ಜಿ೨೦ ಶೃಂಗಸಭೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಸೂಪರ್‌ಪವರ್ ದೇಶವಾಗಿ ಭಾರತ ಹೊರಹೊಮ್ಮಿದೆ. ಹೇಗೆಯೇ ನೋಡಿದರೂ ರಾಜತಾಂತ್ರಿಕವಾಗಿ ಇದೊಂದು ಅತ್ಯಂತ ಮಹತ್ವದ ಯಶಸ್ಸು ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಚೀನಾವನ್ನೂ ಹಿಂದಿಕ್ಕಿ ದಕ್ಷಿಣ ಭೂಗೋಳ ರಾಷ್ಟ್ರಗಳ ಅನಭಿಷಿಕ್ತ, ಅವಿರೋಧ ನಾಯಕ ನಾಗಿ ಭಾರತ ಬಿಂಬಿತವಾಗಿದ್ದು, ವಿಶ್ವದ ೫ನೇ ಪ್ರಬಲ ರಾಷ್ಟ್ರ ತಾನೆಂಬುದನ್ನು ಆಧಾರ ಸಹಿತ ಸಾಬೀತುಪಡಿಸಿಕೊಳ್ಳುವುದರೊಂದಿಗೆ ಎಲ್ಲ ವಿಚಾರಗಳಲ್ಲೂ ಉತ್ತರದ ರಾಷ್ಟ್ರಗಳ ಜತೆ ಕೊಂಡಿಯಾಗಿ ನಿಲ್ಲುವ ಛಾತಿಯನ್ನು ತೋರಿದೆ. ಇದರ ಪ್ರತೀಕವಾಗಿ, ಇಷ್ಟು ವರ್ಷಗಳ ಪ್ರಯತ್ನದ ಬಳಿವೂ ಆಫ್ರಿಕನ್ ಒಕ್ಕೂಟಕ್ಕೆ ದಕ್ಕಿರದ ಜಿ೨೦ ಸದಸ್ಯತ್ವವನ್ನು ಭಾರತ ಯಶಸ್ವಿ ಮಧ್ಯಸ್ಥಿಕೆಯೊಂದಿಗೆ ತನ್ನ ಅಧ್ಯಕ್ಷತೆಯಲ್ಲಿ ದೊರಕಿಸಿಕೊಟ್ಟಿದೆ. ಇದರಿಂದ ಆರ್ಥಿಕ ಶಕ್ತಿಶಾಲಿ ರಾಷ್ಟ್ರಗಳ ಒಕ್ಕೂಟವೆನಿಸಿದ್ದ ಜಿ೨೦ಯಲ್ಲಿ ಆರ್ಥಿಕ ದುರ್ಬಲರಿಗೂ ಪ್ರಾತಿನಿಧ್ಯ ದೊರಕಿಸಿಕೊಟ್ಟ ಹೆಮ್ಮೆ ನಮ್ಮದಾಗಿದೆ. ಮಾತ್ರವೇ ಅಲ್ಲ, ದೇಶದ ಬಲಶಾಲಿ ರಾಷ್ಟ್ರಗಳ ಎದುರು ನಿಂತು ಬಡ ಮತ್ತು ಅಭಿವೃದ್ಧಿಪರ ದೇಶಗಳ ಗಟ್ಟಿ ಧ್ವನಿಯನ್ನು ಮೊಳಗಿಸಿದಂತಾಗಿದೆ. ಅಧ್ಯಕ್ಷೀಯ ಅವಧಿಯ ಕೇವಲ ಎಂಟು ತಿಂಗಳಲ್ಲಿ ವಿಶ್ವ ಸಮುದಾಯದ ಎದುರಿದ್ದ ಹಲವು ಸಂಕೀರ್ಣ ಸಂಗತಿಗಳಿಗೆ ಭಾರತ ಮುಖಾಮುಖಿಯಾದ ರೀತಿಗೆ ಅಮೆರಿಕವೂ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ತಲೆದೂಗಿದ್ದಾರೆ. ಶೃಂಗಸಭೆಯ ಘೋಷಣೆಗಳಿಗೆ ಒಂದಿನಿತೂ ಆಕ್ಷೇಪ ವ್ಯಕ್ತವಾಗದ ರೀತಿಯಲ್ಲಿ ಸರ್ವಸಮ್ಮತ ಅಂಗೀಕಾರ ಪಡೆದದ್ದಲ್ಲದೇ, ರಷ್ಯಾ ಮತ್ತು ಉಕ್ರೇನ್ ಯುದ್ಧದಂಥ ರಾಜಕೀಯಾತ್ಮಕ ವಿಚಾರಗಳು ನುಸುಳದಂತೆ ಎಚ್ಚರಿಕೆವಹಿಸಿರುವುದು ಮುತ್ಸದ್ಧಿತನಕ್ಕೆ ಸಾಕ್ಷಿ. ಯುದ್ಧದ ಕುರಿತು ಬಾಲಿ ಶೃಂಗದಲ್ಲಿನ ಖಂಡನಾ ನಿರ್ಣಯದ ಲವಲೇಶವೂ ದೆಹಲಿ ಘೊಷಣೆಯಲ್ಲಿ ವ್ಯಕ್ತವಾಗದಂತೆ ಮಾಡಿದ್ದು ಸಣ್ಣ ಸಂಗತಿಯೇನಲ್ಲ. ಪರಿಣಾಮ ಆರ್ಥಿಕ ಸ್ಥಿರತೆ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ ತಡೆಯಂತಹ ಜಿ೨೦ಯ ನೈಜ ಗುರಿಯತ್ತ ಆದ್ಯ ಗಮನಹರಿಸಿದಂತಾಗಿದೆ. ಶೃಂಗದಲ್ಲಿ ಭಾಗವಹಿಸದೇ ಕರಡು ನೀತಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿ, ಕೊಂಕು ತೆಗೆದಿದ್ದ ಚೀನಾದಂಥ ಚೀನಾವೇ ಭಾರತದ ಚತುರ ವಿದೇಶಾಂಗ ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಗಮನಾರ್ಹ. ಯಾವುದೇ ದೃಷ್ಟಿಯಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೊಣೆಗೆ ನಾವೀಗ ಸಬಲರು ಎಂಬ ಸಂದೇಶ ರವಾನೆಯಾಗಿದ್ದು, ಆ ಕಾರಣಕ್ಕೇ ವಿಶ್ವಸಂಸ್ಥೆಯ ಸುಧಾರಣೆಯ ಕಾರ್ಯಸೂಚಿಯನ್ನು ಪ್ರಧಾನಿ ಮೋದಿಯವರು ಜಿ೨೦
ಶೃಂಗಸಭೆಯ ಕೊನೆಯಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ. ಅಂಥ ಅವಕಾಶ ದೊರಕುವ ವಿಶ್ವಸನೀಯ ಆಶಾವಾದವಂತೂ ಹುಟ್ಟಿದೆ.