Wednesday, 29th May 2024

ನಾವು ಬದುಕಿರುವ ತನಕವೂ ಬದುಕನ್ನು ಪ್ರೀತಿಸೋಣ

ಶ್ವೇತಪತ್ರ

shwethabc@gmail.com

ನಮ್ಮ ಬದುಕಿನ ಭಾಗವೇ ಆಗಿದ್ದ ಗೆಳೆಯರು, ಕಸ್ಸಿನ್‌ಗಳು, ಪರಿಚಯದವರು, ಅಕ್ಕಪಕ್ಕ ದವರು, ಪಾರ್ಕಿನಲ್ಲಿ ಎದುರು ಕಂಡು ಮುಗುಳ್ನಕ್ಕವರು, ಕಾರಣವೇ ಹೇಳದೆ ಪ್ರಶ್ನೆಯನ್ನು ಳಿಸಿ ಬದುಕಿಗೆ ವಿದಾಯ ಹೇಳಿ ಹೊರಟುಬಿಡುತ್ತಾರೆ. ಈ ವಿದಾಯಕ್ಕೆ ನಾವೆಲ್ಲ ಇಡುವ ಹೆಸರೇ ಆತ್ಮಹತ್ಯೆ. 1,64,033 ಜನ 2021ರಲ್ಲಿ ಆತ್ಮಹತ್ಯೆಗೆ ಒಳಗಾಗಿದ್ದಾರೆ.

ರಾಷ್ಟ್ರೀಯ ಆತ್ಮಹತ್ಯೆಯ ಪ್ರಮಾಣ 12 ಪರ್ಸೆಂಟ್ ಇದು 1967ರಿಂದ ಈಚೆಗೆ ಅತ್ಯಧಿಕ ವೆಂದು ಅಂಕಿಅಂಶ ತಿಳಿಸುತ್ತದೆ. ಈ ಅಂಕಿ ಅಂಶ ಕೇವಲ ಮಂಜುಗಡ್ಡೆಯ ತುದಿಯಷ್ಟೇ ಆಳಕ್ಕೆ ಇಳಿದರೆ ಮೈ-ಮನಸ್ಸುಗಳು ನಡುಗುವಷ್ಟು ಕರಾಳ ಸತ್ಯವಡ ಗಿರುತ್ತದೆ. ಪ್ರತಿ ಆತ್ಮಹತ್ಯೆಯ ಹಿಂದೆಯೂ ಅನೇಕ ಮಾನಸಿಕ ಒದ್ದಾಟದ, ಆಘಾತದ, ಸಂಕಟಗಳ, ರಿಪಿಟೇಟಿವ್ ಪ್ರಯತ್ನ ಗಳಿರುತ್ತವೆ. ಹಾಗಾಗಿ ಇಂದು ಆತ್ಮಹತ್ಯೆಯ ತಡೆ ಜಗತ್ತಿನ ಪ್ರಥಮ ಆದ್ಯತೆಯಾಗಬೇಕು.

ಆತ್ಮಹತ್ಯೆ ಅತ್ಯಂತ ಸಂಕೀರ್ಣವಾದ ಹಲವಾರು ಮುಖಗಳ್ಳುಳ್ಳ ಒಂದು ಗಂಭೀರವಾದ ಸಮಸ್ಯೆ. ಇದಕ್ಕೆ ಕಾರಣಗಳು ಅನೇಕ ಜೆನೆಟಿಕ್ಸ್ ಪ್ರಭಾವದಿಂದ ಮುಂದುವರಿದು ವೈಯಕ್ತಿಕ, ಕೌಟುಂಬಿಕ, ಒತ್ತಡ-ಪೂರಕ, ಸಾಮಾಜಿಕ-ಸಾಂಸ್ಕೃತಿಕ ಎಲ್ಲ ಆಯಾಮ ಗಳಿಂದಲೂ ಆತ್ಮಹತ್ಯೆಯನ್ನು ಅರ್ಥೈಸಬೇಕಾಗುತ್ತದೆ. ತೀವ್ರತರವಾದ ಮಾನವನ ವರ್ತನೆ ಇದರಲ್ಲಿ ಕಂಡುಬರುವು ದರಿಂದ ಆತ್ಮಹತ್ಯೆಯ ಆಲೋಚನೆ ಮತ್ತು ವರ್ತನೆಗೆ ಆಧಾರ ವಾದ ಮಾನಸಿಕ ಪ್ರಕ್ರಿಯೆಗಳನ್ನು ನಾವು ಮುಖ್ಯವಾಗಿ ಗುರುತಿಸ ಬೇಕಾಗುತ್ತದೆ.

ಕಳೆದ ದಶಕದಲ್ಲಿ ಆತ್ಮಹತ್ಯೆಗೆ ಕಾರಣವಾದ ಅನೇಕ ಮಾನಸಿಕ ಅಂಶಗಳನ್ನು (ವೈಯಕ್ತಿಕ ಹಾಗೂ ಸಾಮಾಜಿಕ ಎರಡು) ಸಂಶೋಧನೆಗಳು ಗುರುತಿಸಿವೆ. ಅದರಲ್ಲಿ ಮುಖ್ಯವಾಗಿ ಪೂರ್ವಭಾವಿ ಹಾಗೂ ದುಡುಕಿನ ನಿರ್ಧಾರಗಳ ನಡುವಿನ ಪರಿಣಾಮ ಗಳು ಪ್ರಮುಖವಾಗಿ ನಿಲ್ಲುತ್ತವೆ. ಸಹಿಸಲಾರದ ಮಾನಸಿಕ ನೋವು ಆತ್ಮಹತ್ಯೆಯ ಆಲೋಚನೆಯ ವರ್ತನೆಯ ಹಿಂದಿನ ಮುಖ್ಯ ಕಾರಣ ವೆನ್ನುತ್ತದೆ ಮನೋವಿಜ್ಞಾನ.

ತಡೆಯಲಾರದೇ ನೋವಿನಿಂದ ಪಾರಾಗಲು ಮನಸ್ಸು ಪ್ರೇರೇಪಿಸುವ ವರ್ತನೆಯೇ ಆತ್ಮಹತ್ಯೆ. ವ್ಯಕ್ತಿತ್ವದ-ಭಾವನಾತ್ಮಕ ಗುಣ ಲಕ್ಷಣಗಳು, ಅನಿಯಂತ್ರಿತ ಯೋಚನೆಗಳು ಕೂಡ ಆತ್ಮಹತ್ಯೆಯ ನಿರ್ಧಾರದಲ್ಲಿ ಪಾತ್ರವಹಿಸಿರುತ್ತವೆ. ಜೊಯಿನರ್ ಎನ್ನುವ
ಮನೋವಿಜ್ಞಾನಿ ನಡೆಸಿರುವ  Interpersonal theory of suicide ಎನ್ನುವ ಸಂಶೋಧನೆ ಈ ಪರಿಕಲ್ಪನೆಯನ್ನು ಎತ್ತಿ ಹಿಡಿಯುತ್ತದೆ. ಈ ಸಂಶೋಧನೆಯ ಪ್ರಕಾರ ವ್ಯಕ್ತಿ ಕಷ್ಟವನ್ನು ಗ್ರಹಿಸುವ ರೀತಿಯಲ್ಲಿ ಮತ್ತು ನಾನು ಎಲ್ಲಿಯೂ ಸಲ್ಲದ, ಎಲ್ಲಿಯೂ ಸೇರದ ಎಂಬ ಭಾವನೆಗಳು ಅವನ ಮನಸ್ಸನ್ನು ಮುತ್ತಿ ಆತ್ಮಹತ್ಯೆಯ ಆಲೋಚನೆಗೆ ಮತ್ತಷ್ಟು ಇಂಬು ತುಂಬುತ್ತವೆ.

ನಿಮಗೊಂದು ವಿಷಯ ತಿಳಿದಿರಲಿ ಸರಾಸರಿ ಶೇ.45 ರಷ್ಟು ಜನರು ತಾವು ಆತ್ಮಹತ್ಯೆಗೆ ಒಳಗಾಗುವ ಒಂದು ತಿಂಗಳ ಅಂತರದಲ್ಲಿ ಪ್ರಾಥಮಿಕ ವೈದ್ಯರನ್ನು ಭೇಟಿ ಮಾಡಿರುತ್ತಾರೆ ತಮ್ಮ ಆತ್ಮಹತ್ಯೆಯ ಆಲೋಚನೆ, ಹಾತೊರೆಯುವಿಕೆಯನ್ನು ಬಿಟ್ಟುಕೊಡದೆ.
ಇಲ್ಲಿ ನಾವೆಲ್ಲ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ವಿಚಾರವೆಂದರೆ ತಮ್ಮ ಮನಸ್ಸಿನ ತಾಕಲಾಟಗಳನ್ನು ಹೇಳಿಕೊಳ್ಳಲು ಅವರು ಸೋಲುತ್ತಾರೆ. ಅದರ ಸೂಕ್ಷ್ಮ ಗ್ರಹಿಕೆಯಲ್ಲಿ ಸೋಲುತ್ತೇವೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಆತ್ಮಹತ್ಯೆಯ ಹಿಂದಿನ ಮಾನಸಿಕ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕಾದ ಆಳವಾದ ಪ್ರಯತ್ನ ನಮ್ಮದಾಗಬೇಕು.

ಬದುಕಿನ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದ ಮನಸ್ಥಿತಿ ವಯಸ್ಕರ ಆತ್ಮಹತ್ಯೆಯ ಹಿಂದಿನ ಕಾರಣವಾದರೆ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿನ ತಪ್ಪುಗಳು ಹದಿಹರೆಯದವರ ಆತ್ಮಹತ್ಯೆಯ ಹಿಂದಿನ ಕಾರಣವಾಗಿರುತ್ತದೆ. ಆತಂಕ, ಖಿನ್ನತೆ, ವಿಭ್ರಮೆ, ಸಂಜ್ಞಾನಾತ್ಮಕ ಕೊರತೆ ಮಾನಸಿಕ ರೋಗಿಗಳ ಆತ್ಮಹತ್ಯೆ ಹಿಂದಿನ ಕಾರಣ ಎನ್ನುತ್ತದೆ ಸಂಶೋಧನೆ. ಮಾನಸಿಕ ಕಿರುಕುಳ, ತಂದೆ-ತಾಯಂದಿರ ವಿಪರೀತ ಹೆದರಿಕೆ, ಲೈಂಗಿಕ ದೌರ್ಜನ್ಯಗಳು ಮಕ್ಕಳ ಆತ್ಮಹತ್ಯೆಗೆ ಮೂಲವಾಗಿಬಿಟ್ಟಿರುತ್ತವೆ.

ಒಂಟಿತನ ಭಾವನಾತ್ಮಕ ಡಿಸ್ಟರ್ಬೆನ್ಸ್ ಸ್ವಯಂ-ಮಾಪನ, ಕೀಳರಿಮೆ ಬದುಕಿನ ಬಗ್ಗೆ ಅತೃಪ್ತಿ, ಸಾಲಗಳು, ಮದುವೆಯಾಚೆಗಿನ ಅನೈತಿಕ ಸಂಬಂಧಗಳು ಹೇಳುತ್ತ ಹೋದರೆ ಆತ್ಮಹತ್ಯೆಯ ಹಿಂದಿನ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸೆಪ್ಟೆಂಬರ್ 10 ವಿಶ್ವ ಆತ್ಮಹತ್ಯೆ ತಡೆಯ ದಿನ. ಮನೋವಿಜ್ಞಾನಿ ವಿಲಿಯಂ ಜೇಮ್ಸ ಹೇಳುವಂತೆ ನಮ್ಮಲ್ಲಿ The will to Believe ಎಂಬ ನಂಬಿಕೆಯೆಂಬ ದೃಢತೆ ಇರಬೇಕು.

ಸೂಪರ್ ಹ್ಯೂಮನ್ ಹ್ಯಾಪಿನೆಸ್ ಎಂಬುದು ಯಾವುದು ಇಲ್ಲ, ಶಾಶ್ವತ ಎಂಬುದು ಯಾವುದು ಇಲ್ಲ, ನಮ್ಮ ಬದುಕಿಗೆ ಹೊಸ ಚೈತನ್ಯಗಳನ್ನು ಪ್ರತಿದಿನವೂ refuel ಮಾಡಿಕೊಳ್ಳುತ್ತ ಮುಂದೆ ಸಾಗಬೇಕು. ಜೋಸೆಫ್ ಪಿನೋಲನ ಪುಟ್ಟ ಕವನವೊಂದಿದೆ – ನಾವು ಮುರಿದ ಹಡಗಿನ ಚೂರುಗಳಿಂದ ಕಟ್ಟಿದ ದೀಪಸ್ತಂಬಗಳು, ಹಡಗುಗಳ ಡಿಕ್ಕಿ ತಪ್ಪಿಸಲು ಸಂಕಲ್ಪಿಸಿರುವವು ಈ ಆತ್ಮ ವಿಶ್ವಾಸ ನಮ್ಮದಾಗಬೇಕು. ಮರಣಕ್ಕಿಂತ ಜೀವನ ಮಿಗಿಲೆಂಬ ಗಟ್ಟಿತನವನ್ನು ಮೈಗೂಡಿಸಿಕೊಳ್ಳಬೇಕು.

ಆತ್ಮಹತ್ಯೆಯ ಆಲೋಚನೆಯುಳ್ಳ ವ್ಯಕ್ತಿ ನಮ್ಮ ಸುತ್ತಲೇ ಇರಬಹುದು. ಜೊತೆಯಲ್ಲಿಯೇ ಇರಬಹುದು ಅವರನ್ನು ಅರ್ಥೈಸುವ ಸಂವೇದನಾಶೀಲತೆಯನ್ನು ನಮ್ಮದಾಗಿಸಿ ಕೊಳ್ಳುವುದು ಹೇಗೆ? ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಯಾರಾದರೂ ಹೇಳಿದರೆ ಅದನ್ನು ನಾವು ನಿರ್ಲಕ್ಷಿಸಬಾರದು.

ಕೇವಲ ಅಟೆಂಶನ್ ಪಡೆದುಕೊಳ್ಳುತ್ತಿರುವುದುಕ್ಕಾಗಿ ಹೀಗೆ ಹೇಳುತ್ತಾರೆ ಎಂಬ conclusion ಗೆ ನಾವು ಬರಬಾರದು. ನೆನಪಿಡಿ ಈ ರೀತಿಯ ಹೇಳಿಕೆಗಳು ಆತ್ಮಹತ್ಯೆಯ ಹಿಂದಿನ ಆಲೋಚನೆಗಳೇ (Sucidal ideation) ಆಗಿರಬಹುದು. ಯಾರೇ ತಮ್ಮ ಮನಸ್ಸಿನ ದುಗುಡಗಳನ್ನು ಸಂಕಟ ಹಂಚಿಕೊಂಡಾಗ ಅದಕ್ಕೆ ಕಿವಿಯಾಗಿ ಅವರಿಗೆ ಹಗುರಾಗಲು ಬೇಕಿರುವ ಹೆಗಲನ್ನು ನೀಡೋಣ. ನಾವೆಲ್ಲ ಬದುಕಿನ ಹಾದಿಯಲ್ಲಿ ಕುಗ್ಗುವುದು, ಕುಸಿಯುವುದು ಸಹಜ. ಆಗೆಲ್ಲ ಭಯ, ಅಭದ್ರತೆ ಅಸ್ಥಿರತೆ, ಆತಂಕ ನಮ್ಮನ್ನು ಕಾಡುವುದು ಕೂಡ ಅಷ್ಟೇ ಸಹಜ.

ಈ ರೀತಿ ಮಾತನಾಡುವವರು ತಮ್ಮ ಭಾವನೆಗಳಿಗೆ ನೋವುಗಳಿಗೆ ಎದುರಿಗಿರುವವರು ಸ್ಪಂದಿಸಲಿ ಎಂಬ ನಿರೀಕ್ಷೆಯ ಹಂಚಿ ಕೊಂಡಿರುತ್ತಾರೆ. ನೆನಪಿರಲಿ ಆತ್ಮಹತ್ಯೆಯ ಆಲೋಚನೆಯೂ ಬದುಕುವ ಕೊನೆ ಪ್ರಯತ್ನವೇ. ಈ ನಡವಳಿಕೆಗಳು ನಮ್ಮ ಸುತ್ತಲಿನವರಲ್ಲಿ ಕಂಡು ಬಂದರೆ ಅವರಿಗೆ ಆಪ್ತ ಸಮಾಲೋಚನೆಯನ್ನು ಸರಿಯಾದ ಸಮಯದಲ್ಲಿ ಸಿಗುವಂತೆ ಮಾಡಬೇಕು. ಬದುಕಿನ ಬಗ್ಗೆ ಪ್ರೀತಿ ಮೂಡಿಸಬೇಕು. ಸ್ಪೂರ್ತಿ ತುಂಬಬೇಕು. ಈ ವಿಚಾರಗಳು ಹಿರಿಯರ ಗಮನಕ್ಕೆ ಬರುವಂತೆ  ನೋಡಿಕೊಳ್ಳ ಬೇಕು.

ಆತ್ಮಹತ್ಯೆ ಪ್ರಯತ್ನಗಳು ಹಾಗೂ ಸಾವುಗಳು ಯಾವುದೇ ಮುನ್ಸೂಚನೆಗಳಿಲ್ಲದೆ ನಡೆಯುತ್ತವೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಆ ಮುನ್ಸೂಚನೆಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗಿರುತ್ತೇವೆ ಅಷ್ಟೇ. ನಮ್ಮ ಒಡನಾಟದಲ್ಲಿರುವ ವ್ಯಕ್ತಿಯ ವರ್ತನೆಯಲ್ಲಿ, ಭಾವನೆಗಳಲ್ಲಿ, ಆಲೋಚನೆಗಳಲ್ಲಿ ಒಂದಿನಿತು ವ್ಯತ್ಯಾಸ ಕಂಡರೆ ಅದನ್ನು ನಾವು ಇಗ್ನೋರ್ ಮಾಡಿ ಬಿಡಬಾರದು. ವೀಕ್ ವ್ಯಕ್ತಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ತಪ್ಪು ತಿಳಿವಳಿಕೆ. ನಮಗಿದೆ ನೆನಪಿಡಿ, ಎರಡನೆಯ
ಮಹಾಯುದ್ಧಕ್ಕೆ ಕಾರಣನಾದ, ಯಹೂದಿಗಳ ನಿರ್ನಾಮಕ್ಕೆ ಪಣತೊಟ್ಟಿದ್ದ ಸರ್ವಾಧಿಕಾರಿ ಹಿಟ್ಲರ್ ಸತ್ತಿದ್ದು ಆತ್ಮಹತ್ಯೆ
ಯಿಂದ. ಗ್ಲಾಮರ್ ಜಗತ್ತನ್ನು ಆಳಿದ ಹುಡುಗಿ ಸಿಲ್ಕ ಸ್ಮಿತಾ ಸತ್ತಿದ್ದು ಸುಸೈಡ್‌ನಿಂದ.

ಮನೋವಿಜ್ಞಾನಿ ಶೈಡರ್ ಮನ್ ಮಾತುಗಳಲ್ಲಿ ಹೇಳುವುದಾದರೆ The person who commits suicide puts his psychological
skeleton in the survivors closet( Schneidman, 1969.pg.22)- ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬದುಕುಳಿದವರ ಬದುಕಲ್ಲಿ ತನ್ನ ಮಾನಸಿಕ ಅಸ್ಥಿಪಂಜರವನ್ನು ಉಳಿಸಿ ಹೊರನಡೆದು ಬಿಟ್ಟಿರುತ್ತಾನೆ.

I care about you. ನಾನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ ಎಂಬ ಧ್ಯೇಯವಾಕ್ಯದೊಂದಿಗೆ ಆತ್ಮಹತ್ಯೆ ತಡೆಯಲು ಆಪ್ತ ಸಲಹೆಗಳು ಇಲ್ಲಿವೆ. 1) ನಿಮ್ಮ ಒಡನಾಟದ ಯಾರದರೂ ಆತ್ಮಹತ್ಯೆಯ ಕುರಿತಾದ ಮುನ್ಸೂಚನೆಗಳು ನಿಮಗೆ ಸಿಗಬಹುದು. ಆಗ ನಿಮ್ಮೊಳಗೆ ಒಂದು ಹೊಯ್ದಾಟ ಶುರುವಿಟ್ಟುಕೊಳ್ಳಬಹುದು. ನಾನು ಹೇಗೆ ಅವರಲ್ಲಿ ಆತ್ಮಹತ್ಯೆಯ ವಿಚಾರಗಳು ಸುಳಿಯುತ್ತಿದೆ ಎಂಬುದನ್ನು ಹೇಳಲಿ? ತಪ್ಪಾಗಿ ಬಿಟ್ಟರೆ, ವ್ಯಕ್ತಿ ಕೋಪಗೊಂಡು ಬಿಟ್ಟರೆ…ಇಂತಹಾ ಯೋಚನೆ ಬದಿಗೊತ್ತಿ, ಈ ಮುನ್ಸೂಚನೆ ಗಳನ್ನು ಅಪಾಯವೆಂದು ಪರಿಗಣಿಸಿ ನಾವು ತತ್‌ಕ್ಷಣ ಪ್ರತಿಕ್ರಿಯಿಸಬೇಕಾಗುತ್ತದೆ.

ಆತ್ಮಹತ್ಯೆಯ ಬಗ್ಗೆ ಮಾತನಾಡುವುದು ಆತ್ಮಹತ್ಯೆ ಪ್ರೋತ್ಸಾಹಿಸಿದಂತೆ ಎಂಬುದು ತಪ್ಪು ತಿಳಿವಳಿಕೆ. ಅದರ ಬಗ್ಗೆ ಮಾತನಾಡುತ್ತ ಅವರ ಭಾವನೆಗಳನ್ನು, ಒಂಟಿತನವನ್ನು, ಹುದುಗಿಟ್ಟ ನಕಾರಾತ್ಮಕ ಸಂವೇಗಗಳನ್ನು ಹೊರತೆಗೆಯ ಬೇಕು. ನೀನು ಮುಂಚೆ ಹೀಗಿರಲಿಲ್ಲ, ನಿನ್ನನೋ ಬದಲಾವಣೆಗಳು ಕಾಣಿಸುತ್ತಿವೆ, ಯಾಕೋ ಯಾವಾಗಲೂ ಮಂಕಾಗಿ ಇರುತ್ತೀಯ? ಏನಾಗಿದೆ ನಿನಗೆ? ನಾವೆಲ್ಲ ಇದೀವಿ. ಗಟ್ಟಿಯಾಗಿ ನಿಲ್ಲು. ನಿನಗೆ ಯಾವುದೇ ಕ್ಷಣದಲ್ಲಿ ಯಾವುದೇ ತರಹದ ನೆಗೆಟಿವ್ ಆಲೋಚನೆ ಬಂದರು ನನ
ಗೊಂದು ಫೋನ್ ಮಾಡು. ಎಲ್ಲರ ಬದುಕಲ್ಲೂ ಸವಾಲು ಗಳಿವೆ, ಸಮಸ್ಯೆಗಳಿವೆ ಹಂಚಿಕೊ. ನನಗೆ ಹೇಳಲು ಕಷ್ಟವಾದರೆ ಒಂದು ಚೀಟಿಯಲ್ಲಿ ಬರೆದಿಡು. ಹೀಗೆ ಆಪ್ತ ಸಲಹೆ ಗಳ ಮೂಲಕ ಕುಗ್ಗಿರುವ ಬಾಳಲ್ಲಿ ತುಂಬುತ್ತ ಹೋಗಬೇಕು.

2) ಯಾವುದೇ ಕಾರಣಕ್ಕೂ ಅವರ ವ್ಯಕ್ತಿತ್ವವನ್ನು ಜಡ್ಜ್ ಮಾಡಲು ಶುರುವಿಟ್ಟುಳ್ಳಬಾರದು. ಅದು ಕುಗ್ಗಿರುವವರನ್ನು ಮತ್ತೊಂದಿ ಷ್ಟು ಕುಸಿಯುವಂತೆ ಮಾಡುತ್ತದೆ. ಅವರಲ್ಲಿ ಮರು ನಂಬಿಕೆಯನ್ನು ತುಂಬಬೇಕು. ಯಾವುದೇ ಕಾರಣಕ್ಕೂ ಅವರೊಟ್ಟಿಗೆ ವಾದ ಮಾಡಲು ಹೋಗಬಾರದು. ನೀವು ಕೊಡುವ ಭರವಸೆಗಳು ಅವರಲ್ಲಿ ಮಾನಸಿಕ ಶಕ್ತಿಯನ್ನು ತುಂಬಿಸಬೇಕು.

3)ಆತ್ಮಹತ್ಯೆಯ ಆಲೋಚನೆಯನ್ನು, ಕ್ರಿಯೆಯನ್ನು ದೂರವಾಗಿಸುವಲ್ಲಿ ನಮ್ಮ ಸಹಾನುಭೂತಿ, ಕೇಳುವ ಕಿವಿ ಮುಖ್ಯವಾಗು ತ್ತವೆ ನಿಮ್ಮ ಪ್ರೀತಿ ಮತ್ತು ಸಹಾನುಭೂತಿ ಎದುರಿಗಿರುವವರ ನೋವಿಗೆ ಮದ್ದಾಗಬೇಕು.

4)ಅವಶ್ಯಕತೆ ಬಿದ್ದರೆ ತಕ್ಷಣ ಆತ್ಮಹತ್ಯೆಯ ಆಲೋಚನೆಯುಳ್ಳವರನ್ನು ಸೈಕಾಲಜಿ, ಸೈಕಿಯಾಟ್ರಿಸ್ಟ್‌ಗಳ ಬಳಿ ಕರೆದೊಯ್ದು ಅಥವಾ ಹೆಲ್ಪ್ ಲೈನ್‌ಗಳಿಗೆ ವಿಷಯ ತಿಳಿಸಬೇಕು.

5)ಆತ್ಮಹತ್ಯೆಯ ಆಲೋಚನೆ ಇರುವವರ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದರೆ ಅದು ಸರಿಯಾದ ಕ್ರಮದಲ್ಲಿ ನಡೆಯುತ್ತಿದೆಯಾ ಗಮನಿಸಬೇಕು. ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆಯಾ, ವರ್ತನೆಯಲ್ಲಿ ಏನಾದರೂ ಬದಲಾವಣೆಗಳು ಕಂಡು ಬಂದಿದೆಯಾ ನೋಡಬೇಕು.

ಅವರ ಜೀವನಶೈಲಿ ಬದಲಾಗುವಂತೆ ನೋಡಿಕೊಳ್ಳಬೇಕು. ಆರೋಗ್ಯಕರ ಊಟ, ನಿದ್ದೆ, ಸೂರ್ಯನ ಕಿರಣಗಳಿಗೆ ಮೈಯೊಡ್ಡುವ ದೈಹಿಕ ವ್ಯಾಯಾಮ ಇವುಗಳು ಬದುಕಿನ ಆಡ್ ಆನ್ ಆಗುತ್ತಾ ಹೋಗುವಂತೆ ನೋಡಿಕೊಳ್ಳಬೇಕು. ಭಾವನಾತ್ಮಕ -ಮಾನಸಿಕ ಯೋಗಕ್ಷೇಮ ನಮ್ಮೆಲ್ಲರ ಹೊಣೆ ಹಾಗಾಗಿ ಬದುಕನ್ನು ಬದುಕಿರುವ ತನಕವೂ ಪ್ರೀತಿಸೋಣ ಆತ್ಮವಿಶ್ವಾಸದ ಅಂತ್ಯ ಆತ್ಮಹತ್ಯೆ ಯಾಗದಿರಲಿ..!

error: Content is protected !!