Monday, 16th September 2024

ಮುಟ್ಟಿದವರೆ ಮುನಿಯಂಥವರನ್ನೇ ಮುಟ್ಟಿದ್ದು ಕರೋನಾ

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್

ಕಷ್ಟಗಳು ಬದುಕಿಗೆ ಪಾಠವನ್ನು ಕಲಿಸುತ್ತವೆ. ತಾಪತ್ರಯಗಳು ತತ್ತ್ವಜ್ಞಾನವನ್ನು ತರುತ್ತವೆ. ಅವಮಾನಗಳು ಬದುಕುವ ಛಲ ಹುಟ್ಟಿಸುತ್ತವೆ. ಪ್ರಯತ್ನಗಳು ಯಶಸ್ಸನ್ನು ತರುತ್ತವೆ. ಇವು ಯಾವುವೂ ಗಮನಕ್ಕೆ ಬರದಂತೆ ಶ್ರೀಮಂತರ ಮನೆಯಲ್ಲಿ ಹುಟ್ಟಿ,
ಹುಟ್ಟಿದ್ದಕ್ಕೆ ಸಾಕ್ಷಿ ಎಂಬಂತೆ ಸುಮ್ಮನೆ ಜಾಲಿಯ ಮರದಂತೆ ಉದ್ದ ನಿಂತರೆ ನೆರಳೂ ಇಲ್ಲ, ಮುಟ್ಟಿದರೆ ಮೈತುಂಬಾ ಮುಳ್ಳೇ ಎಂಬಂತೆ ಬೆಳೆದುಬಿಟ್ಟರೆ? ಇಂಥದೊಂದು ಪ್ರಶ್ನೆ ಹಾಕಿದರೆ, ಇಡೀ ಓಣಿ ಮಂದಿ ಕೊಡುತ್ತಿದ್ದ ಉತ್ತರ ‘ಗಿರ್ದಾವರ ಮಗಳು ಗೋದಾವರಿ’ ಇದ್ದ ಹಾಗೆ ಎಂಬುದೇ ಆಗಿತ್ತು.

ಗಿರ್ದಾವರೆಂಬೋದು ಗೋದಾವರಿ ಅಪ್ಪನೇ ಹೆಸರೇ ಆಗಿಬಿಟ್ಟಿತ್ತು. ಅವರ ನಿಜ ಹೆಸರು ಯಾರಿಗೂ ಗೊತ್ತೇ ಇರಲಿಲ್ಲ. ಕೇಳಿದರೂ ಅವರ ಮನೆಯಲ್ಲಿ ಹೆಸರು ತಗೊಂಡೇನು ಗುಗ್ಗರಿ ಹಾಕ್ತಿರೇನು? ಗಿರ್ದಾವರ ಅಂದ್ರ ನಾಲಿಗೆ ಮುಳ್ಳು ಮುರಿತದೇನು? ಎಂದು ಗಿರ್ದಾವರ್ ತಾಯಿ ಮಡಿ ಹೆಂಗಸು ಭೋಗವ್ವ ಒಂದು ತಾಸು ಬೊಂಬಡಾ ಹೊಡೆಯುತ್ತಿದ್ದಳು. ಕೇಳಿದವ ತನ್ನ ಹೆಸರೇ ಮರೆತು ತನ್ನ ಕೈಯಿಂದಲೇ ತನ್ನ ತಲೆಕೂದಲು ಕಿತ್ತಿಕೊಂಡು ಹಜಾಮತಿ ಖರ್ಚು ಉಳಿಸಿಕೊಳ್ಳುತ್ತಿದ್ದ. ಗಿರ್ದಾವರ್ ಕಿವಿಯಿಂದಲೂ
ತಿಂಗಳ ಆದಾಯ ದಂಡಿಯಾಗಿತ್ತು. ಅಲ್ಲದೇ ಪಿತ್ರಾರ್ಜಿತ ಆಸ್ತಿಯಂತೂ ನಮ್ಮ ಭಾಗದ ಭತ್ತ ಬೆಳೆಯುವ ಗದ್ದೆ ಐವತ್ತೂ
ಎಕರೆಗೂ ಮೇಲಿತ್ತು. ತುಂಗಭದ್ರಾ ಡ್ಯಾಂ ತುಂಬಿತೆಂದರೆ ವರ್ಷಕ್ಕೆ ಎರಡು ಸಾರಿ ಭತ್ತದ ಬೆಳೆ ಕೈತುಂಬಿ, ಜೀವನ ನಡೆಸುತ್ತಿದ್ದಿಲ್ಲ, ಓಡಿಸುತ್ತಿತ್ತು.

ಮೂರು ಗಂಡು ಅದರ ಮೇಲೆ ಒಂದೇ ಹೆಣ್ಣು ಮಗಳು ಗೋದಾವರಿ. ಮೂರು ಗಂಡುಗಳೂ ಗದ್ದೆ, ತೋಟ, ಊರಿನ ರಾಜಕೀಯ ನೋಡಿಕೊಳ್ಳುತ್ತಿದ್ದರೆ, ಅವರಿಗೆ ಗಿರ್ದಾವರರ ಸಹಿ, ರಬ್ಬರ್ ಸೀಲು ರಕ್ಷಾ ಕವಚವಾಗಿತ್ತು. ರವಿಚಂದ್ರನ್ ಸಿನಿಮಾ ರಾಮಾಚಾರಿ ನೋಡಿದ್ದ ನಾವೆಲ್ಲ ಸೇಮ್ ಟು ಸೇಮ್ ಗಿರ್ದಾವರ್ ಮನಿ ಸ್ಟೋರಿ ಇದ್ದಂಗದಲ್ಲೋ ಅನ್ನುತ್ತಿದ್ದೆವು. ಗೋದಾವರಿ ತಾಯಿ
ಗೋದಾವರಿಯನ್ನು ಹಗಲು ಬಿಸಿಲು ಇರುತ್ತೇ ಅಂತ ಹೊರಬಿಡುತ್ತಿರಲಿಲ್ಲ.

ಮಧ್ಯಾಹ್ನ ಊಟ ಮತ್ತೆ ನಿದ್ದೆ, ಸಂಜೆ ಮೂರಸಂಜೆ ಮುಂದಿನ ಗಾಳಿ ಸರಿಗಿರಂಗಿಲ್ಲ ಅಂತ ಹೊರಬಿಡುತ್ತಿರಲಿಲ್ಲ.  ಕತ್ತಲಾಯಿ ತೆಂದರೆ ಮುಗಿದೇ ಹೋಯಿತು. ಎಲ್ಲಾ ಬಾಗಿಲು ಭದ್ರ. ಅವರ ಮನೆ ಒಳಗೆ ಹೋಗೋ ಯೋಗ ಇದ್ದದ್ದು ಅಡಿಗಿ ಪದ್ದವ್ವಗ, ನೀರು
ಹೊರೋ ಅಪ್ಪಣ್ಣಗ, ಅಪ್ಪಣ್ಣ ಅವರ ಮನೆಗೆ ಬಾವಿಯಿಂದ ನೀರು ಜಗ್ಗಿ ಜಗ್ಗಿ ಹೆಗಲಿಗೆ ಹೊತ್ತು ಗಿರ್ದಾವರ್ ಮನೆಯ ಗಿಂಡಿ ಯಿಂದ ಹಿಡಿದು ಹಂಡೆ, ಗಚ್ಚು ತುಂಬೋದಲ್ಲದೇ ಅವರ ಕಂಪೌಂಡು ಗಿಡಗಳಿಗೂ ನೀರು ಹಾಕುತ್ತಿದ್ದ.

ಗೋದಾವರಿಗೆ ಎಲ್ಲವೂ ಆಶ್ಚರ್ಯವೇ. ಅಪ್ಪಣ್ಣಗೆ ಗೋದಾವರಿ ಒಮ್ಮೆ, ಆಕಿಗಾಗಲೇ ಹತ್ತು ಹನ್ನೆರಡು ವರ್ಷದ ಹುಡುಗಿ, ಕೇಳಿದ್ದೇನೆಂದರೆ, ನೀ ನಮ್ಮನಿಗೆ ನೀರು ತಂದ್ರ, ನಿಮ್ಮನಿಗೆ ಯಾರು ನೀರು ತರ‍್ತಾರ? ಅಡಿಗೆ ಪದ್ದವ್ವಗೆ, ನಿಮ್ಮನ್ಯಾಗೆ ಯಾರು ಅಡಿಗೆ ಮಾಡ್ತಾರೆ? ಎಂದೇ ಕೇಳಿದ್ದಳು. ಒಮ್ಮೆಯಂತೂ ಅಪ್ಪಣ್ಣಗೆ ನೀನೂ ನೀರು ಕುಡಿತಿಯೇನು ದಿನಾ? ಎಂದು ಕೇಳಿದ್ದಕ್ಕೆ ಅಪ್ಪಣ್ಣ ಇಲ್ರಿ ‘ಗೋದು ಬಾಯೇರಾ ಮಳಿ ಬಂದಾಗ ಮುಗಿಲ ಕಡೆ ತಲಿ ಎತ್ತಿ, ಬಾಯಿ ತಕ್ಕೊಂಡು ನಿಂದಿರತೀವ್ರಿ, ಅವಾಗ ಮುಗಿಲಿನಿಂದನ ನಮ್ಮ ಬಾಯಾಗ ನೀರು ಬೀಳ್ತಾವ್ರಿ ಎಂದು ಉತ್ತರಿಸಿದ್ದ.

ನೀವು ಬಡವರಂತ ಹೌದೇನು? ಬಡವರು ಬಹಳ ಖೋಡಿ ಇರ‍್ತಾರಂತ ಹೌದೇನು? ನಿಮ್ಮೆದುರಿಗೆ ನಾನು ಊಟ ಮಾಡಿದರ ನೀವು
ಕಣ್ಣು ಬಿಡ್ತಿರಂತ ಹೌದೇನು? ನಿಮ್ಮನಿಯಾಗ ನೀವು ಹಬ್ಬದ ದಿನ ಅಷ್ಟೇ ಅನ್ನ ಮಾಡ್ತಿರಂತ ಹೌದೇನು? ಬಡವರಿಗೆ ಮಕ್ಕಳು
ಭಾಳಂತ ಹೌದೇನು? ನಿನ್ನ ಹೆಂಡ್ತಿಗೆ ಹೊಡಿತಿಯಂತೆ ಹೌದೇನು? ನೀನು ನಮ್ಮಪ್ಪ ಕೊಟ್ಟ ಸಂಬಳ ಎಲ್ಲಾ ಇಸ್ಪೀಟು ಆಡಿ ಕಳೆದುಕೊಳ್ತಿಯಂತ ಹೌದೇನು? ನಿಮ್ಮನಿಯೊಳಗ ಗೌರಿ, ಗಣಪ್ಪನ್ನ ಕೂಡಿಸೋದಿಲ್ಲಂತ ಹೌದೇನು? ನಿನ್ಹೆಂಡ್ತಿ ಹತ್ರ ಬರೀ
ಎರಡೇ ಸೀರಿ ಅವ ಅಂತ ಹೌದೇನು? ನೀನು ಈ ಊರು ಬಿಟ್ಟು ಯಾವ ಊರೂ ಕಂಡಿಲ್ಲಂತ ಹೌದೇನು? ನಿಮ್ಮನಿಗೆ ಬಂಧು ಬಳಗದವರು ಯಾರೂ ಬರಂಗಿಲ್ಲಂತ ಹೌದೇನು? ನಿಮಗೂ ಹೋಗಲಿಕ್ಕೆ ಯಾವ ಊರೂ, ಯಾವ ಮನಿನೂ ಇಲ್ಲಂತ ಹೌದೇನು? ನೀನು ನಮ್ಮಪ್ಪನ ಹಳೇ ಅಂಗಿ, ಧೋತರಾನ ಇಸ್ಕೊಂಡು ಉಟ್ಕೋತಿಯಂತ ಹೌದೇನು? ನಿನಗ ಸೈಕಲ್ ಹೊಡಿಲಿಕ್ಕೆ ಬರಂಗಿಲ್ಲ, ಇನ್ನ ಪಟಪಟಿ ಏನು ಹೊಡಿಲಿಕ್ಕೆ ಬರ್ತದ ಅಂತಾರಂತ ಹೌದೇನು? ಇಷ್ಟೆಲ್ಲ ಪ್ರಶ್ನೆಗಳನ್ನು ಗೋದಾವರಿ ಅಪ್ಪಣ್ಣ ಬಾವಿ ನೀರಿಗೆ
ಕೊಡ ಕಟ್ಟಿ, ಅದಕ್ಕೆ ಕುಣಿಕಿ ಹಾಕಿ, ನೀರಿಗೆ ಬಿಟ್ಟು ಎತ್ತಿ, ಎತ್ತಿ ಹಾಕಿ ಕೊಡದ ಬಾಯಿ ಬಗ್ಗಿಸಿ, ನೀರು ತುಂಬಿಕೊಳ್ಳುವತನ
ಕಾದು, ಅದು ತುಂಬಿ ಮುಳುಗಿದ ಮೇಲೆ ಮೇಲೆ ಎಳೆದುಕೊಂಡು ಕಟ್ಟೆಗೆ ಇಟ್ಟುಕೊಂಡು, ಕುಣಿಕಿ ಬಿಚ್ಚಿ ಹೆಗಲಿಗೆ ಇಟ್ಟುಕೊಂಡು ಸುರುವಿ ಬರಲು ಒಳಗೆ ಹೋಗುವವರೆಗೂ ಬಾವಿ ಕಟ್ಟಿ ಬಲಕಟ್ಟಿಗೆ ಕೂತು ಮೇಲಿನ ಒಂದೊಂದೇ ಪ್ರಶ್ನೆ ಕೇಳುತ್ತಿದ್ದಳು ಗೋದಾ ವರಿ.

ಆತ ಕೊಡ ಸುರುವಿ ಬಂದು ಮತ್ತೆ ಕೊಡಕ್ಕೆ ಕುಣಿಕಿ ಕಟ್ಟಿ ಬಾವಿಗೆ ಬಿಡೋವರೆಗೂ ಈ ಪ್ರಶ್ನಾವಳಿ ಕೌನ್ ಬನೇಗಾ ಕರೋಡ್‌ ಪತಿಯ ಅಮಿತಾಭ್ ಬಚ್ಚನ್ ಥಟ್ಟಂತ ಹೇಳಿ ಕಾರ್ಯಕ್ರಮದ ನಾ. ಸೋಮೇಶ್ವರ, ರಮೇಶ್ ಅರವಿಂದರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಂತೆ ನಡೆದೇ ಇರುತ್ತಿತ್ತು. (ಆತ ಕೊಡ ಸುರುವಿ ಬರಲು ಹೋಗುವ ವೇಳೆಯನ್ನು ನೀವು ಬೇಕಾದರೆ ಒಂದು ಸಣ್ಣ ಬ್ರೇಕ್ ಅಂದುಕೊಂಡು ಜಾಹೀರಾತನ್ನು ತೋರಿಸುವ ವೇಳೆ ಎಂದು ಭಾವಿಸಿಕೊಳ್ಳಿ) ಗೋದಾವರಿ ಕೇಳುವ ಎಲ್ಲಾ ಪ್ರಶ್ನೆಗೂ ಅಪ್ಪಣ್ಣ ಆ ಹುಡುಗಿ ಹೌದೇನು? ಎಂದು ಕೇಳಿದ ಕೂಡಲೇ ಒಂದು ಕ್ಷಣ ಯೋಚಿಸದೇ ಹೌದು ತಾಯಿ ಎನ್ನುತ್ತಿದ್ದ.

ಆತನಿಗೆ ಇದು ಅಭ್ಯಾಸವಾಗಿಯೇ ಹೋಗಿತ್ತು, ಎಷ್ಟು ಸಲ ಗೋದಾವರಿ ಬಾಯಿಯಲ್ಲಿನ ಹುರಿಗಾಳೋ, ನೆಲಗಡಲೆ (ಶೇಂಗಾ)
ಯನ್ನೋ ಅಗಿಯಲು ಅಥವಾ ನುಂಗಲು ಪ್ರಶ್ನೆ ಕೇಳುವಲ್ಲಿ ಗ್ಯಾಪ್ ಆದರೂ, ಆ ಗ್ಯಾಪ್‌ಗೂ ಕೂಡಾ ಅಪ್ಪಣ್ಣ ಹೌದು ತಾಯಿ ಎಂದು ಬಿಡುತ್ತಿದ್ದ. ಇವೆಲ್ಲವೂ ಖಾಲಿ ಕೂತ ಗಿರ್ದಾವರ್ ಹೆಂಡತಿ, ಗಿರ್ದಾವರ್ ತಾಯಿ ಆಡಿಕೊಳ್ಳುವುದನ್ನೇ ಈ ಮಗು ಕೇಳುತ್ತದೆ ಎಂಬುದು ಅಪ್ಪಣ್ಣನಿಗೆ ಖಾತ್ರಿಯಾಗಿ ಹೋಗಿತ್ತು.

ಹೌದು ತಾಯಿ ಎಂದುಬಿಟ್ಟರೆ ಗೆದ್ದ. ಅದುಬಿಟ್ಟು ಇಲ್ಲ ಯಾರು ಹೇಳಿದರು, ಎಂದು ಕೇಳಿದರೆ ಆ ಹುಡುಗಿ ತಾಯಿ, ಅಜ್ಜಿಗೆ ಈ ಸುದ್ದಿ ಮುಟ್ಟಿಸಿದರೆ? ಆಗ ಖುದ್ದು ಆ ತಾಯಿ, ಅಜ್ಜಿನೆ ಇವನನ್ನು ಕರೆಸಿ ವಿವರಣೆ ಕೇಳಿದರೆ? ಇದಕ್ಕೂ ಹೆಚ್ಚು ಅವನು ಹೇಳ ಬೇಕಾಗುತ್ತದೆ ಎಂಬ ಸತ್ಯ ಅಪ್ಪಣ್ಣನಿಗೆ ಅನುಭವದಿಂದ ತಿಳಿದಿತ್ತು. ಮುದ್ದಿನ ಮಗಳು ಗೋದಾವರಿ ಹೊರಗಿನ ಮಕ್ಕಳ ಜನರ ಸಂಪರ್ಕವಿಲ್ಲದೇ ಹೀಗೆ ನಾಲ್ಕು ಗೋಡೆಗಳ ಮಧ್ಯದ ನಾಲೆಡ್ಜ್ ನಲ್ಲೇ ಹತ್ತು ಹನ್ನೆರಡು ವಯಸ್ಸಿಗೇ, ಹತ್ತು ಹನ್ನೆರೆಡು ಹಡೆದ ಹಿರಿಯ ಹೆಂಗಸಿನಂತೆ ಮಾತನಾಡುತ್ತಿದ್ದಳು. ಕಾಲ ಉರುಳಿತು.

ಎಳೆಗರುಂ ಎತ್ತಾಗದೇ ಎಂಬಂತೆ ಗೋದಾವರಿಯೂ ಹೆಣ್ಣಾಗಿದ್ದರಿಂದ ಎಳೆಗರು ಎಮ್ಮೆಯಾಗದೆ ಎಂಬಂತೆ ಎಮ್ಮೆಯಂತಾಗಿಯೇ ಬೆಳೆದು ನಿಂತಳು. ದೇಹದಲ್ಲಿ ಮಿದುಳು, ಬುದ್ಧಿಗಳೆರಡನ್ನು ಬಿಟ್ಟು ಉಳಿದವೆಲ್ಲ ಸಮ, ವಿಷಮ ಪ್ರಮಾಣಗಳಲ್ಲಿ ಬೆಳೆದು ನಿಂತವು ಎಂಬುದಕ್ಕಿಂತ ಹೊರಹೊಮ್ಮಿದವು ಎಂಬುದು ಸೂಕ್ತ ಪದವಾದೀತು. ಇವಳಿಗೆ ಗಂಡ ಎಂಬುದಕ್ಕಿಂತ ಗಿರ್ದಾವರ್ ಮನೆಗೆ ಒಬ್ಬ ಅಳಿಯ ಬೇಕಿತ್ತು. ಅದಕ್ಕಿಂತ ಹೆಚ್ಚು ಅವರ ಮೂರು ಗಂಡುಗಳಿಗೆ ಮದುವೆ ಆಗಬೇಕಿತ್ತು. ಬೆಳೆದು ನಿಂತ ತಂಗಿ ಇರುವಾಗ, ಹೀಗೆನ್ನುವುದಕ್ಕಿಂತ ಹಬ್ಬಿನಿಂತ ಈ ಹೆಮ್ಮರಕ್ಕೊಂದು ಬೀಳದಂತೆ, ವಾಲದಂತೆ ಟ್ರೀ ಗಾರ್ಡ್ ಬೇಕಿತ್ತು. ಅದಕ್ಕಾಗಿ
ಗಂಡಿನ ಹುಡುಕಾಟ ಶುರುವಾಯಿತು.

ಹೆಣ್ಣು ಎಳೆಗರು ಎಮ್ಮೆಯಾದರೆ, ಗಂಡು ಕರುವೊಂದು ಕೋಣವಾಗದೇ? ಅಂಥದೇ ಒಂದು ಭಗವಂತ ಸೃಷ್ಟಿ ಮಾಡಿಯೇ ಇರುತ್ತಾನೆ. ಸಿಕ್ಕಿತು, ಆದರೆ ಅದು ಗಂಡಾದ್ದರಿಂದ ಓದಿತ್ತು, ಬರೀ ಓದಿದ್ದರಿಂದಲೋ ಏನೋ ಬ್ಯಾಂಕ್ ಒಂದರಲ್ಲಿ ನೌಕರಿಯೂ ಇತ್ತು. ಆ ಗಂಡೂ ಕೂಡಾ ಗೋದಾವರಿಯಂತೆ ಜನಸಂಪರ್ಕವಿಲ್ಲದೇ ಶಾಲೆ – ಮನೆ, ಕಾಲೇಜು – ಮನೆ ಈಗ ನೌಕರಿ ಆದ ಮೇಲೆ ಬ್ಯಾಂಕು – ಮನೆ. ಇಷ್ಟೆ ಪ್ರಪಂಚ ಕಂಡಿದ್ದ ವ್ಯಕ್ತಿ. ಅವರ ತಂದೆಯೂ ಮಾಜಿ ಆಫೀಸರ್ರೇ. ಹೀಗಾಗಿ ಈಡುಜೋಡು ಎನ್ನುತ್ತಾ ರಲ್ಲ ಅದೇ ಆಗಿತ್ತು. ಮದುವೆ ಆಗಿ, ಈ ಜೋಡಿಯ ಓಪನ್ ಜೀಪ್‌ನಲ್ಲಿ ಹೂವಿನಿಂದಲೇ ಹಂಸ ಪಕ್ಷಿ ಮಾಡಿ, ಹಂಸ ಪಕ್ಷಿಯ ಮೇಲೆ ಕೂತಂತೆ ವೇದಿಕೆ ಮಾಡಿ ಆಗೆಲ್ಲ (೧೯೭೦ರ ದಶಕದಲ್ಲಿ) ಮೆರೆಸುತ್ತಿದ್ದರು. ಈ ಮೆರವಣಿಗೆಯು ಬೆಳ್ಳಗೆ ಕೂಡಿದ್ದ ಸಮ ತೂಕದ ಈ ಜೋಡಿ ನೋಡಿ ಊರ ಜನರೆಲ್ಲ ಕಣಕದ ಮುದ್ದೆಗಳಿಗೆ ಮೆರವಣಿಗೆ ಮಾಡಿದಂಗೆ ಇದೆ ಎನ್ನುತ್ತಿದ್ದರು.

ಬೀಗರಿಬ್ಬರೂ ಪ್ರಭಾವಿಗಳು, ಶ್ರೀಮಂತರು. ಗಿರ್ದಾವರ್ ತಮ್ಮ ವಶೀಲಿಯಿಂದ ಅಳಿಯನಿಗೆ ಇದ್ದೂರ ಬ್ಯಾಂಕಿಗೆ ಟ್ರಾನ್ಸ್ ಫರ್ ಮಾಡಿಸಿ ತಂದರು. ಆತನನ್ನು ಬ್ಯಾಂಕಿಗೆ ಬಿಡಲು, ಕರೆತರಲು ಗಿರ್ದಾವರರ ಆಫೀಸ್ ಜೀಪೇ ಹೋಗುತ್ತಿತ್ತು. ಎರಡೂ ಕುಟುಂಬ ಗಳೂ ಈ ಊರಲ್ಲಿ ತಮ್ಮದೊಂದೇ ಮನೆಯಿದೆ. ನಮ್ಮ ಮನೆ ಒಳಗಿನ ಜನರೇ ಜನರು ಎಂಬಂತೆ ಇದ್ದರು. ಊರಲ್ಲಿರುವ ಉಳಿದ ಮನೆಗಳು ಉಳಿದ ಜನರು, ಆ ಊರಿನ ಯಾರ ಮನೆಗೂ ಇವರು ಹೋಗುತ್ತಿದ್ದಿಲ್ಲ. ಇವರ ಮನೆಗೆ ಜನರು ಬರುತ್ತಿದ್ದಿಲ್ಲ.

ಊರ ಮಂದಿ ಹೆಂಗಳೆಯರು ಅಲ್ಲಲ್ಲಿ ಮಾತಿಗೆ ಕೂತಾಗ ಅಲ್ಲಾ.. ಇವರು ಎಷ್ಟಂತ ಒಳಗ ಕೂಡುತ್ತಿದ್ದಾರು, ಏನು ಮಾಡು ತ್ತಿದ್ದಾರು, ಮೈಗೆ ಗಾಳಿ, ಬಿಸಿಲು, ಬಡಿಸಿಕೊಳ್ಳಲಾರದ ಹೆಂಗ ಇದ್ದಾರು ಎಂದೇ ಮಾತನಾಡಿಕೊಳ್ಳುತ್ತಿದ್ದರು. ಊರಾಗ ಉತ್ಸವ, ತೇರು, ಜಾತ್ರೆ, ಕರಿ ಹರಿಯೋದು, ಹೋಳಿ ಆಚರಣೆ ಎಲ್ಲವನ್ನೂ ಮನೆಯ ಕಂಪೌಂಡಿನೊಳಗೇ. ಹಾಕಿಸಿದ ತಂತಿ ಜಾಲರಿ ಯಿಂದಲೇ ನೋಡುತ್ತಿದ್ದರಾಗಲೀ ಅಂಗಳಕ್ಕೆ ಬಂದದ್ದು, ಎಲ್ಲರನ್ನ ಮಾತಾಡಿಸಿದ್ದು, ಎಲ್ಲರ ಕಣ್ಣಿಗೆ ಬಿದ್ದದ್ದು, ಹೋಗಲಿ ಎಷ್ಟು ಎತ್ತರ ಇದ್ದಾರೆನ್ನುವುದೂ ಊರ ಜನರಿಗೆ ತಿಳಿಯದಂತೆ ಮೂರು ತಲೆಮಾರುಗಳು ಹುಟ್ಟಿ, ಉಂಡುಟ್ಟು, ಸತ್ತೂ ಹೋದರು.

ನಾಲ್ಕನೆಯ ತಲೆಮಾರು ನಡೆಯುವಾಗ ಬಂತು ನೋಡ್ರಿ ಈ ಕರೋನಾ, ಇಂಥವರಿಗೆ ಪಾಠ ಕಲಿಸಲೇನೋ ಎಂಬಂತೆ ಬಂತು ಬಡ್ಡಿ ಮಗಂದು. ಹೇಗಂತಿರಾ? ನಿತ್ಯ ಎಲ್ಲರಿಗೆ ಕಟಿಂಗ್ ಮಾಡುವ ಮುನಿಸಾಮಿಗೆ ಬರಲಿಲ್ಲ, ಹಿಟ್ಟಿನ ಗಿರಣಿ ಹನುಮಂತಪ್ಪಗೆ ಬರಲಿಲ್ಲ, ಊರ ಬಟ್ಟೆ ಒಗೆಯೋ ಲಾಂಡ್ರಿ ಲಕ್ಷ್ಮಣ್‌ಗೆ ಬರಲಿಲ್ಲ, ಮನಿಮನಿ ಅಡ್ಯಾಡಿ ಕಾಯಿಪಲ್ಲೆ ಮಾರೋ ಕಾಳಮ್ಮ, ಆಕಿ ಗಂಡ ಕಳಕಪ್ಪಗೆ ಬರಲಿಲ್ಲ, ಊರತುಂಬಾ ಅಡ್ಡಾಡಿ ಪೋಸ್ಟ್ ಹಂಚೋ ಪೋಸ್ಟ್ ಮ್ಯಾನ್ ಫಕೀರಪ್ಪಗೆ ಬರಲಿಲ್ಲ, ಇವರ ಮನಿ ಆಕಳ, ಎಮ್ಮಿ, ಎತ್ತು ಮೇಯಿಸಿಕೊಂಡು ಬರೋ ಎಲ್ಲಪ್ಪಗೆ ಬರಲಿಲ್ಲ, ಹೊಲಕ್ಕ ಹಾಕೋ ಗೊಬ್ಬರಾನ ಕಂಡವರ ತಿಪ್ಪಿಯಿಂದ ಕೆತ್ತಿ ಕೆತ್ತಿ ಬಳಿದು ಬಂಡಿಗೆ ಬರೀ ಮೈಯಲ್ಲಿ ತುಂಬೋ ತಿಪ್ಪಣ್ಣಗೆ ಬರಲಿಲ್ಲ, ಹೋಗಲಿ, ಇವರ ಮನಿಗೆ ನೀರು ಹೊರೋ ಅಪ್ಪಣ್ಣ, ಅಡಿಗಿ ಪದ್ದವ್ವಗೂ ಬರಲಿಲ್ಲ. ಬಂದಿದ್ದು ಯಾರಿಗೆ? ಗಿರ್ದಾವರ್ ತಾಯಿ ಭೋಗವ್ವಗೆ.

ಅವರಿಂದ ಗಿರ್ದಾವರ್‌ಗೆ, ಅವರಿಂದ ಹೆಂಡತಿಗೆ, ಬ್ಯಾಂಕಿನ ಅಳಿಯಗೆ, ಅಳಿಯನಿಂದ ಮಗಳು ಗೋದಾವರಿಗೆ ಬಂದು ಸಾರಾ ಸಗಟು ಮನಿ ಜನ ನೆಲಹಿಡಿದು ಒಬ್ಬೊಬ್ಬರೇ ಒಬ್ಬೊಬ್ಬರೇ ಸತ್ತು ಹೋದರೂ, ಕೆಟ್ಟೆನಿಸಿತು. ಅಂತೂ ಅವರ ಪೂರ್ತಿ ಇಡೀ ಮನೆ ಒಳಹೊಕ್ಕು ಮನಿ ಅಲ್ಲದೇ ಅವರ ದೇಹನೂ ಪೂರ್ತಿ ನೋಡಿದ್ದಂದ್ರ ಕರೋನಾ ವೈರಸ್ ಒಂದೇ ಅವರ ಇಡೀ ಮನೆಯನ್ನು ಪೂರ್ತಿ ನೋಡಿದ್ದು, ಅವರೂ ಎಷ್ಟು ಎತ್ತರ ಇದ್ದಾರಂತ ನೋಡಿದ್ದು ಬಿಡಲೇ ಎಂದು ಊರ ಜನ ಮಾತಾಡಿ ಕೊಂಡರು.

ನಡೆದದ್ದು ಹಾಗೆ ಅಲ್ಲವೇ ಸ್ನೇಹಿತರೆ. ಭಿಕ್ಷುಕರಿಗೆ, ಕೂಲಿಗಳಿಗೆ, ಬೀದಿಬೀದಿ ತಿರುಗಿ ಕೂಗಿ ಕೂಗಿ ದಿನಬಳಕೆ ವಸ್ತುಗಳನ್ನು ಮಾರು ವವರಿಗೆ ಬರದ ಈ ಕರೋನಾ ದಂತದ ಅರಮನೆಗಳಲ್ಲಿರುವವರಿಗೆ ಬಂದದ್ದು ಸೋಜಿಗವೇ ನಿಜತಾನೆ? ಅದಕ್ಕೇ ಅಲ್ಲವೇ ಬೀದಿಗೆ ಬಿದ್ದದ್ದು ಬೆಳೆಯಿತು, ಕೋಣೆಯಲ್ಲಿ ಇದ್ದದ್ದು ಕೊಳೆಯಿತು. ಕರೋನಾಕ್ಕೆ ಇದು ಹೇಳಿದ ಮಾಡಿದ ಒಂದು ಗಾದೆಯ ಮಾತಾ ಯಿತು.

Leave a Reply

Your email address will not be published. Required fields are marked *