Monday, 16th September 2024

ಕನ್ನಡವನ್ನು ದಕ್ಕಿಸಿಕೊಳ್ಳಬೇಕಿದೆ !

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಕನ್ನಡ ನಮಗೆ ಬೇಕೋ ಬೇಡವೋ ಎಂಬುದರ ಬಗ್ಗೆ ಕನ್ನಡಿಗರ ಅಭಿವ್ಯಕ್ತಿಯ ಒಟ್ಟೂ ಭಾವದಲ್ಲಿ ಕನ್ನಡಿಗರಿಗೇ ಅಸಾಧ್ಯ
ವಾಗುವಷ್ಟು ಕನ್ನಡ ಜೀವಸತ್ವವನ್ನು ಕಳೆದುಕೊಂಡಿದೆ!

ಕನ್ನಡದ ಬಗ್ಗೆ ಕನ್ನಡಿಗರ ಅತೀಯೆನಿಸುವಷ್ಟು ನಿಲುವುಗಳಿವೆ. ಕನ್ನಡ ಭಾಷೆ ಕನ್ನಡಿಗರಿಗೆ ಎಷ್ಟು ಅಗತ್ಯ ಎಂಬುದರ ಬಗ್ಗೆಯೇ
ಕನ್ನಡಿಗರಲ್ಲಿ ವೈರುದ್ಧ್ಯಗಳಿವೆ. ಇದು ಕನ್ನಡದ ದುರಂತ ಮಾತ್ರವಲ್ಲ, ಕನ್ನಡದ್ದೇ ಎಂಬಷ್ಟು ದುರಂತ. ಹಾಗಂತ ಈ ದುರಂತಕ್ಕೆ ಜಗತ್ತಿನ ಜ್ಞಾನವಾಹಿನಿ ಮತ್ತು ಸಂಪರ್ಕ ಭಾಷೆಯಾದ ಹಾಗೂ ಸಾಮ್ರಾಜ್ಯಷಾಹೀ ಭಾಷೆಯಾದ ಇಂಗ್ಲೀಷಿನ ಆಕ್ರಮಣವೇ
ಪ್ರಧಾನವಾಗಿದ್ದರೂ ಕನ್ನಡದ ಮೇಲಿನ ಕೀಳರಿಮೆ ಮತ್ತು ನಿಕೃಷ್ಟ ಭಾವದಿಂದಾಗಿ ನಮ್ಮೀ ಕಾಲದಲ್ಲಿ ಕನ್ನಡದ ಮಕ್ಕಳಿಗೆ ಕನ್ನಡವೇ ದಕ್ಕದಂತೆ ಬೆಳೆಸುತ್ತಿದ್ದೇವೆ!

ಈ ದಕ್ಕುವಿಕೆ ಅಸಾಧ್ಯ ವಾಗಿದ್ದು ಕನ್ನಡವನ್ನು ಬಳಸದೇ ಇಂಗ್ಲಿಷ ಮಾತಾಡುವ, ಕಲಿಯುವ, ಉದ್ಯೋಗ ಗಳಿಸುವ ಅತಿಯಾದ ಹಂಬಲದಿಂದ! ಚಪಲದಿಂದ! ಹಳ್ಳಿಯ ಜನರ ನಾಲಗೆಯಲ್ಲಿ ಕನ್ನಡ ಜೀವಂತವಾಗಿರಲು ಕಾರಣ ಕನ್ನಡ ಬಿಟ್ಟು ಅವರಿಗೆ ಮತ್ತೊಂದು ಭಾಷೆ ಬರುವುದಿಲ್ಲವಾದ್ದರಿಂದ! ಆದ್ದರಿಂದ ಅವರಲ್ಲಿ ಕನ್ನಡ ಮತ್ತು ಸಂಸ್ಕೃತಿ ಉಳಿದುಕೊಂಡಿದೆ.

ಕನ್ನಡದ ಮಕ್ಕಳಿಗೆ ಕನ್ನಡ ದಕ್ಕದೇ ಹೋಗುತ್ತಿರುವುದರಿಂದ ಕನ್ನಡದ ಸಾಂಸ್ಕೃತಿಕ ಜೀವನವೂ ಅವರಿಗೆ ವಂಚಿತವಾಗುತ್ತಿದೆ. ಅಂದರೆ ಕನ್ನಡದಿಂದ ಹುಟ್ಟುವ ಸಂಸ್ಕೃತಿಯೂ ದುರ್ಬಲವಾಗುತ್ತಿದೆ. ವಿಷಯ ಗ್ರಹಿಕೆಗೆ ಮೂಲವಾಗಿ ಕನ್ನಡವೇ ಆತ್ಯಂತಿಕ ವಾಗಿ ಉಳಿಯುವುದು ಕನ್ನಡ ಮಾತ್ರ ಗೊತ್ತಿರುವವರಿಗೆ ಮಾತ್ರ. ಇದು ಕನ್ನಡ ಮಾತ್ರ ಸಾಕು ಎಂದು ಹೇಳಲು ಸಾಧ್ಯವಾಗದೇ ಇರುವ ಕನ್ನಡಿಗರಿಗೆ ಅನ್ಯಭಾಷೆಯ ಅಗತ್ಯವೂ ಅನಿವಾರ್ಯವೂ ಆಗುತ್ತದೆ. ಆಗ ಅಂಥವರ ಕನ್ನಡ ಕ್ಷೀಣವಾಗಿ ದುರ್ಬಲ ವಾಗುತ್ತ ಹೋಗುತ್ತದೆ. ಜ್ಞಾನವಾಹಿನಿಯಾಗಿ ಯಾವ ಭಾಷೆ ಪ್ರಭುತ್ವವನ್ನು ಹೊಂದಿತೋ ಆ ಭಾಷೆಯನ್ನು ಕಲಿಯುವುದು ಮತ್ತದರಲ್ಲಿ ಪಳಗುವುದು ಅನಿವಾರ್ಯವಾದ್ದರಿಂದ ಇಂಗ್ಲಿಷ್ ಬಲವಾಯಿತು.

ಎಲ್ಲ ಅನುಭವಗಳ ಸ್ವೀಕಾರಕ್ಕೆ ಮನಸು ಅಣಿಯಾಗುವುದು ಸುತ್ತಣ ಭಾಷೆಯಿಂದ. ಹೀಗೆ ಅಣಿಯಾದ ಮನಸ್ಸು ಹಸಿಯುವುದು
ಮತ್ತೊಂದು ಭಾಷೆಗಳಲ್ಲಿರುವ ಸಂಪತ್ತಿಗಾಗಿ. ಆಗ ಬೇರೆ ಭಾಷೆಗಳು ಮುಖ್ಯವಾಗಿ ಇಂಗ್ಲಿಷ್ ಮತ್ತದರ ರುಚಿ, ಅದು ಹೊಂದಿರುವ ವಿಸ್ತಾರವಾದ ವ್ಯಾಪ್ತಿಯ ವಿಶೇಷ ಜ್ಞಾನವನ್ನು ಕನ್ನಡದ ಮನಸ್ಸು ಮೂಲದಲ್ಲಿ ಕನ್ನಡವಾಗಿಯೇ ಉಳಿದು ಪಡೆಯಲು ಸಾಧ್ಯವೇ ಇಲ್ಲವಾದ್ದರಿಂದ ಕನ್ನಡ ಜ್ಞಾನವಾಹಿನಿ ಭಾಷಾ ಶಕ್ತಿಯಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಈ ಕಳೆದುಕೊಳ್ಳುವ ಶಕ್ತಿ ಎಲ್ಲ ದೇಶೀ ಭಾಷೆಗಳ ಪಾಡಾಗಿದೆ. ಸದ್ಯ ಕನ್ನಡಕ್ಕೊದಗಿದ ದುಃಸ್ಥಿತಿಯೆಂದರೆ ಇದೇ!

ಜ್ಞಾನವನ್ನು ಸೃಷ್ಟಿಸುವ ಅದರ ಒಳಶಕ್ತಿಯನ್ನು ಸಾಯಿಸಿ ಇಂಗ್ಲಿಷನ್ನು ನೆಚ್ಚಿಕೊಂಡಿದ್ದೇವೆ. ಉದ್ಯೋಗಕ್ಕೆ ಬೇಕಾದ ಜ್ಞಾನ ಕ್ಕಾಗಿಯೂ, ಆನಂತರ ಅನ್ನಕ್ಕಾಗಿಯೂ! ಸ್ಥಾನಮಾನಕ್ಕಾಗಿಯೂ! ಪ್ರತಿಷ್ಠೆಗಾಗಿಯೂ! ನಿತ್ಯದ ಬದುಕಿಗೆ ಕನ್ನಡದ ಮನೆಯೊಳಗಷ್ಟೇ ಕನ್ನಡ ಹರಕು ಸರಕಾಗಿ ಉಳಿದು ಬಿಟ್ಟಿದೆ. ಅದೂ ಇಂಗ್ಲಿಷನ್ನು ಕಲಿತ ಆಧುನಿಕರ ನಡುವೆ ಅಲ್ಲವಾಗಿ! ಕನ್ನಡ ಮಾತನಾಡುವ, ಕನ್ನಡ ಮಾತ್ರ ತಿಳಿದಿರುವ ನಮ್ಮ ಹಿರಿಯರೊಂದಿಗೆ ಸಂವಹನಕ್ಕೆ ಬೇಕಾಗಿ ಆ ಹರಕು ಕನ್ನಡ ಉಳಿದು ಕೊಂಡಿದೆ.

ಆ ನಮ್ಮ ಹಿರಿಯರು ಕನ್ನಡದ ನಿಜವಾದ ವಾರಸುದಾರರು. ಎರಡು ಮೂರು ತಲೆಮಾರುಗಳಿವೆ. ಅವು ಕಾಲವಾದ ಮೇಲೆ ಕನ್ನಡ ಕೇವಲ ವ್ಯವಹಾರಿಕ ಭಾಷೆಯಾಗಿ ಉಳಿದು ಬಿಡುತ್ತದೆ ಅಥವಾ ಕನ್ನಡ ಮಾತನಾಡಲು ಬರುತ್ತದೆಂಬ ದೊಡ್ಡ ಸಂಭ್ರಮದ ಭಾವದಲ್ಲಿ ಕನ್ನಡ ಉಳಿದಿದೆ ಎಂಬಷ್ಟರಮಟ್ಟಿಗೆ ಕನ್ನಡ ತಲುಪಿದೆ! ಇದು ಕನ್ನಡಿಗರೇ ಕನ್ನಡಕ್ಕೆ ಸೃಷ್ಟಿಸಿದ ಕನ್ನಡದ ದುಸ್ಥಿತಿ!
ಉಳ್ಳವರು ಮಕ್ಕಳನ್ನು ಐಸಿಎಸ್ಸಿಗೋ, ಸಿಬಿಎಸ್ಸಿಗೋ ಸೇರಿಸ್ತಾರೆಂದು ಶಿಕ್ಷಣದ ಪರಿಕಲ್ಪನೆಯ ಗಂಧವೇ ಇಲ್ಲದವರೂ ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುತ್ತಾರೆ.

ಮೊದಲು ಐಸಿಎಸ್ಸಿಗೆ, ಆಮೇಲೆ ಸಿಬಿಎಸ್ಸಿಗೆ, ಕೊನೆಗೆ ಸ್ಟೇಟ್ ಸಿಲೆಬಸ್ಸಿಗೆ ಅಂತ ಮಕ್ಕಳನ್ನು ಕಲಿಕೆಯ ಹಂತದ ಪಠ್ಯಕ್ರಮವನ್ನೂ ಬದಲಾಯಿಸುವ ಪೋಷಕರು ಎಷ್ಟಿಲ್ಲ ಹೇಳಿ? ಅವರಿಗೆ ಸಿಲೆಬಸ್ ರಚನೆ ಮತ್ತು ಸ್ವರೂಪ, ಅದರ ವ್ಯಾಪ್ತಿ ಮತ್ತು ಪ್ರಮಾಣದ ಅರಿವಿರುವುದಿಲ್ಲ. ಅರ್ಥವೂ ಆಗಿರುವುದಿಲ್ಲ. ಅರ್ಥಮಾಡಿಕೊಳ್ಳುವ ಅಥವಾ ಅರ್ಥಮಾಡಿಸಿಕೊಳ್ಳುವ ಅಥವಾ ಬಲ್ಲವರಿಂದ ಕೇಳಿ ತಿಳಿಯುವ ಸಾಮಾನ್ಯ ಬುದ್ಧಿಯೂ ICSEಗೆ ಅಥವಾ  CBSE ಗೆ ಸೇರಿಸುವ ಮೊದಲು ಇರುವುದಿಲ್ಲ.

ಅವರಲ್ಲಿ ಕಲಿಕೆಯ ಬಗ್ಗೆ ಸ್ಪಷ್ಟ ಜ್ಞಾನ ಇಲ್ಲದಿರುವುದರಿಂದ ಇಂಥಾ ಎಡವಟ್ಟುಗಳಾಗುತ್ತವೆ. ಇದಕ್ಕೆ ಬಲಿಯಾಗುವುದು ಮಕ್ಕಳ
ವಿದ್ಯಾಭ್ಯಾಸ. ಕೇವಲ ಹಣ ಮತ್ತು ಪ್ರತಿಷ್ಠೆಗಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯವನ್ನು ಚೆನ್ನಾಗಿ ಕಟ್ಟಿಕೊಡುವ ಪ್ರಾಥಮಿಕ ಹಂತವನ್ನೇ ಮೂರಾಬಟ್ಟೆಯಾಗಿಸುವ ಪೋಷಕರಿಗೆ ಕನ್ನಡದ ಬಗ್ಗೆ ಯಾವ ಅಭಿಮಾನ, ನಿಷ್ಠೆ, ಪ್ರೀತಿಯಿದ್ದೀತು? ICSE ಯಲ್ಲಿ ಕನ್ನಡವನ್ನು ಕಲಿಯುವುದಕ್ಕೂ, CBSE ಯಲ್ಲಿ ಕನ್ನಡ ಕಲಿಯುವುದಕ್ಕೂ, STATE ಸಿಲೆಬಸ್ಸಲ್ಲಿ ಕನ್ನಡ ಕಲಿಯು ವುದಕ್ಕೂ, ಆಯಾ ಲೆವೆಲಿನಲ್ಲಿ ಕನ್ನಡಕ್ಕೆ ಕೊಡುವ ಪ್ರಾಧಾನ್ಯ ಮತ್ತು ಮಹತ್ವದಲ್ಲಿ ಅಂತರವಿದೆ.

ICSE ಯಲ್ಲಿ ಕನ್ನಡ ಇರಲೇಬೇಕೆಂತೇನೂ ಇಲ್ಲ. ಭಾಷೆಗಳನ್ನು ಕಲಿಯುವುದಕ್ಕೆ ಆಯ್ಕೆಗಳಿರುತ್ತವೆ.  CBSE ಯಲ್ಲೂ ಹೀಗೆಯೇ ಇದೆ. ಅದರೆ ರಾಜ್ಯ ಪಠ್ಯಕ್ರಮದಲ್ಲಿ ಕನ್ನಡಕ್ಕೆ ಅಲ್ಲಿಗಿಂತ ಸ್ವಲ್ಪಮಟ್ಟಿಗಿನ ಹೆಚ್ಚು ಪ್ರಾಧಾನ್ಯ ಮತ್ತು ಮಹತ್ವವಿದೆ. ಸ್ಟೇಟ್ ಪಠ್ಯಕ್ರಮದಲ್ಲೂ ಭಾಷೆ ಕಲಿಕೆಯಲ್ಲಿ ಆಯ್ಕೆಗಳಿವೆ. ಆದರೆ ಕನ್ನಡವನ್ನು ಓದಲೇಬೇಕು. ಆದರೆ ದುರಂತವೇನೆಂದರೆ, ಕನ್ನಡ ಕಲಿಕೆ ಮತ್ತು ಬೋಧನೆಯಲ್ಲಿ ಮೊದಲಿನ ಗಾಂಭೀರ್ಯ ಇಲ್ಲವಾಗುತ್ತಿದೆ. ಹೇಗಾದರೂ ಸರಿ, ನಾಕಕ್ಷರ ಬರೆದರೆ ಸಾಕು, ಪಾಸಾಗ ಹುದು ಅಥವಾ ಪಾಸು ಮಾಡಿಬಿಡುತ್ತಾರೆಂಬ ಉಡಾಫೆ ಮತ್ತು ಉಪೇಕ್ಷೆಯ ಮನೋಭಾವವಿದೆ, ಕನ್ನಡಕ್ಕೆ ಕಂಟಕವಾಗುವ ಧೋರಣೆಯೂ, ನಿರ್ಲಕ್ಷ ವೂ, ತಾತ್ಸಾರವೂ ಇದೆ!

ಕನ್ನಡವನ್ನು ಬರೆಯಲು, ಓದಲು, ಶುದ್ಧವಾಗಿ ಮಾತಾಡಲು ಬರುವಷ್ಟನ್ನು ಕಲಿಯಬೇಕಾದ ಪ್ರಾಥಮಿಕ ಹಂತದಲ್ಲಿ ICSE  ಇಂದ CBSE ಗೆ, ಕೊನೆಗೆ ಸ್ಟೇಟ್ ಸಿಲೆಬಸ್ಸಿಗೆ ಬದಲಾಯಿಸುತ್ತ ಪ್ರಾಥಮಿಕ ಹಂತದ ವ್ಯಾಸಂಗವನ್ನು ಮುಗಿಸಿದ ಮಗುವಿಗೆ ಯಾವ ಭಾಷೆಯಲ್ಲೂ ಹಿಡಿತ ಸಿಗಲಾರದು. ಭಾಷಾ ಕಲಿಕೆಯಲ್ಲಿ ಪ್ರಗತಿಯಾಗಲಾರದು. ಹಿಡಿತ ಎಂದರೆ, ಕಥೆ, ಕಾದಂಬರಿ, ಕವನ, ವೈಚಾರಿಕ ಲೇಖನಗಳನ್ನು ಬರೆಯುವಷ್ಟರ ಮಟ್ಟಿಗಲ್ಲ. ಕೊನೆಯಪಕ್ಷ ಓದುವುದು, ಬರೆಯುವುದು, ಗ್ರಹಿಸಿ ಅರ್ಥ ಮಾಡಿಕೊಳ್ಳುವ ಕೌಶಲವನ್ನಾದರೂ ಸರಿಯಾಗಿ ಕಲಿಯದೇ ಲಕ್ಷಗಟ್ಟಲೆ ಹಣ ವ್ಯಯ ಮಾಡಿ, ಸಮಯವನ್ನು ವ್ಯರ್ಥಮಾಡಿ ಸಾಽಸುವುದಾದರೂ ಏನನ್ನು? ಭಾಷೆಯ ಮೇಲೆ ಹಿಡಿತ ಸಾಧಿಸಲು ಪ್ರಾಥಮಿಕ ಹಂತದಲ್ಲಿ ಅಷ್ಟಾಗಿ ಆಗದಿದ್ದರೂ ಪ್ರಾಕ್ಟೀಸ್ ಮಾಡಿಸುವ ಮೂಲಕ ಶಿಕ್ಷಕರು ತಿದ್ದುತ್ತಾರೆ.

ಮತ್ತೆ ಮತ್ತೆ ತಪ್ಪುಗಳನ್ನು ತಿದ್ದಿತೀಡಿ ಸರಿಮಾಡಲು ಪ್ರಯತ್ನಿಸುತ್ತಾರೆ. ಭಾಷೆ ಮತ್ತು ಬರೆಹ ಚೆನ್ನಾಗಿ ಪ್ರಗತಿಯಾದರೆ ಕೋರ್ ಸಬ್ಜೆಕ್ಟ್‌ಗಳಲ್ಲೂ ಪ್ರಗತಿಯಾಗುತ್ತದೆ. ಇಲ್ಲವಾದಲ್ಲಿ, ಉತ್ತರದ ಅಂಶಗಳು ಗೊತ್ತಿದ್ದರೂ ಬರೆಯುವುದೇ ತಪ್ಪಾದರೆ ಅಂಕಗಳು ಹೇಗೆ ಸಿಕ್ಕೀತು? ಮೇಲಾಗಿ, ಕಲಿಕೆಯ ಮೂಲಾಂಶಗಳೇ ಬರದೇ ಹೋದರೆ ಕಲಿತದ್ದು ಏನು ಎಂಬ ಪ್ರಶ್ನೆ ಹುಟ್ಟುತ್ತದೆ.

ಕಲಿಕೆಯ ಆರಂಭದ ಮಗುವಿಗೆ ತನ್ನ ಮಾತೃಭಾಷೆಯನ್ನು ಕಲಿಯಲು ಬಿಡದೆ ಇಂಗ್ಲಿಷಿನಲ್ಲಿ ಕಲಿಯಲಿ ಎಂದು ಇಂಗ್ಲಿಷ್
ಮೀಡಿಯಮ್ಮಿಗೆ ಸೇರಿಸಿದಾಕ್ಷಣ ಇಂಗ್ಲಿಷಲ್ಲಿ ಪ್ರಭುತ್ವ ಬಂದು ಹೆಚ್ಚು ಸಂಬಳ ಸಿಗುವ ದೊಡ್ಡ ಉದ್ಯೋಗ ಸಿಗುತ್ತದೆಂಬ ವ್ಯವಹಾರಿಕ ಬುದ್ಧಿ ಅಥವಾ ಕಮರ್ಷಿಯಲ್ ಮೈಂಡ್ ಹೊಂದಿರುವವರಿಗೇನು ಹೇಳೋದು? ಮಾತೃಭಾಷೆಯ ತಳಹದಿಯಿಲ್ಲದೆ ಇಂಗ್ಲಿಷೋ ಅಥವಾ ಇನ್ನಾವುದೋ ಭಾಷೆಯನ್ನು ಕಲಿಸಲು ಅಥವಾ ಕಲಿಯಲು ಸಾಧ್ಯವೇ? ನಮ್ಮದಲ್ಲದ ಇಂಗ್ಲಿಷಿನಲ್ಲೂ, ದೇಶೀ ಭಾಷೆಗಳಾದ ಸಂಸ್ಕೃತದಲ್ಲೂ, ತುಳುವಿನಲ್ಲೂ, ಕೊಂಕಣಿಯಲ್ಲೂ, ಹಿಂದಿಯಲ್ಲೂ ಮಾತಾಡುವಾಗಲೂ ಮನಸ್ಸು ಮಾತೃಭಾಷೆಯಲ್ಲಿ ತುರ್ಜುಮೆ ಮಾಡುತ್ತಿರುತ್ತದೆ.

ಯಾಕೆಂದರೆ, ನಾವೆಲ್ಲರೂ ಒಂದು ನಾಗರಿಕತೆಯಾಗಿ ಬೆಳೆದವರು. ಕಲಿಕೆಯೆಂಬುದು ಕೇವಲ ಶಾಲೆಯಿಂದ ಮಾತ್ರ ಸಿಗುವಂಥದ್ದಲ್ಲ. ನಿತ್ಯ ಬದುಕಿನ ಪ್ರತಿ ಸಂದರ್ಭದಲ್ಲೂ ಅಪರಿಚಿತರಾದವರಲ್ಲೂ ನಾವು ಮಾತಾಡುತ್ತೇವೆ. ಊರು – ಕೇರಿ ಗಳಲ್ಲಿರುವ ಕುಲಕಸುಬುಗಾರರು, ನಿರಕ್ಷರಿಗಳಾದ ನಮ್ಮ ನಮ್ಮ ಮನೆಯಾಳುಗಳ ಜತೆ ತೋಟ ಹೊಲಗಳಲ್ಲಿ ಹರಟುತ್ತೇವೆ. ಹಳ್ಳಿಗರ ನಾಲಗೆಯಲ್ಲಿ ಕುಮಾರವ್ಯಾಸ ಭಾರತವಿದೆ, ಲಕ್ಷ್ಮೀಶನ ಜೈಮಿನಿಯಿದೆ, ಕಗ್ಗವಿದೆ, ತ್ರಿಪದಿಗಳಿವೆ, ವಚನಗಳಿವೆ. ದಾಸರ ಪದಗಳಿವೆ. ಯಕ್ಷಗಾನದ ಹಾಡುಗಳಿವೆ. ಗಾದೆ – ನುಡಿಗಟ್ಟುಗಳಿವೆ. ಒಗಟುಗಳಿವೆ. ಜನಪದವನ್ನು ಸೊಂಪಾಗಿ ಹಾಡುವವರಿ ದ್ದಾರೆ. ಇವೆಲ್ಲ ಅವರಿಗೆ ಶಾಲೆಯಿಂದ ಬಂದದ್ದಲ್ಲ. ಕಿವಿಯಿಂದ ಕಿವಿಗೆ ಮಾತಿನ ಮೂಲಕ ಜ್ಞಾನವನ್ನು ಹರಡುತ್ತಿದ್ದ ದೇಶ ನಮ್ಮದ್ದಾಗಿದ್ದರಿಂದ ಅವರು ಶಾಲೆಗೇ ಹೋಗದೆ ಇವೆಲ್ಲವನ್ನೂ ಕಲಿತರು.

ಊಹಿಸಿ ನೋಡಿ: ಹತ್ತನೆಯ ಶತಮಾನದಲ್ಲಿ ಕಾಶ್ಮೀರದಲ್ಲಿ ಪ್ರಣೀತವಾದ ಧ್ವನಿ ತತ್ತ್ವಕ್ಕೆ ವಿರುದ್ಧವಾದ ಒಂದು ಮಾತನ್ನು
ಕವಿರಾಜಮಾರ್ಗಕಾರ ಹೇಳುತ್ತಾನೆ. ಧ್ವನಿಯೆಂಬು ದೊಂದಳಂಕಾರಂ ಎಂದು. ಯಾವ ಸಂಪರ್ಕ ಮಾಧ್ಯಮವೂ ಇಲ್ಲದ ಆ ಕಾಲದಲ್ಲಿ ಕವಿರಾಜಮಾರ್ಗಕಾರನಿಗೆ ಸಂಸ್ಕೃತದ ಧ್ವನಿ ತತ್ತ್ವದ ಬಗ್ಗೆ ಹೇಗೆ ಗೊತ್ತಾಯಿತು ಎಂಬುದೇ ದೊಡ್ಡ ಸೋಜಿಗ!

ಕನ್ನಡ ಒಂದು ನಿರ್ದಿಷ್ಟಭೌಗೋಳಿಕವಾದ ಭಾಷೆಯಾಗಿದ್ದರೂ ಅದು ಜಗತ್ತನ್ನು ಅರಿಯುವ ಕನ್ನಡಿಯಾಗಿತ್ತು. ಇದು ನಮ್ಮ ಕನ್ನಡದ ಪಂಚಾಂಗ. ಈ ತಳಹದಿಯ ಮೇಲೆ ಕನ್ನಡವನ್ನು ನಾವಿಂದು ಕಟ್ಟಬೇಕಾಗಿದೆ. ಕಾರ್ಪೊರೇಟ್ ಪ್ರಪಂಚದ ಸವಾಲುಗಳನ್ನು ಎದುರಿಸಿ ನಮ್ಮ ಮಕ್ಕಳು ಆಂಗ್ಲಮಾಧ್ಯಮದ ಕಲಿಕೆಯಲ್ಲಿ ತೊಡಗಿರು ವಾಗಲೂ ಕನ್ನಡವನ್ನು ದಕ್ಕಿಸಿ ಕೊಳ್ಳಬೇಕಾಗಿದೆ.

ಆದರೆ ಕನ್ನಡದ ಮೂಲಕವೇ ಇತರ ಭಾಷೆಗಳ ಜ್ಞಾನವನ್ನು ಉಣಿಸುತ್ತ, ಜ್ಞಾನದ ಹಸಿವನ್ನು ಕನ್ನಡದ ಮೂಲಕವೇ ತಣಿಸುವ
ಕಾರ್ಯವೂ ಕನ್ನಡವನ್ನು ಚೆನ್ನಾಗಿ ಬಲ್ಲ, ಇಂಗ್ಲಿಷನ್ನು ಓದಿಕೊಂಡವರಿಂದ ಆಗುತ್ತಿದೆ. ಇದು ಅತೀ ಮುಖ್ಯವಾಗಿ ಗಮನಿಸ ಬೇಕಾದ ಅಂಶ. ಇಂಗ್ಲಿಷ್ ಸೇರಿ ಇತರ ಜಾಗತಿಕ ಭಾಷೆಗಳ ಅಧ್ಯಯನದಿಂದ ಕನ್ನಡಕ್ಕೆ ಜ್ಞಾನದ ಹರಿವು ಮತ್ತು ವ್ಯಾಪ್ತಿಯೂ
ಹೆಚ್ಚಿತು. ಕನ್ನಡದ ಜ್ಞಾನ ಹೊರಗೆ ಹೋಗುವುದಕ್ಕೂ, ಒಳಗೆ ಬರುವುದಕ್ಕೂ ಕನ್ನಡವೇ ಮಾಧ್ಯಮವಾಗಿ ದಕ್ಕುವುದರಿಂದ. ಆಗ ಕನ್ನಡ ಇನ್ನಷ್ಟು ಬಲವಾಗುತ್ತದೆ. ಹಾಗೆ ಬಂದವೆಲ್ಲವೂ ಕನ್ನಡದ್ದೇ ಎಂಬಷ್ಟು ನಮ್ಮ ಮಕ್ಕಳಿಗೆ ಕನ್ನಡ ದಕ್ಕಬೇಕಿದೆ.

ಆಗ ಕನ್ನಡದ ಶ್ರೀಮಂತವಾಗುತ್ತದೆ. ಬೇಂದ್ರೆ, ಕಾರಂತ, ಕುವೆಂಪು, ಮಾಸ್ತಿ, ದೇವುಡು, ಅಡಿಗ, ಸೇಡಿಯಾಪು, ಗೋವಿಂದ ಪೈ, ಅನಾಕೃ, ದೇವುಡು, ತೀನಂಶ್ರೀ, ಬಿಎಂಶ್ರೀ, ಗಳಗನಾಥರೇ ಮುಂತಾದ ವಿದ್ವತ್ಮಹನೀಯರು ಬೆಳೆಸಿದ ಕನ್ನಡದಲ್ಲಿ ಇನ್ನು ಅವರಂಥವರು ಹುಟ್ಟಿ ಬರಲಾರರು. ಒಳ್ಳೆಯದು ಎಂಬುದು ಈಗಾಗಲೇ ಕನ್ನಡದಲ್ಲಿ ರಚನೆಯಾಗಿ ಬಿಟ್ಟಿದೆ. ಈಗ ಏನಿದ್ದರೂ ಅವುಗಳ ಓದು ಆಗಬೇಕಿದೆ. ಮರುಸೃಷ್ಟಿಸಬೇಕಿದೆ.

ಬ್ಲೇಕ್‌ನ ಮಾತು ಹೀಗಿದೆ: You never know what is enough unless you know what is more than enough  ಅಂದರೆ ಅಗತ್ಯ ಕ್ಕಿಂತ ಹೆಚ್ಚು ಗೊತ್ತಿಲ್ಲದವನಿಗೆ ಸಾಕಾಗುವಷ್ಟು ಗೊತ್ತಿರುವುದಿಲ್ಲ. ಕನ್ನಡದ ಸಾಹಿತ್ಯ ಸಂಪತ್ತು ಜಗತ್ತಿಗೆ ತಿಳಿದಿಲ್ಲವೆಂದರೆ ಅವರಿಗೆ ತಿಳಿಯಲು ಸಾಧ್ಯವಾಗಿಲ್ಲ ಎಂದೇ ಅರ್ಥ. ಹೇಗೆ ಕನ್ನಡದಲ್ಲಿ ಠಾಗೋರ್, ಬಂಕಿಮರು, ಶರತ್ ಚಂದ್ರರೇ ಮುಂತಾದ ಸ್ಕಾಲರುಗಳು ದಕ್ಕಿದ್ದಾರೋ ಹಾಗೆ ಭಾರತೀಯ ಭಾಷೆಗಳ ಸಾಹಿತ್ಯವೂ ಕನ್ನಡದಲ್ಲಿ ಯಥೇಚ್ಛವಲ್ಲ ವಾದರೂ ದಕ್ಕಿದೆ. ದಕ್ಕುತ್ತಲೂ ಇವೆ.

ಸಂಸ್ಕೃತ – ಕನ್ನಡದ್ದು ಬಿಡಲಾರದ ಬಂಧ. ಅದಿಲ್ಲದೇ ಕನ್ನಡವಿರದು! ದಾರಿದ್ರ್ಯ ಎಂದು ಗುರುತಿಸಿ ಗ್ರಹಿಸಿ ಕರೆಯಲಾಗದ ಒಂದು ಮಟ್ಟಿಗಿನ ಬಡತನ ಭಾರತದ ಎಲ್ಲೂ ಇದೆ. ಆದರೆ ಎಂದಿಗೂ ಸಾಂಸ್ಕೃತಿಕ ನೆಲೆಗಳು ಬರಿದಾಗಿಲ್ಲವಾಗಿತ್ತು. ಆದರೆ ಈ
ದಿನಮಾನಗಳಲ್ಲಿ ಸಾಂಸ್ಕೃತಿಕ ನೆಲೆಗಳಿಲ್ಲದೆ ಕನ್ನಡ ಜೀವಸ್ಸತ್ವವನ್ನು ಕಳೆದುಕೊಂಡು ನಿಜಾರ್ಥದಲ್ಲಿ ದಾರಿದ್ರ್ಯವನ್ನು ಅಪ್ಪಿಕೊಂಡಿದೆ.

ಶ್ರೀಮಂತರು ಕನ್ನಡವನ್ನು ದಕ್ಕಿಸಿಕೊಳ್ಳುವ ಗೋಜಿಗೆ ಬರಲಾರರು. ಅವರಿಗದು ಪ್ರತಿಷ್ಠೆಯ ಪ್ರಶ್ನೆ! ಅವರು ಕನ್ನಡದ ನೆಲದಲ್ಲಿ ನಿಂತು ವಿದೇಶಕ್ಕೆ ಎತ್ತರಕ್ಕೆ ಮುಖ ಮಾಡಿದವರು. ಇನ್ನು ಮಧ್ಯಮ ವರ್ಗ ಎಂಬುದು ಶ್ರೀಮಂತವಾಗುತ್ತ ಕನ್ನಡದ ಸಾಂಸ್ಕೃತಿಕ ಪ್ರಭೆಯಿಂದ ದೂರವಾಗುತ್ತಿದೆ. ಸಾಮಾನ್ಯರು ಮಾತ್ರ ಅಲ್ಪ ಸುಖಗಳಿಗಾಗಿ ಮಾರುಕಟ್ಟೆಯ ಗುಲಾಮರಾಗುತ್ತಿದ್ದಾರೆ.

ಕನ್ನಡ ಅನ್ನ ಕೊಡುವುದಾದರೆ ಅವರೂ ಕನ್ನಡವನ್ನು ಅಷ್ಟರಮಟ್ಟಿಗೆ ಉಳಿಸಿಕೊಂಡಾರು! ಇನ್ನು ವಿವಿಗಳಲ್ಲಿ ಕನ್ನಡ ಬಲವಾಗುತ್ತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಸಂಬಳಕ್ಕಾಗಿ ಕನ್ನಡವನ್ನು ಆತುಕೊಂಡವರು ಯಾವಾಗ ಬೇಕಾದರೂ ಕಳಚಿಕೊಳ್ಳಬಲ್ಲಷ್ಟು ಆಂಗ್ಲರಾಗಿದ್ದಾರೆ! ಜನಪದ ಕಲೆಗಳು ಮಾಸಿವೆ. ಹೆಚ್ಚೆಚ್ಚು ಆಧುನಿಕರಾದಂತೆ ಅವು ಮೈಲಿಗೆಯಾಗಿವೆ. ಭಾಷೆ ಭಾವವನ್ನು ಸಾಯಿಸಿದ್ದರ ಪ್ರತಿಫಲವಿದು. ಶಾಸ್ತ್ರೀಯ ಕಲೆಯಾದ ಯಕ್ಷಗಾನದಲ್ಲಿ ಕನ್ನಡ ಇನ್ನೂ ಮೈಲಿಗೆಯಾಗಲಿಲ್ಲ. ಕರಾವಳಿಯಲ್ಲಿ ಕನ್ನಡ ಜೀವಂತವಾಗಿರಲು ಕಾರಣ ಯಕ್ಷಗಾನವೆಂದರೆ ಅಚ್ಚರಿಯಾಗುತ್ತದೆ.

ಕನ್ನಡದ ಮೂಲಕವೇ ಜಗತ್ತನ್ನು ಕಾಣುವ ಕವಿರಾಜಮಾರ್ಗಕಾರನ ನಂಬಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿಯಾದರೂ ಒಂದು; ದೇಶಿ ಭಾಷೆಗಳ ಸಾಹಿತಿಗಳನ್ನು ಗುರುತಿಸಿ ಗೌರವಿಸುವ, ಇನ್ನೊಂದು; ಜಗತ್ತಿನ ಯಾವ ಭಾಷೆಯ ಸಾಹಿತಿಯನ್ನಾದರೂ ಗುರುತಿಸಿ ಗೌರವಿಸುವ – ಎರಡು ಪುರಸ್ಕಾರಗಳನ್ನು ಕೊಡುವ ಪದ್ಧತಿಯನ್ನು ಕನ್ನಡದಲ್ಲಿ ಹುಟ್ಟುಹಾಕಬೇಕಿದೆ. ಜತೆಯಲ್ಲಿ ಕನ್ನಡಕ್ಕೆ ದುಡಿವ ಕನ್ನಡಿಗರನ್ನು ಈ ಪುರಸ್ಕಾರಕ್ಕೆ ಸಲ್ಲುವಂತೆಯೂ, ಬಾಲಸಾಹಿತ್ಯವನ್ನು ಒಳಗೊಳ್ಳಿಸಿಕೊಳ್ಳುವ ದೊಡ್ಡಮಟ್ಟದ ಶಿಸ್ತು ಕನ್ನಡದಲ್ಲಿ ಆಗಬೇಕಿದೆ.

ನಮ್ಮ ಕನ್ನಡದ ಬರಹಗಾರರು, ಚಿಂತಕರು, ಸಾಹಿತಿಗಳು ಭಾರತದುದ್ದಕ್ಕೂ ಸಿಗಬೇಕಿದೆ. ಕನ್ನಡ ಸಾಹಿತ್ಯವನ್ನು ಓದಿಕೊಂಡ
ಯಾವುದೇ ಭಾರತೀಯ ಭಾಷೆಯ ವಿದ್ವಾಂಸನನ್ನು ಅನುವಾದಕನನ್ನಾಗಿ ಹೊಂದಬೇಕಿದೆ. ನಮ್ಮ ಮಕ್ಕಳು ಕನ್ನಡದ ದೇಶಿ ಭಾಷೆಗಳ ಸಂಪತ್ತನ್ನು ಎಳವೆಯ ಪಡೆಯುವಂತಾದರೆ ಕನ್ನಡ ನಮ್ಮ ಮಕ್ಕಳಿಗೆ ದಕ್ಕುತ್ತದೆ. ಅಂದಾಗ ಮಾತ್ರ ಕನ್ನಡ ಶ್ರೀಮಂತ ವಾಗುತ್ತದೆ. ಜಾಗತೀಕರಣದ ಸವಾಲನ್ನು ಎದುರಿಸಿ ಮೆಟ್ಟಿ ಗಟ್ಟಿಯಾಗಿ ನಿಲ್ಲುವುದು ಕನ್ನಡದಂಥ ಒಂದು ಭಾಷೆಗೆ ಸಾಧ್ಯವಾಗು ವುದು ಈ ಬಗೆಯ ಚಿಂತನೆಗಳಿಂದ. ಸರಕಾರದ ಭಾಷೆಯ ವಿಚಾರದಲ್ಲಿ ಜನತೆಯನ್ನು ಅಪ್ಪಬೇಕು. ಒಪ್ಪಬೇಕು.

ಕನ್ನಡವನ್ನು ಬಳಸುವುದರಲ್ಲಿ ಕನ್ನಡಿಗರ ಇರುವ ಕೀಳರಿಮೆಯಿಂದಾಗಿ, ಕಲಿಕಾ ಮಾಧ್ಯಮವಾಗಿ ಸರಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಇರುವುದರಿಂದಾಗಿ, ಹೆಚ್ಚಿನ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮವಾಗೇ ಇರುವುದರಿಂದ, ಕನ್ನಡದ ಅಭಿವೃದ್ಧಿ ಯನ್ನು ಇನ್ನೂ ಹಲವು ಸಾಧ್ಯತೆಗಳಲ್ಲಿ ಕ್ರಿಯಾಶೀಲಗೊಳಿಸದ ಸರಕಾರ ನೀತಿಗಳಿಂದಾಗಿ, ಕನ್ನಡದ ಉಳಿವಿನ ಹೋರಾಟ ಕೇವಲ ಷೋಕಿಯಾಗಿರುವುದರಿಂದ, ತಪ್ಪು ವಾಕ್ಯಪ್ರಯೋಗಗಳಿಂದಾಗಿ, ಪತ್ರಿಕೆಗಳು, ಟಿವಿ ಕೆಲವುಗಳಲ್ಲಿ ಮಾತ್ರ ಕನ್ನಡ ಉಳಿದಿರುವುದರಿಂದಾಗಿ, ಅತಿಯಾದ ವಿಷಯ ಸುಖದ ಹಂಬಲಕ್ಕೆ ಸರಿಯಾಗಿ ವಿಸ್ತಾರ ವಾಗುತ್ತಲೇ ಹೋದ ಮಾರುಕಟ್ಟೆಗಳು ಮನುಷ್ಯನ ಭೋಗ ಕೇಂದ್ರಗಳಾಗಿ ಇಂಗ್ಲಿಷ್ ಗೊತ್ತಿದ್ದವರಿಗೆ ಮಾತ್ರ ಈ ಸುಖವನ್ನು ಅನುಭವಿಸಲು ಸಾಧ್ಯ ಎಂಬುದನ್ನು ಸಾರುತ್ತಿರುವುದರಿಂದಾಗಿ, ಜ್ಞಾನಕ್ಕೆ ಪೂರಕವಾಗಿ ಇಂಗ್ಲಿಷೇ ಗತಿಯೆಂಬ ಪರಿಸ್ಥಿತಿ ನಿರ್ಮಾಣ ವಾಗಿದ್ದರಿಂದಾಗಿ, ಎಲ್ಲದಕ್ಕೂ ಕನ್ನಡ ಸಾಲದೆಂಬುದರಿಂದಾಗಿ, ಕನ್ನಡ ಮಾತ್ರ ಗೊತ್ತಿರುವುದರಿಂದ ಅನುಭವಿಸಿಬೇಕಾದ ಅವಮಾನದಿಂದಾಗಿ,  ಕೂಪ ಮಂಡೂಕ ದೃಷ್ಟಿಯಿಂದಾಗಿ, ಅನುವಾದದ ಮೂಲಕವೋ ಇತರ ಭಾಷೆಗಳ ಜ್ಞಾನವನ್ನು ಪಡೆಯಬೇಕಾಗಿ ಬಂದಾಗ ಆ ಇತರ ಭಾಷೆಗಳನ್ನು ಕಲಿತುದದರ ಪರಿಣಾಮದಿಂದಾಗಿ ಕನ್ನಡವನ್ನು ಬಳಸದೇ ಬೆಳೆಯುತ್ತಿಲ್ಲವಾಗಿದೆ.

Leave a Reply

Your email address will not be published. Required fields are marked *