Monday, 16th September 2024

ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಸುಲಭವಲ್ಲ

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

ಸೌದಿ ಅರೇಬಿಯಾದ ಪೂರ್ವಕ್ಕೆ, ಖತಾರ್’ನ ಉತ್ತರಕ್ಕಿರುವ ಪುಟ್ಟ ದ್ವೀಪ ರಾಷ್ಟ್ರ ಬಹ್ರೈನ್. ಕೊಲ್ಲಿಯ ಆರು ರಾಷ್ಟ್ರಗಳಲ್ಲಿ ಇದೂ ಒಂದು. ಮೊದಲನೆಯ ಶತಮಾನದಿಂದಲೂ ಇಲ್ಲಿಯ ಮುತ್ತುಗಳು ವಿಶ್ವದಾದ್ಯಂತ ವಿಖ್ಯಾತಿ ಪಡೆದದ್ದಷ್ಟೇ ಅಲ್ಲ, ನೈಸರ್ಗಿಕ ಮುತ್ತುಗಳು ದೊರೆಯುವ ವಿಶ್ವದ ಅಗ್ರಪಂಕ್ತಿಯ ಸ್ಥಳಗಳ ಪಟ್ಟಿಯಲ್ಲಿ ಬಹ್ರೈನ್ ಹೆಸರೂ ಸೇರಿದೆ.

ಮುತ್ತಿನ ವ್ಯಾಪಾರ ಇತ್ತೀಚಿನವರೆಗೂ ಈ ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಒಟ್ಟೂ ೩೩ ದ್ವೀಪಗಳ ಸಮೂಹ ದಿಂದಾದ ಬಹ್ರೈನ್ ದೇಶವನ್ನು ಮುತ್ತಿನ ದ್ವೀಪಗಳ ರಾಷ್ಟ್ರ (Island of Pearls) ಎಂದೂ ಕರೆಯುತ್ತಾರೆ. ಈ ಮುತ್ತಿನ ದ್ವೀಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕನ್ನಡ ಸಂಘ ಬಹ್ರೈನ್ ಜಂಟಿಯಾಗಿ ಆಯೋಜಿಸಿದ ‘ಪ್ರಥಮ ಅಂತಾರಾ ಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ’ ಮತ್ತು ಅದಕ್ಕೆ ಕರ್ನಾಟಕದಿಂದ ಆಗಮಿಸಿದ ಕೆಲವು ಮುತ್ತುಗಳು ನಮ್ಮೊಂದಿಗೆ ಬೆರೆತ ಮಧುರ ನೆನಪಿನ ಮಗುವಿಗೆ ಈಗ ಎರಡು ವರ್ಷ.

ಇತರ ದೇಶಗಳಂತೆ ಬಹ್ರೈನ್‌ನಲ್ಲಿಯೂ ಅನೇಕ ಕನ್ನಡಿಗರು ಕಾರ್ಯ ನಿಮಿತ್ತ ಬಂದು ನೆಲೆಸಿದ್ದಾರೆ. ಸದ್ದಿಲ್ಲದೇ ಕನ್ನಡಮ್ಮನ ಸೇವೆ ಮಾಡುತ್ತಿದ್ದಾರೆ. ಮಾತೃಭೂಮಿಯನ್ನು, ಪರಿವಾರದವರನ್ನು, ನೆಂಟರನ್ನು ಬಿಟ್ಟು ಬಂದರೂ ತಾಯ್ನಾಡಿನ ನಂಟು
ಬಿಡಲಾಗದ ಕೆಲವು ಸುಮಾನ ಮನಸ್ಕರು ಸೇರಿ 1977ರಲ್ಲಿ ಕನ್ನಡ ಸಂಘವನ್ನು ಕಟ್ಟಿಕೊಂಡು, ಸಂಬಂಧಪಟ್ಟ ಮಂತ್ರಾಲಯ ದಲ್ಲಿ ನೋಂದಾಯಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಬಹ್ರೈನ್ ಕನ್ನಡ ಸಂಘ ಕರ್ನಾಟಕದ ಕಲೆ, ಸಂಸ್ಕೃತಿಯನ್ನು, ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುತ್ತ ಮುನ್ನಡೆಯುತ್ತಿದೆ. ಮರುಭೂಮಿಯಲ್ಲಿ ಮಲ್ಲಿಗೆಯ ಘಮಲನ್ನೂ, ಕಸ್ತೂರಿಯ ಪರಿಮಳವನ್ನೂ ಪಸರಿಸುತ್ತ ಸಾಗುತ್ತಿದೆ.

ಭಾಷೆ ಮತ್ತು ಸಂಸ್ಕೃತಿ ಯನ್ನು ಉಳಿಸಿ, ಬೆಳೆಸಲು ಕನ್ನಡ ರಾಜ್ಯೋತ್ಸವ, ವಸಂತೋತ್ಸವ, ಅಮರ ಮಧುರ ಗೀತೆ ಮೊದಲಾದ ಕಾರ್ಯಕ್ರಮಗಳು, ಕಲೆಯನ್ನು ಜೀವಂತ ವಾಗಿರಿಸಲು ಯಕ್ಷಗಾನ, ತಾಳ ಮದ್ದಳೆ, ನಾಟಕದೊಂದಿಗೆ ಸ್ಪರ್ಧಾತ್ಮಕ ಚಟುವಟಿಕೆ ಗಳಾದ ಗಾಯನ, ಭಾಷಣ, ನೃತ್ಯ, ರಂಗೋಲಿ ಸ್ಪರ್ಧೆಗಳೆಲ್ಲ ಸಂಘದ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಮಹತ್ವವಾದವು.

ಇದರೊಂದಿಗೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಕ್ತ ದಾನ ಶಿಬಿರ, ವೈದ್ಯಕೀಯ ಶಿಬಿರದಂಥ ಕಾರ್ಯಕ್ರಮ, ಧಾರ್ಮಿಕ ಆಚರಣೆಗಳಾದ ಈದ್, ಇಫ್ತಾರ್‌ ಕೂಟ, ಕ್ರಿಸ್ಮಸ್, ಸತ್ಯನಾರಾಯಣ ಪೂಜೆ, ಎಲ್ಲ ಇದ್ದದ್ದೇ. ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೂ ಕೊರತೆಯಿಲ್ಲದಂತೆ, ಪ್ರತಿ ವಾರಾಂತ್ಯಕ್ಕೂ ಸಂಘದಲ್ಲಿ ಒಂದ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಜೊತೆಗೆ ಕಳೆದ ಕೆಲವು ವರ್ಷಗಳಿಂದ ಕನ್ನಡ ತರಗತಿ, ಯಕ್ಷಗಾನ ತರಗತಿ ಮತ್ತು ಯೋಗ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ತನ್ನ ನೆಲದ ಮಣ್ಣಿನ ಸುವಾಸನೆ ಪಸರಿಸುವುದರೊಂದಿಗೆ, ಸಂಕಷ್ಟದಲ್ಲಿರುವ ತನ್ನವರಿಗೆ ಸಹಾಯ ಹಸ್ತ ಚಾಚುವವ ಕಾರ್ಯ ಚಟುವಟಿಕೆ ಯಿಂದ ಸಂಘವು ಬಹ್ರೈನ್‌ನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ, ಪ್ರತಿ ಹಂತದಲ್ಲೂ ಒಂದೊಂದು ಮೈಲಿ ಗಲ್ಲನ್ನು ನಿರ್ಮಿಸುತ್ತಾ ಬಂದಿದೆ. ವಿಶ್ವದಾದ್ಯಂತ ಕರೋನಾ ಮಹಾಮಾರಿಯಿಂದಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಲಾಗದ ಸಂದರ್ಭದಲ್ಲಿಯೂ, ಬಹ್ರೈನ್‌ನಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸು ವುದರಿಂದ ಆರಂಭಿಸಿ, ಮೃತ ದೇಹವನ್ನು ಸ್ವದೇಶಕ್ಕೆ ಕಳುಹಿಸುವುದರ ಆದಿಯಾಗಿ, ವಿಶೇಷ ವಿಮಾನದ ಮೂಲಕ ತಮ್ಮ ನಾಡನ್ನು ತಲುಪಲು ಬಯಸಿದವರಿಗೆ ಸಹಕರಿಸುವುದರವರೆಗಿನ ಕೆಲಸವನ್ನು ಸಂಘ ಮಾಡಿದೆ. ಸಂಘಕ್ಕೆ ಈಗ ತನ್ನದೇ ಆದ ನೂತನ ಕಟ್ಟಡ ‘ಕನ್ನಡ ಭವನ’ ಸಿದ್ಧವಾಗಿದ್ದು, ಕರ್ನಾಟಕ ಸರಕಾರದಿಂದ ಅನುದಾನ ಪಡೆದು, ಭಾರತದಿಂದ ಹೊರಗೆ ನಿರ್ಮಾಣಗೊಂಡ ಪ್ರಥಮ ಕನ್ನಡ ಕಲಾ ಕೇಂದ್ರ ಇದಾಗಿದೆ.

ಎರಡು ವರ್ಷದ ಹಿಂದೆ ಸಂಘವು ಅವಿಸ್ಮರಣೀಯ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. 2018ರ ಸಂಘದ ವಸಂತೋ ತ್ಸವ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್ ಗೌರವಾನ್ವಿತ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ಅವಧಿಯಲ್ಲಿ ಹಳಗನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಹಲವು ಪ್ರಥಮಗಳಿಗೆ ನಾಂದಿ ಹಾಡಿದ ಕಸಾಪ ಅಧ್ಯಕ್ಷರು ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದರು. ಅವರ ಮಾತನ್ನು ಕೇಳಿದ ಕನ್ನಡ ಸಂಘದ ಪದಾಧಿಕಾರಿಗಳಲ್ಲಿ ಒಮ್ಮೆ ಸಂತಸವಾದರೂ ಏನೋ ಒಂದು ರೀತಿಯ ದುಗುಡ. ಕನ್ನಡ ಸಾಹಿತ್ಯ ಪರಿಷತ್ತು, ಅದರ ಕಾರ್ಯಕ್ರಮ ವೆಂದರೆ ಏನು ಮಕ್ಕಳಾಟವಾ? ಕನ್ನಡ ಸಾಹಿತ್ಯ ಪರಿಷತ್ತಿನ ವಿಚಾರ ಯಾರಿಗೆ ತಿಳಿದಿಲ್ಲ
ಹೇಳಿ? 1915ರಲ್ಲಿ, ಅಂದಿನ ಮೈಸೂರು ಮಹಾಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಸಲಹೆಯಂತೆ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಆಡಳಿತದಡಿಯಲ್ಲಿ ಕನ್ನಡ ಅಕಾಡೆಮಿ ಅಥವಾ ಇಂದಿನ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂತು.

ಮೂರು ಲಕ್ಷಕ್ಕೂ ಹೆಚ್ಚು ಅಜೀವ ಸದಸ್ಯರನ್ನು ಹೊಂದಿದ ಈ ಸಂಸ್ಥೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ವಿಶ್ವದಾದ್ಯಂತ
ಇರುವ ಸಾಹಿತ್ಯಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಅತಿ ಹೆಚ್ಚು ಅಜೀವ ಸದಸ್ಯರನ್ನು ಹೊಂದಿದ ಹಿರಿಮೆ ಪರಿಷತ್ತಿನದ್ದು. ಪರಿಷತ್ತು ತನ್ನ 105 ವರ್ಷಗಳ ಇತಿಹಾಸದಲ್ಲಿ 85 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿದೆ. ಮಕ್ಕಳಿಗೆ, ಮಹಿಳೆ ಯರಿಗೆ, ವಿದ್ವಾಂಸರಿಗೆ, ಕನ್ನಡೇತರರಿಗೆ ಬೇಕಾದ 1750ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದೆ.

ಸಾಹಿತಿಗಳನ್ನು ಸನ್ಮಾನಿಸುವ, ಲೇಖಕರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ಪರಿಷತ್ತು ಯಾವತ್ತೂ ಮುಂದಿದ್ದು, ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಪರಿಷತ್ತಿನ ವಿವರ ನೀಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಸಂಸ್ಥೆ ಯೊಂದು ಬಹ್ರೈನ್‌ನಂಥ ದೇಶಕ್ಕೆ ಬಂದು ಒಂದು ಸಮ್ಮೇಳನ ನಡೆಸುತ್ತದೆಯೆಂದರೆ ಹಗುರವಾಗಿ ಪರಿಗಣಿಸುವಂತಿಲ್ಲ. ಕನ್ನಡ ಸಂಘಕ್ಕೆ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರ್ಯ ಹೊಸತೇನಲ್ಲ. ಕಳೆದ ನಾಲ್ಕು ದಶಕದಲ್ಲಿ ಅನೇಕ ದೊಡ್ದ ಮಟ್ಟದ ಕಾರ್ಯಕ್ರಮಗಳನ್ನು ಸಂಘ ಆಯೋಜಿಸಿದೆ.

ಅನೇಕ ದಿಗ್ಗಜರು ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಾಹಿತಿಗಳಾದ ಯು.ಆರ್. ಅನಂತಮೂರ್ತಿ, ಎಸ್.ಎಲ. ಭೈರಪ್ಪ, ಚಲನಚಿತ್ರ ತಾರೆಯರಾದ ಡಾ. ರಾಜಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ತಾರಾ, ನಿರ್ದೇಶಕರಾದ ಟಿ.ಎಸ್.
ನಾಗಾಭರಣ, ಟಿ.ಎನ್. ಸೀತಾರಾಮ, ಪಿ. ಶೇಷಾದ್ರಿ,  ರಾಜಕಾರಣಿಗಳಾದ ಯಡಿಯೂರಪ್ಪ, ಆಸ್ಕರ್ -ರ್ನಾಂಡಿಸ್, ಸಂಗೀತ ಲೋಕದ ಕದ್ರಿ ಗೋಪಾಲ ನಾಥ್, ಬಪ್ಪಿ ಲಹರಿ, ಗುರು ಕಿರಣ್, ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆ, ಯಕ್ಷಗಾನ ಕಲಾವಿ ದರಾದ ಶೇಣಿ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರ ರಾವ್, ಧರ್ಮ ಗುರುಗಳಾದ ಡಿ. ವೀರೇಂದ್ರ ಹೆಗ್ಗಡೆ ಇವೆಲ್ಲ ಸಂಘಕ್ಕೆ ಭೇಟಿ ನೀಡಿದ ಮಹಾನ್ ವ್ಯಕ್ತಿಗಳಲ್ಲಿ ಕೆಲವು ಹೆಸರು ಗಳು ಮಾತ್ರ. ಸಂಘಕ್ಕೆ ಭೇಟಿ ನೀಡಿದ ಕಲಾವಿದರು, ಗಣ್ಯರ ಪಟ್ಟಿ ಸಾವಿರ ದಾಟುತ್ತದೆ.

ಇದುವರೆಗೆ ಬಹ್ರೈನ್‌ಗೆ ಬಂದು ಹೋದವರೆಲ್ಲರೂ ಸಂಘದ ಚಟುವಟಿಕೆಯನ್ನು, ಅತಿಥಿ ಸತ್ಕಾರವನ್ನು ಪ್ರಶಂಸಿಸಿದ್ದಾರೆ. ಕಾರಣ, ಒಂದು ಕಾರ್ಯಕ್ರಮದ ಯಶಸ್ಸಿಗೆ ಸಂಘದ ಸದಸ್ಯರು, ಕಾರ್ಯಕರ್ತರು, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕಟ್ಟಾಳು
ಗಳಾಗಿ ನಿಲ್ಲುತ್ತಾರೆ. ಅವಡುಗಚ್ಚಿ ಕೆಲಸಮಾಡುತ್ತಾರೆ. ಅನ್ನ ನೀರಿನ ಪರಿವೆಯೇ ಇಲ್ಲದೆ ದುಡಿಯುತ್ತಾರೆ. ಲೀಟರ್ ಗಟ್ಟಲೆ ಬೆವರು ಸುರಿಸುತ್ತಾರೆ. ಎಷ್ಟೋ ಬಾರಿ ತಮ್ಮ ಕಿಸೆಯಿಂದಲೇ ಹಣವನ್ನೂ ಖರ್ಚು ಮಾಡುತ್ತಾರೆ. ಕೈಗೆತ್ತಿಕೊಂಡ ಕಾರ್ಯಕ್ರಮ ಯಶಸ್ವಿ ಯಾದ ನಂತರವೇ ನಿಟ್ಟುಸಿರು ಬಿಡುತ್ತಾರೆ.

ಆದರೆ ಸಾಹಿತ್ಯ ಸಮ್ಮೇಳನ ಎಂದರೆ ಉಳಿದ ಕಾರ್ಯಕ್ರಮಗಳಂತೆ ಅಲ್ಲ. ಸಮ್ಮೇಳನಕ್ಕೆ ಬರುವವರೆಲ್ಲ ಕನ್ನಡ ಸಾರಸ್ವತ ಲೋಕದ ರಾಯಭಾರಿಗಳು. ಅಕ್ಷರ ಲೋಕದ ನಕ್ಷತ್ರಗಳು. ಕ್ಷರ ಅಂದರೆ ನಶ್ವರ ಎಂದರ್ಥ. ಯಾವುದು ನಶ್ವರ ವಲ್ಲವೋ ಅದು ಶಾಶ್ವತವಾದದ್ದು. ಅಕ್ಷರವೂ ಅಷ್ಟೇ, ನಶಿಸಿ ಹೋಗದೇ ಚಿರಕಾಲ ಉಳಿಯುವಂತದ್ದು. ಅಂತಹ ಅಕ್ಷರ ಲೋಕದ ದಿಗ್ಗಜರನ್ನು ಒಟ್ಟು ಗೂಡಿಸಲೂ ಜಂಘಾಬಲ ಬೇಕು. ಅವರನ್ನೆಲ್ಲ ಹೊರುವ ವೇದಿಕೆ ಬಲಿಷ್ಠವಾಗಿರಬೇಕು. ಊಟೋಪಚಾರ, ವಸತಿ ಇತ್ಯಾದಿ ಅತಿಥಿ ಸತ್ಕಾರದಲ್ಲಿ ನ್ಯೂನತೆ ಉಂಟಾದರೆ, ಸಭಾಂಗಣ, ಧ್ವನಿ, ಬೆಳಕು ಅಥವಾ ಇನ್ಯಾವುದೇ ವಿಷಯದಲ್ಲಿ ಆಯೋಜಕರು
ಎಡವಿದರೆ ಲೇಖಕರ ಲೆಕ್ಕಣಿಯೇ ಸಾಕು ಎಂಬ ಅಳುಕು ಆಯೋಜಕರಿಗೆ. ಅದರಲ್ಲೂ ಕಸಾಪ ದೊಂದಿಗೆ ಮೊದಲ ಕಾರ್ಯಕ್ರಮ ಬೇರೆ. ಪ್ರಥಮ ಚುಂಬನದಲ್ಲಿಯೇ ದಂತ ಭಗ್ನವಾದಂತೆ ಆಗಬಾರದಲ್ಲ!

ವಿದೇಶಗಳಲ್ಲಿ ಪರಿಕರಗಳನ್ನು ಹೊಂದಿಸುವುದು ಊರಿನಲ್ಲಿ ಹೊಂದಿಸಿದಷ್ಟು ಸುಲಭವಲ್ಲ. ಕಾರ್ಯಕ್ರಮಕ್ಕೆ ಬೇಕಾದ ಒಡವೆ, ಆಭರಣ, ವಸ್ತುಗಳನ್ನು ತಯಾರಿಸಲು ಯಾರೂ ಇರುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಅದಕ್ಕೆಂದೇ ಇರುವ ಆಚಾರಿ ಯಾಗಲೀ
ಅಕ್ಕಸಾಲಿಯಾಗಲೀ ಇಲ್ಲಿ ಸಿಗುವುದಿಲ್ಲ. ಇದ್ದವರಲ್ಲಿಯೇ ಹೊಂದಿಕೊಂಡು, ಕಾರ್ಯಕ್ರಮಕ್ಕೆ ಏರ್ಪಾಡು ಮಾಡಿಕೊಳ್ಳಬೇಕು. ಆದರೂ ಕಸಾಪ ಅಧ್ಯಕ್ಷರ ಪ್ರೋತ್ಸಾಹ, ಪ್ರಾಯೋಜಕರು ಮತ್ತು ಸ್ವಯಂಸೇವಕರ ಭರವಸೆಯ ಮೇರೆಗೆ ಕನ್ನಡ ಸಂಘದ ಅಧ್ಯಕ್ಷ ರಾದ ಪ್ರದೀಪ್ ಶೆಟ್ಟಿಯವರ ನೇತೃತ್ವದ ತಂಡ ಕಾರ್ಯಕ್ರಮಕ್ಕೆ ಸಿದ್ಧವಾಯಿತು. ನಾಲ್ಕು ದಶಕದ ಇತಿಹಾಸವಿರುವ ಕನ್ನಡ ಸಂಘ ಮತ್ತು ದಶ ದಶಕದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಬಹ್ರೈನ್‌ನಲ್ಲಿ ಹೊಸ ಇತಿಹಾಸ ಬರೆಯಲು ವೇದಿಕೆ ಸಜ್ಜಾಯಿತು.

ಅದರ ನಂತರದ ಐದು ಆರು ತಿಂಗಳು ಸಂಘದ ಆಡಳಿತ ಮಂಡಳಿಗೆ ಅವಿಶ್ರಾಂತ ಚಟುವಟಿಕೆ. ಕಸಾಪ ಮತ್ತು ಕನ್ನಡ ಸಂಘದ ಪದಾಧಿಕಾರಿಗಳ ಭೇಟಿ, ಕಾರ್ಯಕ್ರಮದ ರೂಪು ರೇಷೆ, ಅತಿಥಿಗಳು, ಆಹ್ವಾನಿತರ ಪಟ್ಟಿ, ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಷಯಗಳು, ಎಲ್ಲಕ್ಕಿಂತ ಮಿಗಿಲಾಗಿ ಖರ್ಚು ವೆಚ್ಚದ ಮಾತುಕತೆ. ವಿಮಾನ ಪ್ರವಾಸ, ವೀಸಾ, ಆಹ್ವಾನಿತರಿಗೆ, ಸಭಿಕರಿಗೆ
ಊಟೋಪಚಾರ, ಸಾರಿಗೆ ವಾಹನಗಳ ವ್ಯವಸ್ಥೆ, ಪ್ರಚಾರ, ಅಲಂಕಾರ, ಸಭಾಭವನ, ಧ್ವನಿವರ್ಧಕ ಇತ್ಯಾದಿಗಳ ಖರ್ಚು ವೆಚ್ಚ ಗಳನ್ನು ನಿರ್ಣಯಿಸ ಲಾಯಿತು. ಅಕ್ಟೋಬರ್ ಐದು ಮತ್ತು ಆರರಂದು ಸಮ್ಮೇಳನದ ದಿನ ನಿಗದಿಯಾಯಿತು. ಒಂದು ತಿಂಗಳು ಮೊದಲೇ ಸಂಘದ ಕಾರ್ಯಕರ್ತರು ಸೊಂಟಕ್ಕೆ ಬಟ್ಟೆ ಕಟ್ಟಿ ನಿಂತರು. ಅದಕ್ಕೂ ಸುಮಾರು ಎರಡು ತಿಂಗಳು ಮೊದಲೇ ಸಭಾ ಭವನ, ಧ್ವನಿ – ಬೆಳಕಿನ ಆಯೋಜನೆ, ವಸತಿ ವ್ಯವಸ್ಥೆಗೆ, ಪ್ರಾಯೋಜಕತ್ವಕ್ಕೆ ಓಡಾಟ ಆರಂಭವಾಗಿತ್ತು. ನೂರು ಜನ ಸಾಹಿತ್ಯದ ಸಂತರು ಬರುವಾಗ ವ್ಯವಸ್ಥೆ ಸರಿಯಾಗಿರಬೇಕು.

ಕೇವಲ ಚಿತ್ರಾನ್ನ, ಮೊಸರನ್ನದಿಂದ ಬಂದವರ ಹೊಟ್ಟೆ ತಣ್ಣಗಿರಲು ಸಾಧ್ಯವಿಲ್ಲ, ಸರಿಯಾದ ಹಾಸಿಗೆ, ದಿಂಬು ಇಲ್ಲವಾದರೆ ಕಣ್ಣಿಗೆ ಸೊಂಪಾದ ನಿz ಬರುವುದಿಲ್ಲ. ಎಲ್ಲದಕ್ಕೂ ಸರಿಯಾದ ವ್ಯವಸ್ಥೆ ಕಲ್ಪಿಸಲಾಯಿತು. ಸಮ್ಮೇಳನದ ವಿಷಯ ಏನು ಹೇಳು ವುದು? ಎರಡು ದಿನಗಳ ಸಾಹಿತ್ಯದ ಸುಗ್ಗಿ. ಅಂದಿನ ಕನ್ನಡ, ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ
ಜಯಮಾಲಾ ಸಮ್ಮೇಳನವನ್ನು ಉದ್ಘಾಟಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಅಂದಿನ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಯು. ಟಿ. ಖಾದರ್ ಭಾಗವಹಿಸಿದರು. ಎರಡು ದಿನದ ಸಮ್ಮೇಳನದಲ್ಲಿ ಗೋಷ್ಠಿಗಳು, ಸಾಹಿತಿ ಗಳೊಂದಿಗೆ ಸಂವಾದ, ಶಾಸೀಯ ಮತ್ತು ಸುಗಮ ಸಂಗೀತ, ಒಟ್ಟಿನಲ್ಲಿ ಸಾಹಿತ್ಯದ ಹಬ್ಬ. ಬಂದ ನೂರು ಜನರ ಹೆಸರನ್ನೂ ಅವರ ವ್ಯಕ್ತಿತ್ವವನ್ನೂ ಹೇಳುವುದಕ್ಕೆ ಈ ಪುಟ್ಟ ಲೇಖನದಲ್ಲಿ ಸಾಧ್ಯವಿಲ್ಲ. ಕೆಲವೇ ಜನರ ಹೆಸರು ಹೇಳಿ ಉಳಿದವರ ಹೆಸರು ಬಿಡಲು ಮನ ಒಪ್ಪುವುದಿಲ್ಲ. ಜ್ಞಾನ ಸುಧೆ ಹರಿಸಿದ ಎಲ್ಲ ಸಾಹಿತಿಗಳನ್ನೂ ಬಹ್ರೈನ್ ಕನ್ನಡಿಗರು ಆಸ್ವಾದಿಸಿದರು ಎಂದಷ್ಟೇ ಹೇಳಬ. ಸಾಹಿತ್ಯ ಪ್ರಪಂಚವನ್ನು ದೂರದಿಂದ ಕಂಡ ಕೆಲವರು ಸಮ್ಮೇಳನದ ನಂತರ ಸಾಹಿತ್ಯ ಲೋಕದ ಒಳ ತಿರುಳನ್ನು ಸವಿಯಲಾರಂಭಿಸಿ ದರು. ಅಲ್ಲಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘದ ಮುಕುಟಕ್ಕೆ ಮತ್ತೊಂದು ಮುತ್ತಿನ ಮಣಿ ಸೇರ್ಪಡೆಯಾಯಿತು.

ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಸುಲಭವಲ್ಲ. ಆದರೆ ವಿಶೇಷವೆಂದರೆ ವಿದೇಶದ ಕನ್ನಡ ಕಟ್ಟುವ ಕೆಲಸ ಶ್ರದ್ಧೆಯಿಂದ ನಡೆಯುತ್ತದೆ. ನಾವು ಯಾವುದಾರೂ ಒಂದು ವಸ್ತುವನ್ನು ಕಳೆದುಕೊಂಡಾಗ ಅದರ ಬೆಲೆ ತಿಳಿಯುತ್ತದೆ. ನಮಗೆ ಬೇಕಾದ ವ್ಯಕ್ತಿಯೋ, ವಸ್ತುವೋ ದೂರವಾದಾಗಲೇ ಅದರ ಮೌಲ್ಯ ಅರ್ಥ ವಾಗುತ್ತದೆ. ಈ ಕಾರಣಕ್ಕೇ ಇರಬೇಕು, ಕನ್ನಡದ ವೃಕ್ಷಕ್ಕೆ
ಕರ್ನಾಟಕದಲ್ಲಿ ನೀರೆರೆಯುವ ವರಿಗಿಂತ ಹೆಚ್ಚು ನೀರೆರೆಯುವ ತೋಟಗಾರರು ವಿದೇಶದಲ್ಲಿ ಕಾಣಸಿಗುತ್ತಾರೆ.

ಹಾಗಂತ ವಿದೇಶದಲ್ಲಿ ಇರುವವರಿಗೆ ಹಣದ ಕೊರತೆಯಿಲ್ಲ, ಅದಕ್ಕಾಗಿ ಕನ್ನಡದ ಕೆಲಸ ಮಾಡುತ್ತಾರೆ ಎಂದರೆ ಅದು ಶುದ್ಧ ಸುಳ್ಳು. ಕ್ರಿಕೆಟ್ ಪಂದ್ಯಾಟಕ್ಕೋ, ಸೌಂದರ್ಯ ಸ್ಪರ್ಧೆಗೋ ಆದರೆ ಪ್ರಾಯೋಜಕರಾದರೂ ಸಿಗುತ್ತಾರೆ. ಕನ್ನಡದ ಕಾರ್ಯಕ್ರಮಕ್ಕೆ ಪ್ರಾಯೊಜಕತ್ವ ನೀಡಲು ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಅವರಿಗೆ ಯಾವ ಲಾಭವೂ ಇಲ್ಲ. ನಮಗೆ ನಾವು ಗೋಡೆಗೆ ಮಣ್ಣು ಎಂಬ ಸ್ಥಿತಿ ನಮ್ಮದು. ಒಂದು ವಿಷಯ ತಿಳಿದಿರಲಿ, ವಿದೇಶದಲ್ಲಿರುವವರು ಅದರಲ್ಲೂ, ಕೊಲ್ಲಿ ರಾಷ್ಟ್ರಗಳು ಮತ್ತು ಪೂರ್ವದ ದೇಶಗಳಾದ ಸಿಂಗಾಪುರ, ಮಲೇಷ್ಯಾದಂಥ ದೇಶ ದಲ್ಲಿರುವವರೆಲ್ಲರೂ ಶ್ರೀಮಂತರಲ್ಲ.

ಈ ದೇಶಗಳಲ್ಲಿ ವಾಹನ ಚಾಲಕರು, ಮಳಿಗೆಗಳಲ್ಲಿ ಮಾರಾಟದ ಕೆಲಸಕ್ಕೆ ಬಂದವರು, ಇತರೆ ಸಣ್ಣ ಪುಟ್ಟ ಸಾಮಾನ್ಯ ಉದ್ಯೋಗ ಕ್ಕೆಂದು ಬಂದವರ ಸಂಖ್ಯೆಯೇ ಹೆಚ್ಚು. ತಮ್ಮ ಪರಿವಾರದ ಕನಸು ಕಟ್ಟಿಕೊಳ್ಳಲು ವಿದೇಶಕ್ಕೆ ಬಂದ ಇವರಿಗೆಲ್ಲ ಕನ್ನಡ ಕಟ್ಟ ಬೇಕೆಂಬ ಯಾವ ದರ್ದೂ ಇಲ್ಲ. ದರೂ ತಮ್ಮ ನೆಲ, ಭಾಷೆಯ ವಿಷಯ ಬಂದಾಗ ಇವರ ಹೃದಯದ ಬೇಲಿ ಬಿಚ್ಚಿಕೊಳ್ಳುತ್ತದೆ.

ತಾಯ್ನಾಡಿನಿಂದ ನಮ್ಮ ದೇಶಕ್ಕೆ ಯಾರೇ ಬರುತ್ತಾರೆಂದರೂ ನಮಗೆಲ್ಲ ಸಂಭ್ರಮವೋ ಸಂಭ್ರಮ. ತವರುಮನೆಯಿಂದ ಅಪ್ಪನೋ, ಅಮ್ಮನೋ, ಸಹೋದರನೋ ಬಂದದಾಗ ಆಗುವ ಸಂತಸ. ನಮ್ಮೊಂದಿಗೆ ಅತಿಥಿಗಳು ಕಳೆಯುವ ಸಮಯ,
ಪಾಂಡಿತ್ಯದ ಸಿಂಚನ ನಮಗೆ ಹೋಳಿಗೆಯೊಂದಿಗೆ ಜೇನು ಸವಿದ ಅನುಭವ. ಊರಿಂದ ಬಂದವರ ಪ್ರತಿಭಾ ಪ್ರದರ್ಶನ ನೋಡುವುದೆಂದರೆ ಅಮ್ಮ ಕಳುಹಿಸಿಕೊಟ್ಟ ಉಪ್ಪಿನಕಾಯಿ, ಚಕ್ಕುಲಿ, ಸಿಹಿ ಉಂಡೆ ಮೆದ್ದಂತೆ.

ಅವರು ತಿರುಗಿ ತಾಯ್ನಾಡಿಗೆ ಹೊರಟಾಗ, ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಬೀಳ್ಕೊಡುವ ತಂದೆಯಂತೆ, ಮಾತು ಮೌನ, ಕಣ್ಣು ತೇವ, ಹೃದಯ ಭಾರ. ಈ ಭಾವನೆಗಳನ್ನೆಲ್ಲ ಮಾತಿನಲ್ಲಿ, ಬರವಣಿಗೆಯಲ್ಲಿ ಕಟ್ಟಿ ಕೊಡಲಾಗುವುದಿಲ್ಲ.
ಅನುಭವಿಸಬೇಕು ಅಷ್ಟೇ. ಕನ್ನಡದ ಸೇವೆ ನಡೆಯುತ್ತಿರುವುದು ಕೇವಲ ಬಹ್ರೈನ್‌ನಲ್ಲಿ ಮಾತ್ರ ಅಲ್ಲ. ಬಹ್ರೈನ್ ಕನ್ನಡ ಸಂಘ ದಂತೆಯೇ ಬೇರೆ ಬೇರೆ ದೇಶಗಳಲ್ಲಿಯೂ ಸಂಘ ಸಂಸ್ಥೆಗಳು ಕನ್ನಡಕ್ಕಾಗಿ ದುಡಿಯುತ್ತಿವೆ. ಒಂದು ಅಂದಾಜಿನ ಪ್ರಕಾರ ಕೊಲ್ಲಿ ರಾಷ್ಟ್ರಗಳಲ್ಲಿ ಒಂದೂವರೆಯಿಂದ ಎರಡು ಲಕ್ಷ ಕನ್ನಡಿಗರಿದ್ದಾರೆ.

ಕರ್ನಾಟಕದಿಂದ ಹೊರಗೆ ವಿಶ್ವದಾದ್ಯಂತ ಸುಮಾರು ಆರರಿಂದ ಏಳು ಲಕ್ಷ ಕನ್ನಡಿಗರಿದ್ದಾರೆಂದು ಅಂದಾಜಿಸಲಾಗಿದೆ. ಅಲ್ಲಿರುವ ಕನ್ನಡಿಗರ ಮುಂದಿನ ತಲೆಮಾರು ನಮ್ಮ ಭಾಷೆ, ಕಲೆ ಮತ್ತು ಸಂಸ್ಕೃತಿಯೊಂದಿಗೆ ಬಲವಾದ ಬಾಂಧವ್ಯ ಉಳಿಸಿಕೊಳ್ಳಬೇಕೆಂದರೆ
ವಿದೇಶದಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರ ವಾಗಿ ನಡೆಯುತ್ತಿರಬೇಕು. ಅದಕ್ಕೆ ಸರಕಾರದ ಸಹಾಯ ಅತ್ಯವಶ್ಯಕ. ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚು ಹೆಚ್ಚು ಕನ್ನಡ ಪರ ಕಾರ್ಯಕ್ರಮಗಳು ಆಗುವಂತೆ ಮುತುವರ್ಜಿ ವಹಿಸ ಬೇಕು, ಕಾಳಜಿ ತೋರಿಸಬೇಕು, ಪ್ರೋತ್ಸಾಹಿಸ ಬೇಕು. ಧನ ಸಹಾಯದಿಂದ ಹಿಡಿದು ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ಸಹಕರಿಸಬೇಕು. ಇದರ ಅರ್ಥ ಎಲ್ಲವನ್ನೂ ಸರಕಾರವೇ ಮಾಡಬೇಕು ಎಂದಲ್ಲ. ಕನಿಷ್ಠ ಏಣಿಗೆ ಕವೆಯಾಗಿ
ನಿಲ್ಲುವ ಕೆಲಸವನ್ನಾದರೂ ಮಾಡಬೇಕು.

ಇದರ ಜೊತೆಗೆ ಇನ್ನೊಂದು ಜವಾಬ್ದಾರಿಯನ್ನೂ ಸರಕಾರ ಅತ್ಯವಶ್ಯಕವಾಗಿ ನಿಭಾಯಿಸಬೇಕು. ಸರಕಾರದಿಂದ ಧನ ಸಹಾಯ ಸಿಗುತ್ತದೆ ಎಂದಾದರೆ ಫಲಾನುಭವಿಗಳಿಗೆ(!) ಏನೂ ಕೊರತೆ ಇಲ್ಲ.  ಅದಕ್ಕಾಗಿಯೇ ಕಾದು ಕುಳಿತವರಿಗೂ ಬರವಿಲ್ಲ. ಯಾವುದೇ ಸಹಾಯಕ್ಕೆ ಮುಂದಾಗುವ ಮೊದಲು ವಿದೇಶದಲ್ಲಿ ಕಾರ್ಯಕ್ರಮ ಆಯೋಜಿಸುವ ಸಂಘ ಸಂಸ್ಥೆಗಳನ್ನು ಮತ್ತು ತಾಯ್ನಾಡಿ ನಿಂದ ವಿದೇಶದಲ್ಲಿ ಪ್ರದರ್ಶನಕ್ಕೆ ಹೋಗುವ ತಂಡಗಳನ್ನು ಪರಾಮರ್ಶಿಸಬೇಕು. ಕಾರ್ಯಕ್ರಮದ ಸತ್ಯಾಸತ್ಯತೆ ತಿಳಿಯಬೇಕು.
ಹಣಕ್ಕಾಗಿಯೋ, ಹೆಸರಿಗಾಗಿಯೋ, ಪ್ರಶಸ್ತಿಗಾಗಿಯೋ ಆಯೋಜಿಸಿದ ಕಾರ್ಯಕ್ರಮವಾಗಿರದೇ, ಕೇವಲ ಕಲೆ ಮತ್ತು ಸಂಸ್ಕೃತಿ ಯೇ ಪ್ರಧಾನವಾಗಿರಬೇಕು. ಸ್ವಪ್ರತಿಷ್ಠೆಗಾಗಿ ಆಯೋಜಿಸಿದ ಕಾರ್ಯಕ್ರಮವಾಗಿರದೆ, ಕನ್ನಡಾಂಬೆಯ ಸಂದೇಶ ಸಾರುವ ಕಾರ್ಯ ಕ್ರಮವಾಗಿರಬೇಕು.

ಊರಿನಿಂದ ಬರುವ ಕಲಾವಿದರಿಗೂ, ತಂಡದವರಿಗೂ ಕನ್ನಡ ಬಿತ್ತರಿಸುವ ಕಾರ್ಯವೇ ಪ್ರಧಾನವಾಗಿರಬೇಕೇ ವಿನಃ ವಿದೇಶ ಪ್ರವಾಸವೇ ಪ್ರಧಾನವಾಗಿ ಕನ್ನಡ ದ್ವಿತೀಯ ದರ್ಜೆಯ ವಸ್ತುವಾಗಬಾರದು. ಹಾಗೇನಾದರೂ ಆದರೆ ಅದು ಕನ್ನಡಕ್ಕೆ ಮಾಡುವ ಅತಿ ದೊಡ್ದ ದ್ರೋಹವಾಗುತ್ತದೆ. ಬಾಯಲ್ಲಿ ಮಹಾತ್ಮಾ ಗಾಂಧಿಯ ತತ್ವ ಸಿದ್ಧಾಂತಗಳನ್ನು ಪಠಿಸುತ್ತ, ಗಾಂಧಿಯ ಚಿತ್ರವಿರುವ
ನೋಟನ್ನೇ ಲಂಚವಾಗಿ ಪಡೆದಂತೆ. ಕನ್ನಡದ ಹೆಸರಿನಲ್ಲಿ ಹಣ ಸೋರಿಯೂ ಹೋಗಬಾರದು, ಕನ್ನಡದ ಹೆಸರಿನಲ್ಲಿ ಹಣ ಬಾಚುವ ಕೆಲಸವೂ ಆಗಬಾರದು. ಆಗ ಮಾತ್ರ ಕರುನಾಡ ಮಣ್ಣಿನ ಮತ್ತು ವಿದೇಶಗಳಲ್ಲಿರುವ ಕನ್ನಡಿಗರ ನಡುವಿನ ಸೇತುವೆ ಭದ್ರವಾಗಿರುತ್ತದೆ, ಮುಂದಿನ ಪೀಳಿಗೆ ಅದೇ ಸೇತುವೆಯ ಮೇಲೆ ಓಡಾಡುವಂತಾಗುತ್ತದೆ.

Leave a Reply

Your email address will not be published. Required fields are marked *