್ಕೆ ಹಲವು ಸುರಕ್ಷತೆಯ ಕ್ರಮಗಳಿವೆ. ಇದನ್ನು ಮಾಡುವುದಕ್ಕೆ ಅಗತ್ಯವಿರುವ ಡಿಜಿಟಲ್ ತಂತ್ರಜ್ಞಾನವಿನ್ನು ನಮ್ಮ ರಾಜ್ಯದ ಗೃಹ ಇಲಾಖೆಯಲ್ಲಿಲ್ಲ.

ಉದಾಹರಣೆ ಹೇಳುವುದಾದರೆ, ಈಗಲೂ ನಮ್ಮ ರಾಜ್ಯ ಗೃಹ ಇಲಾಖೆಯ ಬಳಿ ವಾಟ್‌ಸ್‌ ಆ್ಯಪ್‌ನಿಂದ ಮಾಡಬಹುದಾದ
ಕರೆಗಳನ್ನು ಟ್ರೇಸ್ ಮಾಡುವುದಕ್ಕೆೆ ತಂತ್ರಜ್ಞಾನವಿಲ್ಲ. ಈ ರೀತಿ ವಾಟ್ಸ್‌ ಆ್ಯಪ್ ಕರೆ ಕೇವಲ ಒಂದು ಉದಾರಣೆಯಷ್ಟೇ. ಆದರೆ ಅನೈತಿಕ ಚಟುವಟಿಕೆ, ಅವ್ಯವಹಾರಗಳಿಗೆ ಇರುವ ನೂರಾರು ತಂತ್ರಜ್ಞಾನವನ್ನು ಪತ್ತೆಹಚ್ಚುವ ಡಿಜಿಟಲ್ ವ್ಯವಸ್ಥೆ ಹೋಗಲಿ, ಅವುಗಳ ಹೆಸರು ಹಾಗೂ ಕಾರ್ಯವ್ಯಾಪ್ತಿ ನಮ್ಮ ಸೈಬರ್ ಪೊಲೀಸ್ ತಂಡಕ್ಕೆ ಮಾಹಿತಿಯೇ ಇಲ್ಲ ಎನ್ನುವುದು ದುರಂತ ಸತ್ಯ. ಹೀಗಿರುವಾಗ ಕೇವಲ ಡ್ರಗ್ಸ್‌ ಪ್ರಕರಣ ಮಾತ್ರವಲ್ಲ, ಡಿಜಿಟಲ್ ವೇದಿಕೆಯಲ್ಲಿ ಆಗುತ್ತಿರುವ ಇನ್ನಿತರ ಅವ್ಯವಹಾರ ವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆ ವಿಫಲವಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಇದೀಗ ಡ್ರಗ್ಸ್‌ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಭಾವಿಸಿ ಕೇಂದ್ರ ಸರಕಾರ ಅಥವಾ ಖಾಸಗಿ ಸಂಸ್ಥೆಗಳ ಸಹಾಯದೊಂದಿಗೆ ಬೇಧಿಸಬಹುದು. ಆದರೆ ಈ ರೀತಿ ಮಾಡುವುದರಿಂದ ಅಗತ್ಯ ಸಂಪರ್ಕ ಸಾಧಿಸಿ, ಇಲಾಖಾವಾರು ಅನುಮತಿ ಪಡೆಯುವುದಕ್ಕೆ ಸಮರ್ಯ ವ್ಯರ್ಥವಾಗುತ್ತದೆ. ಇದರಿಂದ ತನಿಖಾ ವೇಗವೂ ಕುಸಿಯುತ್ತಾ ಹೋಗುತ್ತದೆ. ಪ್ರಮುಖವಾಗಿ ಇದೀಗ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು 13 ಮಂದಿ ವಿರುದ್ಧ ಎಫ್‌ಐಆರ್ ಹಾಕಿದ್ದು, 20ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಇಡೀ ಪ್ರಕರಣದಲ್ಲಿ ಡ್ರಗ್ಸ್‌  ಮಾರಾಟವಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ ಹೊರತು, ಎಲ್ಲಿಂದ ಈ
ಡ್ರಗ್‌ಸ್‌ ಸರಬರಾಜು ಆಗುತ್ತಿತ್ತು ಎನ್ನುವುದಕ್ಕೆ ಸ್ಪಷ್ಟ ಉತ್ತರ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ರೀತಿ ಹಿಂದೇಟು ಹಾಕುವುದಕ್ಕೆ ಪೊಲೀಸ್ ಇಲಾಖೆ ನೀಡುತ್ತಿರುವ ಕಾರಣ, ‘ಪ್ರಕರಣದ ವಿಚಾರಣೆ ವೇಳೆ ಈ ವಿಷಯಗಳನ್ನು ಬಹಿರಂಗ ಪಡಿಸಬಾರದು’ ಎಂದು. ಆದರೆ ನಿಜವಾಗಿಯೂ ಇದೇ ಕಾರಣವೇ ಎಂದು ಆಫ್ ದಿ ರೆಕಾರ್ಡ್ ಕೇಳಿದರೆ, ತನಿಖೆಯಲ್ಲಿರುವ ಬಹುತೇಕರು ಹೇಳುವುದು, ‘ಇಲ್ಲ’ ಎಂದು. ಹಾಗಾದರೆ ನಿಜವಾದ ಕಾರಣವೇನು ಎನ್ನುವ ಬಗ್ಗೆ ಆಲೋಚನೆ ಮಾಡಿದರೆ ಸಿಗುವ ಅಂಶವೆಂದರೆ, ರಾಜ್ಯ ಹಾಗೂ ದೇಶದಲ್ಲಿ ಸಿಗುತ್ತಿರುವ ಡ್ರಗ್ಸ್‌ ಬಹುತೇಕ ವಿದೇಶದಿಂದ ಆಮದಾಗುತ್ತಿದೆ. ಈ ಮಾದಕ  ವಸ್ತುಗಳನ್ನು ಪೆಡ್ಲರ್‌ಗಳು ಬುಕ್ ಮಾಡುವುದು ಆನ್‌ಲೈನ್ ಮೂಲಕವೇ. ಅದರಲ್ಲೂ ಡ್ರಗ್ಸ್‌ ಮಾಫಿಯಾ ದವರು ಡಾರ್ಕ್ ವೆಬ್ ಬಳಸಿಕೊಂಡು ತರಿಸಿಕೊಳ್ಳುತ್ತಿದ್ದಾರೆ. ಆದರೆ ಡಾರ್ಕ್ ವೆಬ್ ಅನ್ನು ಪರಿಶೀಲಿಸುವ ತಂತ್ರಜ್ಞಾನವೇ ನಮ್ಮ ಪೊಲೀಸ್ ವ್ಯವಸ್ಥೆೆಯಲ್ಲಿಲ್ಲ.

ಇನ್ನು ಈ ರೀತಿ ಡಾರ್ಕ್ ವೆಬ್ ಬಳಸಿಕೊಂಡು ಮಾಡುತ್ತಿರುವ ಮಾದಕ ವಸ್ತುಗಳು, ವಿದೇಶದಿಂದ ನೇರವಾಗಿ ಪೆಡ್ಲರ್‌ಗಳ ಮನೆಗೆ, ಇತರ ಆನ್‌ಲೈನ್ ಶಾಪಿಂಗ್ ವಸ್ತುಗಳ ರೀತಿಯಲ್ಲಿಯೇ ಬರುತ್ತವೆ. ಇಲ್ಲಿಗೆ ಬಂದ ಬಳಿಕ ಅದನ್ನು ತಮಗಿಷ್ಟ ಬಂದ ರೀತಿಯಲ್ಲಿ ಪೆಡ್ಲರ್‌ಗಳು ಸಾಗಾಣಿಕೆ ಮಾಡುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ವಶಪಡಿಸಿ ಕೊಳ್ಳುತ್ತಿರುವ ಗಾಂಜಾವನ್ನು ಹೊರತುಪಡಿಸಿ, ಇನ್ನುಳಿದ ಬಹುತೇಕ ಡ್ರಗ್ಸ್‌ಗಳು ಈ ರೀತಿ ವಿದೇಶದಿಂದ ಸಪ್ಲೇ ಆಗಿರುವ ಸರಕು ಎಂದೇ ಹೇಳಲಾಗುತ್ತದೆ. ಆದರೆ ಪೊಲೀಸರು ಈ ರೀತಿ ವಶಪಡಿಸಿಕೊಳ್ಳುವುದು ಮಾತ್ರವಲ್ಲದೇ, ವಿದೇಶದಿಂದ ಆನ್ ಲೈನ್ ಮೂಲಕ ಬರುತ್ತಿರುವ ಡ್ರಗ್ಸ್‌  ಅನ್ನು ತಡೆಗಟ್ಟಬೇಕಿದೆ.

ಆದರೆ ಪ್ರತ್ಯೇಕ ಸರ್ವರ್, ಐಪಿ ಹಾಗೂ ಪ್ರತ್ಯೇಕ ಸ್ಯಾಟಲೈಟ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಈ ಡಾರ್ಕ್ ವೆಬ್ ಇತರ
ಡಿಜಿಟಲ್ ಫ್ಲಾಟ್‌ಫಾರ್ಮ್ ರೀತಿ ಕಾರ್ಯನಿರ್ವಹಿಸುವುದಿಲ್ಲ. ಸಾಮಾನ್ಯ ವೆಬ್‌ಸೈಟ್‌ನಿಂದ ಒಮ್ಮೆ ಡಾರ್ಕ್ ವೆಬ್‌ಗೆ ಹೊಕ್ಕರೆ,
ಇಲ್ಲಿಯ ಯಾವುದೇ ವಿಷಯಗಳು ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಕಂಡು ಹಿಡಿಯಲು ಸಾಧ್ಯವಿಲ್ಲ. ಹೋಗಲಿ, ಆನ್‌ಲೈನ್ ಹಣದ ವ್ಯವಹಾರ ನೋಡಿಕೊಂಡು ಆರೋಪಿಗಳನ್ನು ಟ್ರೇಸ್ ಮಾಡುಬಹುದು ಎಂದು ಪೊಲೀಸರು ಅಂದಾಜಿಸಿದ್ದರು. ಆದರೆ ಈ ಎಲ್ಲ ವ್ಯವಹಾರ ಗಳು ಬಿಟ್ ಕಾಯಿನ್ನಲ್ಲಿ ಆಗುತ್ತಿರುವುದರಿಂದ, ಟ್ರೇಸ್ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದೀಗ ಡಾರ್ಕ್ ವೆಬ್ ಮೂಲಕ ಆಗಿರುವ ಡ್ರಗ್ಸ್‌ ‌ಶಾಂಪಿಂಗ್ ಬಗ್ಗೆ ಮಾಹಿತಿ ಕಲೆ ಹಾಕಲು ಜವಾಬ್ದಾರಿಯನ್ನು ದೆಹಲಿಯ ಖಾಸಗಿ ಸಂಸ್ಥೆಯೊಂದರ ಮೇಲೆ ಹಾಕಿ ರಾಜ್ಯ ಪೊಲೀಸರು ಕಾಯುತ್ತಿದ್ದಾರೆ.

ಹಾಗಾದರೆ, ದೆಹಲಿ ಮೂಲದ ಖಾಸಗಿ ತನಿಖಾ ಸಂಸ್ಥೆಯ ಬಳಿಯಿರುವ ವ್ಯವಸ್ಥೆೆ ನಮ್ಮ ಗೃಹ ಇಲಾಖೆಯ ಬಳಿಯಿಲ್ಲ. ಪ್ರತಿ ವರ್ಷ ಗೃಹ ಇಲಾಖೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಮೀಸಲಿಡುತ್ತಾರೆ. ಅದರಲ್ಲೂ ಸೈಬರ್ ಕ್ರೈಂ ಅಭಿವೃದ್ಧಿ ಗೆಂದೇ ಸಾವಿರಾರು ಕೋಟಿ ರು. ಮೀಸಲಿಡಲಾಗಿದೆ. ಹೀಗಿರುವಾಗ ವಿಶ್ವದಲ್ಲಾಗುತ್ತಿರುವ ಆನ್‌ಲೈನ್ ಅಪರಾಧದ ಬಗ್ಗೆ ನಮ್ಮ ರಾಜ್ಯ ಪೊಲೀಸರನ್ನು ಎಚ್ಚರಿಸುವ ಹಾಗೂ ಅದಕ್ಕೆ ಬೇಕಿರುವ ಡಿಜಿಟಲ್ ಸಹಾಯವನ್ನು ಸರಕಾರಗಳು ಏಕೆ ಮಾಡುತ್ತಿಲ್ಲ ಎನ್ನುವ ಪ್ರಶ್ನೆೆಗಳು ಶುರುವಾಗುವುದು ಸಹಜ.

ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವು ದರಿಂದ, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತ್ಯೇಕ ಸೆಲ್ ಅನ್ನೇ ರಚಿಸಿತ್ತು. ಆದರೆ ಅದು ಕ್ರಿಯಾಶೀಲವಾಗಿದ್ದು ತೀರಾ ಇತ್ತೀಚಿಗೆ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಆದ್ದರಿಂದ ಕೇವಲ ಡ್ರಗ್ಸ್‌ ‌ಪ್ರಕರಣದ ದೃಷ್ಠಿಯಿಂದ ಮಾತ್ರವಲ್ಲದೇ, ಇತರ ಸೈಬರ್ ಅಪರಾಧ ವನ್ನು ಗಮನದಲ್ಲಿರಿಸಿಕೊಂಡು ನಮ್ಮ ಗೃಹ ಇಲಾಖೆಗೆ ಡಿಜಿಟಿಲ್ ಟಚ್ ನೀಡುವ ಕೆಲಸವಾಗಬೇಕಿದೆ. ಹಾಗೇ ನೋಡಿದರೆ ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ವಂಚನೆಗೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಬೆಳಕಿಗೆ ಬಂದವು. ಆದರೆ ಈ ಎಲ್ಲ ಪ್ರಕರಣಗಳು ತಾರ್ತಿಕ ಅಂತ್ಯ ಕಾಣುವುದೇ ಎನ್ನುವುದಕ್ಕೆೆ ಉತ್ತರ ಸಿಕ್ಕಿಲ್ಲ.

ಡ್ರಗ್ಸ್‌  ಪ್ರಕರಣವನ್ನು ನಿಜವಾಗಿಯೂ ಗಂಭೀರವಾಗಿ ರಾಜ್ಯ ಸರಕಾರ ಪರಿಗಣಿಸಿದ್ದರೆ, ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ
ಎಲ್ಲೆೆಲ್ಲಿ ಹಿನ್ನಡೆ ಅನುಭವಿಸಿದೆ ಎನ್ನುವುದನ್ನು ನೋಡಿೊಂಡು ಆ ನಿಟ್ಟಿನಲ್ಲಿ ಅಪ್‌ಡೇಟ್ ಆಗುವ ಕೆಲಸವಾಗಬೇಕಿದೆ. ‘ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ಕಳ್ಳರು ರಂಗೋಲಿ ಕೆಳಗೆ ನುಗ್ಗುವಷ್ಟು’ ಚಾತಿ ಇರುವುದರಿಂದ, ಈ ನಿಟ್ಟಿನಲ್ಲಿ ಗೃಹ ಇಲಾಖೆ
ಕಾರ್ಯನಿರ್ವಹಿಸ ಬೇಕಿದೆ. ಕೇವಲ ಆನ್‌ಲೈನ್ ವಂಚನೆ, ನೆಟ್ ಬ್ಯಾಂಕಿಂಗ್ ವಂಚನೆ ಅಥವಾ ಬ್ಲ್ಯಾಕ್ ಮೇಲ್‌ಗೆ ಮಾತ್ರ ಸೈಬರ್ ಕ್ರೈಂನ ವ್ಯಾಪ್ತಿ ಎನ್ನುವುದನ್ನು ಬಿಟ್ಟು, ಈ ರೀತಿಯ ಡಾರ್ಕ್ ವೆಬ್‌ನ ಬಗ್ಗೆಯೂ ಗೃಹ ಇಲಾಖೆ ಗಮನಹರಿಸಬೇಕಿದೆ.

ಆದ್ದರಿಂದ ಇಂದಿನ ಆಧುನಿಕ, ಆನ್‌ಲೈನ್ ಜಗತ್ತಿಗೆ ಹೊಂದುವ ಪ್ರತ್ಯೇಕ ಸೈಬರ್ ತಂಡವನ್ನು ಸರಕಾರ ಸಿದ್ಧಪಡಿಸಬೇಕಿದೆ. ಇದಕ್ಕಾಗಿ ಬೇಕಿರುವ ಅಗತ್ಯ ನೆರವನ್ನು ನೀಡಿ, ಅವರಿಗೆ ವಿದೇಶದಲ್ಲಿರುವ ಸೈಬರ್ ಕ್ರೈ ಬ್ರ‍್ಯಾಂಚಿನ ಪರಿಚಯ ಮಾಡಿಸಿ, ಅಲ್ಲಿಂದ ನಮ್ಮ ರಾಜ್ಯಕ್ಕೆ ಅಗತ್ಯವಿರುವ ವಿಷಯವನ್ನು ಕಲಿಸುವ ತರಬೇತಿಗಳನ್ನು ಕೊಡಿಸುವ ನಿಟ್ಟಿನಲ್ಲಿ ಚಿಂತಿಸಿದರೆ, ಮಾತ್ರ ಭವಿಷ್ಯ ಡಿಜಿಟಲ್ ಕ್ರೈಂಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *