Monday, 16th September 2024

ನೆರೆಯ ದೇಶದ ಕಾನೂನು ಸಚಿವರೊಬ್ಬರು ನಿರಾಶ್ರಿತರಾದ ಕಥೆ

ಶಶಾಂಕಣ
ಶಶಿಧರ ಹಾಲಾಡಿ

ಈಚಿನ ನಾಲ್ಕಾರು ವರ್ಷಗಳಲ್ಲಿ, ಅದೇಕೋ ಈ ‘ಪಾಕಿಸ್ತಾನಿ’ ವ್ಯಕ್ತಿಯ ವಿಚಾರವು ನಮ್ಮ ದೇಶದಲ್ಲಿ ಬಹಳಷ್ಟು ಚರ್ಚೆಗೆ
ಒಳಪಡುತ್ತಿದೆ.

ಇಲ್ಲಿ ‘ಪಾಕಿಸ್ತಾನಿ’ ಎಂದು ಕೋಟ್‌ನಲ್ಲಿ ಹಾಕಿದ್ದನ್ನು ದಯವಿಟ್ಟು ಗಮನಿಸಿ. ಅವರು ಮೂಲತಃ ಪಾಕಿಸ್ತಾನಿ ಅಲ್ಲ. ನಮ್ಮ ಅಖಂಡ ಭಾರತದ ಬಂಗಾಳ ಪ್ರಾಂತ್ಯದ ಹೋರಾಟಗಾರ ಮತ್ತು ರಾಜಕೀಯ ನಾಯಕರಾಗಿದ್ದರು. ಆದರೆ, ದೇಶ ವಿಭಜನೆ ಯಾದಾಗ, ಮಹಮ್ಮದ್ ಆಲಿ ಜಿನ್ನಾ ಅವರನ್ನು ನಂಬಿ, ಪಾಕಿಸ್ತಾನಕ್ಕೆ ಹೋದರು.

ಆದರೆ, ಮೂರೇ ವರ್ಷಗಳಲ್ಲಿ ಭ್ರಮನಿರಸಗೊಂಡು, ಛಿದ್ರ ಹೃದಯದ ವ್ಯಕ್ತಿಯಾಗಿ ಭಾರತಕ್ಕೆ ವಾಪಸು ಬಂದರು. ದುರಂತ ವೆಂದರೆ, ಆ ರೀತಿ ಪಶ್ಚಿಮ ಬಂಗಾಳಕ್ಕೆ ವಾಪಸಾದ ಅವರು, ಮುಂದಿನ 18 ವರ್ಷಗಳ ಕಾಲ ಬಹುಮಟ್ಟಿಗೆ ನಿರಾಶ್ರಿತರ ರೀತಿ ಜೀವನ ಸಾಗಿಸಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಯಿತು. ಪರಿಶಿಷ್ಟ ಜನಾಂಗದ ಅಭಿವೃದ್ಧಿಗಾಗಿ, ಅವರು ತೆಗೆದುಕೊಂಡ ಆ
ಒಂದು ನಿರ್ಧಾರವು ತಪ್ಪು ನಿರ್ಧಾರ ಎಂದು ಅರಿವಾಗುಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

ಅವರೇ ಜೋಗೇಂದ್ರ ನಾಥ ಮಂಡಲ್. ನಮ್ಮ ದೇಶದ ಜನಮಾನಸದ ನೆನಪಿನಿಂದ ಬಹುತೇಕ ಮರೆಯಾಗಿ ಹೋಗಿದ್ದ ಜೋಗೇಂದ್ರ ನಾಥ ಮಂಡಲ್ ಅವರನ್ನು ಪುನಃ ಮುಂಚೂಣಿಗೆ ತಂದು ನಿಲ್ಲಿಸಿದ್ದು ಬಿಜೆಪಿ ಎನ್ನಬಹುದು. ಉತ್ತರ ಭಾರತದ ಕಳೆದ ಕೆಲವು ಚುನಾವಣೆಯ ಸಮಯದಲ್ಲಿ, ಬಿಜೆಪಿ ನಾಯಕರು ಮಂಡಲ್ ಅವರ ಉದಾಹರಣೆಯನ್ನು ನೀಡುತ್ತ, ಅವರು ತಮ್ಮ ರಾಜಿನಾಮೆ ಪತ್ರದಲ್ಲಿ ಹೇಳಿದ ವಿವರಗಳನ್ನು ಉದಹರಿಸುತ್ತಾ, ಜನರ ಮತವನ್ನು ಪಡೆಯಲು ಪ್ರಯತ್ನಿಸಲು ಆರಂಭಿಸಿ ದಾಗ, ಈ ಅಪರೂಪದ ನಾಯಕ ಮತ್ತೊಮ್ಮೆ ಪ್ರಚಾರ ಪಡೆದುಕೊಂಡರು. ಮಂಡಲ್ ಅವರ ಬಹು ಪ್ರಸಿದ್ಧ ರಾಜೀನಾಮೆ ಪತ್ರದಲ್ಲಿ ವಿವರಗೊಂಡಂತೆ, ಮಂಡಲ್ ಅವರು ತೀವ್ರ ಭ್ರಮನಿರಸನಗೊಂಡು, ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಿ, ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ್ದರು. ಅವರ ರಾಜಿನಾಮೆಗೆ ನೀಡಿದ್ದ ಬಹು ಮುಖ್ಯ ಕಾರಣ ವೆಂದರೆ, ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಹಿಂದೂ ಜನರನ್ನು ಕಾಪಾಡಲು ಅಲ್ಲಿನ ಸರಕಾರ ವಿಫಲವಾಗಿದ್ದು ಮಾತ್ರವಲ್ಲ, ಪಾಕಿಸ್ತಾನದ ಕಾನೂನು ರಕ್ಷಕರೇ ಅಲ್ಲಿನ ಹಿಂದೂ ಜನರ ನಾಶಕ್ಕೆ ಸಹಕಾರ ನೀಡಿದ್ದು. ಆ ವಿವರಗಳನ್ನು ನಮ್ಮ ದೇಶದ ಚುನಾವಣೆಯ ಪ್ರಚಾರದ ಸಮಯದಲ್ಲಿ ಯಾವುದೇ ಪಕ್ಷವು ಬಳಸಿಕೊಳ್ಳುವುದು ಎಷ್ಟು ಸರಿ ಅಥವಾ ತಪ್ಪು ಎಂಬುದು ಚರ್ಚಾರ್ಹ.

ಆದರೆ, ನಮ್ಮ ನೆರೆಯ ದೇಶದಲ್ಲಿ ಪ್ರಮುಖ ಮಂತ್ರಿಯಾಗಿದ್ದ ಒಬ್ಬ ನಾಯಕ, ಭಾರತಕ್ಕೆ ವಾಪಸಾದ ನಂತರ ನಿರಾಶ್ರಿತನ ರೀತಿ
ಬದುಕಬೇಕಾಗಿ ಬಂದದ್ದು ಮಾತ್ರ, ಮಂಡಲ್ ಅವರ ಜೀವನದ ದುರಂತವೆಂದೇ ಹೇಳಬೇಕು. ಅಖಂಡ ಭಾರತದ ಬಂಗಾಳ ಪ್ರಾಂತ್ಯದಲ್ಲಿ 1904ರಲ್ಲಿ ಜನಿಸಿದ ಜೋಗೇಂದ್ರ ನಾಥ ಮಂಡಲ್, ಬಹು ಪ್ರತಿಭೆಯ ಚಟುವಟಿಕೆಯ ಯುವಕ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬಹುವಾಗಿ ಗೌರವಿಸುತ್ತಿದ್ದ, ಅವರನ್ನು ತನ್ನ ಗುರುವೆಂದೇ ಪರಿಗಣಿಸಿದ್ದ ಮಂಡಲ್ ಅವರು. ಪರಿಶಿಷ್ಟ ಜನಾಂಗಗಳ ಪ್ರಗತಿಗಾಗಿ ದುಡಿಯುವ ಜತೆಯಲ್ಲೇ, ಬ್ರಿಟಿಷರ ದಬ್ಬಾಳಿಕೆಯನ್ನ ವಿರೋಧಿಸಿ
ದವರು. 1940ರ ದಶಕ. ಬಂಗಾಳದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಂಡರು. ಆದರೆ, ಆ ದಶಕದಲ್ಲಿ ಸುಭಾಷ್ ಚಂದ್ರ ಬೋಸ್‌ರನ್ನು ಕಾಂಗ್ರೆಸ್
ಮೂಲೆಗುಂಪು ಮಾಡಿದಾಗ, ಕಾಂಗ್ರೆಸ್ ತೊರೆದ ಮಂಡಲ್ ಅವರು, ತಮ್ಮ ಹೋರಾಟಕ್ಕೆ ವೇದಿಕೆಯನ್ನಾಗಿ ಆರಿಸಿಕೊಂಡಿದ್ದು ಮುಸ್ಲಿಂ ಲೀಗ್‌ನ್ನು.

ಬಂಗಾಳದಲ್ಲಿ ಅಂದು ಕಾಂಗ್ರೆಸ್ ನಂತರದ ಪ್ರಮುಖ ಪಕ್ಷವೆಂದರೆ ಮುಸ್ಲಿಂ ಲೀಗ್.  ಜೋಗೇಂದ್ರ ನಾಥ ಮಂಡಲ್ ಅವರ ಜೀವನವನ್ನು ಗಮನಿಸಿದರೆ, ಅವರೊಬ್ಬ ದುರಂತ ನಾಯಕ. ಮಂತ್ರಿಯ ಸ್ಥಾನದಲ್ಲಿದ್ದ ಅವರು, ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು, ತಾವು ನಂಬಿದ್ದಕ್ಕೆ ತಿಲಾಂಜಲಿ ನೀಡಿ ಅಧಿಕಾರಕ್ಕೆ ಅಂಟಿಕೊಂಡಿದ್ದರೆ, ಪಾಕಿಸ್ತಾನದ ಬಹುದೊಡ್ಡ ನಾಯಕರಾಗಿ ತಮ್ಮ ಜೀವನವನ್ನು ನಡೆಸಬಹುದಿತ್ತು. ಆದರೆ, ಅಲ್ಲಿನ ಸರಕಾರವು ಹಿಂದುಗಳನ್ನು ದಾರುಣವಾಗಿ ಹಿಂಸಿಸುವು ದನ್ನು ಕಂಡು ನೇರವಾಗಿ ಖಂಡಿಸಿದರು, ಅಸಹಾಯಕರಾಗಿ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಭಾರತಕ್ಕೆ ವಾಪಸಾದರು.

ತಮ್ಮ ಗುರು ಡಾ.ಅಂಬೇಡ್ಕರ್ ರೀತಿಯೇ, ನಮ್ಮ ದೇಶದ ದಮನಿತರ ಅಭಿವೃದ್ಧಿಯ ಕನಸು ಕಂಡವರು, ಹೋರಾಡಿದವರು. ಹೊಸ ದೇಶವಾಗಿ ಉದಯಿಸಿದ ಪಾಕಿಸ್ತಾನವನ್ನು ಬೆಂಬಲಿಸಿದರೆ, ಪರಿಶಿಷ್ಟ ಪಂಗಡದವರ ಅಭಿವೃದ್ಧಿ ಸಾಧ್ಯ ಎಂದು ನಂಬಿದವರು, ಆದರೆ ಅವರ ಆ ನಂಬಿಕೆ, ಲೆಕ್ಕಾಚಾರ ಸಂಪೂರ್ಣ ತಳೆಕೆಳಗಾಯಿತು. ದೇಶ ವಿಭಜನೆಯಾದಾಗ, ಪೂರ್ವ ಪಾಕಿಸ್ತಾನದಲ್ಲಿ ಶೇ.30ರಷ್ಟು ಹಿಂದೂ ಜನರಿದ್ದರಲ್ಲ, ಅವರಲ್ಲಿ ಬಹುಪಾಲು ಜನರು ನಾಮಶೂದ್ರ ಜನಾಂಗದವರು ಮತ್ತು ಇತರ ಪರಿಶಿಷ್ಟರು. ಇಷ್ಟೊಂದು ಬಹುಸಂಖ್ಯೆಯಲ್ಲಿದ್ದ ಜನರು, ಪೂರ್ವ ಪಾಕಿಸ್ತಾನದಲ್ಲಿರುವುದರಿಂದಾಗಿ, ಅವರನ್ನು ಹಿಂಸಿಸಲು ಅಸಾಧ್ಯ ಎಂದೇ ನಂಬಿದ್ದರು. ಶೇ.30 ರಷ್ಟು ಇದ್ದ ಈ ಜನರು ತಮ್ಮ ಮತಗಳನ್ನು ಚಲಾಯಿಸುವ ಮೂಲಕ, ರಾಜಕೀಯ ಶಕ್ತಿಯಾಗಿ ರೂಪುಗೊಂಡು, ಅಲ್ಲಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬಲ್ಲರು ಎಂದೇ ಮಂಡಲ್ ನಂಬಿದ್ದರು.

ಅಲ್ಲೇ ಅವರು ಎಡವಿದ್ದು. ಶೇ.30ರಷ್ಟು ಇದ್ದ ನಾಮಶೂದ್ರ ಮತ್ತು ಇತರ ಜನರು ಮತಬ್ಯಾಂಕ್ ಆಗಿ ರೂಪುಗೊಳ್ಳಲು ಪಾಕಿಸ್ತಾನ ಬಿಡಲೇ ಇಲ್ಲ, ಆ ಜನರ ಸಂಖ್ಯೆೆಯ ಪ್ರಮಾಣವನ್ನೇ ಇಳಿಸುವ ಬಹುದೊಡ್ಡ ಪ್ರೊಗ್ರಾಮ್‌ನ್ನು ಆ ದೇಶ ಹಾಕಿ ಕೊಂಡಿತ್ತು. ಅದನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಹಿಂದೂಗಳ ಪ್ರಮಾಣವನ್ನು ತೀವ್ರ ವಾಗಿ ಇಳಿಸಿತು. ಇದನ್ನು ಮಂಡಲ್
ಮುಂಗಾಣಲಿಲ್ಲ. ಆದರೆ ಈ ರೀತಿ ಊಹಿಸಲು ಅವರಿಗೆ ಸಾಕಷ್ಟು ಅವಕಾಶಗಳಿದ್ದವು. ಏಕೆಂದರೆ, 16.8.1946ರ ನೇರ ಕ್ರಮ
ಅಥವಾ ಡೈರೆಕ್ಟ್‌ ಆ್ಯಕ್ಷನ್ ಡೇ ದಿನದಂದು, ಕೊಲ್ಕೊತ್ತಾದಲ್ಲಿ ಸಾವಿರಾರು ಜನರನ್ನು ಸಾಯಿಸಿದ ಉದಾಹರಣೆಯಿತ್ತು.

ನೌಖಾಲಿಯಲ್ಲಿ ಸಾವಿರಾರು ಜನರ ಪ್ರಾಣಹರಣವಾಗಿತ್ತು, ಅದಕ್ಕೂ ಹೆಚ್ಚು ಜನರ ಮನೆ ಮಠಗಳನ್ನು ನಾಶ ಮಾಡಲಾಗಿತ್ತು. ಮಹಮದ್ಆಲಿ ಜಿನ್ನಾ ಅವರು ಬಹಿರಂಗ ವಾಗಿಯೇ, ನೇರ ಕ್ರಮ ಅಥವಾ ಡೈರೆಕ್ಟ್ ಆ್ಯಕ್ಷನ್ ಘೋಷಿಸಿದ್ದು ಮಾತ್ರವಲ್ಲ,
ತಮ್ಮ ಗುರಿ ಈಡೇರುವ ತನಕ ಇನ್ನಷ್ಟು ನೇರ ಕ್ರಮಗಳನ್ನು ಜರುಗಿಸಲು ಮುಸ್ಲಿಂ ಲೀಗ್ ಹಿಂಜರಿಯುವುದಿಲ್ಲ ಎಂದು ಹೇಳಿದ್ದರು. ಆದರೆ, ಆ ಉದಾಹರಣೆ ಯನ್ನು ಸರಿಯಾಗಿ ಓದಲು ಮಂಡಲ್ ವಿಫಲರಾದರು.

ಜತೆಗೆ, ಮಹಮದ್ ಆಲಿ ಜಿನ್ನಾ ಅವರು, ಪಾಕಿಸ್ತಾನವನ್ನು ಒಂದು ಸೆಕ್ಯುಲರ್ ದೇಶವನ್ನಾಗಿ ಕಟ್ಟುವ ಮಾತುಗಳನ್ನಾಡುತ್ತಿದ್ದರು. ಜೋಗೇಂದ್ರ ನಾಥ ಮಂಡಲ್ ಅವರನ್ನು ಜಿನ್ನಾ ಅವರು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಸೆಕ್ಯುಲರ್ ಸಿದ್ದಾಂತಗಳಲ್ಲಿ ಬಹಳ
ವಾದ ನಂಬಿಕೆ ಇಟ್ಟಿದ್ದ ಮಂಡಲ್ ಅವರು, ಮುಸ್ಲಿಂ ಲೀಗ್‌ನ ಸದಸ್ಯರಾಗಿ, ಕಾನೂನುಮಂತ್ರಿಯೂ ಆಗಿದ್ದರು. ಸ್ವಾತಂತ್ರ ದೊರೆತಾಗ, ಬಂಗಾಳ ತೊರೆದು ಕರಾಚಿಯನ್ನು ತಮ್ಮ ಮನೆಯನ್ನಾಗಿಸಿಕೊಂಡಿದ್ದರು.

ಜಿನ್ನಾ ಅವರ ಹೇಳಿಕೆ ಯಂತೆ ಕಟ್ಟಲಾಗುವ ಹೊಸ ಸೆಕ್ಯುಲರ್ ಪಾಕಿಸ್ತಾನದಲ್ಲಿ, ಹಿಂದುಳಿದ ಮತ್ತು ಪರಿಶಿಷ್ಟ ಜನಾಂಗಗಳು ಸಮಾನ ಸ್ಥಾನ ಪಡೆಯಬಲ್ಲರು, ಭಾರತದಲ್ಲಿಯಂತೆ ಮೇಲ್ಜಾತಿಯವರ ದಬ್ಬಾಳಿಕೆಯಿಂದ ದೂರ ಉಳಿಯ ಬಲ್ಲರು ಎಂದು ಕೊಂಡಿದ್ದರು. ಪರಿಶಿಷ್ಟರು ಮತ್ತು ಮುಸ್ಲಿಂ ಜನರು ಜತೆಯಾಗಿ ಬಾಳಬಲ್ಲರು ಎಂದು ತಿಳಿದಿದ್ದರು. ಆದರೆ, ಪಾಕಿಸ್ತಾನ ಉದಿಸಿದ ಎಂಟೇ ತಿಂಗಳುಗಳಲ್ಲಿ ಕ್ಷಯರೋಗದಿಂದ ಜಿನ್ನಾ ಸತ್ತಾಗ, ಪಾಕಿಸ್ತಾನದ ಸೆಕ್ಯುಲರ್ ಭ್ರಮೆ ಪೂರ್ತಿ ಕಳಚಿ ಬಿತ್ತು. ಸೆಕ್ಯುಲರ್
ಎನಿಸಬಹುದಾದ ಎಲ್ಲಾ ಕಾನೂನುಗಳೂ ಅಲ್ಲಿ ಕಾಗದದಲ್ಲಿ ಮಾತ್ರ ಉಳಿಯಿತು. ಜಿನ್ನಾ ಕನಸು ಕಂಡ ಸೆಕ್ಯುಲರ್ ಪಾಕಿಸ್ತಾನದಲ್ಲಿ ಪರಿಶಿಷ್ಟ ಜನಾಂಗದವರಿಗೆ ಸಮಾನ ಸ್ಥಾನಮಾನ ಇರುತ್ತದೆ ಎಂದು ಮಂಡಲ್ ನಂಬಿದ್ದರು. ಇವರ ನಂಬಿಕೆ ಎಷ್ಟು ದೃಢವಾಗಿತ್ತು ಎಂಬುದಕ್ಕೆ ಅವರು ಸಿಲ್ಹೆೆಟ್‌ನಲ್ಲಿ ನಡೆಸಿದ ಮನವೊಲಿಕೆಯೇ ಒಂದು ಉದಾಹರಣೆ.

ಸಿಲ್ಹೆೆಟ್ ಜಿಲ್ಲೆಯಲ್ಲಿ ಬಹುಸಂಖ್ಯಾತರು ನಾಮದಾರಿ ಶೂದ್ರರು ಮತ್ತು ಹಿಂದೂ ಜನರು. ಆ ಪ್ರದೇಶವು ಪಾಕಿಸ್ತಾನಕ್ಕೆ ಸೇರಬೇಕೆ ಅಥವಾ ಭಾರತಕ್ಕೆ ಸೇರಬೇಕೆ ಎಂಬ ಜಿಜ್ಞಾಸೆ ಆರಂಭವಾದಾಗ, ಅಲ್ಲಿಗೆ ಹೋಗಿ, ಅಲ್ಲಿನ ನಾಯಕರ ಮನವೊಲಿಸಿ, ಪಾಕಿಸ್ತಾನಕ್ಕೆೆ ಸೇರಿಸಿದರು. ಇದರಿಂದಾಗಿ ಭಾರತದ ಮೇಲ್ಜಾತಿಯವರ ದಬ್ಬಾಳಿಕೆಯಿಂದ ದೂರ ಇರಬಹುದು ಎಂದು ಅವರ ತಿಳಿದಿದ್ದರೇನೋ!
ಆದರೇನು ಮಾಡುವುದು, ಹೊಸ ದೇಶ ಉದಿಸಿದ ಒಂದೇ ವರ್ಷದಲ್ಲಿ ಅಲ್ಲಿನ ನಾಮಧಾರಿ ಶೂದ್ರರನ್ನು ಮತ್ತು ಇತರ ಹಿಂದೂಗಳನ್ನು ಪಾಕಿಸ್ತಾನದ ಸರಕಾರ ಬಲಿತ ಜನರು ಹಿಂಸಿಸಿದರು, ಬಡಿದರು, ಓಡಿಸಿದರು, ಅವರ ಮನೆಗಳನ್ನು ವಶಪಡಿಸಿ ಕೊಂಡರು, ಮಾಡಬಾರದ್ದನ್ನು ಮಡಿದರು.

ಆ ಪ್ರದೇಶದಲ್ಲಿದ್ದ ಜನರೆಲ್ಲರೂ ಒಂದೋ ಮತಾಂತರ ವಾದರು ಅಥವಾ ಸತ್ತರು ಅಥವಾ ಭಾರತಕ್ಕೆ ಓಡಿಬಂದರು. ಇಂತಹ ಹಲವು ಘಟನೆಗಳನ್ನು ಕಂಡ ಮಂಡಲ್ ಅವರು ವಿಷಣ್ಣರಾಗಿದ್ದರಲ್ಲಿ ಅಚ್ಚರಿಯೇನಿದೆ? ಜೋಗೇಂದ್ರ ನಾಥ ಮಂಡಲ್ ಅವರು ಪಾಕಿಸ್ತಾನದ ಮೊದಲ ಮಂತ್ರಿ ಮಂಡಲದಲ್ಲಿ ಕಾನೂನು ಸಚಿವಾಗಿದ್ದರು. ಇತ್ತ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದವರು ಅವರ ಗುರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಮಂಡಲ್ ಅವರು ಪಾಕಿಸ್ತಾನದ ಸಂವಿಧಾನ ರಚನೆಗೆ ಸಹಕರಿಸಿದರು, ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ ಎಂದೇ ಹೆಸರಾದರು.

1950ರಲ್ಲಿ ಮಂಡಲ್ ರಾಜಿನಾಮೆ ನೀಡಬೇಕಾಯಿತು. ಇತ್ತ ಅಂಬೇಡ್ಕರ್ ಅವರು 1951ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಈ ಹೋಲಿಕೆ ಇಷ್ಟಕ್ಕೇ ಮುಗಿಯುತ್ತದೆ. ಡಾ. ಅಂಬೇಡ್ಕರ್ ಅವರ ಚಿಂತನೆ, ಪರಂಪರೆ ಇಂದಿಗೂ ಭಾರತದಲ್ಲಿ ಪ್ರಮುಖ ಶಕ್ತಿಯಾಗಿ ಮುಂದುವರಿದಿದೆ. ಅಂಬೇಡ್ಕರ್ ಚಿಂತನೆಗೆ ಇಂದಿಗೂ ಭಾರತದಲ್ಲಿ ದೊಡ್ಡ ಮಟ್ಟದ ಗೌರವವಿದೆ. ಸಂವಿಧಾನ ಶಿಲ್ಪಿಯಾದ ಅಂಬೇಡ್ಕರ್ ಅವರ ಫಲವಾಗಿ, ಇಂದು ಭಾರತದಲ್ಲಿ ಅಲ್ಪಸಂಖ್ಯಾತರು ಬಹುದೊಡ್ಡ ರಾಜಕೀಯ
ಶಕ್ತಿಯಾಗಿ ಬೆಳೆದಿದ್ದಾರೆ. ಅತ್ತ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿದ್ದಾರೆ. ಅಲ್ಲಿ ಅವರು ರಾಜಕೀಯ ಶಕ್ತಿಯಾಗಿ ಬೆಳೆಯಲೇ ಇಲ್ಲ. ಮಂಡಲ್ ಅವರು ತಾವು ನಂಬಿದ ಪಾಕಿಸ್ತಾನವನ್ನು ತೊರೆದು, ಮಂತ್ರಿ ಸ್ಥಾನಕ್ಕೆ
ರಾಜಿನಾಮೆ ನೀಡಿ ಭಾರತಕ್ಕೆ ವಾಪಸಾಗಬೇಕಾಯಿತು, ಇಲ್ಲಿ ರೆಕ್ಲೂಸ್ ರೀತಿ ಜೀವನ ಸಾಗಿಸಬೇಕಾಯಿತು.

ಅಕ್ಟೋಬರ್ 1950ರಲ್ಲಿ ಭಾರತಕ್ಕೆ ವಾಪಸಾದ ಜೋಗೇಂದ್ರ ನಾಥ ಮಂಡಲ್ ಅವರು, ಪಶ್ಚಿಮ ಬಂಗಾಳದಲ್ಲಿ ತಮ್ಮ ಹೋರಾಟದ ಎರಡನೆಯ ಅಧ್ಯಾಯವನ್ನು ಮುಂದುವರಿಸಲು ಪ್ರಯತ್ನಿಸಿದರು. ಆದರೆ, ಅಲ್ಲಿನ ಕಮ್ಯುನಿಸ್ಟ್‌ ನಾಯಕರು ಇವರನ್ನು ಎರಡನೆಯ ದರ್ಜೆಯ ನಾಯಕರನ್ನಾಗಿಸಿದರು, ಇವರು ಮೇಲೆ ಬಂದರೆ ತಮಗೆಲ್ಲಿ ಅಪಾಯವೋ ಎಂಬ ಗ್ರಹಿಕೆ ಅವರದ್ದಾಗಿತ್ತು. ಪೂರ್ವ ಪಾಕಿಸ್ತಾನದಿಂದ ನಿರಂತರವಾಗಿ ಓಡಿ ಬರುತ್ತಿದ್ದ ಸಾವಿರಾರು ನಿರಾಶ್ರಿತರ ನಾಯಕರಾಗಿ ಮಂಡಲ್ ರೂಪುಗೊಂಡಿದ್ದು ಆ ಕಾಲಘಟ್ಟದ ಒಂದು ವ್ಯಂಗ್ಯ ಅಥವಾ ದುರಂತ ಎನ್ನಬಹುದು.

ಇವರೇ ಸ್ವತಃ  ಪಾಕಿಸ್ತಾನವನ್ನು ತೊರೆದು ಬಂದಿದ್ದ ನಿರಾಶ್ರಿತರು. ಮಂಡಲ್ ಅವರು ಜನಿಸಿದ್ದ ಊರು, ಜಿಲ್ಲೆೆ ಎಲ್ಲವೂ ಪೂರ್ವ ಪಾಕಿಸ್ತಾನಕ್ಕೆ ಸೇರಿ ಹೋಗಿದ್ದ ರಿಂದಾಗಿ, ಅಲ್ಲೂ ಅವರಿಗೆ ಯಾವದೇ ನೆಲೆ ಇರಲಿಲ್ಲ. ಪಶ್ಚಿಮ ಬಂಗಾಳದ ಉದ್ದಗಲಕ್ಕೂ ತುಂಬಿ ಹೋಗಿದ್ದ ಲಕ್ಷಾಂತರ ನಿರಾಶ್ರಿತ ಬೆಂಬಲ ಪಡೆಯಲು ಮಂಡಲ್ ಅವರ ಸಹಕಾರವನ್ನು ಪಡೆಯಲಾಗುತ್ತಿತ್ತು. ಆದರೆ, ರಾಜಕೀಯದ ಪ್ರಾಮುಖ್ಯತೆ ಬಂದಾಗ, ಮಂಡಲ್ ಅವರನ್ನು ದೂರವಿಡಲಾಗುತ್ತಿತ್ತು. ಈ ತಾರತಮ್ಯ ಎಷ್ಟರ ಮಟ್ಟಿಗೆ ಎಂದರೆ, ಇವರು ಪಾಕಿಸ್ತಾನವನ್ನು ತೊರೆದು ಬಂದವರು ಎಂಬ ಮೂದಲಿಕೆಯೊಂದಿಗೆ, ವ್ಯಂಗ್ಯವಾಗಿ, ಜೋಗೇಂದ್ರ ನಾಥ್ ಮುಲ್ಲಾ ಎಂದು ಸಹ ಇವರನ್ನು ಹೀಯಾಳಿಸಲಾಗುತ್ತಿತ್ತು. ಅವರು ಜಿನ್ನಾ ಆಹ್ವಾನ ಮನ್ನಿಸಿ ಪಾಕಿಸ್ತಾನಕ್ಕೆ ಹೋದವರು, ಅಲ್ಲಿನ ಮಂತ್ರಿ ಮಂಡಲದಲ್ಲಿದ್ದವರು ಎಂದು ಸಾರ್ವಜನಿಕವಾಗಿ ಜರಿಯಲಾಗುತ್ತಿತ್ತು.

ಪಾಕಿಸ್ತಾನದಿಂದ ಓಡಿ ಬಂದ ನಿರಾಶ್ರಿತರ ದನಿಯಾಗಿ ಹೊರಹೊಮ್ಮಲು ಮಂಡಲ್ ಪ್ರಯತ್ನ ಮಾಡಿದರೂ, ಅವರ ಬೆಂಬಲಕ್ಕೆ ಸೂಕ್ತ ರಾಜಕೀಯ ವೇದಿಕೆ ದೊರಕಲಿಲ್ಲ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಆಶ್ರಯದಲ್ಲಿ, 1967ರಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಣಕ್ಕೆ ಧುಮುಕಿದರು. ಆದರೆ, ಈ ಹೋರಾಟಗಾರ ನಾಯಕನನ್ನು, ಪಾಕಿಸ್ತಾನದ ಮಾಜಿ
ಮಂತ್ರಿಯನ್ನು ಪಶ್ಚಿಮ ಬಂಗಾಳದ ಜನ ಹೀನಾಯವಾಗಿ ಸೋಲಿಸಿದರು. ಅದೇ ಕೊರಗಿನಲ್ಲೆಂಬಂತೆ, ಜೋಗೇಂದ್ರನಾಥ ಮಂಡಲ್ ಎಂಬ ಹೋರಾಟಗಾರ 5 ಅಕ್ಟೋಬರ್, 1968ರಂದು ತೀರಿಕೊಂಡರು. ಆಗ ಅವರ ವಯಸ್ಸು ಕೇವಲ 64.

ಈಗ ವಿಶ್ಲೇಷಿಸಿದರೆ ಅನಿಸುತ್ತದೆ – ಅವರು ಜಿನ್ನಾರ ಮಾತುಗಳನ್ನು ನಂಬದೇ ಇದ್ದಿದ್ದರೆ,1947ರಲ್ಲಿ ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲೇ ಉಳಿದಿದ್ದರೆ, ಪಾಕಿಸ್ತಾನವು ಸೆಕ್ಯುಲರ್ ಆಗಲಾರದು ಎಂದು ಮುಂದಾಗಿ ಊಹಿಸಿದ್ದರೆ, ಅವರೊಬ್ಬ ರಾಜಕೀಯ ನೇತಾರರಾಗಿ ಇಲ್ಲೂ ಹೆಸರು ಪಡೆಯಬಹುದಿತ್ತೋ ಏನೋ ಎಂದು. ಅವರು ಅಕ್ಟೋಬರ್ 1950ರಲ್ಲಿ ರಾಜಿನಾಮೆ ನೀಡಿದಾಗ, ಅಂದಿನ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಅವರಿಗೆ ಸಲ್ಲಿಸಿದ ಪತ್ರವು ಇಂದು ಪಬ್ಲಿಕ್ ಡೊಮೈನ್‌ನಲ್ಲಿ ಲಭ್ಯವಿದೆ. ಅರ್ಧ ಶತಮಾನಕ್ಕೂ ಹಿಂದಿನ ಆ ವಿಸ್ತೃತ ಪತ್ರದಲ್ಲಿ, ಪಾಕಿಸ್ತಾನವು ಹೇಗೆ ಹಿಂದೂ ಜನರನ್ನು ಹಿಂಸಿಸುತ್ತಿತ್ತು, ಹೇಗೆ ಹಿಂದೂ ಜನರ ವ್ಯವಸ್ಥಿತ ಕೊಲೆಗಳನ್ನು ನಡೆಸುತ್ತಿತ್ತು, ಹೇಗೆ ಅಲ್ಲಿನ ಕಾನೂನು ಪಾಲಕರು ಹಿಂದೂಗಳ ಕೈಬಿಟ್ಟಿದ್ದರು ಎಂಬ ದಾರುಣ ವಿವರ ಗಳಿವೆ. ಆದರೆ, ಆ ಒಂದು ದಾಖಲೆ ಯನ್ನು, ಎಪ್ಪತ್ತು ವರ್ಷ ಹಿಂದಿನ ಮಂಡಲ್ ಅವರ ಅಭಿಪ್ರಾಯಗಳನ್ನು, ಇಂದು ನಮ್ಮ ದೇಶದ ಕೆಲವರು, ರಾಜಕೀಯವಾಗಿ ಬಳಸಿಕೊಳ್ಳುವುದು ಎಷ್ಟು ಸಮಂಜಸ ಎಂಬುದು ಚರ್ಚಾರ್ಹ.

(ಇವರ ಕುರಿತು ಇತ್ತೀಚೆಗೆ ರಾಕೇಶ್ ಶೆಟ್ಟಿ ಅವರು ಮುಚ್ಚಿಟ್ಟ ದಲಿತ ಚರಿತ್ರೆ ಎಂಬ ಪುಸ್ತಕ ರಚಿಸಿದ್ದಾರೆ.)

Leave a Reply

Your email address will not be published. Required fields are marked *