Friday, 20th September 2024

ಬುದ್ದಿ ಭಾವಗಳ ವಿಕಾಸದಲ್ಲಿ ತಾಯ್ನುಡಿಯ ಮಹತ್ವ

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಪ್ರಾಥಮಿಕ ಶಿಕ್ಷಣ ತಾಯ್ನುಡಿಯ ಆಗಬೇಕು. ಏಕೆಂದರೆ, ಮಗುವಿನ ಬುದ್ಧಿ ಭಾವಗಳ ವಿಕಾಸದ ತಳಹದಿ ತಾಯ್ನುಡಿ ಬೋಧನೆಯ ಅಡಗಿದೆ. ದೊಡ್ಡವರಾಗುತ್ತ ಹೋದಂತೆ ಬುದ್ಧಿ ಭಾವಗಳ ವಿಕಾಸ ಅನ್ಯಭಾಷೆಯಲ್ಲೂ ಸಾಧ್ಯವಿದೆ.

ಹೆಚ್ಚಿನ ಕಲಿಕೆಗೆ ಸಮರ್ಥ ತಾಯ್ನುಡಿ ಬೋಧನೆ-ಕಲಿಕೆಯ ತಳಪಾಯ ಇದ್ದರೆ ಮಾತ್ರ ವಿದ್ಯಾರ್ಜನೆ ಸುಗಮವಾಗುತ್ತದೆ. ತಾಯ್ನುಡಿನ ಬೋಧನೆಯ ಪ್ರಾಥಮಿಕ ಹಂತದ ಕಲಿಕೆ ಆಗಬೇಕೆಂಬುದು ಜಾಗತಿಕ ಭಾಷಾ ತಜ್ಞರ ಅಭಿಪ್ರಾಯವೂ ಆಗಿದೆ. ಕಲ್ಕತ್ತ ವಿವಿ ಆಯೋಗದ ಪ್ರಕಾರ ಮಾತೃಭಾಷೆ ವ್ಯಕ್ತಿಯ ನೆರಳಿದ್ದಂತೆ. ಅದು ವ್ಯಕ್ತಿತ್ವದ ಅವಿನಾಭಾಗ. 19ನೆಯ ಶತಮಾನದ ಆರಂಭದಿಂದಲೇ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕೆಂಬ ಬೇಡಿಕೆ ಹುಟ್ಟಿಕೊಂಡಿದೆ.

ಗಾಂಧಿ, ಠಾಗೋರ್, ರಾಧಾಕೃಷ್ಣನ್ ಅಂಥ ವಿಚಾರವೇತ್ತರು ಮಾತೃ ಭಾಷೆಯ ಬೋಧನೆ ಮತ್ತು ಕಲಿಕೆಯನ್ನು ಸಮರ್ಥಿಸಿದ್ದಾರೆ. ಕನಿಷ್ಠ ಪ್ರೌಢಶಾಲಾ ಹಂತದ ವರೆಗೂ ಮಾತೃಭಾಷೆ ಶಿಕ್ಷಣವನ್ನು ಕೊಡಬೇಕೆಂದು ಶಿಕ್ಷಣ ತಜ್ಞರ ಅಂಬೋಣ. ಏಕೆಂದರೆ ಒಂದು ಭಾಷೆಯನ್ನು ಕಲಿಯುವುದಕ್ಕೂ ಭಾಷೆಯ ಬಗೆಗೆ ತಿಳಿಯುವು ದಕ್ಕೂ ಭಾಷೆಯ ಮೂಲಕ ಕಲಿಯುವುದಕ್ಕೂ ಹಲವು ವ್ಯತ್ಯಾಸಗಳಿವೆ. ಚಿಂತನೆಗಳು ಹುಟ್ಟುವುದು ಮಾತೃಭಾಷೆಯ ಆಗಿರುವುದ ರಿಂದ ಇಂಗ್ಲಿಷಲ್ಲಿ ಮಾತಾಡು ವಾಗಲೂ ಮನಸ್ಸು ಮಾತೃಭಾಷೆಯ ತುರ್ಜುಮೆ ಮಾಡುತ್ತಿರುತ್ತದೆ.

ಭಾಷೆ ಭಾವನೆ ಮತ್ತು ವಿಚಾರಗಳ ವಾಹಕ. ಏಕೆಂದರೆ, ಭಾಷೆ ಬುದ್ಧಿ ಭಾವಗಳ ವಿದ್ಯುದಾಲಿಂಗನ. ಬುದ್ಧಿಯ ಅಲಗಿನ ಸ್ಪರ್ಶವಿಲ್ಲದ ಭಾವ ಕೀವಾಗುತ್ತದೆ. ಭಾವದ ಸಂಪರ್ಕವಿಲ್ಲದೆ ಬುದ್ಧಿ ರಾಕ್ಷಸವಾಗುತ್ತದೆ ಎನ್ನುತ್ತಾರೆ ಅನಂತಮೂರ್ತಿ. ಸಂವಹನ ಮತ್ತು ಸಂಪರ್ಕದ ಸಾಧನವಾಗಿ ಭಾಷೆ ನಿರಂತರವಾಗಿರುತ್ತದೆ. ಯಾವ ಚಿಂತನೆ ಯೂ ಮಾತೃಭಾಷೆಯ ತಳಹದಿಯಿಲ್ಲದೆ ಸೃಜಿಸುವುದಿಲ್ಲ. ಮಾತೃಭಾಷೆಯ ತಳಹದಿಯಿಲ್ಲದೆ ಯಾವ ಭಾಷೆ ಯನ್ನೂ ಕಲಿತರೂ ಅದು ಅನುಭವ ಜನ್ಯವಾಗಲಾರದು.

ಭಾರತದ ಬೌದ್ಧಿಕ, ವೈಚಾರಿಕ ಮತ್ತು ಮಾನಸಿಕ ಸ್ಥಿತಿಯನ್ನು ಬದಲಾಯಿಸಬೇಕೆಂದ ಮೆಕಾಲೆ ಬಾಯಿಂದ ಬಂದ ಮಾತುಗಳಿವು:  I have travelled across the length and breadth of India and I have not seen one person who is beggar, who is thief, such wealth I have seen in this country, such high values people of such caliber, that I do not think we would ever conquer this country, unless we break the very backbone of this nation, which is her spiritual and cultural heritage and therefore. I propose that we replace her old and ancient educational system, her culture, for if the Indians think that all that is foreign and English is good and greater than their own, they will lose their self esteem, their native culture and they will become that we want them a truly dominated nation (Lord Macaulay’s Address to the British Parliament on 2 feb 1835) ಈ ದೇಶದ ಅಧ್ಯಾತ್ಮಿಕ ವೈಚಾರಿಕ ಸಾಂಸ್ಕೃತಿಕ ಸಿರಿಯನ್ನು ಆ ದೇಶದ ಭಾಷೆಗಳನ್ನು ಕೊಲ್ಲುವುದರ ಮೂಲಕ ಇಂಗ್ಲಿಷ್ ಭಾರತವನ್ನು ಆಪೋಷನ ತೆಗೆದುಕೊಂಡ ವಿಷಯವೇನೂ ಸಣ್ಣ ಸಾಮಾನ್ಯವೇ? ಕೆಲವೇ ಕೆಲವು ವರ್ಷ ಗಳ ಹಿಂದಿನ ಘಟನೆಯಿದು! ಇಂದು ಭಾರತ ಇಂಗ್ಲಿಷಿಗೆ ಸೋತು ನತಮಸ್ತಕವಾಗಿ ಮಲಗಿದೆ.

ಚಿಂತನೆಗಳು ಹರಳುಗಟ್ಟುವುದು ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನಡೆದಾಗ ಮಾತ್ರ ಎಂಬುದು ಶಿಕ್ಷಣ ತಜ್ಞರ ಬಲವಾದ ಅಭಿಪ್ರಾಯ. ಏಕೆಂದರೆ, ತಾನು ನೋಡುವ ಪದಾರ್ಥಗಳನ್ನು, ಗ್ರಹಿಸುವ ಗಂಧವನ್ನು, ರುಚಿಯನ್ನು, ಕೇಳುವ ಧ್ವನಿಗಳನ್ನು, ಒಳ್ಳೆಯ, ಕೆಟ್ಟ ಬಣ್ಣಗಳನ್ನು ಮಗುವು ತನ್ನ ತಾಯ್ನುಡಿಯ ಮೂಲಕವೇ ಹೆಸರಿಸಲು ಕಲಿಯುತ್ತದೆ ಎನ್ನುತ್ತಾನೆ ಸ್ಯಾಡ್ಲರ್. ಆದ್ದರಿಂದ ಬುದ್ಧಿವಿಕಾಸ ಹಾಗೂ ಭಾವಪ್ರಕಾಶದ ದೃಷ್ಟಿಯಿಂದ ಮಾತೃಭಾಷೆಯ ಬೋಧನೆ ಮತ್ತು ಕಲಿಕೆಯಾಗ ಬೇಕು. ಭಾಷೆ ಮೂರ್ಖವಾದರೆ ಚಿಂತನೆ ಮೂರ್ಖವಾಗುತ್ತದೆ. ಚಿಂತನ ಮೂರ್ಖವಾದರೆ ಭಾಷೆ ಹೆಳವಾಗುತ್ತದೆ ಎಂಬ ಜಾರ್ಜ್ ಆರ್ವೆಲ್ ಹೇಳುತ್ತಾನೆ.

ಭಾಷೆ ನಶಿಸಿದರೆ ಸಂಸ್ಕೃತಿ ನಾಶವಾದಂತೆ ಎನ್ನುತ್ತಾರೆ ಅನಂತಮೂರ್ತಿಯವರು. ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ರವಾನಿಸುವ ದೃಷ್ಟಿಯಿಂದ ತಾಯ್ನುಡಿ ಬೋಧನೆ ಮತ್ತು ಕಲಿಕೆ ಸಾಗಬೇಕು. ಏಕೆಂದರೆ, ಯಾವುದೇ ಶಿಕ್ಷಣದ ಅಂತಿಮ ಗುರಿ ಮನುಷ್ಯನನ್ನು ಹೆಚ್ಚು ಸಂಸ್ಕೃತಿ ವಂತನನ್ನಾಗಿಸುವುದು, ಮಾನವೀಯಗೊಳಿಸುವುದು. ಮಾತೃಭಾಷೆ ಬೋಧನೆ ಮತ್ತು ಕಲಿಕೆ ಇದಕ್ಕೆ ಪೂರಕ ಮತ್ತು ಪ್ರಚೋದಕ.

ಪ್ರತಿಯೊಂದೂ ಭಾಷೆಗೂ ಲೋಕೋಪಯೋಗಿ (ನಿತ್ಯೋಪಯೋಗಿ), ಭಾವೋಪಯೋಗಿ, ಶಾಸ್ತ್ರೋಪಯೋಗಿ ಎಂಬ ಮೂರು ಮುಖಗಳಿರುತ್ತವೆ ಎನ್ನುತ್ತಾರೆ
ಕುವೆಂಪು. ಸರಳವಾದ ವಿಷಯವನ್ನು ಸರಳವಾದ ರೀತಿಯಲ್ಲಿ ಹೇಳುವುದಕ್ಕೂ, ಸರಳವಾದ ವಿಚಾರವನ್ನು ಸರಳವಾಗಿ ಕೇಳಿ ತಿಳಿಯುವುದಕ್ಕೂ, ಸರಳವಾದ ಸಂಗತಿಯನ್ನು ಸರಳವಾಗಿ ಓದುವುದಕ್ಕೂ, ಸರಳವಾದ ಅಭಿಪ್ರಾಯಗಳನ್ನು ಸರಳವಾಗಿ ಬರೆಯುವುದಕ್ಕೂ ಕಲಿಸುವುದೇ ಮಾತೃಭಾಷಾ ಬೋಧನೆಯ ಉದ್ದೇಶ ಎನ್ನುತ್ತಾನೆ ಜಿ. ಸ್ಯಾಂಪ್ಸನ್. ಇದು ಭಾಷೆಯ ನಿತ್ಯೋಪಯೋಗದ ಮಾತು.

ಮಕ್ಕಳ ಅಂತರಂಗದ ಒತ್ತಡ, ಭಾವನೆ, ಕಲ್ಪನೆಗಳಿಗೆ ಸೂಕ್ತ ರಹದಾರಿ ಲಭ್ಯವಾಗಬೇಕು. ಭಾವಪೋಷಣೆ ಹಾಗೂ ಭಾವಾಭಿವ್ಯಕ್ತಿಗೆ ಮಾತೃಭಾಷೆಯೇ ಸೂಕ್ತ ಸಾಧನ. ಸ್ವಯಂ ಅಭಿವ್ಯಕ್ತಿಯು ಆತ್ಮಾನಂದ ಹಾಗೂ ಸಂತಸವನ್ನು ನೀಡುತ್ತದೆ. ಅದು ಮುಂದಿನ ಕ್ರಿಯಾತ್ಮಕತೆಗೆ ಪ್ರಚೋದಕ. ಆದ್ದರಿಂದ ಸೃಷ್ಟಿಶೀಲತೆಯ ಬೆಳವಣಿಗೆಗಾಗಿ ತಾಯ್ನುಡಿಯ ಬೋಧನೆಯಾಗಬೇಕು. ಭಾಷೆಯ ಈ ಎರಡೂ ಉಪಯೋಗ ಮಕ್ಕಳಿಗೆ ಗೊತ್ತಾದರೆ ಸಾಲುವುದಿಲ್ಲ. ಏಕೆಂದರೆ, ಇದು ಜ್ಞಾನ ಸ್ಫೋಟವಾಗುತ್ತಿರುವ ಕಾಲವಿದು. ವಿವಿಧ ಶಾಸ್ತ್ರಗ್ರಂಥಗಳಲ್ಲಿ ಬಳಕೆಯಾಗಿರುವ ಭಾಷೆಯ ಸ್ವರೂಪದ ಪರಿಚಯ ಮಕ್ಕಳಿಗೆ ಆಗಬೇಕು ಎಂಬುದು ಅಗತ್ಯ.
ಸಾಂದರ್ಭಿಕವಾಗಿ ಭಾಷಾ ಪ್ರಯೋಗಕ್ಕೂ ಎರವಾಗುವಂತೆ ಮಕ್ಕಳನ್ನು ಸಿದ್ಧಗೊಳಿಸುವುದು ತೀರಾ ಮಹತ್ತರ ಮಹತ್ವದ ವಿಷಯವಾಗುತ್ತದೆ. ಅದಕ್ಕೂ ಮಕ್ಕಳು ಸನ್ನದ್ಧರಾಗಬೇಕು.

ಮೇಲಾಗಿ ಇಂಗ್ಲಿಷ್ ಚೆನ್ನಾಗಿ ಕಲಿಯಬೇಕೆಂದರೆ ಮಾತೃಭಾಷೆಯ ಪ್ರಾಥಮಿಕ ಶಿಕ್ಷಣ ಆಗಬೇಕು. ಏಕೆಂದರೆ ಮಾತೃಭಾಷೆ ತಳಹದಿಯಿಲ್ಲದೆ ಇಂಗ್ಲಿಷ್ ಏನು ಯಾವ ಭಾಷೆಯನ್ನೂ ಚೆನ್ನಾಗಿ ಕಲಿಯಲು ಸಾಧ್ಯವಿಲ್ಲ. ಹಾಗಾದರೆ ಮಾತೃಭಾಷೆಯಲ್ಲಿ ಕಲಿಯದೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಇಂಗ್ಲಿಷ್ ಬರುವುದಿಲ್ಲವೆ? ಖಂಡಿತವಾಗಿಯೂ ಬರುತ್ತದೆ. ವ್ಯವಹಾರದ ಇಂಗ್ಲಿಷನ್ನು ಕಲಿಯಬಹುದು. ಇಂಗ್ಲಿಷ್ ಭಾಷೆಯ ಜ್ಞಾನಮೂಲಗಳನ್ನು ಪಡೆಯಲು ಸಾಧ್ಯವಾಗದೇ ಅಂದರೆ ವ್ಯವ ಹಾರಕ್ಕೆ ಬೇಕಾದಷ್ಟು ಕನ್ನಡವನ್ನು ಕಲಿತು ಇಂಗ್ಲಿಷನ್ನು ಕಲಿಯಬಹುದು. ಆಗ ಯಾವ ಭಾಷೆಯಲ್ಲೂ ಪ್ರಭುತ್ವ ಬರದೇ ಹೋಗುತ್ತದೆ. ವ್ಯವಹಾರಕ್ಕೆ ಬೇಕಾದ ಇಂಗ್ಲಿಷ್ ಕಲಿತರೆ ವ್ಯವಹಾರ ಸಾಗಿಬಿಡುತ್ತದೆ ಎಂಬುದು ಅಸಾಧ್ಯದ ಮಾತು.

ಆಗ ಇಂಗ್ಲಿಷಿನ ಸಮಗ್ರ ಜ್ಞಾ ಬೇಕಾಗುತ್ತದೆ. ಇಂಗ್ಲಿಷಿನ ಸಮಗ್ರ ಜ್ಞಾವನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳು ಇಲ್ಲದಿರುವುದರಿಂದ ಮಾತೃಭಾಷೆಯ ಪರಿಸರದಲ್ಲಿ ಇಂಗ್ಲಿಷ್ ಭಾಷೆಯನ್ನು ಮಾತೃಭಾಷೆಯ ತಳಹದಿಯಿಲ್ಲದೆ ಕಲಿಸುವುದು ಸೂಕ್ತವಲ್ಲ. ಮಾತೃಭಾಷೆಯಲ್ಲಿ ಹುಟ್ಟುವ ಭಾವ ಕೊಳೆತು ಕೀವಾಗ ಲಾರದು. ಬುದ್ಧಿ ರಾಕ್ಷಸವೂ ಆಗಲಾರದು. ಈ ಭಾವಕ್ಕೂ ಭಾಷೆಗೂ ಅನನ್ಯವಾದ ಸಂಬಂಧವಿದೆ. ಇಂಗ್ಲಿಂಡಿನ ಜನರಿಗೆ ಇಂಗ್ಲಿಷ್ ಮಾತೃಭಾಷೆಯೂ ಆಗಿರುವುದರಿಂದ ಇಂಗ್ಲಿಷ್ ಅವರಿಗೆ ಮಾತೃಭಾಷೆಯಾಗಿಯೂ, ಪ್ರೊಬೆಷನಗಿಯೂ, ಜಾಗತಿಕವಾಗಿಯೂ ಬೆಳೆದುನಿಂತಿದೆ ಎಂದು ಗರ್ವ, ಹೆಮ್ಮೆ ಮತ್ತು ಅಭಿಮಾನಪಡುವುದರಲ್ಲಿ ಅರ್ಥ ವಿದೆ. ಆದರೆ ಭಾರತೀಯರಾದ ನಾವು ಆ ಭಾಷೆಯನ್ನು ಕಲಿತು ಮಾತಾಡುತ್ತೇವೆಂದ ಮಾತ್ರಕ್ಕೆ ನಾವು ಇಂಗ್ಲಿಷರಾಗಲು ಸಾಧ್ಯವಿಲ್ಲ.

ಆಗುವುದೂ ಇಲ್ಲ. ಅವರ ಭಾಷೆಯನ್ನು ಕಲಿತು ಅವರಿಗೇ ಅವರ ಭಾಷೆಯನ್ನು ಕಲಿಸಿದ ಭಾರತೀಯರಿದ್ದಾರೆ. ಇಂಗ್ಲೆಂಡಿನವರಿಗಿಂತ ಸುಸ್ಪಷ್ಟವಾಗಿ, ಅರ್ಥಬದ್ಧ ವಾಗಿ, ಭಾವನಾತ್ಮಕವಾಗಿ, ವೈಚಾರಿಕವಾಗಿ ಇಂಗ್ಲಿಷನ್ನು ಮಾತನಾಡುವ ಭಾರತೀಯ ಚಿಂತಕರು, ವಿದ್ವಾಂಸರು, ಸಾಹಿತಿ, ಬರಹಗಾರರಿದ್ದಾರೆ. ಅವರಿ ಗಿಂತಲೂ ನಿಖರವಾಗಿ ಇಂಗ್ಲಿಷನ್ನು ಬಳಸುವ ನಾವು ನಮ್ಮ ಕಲಿಕೆ ಮತ್ತು ಪ್ರಯೋಗದ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಪಡಬೇಕು. ಆದರೆ ಈ ಹೆಮ್ಮೆ ಮತ್ತು ಅಭಿಮಾನದ ಹಿಂದಿರುವುದು ಮತ್ತದೇ ನಮ್ಮ ನಮ್ಮ ಮಾತೃಭಾಷೆಯ ಗಾಢಪ್ರಭಾವವೇ ಆಗಿದೆ.

ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದ ಅತ್ತ ಇಂಗ್ಲಿಷೂ ಸರಿಯಾಗಿ ಬಾರದೆ, ಇತ್ತ ಕನ್ನಡವೂ ಸರಿಯಾಗಿ ಬಾರದೆ ಒಂದು ಎಡವಟ್ಟಿನ ಪರಿಸ್ಥಿತಿ ನಿರ್ಮಾಣವಾಗಿ ಅದೇ ಪರಿಸ್ಥಿತಿ ಮುಂದುವರೆಯುತ್ತಿದೆ. ಇದು ದೇಶೀಭಾಷೆಗಳ ಅಸ್ತಿತ್ವಕ್ಕೆ ಕೊಡಲಿ ಪೆಟ್ಡಾಗಿದೆ. ನಮ್ಮಲ್ಲಿ ಪ್ರತಿಭಾವಂತರು ಸೃಷ್ಟಿಯಾಗದಿರುವುದಕ್ಕೆ ಇದೇ ಪ್ರಮುಖ ಕಾರಣ. ಕನ್ನಡ ಮಾತನಾಡುವವರನ್ನು, ಕನ್ನಡ ಮಾಧ್ಯಮದಲ್ಲಿ ಕಲಿಯುವವರನ್ನು ನಿಕೃಷ್ಟವಾಗಿ ನೋಡುವ ಒಂದು ಕೆಟ್ಟ ವಾತಾವರಣ ಎಂದೋ
ಸೃಷ್ಟಿಯಾಗಿ ಬಿಟ್ಟಿದೆ.

ಇಂಗ್ಲಿಷನ್ನೇ ಪ್ರತಿಯೊಂದಕ್ಕೂ ಮಾನದಂಡವಾಗಿ ಕಾಣುವ ಸಂಪ್ರದಾಯ ಮೊದಲು ತೊಲಗಬೇಕು. ಭಾಷೆಯ ಜತೆಗೆ ಬರುವುದು ಸಂಸ್ಕೃತಿ. ಇಂಗ್ಲಿಷ್ ಸಾಮ್ರಾಜ್ಯಶಾಹಿ ಭಾಷೆ. ಅದಕ್ಕೆ ಇತರ ದೇಶೀಯ ಭಾಷೆಗಳನ್ನು ದಮನಿಸುವ ತಾಕತ್ತು ಇದ್ದೇ ಇದೆ. ಕನ್ನಡದಲ್ಲಿ ಎಷ್ಟು ಅಕ್ಷರಗಳಿವೆ ಎಂದು ಗೊತ್ತಿಲ್ಲದಿದ್ದರೂ ಇಂಗ್ಲಿಷಲ್ಲಿ 26 ಅಕ್ಷರಗಳಿವೆ ಎಂದು ನಿಖರವಾಗಿ ಗೊತ್ತಿರುತ್ತದೆ. ಅದೂ ಗೊಂದಲಮಯವಾಗಿ!

ಅಂದರೆ ಇಂಗ್ಲಿಷಿಗೆ ಭಾರತೀಯ ಭಾಷೆಗಳನ್ನು ವಿಸ್ಮೃತಿಗೊಳಿಸುವ ಸಾಮರ್ಥ್ಯವಿದೆ. ಇಂಗ್ಲಿಷಿನ ಮೋಹವೇ ಅಂಥಹುದು. ಸುಲಭವಾಗಿ ಕನ್ನಡದಲ್ಲಿ ಮಾತನಾಡಿ ವ್ಯವಹರಿಸುವುದೋ ಅಥವಾ ಭಾವನೆಗಳನ್ನು ಹಂಚಿಕೊಳ್ಳುವದೋ ಸಾಧ್ಯವಿದ್ದರೂ ಮಾತುಮಾತಿನ ನಡುವೆ ಇಂಗ್ಲಿಷನ್ನು ಬಳಸುವ ಹುಚ್ಚು ಬರುವುದು ಇಂಗ್ಲಿಷಿನ ಪ್ರಭಾವ ಎನ್ನುವುದಕ್ಕಿಂತ ಅದನ್ನು ನಾವು ಮೆಚ್ಚಿಕೊಂಡು ಅನಿವಾರ್ಯಗೊಳಿಸಿಕೊಂಡ ಕಾರಣದಿಂದ. ಹಾಗಂತ ಇದು ಉದ್ದೇಶ ಪೂರ್ವಕವಾಗಿ ನಮ್ಮೊಳಗೆ ಆಗುವಂಥ ಕ್ರಿಯೆ ಅಂತ ಹೇಳಲು ಸಾಧ್ಯವಿಲ್ಲ. ಆದರೂ ಇಂಗ್ಲಿಷಿನ ಮಹಿಮೆ ಅಂಥ ಪರಿಯಲ್ಲಿ ನಮ್ಮನ್ನಾಕ್ರಮಿಸಿದೆಂಬುದು ಸತ್ಯ! ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ಮಧ್ಯೆ ಅಂತರವೂ ಅಸ್ಪೃಶ್ಯತೆಯೂ ಹೆಚ್ಚುತ್ತಿದೆ. ಸರಕಾರ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮತ್ತು ಕಲಿಕೆಯನ್ನು ಆರಂಭಿಸಿದ್ದು, ಈ ಅಂತರ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಎಂದೇ ಭಾವಿಸಲಾಗಿತ್ತು. ಆದರೂ ತಾಯ್ನುಡಿ ರಕ್ಷಣೆಯೆಂಬುದು ಕೇವಲ ಸರಕಾರದ, ಸರಕಾರಿ ಶಾಲೆಗಳ ಕರ್ತವ್ಯ, ಉಳಿದವರಿಗೆ ಅದರ ಬಗ್ಗೆ ಮಾತಾಡುವುದು, ಹೋರಾಡುವುದು ಒಂದು ಫ್ಯಾಷನ್ ಮಾತ್ರವಾಗಿ ಬಿಟ್ಟಿದೆ.

ಯಾವ ದೇಶ ತನ್ನ ನೆಲಕ್ಕೊಲ್ಲದ ಒಪ್ಪದ ಭಾಷೆಯ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತದೋ ಆ ದೇಶ ತನ್ನ ದೇಶೀಯ ಭಾಷೆಗಳ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಳೆದುಕೊಳ್ಳುತ್ತ ಹೋಗುತ್ತದೆ ಎಂಬುದಕ್ಕೆ ಭಾರತೀಯ ಭಾಷೆ ಮತ್ತು ಸಂಸ್ಕೃತಿಗಳ ಅಧಃಪತನವಾಗುತ್ತಿರುವುದೇ ಜ್ವಲಂತ ನಿದರ್ಶನವಾಗಿದೆ.
ಕನ್ನಡದ ಸಮಗ್ರ ಜ್ಞಾವಿಲ್ಲದ ಕನ್ನಡದ ವಾತಾವರಣದಲ್ಲಿ ಕನ್ನಡದ ಮಕ್ಕಳಿಗೆ ಇಂಗ್ಲಿಷನ್ನು ಈ ರೀತಿ ವ್ಯಾವಹಾರಿಕವಾಗಿ ಕಲಿಸಲು ಸಾಧ್ಯವಿಲ್ಲ. ಕಲಿಸಿದರೆ ಕನ್ನಡವೂ ಸರಿಯಾಗಿ ಬಾರದ, ಇಂಗ್ಲಿಷೂ ಸರಿಯಾಗಿ ಬಾರದ ಒಂದು ಎಡವಟ್ಟು ಜನಾಂಗ ಬೆಳೆಯುತ್ತದೆ. ಇದರಿಂದಾಗುವ ದೊಡ್ಡ ಸಮಸ್ಯೆಯೇನೆಂದರೆ ಚಿಂತನೆಗಳು ಹುಟ್ಟುವುದು, ಗಟ್ಟಿಮುಟ್ಟಾದ ವಿಚಾರವನ್ನು ಕಟ್ಟಿಬೆಳೆಸುವುದು ಬೌದ್ಧಿಕವಾಗಿ, ಮಾನಸಿಕವಾಗಿ, ವೈಚಾರಿಕವಾಗಿ ಸಾಧ್ಯವಾಗದಿರುವುದು! ಕನ್ನಡ
ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದಷ್ಟೇ ಅಲ್ಲದೆ ಶೈಕ್ಷಣಿಕವಾದ ನೆಲೆಯಲ್ಲೂ ಕನ್ನಡ ನೆಲದ್ದೇ ಆದ ಶುದ್ಧ ವೈಚಾರಿಕತೆ ಹುಟ್ಟದೆ ಹೋಗುತ್ತಿರುವುದು ವರ್ತಮಾನದ ದುರಂತ!

ಮೂರು ಕಾಸಿನ ಸಂಬಳಕ್ಕೆ ಚೆನ್ನಾಗಿ ತರಬೇತು ಇಲ್ಲದ ಶಿಕ್ಷಕರನ್ನು ಇಟ್ಟುಕೊಂಡು ಇಂಗ್ಲಿಷ್ ಮೀಡಿಯಂ ಶಾಲೆಗಳು ಕಳಪೆ ಕನ್ನಡವನ್ನೂ, ಕಳಪೆ ಇಂಗ್ಲಿಷನ್ನೂ ಕಲಿಸುತ್ತಿವೆ. ಶಿಕ್ಷಣ ವ್ಯಾಪಾರೀಕರಣ ಆದುದ್ದರ ಪರಿಣಾಮವಿದು. ಇದು ಶೈಕ್ಷಣಿಕ ಮನೋವಿeನದ, ಮಕ್ಕಳ ಮನೋವಿಜ್ಞಾನದ ಸಂಶೋಧನೆಗಳನ್ನು ನಾಶಮಾಡಿ ಸಂವಿಧಾನದ ಮೂಲಭೂತ ಹಕ್ಕನ್ನೇ ಘಾಸಿಮಾಡುತ್ತಿರುವುದು ನಮಗೆಲ್ಲರಿಗೂ ಅರಿವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅನುಭವದ ಮಾತೇನೆಂದರೆ, ಕನ್ನಡದ ಮೂಲಕವೇ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಬೇಕು. ಇಂಗ್ಲಿಷ್ ಮಾಧ್ಯಮದಿಂದಲ್ಲ. ಕನ್ನಡದ ಹೊರತಾಗಿ ಇಂಗ್ಲಿಷ್ ಅನಿವಾರ್ಯವಾದರೆ ಭವಿಷ್ಯದ ದೃಷ್ಟಿ ಯಿಂದ ಹಿತವಲ್ಲ. ಆರೋಗ್ಯಯುತವಲ್ಲ.