ಸುಪ್ತ ಸಾಗರ
rkbhadti@gmail.com
ಸೂರ್ಯನಿಂದಲೇ ಸಿಡಿದ ತುಂಡುಗಳು ತಣಿದು ಗೋಳಗಳ ಮಂಡಲ ಸೃಷ್ಟಿಯಾಯತಂತೆ. ಅದಾದರೂ ಎಂಥಾ ಸ್ಫೋಟ! ಇಡೀ ಗೋಲಕ್ಕೆ ಗೋಲವೇ ಕೆರಳಿ ಕೆಂಡವಾಗಿ, ಉರುಳುರುಳಿ, ಒಳಗೊಳಗೇ ಮರಳಿ ಕೊನೆಗೊಮ್ಮೆ ಕಾವನ್ನು ಒಳಗಿಟ್ಟುಕೊಳ್ಳಲಾಗದೇ ಸ್ಖಲಿಸಿ ಹೊರಹಾಕಿದ್ದಲ್ಲವೇ? ಅದಕ್ಕಿರುವ ಹೆಸರು ಮಹಾಸೋಟ. ಒಂದೊಂದು ಗೋಳಗಳೂ ಅಲ್ಲಿಂದ ಸಿಡಿತಲೆಗಳಾಗಿ ಹೊರ ಹೊಮ್ಮಿ, ಆ ವೇಗಕ್ಕೆ, ಅಂಥ ಉತ್ಕರ್ಷಕ್ಕೆ ಚಿಮ್ಮಿ ಬಂದು ತಣಿದವಲ್ಲ? ರಚನೆಯಾಯಿತು ನೋಡಿ ಖಗೋಳದಲ್ಲೊಂದು ಸೌರ ಸಂಸಾರ.
ಅದಕ್ಕೆಲ್ಲವೂ ಅಪ್ಪ ಸೂರ್ಯನೇ. ಆತನ ವೀರ್ಯವಂತಿಕೆಗೆ ತರ್ಕಬದ್ಧ ನೆಲೆಗಟ್ಟನ್ನು ಒದಗಿಸಲು ಸಜ್ಜಾಗಿದ್ದೆನೆಂದರೆ ಆಗಿನ ನನ್ನ ಒಡಲ ಶಕ್ತಿಯ ನನಗೇ ಅಚ್ಚರಿ! ಕ್ಷಣದಲ್ಲಿ ಸರ್ವವನ್ನೂ ಮುರುಟಿಸಿ, ಕರಕಲಾಗಿಸಬಲ್ಲ ಅಂಥ ಶಾಖವನ್ನು ತಾಳಿಕೊಂಡ ನನ್ನ ಹರವಿನ ಬಗ್ಗೆ ನನಗೇ ಹೆಮ್ಮೆಯಿದೆ..
ಅಂದಿನಿಂದಲೂ ಕುಂತಿಯ ಆಳ್ತನ ಅಂಥದ್ದೇ. ಇಲ್ಲದಿದ್ದರೆ ಭೀಮನಂಥ ಶಿಶುವನ್ನು ಹೊರಬಲ್ಲ ತೋಡೆಗಳು ಬೇರಿದ್ದೀತೇ ಜಗದಲ್ಲಿ? ಇಂಥ ನನ್ನೆಲ್ಲ ಶಕ್ತಿಯ ಮೂಲವೇ ಆ ಮಂತ್ರ. ಅದನ್ನುಪದೇಶಿಸಿದ್ದ ಆ ಮುನಿಪ ದೂರ್ವಾಸನದ್ದೂ ಅದೇ ಕೆಂಡಾಮಂಡಲ ತಾಪವಲ್ಲವೇ? ಅದನ್ನುವರು ಉಪದೇಶಿಸಿ
ಹೋದ ಮರುಕ್ಷಣವೇ ನಾನು ಬಿಸಿಯಾಗತೊಡಗಿದ್ದೆ.
ಕೇಳಿದ್ದೇವಲ್ಲಾ, ‘ಅಸತ್ವಾ ಇದಮಗ್ರ ಆಸೀತ್…’ ಅಂತೆಲ್ಲ ಈ ವಿಶ್ವದ ಮೂಲವೆಲ್ಲವೂ ಅಂಥದ್ದೇ ಬಿಸಿ. ಅದೇ ರಭಸ. ಅದೇ ಸಂಘರ್ಷ. ಮತ್ತದೇ ತಿಕ್ಕಾಟ. ಅದರ ಕೊನೆಯಲ್ಲಿಯೇ ಅಲ್ಲವೇ ಸೃಷ್ಟಿ. ಎರಡೂ ಧ್ರುವಗಳೂ ಬಿಸಿಯೇರಿ ಬೆಸೆದು ಬೇರ್ಪಟ್ಟಾಗಲೇ ಜೀವದುದಯ. ಎಲ್ಲ ಜೀವನ ಕ್ರಿಯೆಗಳ
ಮೂಲಕರ್ತೃ ಹಾಗೂ ಆ ಕ್ರಿಯೆಯ ಚಾಲನಾ ‘ಶಕ್ತಿ’ಯೇ ಸೂರ್ಯನೆಂಬ ಸಾರ್ವತ್ರಿಕ ನಂಬಿಕೆಯಲ್ಲಿ ವಿಶ್ವಾಸಟ್ಟವಳು ನಾನು. ಅದಕ್ಕಾಗಿಯೇ ನಾನು ಆ ಮಂತ್ರ ದಕ್ಕಿಸಿಕೊಂಡ ಮರುಕ್ಷಣವೇ ಆ ಬಿಸಿ ಗೋಳದ ಆಕರ್ಷಣೆಗೆ ಒಳಗಾದೆ.
ಅದಿಲ್ಲದೇ ಇದ್ದರೆ ನನ್ನ ಆಗಿನ ಜವ್ವನದ ಬಿರುಸಿನಲ್ಲಿ ಮತ್ತಾವ ಸೃಷ್ಟಿಯೂ ಸಾಧ್ಯವೇ ಇರಲಿಲ್ಲ. ಅಷ್ಟರ ಮಟ್ಟಿಗಿನ ಕಾವು ನನ್ನೊಡಲಲ್ಲೂ. ಅದನ್ನು ಭೇದಿಸಿ ಪ್ರವೇಶಿಸುವ ವೀರ್ಯ ವಂತರು ಅದೇ ಸೂರ್ಯನಿಂದ ಸಿಡಿದು ತಣಿದ ಭೂ ಮಂಡಲದಲ್ಲಿರಲು ಸಾಧ್ಯವೇ? ಅದು ಅಗೋಚರ. ಜ್ಞಾನಿ,
ವೇದಾಂತಿ ಎರಡೂ ಆಗಿ ನಾನು ಗ್ರಹಿಸಿದ ಸತ್ಯ ಆ ಕ್ಷಣದ ಸ್ಫೋಟದ್ದು. ಕೋಟ್ಯಂತರ ವರ್ಷಗಳ ಹಿಂದೆ, ಮೊದಲ ಬಾರಿಗೆ ಹಾಗೆ ಸೂರ್ಯ ಸಿಡಿದಾಗ ಹುಟ್ಟಿದ್ದ ಭೂಮಿ. ಅಗಾಧ, ಊಹೆಗೂ ಮೀರಿದ ಅಮೋಘ ಸ್ಖಲನವದು. ಜೀವದ ಮೂಲಕ್ಕೆ ಕಾರಣವಾಯಿತಲ್ಲಾ ಅದೇ. ಪ್ರಕೃತಿಯಲ್ಲಿಯೂ
ವರ್ಷಧಾರೆ. ಬಿಸಿ ತಣಿಸಲು ಅದೇ ಮಾಧ್ಯಮ. ಸೂರ್ಯನ ಧಾತು ತಣ್ಣಗಾಯಿತು. ಭೂಮಿಯಲ್ಲಿ ಎಲ್ಲವೂ ಅರಳ ತೊಡಗಿತು.
ಅದನ್ನಾರು ನೋಡಿದವರಿದ್ದಾರೆ? ಹೇಳುತ್ತಾರಪ್ಪಾ ಹಾಗೆಯೇ ಬ್ರಹ್ಮಾಂಡದ ಸೃಷ್ಟಿಯೂ ಆಯಿತೆಂದು. ಅದಕ್ಕೂ ಮುಂಚೆ ಏನಿದ್ದೀತು? ಕಲ್ಪನೆಗೂ ಮೀರಿದ ಸಂಗತಿ. ಆದರೆ ಒಂದಂತೂ ಸತ್ಯ. ಸೂರ್ಯನ ಪ್ರತಿ ಸೋಟದಲ್ಲೂ ಒಂದಲ್ಲಾ ಒಂದು ಮಹತ್ತರ ಸೃಷ್ಟಿ ಆಗಿಯೇ ಆಗಿದೆ. ಎಲ್ಲವೂ ವಿಲಕ್ಷಣ, ವಿಶೇಷ, ವಿಶಿಷ್ಟ. ಹೇಳಿ ಕೇಳಿ ಅಗಾಧದ ತುಣುಕುಗಳಲ್ಲವೇ ಅವು. ಅಲ್ಲಿ ಮೊದಲು ಕಾಣಿಸಿಕೊಳ್ಳುವುದು ಭಾರೀ ಬಿರುಗಾಳಿ, ಅದು ಎಬ್ಬಿಸುವ ಧೂಳು. ಶಕ್ತಿಯ ಪ್ರವೇಶದ ಮುನ್ಸೂಚನೆಯದು, ನಂತರದ್ದು ದ್ರವ. ಅದು ಸಾಗರ.
ಅದರ ಒಡಲಲ್ಲೇ ಗರ್ಭಸ್ಥ ಭ್ರೂಣದ ಘನೀಕರಣ ಪ್ರಕ್ರಿಯೆ. ನಂತರದ್ದು ಸ್ಪಷ್ಟ, ಅಸೀಮ ಆಕೃತಿಯ ಜನನ. ಮತ್ತೊಂದು ಸ್ಫೋಟ ನಡೆದು ವ್ಯಕ್ತಿತ್ವ ಮೈದಾಳಲು ಮತ್ತೆ ಕೋಟ್ಯಂತರ ವರ್ಷಗಳೇ ಬೇಕಾಗಬಹುದು. ಕೋಟ್ಯಂತರ ಜೀವಕಣ ಗಳಿಂದ ಅವೃತ್ತವಾದ ಅಂಥ ಒಂದೊಂದು ಸೃಷ್ಟಿಯೂ ಈ
ಭೂಮಿಯ ಮೇಲೆ ಒಂದೊಂದೇ ಎನ್ನುವಂಥದ್ದು. ಮೊದಲಿನದ್ದು ಶನಿ. ಸ್ವತಃ ಉಷೆಯೇ ಅವನ ಬಿಸಿಯನ್ನು ತಾಳಿಕೊಳ್ಳಲಾಗದೇ ಹೋದಳಂತೆ. ಅದಕ್ಕಾಗಿ ತನ್ನ ಛಾಯೆಯ ಆ ಕುಂಡವಾಗಿ ಸೃಷ್ಟಿಸಿದಳು. ಅದರಲ್ಲಿ ಹವಿ ರ್ಭಾಗಗಳ ಅರ್ಪಣೆ. ಆಹುತಿಗಳ ಸ್ವಾಹಾಕಾರವಾಗುತ್ತಿದ್ದಂತೆಯೇ ಕೆನ್ನಾಲಿಗೆಗಳನ್ನು ಚಾಚಿ ಮೇಲೇಳುವ ಅಗ್ನಿ ಗೋಳ. ಕೊನೆಗೊಮ್ಮೆ ಪೂರ್ಣಾಹುತಿಯಲ್ಲಿ ಸೃಷ್ಟಿಗೊಂಡ ವನು ಶನಿಯಂತೆ. ಅವನ್ನೊಬ್ಬನೇ ಸಾಕು ಸೋಟದ ನಂತರದ ಸೃಷ್ಟಿಯ ಸಾಕ್ಷಿಗೆ.
ನಂತರ ಯಮ, ಯಮುನೆ… ಒಂದೊಂದೂ ಸಿಡಿದ ಕಿಡಿಗಳೇ. ಅಂಥ ಪೌರುಷವನ್ನು ತಾಳಿಕೊಂಡ ನನ್ನ ಕುಂಡದಲ್ಲಿ ಆ ಸೂರ್ಯ ಹೋಮಿಸಿ ಸೃಷ್ಟಿಸಿದ್ದು ಕರ್ಣನನ್ನು. ಚೈತನ್ಯದ ಬಂಧಕ ಶಕ್ತಿ ಅದುವೇ. ಅದು ರಸದ ರಾಸಾಯನಿಕದ ಬಂಧಕ ಶಕ್ತಿ. ಒಂದರೊಳಗೊಂದು ಬೆಸೆದೇ ಸೃಷ್ಟಿಯಾಗುವಂಥದ್ದು. ಪರಮಾಣುವೆನ್ನಿ, ಬೇಕಿದ್ದರೆ ಅದನ್ನೇ ಪರಮಾತ್ಮನೆನ್ನಿ. ಇಲ್ಲಿ ಮಾತ್ರವೇ ಅಲ್ಲ, ಎಲ್ಲ ಚರಾಚರ ಜೀವ ಸೃಷ್ಟಿಯ ಆಟವೂ ಆ
ಚೈತನ್ಯದಿಂದಲೇ ನಡೆದದ್ದು. ಅಂಥ ಪ್ರಖರ ಜ್ವಾಲೆಯ ಪ್ರವೇಶ, ಬಳಿಕದ ಮೊದಲ ಸೃಷ್ಟಿ ನನ್ನುದರದಲ್ಲಿ ಆದ ನಂತರವೂ ಮತ್ತೆ ನನ್ನೊಂದಿಗಿನ ಮಿಲನದ ಸಾಮರ್ಥ್ಯ ಹೊಂದಿದವರು ಕಾಣಲಿಲ್ಲ. ಅಂಥ ಶಕ್ತಿ ಇದ್ದರೆ ಆ ಸ್ಫೋಟಕಕ್ಕೆ ಅಥವಾ ಅದರ ಫಲಿತಕ್ಕೆ ಮಾತ್ರ ಎಂಬ ನನ್ನ ನಂಬಿಕೆ
ಹುಸಿಯಾಗಿರಲಿಲ್ಲ. ಈ ಕಾರಣಕ್ಕಾಗಿಯೇ ನನ್ನ ನೆಲದಲ್ಲಿ ಎರಡನೇ ಸೃಷ್ಟಿಗೆ ನಾನು ಆಹ್ವಾನಿಸಿದ್ದು ಅದೇ ಬಿಸಿಗೋಳದ ಬೀಜಕಣದಿಂದ ಮೊಳೆತು ಬಲಿತಿದ್ದ ಯಮನನ್ನು.
ಪ್ರಾಪಂಚಿಕ ಸಂಬಂಧಗಳಿಗೆಲ್ಲ ಇಲ್ಲಿ ಅರ್ಥವೇ ಇಲ್ಲ. ಅದು ಅಪ್ರಸ್ತುತ. ಅದಿಲ್ಲದಿದ್ದರೆ ಮೊದಲ ಸೃಷ್ಟಿ ಅಪ್ಪನಿಂದ, ನಂತರದ್ದು ಮಗನಿಂದ ಎಂದಾಗುತ್ತಿತ್ತು. ಹಾಗಾದಲ್ಲಿ ಕರ್ಣ, ಯಮನಿಗೂ ಯಮನ ಮಗನಿಗೂ ಸೋದರನಾಗುತ್ತಿದ್ದನೇನೋ. ಅಥವಾ ಯಮ ಕರ್ಣನಿಗೆ ಅಣ್ಣನೂ, ಚಿಕ್ಕಪ್ಪನೂ ಆಗುತ್ತಿದ್ದನೇ? ಅಂಥ ಪ್ರಾಪಂಚಿಕ ಸಂಬಂಧದ ಅರ್ಥವ್ಯಾಪ್ತಿಯಲ್ಲಿ ಒಳಪಡುವ ಸೃಷ್ಟಿ ಇದಲ್ಲವೇ ಅಲ್ಲ. ಏಕೆಂದರೆ ನಾನು ಕುಂತಿ! ಹೀಗಾಗಿ ಸೂರ್ಯನೊಂದಿಗಿನ ಆಗಿನ ಸಂಯೋಗ ಅತಿಕ್ರಮವೂ ಅಲ್ಲ, ಅಕ್ರಮವೂ ಅಲ್ಲ. ಮತ್ತೊಂದು ಮಹಾ ಸ್ಫೋಟದದ ನಿಮಿತ್ತ ಮಾತ್ರವೇ ಅದಾಗಿತ್ತು. ಶಕ್ತಿಗಳು ಹೀಗೆ ಉದಯಿಸುತ್ತಲೇ ಇರುತ್ತವೆ. ಇಲ್ಲದಿದ್ದರೆ ಬಂಧಶಕ್ತಿಯು ತಟಸ್ಥವಾಗಿಬಿಟ್ಟಿರುತ್ತಿತ್ತು. ಜೀವಕ್ಕೆ ಆಗ ಜಡತ್ವ. ಜೀವವೇ ಜಡವಾದ ಮೇಲೆ ದೇಹಕ್ಕೇನು ಅರ್ಥ?
***
ಜಿಜ್ಞಾಸೆ ಹುಟ್ಟಿರುವುದು ಕೊಡು-ಕೊಳ್ಳುವಿಕೆಯ ನಡುವೆ. ವಾರದಿಂದ ನನ್ನನ್ನು ಕಂಗೆಡಿಸಿಬಿಟ್ಟಿದೆಯದು. ಕೊಡುವುದು ಔದಾರ್ಯ ಎಂಬುದರಲ್ಲಿ ಎರಡು ಮಾತೇ ಇಲ್ಲ. ಇದ್ದೋ, ಇಲ್ಲದೆಯೋ ಅಂತೂ ಕೊಡುವುದು ಸ್ವಲ್ಪಮಟ್ಟಿಗೆ ದೊಡ್ಡ ಮನಸ್ಸು ಮಾಡಿದರೆ ಕಷ್ಟವೇನಾಗಲಿಕ್ಕಿಲ್ಲ. ಆದರೆ ಕೊಟ್ಟದ್ದನ್ನು ಕೊಳ್ಳುವುದು, ಅದೂ ಯಾವುದೇ ಹಿಂಜರಿಕೆಯಿಲ್ಲದೆಯೇ ಒಪ್ಪಿ‘ಕೊಳ್ಳು’ವುದು ಕಷ್ಟವೇ ಸರಿ. ಅದೊಂದು ರೀತಿಯಲ್ಲಿ ಪರೀಕ್ಷೆಯಲ್ಲಿ ಮರೆತು ಹೋಗುವ ಗಣಿತದ ಲೆಕ್ಕವಿದ್ದಂತೆ. ಮುಂಚಿನ ದಿನ ಪುಸ್ತಕದ ಮೇಲೆ ಕಣ್ಣಾಡಿಸುವಾಗ ಎಲ್ಲವು ಬರುತ್ತದೆ ಎಂತಲೇ ಅನ್ನಿಸುತ್ತದೆ. ಪರೀಕ್ಷಾ ಕೊಠಡಿಗೆ ಹೊಕ್ಕು ಪ್ರಶ್ನೆಪತ್ರಿಕೆ ಮುಂದೆ ಬರುತ್ತಿದ್ದಂತೆಯೇ ಸೂತ್ರವೇ ಮರೆತು ನಾಲಗೆ ಒಣಗಲಾರಂಬಿಸುತ್ತದೆ. ಅಂತಃಕರಣಕ್ಕೆ ಅದು
ಯಾವತ್ತಿಗೂ ಸಿಗುವುದೇ ಇಲ್ಲ. ಎಷ್ಟೇ ಮನನ ಮಾಡಿಕೊಂಡು, ಧೈರ್ಯವಾಗಿದ್ದರೂ ಕೊನೇ ಕ್ಷಣದಲ್ಲಿ ಕೈಕೊಟ್ಟಿರು ತ್ತದೆ ವಿಶ್ವಾಸ.
ಹೇ ಪರಾಶರ, ನಿನ್ನ ನಂಬಿಸಲಾಗಲೀ ನನ್ನನ್ನು ಸಮರ್ಥಿಸಿ ಕೊಳ್ಳಲಾಗಲೀ ಈ ಮಾತನ್ನು ಹೇಳುತ್ತಿಲ್ಲ. ಸಾಮಾನ್ಯ ಕೊಡುಕೊಳ್ಳುವಿಕೆಯ ಬಗ್ಗೆಯೇ ಹೀಗಿದ್ದಾಗ ನೀನು ಕೊಡಲು ಹೊರಟಿರುವುದು ನಿನ್ನಂತರಂಗವನ್ನು. ಜತೆಗೆ ನಿನ್ನ ಬಹಿರಂಗದ ಬಲಾಢ್ಯ ತೋಳುಗಳ ನಡುವಿನ ಹರವೆದೆಯ
ಮೇಲಣ ಸುಖವನ್ನು. ನಾನು ಈ ಮಾತನ್ನು ಹೇಳಿ ಮುಗಿಸುವ ಹೊತ್ತಿಗೆ ನೀನು ಸಂಪೂರ್ಣ ಬೆತ್ತಲಾಗಿರುತ್ತೀಯಾ (ಅಂತರಂಗದಲ್ಲಿ) ಎಂಬುದು ನನಗೆ ಗೊತ್ತು. ಏಕೆಂದರೆ ನನ್ನ ನೋಡಿದಾಕ್ಷಣ ನಿನ್ನ ಹುಟ್ಟಿರುವ ವಾಂಛೆ ಅಷ್ಟೊಂದು ಉತ್ಕಟ ವಾದುದು.
ನೀನಿದನ್ನು ನಿರೀಕ್ಷಿಸಿರಲಿಲ್ಲ ಅಲ್ಲವೇ? ಅದ ರಲ್ಲೂ ನಿನ್ನಂಥ ನಿನ್ನನ್ನು ತಿರಸ್ಕರಿಸುವ ಧೈರ್ಯ ಯಾವ ಹೆಣ್ಣಿ ಗಾದರೂ ಬಂದೀತು? ಅಂಥದ್ದೇ ಮೌಢ್ಯದಲ್ಲಿ ಅಥವಾ ಅದನ್ನು ನಂಬಿಕೆ ಎನ್ನೋಣ… ಆ ನಂಬಿಕೆಯಲ್ಲೇ ನನ್ನ ಕೂಡುವ ನಿನ್ನ ಇಂಗಿತವನ್ನು ಅಭಿವ್ಯಕ್ತಿಸಿದವ ನೀನು. ಬದುಕು ಹೀಗೆ ಎಡವುವುದೇ ಕುರುಡು ಕಾಮದ ಕತ್ತಲಲ್ಲಿ. ಪ್ರೀತಿಯ ಬೆಳಕನ್ನು ಹೊತ್ತಿಸಲು ಮತ್ತದೇ ಅಂತರಂಗದ ಸ್ವಿಚ್ ಅನ್ನು ಒತ್ತಬೇಕಿದೆ. ನೀನು ಅದಕ್ಕಾಗಿಯೇ ತಡವರಿಸುತ್ತಿರುವುದು. ನೀನೊಬ್ಬ ಮಹಾ ತಪಸ್ವಿ, ಜ್ಞಾನವಂತ.
ಹಠಮಾರಿ, ಸಿದ್ಧ ಪುರುಷ ಎಲ್ಲವೂ ಸತ್ಯ. ಆದರೆ ಹೆಣ್ಣಿನ ಅಂತರಂಗವನ್ನು ಗೆಲ್ಲಲು ಇದಷ್ಟರಿಂದಲೇ ಸಾಧ್ಯವಿಲ್ಲ ಎಂಬುದನ್ನು ಅರಿತುಕೊ ಮುನಿಯೇ! ಹೀಗಂದ ಮಾತ್ರಕ್ಕೇ ನೀನು ಮುನಿಯಬಹುದೆಂಬ ಆತಂಕ ನನ್ನಲ್ಲಿ ಇಲ್ಲದಿಲ್ಲ. ಆದರೂ ಧೈರ್ಯವಾಗಿ ನಾನು ಇಷ್ಟೆಲ್ಲ ಹೇಳುತ್ತಿದ್ದೇನೆಂದರೆ ಎಲ್ಲವನ್ನೂ ಮೀರಬಲ್ಲೆನೆಂಬ ಅಹಂ ಸಾಮಾನ್ಯಳಾದ ನನ್ನಲ್ಲಿಗಿಂತ ಸರ್ವಸಂಗ ಪರಿತ್ಯಾಗಿ ಎನಿಸಿದ ನಿನ್ನಲ್ಲಿಯೇ ಹೆಚ್ಚಿದೆ. ಅದೇ ನಿನ್ನನ್ನು ಇಂಥ ಅಂಧತ್ವಕ್ಕೆ ತಳ್ಳಿರುವುದು. ನಿನ್ನನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ, ಸ್ವೀಕರಿಸುತ್ತಿಲ್ಲ ಎಂಬ ಕೊರಗು ನಿನ್ನಲ್ಲಿರುವುದನ್ನು ನಾನು ಬಲ್ಲೆ.
ಹೀಗೆ ಮೈತುಂಬಾ ಗಂಟುಗಂಟು ಕೂದಲುಗಳನ್ನು ಬೆಳೆಸಿಕೊಂಡು, ಬೂದಿ ಮೆತ್ತಿದೆ, ವಾಸನೆ ಬೀರುವ ಮೈಯೊಂದಿಗೆ, ಪಾಚಿಗಟ್ಟಿದ ಹಲ್ಲು ಕಿರಿಯುತ್ತ ಹೋದರೆ ಯಾವ ಹೆಣ್ಣು ತಾನೆ ನಿನ್ನನ್ನು ಒಪ್ಪಿ ಅಪ್ಪಿಕೊಂಡಾಳು? ನಿನ್ನೊಳಗಿನ ವಾಸನಾ ಪ್ರವೃತ್ತಿ ನನ್ನಲ್ಲಿ ಮಿಗಿಲಾಗಿರುವುದನ್ನು ಗ್ರಹಿಸಿದ್ದಿ ನೀನು. ಹೌದು ಕಾಮದ ವಿಚಾರದಲ್ಲಿ ನಿನಗಿಂಥ ನಾನೇ ಹೆಚ್ಚು. ಅದೇ ‘ವಾಸನೆ’ ನನ್ನನ್ನು ಆವರಿಸಿರುವುದು. ನಿನ್ನಲ್ಲಿ ಇರಬಹುದಾದ ಅನುಮಾನಗಳೇ ನನ್ನಲ್ಲೂ ಇರುವುದು. ಇಬ್ಬರದ್ದೂ ಅಯ್ಕೆಯದ್ದೇ ಸಮಸ್ಯೆ.
ಒಂದೇ ವ್ಯತ್ಯಾಸವೆಂದರೆ, ನಿನ್ನನ್ನು ಆಯ್ದು ಕೊಳ್ಳುವವರಿಲ್ಲ, ನನ್ನ ಹಿಂದೆ ಬಂದವರಲ್ಲಿ ಯಾರನ್ನು ಆಯ್ದುಕೊಳ್ಳಲಿ ಎಂಬುದು ತಿಳಿಯುತ್ತಿಲ್ಲ. ನಿನ್ನಂತೆ ಪ್ರೇಮ ಭಿಕ್ಷೆ ಬೇಡಿ ನನ್ನ ದೋಣಿಯನ್ನೇರಿದವರು ಅದೆಷ್ಟೋ? ಆದರೆ ಬಾಳೆ ನಾವೆಗೆ ಹುಟ್ಟುಹಾಕುತ್ತ ಕೂರಲು ಯಾರೂ ಸಿದ್ಧರಿಲ್ಲ. ಎಲ್ಲರದ್ದೂ ಕ್ಷಣಿಕ ಪಯಣದ ಹಂಬಲ. ದಡ ತಲುಪುವವರೆಗೆ ಯಾರಿಗೂ ವ್ಯವಧಾನವಿಲ್ಲ. ನೀನೂ ಅಷ್ಟೆ ಅನುಕಂಪದ ಸೋಗು ಹಾಕುತ್ತಿದ್ದೀಯ. ವಿನಯ ತೋರ್ಪಡಿಸುತ್ತಿದ್ದೀಯ. ನನ್ನನ್ನು ಆವರಿಸಕೊಂಡಾಕ್ಷಣವೇ ಜಾಣತನ ಮೆರೆಯುವವನೇ. ನೀನು ಹಂಬಲಿಸಿದ್ದನ್ನೆಲ್ಲಾ ನಾನು ಕೊಡಲಾರೆ. ನೀನು
ಕೊಡಲು ಹೊರಟದ್ದನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲೂ ಆರೆ. ಅಂಗಾಂಗದ ಸುಳಿಯಲ್ಲಿ ಮುಳುಗೇಳುವುದು ಪ್ರೀತಿಯಲ್ಲ. ನನ್ನಲ್ಲಿರುವುದೇನಿದ್ದರೂ ಪುಟ್ಟ ನೀರಿನ ಹೊಂಡವೇ ಹೊರತೂ ಬೃಹತ್ ಸಾಗರವಲ್ಲ. ಬೃಹತ್ ಸಾಗರವ ಈಜಿ ದಡಸೇರುವ ಸಾಮರ್ಥ್ಯದ ನೀನು ಅದೆಷ್ಟು ಕೊಡಬಲ್ಲೆ
ಎಂಬುದೂ ಅರಿವಿದೆ. ಆದರೆ ನೀನು ಪೂರ್ವ ತಯಾರಿ ಯಿಲ್ಲದೇ ಕೊಡುವುದನ್ನು ಸ್ವಾಭಿಮಾನ, ಸ್ವಂತಿಕೆ, ಅಹಂಕಾರ ಕೊನೆಗೆ ನಾಚಿಕೆಯನ್ನೂ ಬಿಟ್ಟು ಸ್ವೀಕರಿಸುವುದು ಸುಲಭವಿಲ್ಲ.
ಆದರೂ ಸ್ವೀಕರಿಸಬೇಕೆಂದಿದ್ದರೆ ನನ್ನೊಳಗೊಂದು ಧನ್ಯತಾ ಭಾವ ಮೂಡಬೇಕಲ್ಲಾ? ಅದನ್ನು ನೀನು ಮೂಡಿಸಿ ಮನದ ಮೂಲೆಯಿಂದ ಸುವಾಸನೆ ಹೊಮ್ಮುವಂತೆ ಮಾಡಬಲ್ಲೆಯಾ? ಗಾಳ ಹಾಕಿ ಕೂತವನ ತನ್ಮಯತೆ ನಿನ್ನಲ್ಲಿದೆ. ಎಂಥಾ, ಮಾತುಗಳೂ ನಿನ್ನನ್ನೀಗ ವಿಚಲಿತಗೊಳಿಸುವುದಿಲ್ಲ. ಬಂದದ್ದು ಬರಲಿ. ಗಾಳಕ್ಕೆ ದೊಡ್ಡ ಮೀನೇ ಬಿದ್ದರೆ ಅದೃಷ್ಟ, ಇಲ್ಲದಿದ್ದರೆ ಸಣ್ಣದಾರೂ ಸಿಕ್ಕೀತು. ಏನೂ ಸಿಗಲಿಲ್ಲ ಗಾಳಕ್ಕೇನು ನಷ್ಟ? ನೀವು ಗಂಡಸರ ಯೋಚನೆಗಳೇ ಹಾಗೆ. ಮೊದಲೇ ನಾನು ಹೆಸರಿನಿಂದಲೇ ಮತ್ಸ್ಯಗಂಧಿ. ಹೀಗಾಗಿ ನನಗೇ ಗಾಳ ಹಾಕಿದ್ದೀಯ. ಆದರೆ, ಗಾಳಕ್ಕೆ ಸಿಲುಕಿಕೊಳ್ಳುವ ಮೀನಿನ ತೊಳಲಾಟ ಎಂಥದ್ದೆಂಬುದನ್ನು ನೀವು ಒಮ್ಮೆಯಾದರೂ ಯೋಚಿಸಿದ್ದಿದೆಯಾ? ಮೊಲನದ ಗಳಿಗೆ ಎಂದರೆ ಗಾಳಕ್ಕೆ ಮೀನು ಸಿಲುಕಿದಂತಷ್ಟೇ ಅಲ್ಲ ಮುನಿಯೇ. ಸಂಸಾರ, ದಾಂಪತ್ಯ, ಬದುಕು ಇತ್ಯಾದಿಗಳ ಬಗ್ಗೆ ನಿಮಗೆ ಏನು ಗೊತ್ತಿರಲು ಸಾಧ್ಯ? ನಿನ್ನಾಸೆಗೂ ಒಪ್ಪುತ್ತೇನೆ. ಇರಲಿ. ಅದಕ್ಕೆ ಕಾಯಬೇಡ, ಹಂಬಲಿಸಬೇಡ, ಹಲುಬಬೇಡ, ಕಾತರಿಸಬೇಡ.
ನನ್ನೊಳಗಿನ ನಂಬಿಕೆ ‘ಪೊರೆ’ಗೆ ಧಕ್ಕೆ ಭಾರದಂತೆ ಹೊರಗೊಂದು ಭ್ರಮೆಯ ಪೊರೆಯನ್ನು ಸೃಷ್ಟಿಸಿ ಬಂದು ನನ್ನ ಕೂಡು. ಕನಸಿನಾಚೆಗೆ ಕೆಲವೊಮ್ಮೆ ಹಗಲಿರುತ್ತದಲ್ಲಾ ಅಂಥ ಸೃಷ್ಟಿ ನಿನ್ನಿಂದ ಸಾಧ್ಯ. ನಮ್ಮೊಳಗಿನ ವಾಸನೆ ಅಲ್ಲಿಗೇ ಸೀಮಿತವಾಗಲಿ. ಅದು ಹೊರ ಜಗತ್ತಿಗೆ ಅಡರುವುದು ಬೇಡ. ಅರುಣರಾಗವ ಹೊಮ್ಮಿಸು. ಹಗಲಿಗಾಗಿ ರಾತ್ರಿ ಕಾಯುವುದಿಲ್ಲ. ಯುದ್ಧಕ್ಕೆ ಹೊರಡುವುವ ಯೋಧನಂತೆ, ಪ್ರೀತಿಗೆ ಹೊರಟವನಿಗೆ ಗೆಲ್ಲುವ ಹಠವಿರ
ಬಾರದು ಪ್ರೀತಿಯಲ್ಲಿ ಸೋಲಲೇಬೇಕು. ಅದೇ ಪ್ರಿತಿಯ ಸಿದ್ಧಾಂತದ ‘ವ್ಯಾಸ’ದಲ್ಲಿ ನಮ್ಮಿಬ್ಬರ ಸಂಗಮವಾಗಲಿ.
ಹೊಂದಲಾರದ ಜೀವಗಳು ಒಂದಾದರೂ ಸೃಷ್ಟಿ ನಿಲ್ಲುವುದಿಲ್ಲ. ಕರಿನೀರ ಮೇಲಣ ಮಿಲನಕ್ಕೆ ಸಾಕ್ಷಿ ಅದೇ ವ್ಯಾಸವಾಗಿರಲಿ! ನೆನಪಿಟ್ಟುಕೋ, ಪರಾಶರ ಕಾಮ ಕಾಯುವುದಿಲ್ಲ. ಸಂಜೆ ಜಾರುತ್ತಿದ್ದಂತೆ ದಿಢೀರನೆ ಮುಗಿಬೀಳುವ ರಾತ್ರಿಯಿದ್ದಂತೆ. ಆದರೆ ಪ್ರೀತಿಯೆಂಬುದು ಹಾಗಲ್ಲ ಕತ್ತಲಿಳಿಯುತ್ತಿದ್ದಂತೆ ತಾನೇ ತಾನಾಗಿ ಮೂಡಿಬರುವ ಅರುಣೋದಯದ ಕಿರಣ ಗಳಿದ್ದಂತೆ. ಅಂಥ ಕಿರಣ ಮೂಡಲಿ ನನ್ನೊಡಲೆಂಬ ಈ ದ್ವೀಪ
ಮಧ್ಯದಲ್ಲಿ.!