Thursday, 19th September 2024

ಆಲ್ಜೈಮರ್ ಬಗ್ಗೆ ಮತ್ತಷ್ಟು ಸಂಕ್ಷಿಪ್ತವಾಗಿ ತಿಳಿಯೋಣ

ತನ್ನಿಮಿತ್ತ
ಡಾ.ನಾ.ಸೋಮೇಶ್ವರ

(ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ)

1. ಶಿಕ್ಷಣ, ಮಧ್ಯ ವಯಸ್ಸು ಹಾಗೂ ವೃದ್ಧಾಪ್ಯದಲ್ಲಿ ಬೌದ್ಧಿಕ ಪ್ರಚೋದನೆ: ನಮ್ಮ ದೇಶದಲ್ಲಿ ಶೇ.32.6ರಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪೂರೈಸುವುದಿಲ್ಲ. ಪ್ರಾಥಮಿಕ ಶಾಲೆಯನ್ನು ಪೂರೈಸುವವರು ಶೇ.25.2. ಮಾಧ್ಯಮಿಕ ಶಾಲೆಯನ್ನು ಪೂರೈಸುವ ಮಕ್ಕಳು ಶೇ.15.7. ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸುವವರು ಶೇ.11.1ರಷ್ಟು. ಪಿಯುಸಿ ಪೂರ್ಣಗೊಳಿಸುವವರು ಶೇ.8.6. ಪದವಿ ಮತ್ತು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವವರ ಪ್ರಮಾಣವು ಶೇ.4.5 ಮಾತ್ರ. ಶಿಕ್ಷಣವು ಡಿಮೆನ್ಷಿಯವನ್ನು ತಡೆಗಟ್ಟಬಲ್ಲದು. ಹೆಚ್ಚು ಹೆಚ್ಚು ಶಿಕ್ಷಿತನಾದಷ್ಟು ಡಿಮೆನ್ಷಿಯ ಬರುವ ಸಾಧ್ಯತೆಯು ಕಡಿಮೆಯಾಗುತ್ತಾ ಹೋಗುತ್ತದೆ. ಶಿಕ್ಷಣವು ಮಿದುಳನ್ನು ಹಾಗೂ ಮಿದುಳಿನಲ್ಲಿರುವ ಪ್ರತಿಯೊಂದು ನರಕೋಶವನ್ನು ಸಕ್ರಿಯವಾಗಿಸುತ್ತದೆ.

ನಮ್ಮ ಮಿದುಳಿಗೆ ನಿರಂತರ ವಾಗಿ ಸೂಕ್ತ ಪ್ರಚೋದನೆಯು ದೊರೆಯದಿದ್ದರೆ, ಅದು ಜಡವಾಗುತ್ತಾ ಹೋಗುತ್ತದೆ. ಶಿಕ್ಷಿತರು ಸಾಮಾನ್ಯವಾಗಿ ತಮ್ಮ ಪದವಿಯ ನಂತರ ಪುಸ್ತಕಗಳನ್ನು ಓದಲು ಹೋಗುವುದಿಲ್ಲ. ಇದು ಅವರ ತಪ್ಪು ಮಾತ್ರವಲ್ಲ, ನಮ್ಮ ಶಿಕ್ಷಣದ ದೋಷವೂ ಆಗಿದೆ. ಮಧ್ಯ ವಯಸ್ಸಿ ನಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮಿದುಳನ್ನು ಚುರುಕಾಗಿಡಬಲ್ಲ ಪುಸ್ತಕಗಳನ್ನು ಓದಬಹುದು, ಹವ್ಯಾಸಗಳಲ್ಲಿ ತೊಡಗ ಬಹುದು, ಹೊಸ ಭಾಷೆಯನ್ನು ಕಲಿಯಬಹುದು ಹಾಗೂ ಕನಿಷ್ಠ ಶಾರೀರಿಕ ಚಟುವಟಿಕೆಗಳಲ್ಲಾದರೂ ತೊಡಗಬೇಕು. ಇವೆಲ್ಲವು ನರಕೋಶಗಳು ಬೇಗ ಸಾಯದಂತೆ ನೋಡಿಕೊಳ್ಳುತ್ತವೆ. ಉತ್ತಮ ಶಿಕ್ಷಣ ಹಾಗೂ ಸೂಕ್ತ ಬೌದ್ಧಿಕ ಪ್ರಚೋದನೆಯು ಇಲ್ಲದಿರು ವಿಕೆಯು ಡಿಮೆನ್ಷಿಯ ಆರಂಭವಾಗಲು ಶೇ.7ರಷ್ಟು ಕಾರಣವಾಗಬಲ್ಲುದು.

2ಕಿವುಡುತನ: ಮನುಷ್ಯನಿಗೆ ಈ ಜಗತ್ತಿನ ಅರಿವು ಮತ್ತು ಆಗುಹೋಗುಗಳು ಪಂಚೇಂದ್ರಿಯಗಳ ಮೂಲಕ ನಡೆಯುತ್ತದೆ. ಅವನು ಸಮಾಜದಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳಬೇಕಾದರೆ, ಅವನ ಎಲ್ಲ ಇಂದ್ರಿಯಗಳು ಆರೋಗ್ಯವಾಗಿರಬೇಕು. ಮನುಷ್ಯನಿಗೆ ದೃಷ್ಟಿಯ ನಂತರ ಅತ್ಯಂತ ಮುಖ್ಯವಾದ ಇಂದ್ರಿಯವೆಂದರೆ ಕಿವಿ-ಶ್ರವಣ ಸಾಮರ್ಥ್ಯ. ವ್ಯಕ್ತಿಯು ಅರೆಗಿವುಡ ಇಲ್ಲ ಪೂರ್ಣ ಕಿವುಡನಾದಾಗ, ಆತನು ಸಮಾಜದ ಆಗುಹೋಗುಗಳಲ್ಲಿ ಪೂರ್ಣ ರೂಪದಲ್ಲಿ ಪಾಲ್ಗೊಳ್ಳಲಾರ. ಅವನ ವೈಯಕ್ತಿಕ ಬದುಕಿನ ಗುಣಮಟ್ಟವೂ ಕಡಿಮೆಯಾಗುತ್ತದೆ.

ಕೆಲಸ ಮತ್ತು ಸಂಪಾದನೆಯನ್ನು ಕಳೆದುಕೊಳ್ಳಬಹುದು. ಮನೆಮಂದಿ ಹಾಗೂ ಸಮಾಜದ ಅವಹೇಳನಕ್ಕೆ ತುತ್ತಾಗಬಹುದು. ಇವು ಅವನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಮಿದುಳಿಗೆ ಶ್ರವಣ ಪ್ರಚೋದನೆ ದೊರೆಯುವುದು ಕಡಿಮೆಯಾಗಿ ಕೊನೆಗೆ ಪೂರ್ಣ ನಿಂತಾಗ, ವ್ಯಕ್ತಿಯು ಏಕಾಂಗಿಯಾಗಬೇಕಾಗುತ್ತದೆ. ಇದು ಮಿದುಳಿನ ನರಕೋಶಗಳು ನಿಧಾನವಾಗಿ ನಾಶವಾಗಲು ಕಾರಣವಾಗುತ್ತದೆ. ಅರೆಕಿವುಡರು ಶ್ರವಣ ಸಾಧನವನ್ನು (ಯರಿಂಗ್ ಏಡ್) ನಿತ್ಯ ಬಳಸುವುದರಿಂದ, ಅವರು ತಮ್ಮ ಡಿಮೆನ್ಷಿಯನ್ನು ಸಾಕಷ್ಟು ಕಾಲ ಮುಂದೂಡಬಹುದು. ಪೂರ್ಣ ಕಿವುಡರಿಗೆ ‘ಕಾಕ್ಲಿಯಾರ್ ಇಂಪ್ಲಾಂಟ್’ ಶಸ್ತ್ರಚಿಕಿತ್ಸೆೆಯು ಶ್ರವಣ ಶಕ್ತಿಯನ್ನು ಮರಳಿಸಬಹುದೇ ಎನ್ನುವುದನ್ನು ತಜ್ಞರ ಬಳಿ ಚರ್ಚಿಸುವುದೊಳಿತು. ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಡಿಮೆನ್ಷಿಯವನ್ನು ಮುಂದೂಡಬಹುದು. ಡಿಮೆನ್ಷಿಯವು ತ್ವರಿತವಾಗಿ ತಲೆದೋರಲು ಕಿವುಡು ತನವು ಶೇ.8ರಷ್ಟು ಕಾರಣವಾಗಬಲ್ಲುದು.

3ಮಿದುಳಿಗಾಗುವ ಪೆಟ್ಟು: ನಾಗರಿಕತೆಯ ಫಲವಾಗಿ ಇಂದಿನ ದಿನಗಳಲ್ಲಿ ವಾಹನ/ರಸ್ತೆ ಅಪಘಾತಗಳಾಗಿ ತಲೆಗೆ ಪೆಟ್ಟು
ಬೀಳುವುದು ಸಾಮಾನ್ಯವಾಗಿದೆ. ಮಿಲಿಟರಿ, ಪೊಲೀಸ್, ಕಾರ್ಖಾನೆಗಳಲ್ಲಿ ಕೆಲಸ, ಬಾಕ್ಸಿಂಗ್ ಮುಂತಾದ ಸ್ಪರ್ಧಾತ್ಮಕ
ಕ್ರೀಡೆ, ಹೊಡೆದಾಟಗಳಲ್ಲಿ ತೊಡಗುವುದರಿಂದ ಮಿದುಳಿಗೆ ಪೆಟ್ಟಾಗುವ ಸಾಧ್ಯತೆಯು ಅಧಿಕವಾಗುತ್ತಿದೆ. ಮಿದುಳಿಗೆ ಬೀಳುವ
ಪೆಟ್ಟಿನ ತೀವ್ರತೆಯು ಅಧಿಕವಾಗಿದ್ದಷ್ಟು ಮಿದುಳಿನ ನರಕೋಶಗಳಿಗೆ ಆಘಾತವಾಗುವ ಸಾಧ್ಯತೆಯೋ ಅಧಿಕವಾಗಿರುತ್ತದೆ.
ಆಘಾತವು ತೀವ್ರವಾಗಿದ್ದಷ್ಟುಹೆಚ್ಚು ನರಕೋಶಗಳು ಸಾಯುತ್ತವೆ. ತಲೆಗೆ ಬೀಳುವ ಪೆಟ್ಟುಗಳ ಕಾರಣ, ಡಿಮೆನ್ಷಿಯ ತಲೆದೋರುವ ಸಾಧ್ಯತೆಯು ಶೇ.3 ರಷ್ಟು ಅಧಿಕವಾಗುತ್ತದೆ.

4ರಕ್ತದ ಏರೊತ್ತಡ: ರಕ್ತದ ಏರೊತ್ತಡ/ಹೈಪರ್ಟೆನ್ಷನ್ ಅಥವ ಅಧಿಕ ಬಿಪಿ ಆಧುನಿಕ ಜೀವನಶೈಲಿಯ ಅನಿವಾರ್ಯ
ಶನಿಯಾಗಿದೆ. ಬಿಪಿ ಲೆಕ್ಕದಲ್ಲಿ ಎರಡು ಸಂಖ್ಯೆಗಳಿರುತ್ತವೆ. ಮೊದಲನೆಯದು ಸಿಸ್ಟೋೋಲಿಕ್ ಒತ್ತಡ (ಸಹಜ ಪ್ರಮಾಣ: 100-140) ಹಾಗೂ ಎರಡನೆಯದು ಡಯಾಸ್ಟೋಲಿಕ್ ಒತ್ತಡ (ಸಹಜ ವ್ಯಾಪ್ತಿ 60-90). ಇವುಗಳಲ್ಲಿ ಮೊದಲನೆಯದಾದ
ಸಿಸ್ಟೋಲಿಕ್ ಒತ್ತಡವು ಮುಖ್ಯವಾದದ್ದು. 140ನ್ನು ಮೀರಬಾರದು. 140ನ್ನು ಮೀರಿ ಒತ್ತಡವು ಹೆಚ್ಚಾದಷ್ಟು ಮಿದುಳಿನ ನರಕೋಶಗಳ ಮೇಲೂ ಒತ್ತಡವು ಅಧಿಕವಾಗುತ್ತದೆ.

ಇದು ಡಿಮೆನ್ಷಿಯ ತಲೆದೋರಲು ಶೇ.2ರಷ್ಟು ಕಾರಣವಾಗಬಲ್ಲುದು. ಈ ಹಿನ್ನೆಲೆಯಲ್ಲಿ ರಕ್ತದ ಒತ್ತಡವು ಏರದಂತೆ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕು. ಹಾಗೆ ಏರಿದರೂ ಅದನ್ನು ಸೂಕ್ತ ಔಷಧ ಸೇವನೆಯಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

5ಬೊಜ್ಜು: ಬೊಜ್ಜು ಬರಲು ಎರಡು ಪ್ರಮುಖ ಕಾರಣವೆಂದರೆ ಮೊದಲನೆಯದು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು
ಸೇವಿಸುವುದು ಹಾಗೂ ಎರಡನೆಯದು ಯಾವುದೇ ರೀತಿಯ ಶಾರೀರಿಕ ಚಟುವಟಿಕೆಗಳಿಲ್ಲದಿರುವುದು. ಶಾರೀರಿಕ ಚಟುವಟಿಕೆ,
ವ್ಯಾಯಾಮ, ಕ್ರೀಡೆ ಇತ್ಯಾದಿಗಳೆಲ್ಲ ವಯಸ್ಸಿಗೆ ಅನುಗುಣವಾಗಿ, ಲಿಂಗಕ್ಕೆ ಅನುಗುಣವಾಗಿ ವ್ಯತ್ಯಾಾಸವಾಗಬಹುದು. ನಿಜ. ಆದರೆ
ಎಲ್ಲ ವಯಸ್ಸಿನವರಿಗೂ ವ್ಯಾಯಾಮ ಹಾಗೂ ಶಾರೀರಿಕ ಚಟುವಟಿಕೆಗಳು ತೀರಾ ಅಗತ್ಯ ಎನ್ನುವುದನ್ನು ಮರೆಯಬಾರದು.
ಅನೇಕ ಅಧ್ಯಯನಗಳು ‘ಕೌಚ್ ಪೊಟಾಟೊ’ಗಳಿಗೆ ಡಿಮೆನ್ಷಿಯ ಮತ್ತು ಆಲ್ಜೆಮರ್ ಕಾಯಿಲೆ ಬರುವ ಸಾಧ್ಯತೆಯು ಶೇ.1ರಷ್ಟು
ಹೆಚ್ಚುತ್ತದೆ ಎನ್ನುತ್ತವೆ. ಹಾಗಾಗಿ ಕನಿಷ್ಠ ವಾರಕ್ಕೆ ಐದು ಸಲವಾದರೂ 45-60 ನಿಮಿಷಗಳ ಕಾಲ ವ್ಯಾಯಾಮದಲ್ಲಿ
ತೊಡಗುವುದು ತೀರಾ ಅಗತ್ಯವಾಗಿದೆ.

6 ಮದ್ಯಪಾನ: ಮದ್ಯಪಾನವು ಕೇವಲ ಯಕೃತ್ತಿನ ಮೇಲೆ ಮಾತ್ರವಲ್ಲ, ಮಿದುಳನ್ನು ಒಳಗೊಂಡಂತೆ ಶರೀರದ ಪ್ರತಿಯೊಂದು ಅಂಗದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆಂದು ಅನಾದಿ ಕಾಲದಿಂದಲೂ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಕುಡುಕರ ಪ್ಪೋಕ್ಯಾಂಪಸ್ ಸೊರಗಿ ಕುಗ್ಗುತ್ತದೆ. ಹಾಗಾಗಿ ನೆನಪಿನ ಶಕ್ತಿಯು ತೀವ್ರವಾಗಿ ಕುಗ್ಗುತ್ತದೆ. ಇದರ ಹಿನ್ನೆಲೆಯಲ್ಲಿಯೇ ಡಿಮೆನ್ಷಿಯವು ತೀವ್ರವಾಗುತ್ತಾ ಹೋಗುತ್ತದೆ. ಮದ್ಯಪಾನ ಮಾಡದವರಲ್ಲಿ ಅಥವಾ ‘ಹಿತ – ಮಿತ’ ಮದ್ಯಪಾನ ಮಾಡುವವರಲ್ಲಿ ಡಿಮೆನ್ಷಿಯ ಸಾಧ್ಯತೆಯು ಕಡಿಮೆ ಎನ್ನಲಾಗಿದೆ.

ಹಿತ-ಮಿತ ಮದ್ಯಪಾನವೆಂದರೇನು? ಒಂದು ವಾರದ ಅವಧಿಯಲ್ಲಿ 21 ಯೂನಿಟ್ ಆಲ್ಕೋಹಾಲಿಗಿಂತ ಕಡಿಮೆ ಸೇವನೆ. ಆಲ್ಕೋಹಾಲ್ ಯೂನಿಟ್ ಎಂದರೆ ಏನು? ಒಂದು ಯೂನಿಟ್ ಆಲ್ಕೋಹಾಲ್ ಎಂದರೆ 10 ಎಂ.ಎಲ್ ಅಥವ 8 ಗ್ರಾಂ ಪರಿಶುದ್ಧ ಆಲ್ಕೋಹಾಲ್. ವಾಸ್ತವದಲ್ಲಿ ಎಲ್ಲ ರೀತಿಯ ಆಲ್ಕೋಹಾಲ್ ಸೇವನೆಯಿಂದ ದೂರವಿರುವುದೇ ಒಳ್ಳೆಯದು. ಡಿಮೆನ್ಷಿಯ ಬೆಳವಣಿಗೆಗೆ ಆಲ್ಕೋಹಾಲ್ ಸೇವನೆಯು ಶೇ.1ರಷ್ಟು ಕಾರಣವಾಗುತ್ತದೆ ಎನ್ನಲಾಗಿದೆ.

7ಮಧುಮೇಹ: ಮಧುಮೇಹವು ಒಂದು ಸರ್ವಸಾಮಾನ್ಯವಾದ ರೋಗ. ನಗರ ಪ್ರದೇಶಗಳ ಪ್ರತಿ ಐದು ಜನರಲ್ಲಿ ಒಬ್ಬರಿಗೆ ಮಧುಮೇಹವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಮೆನ್ಷಿಯ ತಲೆದೋರಲು ಮಧುಮೇಹವು ಒಂದು ಕಾರಣವಾಗಿರುವುದನ್ನು ಗಮನಿಸಲಾಗಿದೆ. ಅನಿಯಂತ್ರಿತ ಮಧುಮೇಹವು ಡಿಮೆನ್ಷಿಯ ತರಲು ಶೇ.1ರಷ್ಟು ಕಾರಣವಾಗಬಹುದು.

8ಧೂಮಪಾನ: ಧೂಮಪಾನ ಹಾಗೂ ಡಿಮೆನ್ಷಿಯದ ನಡುವೆ ನೇರ ಸಂಬಂಧವಿದೆ. ಹೆಚ್ಚು ಧೂಮಪಾನವನ್ನು ದೀರ್ಘಕಾಲ
ಮಾಡಿದಷ್ಟು ಸಾವು ಬೇಗ ಬೇಗನೆ ಸಂಭವಿಸುತ್ತದೆ. ಇದು ದ್ವಿತೀಯಕ ಧೂಮಪಾನಿಗಳಿಗೂ ಅನ್ವಯವಾಗುವ ಸತ್ಯ. ಯಾವ
ವಯಸ್ಸಿನಲ್ಲಾದರೂ ಸರಿ ಧೂಮಪಾನವನ್ನು ಬಿಟ್ಟರೆ, ಅದರಿಂದ ಲಾಭವಿದೆ. ಡಿಮೆನ್ಷಿಯ ಬರುವ ಹಾಗೂ ಸಾವು ಸಂಭವಿಸುವ
ಸಾಧ್ಯತೆಯನ್ನು ಮುಂದೂಡುತ್ತದೆ. ಅನಿಯಂತ್ರಿತ ಹಾಗೂ ದೀರ್ಘಕಾಲದ ಧೂಮಪಾನ ಡಿಮೆನ್ಷಿಯ ರೂಪುಗೊಳ್ಳುವುದನ್ನು
ಶೇ.5ರಷ್ಟು ಹೆಚ್ಚಿಸಬಲ್ಲುದು.

9ಖಿನ್ನತೆ: ಖಿನ್ನತೆಗೆ ಶಾರೀರಿಕ ಹಾಗೂ ಮಾನಸಿಕ ಕಾರಣಗಳಿವೆ. ಖಿನ್ನತೆಗೆ ಚಿಕಿತ್ಸೆಯಿದೆ. ಖಿನ್ನತೆಯಿಂದ ನರಳುವವರು
ಮನೋವೈದ್ಯರು ಸೂಚಿಸುವವರಿಗೂ ನಿಗದಿತ ಔಷಧವನ್ನು ಸೇವಿಸುವುದರಿಂದ ಲಾಭವಿದೆ. ಖಿನ್ನತೆಗೆ ಪದೇ ಪದೆ ತುತ್ತಾಗುವ ವರಲ್ಲಿ ಡಿಮೆನ್ಷಿಯ ಬೇಗನೆ ಬರುವ ಸಾಧ್ಯತೆಯಿರುತ್ತದೆ. ಡಿಮೆನ್ಷಿಯ ಬಂದ ಮೇಲೂ ಖಿನ್ನತೆಯು ತಲೆದೋರ ಬಹುದು. ಇಂತಹ ಖಿನ್ನತೆಯನ್ನು ನಿಯಂತ್ರಿಸುವುದು ಕಷ್ಟ. ಹಾಗಾಗಿ ಖಿನ್ನತೆಯ ಮೊದಲ ಲಕ್ಷಣವು ಕಂಡಕೂಡಲೇ ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ. ಖಿನ್ನತೆಗೆ ಸಿಟಾಲೋಪಾಮ್‌ನಂಥ ಔಷಧವನ್ನು ನೀಡಿದಾಗ, ಅದು ಮಿದುಳಿನಲ್ಲಿ ಬೀಟಾ – ಅಮೈಲಾಯ್ಡ್‌ ರೂಪುಗೊಳ್ಳುವುದನ್ನು ಗಮನಿಸಲಾಗಿದೆ. ಆಲ್ಜೆೆಮರ್ ಕಾಯಿಲೆಯನ್ನು ಮುಂದೂಡುವುದು ಸುಲಭವಾಗುತ್ತದೆ. ಖಿನ್ನತೆಗೆ ನಿಖರ ಚಿಕಿತ್ಸೆಯನ್ನು ತೆಗೆದುಕೊಳ್ಳದಿರುವವರಲ್ಲಿ ಬೇಗ ಡಿಮೆನ್ಷಿಯ ಕಂಡುಬಂದರೆ, ತೆಗೆದು ಕೊಳ್ಳದೇ ಇರುವವರಲ್ಲಿ ಬೇಗ ಕಂಡುಬರುವುದನ್ನು ಗಮನಿಸಲಾಗಿದೆ. ಅನಿಯಂತ್ರಿತ ಖಿನ್ನತೆಯು ಡಿಮೆನ್ಷಿಯ ಬರುವ ಸಾಧ್ಯತೆಯನ್ನು ಶೇ.4ರಷ್ಟು
ಹೆಚ್ಚಿಸುತ್ತದೆ.

10ಸಾಮಾಜಿಕ ಏಕಾಂಗಿತನ: ಮನುಷ್ಯನು ಮೂಲತಃ ಸಂಘಜೀವಿ. ಏಕಾಕಿತನವು ಅಸಹಜವಾದದ್ದು. ದೀರ್ಘಕಾಲದ ಏಕಾಂಗಿತನವು ಖಿನ್ನತೆಗೆ ಅವಕಾಶವನ್ನು ಮಾಡಿಕೊಟ್ಟು, ಡಿಮೆನ್ಷಿಯವನ್ನು ಆಹ್ವಾನಿಸಬಹುದು. ಜಪಾನೀಯರು
ಸಾಮಾನ್ಯವಾಗಿ ದೀರ್ಘಾಯುಷಿಗಳು. ಅದರ ಗುಟ್ಟು ಅವರ ವಂಶವಾಯಿಗಳಲ್ಲಿ ಇರಬಹುದಾದರೂ ಐದು ಸಾಮಾಜಿಕ
ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹಿರಿಯ ಜಪಾನೀಯರಲ್ಲಿ ವಿವಾಹ ವಿಚ್ಛೇದನವು ಅಪರೂಪ. ಹಾಗಾಗಿ ವೃದ್ಧಾಪ್ಯದಲ್ಲೂ ಸಂಗಾತಿಯಿರುವ ಸಾಧ್ಯತೆಯು ಅಧಿಕವಾಗಿರುತ್ತದೆ. ವೃದ್ಧರು ಕುಟುಂಬದ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಗೆಳೆಯರ ವಲಯವು ನಿಕಟವಾಗಿರುತ್ತದೆ. ಸಾಧ್ಯವಾದಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಹಾಗೂ ಅಲ್ಪ ಸ್ವಲ್ಪ ಆದಾಯವನ್ನು ತರಬಲ್ಲಂಥ ಕೆಲಸಗಳಲ್ಲಿ ತೊಡಗುತ್ತಾರೆ.

‘ತಾನೊಬ್ಬ ದಂಡಪಿಂಡ’ ಎನ್ನುವ ಮನೋಭಾವವು ಮನಸ್ಸಿನಲ್ಲಿ ಬರದಂತೆ ನೋಡಿಕೊಳ್ಳುತ್ತಾರೆ. ಈ ಐದು ಸಾಮಾಜಿಕ ಅಂಶಗಳು ಜಪಾನೀಯರಲ್ಲಿ ವೃದ್ಧಾಪ್ಯ ವನ್ನು ಸಹನೀಯಗೊಳಿಸುವುದರ ಜೊತೆಯಲ್ಲಿ ಡಿಮೆನ್ಷಿಯವನ್ನು ಮುಂದೂಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಸಾಮಾಜಿಕ ಒಡನಾಟವನ್ನು ಪರಿಪಾಲಿಸುವುದು ಒಳ್ಳೆಯದು. ಸಾಮಾಜಿಕ ಏಕಾಂಗಿತನವು ಡಿಮೆನ್ಷಿಯ ತಲೆದೋರುವ ಸಾಧ್ಯತೆಯನ್ನು ಶೇ.4ರಷ್ಟು ಹೆಚ್ಚಿಸುತ್ತದೆ.

11ದೈಹಿಕ ಚಟುವಟಿಕೆಗಳು: ನಿಯಮಿತ ಶಾರೀರಿಕ ಚಟುವಟಿಕೆಗಳು ಶರೀರವನ್ನು ಮಾತ್ರವಲ್ಲ, ಮಿದುಳು ಮತ್ತು ಮನಸ್ಸನ್ನು ಚುರುಕಾಗಿಡುತ್ತವೆ. ವಯಸ್ಸಿಗೆ ಹಾಗೂ ಅನುಕೂಲಕ್ಕೆ ತಕ್ಕಂಥ ವ್ಯಾಯಾಮಗಳಲ್ಲಿ ತೊಡಗುವುದು ಒಳ್ಳೆಯದು. ಕೊನೆಯ ಪಕ್ಷ ದಿನಕ್ಕೆ ಮುಕ್ಕಾಲು ಗಂಟೆಯನ್ನಾದರೂ ಮಾಡಲು ಮರೆಯಬಾರದು. ಯಾವುದೇ ಶಾರೀರಿಕ ಚಟುವಟಿಕೆಗಳಿಲ್ಲದೆ ಟಿವಿ ಮುಂದೆ ಕೂರುವವರಲ್ಲಿ ಡಿಮೆನ್ಷಿಯ ಬರುವ ಸಾಧ್ಯತೆಯು ಶೇ.2ರಷ್ಟು ಹೆಚ್ಚಾಗುತ್ತದೆ.

12ವಾಯುಮಾಲಿನ್ಯ: ಗ್ರಾಮೀಣ ಭಾರತದಲ್ಲಿ ಇಂದಿಗೂ ಸೌದೆ ಮತ್ತು ಇದ್ದಿಲನ್ನು ಉರುವಲನ್ನಾಗಿ ಬಳಸುವವರು
ಇದ್ದಾರೆ. ಇದರಿಂದ ಬರುವ ಹೊಗೆಯು ಮಿದುಳಿನ ಮೇಲೆ ನೇರ ದುಷ್ಪರಿಣಾಮವನ್ನು ಬೀರುತ್ತದೆ. ವಾಹನಗಳ ಹೊಗೆಯಿಂದ ಬರುವ ನೈಟ್ರೋಜಿನ್ ಡಯಾಕ್ಸೆೆಡ್ ಮತ್ತು ಧೂಳು ಮಿದುಳಿನ ರಕ್ತನಾಳಗಳ ಜಾಲದ ಮೇಲೆ ದುಷ್ಪರಿಣಾಮವನ್ನು ಬೀರಿ ನರಕೋಶಗಳ ನಾಶಕ್ಕೆ ಕಾರಣವಾಗುತ್ತವೆ. ಇವುಗಳ ಜೊತೆಯಲ್ಲಿ ಕಾರ್ಬನ್ ಮಾನಾಕ್ಸೆಡ್ ಸೇರಿದಾಗ ಡಿಮೆನ್ಷಿಯ ಬೆಳೆಯುವ ಸಾಧ್ಯತೆಯು ಮತ್ತಷ್ಟು ತೀವ್ರವಾಗುತ್ತದೆ. ವಾಯು ಮಾಲಿನ್ಯಕ್ಕೆ ನಿರಂತರವಾಗಿ ತುತ್ತಾಗುತ್ತಿದ್ದರೆ, ಡಿಮೆನ್ಷಿಯ ಬೆಳೆಯುವ ಸಾಧ್ಯತೆಯು ಶೇ.2ರಷ್ಟು ಹೆಚ್ಚುತ್ತದೆ.

ನಿದ್ರೆ ಮತ್ತು ಆಹಾರ: ಡಿಮೆನ್ಷಿಯವು ತಲೆದೋರಲು ಕಾರಣವಾದ 12 ಅಂಶಗಳನ್ನು ಇದುವರೆಗೂ ಗಮನಿಸಿದೆವು. ಇವುಗಳ ಜೊತೆಯಲ್ಲಿ ನಿದ್ರೆ ಮತ್ತು ಆಹಾರ ಪದ್ಧತಿಯೂ ಡಿಮೆನ್ಷಿಯವು ತೀವ್ರವಾಗಲು ಕಾರಣವಾಗಬಹುದು ಎನ್ನಲಾಗಿದೆ. ನಿದ್ರಾಹೀನತೆಯು ಬೀಟಾ – ಅಮೈಲಾಯ್ಡ್‌ ಪ್ರಮಾಣವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಜತೆಗೆ ದೀರ್ಘಕಾಲದ ಮಾಂಸ
ಹಾಗೂ ಕೊಬ್ಬಿನ ಸೇವನೆಯೂ ಸಹ ಡಿಮೆನ್ಷಿಯಕ್ಕ ಕಾರಣವಾಗುತ್ತದೆ. ಸಸ್ಯೋತ್ಪನ್ನಗಳ ಸೇವನೆಯು (ಇಡೀ ಕಾಳುಗಳು, ಹಣ್ಣು, ತರಕಾರಿ, ಸೊಪ್ಪು, ಬೀಜಗಳು, ಹೊಟ್ಟಿನಂಶರುವ ಧಾನ್ಯಗಳು ಹಾಗೂ ಕನಿಷ್ಠ ಮಾಂಸಾಹಾರ ಸೇವನೆ) ಡಿಮೆನ್ಷಿಯವನ್ನು ಮುಂದೂಡುತ್ತದೆ.

ಅವ್ಯಕ್ತ: ಡಿಮೆನ್ಷಿಯವನ್ನು ಹೆಚ್ಚಿಸುವ ಶೇ.40ರಷ್ಟು ಕಾರಣಗಳು ನಮಗೆ ತಿಳಿದುಬಂದಿವೆ. ಈ 12 ಅಂಶಗಳನ್ನು ಸೂಕ್ತ ರೀತಿಯಲ್ಲಿ ಸುಧಾರಿಸಿದರೆ ಅಥವಾ ಬದಲಾಯಿಸಿದರೆ, ಡಿಮೆನ್ಷಿಯ ಬರುವ ಸಾಧ್ಯತೆಯನ್ನು ಶೇ.40ರಷ್ಟು ಮುಂದೂಡಬಹುದು. ಆದರೆ ಡಿಮೆನ್ಷಿಯ ತಲೆದೋರಲು ಉಳಿದ ಶೇ.60ರಷ್ಟು ಕಾರಣಗಳು ಸದ್ಯಕ್ಕೆ ಅವ್ಯಕ್ತವಾಗಿವೆ.

ಬಹುಶಃ ಇವು ನಮ್ಮ ವಂಶವಾಹಿಗಳಲ್ಲಿರಬಹುದು. ಹಾಗಾಗಿ ಸಧ್ಯಕ್ಕೆ ಇವನ್ನು ಬದಲಾಯಿಸುವುದು ಅಸಾಧ್ಯ ಎಂದೇ
ಪರಿಗಣಿಸಬೇಕಾಗುತ್ತದೆ. ಈ ಹನ್ನೆೆರಡು ಅಂಶಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ನೀಡುವ ಹೊಣೆಯು ಹೆತ್ತವರ ಮೇಲೆ, ಸರಕಾರದ ಮೇಲೆ ಹಾಗೂ ವ್ಯಕ್ತಿಯ ಮೇಲೆ ಇರುತ್ತದೆ. ಕಿವುಡುತನ ಉಂಟಾಗದ ಹಾಗೆ, ತಲೆಗೆ ಪೆಟ್ಟು ಬೀಳದ ಹಾಗೆ, ಧೂಮಪಾನ
ಹಾಗೂ ಮಧ್ಯಪಾನ ಚಟಗಳಿಗೆ ತುತ್ತಾಗದ ಹಾಗೆ, ಹಿತ – ಮಿತ ಆಹಾರ ಸೇವನೆ ಹಾಗೂ ನಿಯಮಿತ ಶಾರೀರಿಕ ಚಟುವಟಿಕೆಗಳು ಪ್ರತಿಯೊಬ್ಬರ ವೈಯುಕ್ತಿಕ ಜವಾಬ್ದಾರಿಯಾಗಿರುತ್ತದೆ.

ಜೊತೆಗೆ ರಕ್ತದ ಏರೊತ್ತಡ, ಮಧುಮೇಹ ಮುಂತಾದವನ್ನು ನಿಯಂತ್ರಿಸುವಲ್ಲಿ ವ್ಯಕ್ತಿ, ಕುಟುಂಬ ಹಾಗೂ ಸರಕಾರದ ಜವಾಬ್ದಾರಿಗಳಿವೆ. ಒಬ್ಬ ವ್ಯಕ್ತಿಯು ಖಿನ್ನತೆಗೆ ತುತ್ತಾಗದ ಹಾಗೆ ಹಾಗೂ ಸಾಮಾಜಿಕವಾಗಿ ಒಂಟಿತನವನ್ನು ಅನುಭವಿಸದ ಹಾಗೆ ನೋಡಿಕೊಳ್ಳಬೇಕಾದ ಹೊಣೆಯು ಕುಟುಂಬ ಹಾಗೂ ಸಮಾಜದ ಮೇಲಿದೆ. ವಾಯುಮಾಲಿನ್ಯ ನಿಯಂತ್ರಣ ಹಾಗೂ ವಾಹನ ಸುರಕ್ಷತಾ ನಿಯಮಗಳನ್ನು ಸರಕಾರವು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ.

ವ್ಯಕ್ತಿ, ಕುಟುಂಬ, ಸಮಾಜ ಹಾಗೂ ಸರಕಾರಗಳು ತಮ್ಮ ತಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಡಿಮೆನ್ಷಿಯ, ಆಲ್ಜೆೆಮರ್ ಕಾಯಿಲೆ ಮುಂತಾದವನ್ನು ಪೂರ್ಣ ರೂಪದಲ್ಲಿ ಗುಣಪಡಿಸಲು ಅಥವಾ ತಡೆಗಟ್ಟಲು ಆಗದಿದ್ದರೂ ಸಹ ಅವನ್ನು ಖಂಡಿತಾ ಮುಂದೂಡಲು ಸಾಧ್ಯವಾಗುತ್ತದೆ. ಆಲ್ಜೆೆ ಮರ್ ಮಾಸದ ಅವಧಿಯಲ್ಲಿ ಈ ಬಗ್ಗೆ ಚಿಂಥನ – ಮಂಥನಗಳು ನಡೆಯ ಬೇಕಿವೆ.

Leave a Reply

Your email address will not be published. Required fields are marked *