Monday, 16th September 2024

ಆಧುನಿಕ ನಾಗರಿಕತೆಯ ಶಾಪ -ಕಿವುಡುತನ

ಅವಲೋಕನ 

ಡಾ.ನಾ.ಸೋಮೇಶ್ವರ

ಆಗುಂಬೆಯಲ್ಲಿ ಒಂದು ಸಂಜೆ. ಎಲ್ಲೆಲೂ ಮೌನ. ಬಾನಂಚಿನಲ್ಲಿ ಮುಳುಗುವ ಸೂರ್ಯನ ವಿವಿಧ ಆಕೃತಿಗಳ ನೋಟ, ಕ್ಷಣ ಕ್ಷಣಕ್ಕೂ ಬದಲಾಗುವ ಬಣ್ಣವು ಕಣ್ಣಿಗೆ ಔತಣ. ಎಲ್ಲೆಲ್ಲೂ ಮೌನ. ಈ ಮೌನವನ್ನು ಮುರಿಯಲೆತ್ನಿಸುವ ತಂಗಾಳಿಯ ಸುಂಯ್ ಸುನಾದ. ಒನಕೆ ಅಬ್ಬಿಯ ನೀರಿನ ಜುಳು ಜುಳು ನಿನಾದ. ಜೇನು ನೊಣಗಳ ಝೇಂಕಾರ. ಈ ಹಿನ್ನೆಲೆಯಲ್ಲಿ ಕೋಗಿಲೆಯ ಪಂಚಮ ಇಂಚರ…ಕಣ್ಣು ಪ್ರಕೃತಿಯನ್ನು ನೋಡುವ ಭಾಗ್ಯವನ್ನು ಕರುಣಿಸಿದ್ದರೆ, ಕಿವಿಯು ಪ್ರಕೃತಿಯಲ್ಲಿರುವ ವಿವಿಧ ನಾದ
ವನ್ನು ಆಲಿಸುವ ಅವಕಾಶವನ್ನು ನೀಡಿದೆ.

ಮನುಷ್ಯರ ಪಂಚೇಂದ್ರಿಯಗಳಲ್ಲಿ ಪ್ರಧಾನವಾದದ್ದು ಕಣ್ಣು; ನಂತರ ಕಿವಿ, ಅಂದರೆ ಶ್ರವಣ ಸಾಮರ್ಥ್ಯ. ಮಹಾಸ್ಫೋಟದಿಂದ (ಬಿಗ್ ಬ್ಯಾಂಗ್) ಈ ಬ್ರಹ್ಮಾಂಡವು ಸೃಜನೆಯಾಗುವಾಗ ಓಂಕಾರ ಶಬ್ದವು ಉತ್ಪತ್ತಿಯಾಯಿತೆಂದು ಸನಾತನಿಗಳ ನಂಬಿಕೆ. ಇಂದು ನಾವು ಸೂರ್ಯನ ಕಡೆಗೆ, ಗ್ರಹಗಳ ಕಡೆಗೆ, ನಕ್ಷತ್ರಗಳ ಕಡೆಗೆ, ನೀಹಾರಿಕೆಗಳ ಕಡೆಗೆ, ಕಪ್ಪುಕುಳಿಗಳ ಕಡೆಗೆ ನಮ್ಮ ಗಮನವನ್ನು ಸೂಕ್ತ ಸಾಧನಗಳ ನೆರವಿನಿಂದ ಹರಿಸಿ ಕೇಳಿದರೆ, ಅವುಗಳೂ ಸಹ ನಾನಾ ರೀತಿಯ ನಾದಗಳನ್ನು ಹೊರಹೊಮ್ಮಿಸುವುದನ್ನು ಆಲಿಸಬಹುದು.

ಇನ್ನು ನಮ್ಮ ಕಿವಿಗಳನ್ನು ತುಂಬಿ, ಹೃದಯದಲ್ಲಿ ಹರಿದು, ಒಡಲನ್ನು ಸಂಗೀತ ಅಲೆಗಳಲ್ಲಿ ತೇಲಿಸುವ ಸುಮಧುರ ಸಂಗೀತ! ಸುಬ್ಬುಲಕ್ಷ್ಮೀ, ಭೀಮಸೇನ ಜೋಶಿ, ಬಾಲಮುರಳಿಕೃಷ್ಣ, ಪಂಡಿತ್ ಜಸರಾಜ್, ಲತಾ ಮಂಗೇಷ್ಕರ್ ಮುಂತಾದವರ ಗಾಯನ, ಶಿವಕುಮಾರ ಶರ್ಮ, ಹರಿಪ್ರಸಾದ್ ಚೌರಾಸಿಯ, ರವಿಶಂಕರ್, ಬಿಸ್ಮಿಲ್ಲಾ ಖಾನ್ ಮುಂತಾದವರ ವಿವಿಧ ವಾದ್ಯಗಳ ವಾದನ ನಿನಾದ… ಮನುಷ್ಯನ ಬದುಕನ್ನು ಸಾರ್ಥಕ ಪಡಿಸುತ್ತಿವೆ. ನಮ್ಮ ಬದುಕು, ನಮ್ಮ ಇಳೆ, ನಮ್ಮ ಬ್ರಹ್ಮಾಂಡವು ನಾದಮಯ
ವಾಗಿದೆ ಎಂದರೆ ತಪ್ಪಾಗಲಾರದು.

ಶಾಶ್ವತ ನೀರವ: ಇಂತಹ ನಾದಮಯ ಜಗತ್ತು ಒಮ್ಮೆಲೆ ಮರೆಯಾಗಿ ಬಿಟ್ಟರೆ!? ಶಾಶ್ವತ ನೀರವವು ಎಲ್ಲೆಡೆ ಆವರಿಸಿಬಿಟ್ಟರೆ!? ಅಥವಾ ದಿನೇ ದಿನೇ, ಬೊಗಸೆಯಲ್ಲಿರುವ ನೀರು ಸೋರಿಹೋಗುವಂತೆ, ಶ್ರವಣ ಸಾಮರ್ಥ್ಯವು ಕಡಿಮೆ ಯಾಗುತ್ತಾ ಹೋಗಲಾ ರಂಬಿಸಿದರೆ… ಹೀಗಾಗಲು ಸಾಧ್ಯವಿಲ್ಲ ಎನ್ನಬೇಡಿ. ಆಧುನಿಕ ಜಗತ್ತಿನಲ್ಲಿ ಶ್ರವಣ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಯು ದಿನೇ ದಿನೇ ಹೆಚ್ಚುತ್ತಿದೆ. ನಮ್ಮ ದೈನಂದಿನ ಬದುಕಿನಲ್ಲಿ ನಮ್ಮ ಕಿವಿಗಳ ಬಗ್ಗೆ ಅಗತ್ಯ ಜಾಗೃತಿಯನ್ನು ತೆಗೆದು ಕೊಳ್ಳದಿದ್ದರೆ, ಕಿವುಡುತನವು ಕಟ್ಟಿಟ್ಟ ಬುತ್ತಿ.’

ನಮ್ಮ ಭೂಮಿಯ ಮೇಲೆ ಹುಟ್ಟುವ ಪ್ರತಿ ೧೦೦೦ ಮಕ್ಕಳಲ್ಲಿ ಮೂರು ಮಕ್ಕಳು ಜನ್ಮದತ್ತ ಬಧಿರತ್ವದಿಂದ (ಕಂಜೆನೈಟಲ್ ಡೆಫ್‌ ನೆಸ್) ಅಂದರೆ ಹುಟ್ಟುವಾಗಲೇ ಶ್ರವಣ ಸಾಮರ್ಥ್ಯವಿಲ್ಲದೇ ಹುಟ್ಟಬಹುದು. ವಯಸ್ಕರರಲ್ಲಿ ಪ್ರತಿ 10 ಜನರಲ್ಲಿ ಇಬ್ಬರು ಸೌಮ್ಯ ಸ್ವರೂಪದ ಕಿವುಡತನ ಪೀಡಿತರಾಗಿರಲು ಸಾಧ್ಯವಿದೆ. ಬಹಳಷ್ಟು ಸಂದರ್ಭಗಳಲ್ಲಿ ಇದು ಅವರ ಗಮನಕ್ಕೆ ಬಂದಿರುವುದಿಲ್ಲ. ೬೦ ವರ್ಷ ಮೀರಿದವರಲ್ಲಿ ಸರಿ ಸುಮಾರು ಅರ್ಧದಷ್ಟು ಜನರಿಗೆ ಕಿವುಡುತನವು ವಿವಿಧ ಪ್ರಮಾಣದಲ್ಲಿರುತ್ತದೆ. ವಿಶ್ವದ ವಿವಿಧ ದೇಶ ಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಸರಾಸರಿ ಶೇ.16ರಷ್ಟು ಜನರಿಗೆ (ಶೇ.7-21) ಕಿವುಡುತನವು ತಲೆ ದೋರಿರುತ್ತದೆ. ಬಹಳಷ್ಟು ಜನರಿಗೆ ಈ ಬಗ್ಗೆ ಪರಿವೆಯೇ ಇರುವುದಿಲ್ಲ. ಪ್ರಸ್ತುತ ಇಡೀ ಜಗತ್ತಿನಲ್ಲಿ 360 ದಶಲಕ್ಷ ಜನರು ಮಕ್ಕಳು 72 ದಶಲಕ್ಷ ಹಾಗೂ ವಯಸ್ಕರರು 328 ದಶಲಕ್ಷ) ಕಿಡುತನದಿಂದ ನರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಿವುಡುತನವು ಸದ್ದಿಲ್ಲದ ಹಾಗೆ ಬೆಳೆಯುವುದು ಒಂದು ಜಾಗತಿಕ ಪಿಡುಗಾಗಿದೆ. ಹಾಗಾಗಿ ಪ್ರತಿವರ್ಷವು ಸೆಪ್ಟೆಂಬರ್ ತಿಂಗಳ ಕೊನೆಯ ವಾರವನ್ನು ‘ಅಂತಾರಾಷ್ಟ್ರೀಯ ಕಿವುಡತನ ಜಾಗೃತಿ ಸಪ್ತಾಹ’ವನ್ನಾಗಿ ಆಚರಿಸುತ್ತಾ ಬರುತ್ತಿ ದ್ದೇವೆ. 2018ರಿಂದ ವಿಶ್ವ ಸಂಸ್ಥೆಯು ಇದೇ ಅವಧಿಯಲ್ಲಿ ಕಿವುಡರಿಗೆ ಅತ್ಯಂತ ಉಪಯುಕ್ತ ಸಂಪರ್ಕ ಮಾಧ್ಯಮವಾದ ಸಂಜ್ಞಾ ಭಾಷೆಯ ಬಗ್ಗೆ ಜಾಗೃತಿಯನ್ನು ಉಂಟು ಮಾಡುತ್ತಿದೆ. ಈ ವರ್ಷ ‘ಸಂಜ್ಞಾ ಭಾಷೆ; ಎಲ್ಲರ ಹಕ್ಕು’ ಎಂಬ ಘೋಷವಾಕ್ಯವನ್ನು ಆಯ್ಕೆ ಮಾಡಿಕೊಂಡಿದೆ.

ಕಿವುಡುತನ: ಕಿವುಡುತನವು ಭಾಗಶಃವಾಗಿರಬಹುದು ಅಥವಾ ಪೂರ್ಣವಾಗಿರಬಹುದು. ಒಂದು ಕಿವಿಯಲ್ಲಿ ಮಾತ್ರ ಇರಬಹುದು ಅಥವಾ ಎರಡೂ ಕಿವಿಗಳಲ್ಲಿರಬಹುದು. ಕಿವುಡುತನವು ತಾತ್ಕಾಲಿಕವಾಗಿರಬಹುದು ಅಥವಾ ಶಾಶ್ವತವಾಗಿರ ಬಹುದು. ಕಿವುಡುತನವು ತಲೆದೋರಲಿಕ್ಕೆ ಅನುವಂಶಿಕತೆ, ವೃದ್ಧಾಪ್ಯ, ವಿಪರೀತ ಶಬ್ದವಿರುವ ಪರಿಸರ, ಕೆಲವು ರೀತಿಯ ಸೋಂಕುಗಳು, ಜನನಾವಧಿಯ ತೊಡಕುಗಳು, ಕಿವಿಗೆ ಬೀಳುವ ಪೆಟ್ಟು, ಕೆಲವು ಔಷಧಗಳ ಸೇವನೆ ಅಥವಾ ಆಹಾರ ಪದಾರ್ಥ ಗಳ ಮೂಲಕ ಕೆಲವು ವಿಷಗಳ ಶರೀರ ಪ್ರವೇಶವು ಕಿವುಡುತನಕ್ಕೆ ಕಾರಣವಾಗುತ್ತವೆ.

ಆಲಿಸುವಿಕೆ: ನಮ್ಮ ಕಿವಿಯಲ್ಲಿ ಮೂರು ಭಾಗಗಳಿವೆ. ಹೊರಕಿವಿ, ನಡುಕಿವಿ ಮತ್ತು ಒಳಕಿವಿ. ಹೊರಕಿವಿಯು ಕಿವಿಯ ಹಾಲೆ ಯಿಂದ ಆರಂಭವಾಗಿ, ಶ್ರವಣ ನಳಿಕೆಯ ಮೂಲಕ ಹಾದು, ಕಿವಿತಮಟೆಯ ಹೊರಭಾಗದವರೆಗೆ ವ್ಯಾಪಿಸುತ್ತದೆ. ಶ್ರವಣನಾಳ ದಲ್ಲಿ ಗುಗ್ಗೆಯನ್ನು ಉತ್ಪಾದಿಸುವ ವಿಶೇಷ ಕೋಶಗಳಿರುತ್ತವೆ. ನಡುಕಿವಿಯಲ್ಲಿರುವ ಶ್ರವಣಾಸ್ಥಿಗಳಾದ ಸುತ್ತಿಮೂಳೆ (ಮ್ಯಾಲಿಯಸ್) ಅಡಿಮೂಳೆ (ಇಂಕಸ್) ಹಾಗೂ ರಿಕಾಪು ಮೂಳೆ (ಸ್ಟೇಪಿಸ್) ಗಳಿರುತ್ತವೆ. ಸುತ್ತಿಮೂಳೆಯು ಕಿವಿತಮಟೆ ಯೊಂದಿಗೆ ನಿಕಟ ಸಂಪರ್ಕದಲ್ಲಿರುತ್ತದೆ. ಒಳಕಿವಿಯಲ್ಲಿ ಕಾಕ್ಲಿಯಸ್ ಎಂಬ ಶ್ರವಣಾಂಗ ವಿದೆ. ನಾವು ಮಾತನಾಡುವಾಗ ಶಬ್ದದಲೆಗಳು ಗಾಳಿಯ ಮೂಲಕ ಕಿವಿಯ ಹಾಲೆಯ ಮೂಲಕ, ಶ್ರವಣನಾಳದೊಳಗೆ ಪ್ರವೇಶಿಸಿ, ಕಿವಿತಮಟೆಯನ್ನು ಕಂಪಿಸು ವಂತೆ ಮಾಡುತ್ತವೆ. ಈ ಕಂಪನವು ಶ್ರವಣಾಸ್ಥಿಗಳ ಮೂಲಕ ಕಾಕ್ಲಿಯಸ್‌ನಲ್ಲಿರುವ ಶ್ರವಣಾಂಗವನ್ನು ತಲುಪಿ, ಅಲ್ಲಿಂದ ಶ್ರವಣ ನರದ ಮೂಲಕ ಮಿದುಳಿನ ಶ್ರವಣಕ್ಷೇತ್ರವನ್ನು ತಲುಪುತ್ತದೆ. ಮಿದುಳಿನ ಶ್ರವಣ ಭಾಗವು ನಾವು ಕೇಳುವ ಶಬ್ದದ ಅರ್ಥ ಮತ್ತು ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ.

ಲಕ್ಷಣಗಳು: ಒಬ್ಬರಿಗೆ ಕಿವುಡುತನವು ಆರಂಭವಾಗಿದೆ ಎನ್ನುವುದನ್ನು ಕೆಲವು ಲಕ್ಷಣಗಳಿಂದ ಗ್ರಹಿಸಬಹುದು. ಕಿವುಡುತನವು ಆರಂಭವಾದಾಗ ಫೋನಿನಲ್ಲಿ ಏನನ್ನು ಮಾತನಾಡುತ್ತಿದ್ದಾರೆ ಎನ್ನುವುದು ಪೂರ್ಣವಾಗಿ ಕೇಳುವುದಿಲ್ಲ. ಶಬ್ದವನ್ನು ಕೇಳಿದಾಗ, ಆ ಶಬ್ದವು ಎಲ್ಲಿಂದ ಹೊರಟಿತು ಎಂದು ಶಬ್ದ ಉತ್ಪಾದನಾ ಆಕರವನ್ನು ಪತ್ತೆಹಚ್ಚುವುದು ಕಷ್ಟವಾಗಿಬಿಡುತ್ತದೆ. ಕೆಲವು ಸಲ ಎದುರು ಮಾತನಾಡುತ್ತಿರುವವರ ಎಲ್ಲ ಶಬ್ದಗಳು ಅರ್ಥವಾಗುವುದಿಲ್ಲ. ಅದರಲ್ಲೂ ಹೆಂಗಸರು ಮತ್ತು ಮಕ್ಕಳು ಉಚ್ಚದನಿ ಯಲ್ಲಿ ಮಾತನಾಡುವಾಗ ಅನೇಕ ಶಬ್ದಗಳು ಕೇಳುವುದೇ ಇಲ್ಲ. ಮದುವೆ ಮನೆಯ ಗದ್ದಲದಲ್ಲಿ ಹಿನ್ನೆಲೆಯ ಎಲ್ಲ ಶಬ್ದಗಳು
ಕೇಳುತ್ತಿರುತ್ತವೆ. ಆದರೆ ಎದುರು ನಿಂತು ಮಾತನಾಡುತ್ತಿರುವವರ ಮಾತು ಮಾತ್ರ ಕೇಳುವುದಿಲ್ಲ. ರೇಡಿಯೋ ಮತ್ತು ಟೆಲಿಷನ್ ವಾಲ್ಯೂಮನ್ನು ಹೆಚ್ಚಿಸಿದರೆ ಮಾತ್ರ ಕೇಳುತ್ತದೆ. ಆದರೆ ಆ ಪ್ರಮಾಣದ ವಾಲ್ಯೂಮ್ ಮನೆ ಮಂದಿಗೆ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಕಿವಿ ಮುಚ್ಚಿಕೊಂಡಹಾಗೆ ಅಥವಾ ಒಂದು ರೀತಿಯ ನೋವು ಕಿವಿಯಲ್ಲಿ ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ಕಿವಿಯಲ್ಲಿ ಜೇನ್ನೊಣದ ಝೇಂಕಾರದಂಥ ‘ಶಬ್ದವಲ್ಲದ ಶಬ್ದ’ – ಕಿವಿಯ ಮೊರೆತವು (ಟಿನಿಟಸ್) ಕೇಳಿಬರಬಹುದು. ತಲೆಸುತ್ತು ಬರಬಹುದು. ವಾಂತಿಯಾಗಬಹುದು. ಇವೆಲ್ಲವು ಕಿವುಡುತನವು ಆರಂಭವಾಗುತ್ತಿರುವ ಮುಖ್ಯವಾದ ಕೆಲವು ಲಕ್ಷಣಗಳು.

ನಮೂನೆಗಳು: ಕಿವುಡುತನದಲ್ಲಿ ಮೂರು ನಮೂನೆಗಳಿವೆ. ಮೊದಲನೆಯದು ಶಬ್ದವಹನ ದೋಷದಿಂದಾದ ಕಿವುಡುತನ (ಕಂಡಕ್ಟಿವ್ ಡೆಫ್‌ನೆಸ್) ಎರಡನೆಯದು ನರವಹನ ದೋಷದಿಂದಾದ ಕಿವುಡುತನ (ಸೆನ್ಸರಿನ್ಯೂರಲ್ ಡೆಫ್‌ ನೆಸ್) ಅಥವ ಸಮ್ಮಿಶ್ರ ದೋಷ ಕಿವುಡುತನ (ಮಿಕ್ಸಡ್ ಡೆಫ್‌ ನೆಸ್). ಮೊದಲನೆಯ ನಮೂನೆಯಲ್ಲಿ ಶಬ್ದದಲೆಗಳ ಸಂಚಾರಕ್ಕೆ ಅಡೆತಡೆಗಳು ಹೊರಕಿವಿ ಮತ್ತು ನಡುಕಿವಿಯಲ್ಲಿರುತ್ತವೆ. ಉದಾಹರಣೆಗೆ ಹೊರಕಿವಿಯಲ್ಲಿ ಗುಗ್ಗೆ ತುಂಬಿಕೊಂಡರೆ, ಶಬ್ದದ ಅಲೆಗಳು ಕಾಕ್ಲಿಯ ವನ್ನು ಪೂರ್ಣವಾಗಿ ತಲುಪುವುದಿಲ್ಲ. ಇದರಿಂದ ಭಾಗಶಃ ಕಿವುಡುತನ ತಾತ್ಕಾಲಿಕವಾಗಿ ಕಂಡುಬರಬಹುದು. ಗುಗ್ಗೆಯನ್ನೆಲ್ಲ ತೆಗೆದು ಕಿವಿಯನ್ನು ಸ್ವಚ್ಛಗೊಳಿಸಿದರೆ, ಕಿವಿಯು ಮೊದಲಿನಂತೆ ಕೇಳುತ್ತದೆ. ಮಧ್ಯ ಕಿವಿಯಲ್ಲಿರುವ ಮೂರು ಮೂಳೆಗಳ ನಡುವೆ ಇರುವ ಕೀಲುಗಳು ಜಾರಬಹುದು. ಜಾರಿದಾಗ ಶಬ್ದದಲೆಗಳ ಸಂಚಲನವು ಪೂರ್ಣವಾಗುವುದಿಲ್ಲ, ತಾತ್ಕಾಲಿಕ ಅರೆ ಕಿವುಡುತನ ವುಂಟಾಗುತ್ತದೆ. ಜಾರಿದ ಕೀಲನ್ನು ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸಿದಾಗ, ಕಿವಿಯು ಪೂರ್ಣ ಕೇಳುತ್ತದೆ. ಹೀಗೆಯೇ ಕಿವಿತಮಟೆಗೆ ಹಾನಿ ಯಾದಾಗಲೂ ಅರೆಕಿವುಡುತನವು ತಾತ್ಕಾಲಿಕವಾಗಿ ಕಾಣಿಸಿಕೊಂಡು, ಶಸ್ತ್ರಚಿಕಿತ್ಸೆಯ ನಂತರ ಪೂರ್ಣ ಸರಿಹೋಗ ಬಹುದು.

ಶ್ರವಣಾಂಗದೊಳಗೆ ಸೂಕ್ಷ್ಮ ಶ್ರವಣರೋಮಕ ಗಳು (ಹೇರ್ ಸೆಲ್ಸ್) ಇರುತ್ತವೆ. ಇವುಗಳಿಗೆ ಹಾನಿಯಾದರೆ ಅಥವಾ ಇಲ್ಲಿಂದ ಮಿದುಳಿನ ಕಡೆ ಸಾಗುವ ಶ್ರವಣ ನರಕ್ಕೆ ಹಾನಿಯಾದರೆ ಶಾಶ್ವತ ಕಿವುಡುತನವು ತಲೆದೋರಬಹುದು. ಸೂಕ್ಷ್ಮ ರೋಮಕಗಳಿಗಾದ ಹಾನಿಯ ತೀವ್ರತೆ ಮತ್ತು ವ್ಯಾಪ್ತಿಯನ್ನು ಅನುಸರಿಸಿ, ಕಿವುಡುತನದ ಪ್ರಮಾಣವು ಹೆಚ್ಚೂಕಡಿಮೆಯಾಗಬಹುದು. ಕೆಲವು ಸಲ ಸಮ್ಮಿಶ್ರ ಕಿವುಡುತನವು ತಲೆದೋರಬಹುದು. ಇಂತಹ ನಮೂನೆಯಲ್ಲಿ ಶ್ರವಣಸಾಮರ್ಥ್ಯವು ಪರಿಪೂರ್ಣವಾಗಿ ಹಿಂದಿರಗದಿರ ಬಹುದು.

ತೀವ್ರತೆ: ‘ಆಡಿಯೋಮೆಟ್ರಿ’ ಎನ್ನುವ ಪರೀಕ್ಷೆಯಿಂದ ಕಿವುಡುತನದ ತೀವ್ರತೆಯನ್ನು ಅಳೆಯಬಹುದು. ಶಬ್ದವನ್ನು ‘ಡೆಸಿಬಲ್’ ಎನ್ನುವ ಮಾನದಿಂದ ಅಳೆಯುವುದುಂಟು. ಯಾವ ಪ್ರಮಾಣದ ಡೆಸಿಬಲ್ ಕೇಳಲಿಕ್ಕೆ ಆಗುತ್ತಿಲ್ಲ ಎನ್ನುವುದನ್ನು ಆಧರಿಸಿ ಕಿವುಡುತನವನ್ನು ನಾಲ್ಕು ರೀತಿಯಲ್ಲಿ ವರ್ಗೀಕರಿಸಬಹುದು. 25 ಡೆಸಿಬಲ್ ವ್ಯಾಪ್ತಿಯ ಶಬ್ದವನ್ನು ಕೇಳಬಲ್ಲವರಾದರೆ, ಅವರ ಶ್ರವಣ ಸಾಮರ್ಥ್ಯವು ಬಹುಪಾಲು ಸಹಜ ವ್ಯಾಪ್ತಿಯಲ್ಲಿದೆ ಎನ್ನಬಹುದು. 26-40 ಡೆಸಿಬಲ್ ವ್ಯಾಪ್ತಿಯ ಶಬ್ದವನ್ನು ಕೇಳಲಾಗ ದಿದ್ದರೆ, ಅದು ಸೌಮ್ಯ ಕಿವುಡುತನ (ಮೈಲ್ಡ್ ಡೆಫ್‌ ನೆಸ್) ಎನಿಸಿಕೊಳ್ಳುತ್ತದೆ. ಇಂತಹವರಿಗೆ ಶ್ರವಣ ಸಾಧನವು ಉಪಯುಕ್ತ. 41-60 ಡೆಸಿಬಲ್ ವ್ಯಾಪ್ತಿಯ ಶಬ್ದವನ್ನು ಕೇಳಲಾಗದವರ ಕಿವುಡುತನ ವು ಮಧ್ಯಮ ಪ್ರಮಾಣದಲ್ಲಿದೆ (ಮೀಡಿಯಂ ಡೆಫ್  ನೆಸ್) ಎನ್ನಬಹುದು. ಇವರು ಶ್ರವಣಸಾಧನವನ್ನು ಧರಿಸಿದರೆ ಮಾತ್ರ ದೈನಂದಿನ ಸಂಭಾಷಣೆಯನ್ನು ನಡೆಸಬಲ್ಲರು. 61-80 ಡೆಸಿಬಲ್ ಶಬ್ದವನ್ನು ಕೇಳಲಾಗದವರ ಕಿವುಡುತನವು ತೀವ್ರವಾಗಿದೆ (ಸಿಯರ್ ಡೆಫ್‌ ನೆಸ್) ಎನ್ನಬಹುದು. ಇವರಿಗೆ ಶ್ರವಣ ಸಾಧನವು ಬೇಕಾಗುತ್ತದೆ. ಜತೆಗೆ ತುಟಿ ಚಲನಾ ಗ್ರಹಿಕೆ ಹಾಗೂ ಸಂಜ್ಞಾ ಭಾಷೆಯನ್ನು ಕಲಿಸಬೇಕಾಗುತ್ತದೆ. ಕಿವಿಯು ಕೇಳದಿ ದ್ದರೂ, ಮಾತನಾಡುವವರ ತುಟಿ ಚಲನೆಯ ಸ್ವರೂಪವನ್ನು ಅರ್ಥ ಮಾಡಿಕೊಂಡು ಪ್ರತ್ಯುತ್ತರವನ್ನು ಕೊಡಬಲ್ಲರು. 81 ಡೆಸಿಬಲ್ಲಿಗೂ ಅಧಿಕ ಪ್ರಮಾಣದ ಶಬ್ದಗಳನ್ನು ಕೇಳಲಾಗದವರಿಗೆ ಉಗ್ರ ಕಿವುಡುತನ (ಪ್ರಫೌಂಡ್ ಡೆಫ್‌ನೆಸ್) ಇದೆ ಎನ್ನುವರು. 81 ಡೆಸಿಬಲ್ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕಿವುಡುತನವಿದ್ದರೆ, ಅವರಿಗೆ ಶ್ರವಣಸಾಧನವು ಅಷ್ಟಾಗಿ ನೆರವಾಗದಿರಬಹುದು.

ಇಂತಹವರು ತುಟಿ ಚಲನಾ ಗ್ರಹಿಕೆ ಮತ್ತು ಸಂಜ್ಞಾ ಭಾಷೆಯನ್ನು ಕಲಿಯಬೇಕಾದದ್ದು ಅನಿವಾರ್ಯವಾಗುತ್ತದೆ. ಆದರೆ ಸಂಭಾಷಣೆಯನ್ನು ನಡೆಸಬೇಕಾದರೆ, ಅವರ ಮನೆ ಮಂದಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ಸಂಜ್ಞಾಭಾಷೆಯು ತಿಳಿದಿರ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಈ ವರ್ಷ, ಪ್ರತಿಯೊಬ್ಬರೂ ಸಂಜ್ಞಾಭಾಷೆಯಲ್ಲಿ ಕಲಿಯಬೇಕಾದ ಮಹತ್ವದ ಬಗ್ಗೆ ಜಾಗೃತಿ ಯನ್ನು ಉಂಟು ಮಾಡುವ ಪ್ರಯತ್ನವು ನಡೆದಿದೆ.

ಪರಿಣಾಮಗಳು: ಕಿವುಡುತನವನ್ನು ಸಕಾಲದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆಯನ್ನು ನೀಡದಿದ್ದರೆ, ಅದು ವ್ಯಕ್ತಿಯ ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಮಕ್ಕಳಲ್ಲಿ ಕಿವುಡುತನವು ಆಟಪಾಠಗಳಲ್ಲಿ ಹಿಂದುಳಿಯುವಂತೆ ಮಾಡುತ್ತದೆ. ಗೆಳೆಯರೊಡನೆ ಸರಿಸಮಾನವಾಗಿ ಮಾತುಕತೆಯನ್ನು ಆಡಲಾಗದ ಕಾರಣ, ಏಕಾಕಿಯಾಗಿ ರುವ ಸಾಧ್ಯತೆಯು ಹೆಚ್ಚುತ್ತದೆ. ಮುಂದೆ ಇದು ಖಿನ್ನತೆಗೆ ಕಾರಣವಾಗಬಹುದು. ಭಾಷಾ ಸಾಮರ್ಥ್ಯವನ್ನು ಕ್ರಮೇಣ ಕಳೆದು ಕೊಳ್ಳುತ್ತಾ ಹೋಗಬಹುದು. ಅಪಘಾತಗಳಾಗಬಹುದು. ಆಲ್ಜೆ ಮರ್ ಕಾಯಿಲೆಯು ಅಕಾಲಿಕವಾಗಿ ತಲೆದೋರಲು ಕಿವುಡು ತನವೂ ಪ್ರಮುಖ ಕಾರಣ ಎನ್ನುವುದನ್ನು ನೆನಪಿನಲ್ಲಿಡಬೇಕು.

ಕಾರಣಗಳು: ಕಿವುಡುತನಕ್ಕೆ ಅನೇಕ ಕಾರಣಗಳಿವೆ. ಬಾಲ್ಯದಲ್ಲಿ ಕಿವುಡುತನವು ತಲೆದೋರಲು ಸರ್ವಸಾಮಾನ್ಯವಾದ ಕಾರಣ ವೆಂದರೆ ಕಿವಿಯ ಸೋಂಕು. ಕಿವಿಯಲ್ಲಿ ಸೋಂಕುಂಟಾದಾಗ ಕಿವಿಯು ಸೋರಲಾರಂಭಿಸುತ್ತದೆ. ಇದನ್ನು ಸಕಾಲದಲ್ಲಿ ಪೂರ್ಣ ರೂಪದಲ್ಲಿ ಗುಣಪಡಿಸಲಿಲ್ಲ ವೆಂದರೆ, ಅದು ಕಿವುಡುತನಕ್ಕೆ ಎಡೆ ಕೊಡಬಹುದು. ತಾಯಿಯು ಗರ್ಭವನ್ನು ಧರಿಸಿದ್ದಾಗ, ಆಕೆಯು ಸೈಟೋಮೆಗಾಲೋ ವೈರಸ್, ಸಿಫಿಲಿಸ್, ರುಬೆಲ್ಲ ಮುಂತಾದ ಸೋಂಕುಗಳಿಗೆ ತುತ್ತಾದರೆ, ಆ ಸೋಂಕು ಮಗುವಿನ ಶ್ರವಣ ಶಕ್ತಿಯ ಮೇಲೆ ದುಷ್ಪರಿಣಾಮವನ್ನು ಬೀರಬಲ್ಲುದು. ವಯಸ್ಕರರಲ್ಲಿ ಕಿವುಡುತನವು ತಲೆದೋರಲು ಮುಖ್ಯವಾದ
ಕಾರಣವೆಂದರೆ ಅತೀವ ಶಬ್ದಕ್ಕೆ ತುತ್ತಾಗುವುದು. ಉದಾಹರಣೆಗೆ ಕಾರ್ಖಾನೆಗಳಲ್ಲಿ ಯಂತ್ರಗಳೊಡನೆ ಕೆಲಸ ಮಾಡುವವರು, ಯಂತ್ರದ ಗಡಚಿಕ್ಕುವ ಶಬ್ದವನ್ನು ಪ್ರತಿದಿನ ಎಂಟು ಗಂಟೆಗಳ ಕಾಲ ಕೇಳುತ್ತಾ ಇದ್ದರೆ, ಅವರ ಶ್ರವಣ ಸಾಮರ್ಥ್ಯವು ಕ್ರಮೇಣ ಮಂದವಾಗುತ್ತಾ ಹೋಗುತ್ತದೆ. ಒಂದು ಸಲವು ಕಿವಿಯು ಮಂದವಾಯಿತೆಂದರೆ ಅದನ್ನು ಸರಿಪಡಿಸಲಾಗುವುದಿಲ್ಲ. ಹಾಗಾಗಿ ಅತಿ ಹೆಚ್ಚು ಶಬ್ದವಿರುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಶ್ರವಣ ರಕ್ಷಣಾ ಸಾಧನಗಳನ್ನು ಬಳಸಲೇಬೇಕಾಗುತ್ತದೆ.

ಹದಿಹರಯದವರು ಹಾಗೂ ಯುವಜನತೆಯು ಇಯರ್ ಫೋನ್ ಮೂಲಕ ಸಂಗೀತವನ್ನು ಕೇಳುವ ಹವ್ಯಾಸವನ್ನು ರೂಢಿಸಿ ಕೊಂಡಿರಬಹುದು. ಒಂದು ದಿನಕ್ಕೆ ಒಂದು ಗಂಟೆಯಷ್ಟು ಕಾಲ ಹೆಡ್ ಫೋನ್ ಮೂಲಕ ಸಂಗೀತವನ್ನು ಕೇಳಿದರೆ ತೊಂದ ರೆಯಿಲ್ಲ. ಅದಕ್ಕಿಂತಲೂ ಹೆಚ್ಚಿನ ಕಾಲ ಕೇಳಿದರೆ, ಅದು ಕಿವುಡುತನವನ್ನು ಉಂಟು ಮಾಡಬಹುದು. ರಕ್ತದ ಏರೊತ್ತಡ, ಮಧು ಮೇಹ ಹಾಗೂ ಕೆಲವು ರೀತಿಯ ಔಷಧಗಳನ್ನು ಸೇವಿಸುವವರೂ ಕ್ರಮೇಣ ಕಿವುಡುತನಕ್ಕೆ ತುತ್ತಾಗಬಹುದು.

ಪ್ಯೋರೋಸಮೈಡ್, ಬ್ಯುಮೆಟನೈಡ್, ಆಸ್ಪಿರಿನ್, ಐಬುಬ್ರೂಫೆನ್, ನೆಪ್ರಾಕ್ಸೆನ್, ಸೆಲಿಕಾಕ್ಸಿಬ್, ಡೈಕ್ಲೋಫೆನಾಕ್, ಪ್ಯಾರಾಸಿಟ ಮಾಲ್, ಕ್ವಿನೈನ್ ಮುಂತಾದವು ತಾತ್ಕಾಲಿಕ ಕಿವುಡುತನವನ್ನು ಉಂಟುಮಾಡಿದರೆ, ಕ್ಲೋರಂಫೆನಿಕಾಲ್, ಸ್ಟೆಪ್ಟೋಮೈಸಿನ್, ಜೆಂಟಮೈಸಿನ್, ಸಿಸ್‌ಪ್ಲಾಟಿನ್, ಕಾರ್ಬೋಪ್ಲಾಟಿನ್ ಮುಂತಾದವು ಶಾಶ್ವತ ಕಿವುಡುತನವನ್ನು ಉಂಟುಮಾಡಬಹುದು. ಸೀಸ, ಪಾದರಸ, ಕ್ಯಾಡ್ಮಿಯಂ, ಅರ್ಸೆನಿಕ್, ಟ್ರೈಮೀಥೈಲ್ ಟಿನ್, ಅಸಿಟಿಕ್ ಆಸಿಡ್, ಪ್ರೊಪೆಲೀನ್ ಗ್ಲೈಕಾಲ್, ಕ್ವಾಟರ್ನರಿ ಅಮೋನಿಯಂ ಕಾಂಪೌಂಡ್ಸ್, ಟಾಲೀನ್, ಸ್ಟೆ ರೀನ್, ಜ಼ೈಲೀನ್, ಕಾರ್ಬನ್ ಡೈ ಸಲೈಡ್, ಟೆಟ್ರಾಕ್ಲೋರೋ ಇಥಲಿನ್, ಕಾರ್ಬನ್
ಮಾನಾಕ್ಸೆ ಡ್, ಹೈಡ್ರೋಜಿನ್ ಸಯನೈಡ್ ಇತ್ಯಾದಿ ರಾಸಾಯನಿಕಗಳು ಕಿವುಡತನವನ್ನು ಹೆಚ್ಚಿಸಬಹುದು.

ಕೆಲವರ ವಂಶವಾಗಳಲ್ಲಿಯೇ ದೋಷವಿದ್ದು, ಅವರು ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ತುತ್ತಾಗದಿದ್ದರೂ ಸಹ, ವಯಸ್ಸಾಗುತ್ತಿರು ವಂತೆಯೇ ಅವರ ಶ್ರವಣ ಸಾಮರ್ಥ್ಯವು ಕುಗ್ಗುತ್ತಾ ಹೋಗುತ್ತದೆ. ಗಂಡಸರಿಗೆ 25 ವರ್ಷಗಳಾಗುತ್ತಿರುವಂತೆಯೇ ಹಾಗೂ ಹೆಂಗಸರಿಗೆ 30 ವರ್ಷಗಳಾಗುತ್ತಿರುವಂತೆಯೇ ಈ ಕಿವುಡುತನ ತನಗೆ ತಾನೇ ಆರಂಭವಾಗುತ್ತದೆ. ಇದನ್ನು ತಡೆಗಟ್ಟುವುದು ಕಷ್ಟ.

ಪತ್ತೆಹಚ್ಚುವಿಕೆ: ಕಿವುಡುತನವನ್ನು ಉಂಟಾಗುತ್ತದೆ ಎನ್ನುವುದನ್ನು ಸಕಾಲದಲ್ಲಿ ಪತ್ತೇಹಚ್ಚಿದರೆ, ಮತ್ತಷ್ಟು ಕಿವುಡುತನವು ಆಗದಂತೆ ತಡೆಯಲು ಅಗತ್ಯವಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬಹುದು. ಮಕ್ಕಳು ಶಾಲೆಗೆ ಸೇರುವಾಗ, 6,8 ಮತ್ತು 10 ವರ್ಷಗಳಾದಾಗ, ಮಾಧ್ಯಮಿಕ ಶಾಲೆಯ ಆರಂಭದಲ್ಲಿ ಹಾಗೂ ಹೈಸ್ಕೂಲು ಆರಂಭದಲ್ಲಿ ಮಕ್ಕಳ ಕಿವಿಗಳನ್ನು ಪರೀಕ್ಷಿಸಿ, ಶ್ರವಣ ಸಾಮರ್ಥ್ಯವು ಸಹಜ ವ್ಯಾಪ್ತಿಯಲ್ಲಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮಕ್ಕಳ ಕಿವಿಯು ಚೆನ್ನಾಗಿ ಕೇಳುತ್ತಿದ್ದರೆ ಮಾತ್ರ ಅವರು ಚೆನ್ನಾಗಿ ಮಾತನಾಡಬಲ್ಲರು ಹಾಗೂ ಓದಿನಲ್ಲಿ ಪ್ರಗತಿಯನ್ನು ಸಾಧಿಸಬಲ್ಲರು. ಇಯರ್ ಫೋನ್ ಮೂಲಕ ಸಂಗೀತವನ್ನು ಆಲಿಸುವ ಹಾಗೂ ರಾಕ್ ಸಂಗೀತವನ್ನು ಇಷ್ಟ ಪಡುವ ಯುವಜನತೆಯು ಎರಡು ವರ್ಷಕ್ಕೆ ಒಮ್ಮೆ ಯಾದರೂ ತಮ್ಮ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವುದು ಒಳಿತು. ಕಾರ್ಖಾನೆಗಳ ಅಧಿಕ ಶಬ್ದ ಪರಿಸರದಲ್ಲಿ ಕೆಲಸ ಮಾಡುವ ಕಾರ್ಮಿಕರು ಆರು ತಿಂಗಳಿಗೊಮ್ಮೆ ತಮ್ಮ ಕಿವಿಗಳನ್ನು ಕಡ್ಡಾಯವಾಗಿ ಪರೀಕ್ಷೆಯನ್ನು ಮಾಡಿಕೊಳ್ಳಲೇಬೇಕು.

ತಡೆಗಟ್ಟುವಿಕೆ: ಕಿವುಡುತನವು ಉಂಟಾದ ಮೇಲೆ ಗುಣಪಡಿಸಲೆತ್ನಿಸುವ ಬದಲು ಬರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಮಕ್ಕಳಿಗೆ ಮೀಸಲ್ಸ್, ಮೆನಿಂಜೈಟಿಸ್, ರುಬೆಲ್ಲ, ಮಂಪ್ಸ್ ಮುಂತಾದ ಸೋಂಕುರೋಗಗಳನ್ನು ನಿಯಂತ್ರಿಸುವ ಲಸಿಕೆಯನ್ನು ಕೊಡಿಸಬೇಕು. ಹದಿಹರಯದಲ್ಲಿರುವ ಹಾಗೂ ಗರ್ಭಧಾರಣೆಯ ಮೊದಲು ಎಲ್ಲ ಮಹಿಳೆಯರು ರುಬೆಲ್ಲ ಲಸಿಕೆ ಯನ್ನು ಪಡೆಯುವುದು ಒಳ್ಳೆಯದು. ಗರ್ಭಧಾರಣೆಯ ಮೊದಲು ಸಿಫಿಲಿಸ್ ಮುಂತಾದ ಲೈಂಗಿಕ ರೋಗಗಳಿದ್ದರೆ,
ಅದಕ್ಕೆ ಪೂರ್ಣ ಚಿಕಿತ್ಸೆಯನ್ನು ತೆಗೆದುಕೊಂಡ ನಂತರವೇ ಮಕ್ಕಳನ್ನು ಪಡೆಯಲು ಪ್ರಯತ್ನಿಸಬೇಕು. ಗರ್ಭವತಿ ತಾಯಿಗೆ ಒಳ್ಳೆಯ ಪೋಷಕಾಂಶಗಳು ದೊರೆಯಬೇಕು. ಸುರಕ್ಷಿತ ಪ್ರಸವಕ್ಕೆ ಅನುಕೂಲತೆಗಳಿರಬೇಕು. ಮಕ್ಕಳ ಕಿವಿ ಸೋರದಂತೆ ಎಚ್ಚರ ವಹಿಸಬೇಕು. ಹಾಗೆ ಸೋರಿದರೆ ಅದನ್ನು ಪೂರ್ಣ ಗುಣಪಡಿಸಬಲ್ಲ ಔಷಧ/ಶಸಚಿಕಿತ್ಸೆಯನ್ನು ನೀಡಬೇಕು. ಶ್ರವಣ ಶಕ್ತಿ ನಾಶಕ ಔಷಧಗಳ ಸೇವನೆಯನ್ನು ಸಾಧ್ಯವಾದರೆ ತಡೆಗಟ್ಟಬೇಕು. ಯುವಜನತೆಯು ಇಯರ್ ಫೋನ್ ಮೂಲಕ ಸಂಗೀತವನ್ನು ಕೇಳುವ ಹವ್ಯಾಸಕ್ಕೆ ಮಿತಿಯನ್ನು ಹಾಕಬೇಕು. ಅತಿ ಶಬ್ದಮಾಲಿನ್ಯದಲ್ಲಿ ಕೆಲಸ ಮಾಡಲೇಬೇಕಾದ ವಯಸ್ಕರರು ಶ್ರವಣ ಶಕ್ತಿಯ ನಾಶ ವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಇಯರ್ ಮಫ್‌ / ಇಯರ್ ಪ್ಲಗ್‌ಗಳನ್ನು ಬಳಸಬೇಕು ಹಾಗೂ ನಿಯಮಿತವಾಗಿ ಆಡಿಯೋಮೆಟ್ರಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಅಗತ್ಯ ಬಿದ್ದರೆ ಕೆಲಸವನ್ನು ಬದಲಾಯಿಸಲು ಹಿಂಜರಿಯಬಾರದು.

ಚಿಕಿತ್ಸೆ: ಕಿವುಡುತನವನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಚಿಕಿತ್ಸೆಗಳು ಕಡಿಮೆ. ತಾತ್ಕಾಲಿಕ ಕಿವುಡುತನಕ್ಕೆ ಕಾರಣವಾಗುವ ಕಿವಿ ಗುಗ್ಗೆಯನ್ನು ಸುಲಭವಾಗಿ ತೆಗೆಯಬಹುದು. ಕಿವಿಯ ಸೋರುವಿಕೆಯಿಂದ ಅಥವಾ ಕಿವಿಯೊಳಗೆ ಹಾಕುವ ಮೂಲಕ ಕಿವಿತಮಟೆಗೆ ಉಂಟಾಗಿರುವ ಹಾನಿಯನ್ನು ಶಸಚಿಕಿತ್ಸೆಯಿಂದ ಸರಿಪಡಿಸ ಬಹುದು. ಕಿವಿಯ ಬಳಿಯಲ್ಲಿಯೇ ಆಟಂ ಬಾಂಬ್ ಪಟಾಕಿಯನ್ನು ಹಚ್ಚಿದಾಗ, ಅಂದರೆ ಒಮ್ಮೆಲೇ ತೀವ್ರ ಸ್ವರೂಪದ ಶಬ್ದವನ್ನು ಕೇಳಿದಾಗ, ನಡುಕಿವಿಯ ಮೂರು ಮೂಳೆಗಳು ಕೀಲುತಪ್ಪಬಹುದು. ಇದನ್ನೂ ಸಹ ಶಸಚಿಕಿತ್ಸೆ ಯಿಂದ ಸರಿಪಡಿಸಬಹುದು. ಜನ್ಮದತ್ತ ಕಿವುಡುತನವನ್ನು ಕಾಕ್ಲಿ ಯಾರ್ ಇಂಪ್ಲಾಂಟ್  ಶಸ್ತ್ರ ಚಿಕಿತ್ಸೆಯಿಂದ ಶ್ರವಣ ಶಕ್ತಿಯನ್ನು ನೀಡಬಹುದು. ನರವಹನ ದೋಷ ಕಿವುಡುತನವಿರುವವರು ಶ್ರವಣ ಸಾಧನವನ್ನು ಬಳಸುವುದರ ಮೂಲಕ ತಾತ್ಕಾಲಿಕ ಉಪಶಮನವನ್ನು ಪಡೆಯಬಹುದು. ಇತ್ತೀಚೆಗೆ ಆಕರಕೋಶ ಚಿಕಿತ್ಸೆ ಹಾಗೂ ಜೀನ್ ಥೆರಪಿಯ ಮೂಲಕ ಕಿವುಡುತನವನ್ನು ತಡೆಗಟ್ಟುವ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿದೆ.

ಸಂಜ್ಞಾಭಾಷೆ: ಕಿವುಡರು ಹಾಗೂ ಮೂಗರ ಬದುಕನ್ನು ಕುರಿತು ಕನ್ನಡದಲ್ಲಿ ನಾಂದಿ ಎನ್ನುವ ಚಿತ್ರವನ್ನು ಎನ್.ಲಕ್ಷ್ಮೀ
ನಾರಾಯಣ್ ನಿರ್ದೇಶಿಸಿದರು. ಹಾಗೆಯೇ ಹಿಂದಿಯಲ್ಲಿ ಕೋಶೀಶ್ ಚಿತ್ರವನ್ನು ಗುಲ್ಜಾರ್ ನಿರ್ದೇಶಿಸಿದರು. ಅದರಲ್ಲಿ ಸಂಜೀವ್ ಕುಮಾರ್ ಹಾಗೂ ಜಯಭಾದುರಿಯರ ಅಭಿನಯವು ಮನೋಜ್ಞವಾಗಿತ್ತು. ಈ ಚಿತ್ರದಲ್ಲಿ ಮಾತು ಬಾರದ, ಕಿವಿ ಕೇಳದ ನಾಯಕ ಮತ್ತು ನಾಯಕಿಯರು ಅವರಿಗೆ ಮಾತ್ರ ಅರ್ಥವಾಗುವ ಸಂಜ್ಞಾಭಾಷೆಯನ್ನು ಬಳಸುತ್ತಾರೆ. ಈ ಭಾಷೆಯನ್ನು ಜನಸಾಮಾ ನ್ಯರೂ ಸಹ ಪರಿಚಯವನ್ನು ಮಾಡಿಕೊಂಡರೆ, ಕಿವುಡರ ಬದುಕು ಸಹನೀಯವಾಗುತ್ತದೆ. ಅವರು ಎಲ್ಲರ ಹಾಗೆ ಸಮಾಜದಲ್ಲಿ ತಮ್ಮ ದೈನಂದಿನ ಬದುಕನ್ನು ತಮ್ಮ ಪಾಡಿಗೆ ತಾವು ನಡೆಸಿಕೊಂಡು ಹೋಗಲು ಸಹಾಯವಾಗುತ್ತದೆ.

ಸಂಜ್ಞಾಭಾಷೆಯ ಬಗ್ಗೆ ಮೊದಲು ಪ್ರಸ್ತಾಪಿಸಿದವನು ಕ್ರಿ.ಪೂ.5 ನೆಯಶತಮಾನದಲ್ಲಿ ಗ್ರೀಸ್ ದೇಶದಲ್ಲಿದ್ದ ಸಾಕ್ರಟಿಸ್. ‘ನಮಗೆ ಮಾತನಾಡುವ ಶಕ್ತಿ ಇರದಿದ್ದಲ್ಲಿ ನಾವೂ ಸಹ, ಇಂದು ಕಿವುಡರು ಮಾಡುತ್ತಿರುವ ಹಾಗೆ, ನಮ್ಮ ಕೈಕಾಲು, ಮುಖಭಾವ ಹಾಗೂ ಆಂಗಿಕಗಳಿಂದ ಸಂಭಾಷಣೆ ಯನ್ನು ನಡೆಸಲು ಪ್ರಯತ್ನಿಸಬೇಕಾಗಿತ್ತು’ ಎಂದಿದ್ದಾನೆ.

ಇಡೀ ಜಗತ್ತಿನ ಜನರು ಅರ್ಥ ಮಾಡಿಕೊಳ್ಳಬಹುದಾದಂಥ ಭಾಷೆ ಹೇಗೆ ಇಲ್ಲವೋ ಹಾಗೆಯೇ ಇಡೀ ಜಗತ್ತಿನ ಜನರು ಅರ್ಥಮಾಡಿ ಕೊಳ್ಳಬಹುದಾದಂಥ ಏಕರೂಪ ಸಂಜ್ಞಾಭಾಷೆಯಿಲ್ಲ. ಅಮೆರಿಕನ್, ಫ್ರೆಂಚ್, ಬ್ರಿಟಿಷ್, ರಷ್ಯನ್, ಜ಼ೆಕ್, ಡ್ಯಾನಿಶ್, ಸ್ವೀಡಿಶ್, ಜರ್ಮನ್, ವಿಯಟ್ನಾಮೀಸ್, ಅರಬ್, ಜಾಪನೀಸ್, ಚೈನೀಸ್ ಸಂಜ್ಞಾಭಾಷೆಗಳಿವೆ. ಇಂಡೋ – ಪಾಕಿಸ್ತಾನಿ ಸಂಜ್ಞಾಭಾಷೆಯಿದೆ. ಆದರೆ ಎಲ್ಲ ದೇಶದ ಜನರು ಅರ್ಥಮಾಡಿಕೊಳ್ಳಬೇಕಾದ ಸಂಜ್ಞಾಭಾಷೆಯನ್ನು ರೂಪಿಸಬೇಕಾದ ಅಗತ್ಯ ಎಲ್ಲ ದೇಶದವರಿಗೆ
ತಿಳಿದಿದ್ದರೂ, ಅಂತಹ ಭಾಷೆಯನ್ನು ರೂಪಿಸಲು ಹೊರಟಿಲ್ಲ. ಜಗತ್ತಿನ ಎಲ್ಲ ದೇಶದ ಜನರಿಗೆ ಅರ್ಥವಾಗಬಹುದಾದಂಥ
‘ಎಸ್ಪೆರಾಂತೊ’ ಭಾಷೆಯನ್ನು ರೂಪಿಸಿದ್ದಾರಾದರೂ ಅದು ಜನಪ್ರಿಯವಾಗಲೇ ಇಲ್ಲ. ಭಾರತದ ಯಾವ ಶಾಲೆಯಲ್ಲಿಯೂ ಅದನ್ನು ಕಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಹುಶಃ ಜಾಗತಿಕ ಸಂಜ್ಞಾಭಾಷೆಯು ಕನಸೇ ಆಗಿದೆ.

Leave a Reply

Your email address will not be published. Required fields are marked *