ಇದೇ ಅಂತರಂಗ ಸುದ್ದಿ
vbhat@me.com
ಒಂದೊಂದು ಜನ್ಮದಿನಾಚರಣೆ ಬಂದಾಗಲೂ ವಯಸ್ಸಿಗೆ ಇನ್ನೊಂದು ವರ್ಷ ಸೇರಿಸಲ್ಪಡುತ್ತದೆ! ಆದರೆ ವರ್ಷ ಹೆಚ್ಚಾಗುವುದು ದೇಹಕ್ಕೆ, ಮನಸ್ಸಿಗಲ್ಲ; ಡೇಟ್
ಆಫ್ ಬರ್ಥ್‌ನ ಸರ್ಟಿಫಿಕೇಟ್‌ಗೇ ಹೊರತು ಹುರುಪು, ಲವಲವಿಕೆಗಲ್ಲ. ಆದರೂ ಒಪ್ಪಿಕೊಳ್ಳಲೇಬೇಕಲ್ಲ? ಅದು ಹಾಗಿರಲಿ, ನಮಗೆ ಐವತ್ತೂ ಚಿಲ್ಲರೆ ವರ್ಷ ವಾಯಿತು ಎಂಬುದಕ್ಕಿಂತ ಈ ವರ್ಷಗಳಲ್ಲಿ ಏನು ಮಾಡಿದೆವು ಎಂಬುದು ಮುಖ್ಯ. ಕಳೆದುಹೋದ ದಿನಗಳನ್ನು ನೆನಪಿಸಿಕೊಂಡರೆ ಏನೆಲ್ಲ ಮಾಡಬಹುದಿತ್ತು ಎಂಬ ವಿಷಾದವೂ ಉಂಟಾಗುತ್ತದೆ. ಅದು ಯಾವತ್ತೂ ಇದ್ದಿದ್ದೇ.
ಆದರೆ ಜೀವನ ಮಾತ್ರ ಅದ್ಭುತ. ಅದು ಪ್ರತಿ ಕ್ಷಣವೂ ಹೊಸ ಹೊಸ ಅನುಭವವನ್ನು ಮಾಡಿಸುತ್ತಾ ಹೋಗುತ್ತದೆ. ಎಂಥ ಬುದ್ಧಿವಂತನನ್ನೂ ಪೆಕರನನ್ನಾಗಿ ಮಾಡುತ್ತದೆ. ಮಹಾದಡ್ಡನೂ ಮೇಧಾವಿಯಂತೆ ಕಾಣಿಸಿಕೊಳ್ಳುತ್ತಾನೆ. ಅಪಾತ್ರನೂ ಪ್ರೀತಿ ಪಾತ್ರನಾಗುತ್ತಾನೆ. ಎಲ್ಲ ಬುದ್ಧಿವಂತರನ್ನು ಅಯೋಗ್ಯನಾದವನು
ಆಳುತ್ತಾನೆ. ಸಾಮಾನ್ಯರಲ್ಲಿ ಸಾಮಾನ್ಯನೂ ಅಸಾಮಾನ್ಯ ಎತ್ತರಕ್ಕೆ ಏರುತ್ತಾನೆ. ಶ್ರೀಮಂತನಾದವನು ಹೇಳ ಹೆಸರಿಲ್ಲದಂತಾಗುತ್ತಾನೆ.
ದಟ್ಟದರಿದ್ರನು ಧನವಂತನಾಗುತ್ತಾನೆ. ನಮ್ಮ ಮುಂದೆ ಹಿಮಾಲಯದೆತ್ತರಕ್ಕೆ ಏರಿದವರು ತಿಪ್ಪೆ ಗುಂಡಿಗೆ ಬಿದ್ದಿರುತ್ತಾರೆ. ಜೀವನ ನಮ್ಮನ್ನು ಎಲ್ಲೆಡೆಗೂ ಕೈಹಿಡಿದು ಕರೆದುಕೊಂಡು ಹೋಗುತ್ತದೆ. ನಡುನೀರಿನಲ್ಲಿ ಕೈಬಿಡುತ್ತದೆ. ಮುಳುಗುತ್ತಿರುವವರನ್ನು ಕೈ ಹಿಡಿದು ಎತ್ತುತ್ತದೆ. ಈ ಎಲ್ಲವುಗಳ ಮಧ್ಯೆ ನಾವು ಮಾಡಬಹುದಾದದ್ದು ಏನು? ಸ್ಟೀವ್ ಜಾಬ್ಸ್ ಹೇಳಿದಂತೆ The Only Way to do great work is to love what you do. ಅಷ್ಟೆ. ಇದಕ್ಕಿಂತ ದೊಡ್ಡ ಕರ್ಮಸಿದ್ಧಾಂತ ವಾಗಲಿ, ಜೀವನಧರ್ಮವಾಗಲಿ ಇಲ್ಲ. ಜೀವನ ಹೇಗೆ ಬರುತ್ತದೋ ಹಾಗೆ ಸ್ವೀಕರಿಸುವುದು ಬಿಟ್ಟು ಬೇರೆ ಮಾರ್ಗ ಇಲ್ಲ.
ಆದರೆ ಅದು ಹೇಗೆಯೇ ಬರಲಿ, ನಮ್ಮ ಸಂತಸ, ನೆಮ್ಮದಿ, ಸಮಾಧಾನವನ್ನು ಬಿಡಬಾರದು. I have never met a person with an easy past. ಎಲ್ಲರ ಜೀವನದಲ್ಲೂ ಒಂದು ಗುಪ್ತಗಾಮಿನಿ ಹರಿಯುತ್ತಿರುತ್ತದೆ. ಕಂಪ್ಯೂಟರ್, ಮೊಬೈಲ್‌ನ ಮೆಮರಿ ತುಂಬಿದಾಗ ಬೇಡದ ಫೈಲ್‌ಗಳನ್ನು ಡಿಲೀಟ್ ಮಾಡುವಂತೆ, ನಮ್ಮ ತಲೆಯೊಳಗಿನ ಚಿಂತೆ, ಕೆಟ್ಟ ಆಲೋಚನೆ, ದುಗುಡಗಳೆಂಬ ಫೈಲ್‌ಗಳನ್ನು ಆಗಾಗ ಡಿಲೀಟ್ ಮಾಡುತ್ತಲೇ ಇರಬೇಕು. ಈ ಜಗತ್ತಿನಲ್ಲಿ ಕಂಡಿದ್ದೆಲ್ಲ ಬೇಕು. ಎಲ್ಲವನ್ನೂ ನನ್ನದಾಗಿಸಿಕೊಳ್ಳಬೇಕು ಎಂಬ ಹಪಾಹಪಿಗೆ ಬಿದ್ದರೆ, ಅಲ್ಲಿಗೆ ಜೀವನದಲ್ಲಿ ಸಮಾಧಾನ ಎಂಬುದು ಸಿಗುವುದಿಲ್ಲ.
ಇಲ್ಲಿನ ಯಾವುದೂ ನನ್ನದಲ್ಲ. ಎಲ್ಲವೂ ಲೈಬ್ರರಿಯ ಪುಸ್ತಕಗಳಂತೆ. ಅವುಗಳನ್ನು ಓದಿ, ತನ್ನದಲ್ಲವೆಂದು ಅಲ್ಲಿಯೇ ಬಿಟ್ಟು, ಜ್ಞಾನವನ್ನು ಹೀರಿಕೊಂಡರೆ ಮನಸ್ಸು ಸದಾ ಉದ್ಯಾನವನ. ಗೊತ್ತಿರುವ ಸರಳ ಸತ್ಯ, ನಿಯಮಗಳನ್ನು ಉಲ್ಲಂಸಲು ಹೋಗಿ ಜೀವನವಿಡೀ ತೊಳಲಾಡುತ್ತೇವೆ. ಬದುಕಿನಲ್ಲಿ ಯಾವುದೂ ಸುಲಭಕ್ಕೆ ಸಿಗುವುದಿಲ್ಲ. ಸುಲಭಕ್ಕೆ ಸಿಕ್ಕಿದ್ದು, ಶಾಶ್ವತವಾಗಿ ಇರುವುದೂ ಇಲ್ಲ. ಕಷ್ಟದಂಥ ನೋವು ಇನ್ನೊಂದಿಲ್ಲ. ಆದರೆ ಆ ನೋವಿನಲ್ಲೂ ಒಂದು ಆನಂದವಿದೆ.
Difficult roads often lead us to beautiful destinations ಅನ್ನೋದು ಸುಳ್ಳಲ್ಲ.
ಭೂಮಿಯನ್ನು ಪಿಕಾಸಿಯಿಂದ ಅಗೆಯುವಾಗ ಮೊದಲ ಹೊಡೆತಕ್ಕೆ ನೀರು ಜಿನುಗುವುದಿಲ್ಲ. ಆಳ ಆಳಕ್ಕೆ ಅಗೆಯುತ್ತಲೇ ಹೋಗಬೇಕು, ನೀರು ಸಿಗುವ ತನಕ.
ಕೆಲವರಿಗೆ ಬೇಗನೆ ಸಿಗಬಹುದು, ಇನ್ನು ಕೆಲವರಿಗೆ ತಡವಾಗಿ ಸಿಗಬಹುದು, ಮತ್ತೆ ಕೆಲವರಿಗೆ ಸಿಗದೆಯೂ ಹೋಗಬಹುದು. ಇದನ್ನೇ ಅದೃಷ್ಟ ಎಂದರೂ ಪರವಾಗಿಲ್ಲ. ನಮ್ಮ ಪಾಲಿನ ಪಂಚಾಮೃತ ಯಾವುದೋ? ಆದರೆ ನೀರು ಸಿಗುವ ತನಕ ಪ್ರಯತ್ನವನ್ನಂತೂ ಬಿಡಬಾರದು.
Let it hurt. Let it bleed. Let it heal. And let it go. ಜೀವನವೇ ಹೀಗೆ. ಇಲ್ಲಿ ಎಲ್ಲವೂ ಇದೆ. ಶಾಂತ ಸಾಗರ ಉತ್ತಮ ನಾವಿಕನನ್ನು ರೂಪಿಸುವುದಿಲ್ಲ. ಬದುಕಿನ ಹಾದಿಯ ತುಂಬಾ ಮುರುಕಿಗಳು. ಸೀದಾ ರಸ್ತೆಯಲ್ಲಿ ಹೊಂಡಗಳು, ಹೊಂಡಗಳಿಲ್ಲದ ಸಪಾಟು ರಸ್ತೆಯಲ್ಲಿ ರೋಡ್ ಹಂಪ್‌ಗಳು,
ಅಲ್ಲಲ್ಲಿ ಸಿಗ್ನಲ್‌ಗಳು, ಟ್ರಾಫಿಕ ಜಾಮು. ಇವ್ಯಾವವೂ ಇಲ್ಲದಿದ್ದರೆ, ನಿಮ್ಮ ವಾಹನ ಕೆಟ್ಟು ನಿಲ್ಲಬಹುದು. ಜೀವನದಲ್ಲಿ ಅದು ಸಿಕ್ಕಿಲ್ಲ, ಇದು ಸಿಕ್ಕಿಲ್ಲ ಎಂಬುದು ದುರಂತ ಅಲ್ಲ. ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ಗಳನ್ನು ಕಳೆದುಕೊಳ್ಳುವುದು ದೊಡ್ಡ ದುರಂತ ಅಲ್ಲವೇ ಅಲ್ಲ. ಮತ್ತೊಬ್ಬರನ್ನು ಪಡೆಯಬಲ್ಲೆ ಎಂಬ ಆತ್ಮವಿಶ್ವಾಸ ಕಳೆದುಕೊಳ್ಳುವುದು ದೊಡ್ಡ ದುರಂತ. ಜೀವನದಲ್ಲಿ ತೊಂದರೆ ತಾಪತ್ರಯಗಳು ಬರುತ್ತವೆ. ಅವು ವಾಶಿಂಗ್ ಮಶೀನು ಇದ್ದ ಹಾಗೆ. ನಮ್ಮನ್ನು ತಿರುಗಿಸಿ, ಮುದ್ದೆ ಮಾಡಿ, ಕೊನೆಯಲ್ಲಿ ಶುಭ್ರಗೊಳಿಸಿ, ಒಣಗಿಸಿ, ಹೊರಗೆ ಕಳಿಸುತ್ತದೆ !
ಪಾರ್ಟಿಗೆ ಹೋಗೋದು ತಪ್ಪಲ್ಲ, ಯಾರೊಂದಿಗೆ ಅನ್ನೋದು ಮುಖ್ಯ!
ಇತ್ತೀಚಿನ ವರ್ಷಗಳಲ್ಲಿ ಈ ಪಾರ್ಟಿಗಳೆಂದರೆ ಅಲರ್ಜಿ ರೀತಿಯಾಗಿತ್ತು. ಆದರೂ ಕೆಲ ತಿಂಗಳ ಹಿಂದೆ ನಾನೊಂದು ಪಾರ್ಟಿಗೆ ಹೋಗಿದ್ದೆ. ಈ ರೀತಿಯ ಪಾರ್ಟಿಗೆ ಹೋಗದೇ ವರ್ಷಗಳೇ ಆಗಿದ್ದವು. ಬಹುತೇಕ ಪರಿಚಿತ ಮುಖಗಳು. ಆದರೆ ಕೆಲವರಿಗೆ ಪಾರ್ಟಿಗೆ ಹೋಗುವುದು ದೈನಂದಿನ ಕೆಲಸ. ವಾರದಲ್ಲಿರುವ ನಾಲ್ಕು ದಿನದಲ್ಲಿ ಹತ್ತು ಪಾರ್ಟಿಗಳಿಗೆ ಹೋಗುತ್ತಾರೆ. ಪ್ರತಿ ಪಾರ್ಟಿಗೂ ಬೇರೆ ಬೇರೆ ಡ್ರೆಸ್. ರಾಜಕಾರಣಿಗಳು ಹೇಗೆ ಮದುವೆ, ಮುಂಜಿ, ಗೃಹಪ್ರವೇಶ, ಅಂತ್ಯಕ್ರಿಯೆಯಲ್ಲಿ ಪಾಲುಗೊಳ್ಳುತ್ತಾರೋ, ಇವರು ಪಾರ್ಟಿಗಳಲ್ಲಿ ಹಾಗೆ. ರಾತ್ರಿ ಏಳರಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಪಾರ್ಟಿಯಲ್ಲಿರುತ್ತಾರೆ.
ಸುಮಾರು ೧೫ ವರ್ಷಗಳ ಹಿಂದೆ ನಾನು ಪಾರ್ಟಿಗೆ ಬಹಳ ಹೋಗುತ್ತಿದ್ದೆ. ಪಾರ್ಟಿ ಆರಂಭವಾಗುವ ಹೊತ್ತಿಗೆ ಸುದ್ದಿಮನೆ ‘ಹೊತ್ತಿ ಉರಿಯುವ ಸಮಯ’. ಹೀಗಾಗಿ ಪತ್ರಕರ್ತರಿಗೆ ಪಾರ್ಟಿ ಹೇಳಿ ಮಾಡಿಸಿದ್ದಲ್ಲ. ಆದರೂ ಪತ್ರಿಕೆಯನ್ನು ಮುದ್ರಣಕ್ಕೆ ಕಳಿಸಿ ಪಾರ್ಟಿಗೆ ಹೋಗುತ್ತಿದ್ದೆ. ಯಾವುದೇ ಪಾರ್ಟಿಯಿರಲಿ, ಸುಮಾರು ಶೇ.೬೦-೭೦ರಷ್ಟು ಮಂದಿ ಕಾಮನ್ ಅಥವಾ ರಿಪೀಟ್ ಗೆಸ್ಟ್. ಅವವೇ ಮುಖ. ಅದೇ ಡೌಲು, ಚಡಂಗ! ಪಾರ್ಟಿಗೆ ಹೋಗುವುದರ ಮುಖ್ಯ ಆಕರ್ಷಣೆಯೆಂದರೆ
ತರಹೇವಾರಿ ಜನರ ಪರಿಚಯ, ಗೆಳೆತನಕ್ಕೆ ಅವಕಾಶವಾಗುತ್ತ ದೆಂಬುದು. ಆದರೆ ಬಹುದೊಡ್ಡ ಹಾನಿ ಏನೆಂದರೆ ಸಮಯ ವ್ಯರ್ಥವಾಗುತ್ತದೆಂಬುದು. ಒಂದೊಂದು ಪಾರ್ಟಿಗೆ ಹೋದರೆ ಕನಿಷ್ಠ ಮೂರು ತಾಸು ಕಳೆದುಹೋಗುತ್ತದೆ. ಪಾರ್ಟಿಯಲ್ಲಿ ಹೆಚ್ಚಾಗಿ ಚರ್ಚೆಯಾಗುವುದು ಗಾಸಿಪ್.
ಕೆಲವರಿಗೆ ವದಂತಿ ಹಬ್ಬಿಸಲು ಇದೇ ಒಳ್ಳೆಯ ವೇದಿಕೆ. ಕೆಲವರು ಇದನ್ನೇ ಅದ್ಭುತ ‘ಜ್ಞಾನ’ ಎಂದು ಭಾವಿಸಿರುತ್ತಾರೆ. ತನ್ನ ಬಗ್ಗೆ ಬಡಾಯಿಕೊಚ್ಚಿಕೊಳ್ಳಲು ತಮ್ಮ ಆಭರಣ, ಡ್ರೆಸ್, ಕಾರು, ಅಂತಸ್ತು, ಸ್ಥಾನಮಾನ ಪ್ರದರ್ಶಿಸಲು ಇದೊಂದು ಒಳ್ಳೆಯ ಅವಕಾಶ. ಆದರೆ ಇಂತಹ ಪಾರ್ಟಿಗಳು ಬರಬರುತ್ತಾ ಬೋರಾಗಲಾ ರಂಭಿಸಿತು. ಕೃತ್ರಿಮ ಭಾವ, ಆಡಂಬರ, ಸುಳ್ಳು, ಮುಖವಾಡ, ಬ್ಯಾಗಡೆಗಳೇ ಈ ಪಾರ್ಟಿಗಳನ್ನು ಆಳುತ್ತಿವೆ ಎಂದು ಎನಿಸಲಾರಂಭಿಸಿತು. ಪಾರ್ಟಿಗಳಿಗೆ ಹೋಗಲೇಬಾರದು ಎಂದು ನಿರ್ಧರಿಸಿದೆ. ಆರಂಭದಲ್ಲಿ ಸ್ನೇಹಿತರು ಬೇಸರಿಸಿಕೊಳ್ಳುತ್ತಿದ್ದರು. ನಾನು ಯಾವುದೇ ಪಾರ್ಟಿಯಲ್ಲಿ ಕಾಣಿಸಿಕೊಳ್ಳದೇ ಇದ್ದುದರಿಂದ, ಕ್ರಮೇಣ ನನ್ನನ್ನು ಕರೆಯುವುದನ್ನೇ ಬಿಟ್ಟರು.
ಈ ಮಧ್ಯೆ, ಮೂರ್ನಾಲ್ಕು ಪಾರ್ಟಿಗಳಿಗೆ ಹೋದೆ. ಹತ್ತಾರು ಆಮಂತ್ರಣಗಳು ನಿತ್ಯ ಬರಲಾರಂಭಿಸಿದವು. ಅದೊಂಥರಾ ಸಾಂಕ್ರಾಮಿಕದಂತೆ, ಯಾವುದೇ ಪಾರ್ಟಿಗೆ ಹೋದರೂ ಒಬ್ಬನಾ ದರೂ ತಗುಲಿ ಹಾಕಿಕೊಳ್ಳುತ್ತಾನೆ. ಇಬ್ಬರಿಗೂ ಬೇಡದ ವಿಷಯ ಹಿಡಿದು ಕೊರೆಯುತ್ತಾನೆ. ನಿಮಗೆ ಇಷ್ಟವಾಗದಿದ್ದರೂ ಕೊರೆಯಿಸಿಕೊಳ್ಳಬೇಕಾಗುತ್ತದೆ. ಮನೆಗೆ ಬರುವಾಗ ತಡವಾಗುತ್ತದೆ. ಮರುದಿನ ಬೇಗನೇ ಏಳಲಾಗುವುದಿಲ್ಲ. ಒಟ್ಟಾರೆ ಕೆಟ್ಟ ಮೂಡು. ಕೆಲವರಿಗೆ ಪಾರ್ಟಿಗೆ ಹೋಗದಿದ್ದರೆ ತಾವು ಅಪ್ರಸ್ತುತರಾಗಿ ಬಿಡುತ್ತೇವೆ ಎಂಬ ಅನಿಶ್ಚಿತತೆ. ಅನೇಕರನ್ನು ಪರಿಚಯ ಮಾಡಿಕೊಂಡು ‘ನೆಟ್‌ವರ್ಕ್’ ಮಾಡಿಕೊಳ್ಳುವ ಲೆಕ್ಕಾಚಾರದ, ವ್ಯಾಪಾರಿ ಬುದ್ಧಿ , ಇನ್ನು ಕೆಲವರಿಗೆ ಪ್ರತಿ ಪರಿಚಯ ಯನ್ನು ಲಾಭದಾಯಕ ದಂಧೆ ಮಾಡಿಕೊಳ್ಳುವವರಿಗೆ ಸ್ವಲ್ಪ ಮಟ್ಟಿಗೆ ಈ ಪಾರ್ಟಿಗಳು ಸಹಾಯಕವಾಗುವುದು ನಿಜ.
ನನ್ನ ಪ್ರಕಾರ, ನೀವು ಯೋಗ್ಯರೂ, ಉಪಯುಕ್ತವೂ ಆದ ಪ್ರಭಾವಿ ವ್ಯಕ್ತಿಯಾದರೆ ನೀವು ಎಲ್ಲಿದ್ದರೂ ಜನ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ನೀವು ಇರುವಲ್ಲಿಗೇ ಬಂದು ಪರಿಚಯ, ಸ್ನೇಹ ಮಾಡಿಕೊಳ್ಳುತ್ತಾರೆ. ಪಾರ್ಟಿಗೇ ಹೋಗಬೇಕೆಂದಿಲ್ಲ. ಬಹುತೇಕ ವೇಳೆ ಈ ಪಾರ್ಟಿ ವೇಸ್ಟ್ ಆಫ್ ಟೈಮ್! ಕೆಲ ತಿಂಗಳ ಹಿಂದೆ ಹೋಗಿದ್ದ ಪಾರ್ಟಿಯಲ್ಲಿ ಒಬ್ಬರು ಪರಿಚಿತ ಕಾಮಿಡಿಯನ್ ಇದ್ದರು. ಅವರನ್ನು ಕಂಡಾಗ ವೇದಿಕೆಯಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದ ಕಾರ್ಯಕ್ರಮ ನಿರೂಪಕ ಒಂದು ಜೋಕ್ ಹೇಳುವಂತೆ ಒತ್ತಾಯಿಸಿದರು. ಕಾಮಿಡಿಯನ್ ವೇದಿಕೆಗೆ ಹೋದ. ಎಲ್ಲರೂ ಜೋರಾಗಿ ಚಪ್ಪಾಳೆ ಹೊಡೆದರು. ಆತ ಹೇಳಿದ- ‘ಕಾಮಿಡಿಯನ್‌ನು ಕಂಡಾಗ ನೀವೆಲ್ಲ ಜೋಕ್ ಹೇಳಿ ಎಂದು ಒತ್ತಾಯಿಸುತ್ತೀರಾ. ಅದೇ ರಾಜಕಾರಣಿಗಳನ್ನು ಕಂಡಾಗ ಒಂದು ಸುಳ್ಳು ಹೇಳಿ ಎಂದು ಏಕೆ ಒತ್ತಾಯಿಸುವುದಿಲ್ಲ?!’
ಎಲ್ಲರೂ ಜೋರಾಗಿ ನಕ್ಕರು.
ಇದೇ ಜೋಕನ್ನು ಇದೇ ಕಾಮಿಡಿಯನ್‌ನಿಂದ ಕಳೆದ ಹದಿನೇಳು ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ. ಇನ್ನೂ ಎಷ್ಟು ಸಲ ಕೇಳಬೇಕೋ? ಪಾರ್ಟಿಯಲ್ಲಿ ಒಂದು ಮೂಲೆ ಹಿಡಿದು, ಬರುವವರ, ಹೋಗುವವರ ಹಾವಭಾವ, ಮಾತುಕತೆಗಳನ್ನೆಲ್ಲ ಕುತೂಹಲದಿಂದ ಗಮನಿಸಬೇಕು. ಅದಕ್ಕಿಂತ ನಿಜವಾದ ಮಜಾ ಬೇರೇ
ನಿಲ್ಲ.
ಟ್ರಿಸ್ಕೆಡಕಫೋಬಿಯಾ ಅಂದರೆ!
ಜರ್ಮನಿಯ ಫ್ರಾಂಕ್ ಫರ್ಟ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ವಿಮಾನದಲ್ಲಿ ಬರುವಾಗ, ಹದಿನಾಲ್ಕನೇ ಸಾಲಿನಲ್ಲಿ ನನ್ನ ಆಸನವಿತ್ತು. ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆ ಆಸನಗಳ ಸಂಖ್ಯೆ ಬರೆದ ಸಾಲುಗಳನ್ನು ನೋಡುತ್ತಾ ಹೋಗುವಾಗ ಅಚ್ಚರಿ ಕಾದಿತ್ತು. ವಿಮಾನದಲ್ಲಿ ಹನ್ನೆರಡನೇ ಸಾಲಿತ್ತು. ಮುಂದಿನ ಸಾಲು ಹದಿನಾಲ್ಕನೇಯದು. ಮಧ್ಯದ ಅಂದರೆ, ಹದಿಮೂರನೇ ಸಾಲು ಇರಲಿಲ್ಲ. ನಾನೇ ಸರಿಯಾಗಿ ಗಮನಿಸಿರಲಿಕ್ಕಿಲ್ಲ ಎಂದು ಎರಡೆರಡು ಸಲ ನೋಡಿದೆ. ಹದಿಮೂರನೇ ಸಂಖ್ಯೆಯ ಇಡೀ ಸಾಲು ಇರಲಿಲ್ಲ. ನನ್ನ ಆಸನವೇನೋ ಸಿಕ್ಕಿತು. ಆದರೆ, ಹದಿಮೂರನೇ ಸಂಖ್ಯೆಯ ಸಾಲು ಎಗರಿ ಹೋಗಿದ್ದೇಕೆ ಎಂಬುದು ಗೊತ್ತಾಗಲಿಲ್ಲ. ಈ ಬಗ್ಗೆ ಅಲ್ಲಿಯೇ ಇದ್ದ ಗಗನಸಖಿಯನ್ನು ಕೇಳಿದೆ.
‘ಮೂಢನಂಬಿಕೆ…ಮೂಢನಂಬಿಕೆ..’ ಎಂದಳು. ನನಗೆ ತಕ್ಷಣ ಅರ್ಥವಾಗಲಿಲ್ಲ. ಆಗ ಅವಳು ’’triskaidekaphobia’ (ಟ್ರಿಸ್ಕೆಡಕಫೋಬಿಯಾ) ಎಂದಳು.
ನಾನು ಆಗ ‘ಒಹೋ ಅದಾ?’ ಎಂದೆ ಟ್ರಿಸ್ಕೆಡಕಫೋಬಿಯಾ ಅಂದರೆ ಏನು ಅಂದರೆ ನಿಮಗೆ ಈಗ ಗೊತ್ತಾಗಿರಬಹುದು. ಹದಿಮೂರನೆ ಸಂಖ್ಯೆ ಬಗ್ಗೆ ಭಯ.
ಅನೇಕರಲ್ಲಿ ಈ ಸಂಖ್ಯೆ ಅಪಶಕುನ ಎಂಬ ಭಾವನೆ ಇದೆ. ಅಷ್ಟೇ ಅಲ್ಲ, ಆ ಸಂಖ್ಯೆ ಬಗ್ಗೆ ಏನೋ ಒಂಥರಾ ವಿಚಿತ್ರ ದುಗುಡ. ಹೀಗಾಗಿ ಹದಿಮೂರನೇ ಸಂಖ್ಯೆಯನ್ನು ಅವರು Zqಟಜಿb ಮಾಡುತ್ತಾರೆ. ಈ ಸಂಖ್ಯೆಯ ಬಗ್ಗೆ ಅದೆಂಥ ಭಯ ಅಂದರೆ ಹದಿಮೂರನೇ ಸಾಲಿನ ಆಸನಗಳಲ್ಲಿ ಕುಳಿತುಕೊಳ್ಳುವುದಿಲ್ಲ.
ಅಪಘಾತವಾದರೆ ಎಂಬ ಅಂಜಿಕೆ. ಈ ಸಾಲನಲ್ಲಿ ಕುಳಿತುಕೊಳ್ಳಲು ಯಾರೂ ಬಯಸುವುದಿಲ್ಲ. ಒತ್ತಾಯ ಮಾಡಿ ಈ ಸಂಖ್ಯೆಯ ಸಾಲನ್ನು ನೀಡಿದರೆ, ಹಲವಾರು ಆಕ್ಷೇಪಿಸುತ್ತಾರೆ, ಮೂಢನಂಬಿಕೆ ಕಾರಣ ನೀಡಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಾರೆ. ಹದಿಮೂರು ನಂಬರಿನ ಸುತ್ತ ಇರುವ ಮೂಢನಂಬಿಕೆ ಸರ್ವವ್ಯಾಪಿ ಆಗಿರುವುದನ್ನು ಗಮನಿಸಿ, ತನ್ನ ಹಲವಾರು ವಿಮಾನಗಳಲ್ಲಿ ಲುಫ್ತಾನ್ಸಾ ಏರ್ ಲೈನ್ ಆ ಸಂಖ್ಯೆಯ ಸಾಲನ್ನೇ ತೆಗೆದುಬಿಟ್ಟಿದೆ. ಅದಕ್ಕೆ ಏರ್‌ಲೈನ್ಸ್ ನೀಡಿದ ಕಾರಣ ಟ್ರಿಸ್ಕೆಡಕಪೋಬಿಯಾ! ಏರ್ ಫ್ರಾನ್ಸ್ ವಿಮಾನ ಸಂಸ್ಥೆ ಸಹ ಹದಿಮೂರನೇ ಸಾಲನ್ನು ಇದೇ ಕಾರಣಕ್ಕೆ ತೆಗೆದುಹಾಕಿದೆ. ಹದಿಮೂರನೇ ಸಾಲು ಇಲ್ಲದಿರ ಬಹುದು, ನಿಜವಾದ ಅರ್ಥದಲ್ಲಿ ಹದಿನಾಲ್ಕನೇ ಸಾಲೇ ಹದಿಮೂರನೇ ಸಾಲು ಎಂಬುದನ್ನು ಮರೆಯುವಂತಿಲ್ಲ.
ಜೀವನ ಅಂದ್ರೆ ಏನು?
ಮೂಲತಃ ಅರೇಬಿಕ್ ಭಾಷೆಯಲ್ಲಿ ಬರೆದ ಈ ಸಂದೇಶವನ್ನು ಇತ್ತೀಚೆಗೆ ಸ್ನೇಹಿತರೊಬ್ಬರು ಕಳಿಸಿಕೊಟ್ಟಿದ್ದರು. ಅದು ನಿಮಗೂ ಗೊತ್ತಾಗಲಿ ಎಂದು ಕೊಡುತ್ತಿದ್ದೇನೆ.
? ತನ್ನ ಮನೆಯ ಕಸದ ಬುಟ್ಟಿಯಲ್ಲಿ ಏನನ್ನೋ ಹೆಕ್ಕುತ್ತಿದ್ದ ಬಡವನನ್ನು ನೋಡಿ ಬಾಲ್ಕನಿಯಲ್ಲಿ ನಿಂತ ವ್ಯಕ್ತಿ ಉದ್ಗರಿಸಿದಧನ್ಯವಾದಗಳು ದೇವರೇ ನಾನು ಬಡವನಲ್ಲ.
? ರಸ್ತೆಯ ಮೇಲೆ ಮೈಮೇಲೆ ಬಟ್ಟೆ ಇಲ್ಲದೆ ವಿಚಿತ್ರವಾಗಿ ಆಡುತ್ತಿದ್ದ ಹುಚ್ಚನನ್ನು ನೋಡಿ ಆ ಬಡವ ಅಂದುಕೊಂಡ ಧನ್ಯವಾದಗಳು ದೇವರೇ ನಾನು ಹುಚ್ಚನಲ್ಲ.
? ಆಂಬ್ಯುಲೆನ್ಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ರೋಗಿಯನ್ನು ನೋಡಿದ ಆ ಹುಚ್ಚ ತನ್ನ ಹೇಳಿಕೊಂಡ ಧನ್ಯವಾದಗಳು ದೇವರೇ ನಾನು ರೋಗಿಯಲ್ಲ.
? ಆಸ್ಪತ್ರೆಯಿಂದ ಹೊರತರುತ್ತಿದ್ದ ಹೆಣವನ್ನು ನೋಡಿದ ಆ ರೋಗಿ ತನ್ನ ಗೊಣಗಿಕೊಂಡ ಧನ್ಯವಾದಗಳು ದೇವರೇ, ನಾನಿನ್ನು ಸತ್ತಿಲ್ಲ.
? ಸತ್ತ ವ್ಯಕ್ತಿ ಮಾತ್ರ ದೇವರಿಗೆ ಧನ್ಯವಾದಗಳನ್ನು ಅರ್ಪಿಸಲಾರ.
? ನನ್ನಲ್ಲಿ ಉಸಿರಿರುವಾಗಲೆ ನಾನೇಕೆ ದೇವರಿಗೆ ಧನ್ಯವಾದಗಳನ್ನು ಅರ್ಪಿಸಬಾರದು. ಈ ಸುಂದರವಾದ ಜೀವನವನ್ನು ನನಗೆ ಉಡುಗೊರೆಯಾಗಿ ನೀಡಿದ್ದಕ್ಕಾಗಿ.
ಹಾಗಾದರೆ ಜೀವನ ಅಂದ್ರೆ ಏನು?
? ನೀವು ಜೀವನವನ್ನು ಅರ್ಥೈಸಿಕೊಳ್ಳಬೇಕಾದರೆ, ಅದೇನೆಂದು ತಿಳಿದುಕೊಳ್ಳಬೇಕಾದರೆ ಈ ಕೆಳಗಿನ ಮೂರುಸ್ಥಳಗಳು ಸೂಕ್ತ. ಆಸ್ಪತ್ರೆ -ಜೈಲು ಹಾಗೂ ಸ್ಮಶಾನ
? ಆಸ್ಪತ್ರೆಯಲ್ಲಿ ನಿಮಗೆ ಅರಿವಾಗುತ್ತದೆ ಆರೋಗ್ಯಕ್ಕಿಂತ ಸುಂದರವಾದ ವಸ್ತು ಜಗತ್ತಿನಲ್ಲಿ ಬೇರಾವುದೂ ಇಲ್ಲ.
? ಜೈಲಿನಲ್ಲಿ ನಿಮಗೆ ಅರಿವಾಗುತ್ತದೆ ಸ್ವಾತಂತ್ರ್ಯ ಎಷ್ಟು ಅಮೂಲ್ಯ ಎಂಬುದು.
? ಸ್ಮಶಾನದಲ್ಲಿ ಅರಿವಾಗುತ್ತದೆ ನಮ್ಮ ಜೀವನ ಎಷ್ಟೊಂದು ಅಪೂರ್ವ, ಅಮೂಲ್ಯ ಎಂದು. ಇಂದು ನಾವುನಡೆಯುತ್ತಿರುವ ನೆಲವೇ ನಾಳೆ ನಮಗೆ
ಮೇಲ್ಛಾವಣಿಯಾಗುತ್ತದೆಂದು ಸ್ಮಶಾನದಲ್ಲಿ ಮಾತ್ರ ಅರಿವಾಗಲು ಸಾಧ್ಯ.
? ಇದು ಜೀವನದ ಕಹಿ ಸತ್ಯ. ಬರುವಾಗಲೂ ಬರಿಗೈ, ಹೋಗುವಾಗಲೂ ಬರಿಗೈ. ಹಾಗಾಗಿ ಬದುಕಿರುವಷ್ಟು ದಿನ ದೇವರಿಗೆ ಶರಣಾಗಿ, ಅವನಿತ್ತ ಜೀವನದಲ್ಲಿ ಅವನ ಮೇಲೆ ನಂಬಿಕೆಯಿಟ್ಟು, ಅವನಿಗೆ ಆಭಾರಿಯಾಗಿರೋಣ.
ಒಂದು ಘಟನೆ : ಆಗ – ಈಗ
ಸುಮಾರು ನಲವತ್ತೈದು ವರ್ಷಗಳ ಹಿಂದೆ ಈ ಪ್ರಸಂಗವನ್ನು ಹೇಳಿದಾಗ ಎಲ್ಲರೂ ಬೆರಗಿನಿಂದ ಕೇಳಿ ನಕ್ಕಿದ್ದರಂತೆ. ಆದರೆ ಈಗ ಹೇಳಿದರೆ ಹೇಳಿದವರ ಪೆದ್ದುತನಕ್ಕೆ ಕನಿಕರಪಡಬಹುದು. ಹಳ್ಳಿಹೈದನೊಬ್ಬ ಮುಂಬೈಗೆ ಬಂದು ಅಲ್ಲಿನ ಬಹುಮಹಡಿ ಕಟ್ಟಡಗಳನ್ನು ಅತ್ಯಂತ ಆಶ್ಚರ್ಯದಿಂದ ಬಾಯಿ ತೆರೆದು ದಿಟ್ಟಿಸುತ್ತಿದ್ದ. ಒಂದು ಗಗನಚುಂಬಿ ಕಟ್ಟಡದಲ್ಲಿ ಲಿಫ್ಟ್ ಮೇಲೆ ಕೆಳಕ್ಕೆ ಹೋಗುತ್ತಿತ್ತು. ಇವನಿಗೆ ಬಹಳ ಕುತೂಹಲ. ಸ್ವಲ್ಪ ಹತ್ತಿರ ಹೋಗಿ ನೋಡೋಣ ಎಂದು ಸನಿಹ ಹೋದ. ಮುದುಕಿಯೊಬ್ಬಳು ಲಿಫ್ಟ್ ನಲ್ಲಿ ಮೇಲಕ್ಕೆ ಹೋದಳು. ಅದನ್ನು ಆತ ಬೆರಗಾಗಿ ನಿಂತು ನೋಡುತ್ತಿದ್ದ. ಐದು ನಿಮಿಷಗಳ ನಂತರ ಅದೇ ಲಿಫ್ಟ್ ಕೆಳಗೆ ಬಂದಿತು. ಅದರೊಳಗಿಂದ ತರುಣಿಯೊಬ್ಬಳು ಹೊರಗೆ ಬಂದಳು. ‘ಅರೇ ! ಇದರಲ್ಲಿ ಮೇಲೇರಿದ ಮುದುಕಿ ಇಷ್ಟು ಬೇಗ ತರುಣಿಯಾಗಿ ಇಳಿದು ಬಂದಳಾ?! ಏನಾಶ್ಚರ್ಯ ? ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಬರದೇ ತಪ್ಪು ಮಾಡಿದೆ’ ಎಂದು ಕೈ ಕೈ ಹೊಸಕಿಕೊಂಡ ಹಳ್ಳಿ ಹೈದ.