-ಪ್ರಕಾಶ್ ಶೇಷರಾಘವಾಚಾರ್
೨೦೧೦ ರಲ್ಲಿ, ಅಂದಿನ ಕಾಂಗ್ರೆಸ್ ಸಂಸದ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸುರೇಶ್ ಕಲ್ಮಾಡಿಯವರ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಾಗಿತ್ತು. ದುರದೃಷ್ಟವೆಂದರೆ, ಈ ಕ್ರೀಡಾಕೂಟವು ಕ್ರೀಡಾಪಟುಗಳ ಸಾಧನೆಗಿಂತ ಸುದ್ದಿಮಾಡಿದ್ದು ಕ್ರೀಡಾಕೂಟದ ನೆಪದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದ ವಿಚಾರದಲ್ಲಿ! ಅವ್ಯವಸ್ಥೆಯ ಆಗರವಾಗಿದ್ದ ಈ ಕ್ರೀಡಾಕೂಟ ಭಾರತದ ಗೌರವಕ್ಕೆ ಮಸಿ ಬಳಿದಿತ್ತು. ಈ ಭ್ರಷ್ಟಾಚಾರದ ಕುರಿತು ಬಿಜೆಪಿ ಪತ್ರಿಕಾಗೋಷ್ಠಿ ಮಾಡಿದ್ದು, ಕ್ರೀಡಾಕೂಟ ಮುಗಿದು, ಬಂದ ಅತಿಥಿಗಳು ವಾಪಸ್ ತೆರಳಿದ ನಂತರವೇ. ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು, ಅತಿಥಿಗಳ ಮುಂದೆ ದೇಶದ ಗೌರವಕ್ಕೆ ಧಕ್ಕೆಯಾಗಬಾರದು ಎಂಬ ನಿಲುವು ತಳೆದಿದ್ದು ಇದಕ್ಕೆ ಕಾರಣ. ಪಕ್ಷದ ಹಿತಕ್ಕಿಂತ ದೇಶದ ಹಿತ ಮುಖ್ಯ ಎಂಬ ಭಾವನೆಯಿದ್ದ ಕಾರಣ ಇಂಥ ನಿರ್ಧಾರ ಸಾಧ್ಯವಾಯಿತು.
ಇದಕ್ಕೆ ವ್ಯತಿರಿಕ್ತವಾಗಿ, ಉರಿ ಮತ್ತು ಪುಲ್ವಾಮದಲ್ಲಿನ ಭಯೋತ್ಪಾದಕ ದಾಳಿಯ ತರುವಾಯ ಭಾರತೀಯ ಯೋಧರು ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ವಿರುದ್ಧ ೨ಬಾರಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಸಾಕ್ಷ್ಯ ಕೊಡಿ ಎಂದು ಒತ್ತಾಯಿಸುವ ಮೂಲಕ ಕಾಂಗ್ರೆಸಿಗರು ಮತ್ತು ಮೋದಿ-ವಿರೋಧಿಗಳು ನಮ್ಮ ಯೋಧರನ್ನು ಅವಮಾನಿಸಿದ್ದರು. ಭಾರತದ ಕೆಲ ಭೂಭಾಗವನ್ನು ಚೀನಾ ತನ್ನ ಭೂಪಟದಲ್ಲಿ ಸೇರಿಸಿಕೊಂಡು ಅವು ತನ್ನವು ಎಂದು ಹೇಳಿಕೊಂಡಾಗ ವಿಪಕ್ಷಗಳು ಒಂದಾಗಿ ಚೀನಾದ ವಿಸ್ತರಣಾದಾಹವನ್ನು ಖಂಡಿಸಬೇಕಿತ್ತು. ಆದರೆ ಬದಲಿಗೆ ಅವು ಪ್ರಧಾನಿ ಮೋದಿಯವರನ್ನು ವಾಗ್ದಾಳಿಗೆ ಗುರಿಮಾಡಿದವು. ಭಾರತದ ಗಡಿಯ ವಿಷಯದಲ್ಲಿ ತಂಟೆಮಾಡುತ್ತಾ ನಮ್ಮ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಿರುವ ಚೀನಾ ವಿರುದ್ಧ ಇವರ ಆಕ್ರೋಶ ವ್ಯಕ್ತವಾಗಲಿಲ್ಲ. ಕಾಂಗ್ರೆಸ್ ಪಕ್ಷವು ಚೀನಾದ ದುರ್ನಡತೆಯ ಬಗ್ಗೆ ದಿವ್ಯಮೌನ ವಹಿಸಿ, ದೇಶದ ಹಿತವನ್ನು ಸ್ವಾರ್ಥ ರಾಜಕೀಯ ಹಿತಾಸಕ್ತಿಯೊಂದಿಗೆ ರಾಜಿಮಾಡಿಕೊಂಡಿರುವುದು ದೌರ್ಭಾಗ್ಯದ ಸಂಗತಿ.
ಚಂದ್ರಯಾನ-೩ರ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿಳಿದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಇತಿಹಾಸವನ್ನು ಸೃಷ್ಟಿಸಿದಾಗ, ‘ಜವಾಹರಲಾಲ್ ನೆಹರುರಿಗೆ ಇದರ ಯಶಸ್ಸು ಸಲ್ಲಬೇಕು, ಇದರಲ್ಲಿ ಮೋದಿಯವರ ಪಾತ್ರವೇನಿಲ್ಲ’ ಎಂದು ಕಾಂಗ್ರೆಸಿಗರು, ಮೋದಿ-ವಿರೋಧಿಗಳು ಅಪಪ್ರಚಾರಕ್ಕಿಳಿದರು. ನೆಹರುರವರೇ ಚಂದ್ರಯಾನ ಯೋಜನೆ ರೂಪಿಸಿ ಆಕಾಶಕ್ಕೆ ಹಾರಿಬಿಟ್ಟರೇನೋ ಎಂಬಂತಿತ್ತು ಇವರ ಅಬ್ಬರ! ಚಂದ್ರಯಾನ-೩ರ ಐತಿಹಾಸಿಕ ಯಶಸ್ಸು ಮೋದಿ-ವಿರೋಧಿಗಳನ್ನು ಕಂಗೆಡಿಸಿರುವುದು ಸುಳ್ಳಲ್ಲ. ರಾಷ್ಟ್ರೀಯ ಹಿತಾಸಕ್ತಿಯ ಪ್ರತಿಯೊಂದು ವಿಷಯವನ್ನೂ ಕಾಂಗ್ರೆಸ್ ಹೇಗೆ ತನ್ನ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಇವೆಲ್ಲ ಉದಾಹರಣೆಗಳು. ಈಗ ಜಿ-೨೦ ಸರದಿ. ೪೦ ವರ್ಷಗಳ ಹಿಂದೆ ದೆಹಲಿಯಲ್ಲಿ ಅಲಿಪ್ತ ರಾಷ್ಟ್ರಗಳ ಸಮಾವೇಶ ನಡೆದ ತರುವಾಯ, ೨೦೨೩ರ ಜಿ-೨೦ ಸಮ್ಮೇಳನವು ದೇಶದಲ್ಲಿ ನಡೆದ ಅತಿದೊಡ್ಡ ಶೃಂಗಸಭೆ
ಎನಿಸಿಕೊಂಡಿದೆ. ೨೦ ರಾಷ್ಟ್ರಗಳ ನಾಯಕರು, ವಿಶೇಷ ಆಹ್ವಾನಿತರು, ವಿಶ್ವಬ್ಯಾಂಕ್, ಐಎಂಎ-, ಐರೋಪ್ಯ ಮತ್ತು ಆಫ್ರಿಕಾ ಒಕ್ಕೂಟದ ಪ್ರಮುಖರು ಭಾಗಿಯಾಗಿದ್ದ ಈ ಶೃಂಗದಲ್ಲಿ, ವಿಶ್ವಸಮುದಾಯಕ್ಕೆ ನವಭಾರತದ
ವಿಶ್ವರೂಪ ದರ್ಶನವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಗತಿ ಮೈದಾನದಲ್ಲಿ ಹೊಸದಾಗಿ ರೂಪುಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ‘ಭಾರತ್ ಮಂಟಪ’ದಲ್ಲಿ ಈ ಸಮ್ಮೇಳನವನ್ನು ಅದ್ಭುತವಾಗಿ ಆಯೋಜಿಸಿ, ವಿಶ್ವಮಟ್ಟದ ಶೃಂಗಸಭೆಗಳನ್ನು ಸುರಕ್ಷಿತವಾಗಿ- ಸುಸಜ್ಜಿತವಾಗಿ ನಡೆಸಬಲ್ಲ ತನ್ನ ಸಾಮರ್ಥ್ಯವನ್ನು ಭಾರತ ಪ್ರದರ್ಶಿಸಿತು. ಇಂಥ ಸಮ್ಮೇಳನದ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬರಬಾರದಿತ್ತು.
ದೇಶದ ಘನತೆಯ ಪ್ರಶ್ನೆಯಾಗಿದ್ದರಿಂದ, ಸರಕಾರದ ಯತ್ನಗಳಿಗೆ ಪೂರಕವಾಗಿ ಜವಾಬ್ದಾರಿಯುತವಾಗಿ ವಿಪಕ್ಷಗಳು ವರ್ತಿಸುತ್ತವೆ ಎಂದು ಜನ ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಯನ್ನು ಅವು ಸುಳ್ಳುಮಾಡಿ ಹೆಜ್ಜೆಹೆಜ್ಜೆಗೂ ತಪ್ಪು ಹುಡುಕಲು, ಮೋದಿಯವರನ್ನು ಅವಹೇಳನ ಮಾಡಲು ಮುಂದಾದವು. ಆಹ್ವಾನಿತ ವಿದೇಶಿ ಗಣ್ಯರೂ ಹೀಗೆ ಟೀಕೆಗೊಳಗಾಗಿದ್ದು ವಿಪಕ್ಷಗಳ ಇಂಥ ಅತಿರೇಕಕ್ಕೆ ಸಾಕ್ಷಿ! ಪಾರಂಪರಿಕ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದ್ದಕ್ಕೆ, ‘ಇದು ಮಹಿಳೆಯರಿಗೆ ಮಾಡಿದ ಅಪಮಾನ’ ಎಂದು ವಿವಾದವೆಬ್ಬಿಸಿ ಸಣ್ಣತನ ತೋರಿದರು ಕಾಂಗ್ರೆಸ್ ವಕ್ತಾರೆ! ವಿದೇಶಿ ಅತಿಥಿಗಳು ಬಂದಾಗ ಸ್ಲಮ್ ಪ್ರದೇಶವನ್ನು ಬಟ್ಟೆಯಿಂದ ಮರೆಮಾಡುವುದು ದಶಕಗಳಿಂದ ನಡೆಯುತ್ತಿದ್ದು, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ನಡೆದಾಗಲೂ ಇಂಥ ಪರಿಪಾಠವನ್ನು ಅನುಸರಿಸಿದ್ದಿದೆ. ಆದರೆ ರಾಹುಲ್ ಗಾಂಽಯವರು, ‘ಭಾರತ ಸರಕಾರವು ಬಡವರನ್ನು ಮತ್ತು ಪ್ರಾಣಿಗಳನ್ನು ಮರೆಮಾಡುತ್ತಿದೆ, ಅತಿಥಿಗಳಿಂದ ವಾಸ್ತವತೆ ಮರೆಮಾಚುವ ಅಗತ್ಯವಿಲ್ಲ’ ಎಂದು ಟ್ವೀಟ್ ಮಾಡಿದರು. ಈ ಪದ್ಧತಿ ಶುರುವಾಗಿದ್ದೇ ಇವರ ಅಜ್ಜಿ ಮತ್ತು ತಂದೆಯಿಂದ; ತಮ್ಮ ಟೀಕೆಯಿಂದಾಗಿ ಅವರಿಗೆ ಅವಮಾನವಾಗುತ್ತದೆ ಎಂಬ ಸೂಕ್ಷ್ಮಪ್ರಜ್ಞೆಯೂ ರಾಹುಲರಿಗಿಲ್ಲ! ದೆಹಲಿಯಲ್ಲಿ ಬೀದಿನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಾಂಗ್ರೆಸ್ ಟೀಕಿಸಿತು; ಆದರೆ, ‘ಇದೊಂದು ನಕಲಿ ವಿಡಿಯೋ, ದೆಹಲಿಗೆ ಸಂಬಂಧಿಸಿದ್ದಲ್ಲ’ ಎಂದು ಪಿಐಬಿ ಸ್ಪಷ್ಟವಾಗಿ ನಿರಾಕರಿಸಿ ಈ ಅಪಪ್ರಚಾರಕ್ಕೆ ತಣ್ಣೀರೆರಚಿತು. ಇನ್ನು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂರವರು, ‘ಇಂದಿನ ಪ್ರಮುಖ ಸುದ್ದಿ ವಿದೇಶಿ ಗಣ್ಯರು ಆಗಮಿಸುವುದಲ್ಲ, ಉಪಚುನಾವಣೆಯಲ್ಲಿ ‘ಇಂಡಿಯ’ ಮೈತ್ರಿಕೂಟ ೪ ಸ್ಥಾನದಲ್ಲಿ ಗೆದ್ದಿದ್ದು’
ಎಂದು ಹೇಳಿ ಸಣ್ಣತನ ತೋರಿದರು. ‘ರಷ್ಯಾದ ಪುಟಿನ್, ಚೀನಾದ ಜಿನ್‌ಪಿಂಗ್ ಸಭೆಗೆ ಗೈರಾಗಿದ್ದು ವಿದೇಶಾಂಗ ಸಚಿವ ಜೈಶಂಕರ್‌ರ ವೈಫಲ್ಯ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಟ್ವೀಟ್ ಮಾಡಿದರು; ಇದು ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತಾದ ತಮ್ಮ ಅಜ್ಞಾನವನ್ನು ಬಿಂಬಿಸುತ್ತದೆ ಎಂದು ಈ ವಕ್ತಾರರಿಗೆ ಅನಿಸಲೇ ಇಲ್ಲ! ಆಹ್ವಾನಿತರಿಗೆ ಚಿನ್ನಲೇಪಿತ ಬೆಳ್ಳಿತಟ್ಟೆಯಲ್ಲಿ ಆತಿಥ್ಯ ನೀಡಲಾಗುತ್ತದೆ ಎಂದು ಉಲ್ಲೇಖಿಸಿ ಅದರ ಚಿತ್ರ ಹಂಚಿಕೊಂಡ ಕಾಂಗ್ರೆಸಿಗರು ಭಾರತದ ಬಡತನದ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರು; ಆದರೆ ರಾಷ್ಟ್ರಪತಿಗಳು ನೀಡಿದ ಔತಣಕೂಟದಲ್ಲಿ ಇಂಥ ತಟ್ಟೆಗಳ ಬಳಕೆಯೇ ಆಗಿರಲಿಲ್ಲ! ಈ ಔತಣಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರಿಗೆ ಆಹ್ವಾನವಿಲ್ಲವೆಂದು ಹೇಳಿ ಕಾಂಗ್ರೆಸ್‌ನ ಮೂವರು ಮುಖ್ಯಮಂತ್ರಿಗಳು ಇದರಲ್ಲಿ ಭಾಗಿಯಾಗಲಿಲ್ಲ. ಆದರೆ ಈ ಔತಣಕೂಟಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೂ ಆಹ್ವಾನವಿರಲಿಲ್ಲ. ಖರ್ಗೆ ರಾಜ್ಯಸಭೆಯ ವಿಪಕ್ಷ ನಾಯಕರಾಗಿದ್ದರೂ, ಪಕ್ಷಾಧ್ಯಕ್ಷರಾದ ಕಾರಣ ಅವರಿಗೆ ಆಹ್ವಾನವಿರಲಿಲ್ಲ. ‘ಭಾರತ್ ಮಂಟಪ’ದ ವಾಹನ ನಿಲುಗಡೆ ತಾಣದಲ್ಲಿ ರಾತ್ರಿಯೆಲ್ಲಾ ಸುರಿದ ಮಳೆಗೆ ಕೊಂಚ ನೀರು ನಿಂತಿದ್ದ ವಿಡಿಯೋ ಹಂಚಿಕೊಂಡ ಕಾಂಗ್ರೆಸ್‌ನ ಪ್ರಿಯಾಂಕಾ ವಾದ್ರಾ, ‘ಶೃಂಗಸಭೆ ನಡೆದ ಕಟ್ಟಡದಲ್ಲಿ ನೀರು ನಿಂತಿದೆ’ ಎಂದು ಟೀಕಿಸಿದರು; ಆದರೆ ಪಿಐಬಿ ಇದಕ್ಕೆ ಸ್ಪಷ್ಟೀಕರಣ ನೀಡುವ ಮೂಲಕ ಈ ದುರುದ್ದೇಶಕ್ಕೆ
ಪ್ರತ್ಯುತ್ತರ ನೀಡಿತು.
ರಾಹುಲರು ಬೆಲ್ಜಿಯಂನಲ್ಲಿ ಮಾತನಾಡುತ್ತಾ, ‘ಚೀನಾದ ಬೆಲ್ಟ್ ಆಂಡ್ ರೋಡ್ ಉಪಕ್ರಮಕ್ಕೆ ಮೋದಿಯವರಲ್ಲಿ ಉತ್ತರವಿಲ್ಲ’ ಎಂದು ಟೀಕಿಸಿದರು; ಆದರೆ ಜಿ-೨೦ ಸಭೆಯಲ್ಲಿ ಭಾರತ, ಕೊಲ್ಲಿ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟ ಕೈಜೋಡಿಸಿ ಆರ್ಥಿಕ ಕಾರಿಡಾರ್ ರಚನೆಗೆ ಮುಂದಾಗಿವೆ. ಮೋದಿಯವರನ್ನು ಕುಬ್ಜರನ್ನಾಗಿಸುವುದನ್ನೇ ಕಾರ್ಯಸೂಚಿ ಮಾಡಿಕೊಂಡವರಿಗೆ, ಮೋದಿಯವರ ಜಾಣ್ಮೆ ಮತ್ತು ಭಾರತದ ಶಕ್ತಿ ಅರ್ಥವಾದಂತಿಲ್ಲ! ಭಾರತವು ‘ದೆಹಲಿ ಡಿಕ್ಲರೇಷನ್’ ಕೈಗೊಂಡು ಶೃಂಗವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದ ಕೀರ್ತಿಗೆ ಪಾತ್ರವಾಯಿತು. ರಷ್ಯಾ, ಚೀನಾ ಸೇರಿದಂತೆ ಅನೇಕ ದೇಶಗಳು ಈ ನಿರ್ಣಯವನ್ನು ಬೆಂಬಲಿಸಿ ಭಾರತವನ್ನು ಶ್ಲಾಸಿದವು. ಆದರೆ ಕಾಂಗ್ರೆಸಿಗರಿಗೆ ಇಲ್ಲೂ ತಪ್ಪು ಹುಡುಕುವ ಚಪಲ. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ‘ರಷ್ಯಾ ಆಕ್ರಮಣವನ್ನು ಕಟುವಾಗಿ ಟೀಕಿಸಲು ಸಮ್ಮೇಳನ ಸೋತಿತು’ ಎಂದು ಆಕ್ಷೇಪಿಸಿದ್ದು ಇದಕ್ಕೆ ಸಾಕ್ಷಿ. ‘ವಸುಧೈವ ಕುಟುಂಬಕಂ’, ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಅರ್ಥಪೂರ್ಣ ಸಂದೇಶದ ಮೇಲೆ ಜಿ-೨೦ ಶೃಂಗದ ಆಯೋಜನೆಯಾಗಿತ್ತು.
ಯಾವುದೇ ಆಭಾಸವಾಗದಂತೆ ಸುವ್ಯವಸ್ಥಿತವಾಗಿ ನಡೆದ ಈ ಶೃಂಗಸಭೆಯ ವೇಳೆ ಮೋದಿಯವರು ವಿದೇಶಿ ಗಣ್ಯರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿ ದೇಶದ ಗೌರವವನ್ನು ಉತ್ತುಂಗಕ್ಕೊಯ್ದರು. ಆದರೆ ಹೆಜ್ಜೆಹೆಜ್ಜೆಗೂ ಟೀಕಿಸಿ ಹತಾಶೆ ಪ್ರಕಟಿಸಿದ ಕಾಂಗ್ರೆಸ್, ಜಿ-೨೦ ಶೃಂಗವು ದೇಶದ ಗೌರವ-ಪ್ರತಿಷ್ಠೆಯ ಸಭೆಯಾಗಿತ್ತೇ ವಿನಾ ಬಿಜೆಪಿಯ ಕಾರ್ಯಕ್ರಮವಾಗಿರಲಿಲ್ಲ ಎಂಬುದನ್ನು ಮರೆತಿತ್ತು. ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿ ತಾನು ಚುನಾವಣೆ ಗೆಲ್ಲಬಹುದೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಪ್ರತಿ ವಿಷಯದಲ್ಲೂ ನಕಾರಾತ್ಮಕ ನಿಲುವು ತಳೆಯುತ್ತಿದೆ. ದೇಶದ ಹಿತ ದೃಷ್ಟಿಯಿಂದ ಈ ನಕಾರಾತ್ಮಕತೆಯನ್ನು ಕಾಂಗ್ರೆಸ್ ತೊಡೆದುಕೊಳ್ಳದಿದ್ದರೆ, ಮುಂಬರುವ ದಿನದಲ್ಲಿ ಈ ತಂತ್ರಗಾರಿಕೆಯೇ ಅದಕ್ಕೆ ತಿರುಗುಬಾಣವಾಗುವುದರಲ್ಲಿ ಅನುಮಾನವಿಲ್ಲ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)