Saturday, 27th July 2024

ದೇಶದ ಸಾಲದ ಮೊತ್ತ – ಏನು, ಎತ್ತ

ಶಿಶಿರಕಾಲ

ಶಿಶಿರ ಹೆಗಡೆ, ಶಿಕಾಗೋ

shishirh@gmail.com

ದೇಶಗಳ ನಡುವಿನ ಸಂಬಂಧ, ದೇಶದ ಆರ್ಥಿಕತೆ – ಈ ಕೆಲವನ್ನು ಬೇಕಾಬಿಟ್ಟಿ ಗ್ರಹಿಸಿ, ವಿಶ್ಲೇಷಿಸಿ ಉದ್ದುದ್ದ ಭಾಷಣ ಬಿಗಿಯುವ ಪ್ರಚಂಡ ರಾಜಕೀಯ ಕುಪಂಡಿತರು ಮಾಧ್ಯಮದಲ್ಲಿ, ಫೇಸ್ ಬುಕ್, ಯೂಟ್ಯೂಬ್, ಕ್ಲಬ್‌ಹೌಸ್ ಗಳಲ್ಲಿ ತುಂಬಿಹೋಗಿದ್ದಾರೆ.

ಸತ್ಯದ ತಲೆ ಮೇಲೆ ಹೊಡೆದಂತೆ ವಿವರಣೆ ಕೊಟ್ಟು ಇದು ಹೀಗೆಯೇ ಎಂದು ಯಾವುದೇ ಸಾಮಾಜಿಕ ಕಳಕಳಿಯಿಲ್ಲದೆ ಒಂದು ನೆರೇಷನ್‌ಅನ್ನು ಸಮಾಜದ ಮೇಲೆ ಎಸೆದು ಬಿಡುವುದು ಈಗ ಜಾಸ್ತಿಯಾಗಿದೆ. ಇವರೆಲ್ಲ ಮೊದಲೂ ಇದ್ದರು – ಈಗ ಇಂಟರ್ನೆಟ್ ಸಾಧ್ಯತೆಗಳಿಂದ ಇವರಿಗೆಲ್ಲ ಹಿಂದಿಲ್ಲದ ವೇದಿಕೆ ಸಿಕ್ಕಿದೆ. ಇಂಥವರು ಎತ್ತಿಕೊಳ್ಳುವ ಒಂದು ವಿಷಯ ದೇಶದ ಸಾಲ. ಸಾಲವನ್ನು ವಿಲನ್ ಎಂದೇ ಪರಿಗಣಿಸುವ ಸಮಾಜ ನಮ್ಮದು. ಹೀಗಿರುವಾಗ ದೇಶದ ಸಾಲದ ಮೊತ್ತ ಹೆಚ್ಚಿದೆ, ಸಾಲ ಆ ಕಾಲದಲ್ಲಿ ಇಷ್ಟಿತ್ತು, ಇವರ ಆಡಳಿತ ಕಾಲದಲ್ಲಿ ಇಷ್ಟಾಯಿತು ಎಂದೆಲ್ಲ ಒಂದಿಡೀ ಆಡಳಿತವನ್ನೇ ಒಂದೇ
ಆಯಾಮದಿಂದ ವಿಶ್ಲೇಷಿಸುವುದಿದೆ.

ಅಷ್ಟಕ್ಕೂ ಆರ್ಥಿಕತೆಗೆ ಸಾಲ ಮಾಪಕವೇ? ಅಮೆರಿಕವನ್ನೇ ಉದಾಹರಣೆ ತೆಗೆದ್ಕೊಳ್ಳೋಣ. ಅಮೆರಿಕದ ಬಾಹ್ಯ ಸಾಲ ಒಟ್ಟು 30 ಟ್ರಿಲಿಯನ್ ಡಾಲರ್. ಇದೊಂದೇ ಸಂಖ್ಯೆಯನ್ನು ಹಿಡಿದು ನೋಡಿದರೆ ಅಮೆರಿಕಾ ಸಾಲದಲ್ಲಿ ಅಗ್ರಗಣ್ಯ. ಹಾಗಾದರೆ ಅಮೆರಿಕಾ ಅತ್ಯಂತ ಕಳಪೆ ಆರ್ಥಿಕತೆಯನ್ನು ಹೊಂದಿದ ದೇಶವೆಂದೇ ಕರೆಯಬೇಕು – ಆದರೆ ಅದಕ್ಕೆ ವಿರುದ್ಧವಾಗಿ ಅಮೆರಿಕಾ ಜಗತ್ತಿನ ಬಲಿಷ್ಠ ಆರ್ಥಿಕತೆ. ಹಾಗಾದರೆ ದೇಶದ ಸಾಲ ಎನ್ನುವುದರ ಅಸಲಿಯತ್ತು ಏನು? ಒಂದು ದೇಶ ತನ್ನೆಲ್ಲ ಸಾಲವನ್ನು ತೀರಿಸಿಬಿಟ್ಟರೆ ಅದುವೇ ಬಲಿಷ್ಠವೆಂದಾಗುತ್ತದೆಯೇ? ಸಾಲವೆಂದರೆ ಏನು? ತನಗೆ ಬೇಕಾದ ಹಣವನ್ನು ಬಳಕೆಗೆ ಎರವಲು ಪಡೆಯುವುದು ಮತ್ತು ನಂಬಿಕೆಯಿಂದ ಪಡೆದ ಹಣಕ್ಕೆ ಸಮಯಕ್ಕನುಗುಣವಾಗಿ ಇಂತಿಷ್ಟು ಎಂದು ಸೇರಿಸಿ ವಾಪಾಸ್ ಕೊಡುವುದು – ಅಲ್ಲವೇ? ಇದನ್ನೇ ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಸಾಲ ಕೊಡುವವನು ನಂಬಿಕೆಯಿಂದ ತನ್ನ ಹಣವನ್ನು ಇನ್ನೊಬ್ಬನಲ್ಲಿ  ಕೊಟ್ಟಿರು ವುದು.

ಹಾಗೇ ಕೊಡುವಾಗ ನಂಬಿಕೆ ಜೀವಂತವಾಗಿರುವವರೆಗೆ ಹಣ ಕೊಟ್ಟವನು ಒಂದು ರೀತಿಯಲ್ಲಿ ಸೇಫ್ ಡೆಪಾಸಿಟ್ ಮಾಡಿದಂತೆ. ಇಲ್ಲಿ ಸಾಲ ಒಬ್ಬ ಪಡೆದಿದ್ದಾನೆ ಎಂದರೆ ಆತ ನಂಬಿಕೆಗೆ ಯೋಗ್ಯವೆಂದಾಯಿತು (ಮಲ್ಯ ಸಾಹೇಬ್ರನ್ನು ಈಗ ನೆನಪಿಸಿಕೊಳ್ಳಬಾರದು). ಎಂದರೆ ಹೆಚ್ಚು ಸಾಲ ಪಡೆದವನು ಹೆಚ್ಚಿಗೆ ಯೋಗ್ಯ ಎನ್ನುವುದಾಯಿತು. ಇಲ್ಲಿ ಕೇವಲ ಸಾಲದ ಮೊತ್ತವೇನೆಂದಷ್ಟೇ ಮಾಪಕವಾಗಿ ನೋಡುವಂತಿಲ್ಲ. ಗೂಡಂಗಡಿಯವನ ಸಾವಿರ ರುಪಾಯಿ ಸಾಲವನ್ನು, ಅಂಬಾನಿಯ ಸಾವಿರ ಕೋಟಿ ಸಾಲವನ್ನು ಒಟ್ಟಿಗೆ ತೂಗುವಂತಿಲ್ಲ. ಹಾಗೆ ಹೋಲಿಸಿದರೆ ಗೂಡಂಗಡಿಯವನೇ ಉತ್ತಮ ವ್ಯವಹಾರಸ್ಥ ಎಂದತಾಗುತ್ತದೆ. ಅಂತೆಯೇ ದೇಶಗಳ ಸಾಲ.

ದೇಶದ ಸಾಲವೆಂದರೆ ಏನು? ಅದರಲ್ಲಿ ಎರಡು ಭಾಗ. ಆಂತರಿಕ ಸಾಲ ಮತ್ತು ಬಾಹ್ಯ ಸಾಲ. ದೇಶವೊಂದು ಅನ್ಯರಿಂದ ಹಣವನ್ನು ಸಾಲವಾಗಿ ಪಡೆಯುವುದು ಬಾಹ್ಯ ಸಾಲವಾದರೆ ಇನ್ನೊಂದು ದೇಶದ – ಸರಕಾರ ಅಲ್ಲಿನ ಜನರಿಂದ ಎತ್ತುವ ಸಾಲ ಆಂತರಿಕ ಸಾಲ. ನಾವು ಬ್ಯಾಂಕಿನಲ್ಲಿಟ್ಟ ಹಣ ಒಂದರ್ಥದಲ್ಲಿ ಸರಕಾರಕ್ಕೆ ಸಾಲ ಕೊಟ್ಟಂತೆ. ದೇಶ ಇನ್ನೊಂದು ದೇಶಕ್ಕೆ ಬಾಂಡ್‌ಗಳನ್ನು ಕೊಟ್ಟು, ಎಂದರೆ ಪತ್ರದಲ್ಲಿ ತಾನು ತೀರಿಸುತ್ತೇನೆ ಎಂದು ಬರೆದುಕೊಟ್ಟು ಪಡೆಯುವ ಸಾಲ ಬಾಹ್ಯ. ಇವೆರಡರ ಒಟ್ಟು ಮೊತ್ತವೇ ದೇಶದ ಒಟ್ಟೂ ಸಾಲ. ದೇಶವೊಂದಕ್ಕೆ ತೀರಿಸಲು ತಾಕತ್ತಿದೆ ಎಂದರೆ ಅದಕ್ಕೆ ಸಾಲ ಕೊಡಲು ದೇಶಗಳು ಲೈನಿನಲ್ಲಿ ನಿಲ್ಲುತ್ತವೆ.

ಅದೇ ದೇಶ ಬಡವಾದರೆ ಸಾಲ ಕೊಡಲು ಉಳಿದ ದೇಶಗಳು ಹಿಂದೆ ಮುಂದೆ ನೋಡುತ್ತವೆ. ಆ ಕಾರಣಕ್ಕೇ ಅಮೆರಿಕದ ಬಾಂಡ್‌ಗಳನ್ನು ಲೈನ್‌ನಲ್ಲಿ ನಿಂತು ಉಳಿದ ದೇಶಗಳು ಖರೀದಿಸುತ್ತವೆ. ಖರೀದಿಸುವುದು ಎಂದರೆ ಇದು ಅಮೆರಿಕಕ್ಕೆ ಸಾಲ ಕೊಡುವುದು. ಹೇಗೆ ಅಂಬಾನಿಗೆ ಸಾಲ ಕೊಡಲು ಬ್ಯಾಂಕ್ ಗಳು ಲೈನಿನಲ್ಲಿ ನಿಲ್ಲುತ್ತವೆಯೋ ಹಾಗೆ. ಮಲ್ಯಾಗೆ ಕೂಡ ಅಂದು ಆ ಕಾರಣಕ್ಕೆ ಪೈಪೋಟಿಯಲ್ಲಿ ನಿಂತು ಬ್ಯಾಂಕುಗಳು ಸಾಲ ಕೊಟ್ಟಿದ್ದು. ದೇಶಗಳು ಅಂತಾ ರಾಷ್ಟ್ರೀಯ ಸಂಸ್ಥೆಗಳಿಂದ (ಉ.ದಾ. IMF) ಕೂಡ ಹಣವನ್ನು ಪಡೆಯುತ್ತವೆ.

ಸಾಮಾನ್ಯವಾಗಿ ದೇಶದ ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಮೊನ್ನೆ ಇಂಥದ್ದೊಂದು ವಿಚಿತ್ರ ಪ್ರಶ್ನೆಯನ್ನು ಕ್ಲಬ್ ಹೌಸ್‌ನಲ್ಲಿ ಒಬ್ಬರು ಕೇಳಿದರು. ಅಮೆರಿಕದ ಜಿಡಿಪಿ 23 ಟ್ರಿಲಿಯನ್ ಡಾಲರ್. ಆದರೆ ಅಮೆರಿಕದ ರಾಷ್ಟ್ರೀಯ ಸಾಲ 30 ಟ್ರಿಲಿಯನ್. ಎಂದರೆ ಅಮೆರಿಕಕ್ಕೆ ತನ್ನ
ಸಾಲವನ್ನು ತೀರಿಸಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ. ಈ ಪ್ರಶ್ನೆಯೇ ತಪ್ಪು. ಇಲ್ಲಿ ಜಿಡಿಪಿ ಎನ್ನುವುದರ ಅರ್ಥವನ್ನೇ ಗಾಳಿಗೆ ತೂರಿದಂತಿದೆ. ಜಿಡಿಪಿ ಎಂದರೆ ಒಂದು ದೇಶದ ಶ್ರೀಮಂತಿಕೆ ಅಥವಾ ದೇಶ ಹೊಂದಿದ ಹಣದ ಮೊತ್ತವಲ್ಲ.

ದೇಶ ಒಂದು ವರ್ಷದಲ್ಲಿ ತಯಾರಿಸಿದ ವಸ್ತುಗಳ ಮತ್ತು ಒದಗಿಸಿದ ಸೇವೆಗಳ ಬೆಲೆಯನ್ನು ಒಟ್ಟುಮಾಡಿದರೆ ಅದು ಜಿಡಿಪಿ. ಎಂದರೆ ಸರಳವಾಗಿ ಹೇಳುವು ದಾದರೆ ಅಮೆರಿಕ ದೇಶ ಒಂದೇ ವರ್ಷದಲ್ಲಿ 23 ಟ್ರಿಲಿಯನ್ ಡಾಲರ್‌ಅನ್ನು ದುಡಿಯುತ್ತದೆ. ಇನ್ನೂ ಸರಳೀಕರಿಸುವುದಾದರೆ ಅಮೆರಿಕ
ಒಂದೇ ಡಾಲರ್‌ ಅನ್ನು ಖರ್ಚು ಮಾಡದೇ ಸುಮಾರು ಹದಿನಾಲ್ಕು ತಿಂಗಳಿದ್ದುಬಿಟ್ಟರೆ ಮಿಕ್ಕುವ ಹಣದಲ್ಲಿ ತನ್ನ ಸಾಲವನ್ನೆಲ್ಲ ತೀರಿಸಿಬಿಡಬಹುದು. ಭಾರತದ 2020ರ ಜಿಡಿಪಿ 2.63 ಟ್ರಿಲಿಯನ್ ಡಾಲರ್. ಎಂದರೆ ಅಷ್ಟು ಹಣದ ಉತ್ಪನ್ನ ಭಾರತದಲ್ಲಿ ಹಿಂದಿನ ವರ್ಷ ತಯಾರಾಗಿದೆ. ಇನ್ನು ಭಾರತದ
ಸಾಲ 2.35 ಟ್ರಿಲಿಯನ್ ಡಾಲರ್. ಎಂದರೆ ಭಾರತ ಸರಕಾರ, ರಾಜ್ಯ ಸರಕಾರಗಳು ಎಲ್ಲ ಖರ್ಚು ನಿಲ್ಲಿಸಿಬಿಟ್ಟರೆ ವರ್ಷದೊಳಗೇ ತನ್ನೆಲ್ಲ ಸಾಲವನ್ನು ತೀರಿಸಿಬಿಡಬಹುದು. ಈ ಜಿಡಿಪಿಗೆ ಸಾಲದ ಪ್ರಮಾಣವನ್ನೇ Debt to GDP Ratio ಎನ್ನುವುದು.

ಈ ಅನುಪಾತದಿಂದ ಕೂಡ ದೇಶದ ಸ್ಥಿತಿಯನ್ನು ಅಳೆಯುವಂತಿಲ್ಲ. ತನ್ನ ವಾರ್ಷಿಕ ಉತ್ಪಾದನೆಗಿಂತ ಎರಡೂವರೆ ಪಟ್ಟು ಸಾಲವನ್ನು ಹೊಂದಿರುವ ದೇಶ ಜಪಾನ್. ಎಂದರೆ ಆ ದೇಶ ತನ್ನ ಸಾಲವನ್ನು ತೀರಿಸಲು ಎರಡೂವರೆ ವರ್ಷ ಉಪವಾಸವಿರಬೇಕು. ಆದರೆ ಜಪಾನ್ ಅಷ್ಟು ಚಿಕ್ಕ ದೇಶವಾದರೂ ಅದರ ಜಿಡಿಪಿ ಭಾರತದ ದುಪ್ಪಟ್ಟು (5.05 ಟ್ರಿಲಿಯನ್ ಡಾಲರ್). ಅಮೆರಿಕ, ಜಪಾನ್, ಚೀನಾ, ಭಾರತ ಇವೆಲ್ಲ ಇಷ್ಟು ಉತ್ಪನ್ನವಿಟ್ಟುಕೊಂಡು ಅದೇಕೆ ಸಾಲಮಾಡುತ್ತವೆ? ಸಾಲ ಸುಮ್ನೆ ಒಂದೇ ಸಲ ತೀರಿಸಿಬಿಟ್ಟರಾಗದೇ? ಯಾವುದಾದರೂ ಒಂದು ದೇಶ ಹೊಟ್ಟೆ ಬಟ್ಟೆ ಕಟ್ಟಿಟ್ಟು ತನ್ನೆಲ್ಲ ಸಾಲವನ್ನು
ತೀರಿಸಿಬಿಟ್ಟರೆ ಒಮ್ಮಿಂದೊಮ್ಮೆಲೇ ಶ್ರೀಮಂತವೆನ್ನಿಸಿಕೊಂಡು ಬಿಡುತ್ತದೆಯೇ? ಆ ರೀತಿ ಸಾಲ ಮುಕ್ತವಾದ ದೇಶ ಇದೆಯೇ? ಹೀಗೆಲ್ಲ ಪ್ರಶ್ನೆ ಮೂಡಿದರೆ ನೀವು ಸರಿ ಮಾರ್ಗದಲ್ಲಿ ಯೋಚಿಸುತ್ತಿದ್ದೀರಿ ಎಂದೇ ಅರ್ಥ.

ಬ್ರುನೈ ಮೊದಲಾದ ಕೆಲವೇ ಕೆಲವು ದೇಶಗಳು ಯಾವುದೇ ಸಾಲ ಹೊಂದಿಲ್ಲ. ಇನ್ನು ಕೆಲವು ದೇಶಗಳ ಸಾಲದ ಪ್ರಮಾಣ ಆ ದೇಶದ ಪಡೆಯುವ ಯೋಗ್ಯತೆಯಿಂದಾಗಿ ಕಡಿಮೆಯಿದೆ. ಕೇವಲ ಸಾಲದ ಪ್ರಮಾಣದಿಂದ ಮಾತ್ರ ದೇಶದ ಆರ್ಥಿಕತೆಯನ್ನು ಅಳೆಯುವಂತಿಲ್ಲ ಎನ್ನುವುದಕ್ಕೆ ಉದಾಹರಣೆ ಕೊಟ್ಟಾಗಿದೆ. ಅಮೆರಿಕದ ಏಳನೇ ಅಧ್ಯಕ್ಷ ಆಂಡ್ರೂ ಜಾಕ್ಸನ್. ಸಾಲವೆಂದರೆ ಶೂಲವೆನ್ನುವ ಮನೋಭಾವದವನು ಜಾಕ್ಸನ್. ಆತ ಅಧ್ಯಕ್ಷನಾದಾಗ ಅಮೆರಿಕದ ಸರಕಾರಿ ಸ್ವಾಮ್ಯದಲ್ಲಿ ಯಥೇಚ್ಛ ಭೂಮಿಯಿತ್ತು. ಅಧ್ಯಕ್ಷನಾದ ಕೂಡಲೇ ಸರಕಾರದ ಬಹುದೊಡ್ಡ ಪಾಲಿನ ನೆಲವನ್ನೆಲ್ಲ ಇಲ್ಲಿನ ದೇಶ ವಾಸಿಗರಿಗೆ ಮಾರಿಬಿಟ್ಟ.

ಇದರಿಂದ ಸರಕಾರಕ್ಕೆ ಎಷ್ಟು ಹಣ ಬಂತೆಂದರೆ ಅಮೆರಿಕದ ಸಾಲ 1835ರಲ್ಲಿ ಸಂಪೂರ್ಣ ಸೊನ್ನೆಯಾಗಿ ಬಿಟ್ಟಿತು. ಆತನ ಈ ಎಲ್ಲ ಸರ್ಕಸ್‌ನಿಂದ ಅಂದು ಸಾಲ ಸೊನ್ನೆ ಯಾದದ್ದೇ ಹೊರತು ಅಂಥಾ ಹೇಳಿಕೊಳ್ಳುವ ಪವಾಡವೇನೂ ನಡೆಯಲಿಲ್ಲ. ಆ ಸಮಯದಲ್ಲಿ ಆತನ ಈ ಕಸರತ್ತಿನಿಂದ ಹಣ ಮಿಕ್ಕಿತ್ತು, ಅದನ್ನು ತನ್ನ ರಾಜ್ಯಗಳಿಗೆ ಹಂಚಿದ. ಅಷ್ಟೆ. ಅನಂತರ ಆ ಹಣ ಖಾಲಿಯಾದವು. ಇಲ್ಲಿನ ರಾಜ್ಯಗಳು ಕೆಲವು ಕಾಲ ಟ್ಯಾಕ್ಸ್ ಶೇಖರಿ ಸುವುದನ್ನು ನಿಲ್ಲಿಸಿದವು. ಸರಕಾರದ ಆದಾಯ ಕ್ರಮೇಣ ಕಡಿಮೆಯಾಯಿತು. ನಂತರ ಬಂದ ಅಧ್ಯಕ್ಷರಿಗೆ ಆದಾಯ ತೆರಿಗೆ ವಿಧಿಸುವುದು ಕಷ್ಟವಾ ಯಿತು. ಅಲ್ಲದೇ ಇದರಿಂದ ಜನರ ಬಳಿ ಹಣ ಹೆಚ್ಚಿದವು. ಜನರಲ್ಲಿ ಹಣ ಹೆಚ್ಚಿದಂತೆ ವಸ್ತುಗಳು ದುಬಾರಿಯಾದವು.

ಇದೆಲ್ಲ ಒಂದು ದೊಡ್ಡ ಆರ್ಥಿಕ ಡೊಂಬರಾಟಕ್ಕೆ, ನಂತರದಲ್ಲಿ ರಿಸೆಶನ್‌ಗೆ ಕಾರಣವಾಯಿತು. ಅಲ್ಲದೇ ದೇಶದ ಉತ್ಪಾದನೆ ಕಡಿಮೆಯಾಯಿತು ಕೂಡ. ಅಂದಿನಿಂದ ಮುಂದೆ ಇಂಥದ್ದೊಂದು ಕೆಲಸಕ್ಕೆ ಬೇರಿನ್ಯಾರೂ ಕೈ ಹಾಕಲಿಲ್ಲ. ದೇಶದ ಸಾಲ ತೀರಿಸಬೇಕೆಂದರೆ ಒಂದೋ ಖರ್ಚು ಕಡಿಮೆ ಮಾಡಿ, ಅಭಿವೃದ್ಧಿ ನಿಲ್ಲಿಸಿ ತೆರಿಗೆಯನ್ನು ಹೆಚ್ಚಿಸಬೇಕು ಇಲ್ಲವೇ ಅಷ್ಟು ಪ್ರಮಾಣದಲ್ಲಿ ದೇಶದಲ್ಲಿ ನೈಸರ್ಗಿಕ ಸಂಪತ್ತು ಇರಬೇಕು; ಇಲ್ಲವೇ ಉತ್ಪಾದನೆ ಹೆಚ್ಚ ಬೇಕು. ಇಂದಿನ ರಾಜಕೀಯದಲ್ಲಿ ಯಾವುದೇ ದೇಶದ ಅಧ್ಯಕ್ಷ, ಪ್ರಧಾನಿ ಸಾಲ ತೀರಿಸಬೇಕೆಂದು ತೆರಿಗೆ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕುವಂತಿಲ್ಲ. ತೆರಿಗೆ ಹೆಚ್ಚಿಸಿದರೆ ಅದರ ನೇರ ಪರಿಣಾಮ ದೇಶದ ಉತ್ಪಾದನೆ – ಜಿಡಿಪಿಯ ಮೇಲೆ ಕೂಡ ಬೀರುತ್ತದೆ.

ಹೀಗೆ ಒಂದಕ್ಕೊಂದು ಕೊಂಡಿಯಾಗಿರುವುದರಿಂದ ಸಾಲ ಒಂದು ಹದದಲ್ಲಿರುವಂತೆ ಮಾತ್ರ ಎಲ್ಲ ಸರಕಾರಗಳು ನೋಡಿಕೊಳ್ಳುತ್ತವೆ. ಸಾಲ ತೀರಿದರೆ ಒಳ್ಳೆಯದೇ. ಆದರೆ ಅದಕ್ಕಿಂತ ಹೆಚ್ಚಾಗಿ ದೇಶದ ಉತ್ಪಾದನೆ ಸಾಲದ ಪ್ರಮಾಣಕ್ಕನುಗುಣವಾಗಿ ಏರುತ್ತಿದ್ದರೆ ಅದು ಸದೃಢತೆಯೆನ್ನಿಸಿಕೊಳ್ಳುತ್ತದೆ.
ಸಾಲ ತೀರಿಸಲಷ್ಟೇ ಹೊರಟುಬಿಟ್ಟರೆ ಉತ್ಪಾದನೆ ಕಡಿಮೆಯಾಗುತ್ತದೆ. ಆಗ ಅದೆಲ್ಲದರ ಪರಿಣಾಮ ಸಾಲ ಮುಂದುವರಿಸುವುದಕ್ಕಿಂತ ಭೀಕರ ವಾಗುತ್ತದೆ. ಈ ಕಾರಣಕ್ಕೆ ಸಾಲ ತೀರಿಸುವುದು ಅಂದುಕೊಂಡಷ್ಟು ಮುಖ್ಯವಾಗುವುದಿಲ್ಲ. ಈಗ ಕೊನೆಯಲ್ಲಿ ಭಾರತದ ಸಾಲದ ಬಗ್ಗೆ ಸ್ವಲ್ಪ ವಿವರ ತಿಳಿಯೋಣ. ಭಾರತ ಸರಕಾರದ ಒಟ್ಟೂ ಸಾಲದ ಮೊತ್ತ 2.6 ಟ್ರಿಲಿಯನ್ ಅಮೇರಿಕನ್ ಡಾಲರ್.

ಒಂದು ಟ್ರಿಲಿಯನ್ ಎಂದರೆ ಒಂದು ಸಾವಿರ ಬಿಲಿಯನ್. ಇದರಲ್ಲಿ 560 ಬಿಲಿಯನ್ ಡಾಲರ್ ಮಾತ್ರ ಹೊರಗಿನವರ ಬಳಿ ಭಾರತ ಮಾಡಿದ ಸಾಲ. ಉಳಿದzಲ್ಲ ಆಂತರಿಕ – ಎಂದರೆ ಸರಕಾರ ದೇಶದ ಒಳಗೆ, ಜನರಲ್ಲಿ ಮಾಡಿದ ಸಾಲ. ಹಾಗೆ ನೋಡಿದರೆ ಭಾರತದಂತಹ ದೊಡ್ಡ ದೇಶ ಮಾಡಿದ ಹೊರ
ಸಾಲ ತೀರಾ ಕಡಿಮೆಯೇ. ಹೋಲಿಕೆಗೆ ಹೇಳುವುದಾದರೆ ಟಾಟಾ ಗ್ರೂಪ್‌ನ ವಾರ್ಷಿಕ ಆದಾಯ 103 ಬಿಲಿಯನ್ ಡಾಲರ್. ಇನ್ನು ಈ 560 ಬಿಲಿಯನ್ ಡಾರ್ಲ ಸಾಲದಲ್ಲಿ ಸುಮಾರು ನೂರು ಬಿಲಿಯನ್ ಡಾಲರ್ ಮಾತ್ರ ವಿದೇಶ, ದ್ವಿಪಕ್ಷೀಯ ಸಂಬಂಧವುಳ್ಳ ದೇಶಗಳು, IMF ಮೊದಲಾದವುಗಳಿಂದ ತಂದ ಸಾಲದ ಹಣ. 560 ಬಿಲಿಯನ್‌ನಲ್ಲಿ 141 ಬಿಲಿಯನ್ (ಶೇ. 25 ಹಣ ನಮ್ಮವರದೇ – ಅದು NRI ಗಳು ದೇಶದಲ್ಲಿ ಡೆಪಾಸಿಟ್ ಇಟ್ಟು – ಪರೋಕ್ಷವಾಗಿ ಸರಕಾರಕ್ಕೆ ಕೊಟ್ಟ ಸಾಲ.

ಇವಿಷ್ಟು – ಒಂದಿಷ್ಟು ದೇಶದ ಸಾಲ ಏನು ಎತ್ತ ಎನ್ನುವುದರ ಬಗೆಗಿನ ಲೆಕ್ಕಾಚಾರವಷ್ಟೆ. ಈ ಎಲ್ಲ ಹಿನ್ನೆಲೆಯಲ್ಲಿ ದೇಶದ ಸಾಲವೆನ್ನುವುದು ಭಾರತದ ಮಟ್ಟಿಗೆ ಆತಂಕವೆನ್ನಿಸುವ ಮಟ್ಟಿಗಿಲ್ಲ. ಹಾಗಂತ ಹಾಯಾಗಿದ್ದು ಬಿಡುವಂತಿಲ್ಲ. ದೇಶದ ಗಟ್ಟಿತನ ಜೀವಂತವಿರಲು ಉತ್ಪಾದನೆ ಹೆಚ್ಚಲೇಬೇಕು – ಅದಕ್ಕೆ ತಕ್ಷಣಕ್ಕೆ ಬೇಕಾದ ಸಾಲವನ್ನು ಪಡೆಯಲೇ ಬೇಕು. ಅದೇ ಆತ್ಮನಿರ್ಭರತೆಗೆ ಮಾರ್ಗ.

ಸಾಲಮುಕ್ತವಾಗುವುದೇ ಆತ್ಮನಿರ್ಭರತೆಯೆಂದರೆ ಅದು ಅರ್ಧಸತ್ಯ. ಸಾಲವೆನ್ನುವುದು ಶೂಲವಲ್ಲ, ಬದಲಿಗೆ ಸಮತೋಲನದ ಆರ್ಥಿಕತೆಯಲ್ಲಿ ಅವಶ್ಯಕತೆ ಎನ್ನುವುದು ಇಲ್ಲಿನ ಆಂತರ್ಯ. ಇದೆಲ್ಲವನ್ನು ತಿಳಿದಾಗ ದೇಶದ ಸಾಲ ಅಷ್ಟಿದೆಯಂತೆ – ಇಷ್ಟಿದೆಯಂತೆ- ಹೆಚ್ಚಿತಂತೆ ಎಂಬಿತ್ಯಾದಿ ಸಂಖ್ಯೆ ಗಳು ಅಷ್ಟು ಆತಂಕಕ್ಕೆ ಎಡೆಮಾಡಿಕೊಡುವುದಿಲ್ಲ. ಯಾವುದೇ ಸಾಲವಾಗಲಿ – ಅದು ಕೇಳುವ ಬಡ್ಡಿಗಿಂತ ಹೆಚ್ಚು ಉತ್ಪಾದನೆಗೆ ಕಾರಣವಾಗುತ್ತಿದೆ ಎಂದಾದಲ್ಲಿ ಆ ಸಾಲ ಒಳ್ಳೆಯದೇ. ಇದನ್ನೆಲ್ಲ ತಿಳಿದಿದ್ದರೆ ಆರ್ಥಿಕತೆಯ ಸಂಖ್ಯೆಗಳ ತಪ್ಪು ನಿರೂಪಣೆಯಿಂದ ಮೋಸಹೋಗುವುದು ತಪ್ಪುತ್ತದೆ.

error: Content is protected !!