Sunday, 15th December 2024

ಸರ್ವರಿಗಿರಲಿ ಸಮಪಾಲು-ಸಮಬಾಳು

-ಡಾ. ಶಾಲಿನಿ ರಜನೀಶ್

ಭಾರತದ ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೆಲವು ವಿಶೇಷ ಸುರಕ್ಷತೆಗಳನ್ನು ಒದಗಿಸಿದೆ. ಭಾರತ ಗಣರಾಜ್ಯದ ಪ್ರಜೆಗಳಾಗಿ ಅವರು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಸವಲತ್ತುಗಳನ್ನು ಸಂಪೂರ್ಣ ಪಡೆಯಲು ಅರ್ಹರಾಗಿರುತ್ತಾರೆ.

ಸುಸ್ಥಿರ ಅಭಿವೃದ್ಧಿಯ ಸಮಾಜ ನಿರ್ಮಾಣವಾಗಬೇಕಾದರೆ ಯಾರನ್ನೂ ಹಿಂದಕ್ಕೆ ಬಿಡದೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಅಂತೆಯೇ, ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ತಾರತಮ್ಯ, ಹಿಂಸೆಗಳನ್ನು ತೊಡೆದು, ಸಮಾಜದ ಅತ್ಯಂತ ಹಿಂದುಳಿದ ಜನರನ್ನು ಅಭಿವೃದ್ಧಿಯಲ್ಲಿ ಒಳಗೊಳ್ಳುವಂತೆ ಮಾಡುವುದು ಬಹಳ ಮುಖ್ಯ. ಸೆ.೧೫ರಂದು ಅಂತಾರಾಷ್ಟ್ರೀಯ ಪ್ರಜಾ
ಪ್ರಭುತ್ವದ ದಿನವನ್ನು ಆಚರಿಸಲಾಗುತ್ತಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸದಿದ್ದಿದ್ದರೆ ನಾವೆಲ್ಲರೂ ಇಂದು ಈ ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯವಿರುತ್ತಿರಲಿಲ್ಲ. ತಾರತಮ್ಯವಿಲ್ಲದ, ಸಮಾನ ಸಮಾಜ ನಿರ್ಮಾಣವಾಗಬೇಕೆಂಬುದು ಅವರ ಆಶಯವಾಗಿತ್ತು. ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕಾಣುವ ಆಶಯಗಳನ್ನು ನಮ್ಮ ಸಂವಿಧಾನದಲ್ಲಿ ಅಂದೇ ಅಳವಡಿಸಿರುವುದು ಹೆಮ್ಮೆಯ ಸಂಗತಿ. ನಮ್ಮ ಸಂವಿಧಾನದಲ್ಲಿನ ವಿವಿಧ ವಿಧಿಗಳಲ್ಲಿ ತಿಳಿಯಪಡಿಸಿರುವಂತೆ, ರಾಜ್ಯವು ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳ ಸಮಾನ ರಕ್ಷಣೆಯನ್ನು ನಿರಾಕರಿಸುವಂತಿಲ್ಲ.

ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳದ ಆಧಾರದ ಮೇಲೆ ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ಇದೇ ರೀತಿಯಲ್ಲಿ, ಉದ್ಯೋಗ ಹಾಗೂ ನೇಮ ಕಾತಿಯಲ್ಲಿ ಸಮಾನತೆಯನ್ನು ಪ್ರತಿ ಪಾದಿಸಿರುವುದು, ಅಸ್ಪೃಶ್ಯತೆಯ ನಿಷೇಧವನ್ನು ಎತ್ತಿ ತೋರಿಸಿರುವುದು ನಮ್ಮ ಸಂವಿಧಾನದ ವೈಶಿಷ್ಟ್ಯ. ಒಟ್ಟಾರೆ ಹೇಳುವುದಾದರೆ, ನಾಗರಿಕರು ಗೌರವಯುತವಾಗಿ ಬದುಕುವಂತೆ ಮಾಡುವುದೇ ಸಂವಿಧಾನದ
ಆಶಯವಾಗಿದೆ. ಎಲ್ಲರೂ ಗೌರವಯುತವಾಗಿ ಬದುಕ ಬೇಕೆಂದರೆ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಬೇಕು. ಇದು ದೇಶ ಮತ್ತು ರಾಜ್ಯದ ಪ್ರಮುಖ ಕರ್ತವ್ಯ. ಅಸಮಾನತೆಯನ್ನು ಹೋಗಲಾಡಿಸಿ
ಸರ್ವರಿಗೂ ಸಮಬಾಳು ದೊರಕಿಸುವ ನಿಟ್ಟಿನಲ್ಲಿ ಮೀಸಲಾತಿ ಜಾರಿಗೆ ಬಂತು. ಪ್ರಮುಖವಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮೀಸಲಾತಿ ನೀಡಲು ಹಲವು ಕಾರಣಗಳಿವೆ. ಅನಾದಿಕಾಲದಿಂದಲೂ ಈ
ಜನರನ್ನು ಸಮಾಜ ತುಳಿಯುತ್ತಲೇ ಬಂದಿದೆ. ಮಾತ್ರವಲ್ಲ, ಮುಖ್ಯವಾಹಿನಿಯಿಂದಲೂ ಅವರನ್ನು ಬಹಳ ದೂರವಿಟ್ಟಿದೆ. ಶಿಕ್ಷಣ, ಉದ್ಯೋಗ, ಆಸ್ತಿ ಸಂಪಾದನೆಯ ಹಕ್ಕುಗಳಿಂದಲೂ ಅವರನ್ನು ವಂಚಿಸಲಾಗಿದೆ. ಸೂಕ್ತ ಶಿಕ್ಷಣವೇ ದೊರಕದಿದ್ದಾಗ ಉದ್ಯೋಗ ಪಡೆಯುವುದಾದರೂ ಹೇಗೆ, ಆಸ್ತಿ ಸಂಪಾದಿಸುವುದಾದರೂ ಹೇಗೆ? ಹೀಗಾಗಿ ಇಂಥವರು ಸಮಾಜದಲ್ಲಿ ಗೌರವವನ್ನು ಪಡೆಯುವುದಾದರೂ ಹೇಗೆ?

ಈ ಕಾರಣದಿಂದಲೇ ಭಾರತದ ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೆಲವು ವಿಶೇಷ ಸುರಕ್ಷತೆಗಳನ್ನು ಒದಗಿಸಿದೆ. ಭಾರತ ಗಣರಾಜ್ಯದ ಪ್ರಜೆಗಳಾಗಿ ಅವರು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಸವಲತ್ತುಗಳನ್ನು ಸಂಪೂರ್ಣ ಪಡೆಯಲು ಅರ್ಹರಾಗಿರುತ್ತಾರೆ. ಪ್ರಮುಖವಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಇತರ ಸುರಕ್ಷತೆಗಳನ್ನು ಸಂವಿಧಾನವು ಇವರಿಗೆ ಖಾತ್ರಿಪಡಿಸಿದೆ. ಸಂವಿಧಾನದ ೪೬ನೇ ವಿಧಿಯು ಈ ಸಮುದಾಯಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಾಜ್ಯವು ವಿಶೇಷ ಕಾಳಜಿಯಿಂದ ಉತ್ತೇಜಿಸುವ, ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸುವ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಇದು ಲಕ್ಷಾಂತರ ನಾಗರಿಕರಿಗೆ ಭರವಸೆಯ ಸಂದೇಶವನ್ನು ನೀಡುತ್ತದೆ. ಸಂವಿಧಾನದ ೭೩ನೇ ಮತ್ತು ೭೪ನೇ ತಿದ್ದುಪಡಿ
ಕಾಯ್ದೆಯ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಸ್ಥಳೀಯ ಆಡಳಿತದಲ್ಲಿ ಮೀಸಲಿಡಬೇಕು. ಅಲ್ಲದೆ ಎಲ್ಲಾ ಹಂತದ ಪಂಚಾಯತ್‌ಗಳ ಅಧ್ಯಕ್ಷರ ಸ್ಥಾನಗಳನ್ನು ಸಹ ಮೀಸಲಿಡಬೇಕು. ಈ ಸಮುದಾಯಗಳ ಮಹಿಳೆಯರು ಕೂಡ ರಾಜಕೀಯದಲ್ಲಿ ಸ್ಥಾನವನ್ನು ಪಡೆಯಲು ಈ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ, ಈ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ಉದ್ಯೋಗ, ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ಈ ಉದ್ದೇಶವು, ಮೂಲ ಭೂತವಾಗಿ ಅವರನ್ನು ಸಬಲೀಕರಣಗೊಳಿಸುವ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ
ಅವರ ಭಾಗವಹಿಸುವಿಕೆಯನ್ನು ದೃಢಪಡಿಸುವ ಗುರಿಯನ್ನು ಹೊಂದಿದೆ.

ಸರಕಾರದ ಹಲವು ನೀತಿಗಳಿಂದಾಗಿ ಈ ಸಮುದಾಯದವರು ಇಂದು ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯುವಂತಾಗಿದೆ. ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಲ್ಲಿ ವಾರ್ಷಿಕ ಸುಮಾರು ೩೦,೦೦೦ ಕೋಟಿ ರುಪಾಯಿ ಹಣವನ್ನು ೩೦೦ಕ್ಕಿಂತಲೂ ಹೆಚ್ಚು ಯೋಜನೆಗಳಿಗೆ ಬಳಸಲಾಗುತ್ತಿದೆ. ಹೀಗಿದ್ದರೂ, ಮಾನವ ಅಭಿವೃದ್ಧಿಯಲ್ಲಿ ರಾಜ್ಯದ ಸರಾಸರಿಗೆ ಬರಲು ಹಲವು ಅಡಚಣೆಗಳಿರುವುದನ್ನು ನಾವು ಗಮನಿಸಬಹುದು. ಪ್ರಮುಖವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ತಾರತಮ್ಯಗಳು ಇಂದಿಗೂ ಗಂಭೀರವಾಗಿಯೇ ಇವೆ. ‘ರಕ್ತದ ಬಣ್ಣ ಒಂದೇ, ಬಡವನಿಗೂ ಶ್ರೀಮಂತನಿಗೂ’ ಎಂಬ ಹಾಡನ್ನು ಹಾಡುತ್ತಾ ಸಾಮಾಜಿಕ ಕಾರ್ಯಕರ್ತರು ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುತ್ತಿದ್ದುದನ್ನು ನಾವು ಕಂಡಿದ್ದೇವೆ. ಹೀಗಿರುವಾಗ, ಅವರು ಗೌರವ ದಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳಲು ನಾವ್ಯಾರು? ಹಾಗಾಗಿ ನಮ್ಮ ಮನೋಭಾವಗಳಲ್ಲಿ ಮೊದಲು ಬದಲಾವಣೆಯಾಗಬೇಕಾಗಿದೆ. ನಮ್ಮ ಸಮಾಜದಲ್ಲಿ ಅವರಲ್ಲದೆ ಬೇರೆ ಬಡವರೂ ಇದ್ದಾರೆ ಎಂಬ ಚರ್ಚೆ ಆಗಾಗ ಕೇಳಿಬರುತ್ತದೆ. ಹೌದು,
ನಮ್ಮಲ್ಲಿ ಬಡವರಿದ್ದಾರೆ. ಆ ಬಡವರಲ್ಲೂ ನಾವು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರನ್ನು ನೋಡುವುದಾದರೆ, ಬಡವರಲ್ಲಿ ಅವರು ಇನ್ನೂ ಬಡವರಾಗಿರುವುದನ್ನು ಕಾಣಬಹುದು. ಕಾರಣ, ಒಂದು ಕಡೆ ಆರ್ಥಿಕವಾಗಿ ಬಡತನ. ಇನ್ನೊಂದೆಡೆ ಸಾಮಾಜಿಕವಾಗಿ ಬಡತನ. ಹಳ್ಳಿಗಳಲ್ಲಿ ಈಗಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆಂದೇ ಪ್ರತ್ಯೇಕ ಕಾಲೊನಿಗಳಿವೆ, ಅವರನ್ನು ಮುಖ್ಯ ವಾಹಿನಿಯಿಂದ ದೂರವೇ ಇಡಲಾಗಿದೆ.

ಇವರಲ್ಲಿ, ಸ್ವಂತ ಕೃಷಿಭೂಮಿಯನ್ನು ಹೊಂದಿದ ಮಂದಿ ಬಹಳವೇ ಕಡಿಮೆ. ಹೆಚ್ಚಿನ ಮಂದಿ ದಿನಗೂಲಿ ಮಾಡಿ ಬದುಕುವವರು. ಆರ್ಥಿಕ ಅಡಿಪಾಯವೇ ಇಲ್ಲದಿರುವಾಗ ತಮ್ಮದೇ ಉದ್ಯಮ ಮಾಡುವುದಾಗಲೀ, ಆರ್ಥಿಕವಾಗಿ ಸಬಲರಾಗುವುದಾಗಲೀ ಹೇಗೆ ತಾನೇ ಸಾಧ್ಯ? ಕುವೆಂಪು ಹೇಳಿದ ‘ಸರ್ವರಿಗೂ ಸಮಪಾಲು-ಸಮಬಾಳನ್ನು’ ನೀಡಲು ಹೇಗೆ ಸಾಧ್ಯ? ಬಡವರಲ್ಲಿ ಉದ್ಯಮವೆಂದರೆ ಚಾಪೆ ಹೆಣೆಯುವುದು, ಕಾಡು ಉತ್ಪನ್ನಗಳ ಮಾರಾಟ ಇತ್ಯಾದಿಗಳಿದ್ದರೂ ಅದರಿಂದ ಬರುವ ಆದಾಯ ಅವರ ದಿನನಿತ್ಯದ ಖರ್ಚಿಗಷ್ಟೇ ಸಾಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ, ಸಾಕಷ್ಟು ಭೂಮಿಯಿರುವ, ಉದ್ಯಮ ಅಥವಾ ಗೌರವ
ಯುತ ಉದ್ಯೋಗವಿರುವ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣ, ಪೌಷ್ಟಿಕ ಆಹಾರ ಪಡೆಯುತ್ತಾರೆ. ಹಾಗಾಗಿ ಅವರು ಮತ್ತಷ್ಟು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಲೇ ಇರುತ್ತಾರೆ. ಆದರೆ ಬಡವರ ದುಡಿಮೆ ದಿನದ ಖರ್ಚಿಗಷ್ಟೇ ಸಾಕಾಗುತ್ತದೆ. ದಿನವಿಡೀ ಶ್ರಮದ ದುಡಿಮೆಯಿಂದ ವಿಶ್ರಾಂತಿ ಇಲ್ಲದೆ ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಖರ್ಚುಗಳು ಹೆಚ್ಚುತ್ತಲೇ ಹೋಗುತ್ತವೆ. ಹಾಗಾಗಿ, ಉಳ್ಳವರು
ಮತ್ತೊಬ್ಬರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕಾಗಿದೆ. ಕೇವಲ ತಾನೊಬ್ಬನೇ/ಳೇ ಬೆಳೆದರೆ ಸಾಲದು; ತನ್ನೊಂದಿಗೆ ತನ್ನ ಸಮುದಾಯವೂ ಬೆಳೆಯಬೇಕೆಂಬ ಹಂಬಲವನ್ನಿಟ್ಟುಕೊಂಡು ಸರಕಾರಿ ಸೌಲಭ್ಯಗಳನ್ನು ತಲುಪಿಸುವುದಿರಬಹುದು, ಶಿಕ್ಷಣಕ್ಕೆ ಉತ್ತೇಜನ ನೀಡುವುದಿರಬಹುದು ಮಾಡಿದಾಗ ಅವರ ಅಭಿವೃದ್ಧಿಯೂ ಆಗುವುದರಲ್ಲಿ ಸಂಶಯವಿಲ್ಲ. ಹಾಗೆಂದು, ಶಿಕ್ಷಣವೊಂದೇ ದೊರೆತರೆ ಸಾಲದು. ಶಿಕ್ಷಣದ ಜತೆಗೆ ಕೌಶಲವನ್ನು ಕೂಡಾ ಬೆಳೆಸಬೇಕಾಗುತ್ತದೆ.

ಈ ಕೌಶಲ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಶ್ರಮ ಅತ್ಯಗತ್ಯ. ದಮನಿತರ ಜೀವನಮಟ್ಟವನ್ನು ಸುಧಾರಿಸಲು ಸರಕಾರವು ಹಲವು ಫಲಾನುಭವಿ ಯೋಜನೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ
ಮಾಡುತ್ತದೆ. ಶಿಕ್ಷಣವನ್ನು ಪಡೆಯಲು ಹಾಸ್ಟೆಲ್ಗಳು, ವಿದ್ಯಾರ್ಥಿವೇತನ, ವಸತಿ ಶಾಲೆ, ಶುಲ್ಕ ವಿನಾಯತಿ/ರಿಯಾಯತಿಗಳಂಥ ಹಲವು ಸೌಲಭ್ಯಗಳನ್ನು ಒದಗಿಸಿರುವುದರ ಪರಿಣಾಮವಾಗಿ ದಮನಿತರ ಮಕ್ಕಳು ಇಂದು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಇದು ಸಂತಸದಾಯಕ ವಿಷಯವೆಂದೇ ಹೇಳಬಹುದು. ಅಲ್ಲದೆ, ವಸತಿ ಯೋಜನೆ ಮೂಲಕ ಕನಿಷ್ಠ ಸೂರನ್ನಾದರೂ ಪಡೆಯಲು ಹಲವರಿಗೆ ಸಾಧ್ಯವಾಗಿದೆ. ೨೦೨೩ರಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿಯಡಿ, ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಮಿ ಪರಭಾರೆಗೆ ಸಂಬಂಧಿಸಿದ
ಕರ್ನಾಟಕ ಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) (ತಿದ್ದುಪಡಿ) ಅಧಿನಿಯಮ ಮಸೂದೆ ೨೦೨೩ರಲ್ಲಿ ಜಾರಿಗೆ ಬಂದಿದೆ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಹಂಚಿಕೆ ಯಾಗಿರುವ ಭೂಮಿಯನ್ನು ಸರಕಾರದ ಅನುಮತಿಯಿಲ್ಲದೆ ಅಕ್ರಮವಾಗಿ ಪರಭಾರೆ ಮಾಡಿರುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲು
ಯಾವುದೇ ಕಾಲಮಿತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯದಲ್ಲಿ ನೂರಾರು ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಇದು ಅನುಕೂಲವಾಗಲಿದೆ. ಕೇವಲ ಯೋಜನೆಗಳು ಜಾರಿಗೆ ಬಂದರಷ್ಟೇ ಸಾಕಾಗುವುದಿಲ್ಲ. ಸಮಾಜದ ಮನೋಭಾವದಲ್ಲಿ ಕೂಡ ಬದಲಾವಣೆಯಾಗಬೇಕಾಗಿದೆ. ಪ್ರತಿಯೊಬ್ಬ ನಾಗರಿಕರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎಂಬುದನ್ನು ನಾವು ಅರಿತು, ಜಾತಿ, ಧರ್ಮ, ಆರ್ಥಿಕತೆಯ ಆಧಾರದಲ್ಲಿ ನೋಡದೆ, ಪ್ರತಿ ಯೊಬ್ಬರನ್ನೂ ಗೌರವದಿಂದ ಕಾಣಬೇಕಾಗುತ್ತದೆ. ಕುವೆಂಪು ಹೇಳಿದಂತೆ, ಕಾಯಕವೆಲ್ಲವೂ ಶ್ರೇಷ್ಠ ಅಂದ ಮೇಲೆ ಕಾಯಕ ಮಾಡುವ ಕರ್ಮಯೋಗಿಯೂ ಶ್ರೇಷ್ಠನಲ್ಲವೇ? ನಮ್ಮೊಳಗಿರುವ ಪೂರ್ವಗ್ರಹ ಕಲ್ಪನೆಗಳನ್ನು ತೊಡೆದುಹಾಕಿ, ವ್ಯಕ್ತಿಯನ್ನು ಮನುಷ್ಯರ ರೀತಿಯಲ್ಲಿ ನಡೆಸಿಕೊಂಡಲ್ಲಿ ಮಾನವತೆಗೆ ಅರ್ಥಬರುತ್ತದೆ. ಹೀಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕುವ ಹಕ್ಕಿದೆ. ಆ ವ್ಯಕ್ತಿ ಯಾರೇ ಆಗಿದ್ದರೂ ಅವರನ್ನು ಹಿಂದಕ್ಕೆ ಉಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯತೆ ಮತ್ತು ಬಾಧ್ಯತೆ ಆಗಿರಬೇಕು. ಸದೃಢ-ಸುಸ್ಥಿರ ಸಮಾಜ ನಿರ್ಮಾಣ ವಾಗಬೇಕಾದರೆ, ನಾವೆಲ್ಲರೂ ಸೇರಿ ಸಂವಿಧಾನದ  ಆಶಯವನ್ನು ಎತ್ತಿಹಿಡಿಯಬೇಕಾಗಿದೆ.
(ಲೇಖಕಿ, ಕರ್ನಾಟಕ ಸರಕಾರದ ಯೋಜನಾ ಇಲಾಖೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ)