Wednesday, 27th November 2024

ಅಂದ ಹಾಗೆ, ನೀವು ಹೊಟ್ಟೆಗೇನು ತಿಂತೀರಿ ?!

ಸುಪ್ತ ಸಾಗರ

rkbhadti@gmail.com

ಇದೊಂಥರಾ Food for thought. ಆಹಾರ ಪದ್ಧತಿ, ಅದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದಲಿತ -ಬಲಿತ ಚರ್ಚೆಗಳು ನಿಜಕ್ಕೂ ಚಿಂತನೆಗೆ (ಕೆಲವೊಮ್ಮೆ ಚಿಂತೆಗೂ) ಗ್ರಾಸವೊದಗಿಸಿವೆ. ತೀರಾ ಕೋಪ ಬಂದಾಗ ‘ಹೊಟ್ಟೆಗೇನು ತಿಂತೀಯಾ?’ ಅಂತ ಆಡುಮಾತಿನಲ್ಲಿ ಬಯ್ಯುತ್ತೇವಲ್ಲವೇ? ಇಲ್ಲಿ ಪ್ರಶ್ನೆ ಇರುವುದು ತಿನ್ನುವುದರ ಬಗೆಗೆ ಅಲ್ಲ, ನೀನೇನಾಗಿರುವೆ ಎಂಬುದರ ಕುರಿತಾಗಿ. ಅಂದರೆ, ನೀನು ಮನುಷ್ಯನೋ, ಪಶುವೋ, ಮೃಗವೋ, ರಾಕ್ಷಸನೋ ಎಂದು ಕೇಳುವುದದು.

ಹಾಗೆ ಕೇಳುವ ಬದಲು ತಿನ್ನೋದರ ಬಗ್ಗೆ ಕೇಳುವುದೇಕೆ? ಹೊಟ್ಟೆಗೆ ತಿನ್ನೋದಕ್ಕೂ ನಾವೇನು ಎಂಬುದಕ್ಕೂ ಏನು ಸಂಬಂಧ? ಎಂಬ ಸಂಶಯ ಸಹಜ. ಆದರೆ ಅನುಮಾನವೇ ಇಲ್ಲ. ನಾವೇನು ತಿನ್ನುತ್ತೇವೆ ಎನ್ನೋದರ ಮೇಲೆಯೇ ನಾವು ಯಾರೆಂಬುದು, ಏನಾಗಿದ್ದೇವೆ ಎಂಬುದು ನಿರ್ಧಾರ ವಾಗುತ್ತದೆ.

ಮನುಸ್ಮೃತಿಯ ೫ನೇ ಆಧ್ಯಾಯದಲ್ಲಿ ಬರುವ ಈ ಶ್ಲೋಕವನ್ನು ಗಮನಿಸಿ: ‘ಚರಣಾಮನ್ನಮಚರಾ ದಂಷ್ಟ್ರಿಣಾ ಮಪ್ಯದಂಷ್ಟ್ರಿಣಃ ಅಹಸ್ತಾಶ್ಚ ಸಹಸ್ತಾನಂ ಶೂರಾಣಾಂ ಚೈವ ಭೀರವಃ’. ಇದನ್ನು ಯಾರು ಬೇಕಾದರೂ, ಹೇಗೆ ಬೇಕಾದರೂ ಮೂಗಿನ ನೇರಕ್ಕೆ ಎಲ್ಲವನ್ನೂ, ಕೊನೆಗೆ ಸನ್ನಿವೇಶವನ್ನೂ
ವ್ಯಾಖ್ಯಾನಿಸಿಕೊಳ್ಳಬಹುದು. ಅದು ಮನುಷ್ಯನ ಹುಟ್ಟುಗುಣ. ಆದರೆ, ಶ್ಲೋಕದ ವಾಸ್ತವಾರ್ಥ- ಆಹಾರವೇ ನಮ್ಮನ್ನು ರೂಪಿಸುತ್ತದೆಂಬುದು. ಸಾತ್ವಿಕ-ರಾಜಸ-ತಾಮಸ ಆಹಾರಗಳೆಂಬ ವಿಂಗಡಣೆಯಾಗಿದ್ದೂ ಇದರ ಆಧಾರದ ಮೇಲೆಯೇ ಅಲ್ಲವೇ? ಶ್ಲೋಕಾರ್ಥ ನೋಡಹೊರಟರೆ, ಸಸ್ಯಗಳನ್ನು ಅಥವಾ
ಸಸ್ಯಜನ್ಯವಾದುದನ್ನು ತಿನ್ನುವುದು ಪಶುಗಳ ಗುಣ.

ಕೋರೆ, ದಾಡೆಗಳಿರುವ ಕ್ರೂರಜೀವಿಗಳಿಗೆ ಪಶುಗಳು ಆಹಾರ. ಹಾಗಾದರೆ ಪಶುಗಳು ಬೇರೆ, ಪ್ರಾಣಿಗಳು ಬೇರೆ ಎಂದಾಯಿತು. ಮನುಷ್ಯ ಯಾವ ವರ್ಗಕ್ಕೆ ಸೇರಿದವನು? ಸಸ್ಯಾಹಾರಗಳನ್ನು ತಿನ್ನುವುದಾದಲ್ಲಿ ಆತ ಪಶುವಾಗುತ್ತಾನೆ. ಪಶುಗಳನ್ನು ತಿನ್ನುವುದಾದರೆ ಆತ ಕ್ರೂರ ಪ್ರಾಣಿಯಾಗುತ್ತಾನೆ. ಮನುಷ್ಯ ಸಹ ಒಂದು Animal ಎಂಬ ವಿಜ್ಞಾನದ ಸಾರ್ವತ್ರಿಕ ಅರ್ಥ ಬೇರೆ. ಆದರೆ ನಮಗೆ ಕ್ರೂರ ಕೋರೆದಾಡೆ ಗಳಿಲ್ಲವಲ್ಲ? ಹಾಗಾಗಿ ನಾವು ಮೂಲತಃ ಪಶುಗಳು. ಆದರೆ, ಇದೇ ಮನು ಮತ್ತೊಂದೆಡೆ ಹೇಳಿದ್ದಾನೆ- ‘ಮನ ಏವಮನುಷ್ಯಾಣಾಂ’ ಅಂತ. ನಮಗೆ ಮನಸಿದೆಯಲ್ಲ. ಆ ಮನಸಿಗೆ ಆಲೋಚನಾ ಶಕ್ತಿ ಇದೆಯಲ್ಲ.

ಅಂಥ ಆಲೋಚನೆ ಗಳಿಂದ ವಿವೇಚನಾ ಶಕ್ತಿ ಪಡೆದಿದ್ದೇವಲ್ಲ! ಹೀಗಾಗಿ ನಾವೇನು ತಿನ್ನಬೇಕು, ಯಾವಾಗ-ಎಷ್ಟು-ಯಾಕೆ ತಿನ್ನಬೇಕು ಎಂಬಿತ್ಯಾದಿ ಎಲ್ಲವೂ ನಮ್ಮ ನಮ್ಮ ವೈಯಕ್ತಿಕ ವಿವೇಚನೆಗೆ ಸಂಬಂಧಿಸಿದ್ದು. ಆಹಾರ ವ್ಯಕ್ತಿಗತ ಸ್ವಾತಂತ್ರ್ಯ ಎಂಬುದೇನೋ ಸತ್ಯ. ಆದರೆ ನಾವು ಮನುಷ್ಯರು ಎಂಬ ಸತ್ಯ ಮೀರಿ ತಿನ್ನಲಿಕ್ಕೆ ಹೊರಟರೆ ಪ್ರಾಣಿ ಸಮಾನರೆನಿಸಿಕೊಂಡುಬಿಡುತ್ತೇವೆ. ವಿಜ್ಞಾನವೂ ಇದನ್ನೇ ಹೇಳುತ್ತದೆ. ಮನುಷ್ಯನ ದೇಹ ಆದದ್ದು ೧೨೦ ಟ್ರಿಲಿಯನ್ ಜೀವಕೋಶಗಳಿಂದ.

ನಾವು ತಿನ್ನುವ ಆಹಾರವೆಲ್ಲವೂ ಕಾರ್ಬೋಹೈಡ್ರೇಟ್ ಎಂದು ಕರೆಸಿಕೊಳ್ಳುತ್ತದೆ. ಅದು ಸಸ್ಯಾಹಾರವೇ, ಮಾಂಸವೇ ಎಂಬುದು ನಗಣ್ಯ. ಎಲ್ಲವೂ ಕಾಬೋಹೈಡ್ರೇಟ್‌ಗಳೇ; ಒಡೆದು ಗ್ಲೂಕೋಸ್ ಆಗುತ್ತದೆ. ಮೆಣಸಿನಕಾಯಿ ಕೂಡಾ ಹೊಟ್ಟೆಯೊಳಗೆ ಹೋದ ಮೇಲೆ ಗ್ಲೂಕೋಸ್ ಆಗಿಯೇ convert
ಆಗೋದು. ಹಾಗೆ ನೋಡಿದರೆ ನಮ್ಮ ಹೊಟ್ಟೆಯೇ ಬಲುದೊಡ್ಡ ಮತಾಂತರಿ! ಹೀಗೆ convert ಆದರ ಗ್ಲೋಕೋಸ್ ಸೆಲ್‌ಗಳ ಒಳಗೆ ತೂರಿಹೋಗಿ, ಅದರೊಳಗಣ ಪವರ್ ಜನರೇಷನ್ ಸ್ಟೇಷನ್ ಮೈಟೋಕಾಂಡ್ರಿಯಾದಲ್ಲಿ energy ಉತ್ಪತ್ತಿಯಾಗಿ ದೇಹಕ್ಕೆ ಶಕ್ತಿ ಬರುತ್ತದೆ. ಈ energy ಸ್ವರೂಪ, ಪ್ರಮಾಣ ಇವೆಲ್ಲವೂ ನಿರ್ಧಾರವಾಗುವುದು ನಾವೇನು ತಿಂದಿದ್ದೇವೆ ಎಂಬುದರ ಮೇಲೆ.

ಅಂದರೆ ನಾವು ಏನನ್ನು ತಿನ್ನುತ್ತೇವೆಯೋ ಅದೇ ಆಗುತ್ತೇವೆ. ಮಾತ್ರವಲ್ಲ, ನಾವು ಯಾವ ಭಾವನೆಯಿಂದ ಸೇವಿಸುತ್ತೇವೆ ಎನ್ನುವುದರ ಮೇಲೆಯೂ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇದನ್ನೇ ಆಹಾರ ವಿಜ್ಞಾನ ಪ್ಲಸಿಬೋ (placebo) ಮತ್ತು ನಸೀಬೋ(Nocebo) ಎಂದು ವಿಂಗಡಿಸುತ್ತದೆ. ಹೌದು ಕಣ್ರಿ, ನಸೀಬು ನೆಟ್ಟಗಿದ್ರೆ ಏನು ತಿಂದರೂ (ಮಾತಾಡಿದ್ರೂ) ಅರಗಿಸಿಕೊಳ್ಳಬಹುದು, ಆದರೆ ಇದು ನಸೀಬಿನ ವಿಚಾರವಲ್ಲ. ಆಹಾರಕ್ಕೆ ಪ್ರೀತಿ, ಗೌರವ, ಪಾವಿ ತ್ರ್ಯದ ಭಾವನೆಯನ್ನು ಆರೋಪಿಸಿ ಸೇವಿಸಿದರೆ ಅದು ದೇಹದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ನಸೀಬೋ ಅದರ ತಿರುಗು ಮುರುಗು. ಎಷ್ಟೇ ಒಳ್ಳೆಯ (ಗುಣಮಟ್ಟದ) ಪೌಷ್ಟಿಕಾಂಶ ಯುಕ್ತ ಆಹಾರವಾ ಗಿದ್ದರೂ ಅದರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದಿದ್ದರೆ, ಅದು ದೇಹಕ್ಕೆ ಹಿಡಿಯುವುದಿಲ್ಲ.

ಅಯ್ಯೋ ಇದನ್ನೇ ಅಲ್ಲವೇ ನಮ್ಮ ಹಿರಿಯರು ಹೇಳುತ್ತ ಬಂದಿದ್ದು- ‘ಊಟ ಮಾಡುವಾಗ ಹರಟೆ ಹೊಡೆಯಬೇಡಿ, ಟಿ.ವಿ. ನೋಡಬೇಡಿ, ಕೆಟ್ಟ ಯೋಚನೆಗಳನ್ನು ಮಾಡಬೇಡಿ, ಭಕ್ತಿಯಿಂದ ದೈವ ಸ್ಮರಣೆಯೊಂದಿಗೆ ಊಟ ಮಾಡಬೇಕು. ಆಗ ತಿಂದದ್ದು ಮೈಗೆ ಹತ್ತುತ್ತದೆ’ ಅಂತ. ಆದರೆ ನಾವು ಕೇಳಿಲ್ಲ, ಕೇಳುತ್ತಿಲ್ಲ. ಅದನ್ನು ಹೇಳಲು ವೈದ್ಯವಿಜ್ಞಾನವೇ ಬರಬೇಕಾಯಿತು. ಆದರೆ ಆಹಾರದ ವಿಚಾರದಲ್ಲಿ ಇಲ್ಲೆಲ್ಲೂ ಜಾತಿಯ ಪ್ರಶ್ನೆ ಬರಲೇ ಇಲ್ಲ. ಇಂತಿಂಥ ಜಾತಿಯವರು ಇದನ್ನೇ ತಿನ್ನಬೇಕು ಎಂದು ವಿಜ್ಞಾನವಾಗಲೀ, ವೇದಗಳಾಗಲೀ, ಧರ್ಮಗ್ರಂಥಗಳಾಗಲೀ ಹೇಳಿಲ್ಲ. ಬದಲಾಗಿ ಎಲ್ಲರೂ
ಹೇಳಿದ್ದರಲ್ಲಿ ಸಾತತ್ಯ, ಸಮಾನ ಸಂಗತಿ ಏನೆಂದರೆ, ನೀನು ಏನು ತಿನ್ನುತ್ತೀಯೋ ಅದರ ಮೇಲೆ ನಿನ್ನ ಜಾತಿ-ಧರ್ಮ ನಿರ್ಧಾರವಾಗುತ್ತದೆ! ಹಾಗಿದ್ದ ಮೇಲೆ ಯಾರು ಬೇಕಾದರೂ ಯಾವಾಗ ಬೇಕಾದರೂ ‘ಮತಾಂತರ’ವಾಗಬಹುದಲ್ಲವೇ? ಖಂಡಿತವಾಗಿಯೂ.

ಅದರಲ್ಲಿ ತಪ್ಪೇನೂ ಇಲ್ಲ ಎಂಬುದು ನನ್ನ ಸ್ಪಷ್ಟ ಅಭಿ‘ಮತ’. ಇಲ್ಲಿ, ಧರ್ಮ, ಜಾತಿ, ಮತ, ಪಂಗಡ ಇವೆಲ್ಲವೂ ನಾವಂದುಕೊಂಡ ಅರ್ಥದಲ್ಲಿಲ್ಲ. ಇವೆಲ್ಲವೂ ನಮ್ಮ ಆಹಾರ ಮತ್ತು ಅದರಿಂದ ಬೆಳೆದು ಬಂದ ಸಂಸ್ಕೃತಿಗೆ ಸಂಬಂಧಿಸಿದ್ದು. ಕಾಲಘಟ್ಟಕ್ಕನುಗುಣವಾಗಿ, ನಾಗರಿಕತೆ ಬೆಳೆದಂತೆಲ್ಲ ನಮ್ಮ ಸಂಸ್ಕೃತಿಯೂ, ಆಹಾರವೂ ಸ್ಥಿತ್ಯಂತರ ಗೊಂಡಿದೆ; ಅವಸ್ಥಾಂತರಗಳನ್ನು ಪಡೆದಿದೆ. ಪುರಾತನ ನಾಗರಿಕತೆಯ ಮಾನವನಿಗೆ ಸಿಕ್ಕಿದ್ದೆಲ್ಲವೂ ಆಹಾರ ವಾಗಿತ್ತು.

ಶಿಲಾಯುಗಕ್ಕೂ ಮುಂಚೆ ಇದನ್ನೇ ತಿನ್ನಬೇಕು, ಇದು ತಿನ್ನಬಾರದೆಂದು ವಿಂಗಡಿಸುವವರು ಯಾರಿದ್ದರು? ಒಂದೊಂದನ್ನೇ ತಿಂದು ನೋಡಿಯೇ edible/non edible ಗಳ ನಿರ್ಧಾರವಾಗಿದ್ದು ತಾನೇ? ಅಷ್ಟಕ್ಕೂ ತಿನ್ನಲು ಏನಾದರೂ ಸಿಕ್ಕರೆ ಸಾಕಾಗಿತ್ತು ಅವರಿಗೆ. ಅದು ಗಡ್ಡೆ- ಗೆಣಸುಗಳು, ಪಶು-ಪ್ರಾಣಿಗಳ ಹಸಿಮಾಂಸವೋ, ಅಂತೂ ಆಹಾರ ಸಂಪಾದನೆಯೇ ಕಷ್ಟದ ಕೆಲಸ. ಎಷ್ಟೋ ವೇಳೆ ವಾರಗಟ್ಟಲೆ ತಿನ್ನಲು ಏನೂ ಸಿಗದೇ ಮನುಷ್ಯ ಅಲೆದಾಡುತ್ತಿದ್ದುದು ದಾಖಲಾಗಿದೆ. ಅಂಥ ಅನಿಶ್ಚಿತ ಸನ್ನಿವೇಶದಲ್ಲೇ ಅಲ್ಲವೇ ನಮ್ಮ ದೇಹದಲ್ಲಿ ‘ಕೊಬ್ಬು’ ಉತ್ಪತ್ತಿಯಾಗತೊಡಗಿದ್ದು.

ಹಾಗೊಮ್ಮೆ ಆಹಾರ ಸಿಕ್ಕಾಗ, ಬೇಕಷ್ಟು ತಿಂದಾಗ, ಅದರಲ್ಲೊಂದಿಷ್ಟು ಭಾಗವನ್ನು, ನಾಳೆಗೆ ಮತ್ತೆ ಆಹಾರ ಸಿಗದ್ದರೂ ದೇಹ ತನ್ನನ್ನು ತಾನು ಉಳಿಸಿ ಕೊಳ್ಳಲು ಕೊಬ್ಬನ್ನಾಗಿ ಪರಿವರ್ತಿಸಿಟ್ಟುಕೊಳ್ಳತೊಡಗಿದ್ದು. ಅದೇ ಈಗ cholesterol ಆಗಿ ಇಡೀ ಮಾನವ ಕುಲವನ್ನು ಬಾಧಿಸುತ್ತಿರುವುದು. ಏನೇ ಹೇಳಿ ನಮಗೀಗ ಸಿಕ್ಕಾಪಟ್ಟೆ ‘ಕೊಬ್ಬು ಜಾಸ್ತಿ’ ಬಿಡಿ. ಎಷ್ಟೆಂದರೆ ತಿನ್ನುವ ವಿಚಾರದಲ್ಲೂ ವಿವಾದ ಮಾಡಿಕೊಂಡು, ಬಡಿದಾಡಿಕೊಳ್ಳುವ ಮಟ್ಟಿಗೆ! ಹೋಗಲಿ ಬಿಡಿ, ಆಗ ಪುರಾತನ ನಾಗರಿಕತೆಯ ಕಾಲದಲ್ಲೂ ಜಾತಿ ಇರಲಿಲ್ಲ, ಇಂಥ ಜಾತಿಯವರು ಇದನ್ನೇ ತಿನ್ನಬೇಕೆಂದಿರಲಿಲ್ಲ.

ಅಷ್ಟಕ್ಕೂ ತಿನ್ನಲೇ ಇರಲಿಲ್ಲ ಎಂದ ಮೇಲೆ ತಿನ್ನುವ ಜಾತಿ ವರ್ಗ ಗಳೆಲ್ಲಿಂದ ಬರಬೇಕು? ಆದರೆ ತಿನ್ನಲು ಹೇರಳ ಸಿಗಲಾರಂಭಿಸಿದಂತೆಲ್ಲ, ತಿನ್ನುವವವರ, ತಿನ್ನದಿರುವವರ (ಎಲ್ಲ ವನ್ನೂ) ವಿಂಗಡಣೆ ಆರಂಭವಾಗಿರಬೇಕು. ತಿನ್ನುವುದರಲ್ಲಿ ಆಯ್ಕೆಗಳು ಸಿಕ್ಕವು. ತಿನ್ನುವುದರಲ್ಲೂ ಅಭಿರುಚಿಗಳು ಶುರುವಾ ದವು. ಅಭಿರುಚಿಗಳಿಗನುಗುಣವಾಗಿ ಧರ್ಮ (ಮನೋ ಧರ್ಮ) ಆರಂಭವಾಯಿತು. ಇದನ್ನೇ ಉಪನಿಷತ್ ಹೇಳಿದ್ದು ‘ರಸೋ ವೈ ಸಃ’. ನಾವು ಏನನ್ನು ತಿನ್ನುತ್ತೇವೆಯೋ, ಅದರಿಂದ ನಾವು ತಿನ್ನಲ್ಪಡುತ್ತೇವಂತೆ. ಬ್ರಹ್ಮಾಂಡವೆಂಬುದು ಹೊರಗಷ್ಟೇ ಇರುವುದಲ್ಲ, ನಮ್ಮೊಳಗೂ ಒಂದಿದೆ.

ಅಂಥದ್ದೇ ಬ್ರಹ್ಮಾಂಡದ ಪ್ರತಿಕೃತಿ, ಅಗ್ನಿ, ವಾಯು, ಅಪ್, ತೇಜೋ, ಆಕಾಶಾದಿ ಪಂಚಭೂತಗಳಿಂದಲೇ ಈ ಭೂಮಿ, ಭೂಮಿಯ ಮೇಲಿನ ನಮ್ಮೆಲ್ಲರ ದೇಹ ಆಗಿರುವುದು. ಈ ಎರಡೂ ಬ್ರಹ್ಮಾಂಡಗಳನ್ನು ಬೆಸೆಯುವ ಮಹತ್ತರ ಕಾರ್ಯ ಮಾಡುವುದೇ ಆಹಾರ, ನೆನಪಿರಲಿ! ಅಲ್ಲಿಂದಲೇ ಬೆಳೆದದ್ದು ಆಹಾರ ಪರಂಪರೆ. ಅದೇ ಸಂಸ್ಕೃತಿಯಾಯಿತು. ಹೇಳಿ ಕೇಳಿ ಭಾರತ ಬಹುಸಂಸ್ಕೃತಿಯ ದೇಶ. ಸಹಜವಾಗಿ ಆಹಾರದಲ್ಲೂ ಆ ಬಹುತ್ವ ಬೆಳೆಯಿತು.
ಅದರೊಂದಿಗೆ ಬೆಳೆದದ್ದು ನಂಬಿಕೆಗಳು. ಹಾಗೆ ನೋಡಿದರೆ, ಸಮುದಾಯಗಳನ್ನು ಹುಟ್ಟುಹಾಕಿದ್ದೇ ಆಹಾರ. ಅದೇ ಮುಂದೆ ಜಾತಿಗಳಾಗಿರಲಿಕ್ಕೂ ಸಾಕು. ವೃತ್ತಿಗಳನ್ನು ಆಧರಿಸಿ ಚತುರ್ವರ್ಣಗಳಾದದ್ದು ಎಂಬುದು ಸತ್ಯವೇ.

ಆದರೆ, ಅಂಥ ವರ್ಣಾಶ್ರಮ ಧರ್ಮದ ಜತೆಗೆ ಆಹಾರ ಪರಂಪರೆಯೂ ಮಿಳಿತಗೊಂಡು, ನಂಬಿಕೆಗಳೂ ಬೆಸೆದು ಸಮಾಜದ ವಿನ್ಯಾಸದ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದ್ದು ನಿಜ. ಆದರೆ, ಇದು ಎಂದಿಗೂ ವಿಘಟನೆಯ ವಸ್ತು-ವಿಷಯ ವಾಗಲೇ ಇಲ್ಲ. ಬದಲಾಗಿ ಸಮುದಾಯಗಳನ್ನು ಒಟ್ಟುಗೂಡಿಸುವಲ್ಲಿ ಕೆಲವೊಂದು ಆಹಾರ ಸಂಪ್ರದಾಯಗಳು ಸಹಾಯ ಮಾಡಿವೆ. ಮೀನು ತಿನ್ನುವವರೆಲ್ಲ ಕರಾವಳಿಗರು, ಮೈಸೂರು ಕರ್ನಾಟಕ ದವರೆಂದರೆ ಮುದ್ದೆ ಬೇಕೇ ಬೇಕು. ರಟ್ಟೆ ಮುರಿದು ದುಡಿವ ಬಯಲು ನಾಡಿನವರಿಗೆ ರೊಟ್ಟಿ ಮುರಿದೇ ಆಭ್ಯಾಸ.

ಮಲೆನಾಡಿನವರದ್ದು ತೀರಾ ಸಾತ್ವಿಕ ಎನಿಸುವ ಅನ್ನಪ್ರಧಾನ ಭೋಜನ… ಹೀಗೆ. ಇನ್ನು ಜಾನಪದೀಯ ಆಹಾರ ವ್ಯವಸ್ಥೆಗಳೂ ತಮ್ಮದೇ ವೈಶಿಷ್ಟ್ಯ ಗಳಿಂದ ಕೂಡಿವೆ. ನಮ್ಮ ಕರಾವಳಿಯ ಗೌಡ ಸಾರಸ್ವತರೂ ಸೇರಿದಂತೆ ಬಂಗಾಳದ ಬ್ರಾಹ್ಮಣರಿಗೆ ಮೀನು ನಿಷಿದ್ಧವಲ್ಲ. ಕರಾವಳಿಯ ಕೆಲ ಸಮುದಾಯ ದವರಿಗೆ ಕಪ್ಪೆ, ಉಡದ ಮಾಂಸವೆಂದರೆ ಹಬ್ಬ. ಇಂದಿಗೂ ಕೆಲ ಬುಡಕಟ್ಟು ಜನಾಂಗದವರಿಗೆ ಆಹಾರವೆಂದರೆ ಕಾಡಿನ ಕೊಬ್ಬಿದ ಇಲಿ, ಹೆಗ್ಗಣಗಳು. ಬ್ರಾಹ್ಮಣರಲ್ಲಿ ಬಹುತೇಕರು ಈಗ ಸಿಗ್ಗಿಲ್ಲದೇ ‘ಎಗ್ಗೇರಿಯನ್’ಗಳಾಗಿದ್ದಾರೆ.

ಚಿಕ್ಕಮಗಳೂರು ಸೇರಿದಂತೆ ದಟ್ಟ ಮಲೆನಾಡಿನ ಕೆಲವು ಮೇಲ್ವರ್ಗ(?)ದ ಮಂದಿಯೂ ‘ಚಿಕಳಿ’ ಎಂದು ಗುರುತಿಸುವ ಜಾತಿಯ ಇರುವೆಗಳಿಂದ ವೈವಿಧ್ಯ ಮಯ ಖಾದ್ಯ ಗಳನ್ನು ತಯಾರಿಸುತ್ತಾರೆ. ಕೆಲವರಿಗೆ ಅಣಬೆ ವರ್ಜ್ಯವಾದರೆ, ಈಗ ಅದು ತರಕಾರಿ ಅಂಗಡಿಗಳಲ್ಲಿ ಕಾಯಂ ಸ್ಥಾನ ಪಡೆದಿದೆ. ಮಾಧ್ವ ಯತಿಗಳು ಸೇರಿದಂತೆ ಅನೇಕ ಸನ್ಯಾಸಿಗಳು ಚಾತುರ್ಮಾಸ್ಯ ಸಂದರ್ಭದಲ್ಲಿ, ಏಕಾದಶಿ ವ್ರತಪಾಲನೆಯಲ್ಲಿ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಮುಟ್ಟುವುದಿಲ್ಲ.

ಅನೇಕ ಬ್ರಾಹ್ಮಣ ಸಮುದಾಯದ ಹಿರಿಯರು ಹಾಗೂ ಇಸ್ಕಾನ್ ಸಮುದಾಯದವರಿಗೆ (ಅಲ್ಲಿ ಜಾತಿಯಿಲ್ಲ, ಅದೇ ಒಂದು ಪಂಥ) ಇಂದಿಗೂ ಕೆಸವು, ಈರುಳ್ಳಿ, ಬೆಳ್ಳುಳ್ಳಿಯಂಥ ಆಹಾರ ವರ್ಜ್ಯ. ನಮ್ಮ ಒಕ್ಕಲಿಗೆ ಸಮುದಾಯದಲ್ಲಿ ಶ್ರಾದ್ಧವೆಂದರೆ ಮದ್ಯ-ಮಾಂಸಗಳಿರಲೇಬೇಕು. ಮಲೆನಾಡಿನ ಕೆಲ
ಜನಾಂಗಗಳವರು ಮೃತ ಎಮ್ಮೆಯ ಮಾಂಸವನ್ನು ಹಬ್ಬದೂಟದಂತೆ ಸವಿಯುತ್ತಾರೆ. ಮೇಘಾಲಯದ ಕಬಿರ್ ಬುಡಕಟ್ಟಿನವರಿಗೆ ಅಕ್ಕಿಯಿಂದ ತಯಾರಿಸಿದ ಮದ್ಯಪಾನ ದೈವೀಕ ಆಹಾರ. ಜತೆಗೆ ಹಂದಿ-ಕೋಣದ ಮಾಂಸಗಳು ಸರ್ವಶ್ರೇಷ್ಠ. ಪಾರ್ಸಿ ಆಹಾರ ಸಂಸ್ಕೃತಿಯಲ್ಲಿ ಗೋಧಿ, ಗುಲಾಬಿ, ಗಂಧ ಹಾಗೂ ಹಾಲು ಪ್ರಮುಖ ಪಾತ್ರ ವಹಿಸಿವೆ.

ನಮ್ಮ ಹಿಮಾಲಯ ಶ್ರೇಣಿಗಳಲ್ಲಿನ ಅಘೋರಿಗಳು ಮಾನವನ ಶವವನ್ನು ಹಸಿಹಸಿಯಾಗಿಯೇ ಹರಿದು ಸೇವಿಸುತ್ತಾರೆಂದು ಓದಿ ಬಲ್ಲೆ. ಹಾಗೆಯೇ ಪಾಪುವಾ ನ್ಯೂಗಿನಿ ದ್ವೀಪದ ಜನರಿಗೆ ಮಾನವ ಶವದ ಮಾಂಸವೆಂದರೆ ಇನ್ನಿಲ್ಲದ ಪ್ರೀತಿಯಂತೆ. ಹೀಗೆ ಆಹಾರ ಸಂಸ್ಕೃತಿಯ ವಿಭಿನ್ನತೆ ಮುಂದು ವರಿಯುತ್ತಲೇ ಇದೆ. ಈಗೆಲ್ಲ ಆಹಾರದಲ್ಲಿ ಸಂಸ್ಕೃತಿಯೂ ಇಲ್ಲ, ವೈವಿಧ್ಯವೂ ಇಲ್ಲ. ಮೊದಲೆಲ್ಲ ಸಮುದಾಯಗಳನ್ನವಲಂಬಿಸಿ, ಪ್ರದೇಶ ಅಲ್ಲಿನ ಹವಾಗುಣಕ್ಕನುಗುಣವಾಗಿ ಆಹಾರ ಪದ್ಧತಿಗಳಿದ್ದವು. ಜಾತಿಗಿಂತ ಅಂತಸ್ತು ಆಹಾರದ ವಿಚಾರದಲ್ಲಿ ಮೇಲುಗೈ ಪಡೆದಿದ್ದವು. ಬ್ರಿಟಿಷರು ಭಾರತಕ್ಕೆ ಬಂದಿದ್ದಾಗ ಇಲ್ಲಿ ಚಹಾಕ್ಕೆ ಹಾಲು ಬೆರೆಸುವುದೇ ಇರಲಿಲ್ಲ. ಹಾಲು ಸಕ್ಕರೆಯೊಂದಿಗೆ ಚಹಾ-ಕಾಫಿ ಸೇವಿಸುವುದನ್ನು ಬ್ರಿಟಿಷ ರಿಂದ ಕಲಿತು ಪ್ರತಿಷ್ಠೆಯ ಪ್ರದರ್ಶನ ಮಾಡಿಕೊಂಡದ್ದೂ ಇದೆ.

ಹಾಗೆಯೇ ಅಂಥ ಪ್ರತಿಷ್ಠೆಯ ಭ್ರಮೆಯಲ್ಲೇ ನಮ್ಮ ಊಟದ ತಟ್ಟೆಗೆ ಚಪಾತಿ ಬಂದು, ಕರುಳಿನಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ವಿಲ್ಲೈ ಎಂಬ ವಿಶಿಷ್ಟ ಅಂಗವನ್ನು ಕೆಡಿಸಿಕೊಂಡು, ಭಾರತ ಮಧುಮೇಹಿಗಳ ದೇಶ ಎನಿಸಿಕೊಳ್ಳಲು ಮಹತ್ವದ ಕೊಡುಗೆ ಕೊಟ್ಟದ್ದಲ್ಲವೇ? ಇಲ್ಲೀಗ ದಕ್ಷಿಣದ ಹೋಟೆಲ್‌ಗಳ ಮೆನುವಿನಲ್ಲಿ ಮೈದಾ ಪರಾಟ, ಕುಲ್ಚಾಗಳು ದೊಡ್ಡಸ್ತಿಕೆಯಾಗಿವೆ. ಚೈನೀಸ್ ಫುಡ್ ನಗರಿಗ ಮಕ್ಕಳ ಫ್ಯಾಷನ್. ಪಾಲಿಷ್ಡ್ ಅಕ್ಕಿಯ ಅನ್ನ ಶ್ರೀಮಂತಿಕೆಯ ದ್ಯೋತಕವಾಗಿತ್ತು.

ಎಲ್ಲವೂ ಬುಡಮೇಲಾಗಿ ಈಗ ಪುನಃ ಸಿರಿವಂತರು ಮನೆಯಲ್ಲಿ ಸಾವಯವದ ಹೆಸರಲ್ಲಿ ಕೆಂಪಕ್ಕಿ ಗಂಜಿ, ರಾಗಿ ಅಂಬಲಿಯ ಮೊರೆಹೋಗುತ್ತಿದ್ದಾರೆ. ಅದನ್ನು ಕೊಡುವ ‘ಹಳ್ಳಿ ತಿಂಡಿ’, ‘ಮನೆಯೂಟ‘, ‘ನಮ್ಮೂರ ಹೋಟೆಲ್’ ಗಳೂ ಶುರುವಾಗಿವೆ! ಎಲ್ಲದರ ನಡುವೆ ಮನೆಯಲ್ಲಿ ಅಡುಗೆ ಕೋಣೆಗಳು ಹೆಸರಿಗಷ್ಟೇ ಉಳಿದು, ಮನೆಯವರ ಹೊಟ್ಟೆ ತುಂಬಿಸುವ ಹೊಣೆಯನ್ನು ರೆಡಿ ಟು ಈಟ್, ಫ್ರೋಜ಼ನ್ ಫುಡ್‌ಗಳ ಹೆಸರಿನಲ್ಲಿ ಹಲವು ಉದ್ದಿಮೆಗಳು ಹೊತ್ತಿವೆ.

ಸ್ವಿಗ್ಗಿ, ಝೊಮ್ಯಾಟೋಗಳಂಥವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ಷಣದಲ್ಲಿ ನೀವು ನೆನೆದದ್ದನ್ನು ಮನೆಬಾಗಿಲಿಗೆ ತಲುಪಿಸುತ್ತಿವೆ. ಹಬ್ಬ ಹರಿದಿನ ಗಳಲಿ ನಾವು ಮಾಡುವ ಖಾದ್ಯ ವೈವಿಧ್ಯಗಳನ್ನು ಪೇಟೆಯ ಅಂಗಡಿಗಳೇ ಸೀಸನ್‌ಗಳ ಹೊರತಾಗಿಯೂ ತಯಾರಿಸಿ ನಿಮ್ಮ ದೇವರ ನೈವೇದ್ಯಕ್ಕೆ
ಕೊಡಬಲ್ಲವು. ನೈವೇದ್ಯ ಎಂದಾಕ್ಷಣ ನೆನಪಿಗೆ ಬಂತು. ಕೆಲ ವರ್ಷಗಳ ಹಿಂದೆ ಪುರಿಯ ಜಗನ್ನಾಥ ರಥೋತ್ಸವಕ್ಕೆ ಹೋಗಿದ್ದಾಗ, ಆ ‘ಮಹಾನುಭಾವ’ ತಿನ್ನುವುದನ್ನು ಕಂಡು ಬೆಕ್ಕಸ ಬೆರಗಾಗಿಹೋಗಿದ್ದೆ. ಹೌದು ಅಲ್ಲಿನ ಜಗನ್ನಾಥ ದೇವರನ್ನು ಪಂಡಾಗಳು (ನಮ್ಮ ಪಂಡಿತರು-ಪುರೋಹಿತರು) ಪ್ರತಿದಿನ
ಎಬ್ಬಿಸಿ, ಮುಖ ತೊಳೆಸಿ, ಹಲ್ಲುಜ್ಜಿಸಿ ಬಗೆಬಗೆಯ ತಿಂಡಿಗಳನ್ನು ತಿನ್ನಿಸುತ್ತಾರೆ. ಮತ್ತೆ ಮಧ್ಯಾಹ್ನ ಸ್ನಾನ ಮಾಡಿಸಿ ೫೦ಕ್ಕೂ ಹೆಚ್ಚು ಬಗೆಯನ್ನೊಳಗೊಂಡ ಭೂರಿಭೋಜನ ನೀಡುತ್ತಾರೆ. ಹೀಗೆ ದಿನಕ್ಕೆ ಆರು ಬಾರಿ ಆತನಿಗೆ ಭಾರಿ ನೈವೇದ್ಯ!

ಇಷ್ಟು ತಿಂದರೂ ಜಗನ್ನಾಥ ಮಾತ್ರ obesity ಗೆ ತುತ್ತಾಗಿಲ್ಲ. ಅದು ಹೇಗೆ calorie management ಮಾಡ್ತಾನೋ ದೇವರಾದ ಅವನೊಬ್ಬನೇ ಬಲ್ಲ! ಮನುಷ್ಯನ ಜಾತಿ, ಧರ್ಮ ಶ್ರೇಷ್ಠತೆಗಳು ಯಾವತ್ತಿಗೂ ತರ್ಕಕ್ಕೆ ನಿಲುಕದ ಸಂಗತಿಗಳು. ಹಾಗೆಯೇ ಆಹಾರದಿಂದಲೂ ಶ್ರೇಷ್ಠತೆ ನಿರ್ಧಾರವಾಗಿಲ್ಲ. ಅವರವರ ಆಹಾರ ಅವರವರಿಗೆ. ಕಾಲಕ್ಕೆ ತಕ್ಕಂತೆ ಆಹಾರ, ಅದರ ನಿಯಮಗಳು ಬದಲಾಗುತ್ತ ಬಂದಿವೆ. ಎಲ್ಲಕಾಲಕ್ಕೂ ಎಲ್ಲವೂ ವಿಹಿತವೆನಿಸಿಲ್ಲ. ಹಿಂದೆಲ್ಲ ಬ್ರಾಹ್ಮಣೋತ್ತಮರು ಯಜ್ಞ ಯಾಗಾದಿಗಳಲ್ಲಿ ಹವಿಸ್ಸಾಗಿ ಬಲಿ ನೀಡಿದ ಪಶುವಿನ ಶೇಷವನ್ನೇ ಸೇವಿಸುತ್ತಿದ್ದರಂತೆ.

ಯಜ್ಞಾಯ ಜಗ್ದಿರ್ಮಾಂಸಸ್ಯೇತ್ಯೇಷ ದೈವೋ ವಿಧಃ ಸ್ಮತಃ!

ಆದರೆ, ಈಗ ಯಾಗಗಳಲ್ಲಿ ಇರಲಿ, ದೇವರ ಹೆಸರಲ್ಲಿ ಪಶುಬಲಿ ನೀಡುವುದು ಸಹ ಕಾನೂನು ರೀತ್ಯ ಅಪರಾಧ. ಕಾಲ ಬದಲಾಗಿದೆ. ನಗರ ಪ್ರದೇಶಗಳಲ್ಲಿ ಎಲ್ಲರೂ ಎಲ್ಲವನ್ನೂ ತಿನ್ನುತ್ತಾರೆ. ವಿದೇಶಗಳಿಗೆ ಹೋಗಿ ಬಂದವರ ಆಹಾರ ಸಂಸ್ಕೃತಿ ಸಂಪೂರ್ಣ ಪಾಶ್ಚಾತ್ಯೀಕರಣಗೊಂಡಿದೆ. ರಷ್ಯನ್ ದೇಶಗಳಲ್ಲಿ ವೆಜಿಟೇರಿಯನ್‌ಗಳು ತಿನ್ನುವುದು ಚಿಕನ್ ಮಾತ್ರ. ಅರೇಬಿಯನ್ ರಾಷ್ಟ್ರಗಳಲ್ಲಿ ಒಂಟೆ ಮಾಂಸವೆಂದರೆ ಅದು ನಾನ್‌ವೆಜ್. ಹಂದಿ ಮಾಂಸ ಮುಸಲ್ಮಾನ ರಿಗೆ ವರ್ಜ್ಯ.

ನಮ್ಮ ಕೊಡವರಿಗೆ ಅದೇ ಪರಮಪ್ರೀತಿ. ಕುದುರೆ ಮಾಂಸ ಸೇವಿಸುವ ರಾಷ್ಟ್ರಗಳಲ್ಲಿ ಚಿಕನ್, ಮಟನ್‌ಗಳೆಲ್ಲವೂ ಸಸ್ಯಾಹಾರದ ಸಾಲಿಗೆ ಸೇರುತ್ತವೆ. ಚೀನಾದಂಥ ರಾಷ್ಟ್ರಗಳಲ್ಲಿ ಜಿರಲೆ, ಹಾವು-ಹಲ್ಲಿಗಳ ತಾಜಾ(?)ಮಾಂಸ ತೆರೆದ ಮಾರು ಕಟ್ಟೆಯಲ್ಲಿ ಮಾರಾಟವಾಗುತ್ತವೆ. ನಾವು ಅದನ್ನು ಕೇಳಿದರೇ
‘ಇಶ್ಶೀ’ ಎಂದು ಮುಖ ತಿರುಗಿಸುತ್ತೇವೆ. ಇಲ್ಲಿ ಆಹಾರ ಶ್ರೇಷ್ಠತೆ ಅಂತ ಎಲ್ಲಿಯೂ ಅನ್ನಿಸಿಲ್ಲ. ಅಥವಾ ದಾಲಿತ್ಯಕ್ಕೆ ಆಹಾರ ಮಾನದಂಡವೂ ಅಲ್ಲ. ಸಸ್ಯಾಹಾರಿಗಳೆಂದು ಕರೆಸಿ ಕೊಳ್ಳುವ ಸಮುದಾಯದವರೂ ಆಧುನಿಕರಾಗಿ ಚಿಕನ್ ಖಾದ್ಯಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಶುದ್ಧ ಮಾಂಸಾಹಾರಿ ಮನೆಗಳಲ್ಲಿ ಹುಟ್ಟಿದವರನೇಕರು ಇಂದಿಗೂ ಮೊಟ್ಟೆಯನ್ನು ಸಹ ಮುಟ್ಟುವುದಿಲ್ಲ. ಅವರದೇನಿದ್ದರೂ ಪುಳ್ಚಾರ್!

ನಮ್ಮ ಪಾಲಿಗೆ ಹಾಲು, ಹಾಲಿನ ಉತ್ಪನ್ನಗಳು ಸಸ್ಯಾಹಾರಿ ಎನಿಸಿಕೊಂಡಿವೆಯಾದರೂ ವೇಗನ್‌ಗಳ ಪ್ರಕಾರ ಹಾಲು ಸಹ ಪ್ರಾಣಿಜನ್ಯವಾದುದರಿಂದ ಸಸ್ಯಾಹಾರವಲ್ಲ. ಅವರವರ ಆಹಾರ ಅವರವರಿಗೆ. ಮನುಷ್ಯನಿಗೂ, ಜಾತಿಗೂ ತಿನ್ನುವ ಆಹಾರಕ್ಕೂ ಸಂಬಂಧವೇ ಇಲ್ಲ. ಇದ್ದರೂ ಈಗ ತಿನ್ನುವ ಜಾತಿ, ತಿನ್ನದವರ ಜಾತಿಯಷ್ಟೇ. ಇದನ್ನು ಆಧರಿಸಿ ದಲಿತ-ಬಲಿತ ಎಂಬ ವಿಂಗಡಣೆ, ಅಂಥ ಚರ್ಚೆ ಮೂರ್ಖತನದ್ದು ಎನಿಸುತ್ತದೆ. ಆಹಾರಕ್ಕೂ ಶ್ರೇಣಿಕೃತ
ವ್ಯವಸ್ಥೆಗೂ ಯಾವಾಗ, ಯಾರು ಸಂಬಂಧ ಕಲ್ಪಿಸಿದರೋ ಗೊತ್ತಿಲ್ಲ. ಹಾಗೆ ನೋಡಿದರೆ ಶುದ್ಧ ಸಸ್ಯಾಹಾರಿಗಳೆಂದು ಪರಿಗಣಿಸಬಹುದಾದ ಜೈನ ಸಮುದಾಯದಲ್ಲೂ ಈಗ ಕೆಲವರು ಮಾಂಸದೂಟ ಮಾಡುವವರಿದ್ದಾರೆ.

ಕುಂಬಳಕಾಯಿ, ಬಟಾಟೆ, ಬಸಳೆಯಂಥವನ್ನೂ ತಿನ್ನದ, ಹಾಲು- ಮೊಸರನ್ನೂ ಮುಟ್ಟದ ಕರ್ಮಠ ಸಸ್ಯಾಹಾರಿಗಳೂ ಇದ್ದಾರೆ. ಅಷ್ಟೇಕೆ ಕುರಿ, ಕೋಳಿಗಳನ್ನೂ ಅನ್ನ-ತೊವ್ವೆಯ ಜತೆ ಬೇಯಿಸಿ ಬಡಿಸುವ ವೆಜ್-ಕಂ-ನಾನ್ ವೆಜ್, ಆಂಧ್ರ ಶೈಲಿಯ ಹೋಟೆಲ್‌ಗಳಿಗೆ ಹೋಗಿ ಜನ ತಮಗೆ ಬೇಕಾದ್ದನ್ನು
ತಿಂದು ಎದ್ದು ಬರುವುದಿಲ್ಲವೇ? ಹೀಗಾಗಿ ಭೋಜನ ಪ್ರಿಯ ರೆಲ್ಲ ಬಹುಜನರೇತರೇ ಆಗಿರಬೇಕೆಂದೇನೂ ಇಲ್ಲ. ಬಹು ಜನರಲ್ಲೂ ಬೇಕಷ್ಟು ಭೋಜನ ಪ್ರಿಯರಿಲ್ಲವೇ? ಬದುಕುವು ದಕ್ಕಾಗಿ ತಿನ್ನುವವರಿಗಿಂತ ತಿನ್ನಲಿಕ್ಕಾಗಿಯೇ ಬದುಕಿರುವವರು ನಮ್ಮ ನಡುವಿದ್ದಾಗ ಭೋಜನಕ್ಕೂ-ಬಹುಜನತ್ವಕ್ಕೂ
ಸಂಬಂಧ ಕಲ್ಪಿಸಲಾಗದು.

ಒಂದಂತೂ ಸತ್ಯ. ಆಹಾರದಿಂದ ಯಾರೂ ದಲಿತರಾಗಿಲ್ಲ. ಅದು ಆಯಾಯಾ ಕಾಲಘಟ್ಟದಲ್ಲಿ, ಸಾಮಾಜಿಕ ಪಿಡುಗಾಗಿ ಕಾಡಿದ್ದು ಸತ್ಯ. ಹೀಗಾಗಿ ಇದು ದಲಿತರ ಆಹಾರ, ಇದು ಬ್ರಾಹ್ಮಣರ ಆಹಾರ ಎಂಬುದು ಇಲ್ಲವೇ ಇಲ್ಲ. ಹಾಗೊಮ್ಮೆ ಇದ್ದಿದ್ದರೆ ಶೂದ್ರ ಕೌಶಿಕ ‘ಬ್ರಹ್ಮ ತೇಜೋ ಬಲಂ ಬಲಂ’ ಎಂದು ಹಠ ತೊಟ್ಟು ಬ್ರಹ್ಮರ್ಷಿ ಆಗಲು ಸಾಧ್ಯವೇ ಇರಲಿಲ್ಲ. ಬ್ರಾಹ್ಮಣನಾಗಬೇಕಿರುವುದು ನಮ್ಮ ಬ್ರಹ್ಮಜ್ಞಾನದಿಂದಲೇ ಹೊರತೂ ಆಹಾರದಿಂದಲ್ಲ. ಆದರೆ ಬಹಳಷ್ಟು ಬಾರಿ ತಾಮಸ ಆಹಾರವೇ ವಿವೇಚನಾರಾಹಿತ್ಯವನ್ನು ನಮಗೆ ಆರೋಪಿಸುತ್ತವೆ ಎಂಬುದು ಇತಿಹಾಸದಲ್ಲಿ ಎಷ್ಟೋ ಬಾರಿ ದಾಖಲಾಗಿದೆ. ವೈಜ್ಞಾನಿಕವಾಗಿಯೂ ಇದು ಸಿದ್ಧಸತ್ಯ.

ಏಕೆಂದರೆ ಆಹಾರವನ್ನು ಸೇವಿಸಿದಾಗ ಸಿರೊಟೋನಿನ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ತಿನ್ನುವ ಪ್ರಮಾಣ ಮತ್ತು ಆವರ್ತನ ಹೆಚ್ಚಿದಂತೆಲ್ಲ ಈ ಹಾರ್ಮೋನು ಉತ್ಪತ್ತಿಯಲ್ಲಿ ವ್ಯತ್ಯಯವಾಗಿ ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ. ಇದೇ ಮನಸ್ಸಿನ ಒತ್ತಡವನ್ನು
ನಿರ್ಧರಿಸುವುವುದರಿಂದ ಕಾಲಾನಂತರದಲ್ಲಿ ವ್ಯಕ್ತಿ ಮೃಗವಾಗಿ ವರ್ತಿಸುತ್ತಾನೆ. ಕೊನೆಯಲ್ಲಿ ಅತಿಮುಖ್ಯ ಸಂಗತಿ: ಏನನ್ನಾದರೂ ತಿನ್ನೋಣ. ಆದರೆ ನಾವು ಮನುಷ್ಯರೆನ್ನುವು ದನ್ನು ಮರೆಯ ದಿರೋಣ. ಆಹಾರವೆಂಬುದು ವ್ಯಕ್ತಿಯ ಬೆಡ್‌ರೂಂಗಿಂತಲೂ ಖಾಸಗಿ ವಿಚಾರ. ಅಲ್ಲಿ ಬೇರಿನ್ನಾರೇ
ಹೋದರೂ ವ್ಯಭಿಚಾರವೆನಿಸುತ್ತದಲ್ಲವೇ?