Vishweshwar Bhat Column: ಬೇರೆಯವರ ಜೀವನದಲ್ಲೂ ನೆಲೆಸುವುದು
ಜಪಾನಿನಲ್ಲಿ ಯಾರನ್ನೇ ಆಗಲಿ, ದಾರಿ ಕೇಳಿದರೆ, ಅವರು ಎಷ್ಟೇ ಅವಸರದಲ್ಲಿದ್ದರೂ ದಾರಿ ತೋರಿಸುವುದಷ್ಟೇ ಅಲ್ಲ, ನಾವು ಹೋಗಬೇಕೆಂದಿರುವ ತಾಣದ ತನಕವೂ ಬಂದು ಬಿಟ್ಟು ಹೋಗುತ್ತಾರೆ ಎಂಬುದು ಗೊತ್ತು. ನನ್ನ ಸ್ನೇಹಿತರು ನನಗೆ ಇನ್ನೊಂದು ಪ್ರಸಂಗವನ್ನು ಹೇಳಿ ದರು. ಅವರು ಹದಿನೈದು ದಿನಗಳ ಕಾಲ ಕಂಪನಿ ಕೆಲಸದ ನಿಮಿತ್ತ ಮೊದಲ ಬಾರಿ ಟೋಕಿ ಯೋಕ್ಕೆ ಹೋಗಿದ್ದರು


ಸಂಪಾದಕರ ಸದ್ಯಶೋಧನೆ
ಜಪಾನಿನಲ್ಲಿ ಯಾರನ್ನೇ ಆಗಲಿ, ದಾರಿ ಕೇಳಿದರೆ, ಅವರು ಎಷ್ಟೇ ಅವಸರದಲ್ಲಿದ್ದರೂ ದಾರಿ ತೋರಿಸುವುದಷ್ಟೇ ಅಲ್ಲ, ನಾವು ಹೋಗಬೇಕೆಂದಿರುವ ತಾಣದ ತನಕವೂ ಬಂದು ಬಿಟ್ಟು ಹೋಗುತ್ತಾರೆ ಎಂಬುದು ಗೊತ್ತು. ನನ್ನ ಸ್ನೇಹಿತರು ನನಗೆ ಇನ್ನೊಂದು ಪ್ರಸಂಗವನ್ನು ಹೇಳಿದರು. ಅವರು ಹದಿನೈದು ದಿನಗಳ ಕಾಲ ಕಂಪನಿ ಕೆಲಸದ ನಿಮಿತ್ತ ಮೊದಲ ಬಾರಿ ಟೋಕಿಯೋಕ್ಕೆ ಹೋಗಿದ್ದರು. ಅಲ್ಲಿಗೆ ಹೋದಾಗ, “ಓಪನ್ ರೆಸ್ಟೋರೆಂಟಿಗೆ (ಯತೈಸ್) ಹೋಗಲು ಮರೆಯಬೇಡಿ" ಎಂದು ಅವರ ಸಹೋದ್ಯೋಗಿ ಮಿತ್ರ ಹೇಳಿದ್ದನಂತೆ. ಹೀಗಾಗಿ ಅವರು ಯತೈಸ್ ರೆಸ್ಟೋರೆಂಟನ್ನು ಹುಡುಕಿಕೊಂಡು ಹೋಗಿದ್ದರು. ಅಲ್ಲಿಗೆ ಹೋದಾಗ, ಅವರಿಗೆ ಯಾವ ಆಹಾರವನ್ನು ಆರ್ಡರ್ ಮಾಡಬೇಕು ಎಂಬುದು ತಿಳಿಯಲಿಲ್ಲ.
ಕಾರಣ ಅವರು ಶುದ್ಧ ಸಸ್ಯಾಹಾರಿ. ಜೀವನದಲ್ಲಿ ಮೊಟ್ಟೆ ಅಥವಾ ಮೊಟ್ಟೆಯಿಂದ ಮಾಡಿ ದ ಖಾದ್ಯವನ್ನೂ ಅವರು ಸೇವಿಸಿದವರಲ್ಲ. ಅಲ್ಲಿನ ಮೆನು ನೋಡಿ ಅವರಿಗೆ ಮತ್ತಷ್ಟು ಗೊಂದಲವಾಯಿತು.
ಇದನ್ನೂ ಓದಿ: Vishweshwar Bhat Column: ಜಪಾನಿನಲ್ಲಿ ಒಂಟಿತನ ನೀಗಿಸಿಕೊಳ್ಳಲು ಆಲಿಂಗನ ಕೆಫೆಗಳಿಗೆ ಹೋಗಬಹುದು !
ಕಾರಣ ಇಡೀ ಮೆನು ಜಪಾನೀಸ್ ಭಾಷೆಯಲ್ಲಿತ್ತು. ಅಷ್ಟೇ ಅಲ್ಲ, ಹೋಟೆಲಿನಲ್ಲಿ ಯಾರಿ ಗೂ ಇಂಗ್ಲಿಷ್ ಬರುತ್ತಿರಲಿಲ್ಲ. ಅವರು ಕೆಲ ಹೊತ್ತು ಅಲ್ಲಿಯೇ ಇದ್ದರು. ಅಷ್ಟೊಲ್ಲಿಗೆ ಅಲ್ಲಿಗೆ ಇಬ್ಬರು ಯುವಕ-ಯುವತಿ ಬಂದರು. ಅವರಿಗೆ ಇಂಗ್ಲಿಷ್ ಬರಬಹುದು ಎಂಬ ಅವರ ನಿರೀಕ್ಷೆ ನಿಜವಾಗಿತ್ತು. ಅವರಿಬ್ಬರ ಮುಂದೆ ತಮ್ಮ ಸಮಸ್ಯೆಯನ್ನು ತೋಡಿ ಕೊಂಡರು.
ಆಗ ಅವರಿಬ್ಬರೂ ವೆಜಿಟೇರಿಯನ್ ಆಹಾರಗಳ ಹೆಸರುಗಳನ್ನು ಹೇಳಿ, ಅವುಗಳನ್ನು ತೆಗೆದುಕೊಳ್ಳಿ ಎಂದು ಹೇಳಬಹುದಿತ್ತು. ಆದರೆ ಅವರು ಅಡುಗೆ ಭಟ್ಟ (ಶೆಫ್)ನನ್ನು ಕರೆದು, ಪರಿಸ್ಥಿತಿಯನ್ನು ವಿವರಿಸಿದರು. ಆ ಅಡುಗೆಭಟ್ಟನಿಗೂ ಇಂಗ್ಲಿಷ್ ಬರುತ್ತಿರಲಿಲ್ಲ. ಆ ಯುವಕ-ಯುವತಿ, ನನ್ನ ಸ್ನೇಹಿತನ ಕೋರಿಕೆಯ ಪ್ರಕಾರ ಅವನಿಗೆ ಬೇಕಾದ ಆಹಾರವನ್ನು ಸಿದ್ಧಪಡಿಸಲು ಅಡುಗೆಭಟ್ಟನನ್ನು ಒಪ್ಪಿಸಿದರು. ಆತ ಇಪ್ಪತ್ತು ನಿಮಿಷ ಕಾಯುವಂತೆ ಹೇಳಿದ. ಆಯಿತು ಎಂದು ನನ್ನ ಸ್ನೇಹಿತರು ಕಾಯುತ್ತಾ ಕುಳಿತರು. ಆ ಯುವಕ-ಯುವತಿ ತಮ್ಮ ಊಟ ಮುಗಿಸಿದ್ದರು.
ಆದರೂ ಕುಳಿತೇ ಇದ್ದರು. ಅಷ್ಟೊತ್ತಿಗೆ ಅಲ್ಲಿಗೆ ನನ್ನ ಸ್ನೇಹಿತರು ಆರ್ಡರ್ ಮಾಡಿದ ಆಹಾರ ಬಂದಿತು. ಅದನ್ನು ಅವರು ಸುಮಾರು ಅರ್ಧ ಗಂಟೆ ಮೆಲ್ಲುತ್ತಾ ಸವಿದರು. ಅಷ್ಟು ಹೊತ್ತೂ ಅವರಿಬ್ಬರೂ ಅಲ್ಲಿಯೇ ತುಸು ದೂರದಲ್ಲಿ ಕುಳಿತಿದ್ದರು. ಅವರಿಬ್ಬರೂ ಅಲ್ಲಿ ಅವರ ಮಾತುಕತೆಯಲ್ಲಿ ನಿರತರಾಗಿದ್ದಾರೆ ಎಂದು ನನ್ನ ಸ್ನೇಹಿತರು ಭಾವಿಸಿದ್ದರು. ಇನ್ನೇನು ಹೊರಡಲಿರುವಾಗ, ಅವರಿಬ್ಬರೂ ಬಂದು “ಇನ್ನೇನಾದರೂ ಬೇಕಿತ್ತಾ? ಬೇಕಾದರೆ ಹೇಳಿ, ನಾವು ಅಡುಗೆಭಟ್ಟರಿಗೆ ಹೇಳಿ ನಿಮಗೆ ಬೇಕಾದ ಆಹಾರವನ್ನು ಸಿದ್ಧ ಪಡಿಸಿ ಕೊಡುವಂತೆ ಹೇಳುತ್ತೇವೆ" ಎಂದು ಹೇಳಿದರು.
ಅಷ್ಟೇ ಅಲ್ಲ, ಅಡುಗೆಭಟ್ಟ ನನ್ನು ಕರೆದು, “ಇವರು ಬಯಸಿದರೆ ಬೇರೇನನ್ನು ಮಾಡಿ ಕೊಡ್ತೀರಿ?" ಎಂದು ಕೇಳಿದರು. ಆದರೆ ನನ್ನ ಸ್ನೇಹಿತರಿಗೆ ಹೊಟ್ಟೆ ಭರ್ತಿಯಾಗಿತ್ತು. ಆ ಒಬ್ಬರೂ ಯುವಕ- ಯುವತಿಯರು ಅಷ್ಟರೊಳಗೆ ನಾಳೆಗೆ ಬೇಕಾದ ಉಪಾಹಾರವನ್ನು ಸಿದ್ಧಪಡಿಸುವಂತೆ ಹೇಳಿ, ನನ್ನ ಸ್ನೇಹಿತನಿಗೆ ಕೊಡುತ್ತಾ, “ನಾಳೆ ಬೆಳಗ್ಗೆ ನಿಮಗೆ ಸಮಸ್ಯೆ ಆಗಬಹುದು ಎಂದು ಭಾವಿಸಿ, ಅಡುಗೆ ಭಟ್ಟನಿಂದ ವಿಶೇಷ ಬ್ರೇಕ್ - ತಯಾರಿಸಿದ್ದೇವೆ. ನಾಳೆ ಬೆಳಗ್ಗೆ ಇದನ್ನು ಸೇವಿಸಿ. ನೀವು ಇಷ್ಟಪಡ್ತೀರಿ" ಎಂದರು. ನನ್ನ ಸ್ನೇಹಿತನ ಬಾಯಿ ಯಿಂದ ಮಾತುಗಳೇ ಹೊರಡಲಿಲ್ಲ.
ಅಡುಗೆಭಟ್ಟನನ್ನು ಪರಿಚಯಿಸಿ ಅವರು ಹೊರಡಬಹುದು ಅಥವಾ ಅವರ ಕೆಲಸದಲ್ಲಿ ಮಗ್ನರಾಗಿರಬಹುದು ಎಂಬ ನನ್ನ ಸ್ನೇಹಿತರ ಊಹೆ ಸುಳ್ಳಾಗಿತ್ತು. ಅವರಿಬ್ಬರೂ ಈತನಿ ಗಾಗಿಯೇ ಅಲ್ಲಿ ಉಳಿದಿದ್ದರು. ನನ್ನ ಸ್ನೇಹಿತ ಊಟ ಮುಗಿಸಿ, ಮರುದಿನದ ಬ್ರೇಕ್ - ತೆಗೆದು ಕೊಂಡು ಇನ್ನೇನು ಹೊರಡಬೇಕು ಎನ್ನುವಾಗ ಅವರಿಬ್ಬರೂ, “ಇದು ನಮ್ಮ ಮೊಬೈಲ್ ನಂಬರ್. ನಿಮಗೇನಾದರೂ ಸಮಸ್ಯೆ ಆದರೆ ನಮಗೆ ಫೋನ್ ಮಾಡಿ" ಎಂದು ಹೇಳಿ ಮೊಬೈಲ್ ನಂಬರ್ ಕೊಟ್ಟರು.
ನನ್ನ ಸ್ನೇಹಿತನೂ ಜಗತ್ತನ್ನು ಸುತ್ತಿದವನೇ. ಆದರೆ ಈ ರೀತಿಯ ಅನುಭವ ಅವನಿಗೆ ಯಾವ ದೇಶ ದಲ್ಲಿಯೂ ಆಗಿರಲಿಲ್ಲ. ಇದು ಜಪಾನಿನಲ್ಲಿ ಮಾತ್ರ ಕಾಣುವ ವಿಶೇಷ ಉಪಚಾರ. ‘ಬೇರೆಯವರ ಜೀವನದಲ್ಲೂ ನೆಲೆಸಬೇಕು’ ಎನ್ನುವ ಜಪಾನಿನ ಜೀವನದರ್ಶನ ಆ ಯುವಕ-ಯುವತಿಯಲ್ಲಿ ಅಕ್ಷರಶಃ ಮೂರ್ತ ರೂಪ ಪಡೆದಂತಿತ್ತು. ಜಪಾನಿಯರು ತಮ ಗಾಗಿ ಮಾತ್ರ ಜೀವಿಸುವುದಿಲ್ಲ. ಬೇರೆಯವರ ಬದುಕಿನ ಭಾಗವಾಗುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ.