Thursday, 28th November 2024

ಪರ್ಫ್ಯೂಶನ್: ಲಿವರ್‌ ಕಸಿಯಲ್ಲಿ ಕ್ರಾಂತಿ

ವೈದ್ಯ ವೈವಿಧ್ಯ

drhsmohan@gmail.com

ಪರ್ಫ್ಯೂಶನ್ ಯಂತ್ರ ವ್ಯವಸ್ಥೆಯಿಂದ ಲಿವರ್‌ನ ಅಂಶವನ್ನು ಅಥವಾ ತುಣುಕನ್ನು ಕೆಲವು ಗಂಟೆಗಳ ಕಾಲ ಜೀವಂತವಿಡುವುದಲ್ಲ, ಹಲವಾರು ದಿವಸಗಳವರೆಗೆ ಸುರಕ್ಷಿತವಾಗಿರಿಸಬಹುದು. ಹಾಗಾಗಿ ಲಿವರ್ ಕಸಿ ಶಸ್ತ್ರಕ್ರಿಯೆಯನ್ನು ತುರ್ತು ಶಸಚಿಕಿತ್ಸೆಯ ಬದಲು ಯೋಜಿತ ಶಸ್ತ್ರಕ್ರಿಯೆಯಾಗಿಸ ಬಹುದು. ಇದು ಮೊದಲಿನ ಸಾಂಪ್ರದಾಯಿಕ ಪದ್ಧತಿಯಿಂದ ಸಾಧ್ಯವಿರಲಿಲ್ಲ.

ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಒಂದು ವ್ಯಕ್ತಿಯ ಅಂಗಾಂಗಗಳನ್ನು ಹಲವು ಅಗತ್ಯ ರೋಗಿಗಳ ದೇಹಕ್ಕೆ ಕಸಿ ಮಾಡಲು ಕೊಂಡೊಯ್ದ ಉದಾಹರಣೆಗಳನ್ನು ನೀವೆಲ್ಲ ಆಗಾಗ ಕೇಳುತ್ತಿರುತ್ತೀರಿ. ಬೆಂಗಳೂರಿನಿಂದ ಚೆನ್ನೈಗೇ ಆಗಬೇಕು ಎಂದೇ ನಿಲ್ಲ. ಹಲವು ತಿಂಗಳ ಹಿಂದೆ ಮೈಸೂರಿನಿಂದ ಬೆಂಗಳೂರಿಗೆ ಹೀಗೆ ಕೊಂಡೊಯ್ದ ಘಟನೆಯೂ ನಡೆದಿತ್ತು.

ಅಂಗಾಂಗ ಕಸಿ ಒಂದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆ. ನಿರ್ದಿಷ್ಟ ಅಂಗವನ್ನು ಯಾವ ರೋಗಿಗೆ ಕಸಿ ಮಾಡಲಾಗುತ್ತದೆಯೋ ಆ ಅಂಗವು ಅವರಿಗೆ ಹಲವು ರೀತಿಗಳಲ್ಲಿ ಹೊಂದಾಣಿಕೆ ಆಗಬೇಕು. ಹಾಗೆಯೇ ಮೇಲೆ ತಿಳಿಸಿದಂತೆ ಜೀವಂತ ಅಂಗವನ್ನು ದಾನಿಯಿಂದ ರೋಗಿಗೆ ಶಸ್ತ್ರಕ್ರಿಯೆ ಮಾಡಿ ಜೋಡಿಸುವವರೆಗೆ ಅದು ಆರೋಗ್ಯಕರ ಸ್ಥಿತಿಯಲ್ಲಿರಬೇಕು. ಬಹಳ ಕಡಿಮೆ ತಾಪಮಾನದಲ್ಲಿ ಈ ಅಂಗಗಳನ್ನು ಕಾಪಾಡಿ ಇಡುವುದು ಈಗ ಅನುಸರಿಸುತ್ತಿರುವ ಕ್ರಮ. ಆದರೆ ಇದನ್ನು ನಿರ್ದಿಷ್ಟ ಸಮಯದ ಗಡುವಿನೊಳಗೆ ಮಾಡಬೇಕು. ಇಲ್ಲದಿದ್ದರೆ ಕೆಲವೊಮ್ಮೆ ಅಂಗಾಂಗಗಳ ಕೆಲವು ಅಂಶಗಳು ಹಾನಿಗೊಳ ಗಾಗಬಹುದು.

ಹಾಗಾಗಿ ದಾನ ಮಾಡಲ್ಪಟ್ಟ ಅಂಗಗಳನ್ನು ತೀರಾ ಕಡಿಮೆ ತಾಪಮಾನದಲ್ಲಿ ಇರಿಸದೇ ಬೇರೆ ರೀತಿಯಲ್ಲಿ ಕಾಪಾಡಿಕೊಳ್ಳುವ ವಿಧಾನದಲ್ಲಿ
ವಿಜ್ಞಾನಿಗಳು ಉತ್ಸುಕರಾಗಿದ್ದಾರೆ. ಅಂತಹ ಒಂದು ಪ್ರಯತ್ನವನ್ನು ಸ್ವಿಟ್ಜರ್‌ಲೆಂಡ್‌ನ ಜ್ಯೂರಿಚ್‌ನ ‘ಲಿವರ್ ಫಾರ್ ಲೈಫ್’ ಸಂಶೋಧನಾ ತಂಡವು ಹೊಸ ಉತ್ತಮ ವಿಧಾನವನ್ನು ಪ್ರಪಂಚದಲ್ಲಿಯೇ ಮೊಟ್ಟಮೊದಲ ಬಾರಿಗೆ ರೂಪಿಸಿದೆ. ಇವರು ಲಿವರ್ ಅಥವಾ ಯಕೃತ್ತನ್ನು ಜೀವಂತವಾಗಿಡಲು ‘ಪರ್ಫ್ಯೂಷನ್ ಮಷಿನ್’ ಎಂಬ ಯಂತ್ರವನ್ನು ಉಪಯೋಗಿಸಿದ್ದಾರೆ. ಹಾಗೆ ಮಾಡಿ ಅವರು ಲಿವರ್ ಅನ್ನು ಮೂರು ದಿನಗಳ ಕಾಲ ಹಾಳಾಗದಂತೆ ರಕ್ಷಿಸಿದ್ದಾರೆ.

ಹಾಗೆ ರಕ್ಷಿಸಿಟ್ಟಿದ್ದ ಲಿವರ್ ಅನ್ನು ವೈದ್ಯರು ಅರ್ಹ ರೋಗಿಗೆ ಕಸಿ ಮಾಡಿ ಒಂದು ವರ್ಷದ ನಂತರವೂ ರೋಗಿ ಈಗ ಆರೋಗ್ಯಕರನಾ ಗಿದ್ದಾನೆ ಎಂಬುದು ತೀರಾ ಆಶಾದಾಯಕ ವಿಚಾರ. ಈ ಶಸ್ತ್ರಕ್ರಿಯೆ ಮತ್ತು ವಿಧಾನದ ಸವಿವರಗಳು ನೇಚರ್ ಬಯೋಟೆಕ್ನಾಲಜಿ ಎಂಬ
ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿವೆ.

ಸಾಂಪ್ರದಾಯಿಕ ಅಂಗಾಂಗ ಕಸಿ: ಈ ಬಗೆಗೆ ಅಮೆರಿಕದಿಂದ ನಿರ್ದಿಷ್ಟ ಅಂಕಿ ಸಂಖ್ಯೆಗಳು ಲಭ್ಯವಿವೆ. ೨೦೨೧ರಲ್ಲಿ ೪೧ ಸಾವಿರ ಅಂಗಾಂಗ ಕಸಿಗಳು ಜರುಗಿವೆ. ಈ ಪಟ್ಟಿಯಲ್ಲಿ ಮೊದಲು ಬರುವ ಅಂಗ ಎಂದರೆ ಮೂತ್ರಪಿಂಡ ಅಥವಾ ಕಿಡ್ನಿ. ಜಾಸ್ತಿ ಕಸಿ ಮಾಡಲ್ಪಡುವ ಎರಡನೇ ಅಂಗವೇ ಲಿವರ್ ಅಥವಾ ಯಕೃತ್ತು. ಅಲ್ಲಿ ಪ್ರತಿ 9 ನಿಮಿಷಕ್ಕೆ ಅಂಗಾಂಗ ಕಸಿಗೆ ಅಗತ್ಯವಿರುವ ರೋಗಿಯ ನೋಂದಣಿ ಆಗುತ್ತದೆ. ಈ ಬಗೆಗೆ ಅಲ್ಲಿ ದಾಖಲಿಸುತ್ತಿರುವ ಸಂಸ್ಥೆ ‘ಯುನೈಟೆಡ್ ನೆಟ್ ವರ್ಕ್ ಫಾರ್ ಆರ್ಗನ್ ಶೇರಿಂಗ್’ – ಅದರ ಪ್ರಕಾರ ಇತ್ತೀಚೆಗೆ ತಮ್ಮ ಮರಣಾನಂತರ ಅಂಗಾಂಗಗಳನ್ನು ದಾನಮಾಡುವರ ಸಂಖ್ಯೆ ಜಾಸ್ತಿಯಾಗಿದೆ.

ಇಷ್ಟಾದರೂ ಸಹಿತ ಅಂಗಾಂಗಗಳ ಕೊರತೆ ತೀವ್ರವಾಗಿ ಇದೆ ಎಂದು ಆ ಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಅಮೆರಿಕ ದಲ್ಲಿ ಅಂಗಾಂಗ ಕಸಿ ಲಭ್ಯವಿಲ್ಲದೆ ಪ್ರತಿದಿನ 17 ಜನರು ಮರಣ ಹೊಂದುತ್ತಾರೆ ಎನ್ನಲಾಗಿದೆ. ಭಾರತದ ಕೆಲವು ಅಂಕಿಸಂಖ್ಯೆಗಳ ಬಗ್ಗೆ ಗಮನಹರಿಸೋಣ. 2019ರಲ್ಲಿ ಭಾರತದಲ್ಲಿ ಅಂಗಾಂಗ ಕಸಿ ಮಾಡುವ 550 ಕೇಂದ್ರಗಳು ಹಾಗೂ ಅಂಗಾಂಗಗಳನ್ನು ದಾನವಾಗಿ ಸ್ವೀಕರಿಸುವ 140 ಕೇಂದ್ರಗಳು ನೋಂದಾಯಿಸಲ್ಪಟ್ಟಿದ್ದವು. 8913 ಜನರಲ್ಲಿ ಕಿಡ್ನಿ ಕಸಿ, 1993 ಜನರಲ್ಲಿ ಲಿವರ್ ಕಸಿ ಮಾಡಲಾಗಿತ್ತು. ಹೆಚ್ಚಿನ ಎಲ್ಲ ಕಡೆಯಂತೆ ಭಾರತದಲ್ಲೂ ಸಹಿತ ಮೂತ್ರಪಿಂಡ ಅಥವಾ ಕಿಡ್ನಿ ಕಸಿಯೇ ಜಾಸ್ತಿ ಮಾಡಲಾಗುತ್ತದೆ.

ನಂತರ ಲಿವರ್, ಹೃದಯ, ಶ್ವಾಸಕೋಶ ಮತ್ತು ಪ್ಯಾಂಕ್ರಿಯಾಸ್ ಕಸಿಗಳು 2019ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜರುಗಿದವು. ಇದರಲ್ಲಿ ಗಮನ ಸೆಳೆಯುವ ಅಂಶ ಅಂಗಗಳನ್ನು ಹೆಚ್ಚು ದಾನ ಮಾಡಿದವರು ಮಹಿಳೆಯರು. ಹೃದಯ ದಾನ ಮಾಡಿದವರು ಶೇ.65
ಮಹಿಳೆ ಯರಾದರೆ ಪ್ಯಾಂಕ್ರಿಯಾಸ್ ದಾನ ಮಾಡಿದವರು ಶೇ.55 ಮಹಿಳೆಯರು. ಮಹಿಳೆಯರಲ್ಲಿ ತಮ್ಮ ಹತ್ತಿರದ ಸಂಬಂಧಿಗಳಿಗೆ ಅಂಗಾಂಗ ದಾನ ಮಾಡುವ ಪ್ರೇರಣೆ ಪುರುಷರಿಗಿಂತ ಜಾಸ್ತಿ ಎಂಬುದನ್ನು ಇಲ್ಲಿ ಸೂಚಿಸುತ್ತದೆ.

ಮೊದಲೇ ತಿಳಿಸಿದಂತೆ ಸಾಂಪ್ರದಾಯಿಕ ಪದ್ಧತಿಯಂತೆ ದಾನಿಯಿಂದ ತೆಗೆದ ಅಂಗವು ಬಹಳ ಕಡಿಮೆ ತಾಪಮಾನದಲ್ಲಿರಿಸಲಾಗುತ್ತದೆ. ಇದನ್ನು ತಾಂತ್ರಿಕವಾಗಿ ‘ಕೋಲ್ಡ್ ಇಸ್ಕೀಮಿಯ ಸಮಯ’ ಎನ್ನುತ್ತಾರೆ. ಬೇರೆಬೇರೆ ಅಂಗಗಳಿಗೆ ಅದು ಹಾಳಾಗದಂತೆ ಕಡಿಮೆ
ತಾಪಮಾನದಲ್ಲಿ ಇರಿಸುವ ಕೋಲ್ಡ್ ಇಸ್ಕೀಮಿಯ ಸಮಯ ಭಿನ್ನವಾಗಿದೆ. ಹೃದಯವನ್ನು 4 ರಿಂದ 6 ಗಂಟೆಯವರೆಗೆ ಹಾಳಾಗದಂತೆ ಇರಿಸಬಹುದು. ಅದಕ್ಕೆ ವ್ಯತಿರಿಕ್ತವಾಗಿ ಕಿಡ್ನಿಯನ್ನು 24 ರಿಂದ 36 ಗಂಟೆಯವರೆಗೆ ಕೆಡದಂತೆ ಇರಿಸಬಹುದು.

ಹಾಗೆಯೇ ಲಿವರ್‌ನ ಈ ಸಮಯ 8 ರಿಂದ 12 ಗಂಟೆಗಳು. ಹಿಂದಿನ ಸಂಶೋಧನೆಗಳ ಪ್ರಕಾರ ಲಿವರ್ ಅನ್ನು ಹೆಚ್ಚು ಸಮಯ ಶೀತಲೀ ಕರಿಸಿದ ವ್ಯವಸ್ಥೆಯಲ್ಲಿ ಇರಿಸಿದರೆ ಅದರ ಕಸಿ ನಿರೀಕ್ಷಿಸಿದಷ್ಟು ಸಫಲವಾಗುವುದಿಲ್ಲ ಎಂದು ಗೊತ್ತಾಗಿದೆ. ಇನ್ನೊಂದು ಸಂಶೋಧನೆಯ ಪ್ರಕಾರ ಈ ಕೋಲ್ಡ್ ಇಸ್ಕೀಮಿಯ ಸಮಯವನ್ನು ಜಾಸ್ತಿ ಮಾಡಿದರೆ ರೋಗಿಯು ಆಸ್ಪತ್ರೆಯಲ್ಲಿ ಹೆಚ್ಚು ದಿನಗಳ ಕಾಲ ಇರಬೇಕಾಗು ತ್ತದೆ.

ಪರ್ಫ್ಯೂಷನ್ ಯಂತ್ರವೆಂದರೇನು?
ಮೇಲಿನ ತೊಂದರೆಗಳನ್ನು ನಿವಾರಿಸಲು ಈ ವಿಭಾಗದ ಸಂಶೋಧಕರು ಪರ್ಪ್ಯೂಷನ್ ಯಂತ್ರಗಳ ಬಗ್ಗೆ ಆಳವಾದ ಅಧ್ಯಯನ  ನಡೆಸು ತ್ತಿದ್ದಾರೆ. ದಾನಿಗಳ ಅಂಗಗಳನ್ನು ದೇಹದ ಹೊರಗೆ ಶೇಖರಿಸಿಡಲು ಇದೊಂದು ಪರ್ಯಾಯ ಮಾರ್ಗವಾಗಿ ಉಪಯೋಗಿಸು ತ್ತಿದ್ದಾರೆ. ದೇಹದ ಹೃದಯ ಮತ್ತು ಶ್ವಾಸಕೋಶಗಳ ಕರ್ತವ್ಯದ ರೀತಿ ಇದು ಕೆಲಸ ಮಾಡುತ್ತದೆ. ಅಂದರೆ ಇದು ದೇಹದ ಹೊರಗೆ ತೆಗೆದ ಅಂಗದ ಮೇಲೆ ರಕ್ತ ಮತ್ತು ಆಮ್ಲಜನಕವನ್ನು ಹರಿಸುತ್ತದೆ.

ವೈದ್ಯರು ಹಾರ್ಮೋನುಗಳು ಮತ್ತು ಪೋಷಕಾಂಶಗಳ ಮಿಶ್ರಣವನ್ನು ಸತತವಾಗಿ ಇದರ ಮೇಲೆ ಸುರಿಯುತ್ತಿರುತ್ತಾರೆ. ಅಂದರೆ ಇದು ಮಾನವ ದೇಹದಲ್ಲಿ ಇರುವಾಗ ಕರುಳುಗಳಿಂದ ಹಾಗೂ ಪ್ಯಾಂಕ್ರಿಯಾಸ್ ನಿಂದ ನಿರ್ದಿಷ್ಟ ಅಂಗಕ್ಕೆ ಪೋಷಕಾಂಶಗಳು ಹಾಗೂ ಅಗತ್ಯ ಹಾರ್ಮೋನುಗಳು ಹೇಗೆ ಪೂರೈಕೆಯಾಗುವುದೋ ಅದೇ ರೀತಿ. ಇದರ ಮುಖ್ಯ ಸಂಶೋಧಕ ಸ್ವಿಟ್ಜರ್‌ಲೆಂಡ್‌ನ ಜೂರಿಚ್ ವಿದ್ಯಾನಿಲ ಯದ ಆಸ್ಪತ್ರೆಯ ವಿಸರಲ್ ಸರ್ಜರಿ ಮತ್ತು ಅಂಗಾಂಗ ಕಸಿ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿಯರ್- ಅಲೈನ್ ಕ್ಲೇವಿಯನ್ ಅವರ ಪ್ರಕಾರ ಈ ಪರ್ಫ್ಯೂಶನ್ ಯಂತ್ರ ವ್ಯವಸ್ಥೆಯಿಂದ ಲಿವರ್‌ನ ಅಂಶವನ್ನು ಅಥವಾ ತುಣುಕನ್ನು ಕೆಲವು ಗಂಟೆಗಳ ಕಾಲ  ಜೀವಂತವಿಡುವು ದಲ್ಲ, ಹಲವಾರು ದಿವಸಗಳವರೆಗೆ ಸುರಕ್ಷಿತವಾಗಿರಿಸಬಹುದು.

ಹಾಗಾಗಿ ಲಿರ್ವರ್ ಕಸಿ ಶಸಕ್ರಿಯೆ ಯನ್ನು ತುರ್ತು ಶಸ್ತ್ರಚಿಕಿತ್ಸೆಯ ಬದಲು ಯೋಜಿತ ಶಸ್ತ್ರಕ್ರಿಯೆಯಾಗಿ ಪರಿವರ್ತಿಸಬಹುದು – ಎಂದು
ಅವರ ಅನಿಸಿಕೆ. ಹಾಗಲ್ಲದೆ ಈ ಪರ್ಫ್ಯೂಶನ್ ಯಂತ್ರದಲ್ಲಿ ಬಹಳ ಹೊತ್ತು ಈ ಲಿವರ್‌ನ ತುಣುಕು ಇರಿಸುವುದರಿಂದ ಕಸಿಯ ಮೊದಲು
ರೋಗಿಯ ಲಿವರ್‌ಗೆ ಅಗತ್ಯವಾದ ಚಿಕಿತ್ಸೆಯನ್ನು ಆಮೂಲಾಗ್ರವಾಗಿ ಮಾಡಬಹುದು. ಈ ಪ್ರಕ್ರಿಯೆ ಮೊದಲಿನ ಸಾಂಪ್ರದಾಯಿಕ ಪದ್ಧತಿ ಯಿಂದ ಸಾಧ್ಯವಿರಲಿಲ್ಲ.

ಈ ಪರ್ಫ್ಯೂಶನ್ ಯಂತ್ರದ ಮುಖ್ಯ ಉದ್ದೇಶ – ರೋಗಿಗಳಿಗೆ ಉತ್ತಮವಾದ ಆರೋಗ್ಯವಂತ ಲಿವರ್ ತುಣುಕು ಒದಗಿಸುವುದು. ಪ್ರೊ| ಕ್ಲೇವಿನ್ ರು ಯಂತ್ರದ ಮುಂದಿನ ಸಾಧ್ಯತೆಗಳ ಬಗ್ಗೆ ಯೋಜನೆ ಹಾಕಿಕೊಂಡಿದ್ದಾರೆ. ಜಗತ್ತಿನ ಹಲವಾರು ಕೇಂದ್ರಗಳಲ್ಲಿ ಈ ರೀತಿಯ ತಾಂತ್ರಿಕತೆ ಉಪಯೋಗಿಸಿ ಬಹಳ ಕಾಲ ಈ ಯಂತ್ರದಲ್ಲಿ ಲಿವರ್ ತುಣುಕು ಇರಿಸಿ ಒದಗಿದ ಮಾಹಿತಿಗಳನ್ನು ಕಲೆಹಾಕಿ ಮಲ್ಟಿ ಸೆಂಟ್ರಿಕ್ ಕ್ಲಿನಿಕಲ್ ಟ್ರಯಲ್ ಕೈಗೊಳ್ಳುವ ಯೋಜನೆ ಇದೆ. ಹಾಗೆಯೇ ಈ ತಾಂತ್ರಿಕತೆಯನ್ನು ಸ್ವಲ್ಪ ಬದಲಾಯಿಸಿ ಲಿವರ್ ಅಲ್ಲದೆ ಬೇರೆ ಅಂಗಾಂಗಗಳ ಕಸಿಯಲ್ಲೂ ಉಪಯೋಗಿಸುವುದು.

ಅವರ ಪ್ರಕಾರ ಉಪಯೋಗಿಸುವ ಸರ್ಕೀಟ್‌ಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಹೆಚ್ಚಿನ ಎಲ್ಲ ಅಂಗಾಂಗಗಳಿಗೂ ಉಪ ಯೋಗಿಸ ಬಹುದು. ಆರಂಭದಲ್ಲಿ ಅವರು ಮೂತ್ರ ಪಿಂಡ ಅಥವಾ ಕಿಡ್ನಿ ಮತ್ತು ಗರ್ಭಕೋಶದ ಕಸಿಯಲ್ಲಿ ಇದನ್ನು ಉಪಯೋಗಿಸುವಲ್ಲಿ
ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಪಪರ್ಫ್ಯೂಷನ್ ಯಂತ್ರದ ತಾಂತ್ರಿಕತೆಯನ್ನು ಉಪಯೋಗಿಸುವುದರಿಂದ ಕಸಿ ಮಾಡಲು ಜಾಸ್ತಿ ಅಂಗಾಂಗಗಳನ್ನು ದೊರಕಿಸಬಹುದು ಎಂದು ವೈಲ್ ಕಾರ್ನೆಲ್ ಮೆಡಿಸಿನ್‌ನ ಗ್ಯಾಸ್ಟ್ರೊಎಂಟರಾಲಜಿ ಮತ್ತು ಹೆಪಟಾಲಜಿಯ
ಪ್ರೊಫೆಸರ್ ಡಾ. ರಾಬರ್ಟ್ ಎಸ್. ಬ್ರೌನ್ ಅಭಿಪ್ರಾಯ ಪಡುತ್ತಾರೆ.

ಬಹುಶಃ ನಾವು ಭವಿಷ್ಯದಲ್ಲಿ ಈ ತಾಂತ್ರಿಕತೆಯ ಜತೆಗೆ ಜೀನ್ ಚಿಕಿತ್ಸೆಯ ತಾಂತ್ರಿಕತೆ ಸೇರಿಸಿದರೆ ಕಸಿ ಮಾಡಲು ಸಾಧ್ಯವಿಲ್ಲ
ವೆಂದು ಈಗ ನಾವು ತ್ಯಜಿಸುವ ಅಂಗಾಂಗಗಳನ್ನು ಸಹಿತ ಕಸಿ ಮಾಡಬಹುದು. ಪರಿಣಾಮ ಹೆಚ್ಚೆಚ್ಚು ಕಸಿ ಶಸ್ತ್ರಕ್ರಿಯೆಗಳು ಜರುಗಿ ಹೆಚ್ಚಿನ ರೋಗಿಗಳಿಗೆ ಕಸಿ ಶಸಕ್ರಿಯೆ ಮಾಡಿಸಿಕೊಳ್ಳುವ ಅವಕಾಶ ದೊರಕುತ್ತದೆ. ಹಾಗಾಗಿ ಅಂಗಾಂಗಗಳ ಗುಣಮಟ್ಟ ಮತ್ತು ಸಂಖ್ಯೆಗಳು ಜಾಸ್ತಿಯಾಗಿ ರೋಗಿಗಳಿಗೆ ಲಭ್ಯವಾಗುತ್ತವೆ. ಆದರೆ ಇದನ್ನು ಇನ್ನೂ ಸರಿಯಾಗಿ ಅಧ್ಯಯನ ಮಾಡಿ ಸೂಕ್ತ ಮೆಥಡಾಲಜಿಗಳನ್ನು ರೂಪಿಸಬೇಕು ಎಂದು ಅವರ ಅಭಿಪ್ರಾಯ.

ಲಿವರ್ ಕಸಿಯ ಅಗತ್ಯದ ಬಗ್ಗೆ ಸ್ವಲ್ಪ ಗಮನಹರಿಸೋಣ. ಲಿವರ್ ನಮ್ಮ ದೇಹದಲ್ಲಿ ಹೊಟ್ಟೆಯ ಬಲ ಮೇಲ್ಭಾಗದಲ್ಲಿ ಇರುವ ದೊಡ್ಡ ಅಂಗ.
ಅದು ನಮ್ಮ ದೇಹದ ರಕ್ತದಲ್ಲಿನ ಹೆಚ್ಚಿನ ರಾಸಾಯನಿಕಗಳನ್ನು ನಿಯಂತ್ರಿಸುತ್ತದೆ. ಬೈಲ್ ಎಂಬ ದ್ರವವನ್ನು ಕೊನೆಯಲ್ಲಿ ಸ್ರವಿಸಿ, ಅದು ಲಿವರ್‌ನ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜಠರ ಮತ್ತು ಕರುಳಿನ ಭಾಗದ ರಕ್ತವನ್ನು ಪರಿವರ್ತಿಸಿ ವಿಭಾಗಿಸುತ್ತದೆ. ಅಲ್ಲದೆ ವಿವಿಧ ಅಂಗಗಳಿಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಪೂರೈಸುತ್ತದೆ.

ಔಷಧಗಳನ್ನು ದೇಹದ ಇತರ ಭಾಗಗಳಿಗೆ ಹಾನಿಯಾಗದಂತೆ ಜೀರ್ಣಿಸುತ್ತದೆ. ಒಟ್ಟಿನಲ್ಲಿ ಇದು ದೇಹದ 500 ಕ್ಕೂ ಹೆಚ್ಚಿನ ಕೆಲಸಗಳನ್ನು ಮಾಡುತ್ತದೆ ಎಂದು ಗುರುತಿಸಲಾಗಿದೆ. ಇಂತಹ ಪ್ರಮುಖ ಅಂಗವಾದ ಲಿವರ್ ಸರಿಯಾಗಿ ಕೆಲಸ ಮಾಡದೆ ಇರುವಾಗ ಲಿವರ್‌ನ ಕಸಿ ಅಗತ್ಯವಾಗುತ್ತದೆ. ವಿವಿಧ ಔಷಧಗಳಿಂದ ಮಾಡುವ ಚಿಕಿತ್ಸೆ ಫಲಪ್ರದ ಆಗದಿದ್ದಾಗ ಇಂತಹ ಸಂದರ್ಭ ಮತ್ತು ಅಗತ್ಯ ಬೀಳುತ್ತದೆ. ಇದನ್ನು ನಾವು ಇರ್ರಿವರ್ಸಬಲ್ ಲಿವರ್ ಫೆಲ್ಯೂರ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತೇವೆ.

ಮುಖ್ಯವಾಗಿ ಅಂತಹ ಅಗತ್ಯ – ಲಿವರ್ ಸಿರೋಸಿಸ್, ಯಾವುದೋ ಸೋಂಕಿನಿಂದ ಆಗುವ ದಿಢೀರ್ ವೈಫಲ್ಯ ಅಥವಾ ದೇಹಕ್ಕೆ ಸರಿಹೊಂದದ ಔಷಧವನ್ನು ದೀರ್ಘ ಕಾಲ ಸೇವಿಸಿದಾಗ ಹಾಗೂ ಲಿವರ್‌ನ ಕ್ಯಾನ್ಸರ್ ಹಾಗೂ ಇನ್ನೂ ಹಲವಾರು ಕಾರಣಗಳಿಂದ ಬೀಳುತ್ತದೆ.