Saturday, 7th September 2024

ಬರ ನಿರ್ವಹಣೆಗೆ ರಾಜ್ಯ ಸರಕಾರವೇ ಸಜ್ಜುಗೊಳ್ಳಲಿ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಜ್ಯದ ೧೪ ಪ್ರಮುಖ ಜಲಾಶಯಲ್ಲಿ ಒಟ್ಟು ೮೯೫.೬೨ ಟಿಎಂಸಿ ನೀರು ಶೇಖರಣೆಗೆ ಅವಕಾಶವಿದೆ. ಆದರೆ ಈವರೆಗೂ ೫೯೯.೦೭ ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಪರಿಣಾಮವಾಗಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಈಗಾಗಲೇ ಕೆಲವೆಡೆ ಟ್ಯಾಂಕರ್ ಮೂಲಕ ನೀರು ತರಿಸಿ ಬೆಳೆ ಉಳಿಸಿಕೊಳ್ಳುವ ಯತ್ನವನ್ನು ರೈತರು ಮಾಡುತ್ತಿzರೆ. ಈ ಪರಿಸ್ಥಿತಿಯನ್ನು ಗಮನಿಸಿರುವ ಸರಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಮಳೆ-ಬೆಳೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಸರ್ಕಾರಕ್ಕೆ ಶಿ-ರಸು ಮಾಡಲು ರಚಿಸಲಾದ ಸಚಿವ ಸಂಪುಟ ಉಪಸಮಿತಿ ಈಗಾಗಲೇ ಸಭೆ ಸೇರಿ ಚರ್ಚೆಯನ್ನೂ ನಡೆಸಿದೆ. ಮಳೆ ಕೊರತೆ ಎದುರಿಸುತ್ತಿರುವ ೧೨೦ ತಾಲೂಕುಗಳಲ್ಲಿನ ಪ್ರತಿ ೧೦ ಹಳ್ಳಿಗಳಲ್ಲಿ ಐದು ಪ್ರಮುಖ ಬೆಳೆಗಳ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ೧೦ ದಿನಗಳ ಒಳಗೆ ವರದಿ ನೀಡುವಂತೆ ಜಿಽಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಎದುರಾಗಲಿರುವ ಪರಿಸ್ಥಿತಿಯ ತೀವ್ರತೆಯನ್ನೂ ಇದು ತೋರಿಸುತ್ತದೆ. ಮಳೆ ಕೊರತೆಯಿಂದ ಎದುರಾಗಬಹುದಾದ ಸಂಕಷ್ಟಗಳನ್ನು ಮೊದಲೇ ಅಂದಾಜಿಸಿದರಷ್ಟೆ ಸಾಲದು. ಬಂದೆರಗಬಹುದಾದ ಬರಗಾಲ, ಅದು ತಂದೊಡ್ಡಬಹುದಾದ ಆತಂಕ, ಆಹಾರ ಸಮಸ್ಯೆಯನ್ನು ನಿಭಾಯಿಸುವ ಯೋಜನೆಯನ್ನೂ ಸರಕಾರ ರೂಪಿಸಬೇಕಿದೆ. ಬರಕ್ಕೆ ತುತ್ತಾಗಬಹುದಾದ ಪ್ರದೇಶಗಳ ಮಾಹಿತಿ ಈಗಾಗಲೇ ಸರಕಾರದ ಬಳಿ ಇದೆ. ಆಯಾ
ಜಿಡಳಿತವನ್ನು ಚುರುಕುಗೊಳಿಸಿ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ಜಲ ಮೂಲಗಳನ್ನು ಗೊತ್ತು ಮಾಡಿಕೊಳ್ಳಬೇಕಿದೆ. ಅಣೆಕಟ್ಟು, ಕೆರೆ, ಕೊಳವೆಬಾವಿ, ಖಾಸಗಿ ಕೊಳವೆ ಬಾವಿಗಳ ಮೇಲೆ ನಿಗಾ ಇಟ್ಟು, ನೀರಿನ ಮಿತ ಬಳಕೆಗೆ ಜಾಗೃತಿ ಮೂಡಿಸಬೇಕಿದೆ. ವಿವಿಧ ಇಲಾಖೆಗಳ ಸಂಯೋಜನೆಯಡಿ ಸಂಕಷ್ಟ ಪರಿಹಾರ ಸೂತ್ರವೊಂದನ್ನು ಸರಕಾರ ಈಗಲೇ ಸಿದ್ಧಪಡಿಸಬೇಕಿದೆ. ನೀರಿನ ವ್ಯವಸ್ಥೆಗೆ ಜಿಲ್ಲಾ ಪಂಚಾಯಿತಿಗಳಿಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿ, ಮುಂಜಾಗ್ರತೆ ವಹಿಸಬೇಕಿದೆ. ಒಟ್ಟಾರೆ ಬರ ಎದುರಿಸಲು ಕೇಂದ್ರ ಸರಕಾರವನ್ನು ನೆಚ್ಚಿಕೊಳ್ಳದೆ ರಾಜ್ಯ ಸರಕಾರವೇ ಸಜ್ಜುಗೊಳ್ಳಬೇಕಿದೆ.

Leave a Reply

Your email address will not be published. Required fields are marked *

error: Content is protected !!