Monday, 16th September 2024

ಇಂದಿರಾ ಹತ್ಯೆಗೆ ಕೆಲ ದಿನ ಮೊದಲು, ನಾನು ಅವರ ಹಂತಕನನ್ನು ನೋಡಿದ್ದೆ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

1984ರ ಜೂನ್ 7 ರಂದು, ಬಿಬಿಸಿ ಮತ್ತು ಆಕಾಶವಾಣಿ ಭಿಂದ್ರನ್ ವಾಲೆ ಹತ್ಯೆಯ ಸುದ್ದಿಯನ್ನು ಪ್ರಸಾರ ಮಾಡಿದ್ದವು. ನಾನು ಆಫೀಸಿಗೆ ಹೋದಾಗ, ನನ್ನ ಸಹೋದ್ಯೋಗಿಗಳು ಈ ವಿಷಯವನ್ನು ಗುಂಪು ಗುಂಪಾಗಿ ಸೇರಿ, ಚರ್ಚಿಸುತ್ತಿದ್ದರು. ಅವರಲ್ಲಿ ಕೆಲವರು ಸಿಖ್ ಅಧಿಕಾರಿಗಳೂ ಇದ್ದರು. ಅಕಾಲಿ ತಖ್ತ್ ಮತ್ತು ಸ್ವರ್ಣ ಮಂದಿರದೊಳಗೆ ಸೇನೆ ಸುಗ್ಗಿ ಈ ಕಾರ್ಯಾಚರಣೆ ಮಾಡಿ ದ್ದಕ್ಕೆ ಅವರಿಗೆ ಬೇಸರವಾದಂತಿತ್ತು. ನಾನು ನನ್ನ ಕೋಣೆಗೆ, ನನ್ನೊಂದಿಗೆ ಕೆಲಸ ಮಾಡುತ್ತಿದ್ದ ನಾಲ್ವರು ಸಿಖ್ ಅಧಿಕಾರಿಗಳಿಗೆ
ಬರುವಂತೆ ತಿಳಿಸಿದೆ.

ಇದು ಹಿಂದೂ – ಸಿಖ್ ಧರ್ಮೀಯರ ನಡುವಿನ ಹೋರಾಟವಲ್ಲ ಅಥವಾ ಖಾಲಿಸ್ತಾನ ಬೇಡಿಕೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವೂ ಅಲ್ಲ ಎಂದು ಅವರಿಗೆ ವಿವರಿಸಿದೆ. ಅವರಿಗೆ ಏನನಿಸಿತೋ ಏನೋ ನನ್ನ ಮಾತು ಕೇಳಿ ಸುಮ್ಮನಾದರು. ಹಾಗೆ ನೋಡಿದರೆ, ಇದು ಕೆಲವು ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾಡಿದ ಕಾರ್ಯತಂತ್ರ ಅಥವಾ ಹುನ್ನಾರವಾಗಿತ್ತು. ಆಪರೇಷನ್ ಬ್ಲೂ ಸ್ಟಾರ್‌ನಿಂದ ಅಲ್ಲಿದ್ದ ಸಿಖ್‌ರಿಗೆ ಏನಾದರೂ ನಿಯಾಗಿದೆಯಾ ಎಂಬುದನ್ನು ಖುzಗಿ ತಿಳಿದುಕೊಳ್ಳಲು ನಾನು ಆ ದಿನ ಸಾಯಂಕಾಲ ಗುರುದ್ವಾರ ಬಂಗ್ಲಾ ಸಾಹೇಬಗೆ ಭೇಟಿ ನೀಡಿದೆ. ಗುರುದ್ವಾರದ ಸುತ್ತಮುತ್ತ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಜನ ಮಾತಾಡುತ್ತಿದ್ದರು.

ಪಂಜಾಬಿ ಭಾಷೆಯಲ್ಲಿ, ಕೆಂಪು ಶಾಯಿಯಲ್ಲಿ ಬರೆದ ಫಲಕಗಳನ್ನು ಎಲ್ಲರಿಗೂ ಕಾಣುವಂತೆ ಕೆಲವರು ಹಿಡಿದು ನಿಂತಿದ್ದರು. ಒಂದು ಫಲಕದಲ್ಲಿ ಹೀಗೆ ಬರೆದಿತ್ತು – ಸಿಖ್ ಸಹೋದರರೇ, ಅಮರಿಕ್ ಸಿಂಗ್ ಮತ್ತು ಥಾರಾ ಸಿಂಗ್ ಅವರನ್ನು ಹಿಂಸೆ ನೀಡಿ ಕೊಲ್ಲಲಾಗಿದೆ. ಈ ಹತ್ಯೆಗೆ ನಾವು ಆ ಬ್ರಾಹ್ಮಣಿಯನ್ನು ಕೊಂಡು ಮುಯ್ಯಿ ತೀರಿಸಿಕೊಳ್ಳಬೇಕು’ ಇಲ್ಲಿ ಬ್ರಾಹ್ಮಣಿ ಅಂದರೆ ಇಂದಿರಾ ಗಾಂಧಿ ಎಂದು ಎಂಥವರಿಗಾದರೂ ಗೊತ್ತಾಗುತ್ತಿತ್ತು. ಮರುದಿನ ನಾನು ನಿರ್ದೇಶಕ ಗ್ಯಾರಿ ಸಕ್ಸೆನಾ ಅವರನ್ನು ಸಂಪರ್ಕಿಸಿ ನಿನ್ನೆ ಗುರುದ್ವಾರದಲ್ಲಿ ಕಂಡಿದ್ದನ್ನು ವಿವರಿಸಿದೆ. ಇನ್ನೊಂದು ಮುಖ್ಯ ವಿಷಯವನ್ನು ಅವರಿಗೆ ನೇರವಾಗಿ ಹೇಳಿದೆ. ಮುಂದಿನ ಆರು ತಿಂಗಳೊಳಗೆ ಇಂದಿರಾ ಗಾಂ8888 ಅವರ ಜೀವಕ್ಕೆ ಅಪಾಯವಿದೆ.

ಅವರ ಹತ್ಯೆ ನಡೆದರೂ ಆಶ್ಚರ್ಯವಿಲ್ಲ. ಈ ಸಂಬಂಧ ನಾವು ಸಂಬಂಧಪಟ್ಟ ಭದ್ರತಾ ಸಂಸ್ಥೆ ಗಳಿಗೆ ಈ ವಿಷಯವನ್ನು ತಿಳಿಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ನನ್ನ ಮಾತು ಗಳನ್ನು ಕೇಳಿಸಿಕೊಂಡ ಸಕ್ಸೆನಾ  ‘ನೀವು ಹೇಳಿದಂತೆ, ಅಂಥ ಘಟನೆ ನಡೆದರೆ, ದಿಲ್ಲಿ ಯಲ್ಲಿ ಅಪಾರ ಸಂಖ್ಯೆಯ ಸಿಖ್ ಜನಾಂಗದವರ ಹತ್ಯೆಯಾಗಬಹುದು. ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂದಿತು’ ಎಂದರು. ಅದಕ್ಕೆ ನಾನು, ‘ಅವರಿಗೆ ಬೇಕಾಗಿದ್ದೂ ಅದೇ ಅಲ್ಲವೇ?’ ಎಂದೆ. ’ಅವರಿಗೆ ಅಂದರೆ ಯಾರಿಗೆ?’ ಎಂದು ಸಕ್ಸೆನಾ ಕೇಳಿದರು. ‘ಇನ್ನ್ಯಾರಿಗೆ ? ಪಾಕಿಸ್ತಾನಕ್ಕೆ ಮತ್ತು ಸಿಖ್ ಜನರಿರುವ ಕೆಲವು ಪಾಶ್ಚಿಮಾತ್ಯ ದೇಶಗಳಿಗೆ’ ಎಂದು ಹೇಳಿದೆ.

… 21 ಅಕ್ಟೊಬರ್ ಭಾನುವಾರ. ನಾನು ಮತ್ತು ನನ್ನ ಪತ್ನಿ ಮತ್ತು ಇಬ್ಬರು ಮಕ್ಕಳು, ಕನಾಟ್ ಪ್ಲೇಸ್‌ಗೆ ತಾಕಿಕೊಂಡಿರುವ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ, ನನ್ನ ಪತ್ನಿಯ ಅಕ್ಕ ಪರಮಜಿತ್ ಪನಾಗ್‌ಳ ಮನೆಗೆ ಹೋಗಿದ್ದೆವು.
ವಾಪಸ್ ಬರುವಾಗ ಅಕ್ಬರ್ ರಸ್ತೆ ಮತ್ತು ಸಫ್ದರ್‌ಜಂಗ್ ರಸ್ತೆಯ ಕ್ರಾಸಿಂಗ್ ಮತ್ತು ಜಿಮಖಾನ ಕ್ಲಬ್ ತಿರುವಿನ ಹತ್ತಿರ ಬರುವಾಗ, ನಂಬರ್ 1, ಅಕ್ಬರ್ ರಸ್ತೆಯ ಒಂದು ಕೊನೆಯಲ್ಲಿ ಇಬ್ಬರು ಯುವ ಪೊಲೀಸರು ನಿಂತಿರುವುದನ್ನು ಗಮನಿಸಿದೆ.

ಇದು ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸದ ಒಂದು ಭಾಗವೇ ಆಗಿತ್ತು. ಆ ಇಬ್ಬರು ಪೊಲೀಸರ ಕೈಯಲ್ಲಿ ಸ್ಟೆನ್ ಗನ್
ಗಳಿದ್ದವು. ಆ ಪೈಕಿ ಒಬ್ಬನದು ಐದು ಅಡಿ ಎಂಟು ಅಂಗುಲ ಎತ್ತರದ ಕಟ್ಟುಮಸ್ತು ಶರೀರ. ಆತನ ಗಡ್ಡದಿಂದ ಆತ ಸಿಖ್ ಎಂದು
ಹೇಳಬಹುದಿತ್ತು. ಆತ ಅಲ್ಲಿ ನಿಂತಿರುವುದನ್ನು ನೋಡಿದ ತಕ್ಷಣ ನಾನು ನನ್ನ ಪತ್ನಿಗೆ ಹೇಳಿದೆ – ‘ಆಪರೇಷನ್ ಬ್ಲೂ ಸ್ಟಾರ್ ನಂತರ, ಪ್ರಧಾನಿಯವರ ನಿವಾಸ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಿಖ್ ಭದ್ರತಾ ಸಿಬ್ಬಂದಿಯನ್ನು ತೆಗೆದು, ಬೇರೆಯ ವರನ್ನು ನಿಯೋಜಿಸಿದ್ದರೂ, ಏಕಾಏಕಿ ಮತ್ತೆ ಸಿಖ್ ಭದ್ರತಾ ಸಿಬ್ಬಂದಿಯನ್ನೇ ಡ್ಯೂಟಿಗೆ ಹಾಕಿರುವುದೇಕೆ? ಇದರಲ್ಲಿ ಏನೋ ಇದೆ.

ಇದರಿಂದ ಪ್ರಧಾನಿ ಇಂದಿರಾ ಹತ್ಯೆ ಸುಲಭವಾದೀತು. ಸಿಖ್ ಸಿಬ್ಬಂದಿ ಮರುನಿಯೋಜನೆಗೆ ಆದೇಶ ನೀಡಿದ್ದು ಯಾರಿರಬಹುದು? ಯಾಕೋ ನನ್ನ ಮನಸ್ಸು ಕೆಟ್ಟದ್ದನ್ನು ಯೋಚಿಸುತ್ತಿದೆ….’ ನಾನು ‘ಛೇ’ ಎಂದು ನನ್ನ ಕಾರಿನ ಸ್ಟಿಯರಿಂಗ್ ಗುದ್ದಿದೆ. ಅದಾಗಿ ಕೆಲ ದಿನಗಳ ನಂತರ, ಪ್ರಧಾನಿ ಹತ್ಯೆಯ ಹಂತಕನ ಫೋಟೋವನ್ನು ಪತ್ರಿಕೆಗಳಲ್ಲಿ ನೋಡುತ್ತಿದ್ದಂತೆ, ತಟ್ಟನೆ ಎದುರಿಗೆ ಬಂದ ವ್ಯಕ್ತಿ ಅಂದು ನೋಡಿದ ಸಿಖ್ ಪೊಲೀಸ್ ಭದ್ರತಾ ಸಿಬಂದಿ. ಅವನೇ ಸತ್ವಂತ್ ಸಿಂಗ್ !

ಹೀಗೆಂದು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಅರ್ಥಾತ್ ‘ರಾ’ (RAW) ಮಾಜಿ ಅಧಿಕಾರಿ ಜಿ.ಬಿ.ಎಸ್. ಸಿಧು ತಮ್ಮ
The Khalistan Conspiracy ಎಂಬ ಹೊಸ ಪುಸ್ತಕದಲ್ಲಿ ಬರೆದಿದ್ದರೆ. ಸದ್ಯದಲ್ಲಿಯೇ ಪುಸ್ತಕ ಕನ್ನಡದಲ್ಲೂ ಅನುವಾದವಾಗಿ ಬರಲಿದೆ. 1984 ರ ಸಿಖ್ ಹತ್ಯಾಕಾಂಡಕ್ಕೆ ಕಾರಣವಾದ ಘಟನಾವಳಿಗಳನ್ನು ಈ ಕೃತಿಯಲ್ಲಿ ಸಿಧು ರೋಚಕವಾಗಿ ವಿವರಿಸಿದ್ದಾರೆ.

ಅಪರಾಧ ಸುದ್ದಿಯಲ್ಲೂ ಹಾಸ್ಯ

ಪ್ರತಿ ಕ್ರೈಂ (ಅಪರಾಧ ಸುದ್ದಿ) ವರದಿಯಲ್ಲೂ ಒಂದು ಸಣ್ಣ ಹಾಸ್ಯ ಇರುವುದಂತೆ. ಅದರಲ್ಲೂ ಆ ವರದಿಯನ್ನು ಸರಿಯಾಗಿ ಬರೆಯದಿದ್ದರೆ, ಅದು ನಗೆಪಾಟಲಿಗೀಡಾಗುತ್ತದೆ. (ಕೆಲವು ವರ್ಷಗಳ ಹಿಂದೆ, ‘ವಿಜಯ ಕರ್ನಾಟಕ’ ದಲ್ಲಿದ್ದಾಗ ಶೀರ್ಷಿಕೆಯಲ್ಲಿ ನಗೆಪಾಟಲಿಗೀಡಾದ ಸಚಿವ ಎಂದು ಬರೆಯಲು ನಗೆ ಪಾಟೀಲರಿಗೆ ಈಡಾದ ಸಚಿವ ಎಂದು ಪ್ರಕಟವಾಗಿತ್ತು.

ತಮಾಷೆಯೆಂದರೆ, ಅದು ಪಾಟೀಲ ಎಂಬ ಸಚಿವರಿಗೆ ಸಂಬಂಧಿಸಿದ ಸುದ್ದಿಯಾದ್ದರಿಂದ ಯಾರೂ ತಪ್ಪು ಭಾವಿಸಲಿಲ್ಲ. ತಮ್ಮ ಪತ್ರಿಕೆಯಲ್ಲಿ ‘ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಅಪಹರಣ’ ಎಂಬ ಶೀರ್ಷಿಕೆಯನ್ನು ನೋಡಿ ಕ್ರುದ್ಧರಾದ
‘ಸಂಯುಕ್ತ ಕರ್ನಾಟಕ’ದ ಶಾಮರಾಯರು, ‘ಈ ಶೀರ್ಷಿಕೆ ಬರೆದವರಾರು?’ ಎಂದು ಗದರಿದ್ದರು. ಸುದ್ದಿಮನೆಯಲ್ಲಿದ್ದ ಎಲ್ಲರೂ ಅವರತ್ತ ನೋಡಿದಾಗ, ‘ಯಾವ ಮೂರ್ಖ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಅಪಹರಣ ಎಂದು ಬರೆದಿರುವುದು? ಮಾಂಗಲ್ಯ ಸರವನ್ನು ಮಹಿಳೆಯರಲ್ಲದೇ ಗಂಡಸರು ಧರಿಸುತ್ತಾರಾ? ಮಾಂಗಲ್ಯವನ್ನು ಕುತ್ತಿಗೆಗೆ ಅಲ್ಲದೇ ಸೊಂಟಕ್ಕೆ ಕಟ್ಟಿ ಕೊಳ್ಳುತ್ತಾರಾ? ಮಾಂಗಲ್ಯಸರವಲ್ಲದೇ ಹಗ್ಗವಾ? ಅದರ ಬದಲು, ‘ಮಾಂಗಲ್ಯ ಅಪಹರಣ’ ಎಂದಷ್ಟೇ ಬರೆದಿದ್ದರೆ ಸಾಕಿತ್ತು’ ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಕನ್ನಡದ ಪ್ರಮುಖ ಪತ್ರಿಕೆಯೊಂದರ ಅಪರಾಧ ಸುದ್ದಿ ವಿಭಾಗದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು.
‘ಮಹಡಿಯಿಂದ ಬಿದ್ದು ವೃದ್ಧನ ಸಾವು’ ಎಂಬ ಶೀರ್ಷಿಕೆ ಅಡಿಯಲ್ಲಿ, ಹೀಗೆ ಬರೆಯಲಾಗಿತ್ತು – ‘ಎಪ್ಪತ್ತು ವರ್ಷದ ವೃದ್ಧರೊ ಬ್ಬರು ತಮ್ಮ ಮನೆಯ ಮಹಡಿಯಿಂದ ಕಾಲು ಜಾರಿ ಬಿದ್ದು ಅಸುನೀಗಿರುವ ಘಟನೆ ನಗರದ ನಂದಿನಿ ಬಡಾವಣೆಯಲ್ಲಿ ಸಂಭ ವಿಸಿದೆ. ಈ ಘಟನೆಯಲ್ಲಿ ಮೃತರ ನ್ನಡಕ ಬಿದ್ದು ಒಡೆದುಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿದ ಯಾರಿಗಾದರೂ ನಗು ಬರುವುದು ಸಹಜ. ಆ ವೃದ್ಧರೇ ಸತ್ತಿರುವಾಗ, ಇನ್ನು ಅವರ ಕನ್ನಡಕ ಒಡೆದಿರು ವುದು ಏನು ಮಹಾ? ಒಂದು ವೇಳೆ, ವೃದ್ಧರು ಮಹಡಿಯಿಂದ ಬೀಳುವಾಗ, ಅವರ ಕನ್ನಡಕ ಚೂರಾಗಿ, ಅದರ ಚೂಪು ಭಾಗ ಅವರ ಕಣ್ಣಿಗೋ, ಮುಖಕ್ಕೋ ಚುಚ್ಚಿದ್ದರೆ ಬೇರೆ ಮಾತು. ಕೆಲವು ದಿನಗಳ ಹಿಂದೆ, ನಮ್ಮ ಪತ್ರಿಕೆಯ ಒಂದು ಸುದ್ದಿ ಪ್ರಕಟ ವಾಗಿತ್ತು. ಚಿಕ್ಕಮಗಳೂರಿನ ಹಳ್ಳಿಯೊಂದರಲ್ಲಿ ಧರೆ ಕುಸಿದು ಮಣ್ಣಿನಡಿಯಲ್ಲಿ ಸಿಕ್ಕಿ, ಮೂರು ಹಸುಗಳು ಸತ್ತಿದ್ದವು.

ಮೊದಲ ಎರಡು ಪ್ಯಾರಾಗಳಲ್ಲಿ ಈ ಘಟನೆಯನ್ನು ವಿವರಿಸಲಾಗಿತ್ತು . ಎರಡನೇ ಪ್ಯಾರಾದಲ್ಲಿ ಹೀಗೆ ಬರೆದಿತ್ತು – ‘ಈ ಘಟನೆ ಯಲ್ಲಿ ಸತ್ತ ಮೂರು ಹಸುಗಳ ಹೆಸರು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಹಳ ವರ್ಷಗಳ ಹಿಂದೆ, ಬೆಂಗಳೂರಿನ ಇಂಗ್ಲಿಷ್ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಸುಮಾರು ನೂರು ವರ್ಷಕ್ಕೂ ಹಳೆಯದಾದ ಕನ್ನಡಿ ಯೊಂದು ಒಬ್ಬ ವಸ್ತು ಸಂಗ್ರಾಹಕರ ಮನೆಯಿಂದ ಕಳುವಾಗಿತ್ತು. ಮೊದಲ ಮೂರ್ನಾಲ್ಕು ಪ್ಯಾರಾಗಳಲ್ಲಿ ಈ ಘಟನೆಯನ್ನು ವಿವರಿಸಿದ ವರದಿ ಗಾರ, ಕೊನೆಯಲ್ಲಿ Police have been looking into the mirror (ಪೊಲೀಸರು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಿದ್ದಾರೆ?) ಎಂದು ಬರೆದಿದ್ದ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ, ‘ಪತ್ನಿ ನಾಪತ್ತೆ’ ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಮೊದಲ ಪ್ಯಾರಾದಲ್ಲಿ ‘ನಗರದ ನಾಗವಾರದ ಉದ್ಯಮಿಯೊಬ್ಬರು ತಮ್ಮ ಪತ್ನಿ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ’ ಎಂದು ಬರೆದಿತ್ತು. ಆದರೆ ಎರಡನೇ ಪ್ಯಾರಾ ನೋಡಿ ಆಶ್ಚರ್ಯವಾಯಿತು. ತಮ್ಮ ಪತ್ನಿ ಇಪ್ಪತ್ತೊಂದು ತಿಂಗಳ ಹಿಂದೆ ಕಾಣೆಯಾಗಿ ದ್ದಾಳೆಂದು ಉದ್ಯಮಿ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಹಾಗಾದರೆ ಆತ ಇಷ್ಟು ದಿನ ಆತ ಏನು ಮಾಡುತ್ತಿದ್ದ? ಹೆಂಡತಿ ನಾಪತ್ತೆಯಾಗಿರುವುದಕ್ಕೆ ಖುಷಿ ಪಟ್ಟನಾ? ಕೆಲವು ವರ್ಷಗಳ ಹಿಂದೆ, ಇಂಗ್ಲಿಷ್ ದೈನಿಕದ ಕ್ರೈಮ್ ಸುದ್ದಿಯಲ್ಲಿ ವರದಿಗಾರ ಬರೆದಿದ್ದನ್ನು ಯಥಾವತ್ತು ಪ್ರಕಟಿಸಿ ದ್ದಿರಬೇಕು. ಆತ ಹೀಗೆ ಬರೆದಿದ್ದ Police received a call from a woman who said she smelled something funny in her room last night. She believed that it might be her husband.

ಯಾರಿಗೂ ಹೇಳದ ರಹಸ್ಯ !
ಪ್ರತಿಯೊಬ್ಬರಲ್ಲೂ ಜೀವನವಿಡೀ ಯಾರಿಗೂ ಹೇಳಲಾಗದ, ಹೇಳಬಾರದ ಕನಿಷ್ಠ ಒಂದು ರಹಸ್ಯವಾದರೂ ಇದ್ದೇ ಇರುತ್ತದೆ.
ಅದನ್ನು ಕೆಲವರಿಗೆ ಹೇಳುವ ಸಂದರ್ಭ ಬರುವುದೇ ಇಲ್ಲ. ಇನ್ನು ಕೆಲವರು ಸಂದರ್ಭ ಬಂದರೂ ಹೇಳುವುದಿಲ್ಲ. ಇನ್ನು ಕೆಲವ ರಿಗೆ ಅದನ್ನು ರಹಸ್ಯವಾಗಿ ಇಟ್ಟುಕೊಳ್ಳಲು ಬರುವುದಿಲ್ಲ, ಹೇಳಿಬಿಡುತ್ತಾರೆ ಅಥವಾ ಹೇಗೋ ಗುಟ್ಟು ರಟ್ಟಾಗಿಬಿಡುತ್ತದೆ.
ರಹಸ್ಯವನ್ನು ಕಾಪಾಡುವುದು ದೊಡ್ಡ ಕಲೆ. ಕೆಲವರಲ್ಲಿ ಯಾವ ರಹಸ್ಯವೂ ರಹಸ್ಯವಾಗಿ ಉಳಿಯುವುದಿಲ್ಲ. ‘ಯಾರಿಗೂ
ಹೇಳಬಾರದು, ಈ ರಹಸ್ಯವನ್ನು ನಾನು ನಿನಗೆ ಮಾತ್ರ ಹೇಳುತ್ತಿರುವುದು’ ಎಂದು ಹತ್ತಾರು ಮಂದಿ ಮುಂದೆ ಹೇಳಿರುತ್ತಾರೆ.

ರಹಸ್ಯವನ್ನು ಯಾರಿಗೂ ಹೇಳದೇ ಕಾಪಾಡಿಕೊಳ್ಳಲು ಬಹಳ ನಿಯಂತ್ರಣ ಶಕ್ತಿ ಬೇಕು. ಕೆಲವರಿಗೆ ರಹಸ್ಯ ಸಂಗತಿ ತಿಳಿದ ಕೂಡಲೇ ಅದನ್ನು ಬೇರೆಯವರಿಗೆ ಹೇಳಿಬಿಡಬೇಕು, ಇಲ್ಲದಿದ್ದರೆ ಸಮಾಧಾನವಾಗುವುದಿಲ್ಲ.  ಅಂಥವರು ಯಾವ ಗುಟ್ಟನ್ನೂ ಇಟ್ಟು ಕೊಳ್ಳಲಾರರು. ಕೆಲವು ವರ್ಷಗಳ ಹಿಂದೆ, ‘ನಿಮ್ಮ ಜೀವನದಲ್ಲಿ ನೀವು ಕಾಪಾಡಿಕೊಳ್ಳಲು ಬಯಸಿದ ರಹಸ್ಯ ಯಾವುದು?’ ಎಂಬ
ಪ್ರಶ್ನೆಯನ್ನು ಪತ್ರಿಕೆಯೊಂದು ತನ್ನ ಓದುಗರಿಗೆ ಕೇಳಿತ್ತು. ತಮ್ಮ ರಹಸ್ಯಗಳನ್ನು ಕಳಿಸುವವರು ತಮ್ಮ ಹೆಸರನ್ನು ಬರೆಯ ಬೇಕಾದ ಅಗತ್ಯವಿರಲಿಲ್ಲ. ಹೀಗಾಗಿ ಅಸಂಖ್ಯ ಎಂಟ್ರಿಗಳು ಬಂದಿದ್ದವು.

ಆ ಪೈಕಿ ಒಬ್ಬಳು ಬರೆದಿದ್ದಳು – ‘ನಾನು ಚಿಕ್ಕವಳಿದ್ದಾಗ ಹುಡುಗನೊಬ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ. ಈ ಘಟನೆ ಯನ್ನು ನಾನು ಯಾರಿಗೂ ಹೇಳಲಿಲ್ಲ. ನನಗೆ ಗೊತ್ತಿತ್ತು, ಒಂದು ವೇಳೆ ಹೇಳಿದ್ದರೆ, ಅದರಿಂದ ನನ್ನ ತಾಯಿಗೆ ತೀವ್ರ ಆಘಾತ ವಾಗುವುದೆಂದು. ಹೀಗಾಗಿ ಹೇಳದೇ ಸುಮ್ಮನಿದ್ದೆ. ಒಂದು ವಾರದ ನಂತರ, ಆತ ನನ್ನ ಬಳಿ ಬಂದು, ‘ಕ್ಷಮಿಸು’ ಎಂದ. ನಾನು ಅವನನ್ನು ಕ್ಷಮಿಸಿದೆ. ಅನಂತರ ಆತ ಮುಂದಿನ ಆರು ವರ್ಷಗಳವರೆಗೆ ಲೈಂಗಿಕ ದೌರ್ಜನ್ಯವನ್ನು ಮುಂದುವರಿಸಿದ.’

ಮೊಯಿಲಿ ಪುಸ್ತಕ ಓದುವ ಕಷ್ಟ-ಸುಖ

ಈ ಸಲ ಊರಿಗೆ ಬಂದಾಗ, ಮಹಾಕವಿ ವೀರಪ್ಪ ಮೊಯೋಳಿ ಅವರ ಎ ಮಹಾಕಾವ್ಯ ಪುಸ್ತಕಗಳನ್ನು ಖರೀದಿಸಿ, ಓದಿ, ಅರ್ಥ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ’ ಮೊನ್ನೆ ಹೀಗೆಂದು ಫೋನಿನಲ್ಲಿ ಹೇಳಿದವರು ಬೆಹರೇನ್ ವಾಸಿ ಕನ್ನಡಿಗ, ಪತ್ರಿಕೆಯ ಅಂಕಣಕಾರ ಮತ್ತು ಆತ್ಮೀಯ ಸ್ನೇಹಿತರಾದ ಕಿರಣ್ ಉಪಾಧ್ಯಯ.

‘ಕಿರಣ್, ಈ ಮೂರೂ (ಖರೀದಿಸಿ, ಓದಿ ಅರ್ಥ ಮಾಡಿಕೊಳ್ಳುವುದು) ಸಾಧ್ಯವಿಲ್ಲ. ಹೆಚ್ಚೆಂದರೆ ನೀವು ಅವರ ಮಹಾಕಾವ್ಯ ಗಳನ್ನು ಖರೀದಿಸಬಹುದು’ ಎಂದೆ. ಅವರಿಗೆ ನನ್ನ ಮಾತು ಪೂರ್ತಿ ಅರ್ಥವಾಗಲಿಲ್ಲವೇನೋ. ‘ಹಾಗಂದ್ರೆ ಏನರ್ಥ?’ ಎಂದು ಕೇಳಿದರು. ಅದಕ್ಕೆ ನಾನು ಹೇಳಿದೆ – ‘ಮೊಯಿಲಿ ಬರೆದ ಪುಸ್ತಕಗಳನ್ನು ನೀವು ಖರೀದಿಸುವುದು ಸಾಧ್ಯವಿದೆ. ಆದರೆ ಅವರ ಪುಸ್ತಕಗಳನ್ನು
ಓದುವುದು ಸಾಧ್ಯವಿಲ್ಲ. ಅವನ್ನು ಓದಿದ್ದೇನೆ ಎಂದು ಹೇಳಿದ ಒಬ್ಬೇ ಒಬ್ಬ ವ್ಯಕ್ತಿಯನ್ನು ಈ ತನಕ ನಾನು ನೋಡಿಲ್ಲ, ಕೇಳಿಲ್ಲ.
ಹೀಗಿರುವಾಗ, ಇನ್ನು ಅವನ್ನು ಅರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.’

ಸಂತೋಷ ಮತ್ತು ಬೇಸರ

ಹಿಂದಿನ ವಾರ ಯೋಗಿ ದುರ್ಲಭಜೀ ಒಂದು ಪ್ರಸಂಗ ಹೇಳಿದರು. ಒಂದು ಘಟನೆಯಿಂದ ನಮಗೆ ಸಂತೋಷವೂ ಆಗುತ್ತದೆ ಮತ್ತು ಬೇಸರವೂ ಆಗುತ್ತದೆ ಎಂದು ಹೇಳುವಾಗ ಅವರು ಆ ಪ್ರಸಂಗವನ್ನು ಹೇಳಿದ್ದು.

ಯೋಗಿ ಅವರ ಸ್ನೇಹಿತನಿಗೆ ಸುಮಾರು ಅರವತ್ತೈದು ವರ್ಷ ವಯಸ್ಸು. ಆತನ ನಾಲ್ಕು ಹೆಣ್ಣು ಮಕ್ಕಳ ಪೈಕಿ, ಮೊದಲನೆಯ ವಳಿಗೆ ಹೆಣ್ಣು ಮಗು ಜನಿಸಿದಳು. ಅವರ ಸ್ನೇಹಿತ ಅಜ್ಜ ಆದ. ಯೋಗಿ ತಮ್ಮ ಸ್ನೇಹಿತನಿಗೆ, ‘ನೀನು ಅಜ್ಜ ಆಗಿದ್ದಕ್ಕೆ ಅಭಿನಂದನೆ ಗಳು’ ಎಂದು ಶುಭಾಶಯ ಕೋರಿದರು. ಅವರ ಸ್ನೇಹಿತನ ದನಿಯಲ್ಲಿ ಅಂಥ ಉತ್ಸಾಹವಿರಲಿಲ್ಲ.  ಇದನ್ನು ಗಮನಿಸಿದ ಯೋಗಿ, ‘ಏನಯ್ಯ, ಅಜ್ಜನಾಗಿದ್ದೀಯಾ. ಖುಷಿ ಅನಿಸುತ್ತಿಲ್ಲವಾ?’ ಎಂದು ಕೇಳಿದರು. ಅದಕ್ಕೆ ಅವರ ಸ್ನೇಹಿತ, ‘ಹಾಗೇನಿಲ್ಲ, ಬಹಳ ಖುಷಿ ಯಾಗುತ್ತಿದೆ… ಆದರೂ..ಆದರೂ… ’ ಎಂದ. ‘ಏನು ಅದು ? ಆದರೂ…ಆದರೂ…?’ ಎಂದು ಕೇಳಿದರು ಯೋಗಿ. ಆಗ ಅವರ ಸ್ನೇಹಿತ ತುಸು ಸಂಕೋಚದಿಂದ ಹೇಳಿದ – ‘ಅಜ್ಜನಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಆದರೆ ಪ್ರತಿದಿನ ಅಜ್ಜಿ ಜತೆಯ ಮಲಗಬೇಕಲ್ಲ ?’

ಹೀಗೊಂದು ಸೂಚನಾ ಫಲಕ !

ಇಂಗ್ಲಿಷ್‌ನಲ್ಲಿ ಬರೆಯುವವರು ಮತ್ತು ಮಾತಾಡುವವರೆಲ್ಲ ಬುದ್ಧಿವಂತರು ಎಂಬ ಭಾವನೆ ಹಲವರಲ್ಲಿದೆ. ಇದು ನಿಜವಿರಲೂ ಬಹುದು. ಹೀಗೆ ಭಾವಿಸುವವರಿಗಾಗಿ ಒಂದು ಸೂಚನಾ-ಲಕದ ಬರಹವನ್ನು ತೋರಿಸಬೇಕು. ಇತ್ತೀಚೆಗೆ ಬೆಂಗಳೂರಿನ ಯುಬಿ ಸಿಟಿ ಪಾರ್ಕಿಂಗ್ ಪ್ರದೇಶದಲ್ಲಿ ಕಾಣಿಸಿದ ಬರಹ – Our fourth floor office at upstairs  !

Leave a Reply

Your email address will not be published. Required fields are marked *