ಋತುಚಕ್ರದ ವೇಳೆ ಹೆಣ್ಣುಮಕ್ಕಳು ಬಹಳ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಶಾಲಾ ಕಾಲೇಜಿಗೆ ಹೋಗುವುದಕ್ಕೇ ಹಿಂದೇಟು ಹಾಕುತ್ತಾರೆ ಎಂಬುದನ್ನು ಅರಿತ ರಾಜ್ಯ ಸರಕಾರವು ಮುಟ್ಟಿನ ಕಪ್ ಯೋಜನೆಯ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. ಆದರೆ ಈ ಮುಟ್ಟಿನ ಕಪ್ ಬಗ್ಗೆ ಅನೇಕರಿಗೆ ಸಂಶಯಗಳಿವೆ. ಮದುವೆಯಾಗದ ಹೆಣ್ಣುಮಕ್ಕಳು ಮುಟ್ಟಿನ ಕಪ್‌ಗಳನ್ನು ಬಳಸಬಹುದೇ? ಇದರಿಂದ ಯಾವುದೇ ಇನ್ನಿತರ ಸೋಂಕುಗಳು ತಗುಲುತ್ತವೆಯೇ ಎಂಬ ಸಂಶಯಗಳು ಇವೆ. ಮುಟ್ಟಿನ ಕಪ್ ಬಳಕೆಯಿಂದ ಅನಾನುಕೂಲಕ್ಕಿಂತ ಅನುಕೂಲಗಳೇ ಹೆಚ್ಚಿವೆ. ಮುಟ್ಟಿನ ಕಪ್ ಹೆಚ್ಚು ಕಾಲ ಉಳಿಯುತ್ತದೆ. ಆದಾಗ್ಯೂ, ಅದರ ವಸ್ತುಗಳಿಂದ ಕಿರಿಕಿರಿ ಅಥವಾ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಪ್ರತಿ ವರ್ಷ ನಿಮ್ಮ ಕಪ್ ಅನ್ನು ಬದಲಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಮುಟ್ಟಿನ ಕಪ್ ಅನ್ನು ಖರೀದಿಸುವುದರಿಂದ ಪ್ರತಿ ವರ್ಷ ಟ್ಯಾಂಪೂನ್ ಮತ್ತು ಸ್ಯಾನಿಟರಿ ನ್ಯಾಪ್ಕಿನ್‌ಗಳಿಗೆ ಖರ್ಚು ಮಾಡುವ ಒಟ್ಟು ಮೊತ್ತಕ್ಕಿಂತ ಕಡಿಮೆ ವೆಚ್ಚವಾಗುತ್ತದೆ. ಪ್ರತಿ ಐದರಿಂದ ಆರು ಗಂಟೆಗಳಿಗೊಮ್ಮೆ ಟ್ಯಾಂಪೂನ್ ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬದಲಾಯಿಸಬೇಕಾಗುತ್ತದೆ.
ಮುಟ್ಟಿನ ಕಪ್‌ಗಳನ್ನು ಬದಲಾಯಿಸದೆಯೇ ಅಥವಾ ಸೋರಿಕೆಯ ಬಗ್ಗೆ ಚಿಂತಿಸದೆ ೧೨ ಗಂಟೆಗಳವರೆಗೆ ಹೋಗಬಹುದು. ಮುಟ್ಟಿನ ಕಪ್‌ಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳಿಗಿಂತ ಐದು ಪಟ್ಟು ರಕ್ತದ ಟ್ಯಾಂಪೂನ್‌ಗಳನ್ನು
ಹಿಡಿದಿಟ್ಟುಕೊಳ್ಳುತ್ತವೆ. ಇಂತಹ ಇನ್ನೂ ಅನೇಕ ಪ್ರಯೋಜನಗಳು ಮುಟ್ಟಿನ ಕಪ್‌ಗಳ ಬಳಕೆಯಿಂದ ಇವೆ. ರಾಜ್ಯ ಸರಕಾರವು ಬರೀ ಯೋಜನೆಗೆ ಚಾಲನೆ ನೀಡಿದರೆ ಮಾತ್ರ ಸಾಲದು, ಮುಟ್ಟಿನ ಕುರಿತ ಮೂಢನಂಬಿಕೆಗಳನ್ನು ದೂರವಾಗಿಸಲು ಜಾಗೃತಿ ಮೂಡಿಸಬೇಕಿದೆ. ಮುಟ್ಟಿನ ದಿನಗಳು ಅಪವಿತ್ರ, ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಬಾರದು, ದೇವತಾ ಕಾರ್ಯಗಳಲ್ಲಿ ಭಾಗವಹಿಸಬಾರದು ಎಂಬ ಮೂಢನಂಬಿಕೆಗಳಿಂದ ವಿದ್ಯಾರ್ಥಿನಿಯರು ಮತ್ತು ಪೋಷಕರನ್ನು ಹೊರತರಬೇಕು. ಮುಟ್ಟು ಸಹಜ ಜೈವಿಕ ಕ್ರಿಯೆ. ಅದು ಅಪವಿತ್ರ ಅಲ್ಲ ಎಂಬುದನ್ನು ಮನದಟ್ಟು ಮಾಡಬೇಕಿದೆ. ಮಹಿಳೆಯರಿಗೆ ಅತ್ಯಗತ್ಯವಾದ ಯೋಜನೆಯೊಂದನ್ನು ಸರಕಾರ ಜಾರಿಗೆ ತಂದಿದ್ದು, ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಬಳಸುವ ಮೂಲಕ ಸರಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕಿದೆ.