Monday, 16th September 2024

ಬದುಕಿನ ಸಾಧ್ಯತೆಗಳ ಬಗೆಗೆ ನಮ್ಮ ಕಲ್ಪನೆ ವಿಸ್ತರಿಸಿ- ಹರವೋಣ

ಶ್ವೇತಪತ್ರ

shwethabc@gmail.com

ನಾವೆಲ್ಲ ಹುಟ್ಟುತ್ತಲೇ ಶ್ರೀಮಂತರು. ಶ್ರೀಮಂತರು, ಯಾಕೆಂದರೆ ನಮ್ಮೆಲ್ಲರಿಗಿರುವ ಅನೂಹ್ಯ, ಅಸಾಧ್ಯ ಮನಸ್ಸಿನಿಂದಾಗಿ. ನಮ್ಮೆಲ್ಲರ ಮೆದುಳಿನಲ್ಲಿರುವ 18 ಬಿಲಿಯನ್ ನರಕೋಶಗಳು ತಮ್ಮ ಕಾರ್ಯ ನಿರ್ವಹಣೆಗಾಗಿ ಕಾಯುವುದು ನಮ್ಮ ಮನಸ್ಸಿನ ಅಣತಿ ಹಾಗೂ ನಿರ್ದೇಶನವನ್ನೇ.

ಅದಕ್ಕೆ ಹೇಳುವುದು ಮನಸೇ ಮಹದೇವ ಎಂದು. ಬದುಕಲ್ಲಿ ನಮಗೇನು ಬೇಕು ಎಂಬ ಅರಿವನ್ನು ನಾವು ಸ್ಪಷ್ಟ ಪಡಿಸಿಕೊಂಡರೆ ಅದನ್ನು ಸರಿಯಾದ ಸಮಯದಲ್ಲಿ ಪಡೆಯಬಹುದು. ಸಮಸ್ಯೆ ಶುರು ಬಿಟ್ಟುಕೊಳ್ಳುವುದೇ ಇಲ್ಲಿ. ನಮ್ಮಲ್ಲಿ ಅನೇಕರಿಗೆ ತಮ್ಮ ಆಸೆ-ಆಕಾಂಕ್ಷೆಗಳ ಕುರಿತಾದ ಸ್ಪಷ್ಟ ಅರಿವಿ ರುವುದಿಲ್ಲ. ಆಲ್ರೆಡ್ ಈ ನ್ಯೂಮನ್ ಹೇಳುವಂತೆ ಎಷ್ಟೋ ಜನಕ್ಕೆ ಅವರಿಗೆ ಏನು ಬೇಕು ಎಂಬುದು ಗೊತ್ತೇ ಇರುವುದಿಲ್ಲ. ಆದರೆ ಅವರುಗಳಿಗೆ
ಬದುಕಲ್ಲಿ ಬೇಕಾದದ್ದು ಸಿಗಲೇ ಇಲ್ಲ ಎಂಬ ಭಾವ ಮಾತ್ರ ಆವರಿಸಿಕೊಂಡು ಬಿಟ್ಟಿರುತ್ತದೆ. ಗೊತ್ತಿಲ್ಲದೆ ಸಿಗಲಿಲ್ಲ ಎಂದುಕೊಳ್ಳುವುದು ಮೂರ್ಖತನ.

ನ್ಯೂಮನ್ ಮೇಲಿನ ಮಾತು ರೈತ ಹಾಗೂ ಪೈಲೆಟ್ ನಡುವಿನ ತಮಾಷೆಯ ಅಮೆರಿಕ ಮೂಲದ ಕಥೆಯೊಂದನ್ನು ನೆನಪಿಸುತ್ತದೆ. ಯುದ್ಧ ಭೂಮಿ ಯಿಂದ ನಿವೃತ್ತನಾಗಿದ್ದ ಪೈಲೆಟ್ ಒಬ್ಬ ತನ್ನ ನಿವೃತ್ತಿಯ ನಂತರ ಹೊಟ್ಟೆಪಾಡಿ ಗಾಗಿ ಹಳೆಯ ವಿಮಾನವೊಂದರಲ್ಲಿ ಜನರನ್ನು ಜಾಲಿ ರೈಡ್ ಮಾಡಿ ಸುತ್ತಿದ್ದ. ಒಂದು ಸುತ್ತಿನ ಹಾರಾಟಕ್ಕೆ ಆತ ಒಬ್ಬ ವ್ಯಕ್ತಿಯಿಂದ ಒಂದು ಡಾಲರ್ ಪಡೆಯುತ್ತಿದ್ದ. ಹೀಗಿರುವಾಗ ಒಮ್ಮೆ ರೈತನೊಬ್ಬ ಪೈಲೆಟ್ ಬಳಿ ಬಂದು ‘ನನಗೂ ಒಂದು ರೈಡ್ ಬೇಕು, ಆದರೆ ನಾನು ಒಂದು ಡಾಲರ್ ಕೊಡಲು ತಯಾರಿಲ್ಲ.

ಬದಲಾಗಿ ನಾವಿಬ್ಬರು ಯಾವುದಾದರೂ ವ್ಯಾವಹಾರಿಕ ಒಪ್ಪಂದ ಮಾಡಿಕೊಳ್ಳಬಹುದೇ?’ ಎಂದು ಕೇಳುತ್ತಾನೆ. ಒಂದು ನಿಮಿಷ ಯೋಚಿಸಿದ ಪೈಲೆಟ್, ರೈತನ ಮಾತುಗಳಿಗೆ ಷರತ್ತಿನೊಂದಿಗೆ ಒಪ್ಪಿಗೆ ಸೂಚಿಸುತ್ತಾನೆ. ‘ನಿನ್ನನ್ನು ನಾನು ಉಚಿತವಾಗಿ ಜಾಲಿ ರೈಡ್ ಮಾಡಿಸುತ್ತೇನೆ. ಆದರೆ ನೀನು ಒಂದೂ ಮಾತನ್ನು ಆಡಬಾರದು, ಚೂರೂ ಕೂಗಿಕೊಳ್ಳಬಾರದು. ಒಂದೇ ಒಂದು ಶಬ್ದವೂ ನಿನ್ನ ಬಾಯಿಂದ ಹೊರಬರದಂತೆ ನೋಡಿಕೊಳ್ಳಬೇಕು. ಅಕಸ್ಮಾತ್ ನಿನ್ನಿಂದ ಒಂದೇ ಒಂದು ಧ್ವನಿ ಹೊರ ಬಂದರೂ ನೀನು ನನಗೆ ೧೦ ಡಾಲರ್ ಅನ್ನು ಕೊಡಬೇಕಾ ಗುತ್ತದೆ.’

ಪೈಲೆಟ್‌ನ ಷರತ್ತನ್ನು ಕೂಲಂಕುಷವಾಗಿ ಕೇಳಿಸಿಕೊಂಡ ರೈತ ‘ನನ್ನ ಬಾಯಿಗೆ ಜಿಪ್ ಹಾಕಿಬಿಡುತ್ತೇನೆ. ಆದರೆ ನನ್ನ ಜತೆ ನನ್ನ ಹೆಂಡತಿಯೂ ಬರಬ ಹುದೇ?’ ಎಂದು ಕೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ಪೈಲೆಟ್ ‘ಖಂಡಿತಾ ಬರಬಹುದು, ಆಕೆಯೂ ಯಾವುದೇ ಧ್ವನಿಯನ್ನು ಹೊರಡಿಸುವ ಹಾಗಿಲ್ಲ. ಹಾಗೇನಾದರು ಹೊರಡಿಸಿದರೆ ಒಂದು ರೈಡ್‌ಗೆ ೧೦ ಡಾಲರ್ ತೆರಬೇಕಾಗುತ್ತದೆ’ ಎಂಬುದಾಗಿ ತಿಳಿಸುತ್ತಾನೆ. ಇದಕ್ಕೊಪ್ಪಿದ ರೈತ ತಾವಿಬ್ಬರೂ ಬಾಯಿಗೆ ಜಿಪ್ ಹಾಕಿಕೊಂಡು ಕೂರುವುದರಿಂದ ಈ ಡೀಲ್ ತಮಗೇನೂ ಕಷ್ಟವಾಗುವುದಿಲ್ಲವೆಂದು ಹೇಳಿ ಜಾಲಿ ರೈಡ್ ಗೆ ಸಿದ್ಧನಾಗುತ್ತಾನೆ.

ಪೈಲೆಟ್ ನಿಧಾನವಾಗಿ ವಿಮಾನವನ್ನು ಹಾರಿಸುತ್ತ ನೆಲದಿಂದ ೨೦ ಅಡಿ ಮೇಲಕ್ಕೆ ಚಿಮ್ಮಿಸುತ್ತಾನೆ. ವಿಮಾನದ ವೇಗವನ್ನು ಹೆಚ್ಚಿಸುತ್ತ ಒಮ್ಮೆ ಬಲಬದಿಗೆ ಒಮ್ಮೆ ಎಡಬದಿಗೆ ವಿಮಾನವನ್ನು ತಿರುಗಿಸುತ್ತ ಆಕಾಶದೆತ್ತರಕ್ಕೆ ವಿಮಾನ ಹಾರಿಸುತ್ತಾನೆ. ವಿಮಾನವು ಶರವೇಗದಲ್ಲಿ ಮುನ್ನುಗುತ್ತಿದ್ದರೂ ರೈತ ಒಪ್ಪಂದ ದಂತೆ ತನ್ನ ಬಾಯಿಯಿಂದ ಯಾವುದೇ ಧ್ವನಿಯನ್ನು ಹೊರಡಿಸದೇ ಕುಳಿತಿರುತ್ತಾನೆ. ಸ್ವಲ್ಪ ಸಮಯದ ಹಾರಾಟದ ನಂತರ ಸುರಕ್ಷಿತವಾಗಿ ವಿಮಾನ ವನ್ನು ಕೆಳಗೆ ಇಳಿಸುವ ಪೈಲೆಟ್ ರೈತನೆಡೆಗೆ ತಿರುಗಿ ‘ಎಂತಹ ಅದ್ಭುತ, ನನಗೆ ನಂಬಲಾಗುತ್ತಿಲ್ಲ. ವಿಮಾನ ಅಷ್ಟೆಲ್ಲ ಜೋರಾಗಿ ಹಾರಾಡುತ್ತಿದ್ದರೂ ನೀನು ಒಂದೇ ಒಂದು ಮಾತಿರಲಿ ಧ್ವನಿಯನ್ನೂ ಹೊರಡಿಸಲಿಲ್ಲ.

ಒಮ್ಮೆಯಾದರೂ ನಿನಗೆ ಏನನ್ನೂ ಹೇಳಬೇಕು ಎನಿಸಲಿಲ್ಲವೇ?’ ಎಂದು ಕೇಳುತ್ತಾನೆ. ಆಗ ರೈತ ‘ಹೌದು ನನಗೆ ಮಾತನಾಡಬೇಕೆನಿಸಿತು, ನನ್ನ ಹೆಂಡತಿ ಕೆಳಗೆ ಉರುಳಿ ಬಿದ್ದಾಗ’ ಎಂದು ಉತ್ತರಿಸುತ್ತಾನೆ. ಕಥೆಯ ತಾತ್ಪರ್ಯವಿಷ್ಟೇ ಹೆಂಡತಿ ಕೆಳಗೆ ಬಿದ್ದಾಗಲೂ ತಾನು ಮಾತನಾಡಿದರೆ ಹತ್ತು ಡಾಲರ್ ತೆರಬೇಕಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ರೈತನ ಕಣ್ಣ ಮುಂದಿದ್ದರಿಂದ ಆತ ಏನೂ ಮಾತನಾಡದೆ ಉಳಿದು ಬಿಡುತ್ತಾನೆ. ಹಾಗಂತ ಅತ್ಯಂತ ತುರ್ತು ಸಮಯದಲ್ಲಿ ನಾವು ಮಾತನಾಡಬಾರದು ಎನ್ನುವುದು ಇಲ್ಲಿ ಉದ್ದೇಶವಲ್ಲ, ಹಾಸ್ಯದ ಮೂಲಕ ಬದುಕಲ್ಲಿ ನಮಗೇನು ಬೇಕು ಎಂಬುದರ ಸ್ಪಷ್ಟ ಅರಿವನ್ನು ತಿಳಿಸುವುದಷ್ಟೇ ಇಲ್ಲಿ ಮುಖ್ಯವಾಗುವ ವಿಷಯ.

ಮನಸ್ಸಿಗೆ ಏನು ಬೇಕೋ ಅದನ್ನು ಪಡೆದುಕೊಳ್ಳುವ ಶಕ್ತಿ ಮನಸ್ಸಿಗೆ ಇರುತ್ತದೆ. ನಮ್ಮೆಲ್ಲರ ಮನಸ್ಸಿನ ಶಕ್ತಿ ಅಗಾಧವಾದದ್ದು. ನೀವೆಲ್ಲಿದ್ದೀರಿ ಎಂಬುದನ್ನು ಗುರುತಿಸುತ್ತ ನೀವೆಲ್ಲಿರಬೇಕು ಎಂಬಲ್ಲಿಯವರೆಗೂ ಮನಸ್ಸು ನಿಮ್ಮನ್ನು ದಾಟಿಸಬಲ್ಲದು. ಮನಸ್ಸಿನ ಬಗೆಗಿನ ಮತ್ತೊಂದು ಅತ್ಯಾಕರ್ಷ ವಿಷಯವೇನು
ಗೊತ್ತಾ? ಭಯಗಳಿಂದ ಉಂಟಾಗುವ ಎಲ್ಲ ಅಪ್ರಸ್ತುತತೆಗಳನ್ನು ಮನಸ್ಸಿನ ಶಕ್ತಿಯಿಂದ ಮೊಟಕುಗಳಿಸಬಹುದು. ಹಾಗಾಗೆ ನಾವೆಲ್ಲ ಸೃಜನಶೀಲ ವಿಚಾರ ಹಾಗೂ ಕೆಲಸಗಳಿಗೆ ಕನೆಕ್ಟ್ ಆಗಬೇಕು. ನಾವೇನು ಮಾಡಿಲ್ಲ ನಮ್ಮಿಂದ ಏನೂ ಸಾಧ್ಯವಿಲ್ಲ ಈ ಎಲ್ಲ, ಇಲ್ಲಗಳನ್ನು ಬದಿಸರಿಸಿದರೆ ಮುಖ್ಯವಾಗುವುದು ಮನಸ್ಸನ್ನು ನಾವು ಹೇಗೆ ತೊಡಗಿಸಿಕೊಳ್ಳುತ್ತೇವೆ ಎಂಬುದಷ್ಟೇ.

ಗುರಿಗಳನ್ನು ಪಕ್ವಗೊಳಿಸಿಕೊಳ್ಳಲು ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ, ಈ ಪ್ರಶ್ನೆಗಳು ನಿಮ್ಮೊಳಗೊಂದು ಕಿಡಿಯನ್ನು ಹೊತ್ತಿಸುತ್ತವೆ. ಗುರಿಗಳಿವೆಯಲ್ಲ ಅವು ಒಂಥರಾ ಮ್ಯಾಗ್ನೆಟ್ಟುಗಳಿದ್ದ ಹಾಗೆ. ಅವುಗಳೆಡೆಗೆ ನಮ್ಮನ್ನುಸದಾ ಆಕರ್ಷಿಸುತ್ತಲೇ ಇರುತ್ತವೆ. ನಮ್ಮ ಆಲೋ ಚನೆಗಳನ್ನು ಶುದ್ಧೀಕರಿಸುತ್ತ ನಮಗೊಂದು ದೃಢತೆಯನ್ನು ತಂದು ಕೊಡುವುದೇ ಗುರಿಗಳು. ಪ್ರತಿಯೊಂದು ಗುರಿಗಳು ಜೀವತಳೆಯಲು ಅದರದೇ ಆದ ಸಮಯವಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಒಂದು ಕೋಳಿ ಮೊಟ್ಟೆ ಒಡೆದು ಮರಿಯಾಗಲು ೨೧ ದಿನಗಳು ಸಾಕು. ಅದೇ ಒಬ್ಬ ಮನುಷ್ಯ ಜನ್ಮ ಪಡೆಯಲು ೯ ತಿಂಗಳ ಗರ್ಭಧಾರಣೆಯ ಅವಶ್ಯಕತೆ ಇದೆ. ಆನೆ ಮರಿಯೊಂದು ಜನಿಸಲು ಎರಡು ವರ್ಷಗಳು ಬೇಕಾಗುತ್ತದೆ. ಗುರಿಗಳೂ ಹಾಗೆ, ಕೆಲವೊಂದು ತತ್ ಕ್ಷಣವೇ ಸಾಧಿಸಲು ಸಾಧ್ಯವಾಗಬಹುದು. ಕೆಲವಕ್ಕೆ ಅದರದ್ದೇ ಆದ ಸಮಯ ಬೇಕಿರುತ್ತದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕನ್ನಡದ ಖ್ಯಾತ ಖಳನಟ ರವಿಶಂಕರ್ ಮಾತನಾಡುತ್ತಿದ್ದುದನ್ನು ನೋಡಿದೆ. ರವಿಶಂಕರ್ ಮೂಲತಃ ಆಂಧ್ರಪ್ರದೇಶ ದವರು. ಅಣ್ಣ ಸಾಯಿಕುಮಾರ್ ಖ್ಯಾತ ನಟ. ಅವರ ಇಡೀ ಕುಟುಂಬದ ಕಲೆಯ ವಾತಾವರಣ. ನೃತ್ಯ, ಅಭಿನಯ ಹೀಗೆ ಎಲ್ಲ ವಿಭಾಗಗಳಲ್ಲೂ ಪಳಗಿದ್ದರು. ರವಿಶಂಕರ್‌ಗೆ ನಟಿಸಲು ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲವಂತೆ. ತಮ್ಮ ಕಂಚಿನ ಕಂಠವನ್ನು ಎಲ್ಲರೂ ಹೊಗಳುತ್ತಿದ್ದರೂ ಕೇವಲ ಡಬ್ಬಿಂಗ್ ಮಾಡಿಸಲಷ್ಟೇ ಅವರಿಗೆ ಅವಕಾಶ ಸಿಗುತ್ತಿತ್ತಂತೆ. ಸತತ ೨೫ ವರ್ಷಗಳ ಕಾಯುವಿಕೆಯಿಂದ ಕನ್ನಡದ ಕೆಂಪೇಗೌಡ ಚಿತ್ರದ ಆರ್ಮುಗಂ ಪಾತ್ರ ಮತ್ತೆ ಅವರನ್ನು ಹಿಂತುರುಗಿ ನೋಡದಂತೆ ಮಾಡಿತು.

ಎರಡೂವರೆ ದಶಕಗಳ ಕಾಯುವಿಕೆಯ ಫಲ ಜಗತ್ತೇ ಅವರತ್ತ ತಿರುಗಿ ನೋಡುವಂತೆ ಮಾಡಿದೆ. ಅದಕ್ಕೆ ಅಣ್ಣಾವ್ರು ಹೇಳಿದ್ದು ‘ಆಗದು ಎಂದೂ ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂದು. ಗುರಿಯೊಂದಕ್ಕೆ ಮುಖ್ಯ ಗುಣಲಕ್ಷಣವಿದೆ. ಅದೇನೆಂದರೆ ಒಮ್ಮೆ ನಾವಂದು ಕೊಂಡ ಗುರಿಯನ್ನು ಮುಟ್ಟಿಬಿಟ್ಟರೆ ಅಲ್ಲಿಂದ ಆಚೆಗೆ ಆ ಗುರಿ ತನ್ನ ಪರ್ವ ಹಾಗೂ ಪ್ರಾಮುಖ್ಯವನ್ನು ಕಳೆದುಕೊಂಡು ಬಿಡುತ್ತದೆ. ನಿಧಾನವಾಗಿ ನಾವು ಖಿನ್ನತೆಗೆ ಜಾರಿ ಬಿಡುತ್ತೇವೆ. ಹಾಗಾಗೆ ಒಂದು ಗುರಿ ಮುಗಿಯುವ ಮುನ್ನ ಮತ್ತೊಂದೆಡೆಗೆ ನಾವು ಮುಖ ಮಾಡಿ ನಿಂತಿರಬೇಕು.

ಗುರಿಯ ಹಾದಿ ಎತ್ತರ ಹಾಗೂ ತಗ್ಗುಗಳಿಂದ ಕೂಡಿರುತ್ತದೆ. ತಗ್ಗಿನ ಹಾದಿಯಲ್ಲಿ ನಡೆಯುವಾಗ ಮತ್ತೆ ಮೇಲೆ ಜಿಗಿಯುವಂತೆ ಎತ್ತರದ ಹಾದಿಗಳು
ಕೈಚಾಚಬೇಕು. ಆಗ ಬದುಕಿನ ಅನುಭವ ಆಕರ್ಷಕವಾಗಿರುತ್ತದೆ. ವಾಲ್ಟ ಡಿಸ್ನಿಗೆ ೫೦ ವರ್ಷಗಳ ಗುರಿ ಇತ್ತಂತೆ. ಅದರ ಫಲವೇ ಫ್ಲೋರಿಡಾ, ಜಪಾನ್, ಫ್ರಾನ್ಸ್ ಇನ್ನು ಮುಂತಾದ ದೇಶಗಳಲ್ಲಿರುವ ಡಿಸ್ನಿ ಥಿಮ್ ಪಾರ್ಕ್. ಇವತ್ತಿಗೂ ಬೆಂಗಳೂರಿನ ಪ್ರತಿ ಆಟೋ ಮೇಲೆ ರಾರಾಜಿಸುವ ಶಂಕರ್‌ನಾಗ್ ತೀರಿ ಕೊಂಡು ೨೫-೩೦ ವರ್ಷಗಳ  ನಂತರವೂ ಪ್ರಸ್ತುತವಾಗುವುದು ಅವರಿಗಿದ್ದ ಗುರ ಹಾಗೂ ದೂರ ದೃಷ್ಟಿಯಿಂದ. ಗುರಿಗಳು ಎಂದಿಗೂ ಶ್ರೇಷ್ಠವೇ, ಆದರೆ ಕೆಲವೊಮ್ಮೆ ಅವುಗಳ ನಡುವೆಯೇ ಹೆಚ್ಚು-ಕಡಿಮೆ ಎಂಬ ಭಾವ ಮೂಡಿಬಿಡಬಹುದು.

ಕೆಲವೊಮ್ಮೆ ಗುರಿಗಳು ಕೂಡ ದಾರಿ ಕಳೆದುಕೊಂಡು ನಿಂತು ಬಿಡಬಹುದು. ಮರದಿಂದ ಉದುರಿ ಬಿದ್ದ ಎಲೆಗಳ ರಾಶಿಯ ಹಾಗೆ. ಆದರೆ ಬೆಳೆಯುವ  ರಕ್ಕೆ ಅಂಟಿಕೊಂಡ ಎಳೆಗಳು ಮರವನ್ನು ಜೀವಂತವಾಗಿಸುವ ಉದ್ದೇಶವನ್ನು ಹೊಂದಿರುತ್ತವೆ. ಗುರಿಗಳ ಜತೆಗೆ ಬದುಕಿಗೆ ಅರ್ಥ ತುಂಬಬಲ್ಲ, ನಮ್ಮ ಇರುವಿಕೆ ಸದಾ ನಮ್ಮಲ್ಲಿ ಇಂಬು ತುಂಬಬಲ್ಲ ಉದ್ದೇಶಗಳು ನಮ್ಮ ಬದುಕಿನ ಗುರಿಗಳಿಗೆ ದಾರಿದೀಪವಷ್ಟೇ ಅಲ್ಲ ಮಾರ್ಗದರ್ಶಿಗಳು ಆಗಿರುತ್ತವೆ.
ನಮ್ಮೆಲ್ಲರಿಗೂ ಸಾಧಿಸಲು ನೂರಾರು ಗುರಿಗಳಿರಬಹುದು. ಆದರೆ ಜೀವಕ್ಕೆ-ಜೀವನಕ್ಕೆ ಅರ್ಥ ತುಂಬಬಲ್ಲ ಉದ್ದೇಶ ಮಾತ್ರ ಯಾವಾಗಲೂ ಒಂದೇ ಆಗಿರುತ್ತದೆ.

ಬದುಕೆಂದರೆ ನಾವೇನಾಗಿದ್ದೀವಿ ಎಂಬುದರ ಒಟ್ಟು ಮೊತ್ತವಲ್ಲ ಬದಲಾಗಿ ಏನೋ ಆಗಲು ಹಂಬಲಿಸುವುದು ಎನ್ನುವ ಜೋಸ್ ಗ್ಯಾಸ್ ಸೆಟ್‌ನ ಮಾತು ಗಳಲ್ಲಿ ಇಡೀ ಬದುಕಿನ ಸಾರಾಂಶವೇ ಅಡಗಿದೆ. ಉದ್ದೇಶಗಳಿವೆಯಲ್ಲ ಮೂಲತಃ ಅವುಗಳು ಅಧ್ಯಾತ್ಮಿಕವಾದವು. ಕಾಯಕವನ್ನೇ ಕೈಲಾಸ ವಾಗಿಸಿಕೊಂಡ ಬಸವಣ್ಣ, ಚೆನ್ನಮಲ್ಲಿಕಾರ್ಜುನನಿಗೆ ಹಂಬಲಿಸಿದ ಅಕ್ಕ, ಗಿರಿಧರನ ಧ್ಯಾನದಲ್ಲಿ ಕಳೆದು ಹೋದ ಮೀರಾ, ಸಂಸ್ಥಾನಗಳನ್ನೇ ಉರುಳಿಸಿದ ಹೆಲೆನ್… ಹೀಗೆ ಒಬ್ಬೊಬ್ಬರ ಬದುಕಿನ ಉದ್ದೇಶಗಳು ಒಂದೊಂದು ತೆರನಾದವು.

ಗುರಿಯ ಬಗ್ಗೆ ಉದ್ದೇಶಗಳ ಬಗ್ಗೆ ಇಂದು ನಾವು ಹೆಚ್ಚು ಮಾತನಾಡುತ್ತೇವೆ ಏಕೆ ಗೊತ್ತೇ? ಇಂದು ನಮ್ಮೆಲ್ಲರನ್ನೂ ದುಡಿಮೆಯ ಹಂಬಲ ಆವರಿಸಿ ಕೊಂಡಿದೆ. ಮೈಮುರಿದು ದುಡಿಯುವುದು, ಅವಮಾನವನ್ನು ಎದುರಿಸುವುದು, ಬದುಕು ಕಟ್ಟಿಕೊಳ್ಳುವುದು, ಎದ್ದು ನಿಲ್ಲುವುದು ಇವೆ ನಮಗೆ ಈ ಹೊತ್ತಿಗೆ ಬೇಕಾದ ಅವಶ್ಯಕತೆಗಳು ಅಗತ್ಯತೆಗಳು. ಹಾಗಾಗಿ ಬದುಕಿನೆಡೆಗೆ ಗುರಿಗಳೆಡೆಗೆ ಉದ್ದೇಶಗಳೆಡೆಗೆ ನಮಗೊಂದು ಸ್ಪಷ್ಟತೆಯಿರಬೇಕು. ಇಲ್ಲವಾದರೆ ಮನಸ್ಸು ಖಾಲಿಗೊಳ್ಳುತ್ತದೆ, ಖಿನ್ನತೆಗೆ ಜಾರುತ್ತದೆ.

ಉರಿಯ ಪೇಟೆಗಳಿಂದ ಪತಂಗದ ಸರಕು ಮಾರದೆ ಮರಳುವುದೇ? ಎಂಬುದು ಕುಮಾರವ್ಯಾಸನ ಒಂದು ಪ್ರಸಿದ್ಧ ರೂಪಕ. ಬೆಂಕಿಪೇಟೆಗೆ ಪತಂಗ ಬಂದರೆ ಸುಡದೆ ಮರಳುವುದಿಲ್ಲ್ವ ಸುಟ್ಟರೆ ಮರಳುವ ಪ್ರಶ್ನೆಯೇ ಇಲ್ಲ ಎಂಬುದು ಇದರರ್ಥ. ಗುರಿಗಳೆಡೆಗಿನ, ಬದುಕಿನಡೆಗಿನ, ಉದ್ದೇಶಗಳೆಡೆಗಿನ ನಮ್ಮ ಅರ್ಥೈಸುವಿಕೆ ಸ್ಪಷ್ಟಗೊಂಡರೆ ಬಿಡುಗಡೆ ಸುಲಭ ಬದುಕಿನ ಜಂಜಾಟಗಳಿಂದಲೂ, ಮನಸ್ಸಿನ ಭಾರದಿಂದಲೂ.