Friday, 22nd November 2024

ಜಿ೨೦ ಘೋಷಣೆಗಳು ಅನುಷ್ಠಾನಕ್ಕೆ ಬರಲಿ

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಜಿ-೨೦ ಶೃಂಗಸಭೆಯು ಮುಕ್ತಾಯಗೊಂಡಿದೆ. ವಿವಿಧ ರಾಷ್ಟ್ರ ನಾಯಕರು ಸಭೆಯಲ್ಲಿನ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಬಲಿಷ್ಠ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆಗೆ ಉತ್ತೇಜನ ನೀಡುವುದು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುವುದು ಇವುಗಳಲ್ಲಿ
ಮುಖ್ಯವಾದುದು. ಸಮುದ್ರ ಆರ್ಥಿಕತೆಯಲ್ಲಿ ನವೀನ ಆವಿಷ್ಕಾರಗಳು, ಆಹಾರ ಭದ್ರತೆ ಕುರಿತಾದ ಘೋಷಣೆಗಳು ಅನುಮೋದನೆಗೊಂಡಿವೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಗತಿ ಸಾಧಿಸುವುದು ಹಾಗೂ ಅದರ
ವೇಗವನ್ನು ಹೆಚ್ಚುಗೊಳಿಸುವುದು ಎಂದಿನಿಂದಲೂ ಭಾರತದ ಗುರಿಯಾಗಿದ್ದು, ಸುಸ್ಥಿರ ಇಂಧನ ಬಳಕೆಯನ್ನು ಪ್ರತಿಪಾದಿಸುತ್ತಲೇ ಬಂದಿದೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಅದೇ ಬಗೆಯ ಜೀವನಶೈಲಿಯತ್ತ ಗಮನ ಕೊಡುವುದು, ಕೈಗೆಟಕುವ ರೀತಿಯಲ್ಲಿ ಸುಸ್ಥಿರ ಹಣಕಾಸು ವ್ಯವಸ್ಥೆ ಅನುಷ್ಠಾನಗೊಳಿಸುವುದು, ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು, ಸುಸ್ಥಿರವಾಗಿ ಬಳಸುವುದು ಮತ್ತು ಮರುಸ್ಥಾಪಿಸುವುದು, ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವುದು, ಹವಾಮಾನ ಬದಲಾವಣೆ ಮತ್ತು ಪರಿವರ್ತನೆಯ ಹಾದಿಗಳಿಂದ ಉಂಟಾಗುವ ಆರ್ಥಿಕ ಅಪಾಯಗಳನ್ನು ಎದುರಿಸುವುದು ಎಂದಿಗಿಂತ ಹೆಚ್ಚು ಅಗತ್ಯವಾಗಿವೆ. ವಿಶ್ವದಲ್ಲಿನ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ಕೆಲಸ ಮಾಡಲು ಎಲ್ಲ ದೇಶಗಳು ಕೈ ಜೋಡಿಸುವುದು, ಆಹಾರ ಮತ್ತು ಅಭದ್ರತೆಯ ಮೇಲೆ ಆರ್ಥಿಕ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದು, ಜಾಗತಿಕ ಆರೋಗ್ಯ ಬಲಪಡಿಸುವುದು ಹಾಗೂ ಮಹತ್ತರ ಆರೋಗ್ಯ ವಿಧಾನವನ್ನು ಕಾರ್ಯಗತಗೊಳಿಸುವತ್ತ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ಅನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾರ್ಯ ಸನ್ನದ್ಧರಾಗುವುದು, ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಬಳಕೆ ಮಾಡುವುದು, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಭದ್ರತೆ, ಸ್ಥಿತಿ ಸ್ಥಾಪಕತ್ವ ಮತ್ತು ವಿಶ್ವಾಸ ನಿರ್ಮಾಣ ಮಾಡುವುದು ಇಂದು ಅನಿವಾರ್ಯ. ಜಿ೨೦ಯಲ್ಲಿ ಇವೆಲ್ಲವೂ ನಿರ್ಣಯಗಳಾಗಿ ಬಂದಿವೆ. ಸಮಾವೇಶದ ಮುಖ್ಯ ಥೀಮ್ ಆಗಿರುವ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಗುರಿಯನ್ನು ಸಾಧಿಸಲು ಹಲವು ನಿಟ್ಟಿನಿಂದ ದುಡಿಯಬೇಕಿದೆ.