Monday, 16th September 2024

ಅಹಂ-ಮನಸ್ಸು-ಬುದ್ದಿ: ಕಾಣದ ಬದುಕಿನ ಎಳೆಗಳು

ಶ್ವೇತಪತ್ರ

shwethabc@gmail.com

‘ಅಹಂ’ ಅನ್ನು ಗೆದ್ದವನಿಗೆ ಮನಸ್ಸೇ ಆತನ ಆಪ್ತ ಸ್ನೇಹಿತನಾಗುತ್ತದೆ; ಸೋತವನಿಗೆ ಮನಸ್ಸೇ ಆತನ ಶತ್ರುವಾಗುತ್ತದೆ- ಹೀಗೊಂದು ಮಾತು ಭಗವದ್ಗೀತೆಯಲ್ಲಿ ಮೂಡಿಬರುತ್ತದೆ. ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ ಕೆಲವೊಬ್ಬರ ಮೇಲೆ ಸಕಾರಾತ್ಮಕ ನಿಮ್ಮಲ್ಲಿ ಭಾವ ಮೂಡಿರುತ್ತದೆ. ಅದೇ ಕೆಲವು ಸಂದರ್ಭಗಳಲ್ಲಿ ಅದೇ ವ್ಯಕ್ತಿಯ ಮೇಲೆ ಕಿರಿಕಿರಿ, ಕೋಪ ಉಂಟಾಗುತ್ತದೆ ಅಲ್ಲವೇ? ನೀವು ಯಾವುದೋ ವ್ಯಕ್ತಿ ಯನ್ನು ಬಹಳ ನಂಬಿರುತ್ತೀರಿ ಅಂತರ್ಗತವಾಗಿ. ಆದರೆ, ಇದ್ದಕ್ಕಿದ್ದ ಹಾಗೆ ನಿಮ್ಮ ಸಂಬಂಧ ದಲ್ಲಿ ಒಂದು ಅನಿಶ್ಚಿತತೆ ಮೂಡುತ್ತದೆ.

ಈ ತೆರೆನಾದ ಅನುಭವಗಳು ಪದೇ ಪದೇ ನಿಮಗಾಗುತ್ತಿದ್ದರೆ ನಿಮ್ಮದೇ ಮನಸ್ಸು ನಿಮ್ಮ ಮೇಲೆ ಮಾಡುತ್ತಿರುವ ದಾಳಿಗೆ ನೀವು ಬಲಿಪಶುವಾಗುತ್ತಿದ್ದೀರಿ ಎಂದರ್ಥ. ಈ ದಾಳಿಗೆ ಮುಖ್ಯ ಕಾರಣ ನಿಮ್ಮದೇ ಅಹಂ ಮತ್ತು ಬುದ್ಧಿ ಶಕ್ತಿ. ಅಹಂ ಎಂದರೆ ನಿಮ್ಮ ಬಗ್ಗೆ ನಿಮಗಿರುವ ಆಳವಾದ ತಪ್ಪು ಅಸ್ಮಿತೆ, ಅಹಂ ನಮ್ಮ ಮನಸ್ಸು ಹಾಗೂ ಬುದ್ಧಿಶಕ್ತಿಯನ್ನು ಸದಾ ಚಾಲ್ತಿಯಲ್ಲಿಡುವ ಪ್ರಯತ್ನದಲ್ಲಿರುತ್ತದೆ. ನಮ್ಮ ಮನಸ್ಸು ಕೇವಲ ಒಪ್ಪಿಕೊಳ್ಳುವ ಇಲ್ಲವೇ ತಿರಸ್ಕರಿಸುವ ಸುಲಭ ಕೆಲಸವನ್ನಷ್ಟೇ ಮಾಡುತ್ತಿರುತ್ತದೆ.

ಬುದ್ಧಿಶಕ್ತಿ ಮನಸ್ಸಿನ ಒಪ್ಪಿಕೊಳ್ಳುವ ತಿರಸ್ಕರಿಸುವ ಪ್ರಕ್ರಿಯೆಯನ್ನು ತನ್ನ ವಾದ, ತರ್ಕ, ವಿಶ್ಲೇಷಣೆಯ ಮೂಲಕ ಸಮರ್ಥಿಸು ತ್ತಿರುತ್ತದೆ. ಅಹಂ ಇಲ್ಲಿ ಮೇಲಽಕಾರಿಯ ರೂಪದಲ್ಲಿ ಬುದ್ಧಿಃಶಕ್ತಿ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿ ಇಡಲು ಪ್ರಯತ್ನಿಸುತ್ತಿರುತ್ತದೆ. ಅಹಂನ ಮುಖ್ಯ ಮಂತ್ರವೇನು ಗೊತ್ತಾ? ಎಲ್ಲರಿಗಿಂತ ನಾನು ಮೇಲೆ ಮತ್ತು ಎಲ್ಲರಿಂದ ಗೌರವ ಮರ್ಯಾದೆಗೆ ನಾನು
ಅರ್ಹ ಎಂದು. ಮನಸ್ಸು ಅಹಂನ ಸೇವಕ ಹಾಗೂ ಅದರ ಬಾಡಿಗಾರ್ಡ್.

ಅದು ಅಹಂ ಮಾಡುವ ಕೆಲಸವನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಕಾರ್ಯವನ್ನಷ್ಟೇ ಮಾಡುತ್ತದೆ. ಉದಾಹರಣೆಗೆ ವಿದೇಶಿ ನೆಲದ ವಿಶ್ವವಿದ್ಯಾಲಯದಿಂದ ಓದಿಕೊಂಡು ಸಾಫ್ಟ್ ವೇರ್ ಜಗತ್ತಿನಲ್ಲಿ ಅತಿ ದೊಡ್ಡ ಅನುಭವವಿರುವ ವ್ಯಕ್ತಿ ಯೊಬ್ಬರು ನಿಮ್ಮ ಆಲೋಚನೆಗಳನ್ನು ಬುದ್ಧಿಶಕ್ತಿಯನ್ನು ಅಭಿನಂದಿಸುತ್ತ ನಿಮ್ಮ ಬಳಿ ಬಂದಾಗ ನಿಮ್ಮೊಳಗೆ ಮೇಲಧಿಕಾರಿಯ ರೂಪದಲ್ಲಿರುವ ಅಹಂ ಸಂತುಷ್ಟವಾಗುತ್ತದೆ. ಈ ಸಂತುಷ್ಟತೆಯನ್ನು ಗಮನಿಸುತ್ತಿದ್ದ ಮನಸ್ಸು ತಕ್ಷಣವೇ ಆ ವ್ಯಕ್ತಿಯನ್ನು ಸ್ನೇಹಿತನೆಂದು ಒಪ್ಪಿಕೊಂಡು ಬಿಡುತ್ತದೆ.

ಎಲ್ಲವೂ ಸರಿ ಇತ್ತ ಓಕೆ ಆದರೆ ನಿಧಾನಕ್ಕೆ ಆ ವ್ಯಕ್ತಿಗೆ ಅವನಂದುಕೊಂಡಷ್ಟು ಸಾಮರ್ಥ್ಯ, ಬುದ್ಧಿಶಕ್ತಿ ನಿಮ್ಮಲ್ಲಿಲ್ಲವೆಂದು ತಿಳಿದಾಗ ಮುಂದೇನಾಗಬಹುದು? ನಿಮ್ಮ ಹೊರ ಜಗತ್ತಿಗೆ ಸಮಾನಾಂತರವಾಗಿರುವ ನಿಮ್ಮ ಒಳ ಜಗತ್ತಿನ ಮುಖ್ಯ ಅಂಶವಾದ ಅಹಂ
ನೋಯುತ್ತದೆ. ಮನಸ್ಸು ಅಹಂ ಅನ್ನು ರಕ್ಷಿಸಲು ನಿಲ್ಲುತ್ತದೆ ಯಾರನ್ನು ಸ್ನೇಹಿತನೆಂದು ಒಪ್ಪಿಕೊಂಡಿದ್ದ ಮನಸ್ಸು ಅದೇ ವ್ಯಕ್ತಿ
ಯನ್ನು ತಿರಸ್ಕರಿಸಲು ಶುರುಮಾಡುತ್ತದೆ. ಆತನ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆಗಳನ್ನು ಕೊಡಲು ಶುರುವಿಟ್ಟುಕೊಳ್ಳುತ್ತದೆ.

ಅತಿ ಕಡಿಮೆ ಅಂತರದಲ್ಲಿ ಒಬ್ಬ ವ್ಯಕ್ತಿಯನ್ನು ಒಪ್ಪಿಕೊಂಡಿದ್ದ ಮನಸ್ಸು ಅಷ್ಟೇ ಬೇಗನೆ ಆ ವ್ಯಕ್ತಿಯನ್ನು ನಿರಾಕರಿಸಿ ಬಿಟ್ಟಿರುತ್ತದೆ. ಇಲ್ಲಿ ಮನಸ್ಸು ಹಾಗೂ ಬುದ್ಧಿಶಕ್ತಿ ಇಬ್ಬರ ಪಾಲುದಾರಿಕೆಯೂ ಇರುತ್ತದೆ. ಮನಸ್ಸು ಯಾವುದೇ ನಿರ್ಧಾರವನ್ನು
ತೆಗೆದುಕೊಳ್ಳುವಾಗ ತನ್ನ ಆಂತರಿಕ ಶಕ್ತಿಯಾಗಿ ಬುದ್ಧಿಶಕ್ತಿಯ ಸಹಾಯವನ್ನು ಪಡೆಯುತ್ತದೆ.

ಮನಸ್ಸಿನ ಯಾವುದೇ ನಿರ್ಧಾರಕ್ಕೆ ಬುದ್ಧಿಶಕ್ತಿ ತನ್ನ ಯೋಜನೆ, ವಾದ, ತಾರ್ಕಿಕ ವಿವೇಚನೆಯ ಮೂಲಕ ಮನಸ್ಸಿನ ಕೆಲಸವನ್ನು ಅನುಮೋದಿಸುತ್ತದೆ. ಮೇಲಿನ ಉದಾಹರಣೆಯನ್ನೇ ವಿವರವಾಗಿ ನೋಡುವುದಾದರೆ ಬುದ್ಧಿಶಕ್ತಿ ಮನಸ್ಸಿನ ಮಾತುಗಳಿಗೆ ಇಂದು ತುಂಬುತ್ತದೆ. ಎದುರಿಗಿನ ವ್ಯಕ್ತಿ ವಿದೇಶಿ ನೆಲದಿಂದ ಪದವಿ ಪಡೆದು ಬಂದಿರುತ್ತಾನೆ, ಜತೆಗೆ ಸಾಕಷ್ಟು ಅನುಭವವಿರುವ ವ್ಯಕ್ತಿ ಹಾಗಾಗಿ ಆತನನ್ನು ಒಪ್ಪಿಕೊಳ್ಳುವುದು ಪ್ರಿಯವಾದ ವಿಚಾರವೇ ಎಂಬುದನ್ನು ತನ್ನ ತರ್ಕದ ಮೂಲಕ ಒಪ್ಪಿಕೊಳ್ಳುವಂತೆ ಮಾಡುತ್ತದೆ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿಯ ಯಾವುದೋ ವರ್ತನೆ (ನಿಮ್ಮ ಕುರಿತಾಗಿ) ನಿಮಗೆ ಇಷ್ಟವಾಗದೇ ಹೋದಾಗ ಅದೇ ವ್ಯಕ್ತಿಯನ್ನು ಮನಸ್ಸು ನಿಮ್ಮೊಳಗೆ ಕರೆದುಕೊಳ್ಳಲು ಅಸಮ್ಮತ್ತಿಸುತ್ತದೆ.

ಬುದ್ಧಿಶಕ್ತಿ ತಕ್ಷಣವೇ ಆತನನ್ನು ನಿರಾಕರಿಸಲು ಕಾರಣಗಳನ್ನು ಹುಡುಕ ತೊಡಗುತ್ತದೆ. ವಿದೇಶಿ ನೆಲದಿಂದ ಬಂದಿದ್ದೇನೆ ಎಂಬ ದರ್ಪ ಈತನಿಗೆ ಹೀಗೆ ಮನಸ್ಸು ಹಾಗೂ ಬುದ್ಧಿ ಶಕ್ತಿ ಎದುರುಗಿನ ವ್ಯಕ್ತಿಯಿಂದ ಅಂತರವನ್ನು ಕಾಯ್ದುಕೊಂಡುಬಿಟ್ಟಿರುತ್ತವೆ.
ಬುದ್ಧಿಶಕ್ತಿ ನೀಡಿದ ಸೂಚನೆಗಳನ್ನು ಮನಸ್ಸು ವರ್ತನೆಯ ಮೂಲಕ ಪಾಲಿಸುತ್ತದೆ. ಅಹಂಗೆ ಎದುರಿಗಿರುವ ಸಂಬಂಧದ
ಸೌಧವನ್ನು ಕಟ್ಟುವ ಕೆಡಹುವ ಕೆಲಸ ಸುಲಭದ್ದು ಆದರೆ ಇಲ್ಲಿ ಬಹಳ ಮುಖ್ಯವಾಗುವುದು ಕಟ್ಟಿದ ಸಂಬಂಧವನ್ನು
ನಿಭಾಯಿಸುವುದೇ ಆಗಿರುತ್ತದೆ.

ಈ ಹಂತದಲ್ಲಿ ನಾವು ಮುಖ್ಯವಾಗಿ ವಿಚಾರ ಮಾಡಬೇಕಾದದ್ದು ಕೆಟ್ಟ ಮತ್ತು ವಾಸ್ತವದ ಸರಿ ಅಹಂಗಳ ನಡುವಿನ ವ್ಯತ್ಯಾಸ ವನ್ನು. ಕೆಟ್ಟ ಅಹಂ ನಮ್ಮೊಳಗೆ ಅತಂತ್ರ ಮನಸ್ಥಿತಿ, ಭಯ, ಕೋಪ,ಆಸೆ, ಅಸೂಯೆ, ಅಭದ್ರತೆಗಳೆಂಬ ಪರಕೀಯ ಭಾವವನ್ನು ಮೂಡಿಸುತ್ತ ನಮ್ಮ ಎಚ್ಚರಿಕೆಯ ಪ್ರಜ್ಞೆಯನ್ನು ಕಲುಷಿತಗೊಳಿಸಿ ನಮ್ಮೊಳಗೆ ಒಂದು ತಪ್ಪಾದ ಅಹಂ ರೂಪುಗೊಳ್ಳುವಂತೆ ಮಾಡಿಬಿಡುತ್ತವೆ. ಒಬ್ಬ ವ್ಯಕ್ತಿ ಆಂತರಿಕವಾಗಿ ಮೌಲ್ಯಾಧಾರಿತ ಸೇವಾ ಮನೋಭಾವ, ಮಾನವೀಯತೆ, ನಮ್ರತೆಗಳನ್ನು ಬದುಕಿನ ತತ್ವಗಳನ್ನಾಗಿ ಮೈಗೂಡಿಸಿಕೊಂಡರೆ ಆತನ ವಾಸ್ತವದ ನಿಜ ಅಹಂ ಜಾಗೃತಗೊಳ್ಳುತ್ತದೆ.

ಕೆಟ್ಟ ಅಹಂ ನಮ್ಮ ಬುದ್ಧಿ ಹಾಗು ಮನಸ್ಸಿನ ನಡುವೆ ತಡೆಗೋಡೆಯಾಗಿ ನಿಂತಿಬಿಡುತ್ತದೆ. ಅಲ್ಲಿ ನಮ್ಮ ನಿಜ ಅಸ್ಮಿತೆ ಸೋಲ
ನ್ನುಪ್ಪುತ್ತದೆ. ನಾನು ಎಂಬ ಪ್ರಜ್ಞೆ ಮಲಿನಗೊಳ್ಳುತ್ತದೆ. ನಮ್ಮ ಬದುಕುಗಳನ್ನು ಮತ್ತೆ ಹಳಿಗೆ ತರುವ ಪ್ರಯತ್ನ ನಮ್ಮದಾಗ
ಬೇಕಾದರೆ ಕೆಟ್ಟ ಅಹಂ ಅನ್ನು ನಾವು ಎದುರಿಸಲೇಬೇಕು. ಅದಕ್ಕೆ ಅದರ ಜಾಗವನ್ನು ತೋರಿಸಿಕೊಡಬೇಕು. ಮನಸ್ಸು ಕೆಟ್ಟ
ಅಹಂನ ಆಸೆಗಳನ್ನು ಹಿಡಿದಿಟ್ಟರೆ ಬುದ್ಧಿಶಕ್ತಿ ಮನಸ್ಸಿನ ಜತೆ ಪೂರಕವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಈ ಕೆಟ್ಟ
ಅಹಂನ ಕುರಿತಾದ ಉಕ್ತಿಯೊಂದು ಭಗವದ್ಗೀತೆಯ ೧೬ನೆಯ ಅಧ್ಯಾಯದಲ್ಲಿ ಕಂಡುಬರುತ್ತದೆ. ಅದೇನೆಂದರೆ ಕೆಟ್ಟ ಅಹಂ
ಮನಸ್ಸನ್ನು ಕಾಡಿ ಅದರ ಒಳಗೆ ಕಾಮ, ಕ್ರೋಧ, ಕೋಪದ ಗುಣಗಳನ್ನು ಗಟ್ಟಿಗೊಳಿಸಿ ಈ ಅಸೂಯೆಯ ಗುಣಗಳು ವ್ಯಕ್ತಿತ್ವದ ಆಳದಲ್ಲಿ ರಾಕ್ಷಸಾಕಾರವಾಗಿ ಬೆಳೆದು ನಮ್ಮನ್ನೇ ದೂಷಣೆ ಮಾಡಿಬಿಡುತ್ತವೆ ಇದೇ ಉಕ್ತಿ ನಾವು ಮಾಡಿದ್ದರ ಬಗ್ಗೆ ನಾವೇಕೆ ಯೋಚಿಸುತ್ತೇವೆ? ಕೊನೆಯ ಇಲ್ಲದೇ ನಾವೇಕೆ ದ್ವೇಷಿಸುತ್ತೇವೆ? ಮತ್ತು ನಮ್ಮ ಆಯ್ಕೆಗಳ ಬಗ್ಗೆ ನಾವೇ ಏಕೆ ಗೊಂದಲಗೊಳ್ಳುತ್ತೇವೆ ಎಂಬ ಪ್ರಶ್ನೆಗಳಿಗೆ ಉತ್ತರವೂ ಹೌದು!

ನಮ್ಮ ಪೂರ್ವಗ್ರಹಗಳು, ಇಷ್ಟಗಳು,ಅನಿಷ್ಟಗಳು ಇವೆ ಮನಸ್ಸು,ಅಹಂ ಹಾಗೂ ಬುದ್ಧಿ ಶಕ್ತಿಯ ಉತ್ತರದಾಯಿತ್ವವೇ
ಆಗಿರುತ್ತವೆ. ಹಾಗಾಗಿ ಬೇರೆಯವರ ಬದುಕಿಗೆ ನ್ಯಾಯಾಧೀಶರಾಗುವ ಮುನ್ನ ಮೊದಲು ನಮ್ಮದೇ ನಂಬಿಕೆ ಹಾಗೂ ಮೌಲ್ಯ ಗಳನ್ನು ಪ್ರಶ್ನಿಸಿಕೊಳ್ಳೋಣ. ಕಾಲೇಜಿನಲ್ಲಿ ಹಾಜರಾತಿ ಪುಸ್ತಕವನ್ನು ಎಲ್ಲಾ ಇಟ್ಟು ಎಲ್ಲ ಕಡೆ ಹುಡುಕುತ್ತಿದ್ದೆ. ಎಷ್ಟು
ಹುಡುಕಿದರೂ ಸಿಗಲ್ಲದು. ಕೊನೆಯದಾಗಿ ಅದನ್ನು ಎಲ್ಲಿಟ್ಟೆ ಎಂದು ಜ್ಞಾಪಿಸಿಕೊಳ್ಳಲು ನನಗೆ ಸಾಧ್ಯವೇ ಆಗಲಿಲ್ಲ.

ಕೊನೆಗೆ ಹುಡುಕುವುದನ್ನು ಬಿಟ್ಟು ಸುಮ್ಮನಾದೆ. ಬೇರೆ ಯಾವ ಕೆಲಸದಲ್ಲಿ ತೊಡಗಿಸಿಕೊಂಡರೂ ಸಮಾಧಾನವೇ ಇಲ್ಲ. ಏನೂ
ಮಾಡಲಾಗದೆ ಹಾಗೆ ಎಲ್ಲ ಬಿಗಿತಗಳನ್ನು ಸಡಿಲಗೊಳಿಸಿ ಆರಾಮಾಗಿ ಕುಳಿತೆ. ಇದ್ದಕ್ಕಿದ್ದ ಹಾಗೆ ಹಿಂದಿನ ದಿನ ಸಂಜೆ ಲ್ಯಾಬ್ ಕ್ಲಾಸಿನ ಸ್ಟೋರ್ ರೂಮಿನ ಬೀರು ಒಳಗೆ ಯಾವುದೋ ಪ್ರಯೋಗಕ್ಕೆ ಸಂಬಂಽಸಿದ ಉಪಕರಣವನ್ನು ತೆಗೆಯಲು ಹೋಗಿ ಕೈಯಲ್ಲಿ ಹಿಡಿದಿದ್ದ ಹಾಜರಾತಿ ಪುಸ್ತಕವನ್ನು ಅ ಬಿಟ್ಟದ್ದು ನೆನಪಾಯಿತು. ಹೀಗೆ ನೆನಪಾದದ್ದು ಮಾತ್ರ ವಿಶ್ರಾಂತವಾಗಿ ಕುಳಿತು ಯೋಚಿಸಿದ್ದಾಗಷ್ಟೇ.

ಕೆಲವೊಮ್ಮೆ ಅತಿಯಾಗಿ ಆಲೋಚಿಸುವುದು ಕೂಡ ಕೆಲಸಕ್ಕೆ ಬರುವುದಿಲ್ಲ. ನಾವು ಆರಾಮದ ಮನಃಸ್ಥಿತಿಯಲ್ಲಿ ನಮ್ಮ
ಆಲೋಚನೆಗಳನ್ನು ಬದಿಗಿಟ್ಟಾಗ ಮಾತ್ರ ಉತ್ತರಗಳ ಹೊಳಹು ದೊರಕುತ್ತದೆ. ಕೆಲಸ ಮಾಡುವ ಜಾಗದಲ್ಲಿ ಎಷ್ಟೋ ಬಾರಿ
ಜನರ ವರ್ತನೆ ನನ್ನನ್ನು ಕೆರಳಿಸುತ್ತದೆ, ಕೆಲವೊಮ್ಮೆ ನನ್ನನ್ನು ಅವರ ವರ್ತನೆಗಳು ಧೃತಿಗೆಡಿಸುತ್ತವೆ. ನನ್ನ ನಿರ್ಧಾರದ
ಮೇಲೆ ಅಸ್ಪಷ್ಟ ಪರಿಣಾಮಗಳನ್ನು ಮೂಡಿಸುತ್ತವೆ. ಆಗೆಲ್ಲ ನಾನು ನನ್ನ ಅಹಂನ ಕೈಗೆ ಬುದ್ಧಿ ಹಾಗೂ ಮನಸ್ಸನ್ನು ಕೊಡದೆ
ನನ್ನಷ್ಟಕ್ಕೆ ನಾನು ಇದು ಬಿಡುತ್ತೇನೆ. ಯೋಚಿಸುವುದನ್ನು ಕೂಡ ಬಿಟ್ಟು.

ಸ್ವಲ್ಪ ದಿನಗಳ ನಂತರ ನನ್ನ ಸುಮ್ಮನೆ ಇದ್ದು ಬಿಡುವ ನಿರ್ಧಾರ ಬಹಳ ಸೂಕ್ಷ್ಮವಾಗಿತ್ತೆಂದು ನನಗನಿಸಿ ಖುಷಿ ಮೂಡುತ್ತದೆ. ಹೀಗೆ ಬದುಕಿನ ಎಷ್ಟೋ ಸಂದರ್ಭದಲ್ಲಿ ಇನ್ನೊಬ್ಬರ ಬಗೆಗಿನ ನಮ್ಮ ದೃಷ್ಟಿಕೋನ ಭಿನ್ನವಾಗಿರುತ್ತದೆ. ಆಗೆಲ್ಲ ಹೊಂದಾಣಿಕೆ ಕಷ್ಟ, ಎಲ್ಲಿ ಹೊಂದಾಣಿಕೆ ಕಷ್ಟ ಸಾಧ್ಯವೋ, ಅಲ್ಲಿ ಸುಮ್ಮನಿದ್ದು ಬಿಡುವುದನ್ನು ಕಲಿತು ಬಿಡಬೇಕು. ಇದೇ ಉತ್ತಮ ಧ್ಯಾನವು ಹೌದು, ಉತ್ತಮ ಔಷಧವೂ ಹೌದು. ಒಂದು ಸಮಸ್ಯೆಯನ್ನು ಬಗೆಹರಿಸುವಾಗ ಅನೇಕ ಆಯ್ಕೆಗಳು ನಮ್ಮೆದುರಿಗೆ ಆಕರ್ಷಕವಾಗಿ ನಿಲ್ಲುತ್ತವೆ.

ಅಹಂ ಬುದ್ಧಿಶಕ್ತಿ ಹಾಗೂ ಮನಸ್ಸು ಸಹಜವಾಗಿ ಗೊಂದಲಕ್ಕೆ ಈಡಾಗುತ್ತವೆ. ನಿಧಾನವಾಗಿ ಮನಸ್ಸಿಗೆ ವಿಶ್ರಾಂತಿ ದೊರಕಿಸಿ
ಕೊಟ್ಟಾಗಷ್ಟೇ ಎಂತಹುದೇ ದ್ವಂದ್ವಗಳ ನಡುವೆಯೂ ನಮಗೊಂದು ಸ್ಪಷ್ಟತೆ ಸಿಗುತ್ತದೆ. ಶ್ರೀನಿವಾಸ ರಾಮಾನುಜಂ, ನೀಲ್ಸ
ಬೋರ್ , ಪೌಲ್ ಮಾಕ್ ಕಾರ್ಟನಿ, ಐನ್ ಸ್ಟೀನ್ ಎಲ್ಲರೂ ಒಪ್ಪಿಕೊಂಡದ್ದಿದೆ. ತಮ್ಮ ಸುಪ್ತ ಪ್ರeಯನ್ನು ಮೀರಿ ಕೆಲಸ  ಮಾಡುವಾಗ ಮನಸ್ಸು ವಿಶ್ರಾಂತವಾಗಿದ್ದರಷ್ಟೇ ಸಾಧ್ಯ ಎಂಬುದನ್ನು. ಮನಸ್ಸಿನ ಎಲ್ಲ ಸಂಕೋಲಗಳನ್ನು ಬಿಡಿಸಿಕೊಂಡಾ ಗಷ್ಟೇ  ಮ್ಮ ಅತ್ಯುತ್ತಮವಾದದ್ದನ್ನು ಕೊಡಲು ಸಾಧ್ಯ. ಮನಸ್ಸಿನ ಆಂತರಿಕ ಸ್ವಾತಂತ್ರ್ಯವೇ ನಮ್ಮನ್ನು ಎತ್ತರಕ್ಕೆ ಹಾರುವಂತೆ ಮಾಡುವುದು.

ಹಾಗೆ ಊಹಿಸಿಕೊಳ್ಳಿ ಒಂದು ದೊಡ್ಡ ಹೊಲದಲ್ಲಿ ಕರು ಒಂದನ್ನು ಕಟ್ಟಿ ಹಾಕಿದರೆ ಕಟ್ಟಿ ಹಾಕಿದ ಹಗ್ಗ ಎಷ್ಟು ದೂರ ಎಳೆಯುವುದೋ ಅಷ್ಟು ದೂರಕ್ಕೆ ಸೀಮಿತವಾಗಷ್ಟೇ ಕರು ಮೇಯಲು ಸಾಧ್ಯ. ಮನಸ್ಸು ಅಷ್ಟೇಒತ್ತಾಯ ಪೂರಕವಾದ ಆಲೋಚನೆಗಳಿಂದ ಸೀಮಿತಗೊಳ್ಳುತ್ತದೆ. ಮನಸ್ಸು,ಅಹಂ ಹಾಗೂ ಬುದ್ಧಿ ಶಕ್ತಿಯ ಆಚೆ ನಾವು ಇನ್ನೂ ಮುಖ್ಯವಾಗಿ ಅರಿಯಬೇಕಿರುವುದು ನಮ್ಮ ಅಗತ್ಯಗಳು ಹಾಗೂ ಸಂವೇದನೆಗಳ ಕುರಿತಾಗಿ. ಎಷ್ಟೋ ಸಲ ಆಪ್ತ ಸಲಹೆಯ ಅನುಭವದಲ್ಲಿ ಬೇರೆಯವರ ಮಾನಸಿಕ ಸೆಳೆತಗಳಿಗೆ ಸ್ಪಂದಿಸುವಾಗ ನನಗೆ ತೊಂದರೆ ಉಂಟಾಗುವುದಿದೆ. ಜನ ತಮ್ಮ ಆತಂಕ ಹಾಗೂ ಭಾವನೆಗಳ ಹೊರೆಯನ್ನು ತಂದು ನಮ್ಮೆದುರು ಕಸದಂತೆ ಸುರಿದು ನಮ್ಮನ್ನು ಎಮೋಷನಲ್ ಡಸ್ಟ್‌ಬಿನ್‌ಗಳ ತರಹ ನೋಡುವುದುಂಟು.

ಆಪ್ತ ಸಲಹೆಗಾರರಾಗಿರುವುದು ಹೇಳಿದ್ದೆಲ್ಲವನ್ನು ಕೇಳಿಸಿಕೊಳ್ಳಬೇಕೆಂಬ ಮನೋಭಾವ ಕೆಲವರದ್ದು. ಈ ತೆರನಾದ ವರ್ತನೆಗಳು ಕೆಲವೊಮ್ಮೆ ನನ್ನನ್ನು ಹೈರಾಣಾಗಿಸುತ್ತವೆ. ಆಗೆಲ್ಲ ಸಹಜವಾಗಿ ನನಗನಿಸುವುದಿದೆ; ಬೇರೆಯವರಿಗೆ ತೋರಿಸುವ ಸಹಾನುಭೂತಿ ಯನ್ನು ಒಮ್ಮೊಮ್ಮೆ ನಮಗೆ ನಾವೇ ತೋರಿಸಿಕೊಳ್ಳಬೇಕು. ಈ ಸ್ವಯಂ ಅರಿವಿನ ಅನುಭೂತಿ ಮತ್ತೊಂದಿಷ್ಟು ಸಮಾಜಮುಖಿ ಯಾಗಿರಲು ನಮ್ಮನ್ನು ಪ್ರೇರೇಪಿಸುತ್ತದೆ. ನಾವು ಭೇಟಿಯಾಗುವ ಪ್ರತಿಯೊಬ್ಬರೂ ನಮ್ಮನ್ನು ಡಸ್ಟ್ ಬಿನ್‌ಗಳ ತರಹ ನಡೆಸಿಕೊಳ್ಳುವುದನ್ನು ನಾನು ವಿರೋಽಸುತ್ತೇನೆ. ಬಹುಶಃ ನಿಮಗೆ ಗೊಂದಲವಾಗಿರಬಹುದು ಅಲ್ಲವೇ? ಗೊಂದಲವಿದ್ದರೂ ಇದು ನಿಜವೇ.

ನಮ್ಮೆಲ್ಲರಿಗೂ ಸಾಕಷ್ಟು ಬಾರಿ ಈ ಅನುಭವವಾಗಿರಬಹುದು ನಾವು ಯಾರ ಹತ್ತಿರವೋ ಏನೋ ಮಾತನಾಡಲು  ಹೋಗುತ್ತೇವೆ. ಆದರೆ ಅವರು ನಾವು ಹೇಳುವುದನ್ನು ಕೇಳಿಸಿಕೊಳ್ಳುವುದನ್ನು ಬಿಟ್ಟು ತಮ್ಮದಾವುದೋ ಗೋಳನ್ನು ನಮ್ಮ ಮುಂದೆ
ಹರವುತ್ತಾರೆ. ನನಗಂತೂ ಈ ಅನುಭವ ಸಾಕಷ್ಟು ಸಲ ಆಗಿದೆ, ಹೇಳುವುದನ್ನೆಲ್ಲ ಹೇಳಿ ನಂತರ ತಕ್ಷಣವೇ ‘ಸರಿ ಮೇಡಂ ನನಗೆ
ಕೆಲಸ ಇದೆ’ ಎಂದು ಹೊರಟುಬಿಡುತ್ತಾರೆ. ಅಷ್ಟು ಹೊತ್ತು ಅವರ ಎದುರಿಗಿದ್ದು ಅವರು ಹೇಳಿದ್ದೆಲ್ಲವನ್ನು ಕೇಳಿಸಿಕೊಂಡು
ನಮ್ಮ ಅನಿಸಿಕೆ, ಅಭಿಪ್ರಾಯವನ್ನು ಅವರ ಅನಿಸಿಕೆಗೆ ತುಂಬಿ ಅವರು ಹಂಚಿಕೊಳ್ಳುವುದನ್ನು ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದ
ನಮಗೆ ‘ಸರಿ ಮೇಡಂ ನನಗೆ ಕೆಲಸ ಇದೆ ಹೊರಟೆ’ ಎನ್ನುವ ಮಾತುಗಳು ರಪ್ಪನೆ ಮುಖದ ಮೇಲೆ ಹೊಡೆದ ಭಾವವನ್ನು
ಮೂಡಿಸುತ್ತವೆ. ಅಂತಹ ಕೆಲವು ಜನರ ವರ್ತನೆ ನನ್ನಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಸ್ವಯಂ ಅರಿವಿನ ಕೊರತೆ ಇದ್ದಾಗ ಈ ತೆರನಾದ ವರ್ತನೆಗಳು ಜನರಲ್ಲಿ ಕಂಡು ಬರುತ್ತವೆ. ನಮ್ಮನ್ನು ನಾವು ಅರಿಯದೆ
ಹೋದರೆ ನಮ್ಮ ಅಗತ್ಯಗಳನ್ನು ಮೀರಿ ನಾವು ನಡೆದುಕೊಂಡು ಬಿಟ್ಟಿರುತ್ತೇವೆ. ನಮ್ಮ ಭಾವನೆಗಳ ಸ್ಥಿತಿಯನ್ನು, ಸಂವೇದನೆ ಗಳನ್ನು ಗುರುತಿಸಿ ಅರಿತಾಗ ಮಾತ್ರ ಪರಿಸರಕ್ಕೆ ಪೂರಕವಾಗಿ ಸೂಕ್ಷ್ಮವಾಗಿ ಬದುಕಲು ಸಾಧ್ಯ. ನಮ್ಮ ಮನಸ್ಸಿಗೆ ವಿಶ್ರಾಂತಿ
ಎಂಬುದಿಲ್ಲ ಅದು ಪ್ರಕ್ಷುಬ್ಧ, ಹಠಮಾರಿ ಜತೆಗೆ ಅದು ಗಟ್ಟಿಯೂ ಹೌದು. ಹಾಗಾಗಿ ಅದನ್ನು ನಾವು ವಶಪಡಿಸಿಕೊಳ್ಳಬೇಕು ಇಲ್ಲವಾದರೆ ಗಾಳಿಗಿಂತ ವೇಗವಾಗಿ ಓಡುವ ಅದನ್ನು ಹಿಡಿಯುವುದು ಕಷ್ಟ..!