Monday, 16th September 2024

ಹೆಸರು ಭವ್ಯ, ಚಿತ್ರಕಲೆಯೂ ಭವ್ಯ, ಸ್ವಭಾವ ಸಂಕೋಚದ ಮುದ್ದೆ !

ತಿಳಿರು ತೋರಣ

srivathsajoshi@yahoo.com

ಚಿತ್ರಕಲೆಯು ಭವ್ಯಶ್ರೀಗೆ ಜೀವನಪ್ರೀತಿ ಕಲಿಸಿದ್ದಲ್ಲದೇ ಜೀವನ ಸಂಗಾತಿಯನ್ನೂ ತಂದುಕೊಟ್ಟಿದೆ. ಭವ್ಯಶ್ರೀ ಪೋಸ್ಟ್ ಮಾಡಿದ ಚಿತ್ರ ಕೃತಿಯೊಂದು ಯಾವುದೋ ಗ್ರೂಪ್‌ನಲ್ಲಿ ಶೇರ್ ಆಗಿತ್ತು. ಆ ಗ್ರೂಪಿನಲ್ಲಿದ್ದ ಉಪ್ಪುಂದದ ರವಿ ಮಾಧವ ದೇವಾಡಿಗರನ್ನು ಆ ಚಿತ್ರ ಸೆಳೆಯಿತು. ಚಿತ್ರ ಬಿಡಿಸಿದವರನ್ನು ಹುಡುಕಿ ಬಂದಾಗ, ಮೊದಲ ನೋಟದಲ್ಲೇ ಪ್ರೇಮ ಅಂಕುರಿ ಸಿತು. ‘ಮದುವೆ ಯಾದರೆ ಇವಳನ್ನೇ’ ಎಂದು ಭವ್ಯಶ್ರೀಯ ಹೆತ್ತವರ ಮುಂದೆ ಮದುವೆ ಪ್ರಸ್ತಾವ ಇಟ್ಟರು.

‘ಅಭಿಜಾತ ಕಲಾವಿದೆ ಇರಬಹುದು. ಬಹಳ ಚಂದವಾಗಿ ಬಿಡಿಸಿದ್ದಾರೆ!’ ಎಂದು ಮೆಚ್ಚುಗೆಯ ಪ್ರತಿಕ್ರಿಯೆ ಬರೆದು ಆ ವಾಟ್ಸ್ಯಾಪ್ ಚಾಟನ್ನು ನಾನು ಡಿಲೀಟ್ ಮಾಡಿ ಆಗಿತ್ತು. ಚಿತ್ರಗಳು ತುಂಬ ಚಂದವಿದ್ದದ್ದು ಹೌದು, ಆದರೆ ಮೊಬೈಲ್‌ಫೋನಲ್ಲಿ ಎಷ್ಟೂಂತ ಸೇವ್ ಮಾಡಿಡೋದು. ವಾಟ್ಸ್ಯಾಪ್‌ನಲ್ಲಿ ಬಂದು ಬೀಳುವ ಸರಕಿಗೆ ಲೆಕ್ಕವೇ ಇಲ್ಲ.

ಜೊಳ್ಳಿನಲ್ಲಿ ಕಾಳು ಹುಡುಕೋದಕ್ಕೆ ಸಮಯ ಮತ್ತು ತಾಳ್ಮೆ ಬೇಕು. ಹಾಗಾಗಿ, ಜೊತೆಗೊಂದು ವಾಕ್ಯದ ವಿವರಣೆ ಇಲ್ಲದೇ ಬರುವ ವಿಡಿಯೊ/ಆಡಿಯೊ/ಚಿತ್ರ ಫಾರ್ವರ್ಡುಗಳನ್ನಂತೂ ತೆರೆದು ನೋಡದೆಯೇ, ಡಿಲೀಟ್ ಮಾಡುವ ಕ್ರಮ ನನ್ನದು. ಅದರಲ್ಲೇನೂ ಮುಲಾಜಿಲ್ಲ. ಪುಣ್ಯಕ್ಕೆ ಈ ಚಿತ್ರಗಳ ಜೊತೆ ವೀಣಾ ಜೋಶಿಯವರು ‘ನಮ್ಮೂರಿನ ಭವ್ಯಶ್ರೀ ಎಂಬ ಹುಡುಗಿಯ ಕಲಾಕೃತಿಗಳು. ಅವಳೇ ರಚಿಸಿದ್ದು. ಯಾರ ಬಳಿಯೂ ಕಲಿತಿಲ್ಲ’ ಎಂಬ ಚಿಕ್ಕ ವಿವರಣೆ ಸೇರಿಸಿದ್ದರು.

ಅಲ್ಲದೆ ಅವರೆಂದೂ ‘ಕಸ’ ಫಾರ್ವರ್ಡ್ ಮಾಡುವವರಲ್ಲವೆಂದು ಗೊತ್ತು. ಆದ್ದರಿಂದಲೇ ನಾನು ಬಿಡುವು ಮಾಡಿಕೊಂಡು
ಚಿತ್ರಗಳನ್ನು ನೋಡಿ ಮನಃಪೂರ್ವಕ ಉತ್ತರ ಬರೆದಿದ್ದೆ. ಬಹುಶಃ ಆ ಸಂಭಾಷಣೆ ಅಲ್ಲಿಗೇ ಮುಗಿಯಿತೆಂದು ನನ್ನ ನಿಲುವು. ಹಾಗೆ ನಾನು ಚಾಟ್ ಡಿಲೀಟ್ ಮಾಡಿದ್ದು.

ಒಂದೆರಡು ಗಂಟೆಗಳ ಬಳಿಕ ವೀಣಾ ಮತ್ತೆ ಸೇರಿಸಿದರು: ‘ತೀವ್ರ ಬಡತನದಲ್ಲಿ ಬೆಳೆದವಳು. ತಾಯಿ ಕೂಲಿ ಕೆಲಸ ಮಾಡ್ತಾರೆ. ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಈಕೆ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲೆಯಲ್ಲಿ ಬಹುಮಾನ ಪಡೆದವಳು. ಚಿತ್ರಕ್ಕೆ ತುಂಬಲು ಬಣ್ಣಗಳೂ ಇರದೇ ಅಳುತ್ತಾ ಶಾಲೆಗೆ ಹೋಗಿದ್ಲು. ಅಮ್ಮ ೨೦ ರೂಪಾಯಿ ಹೊಂದಿಸಿ ಪುಟ್ಟ ವಾಟರ್‌ಕಲರ್ ಬಾಕ್ಸ್ ಕೊಂಡು, ಓಡುತ್ತ ಶಾಲೆಗೆ ಹೋಗಿ ಮಗಳಿಗೆ ಕೊಟ್ಟು ಬಂದಿದ್ದಳು.

ಮಗಳು ಅಮ್ಮನಿಗೆ ಬಹುಮಾನ ತಂದುಕೊಟ್ಟಳು. ಕಳೆದ ವರ್ಷ ಮದುವೆಯಾಗಿದೆ. ಹುಡುಗ ಫೇಸ್‌ಬುಕ್‌ನಲ್ಲಿ ಇವಳ
ಚಿತ್ರಕಲೆಯನ್ನು ನೋಡಿ, ಹುಡುಕಿಕೊಂಡು ಬಂದು ಮದುವೆಯಾಗಿದ್ದಾನೆ. ಅವನೂ ದೇವಾಡಿಗ ಸಮುದಾಯದವನು.’ –
ಇದು ನನ್ನ ಎದೆಯ ಕಲಕಿತು, ತಟ್ಟಿತು, ತಾಗಿತು. ಛೇ! ಚಿತ್ರಗಳನ್ನೆಲ್ಲ ಡಿಲೀಟ್ ಮಾಡಿಬಿಟ್ಟೆನಲ್ಲ, ಈ ಹಿನ್ನೆಲೆ ಗೊತ್ತಾದ ಮೇಲೆ ನೋಡಿದ್ದರೆ ನಾನು ಆ ಚಿತ್ರಗಳನ್ನು ನೋಡುವ ರೀತಿಯೇ ಬೇರೆ ಇರುತ್ತಿತ್ತು. ಅದು ಯಾವಾಗಲೂ ಹಾಗೆಯೇ ಅಲ್ಲವೇ? ಯಾವುದೇ ಕಲಾಕೃತಿಯನ್ನಾದರೂ ಹೀಗೇಸುಮ್ಮನೆ ನೋಡೋದಕ್ಕೂ, ಕಲಾವಿದನ ಹಿನ್ನೆಲೆ, ಮನೋಧರ್ಮ, ಆ ಕಲಾ ಕೃತಿಗೆ ಆತ/ಆಕೆ ಕೊಟ್ಟಿರಬಹುದಾದ ಅರ್ಥ-ಆಶಯ-ಉದ್ದೇಶ ಒಂಚೂರಾದ್ರೂ ಗೊತ್ತಾದ ಮೇಲೆ ನೋಡೋದಕ್ಕೂ
ವ್ಯತ್ಯಾಸವಿರುತ್ತದೆ.

ಈಗೇನು ಮಾಡಲಿ, ಡಿಲೀಟ್ ಮಾಡಿ ಆಗಿದೆ. ಆದ್ದರಿಂದ ವೀಣಾರಿಗೆ ‘ಹೃದಯಸ್ಪರ್ಶಿ ಹಿನ್ನೆಲೆ! ಕೈಹಿಡಿದಾತನೂ ಒಳ್ಳೆಯ ಕೆಲಸ ಮಾಡಿದ್ದಾನೆ. ಜೀವನವಿಡೀ ಚಂದವಾಗಿರಲಿ ಎಲ್ಲರೂ ಅಂತ ಹಾರೈಸುತ್ತೇನೆ.’ ಎಂದು ಬರೆದೆ. ಶುಕ್ರವಾರ ಬೇರೆ. ವಾರದ ಅಂಕಣ ಬರೆಯುವತ್ತ ನಾನು ಗಮನಹರಿಸಲೇಬೇಕಿತ್ತು. ‘ಹೌದು. ಅವಳಿಗೆ ಗುರುವನ್ನು ಹುಡುಕುತ್ತಿದ್ದಾನೆ. ಜೊತೆ
ಯಲ್ಲಿ ಡ್ರಾಯಿಂಗ್‌ಗಳ ವರ್ಕ್ ಆರ್ಡರ್‌ಗಳನ್ನು ತಂದುಕೊಡುತ್ತಾನೆ.’ – ಒಂದರ್ಧ ಗಂಟೆ ಬಿಟ್ಟು ನೋಡಿದಾಗ, ವೀಣಾ ನಾನು
ಹಾರೈಸಿ ಮುಗಿಸಿದ್ದಕ್ಕೂ ಉತ್ತರಿಸಿದ್ದರು!

ಈಗ ಇದೊಂದು ಎಕ್ಸಲೆಂಟ್ ಹ್ಯೂಮನ್ ಇಂಟೆರೆಸ್ಟ್ ಸ್ಟೋರಿ ಅಂತನಿಸಿತು. ಇಂಥ ಸ್ಟೋರಿಗಳ ಮೋಡಿಯೇ ಹಾಗೆ. ಹೇಳುವವರಿಗೂ ಕೇಳುವವರಿಗೂ ಹೃದಯ ಆರ್ದ್ರವಾಗುತ್ತದೆ, ಆಸಕ್ತಿಯ ಒರತೆ ಹೆಚ್ಚುತ್ತದೆ. ‘ಈ ಹುಡುಗಿಯ, ಅವಳ ಅಮ್ಮನ, ಮತ್ತು ಕೈಹಿಡಿದ ಹುಡುಗನ ಬಗ್ಗೆ ನೀವು ನನಗೆ ಇನ್ನಷ್ಟು ವಿವರ ಸಂಗ್ರಹಿಸಿ ಕೊಟ್ಟರೆ ಲೇಖನ ಬರೆಯುವೆ’ ಎಂದೆ. ‘ಕಳೆದವರ್ಷ ನಾನೇ ಒಂದು ಲೇಖನ ಬರೆದು ಪತ್ರಿಕೆಗೆ ಕಳುಹಿಸಿದ್ದೆ. ಎರಡು ಕಡೆಯಿಂದ ನಯವಾಗಿ ತಿರಸ್ಕೃತವಾಯ್ತು. ಆಮೇಲೆ ಸುಮ್ಮನಾದೆ’ ಎಂದರು. ಆಶ್ಚರ್ಯವಿಲ್ಲ.

ಈಗಿನ ಮಾಧ್ಯಮಲೋಕಕ್ಕೆ ಹಿಡಿದ ಕನ್ನಡಿ ಅದು. ಇಂಥ ಸರಕು ಯಾರಿಗೂ ಬೇಕಿಲ್ಲ. ಕೆಸರೆರಚಾಟವೋ ದ್ವೇಷ ಕಾರುವಿಕೆಯೋ ಸಮಾಜಕಂಟಕರ ವಿಷಯವೋ ಆದರೆ ಸ್ವೀಕರಿಸಿ ಕಣ್ಣಿಗೊತ್ತಿಕೊಂಡು ಪ್ರಕಟಿಸುತ್ತಾರೆ, ಬೆಂಕಿಯಲ್ಲಿ ಅರಳಿದ ಹೂವುಗಳನ್ನು ಪ್ರಪಂಚಕ್ಕೆ ಪರಿಚಯಿಸುವುದಾದರೆ ಅಳೆದೂಸುರಿದೂ ಮನಸ್ಸಿಲ್ಲದ ಮನಸ್ಸಿನಿಂದ ಪ್ರಕಟಿಸಿದರೆ ಹೆಚ್ಚು! ‘ಮೊದಲನೆಯದಾಗಿ ನಿನ್ನೆ ನೀವು ಕಳುಹಿಸಿದ್ದ ಚಿತ್ರಗಳನ್ನು ಇನ್ನೊಮ್ಮೆ ನನಗೆ ಕಳುಹಿಸಿ.

ಹಾಗೆಯೇ ನಿಮ್ಮ ಆ ಅಸ್ವೀಕೃತ ಲೇಖನವನ್ನೂ’ ಎಂದು ಕೇಳಿದ್ದಕ್ಕೆ ವೀಣಾ ತತ್‌ಕ್ಷಣ ಕಳುಹಿಸಿದರು. ‘ಬೆವರ ಹನಿಗಳಲ್ಲಿ ಬೆಳೆದ ಕಲಾಪುಷ್ಪ’ ಶೀರ್ಷಿಕೆಯ ಆ ಲೇಖನವನ್ನು ಪೂರ್ತಿ ಓದಿದೆ. ಭವ್ಯಶ್ರೀಯ ಬಗ್ಗೆ, ಅದಕ್ಕಿಂತಲೂ ಹೆಚ್ಚಾಗಿ ಅವಳ ಅಮ್ಮನ ಬಗ್ಗೆ ಮತ್ತು ಗಂಡನ ಬಗ್ಗೆ ಅಭಿಮಾನ ಉಕ್ಕಿತು. ಅವರೆಲ್ಲರನ್ನೂ ಪ್ರಪಂಚಕ್ಕೆ ಪರಿಚಯಿಸಬೇಕೆಂದು ಹೊರಟಿದ್ದ ವೀಣಾರ ಬಗ್ಗೆಯೂ. ‘ನನ್ನ ಪ್ರಕಾರ ಇದು ಪ್ರಪಂಚಕ್ಕೆ ತಿಳಿಯಬೇಕಾದ, ಪ್ರಪಂಚವು ಪ್ರೇರಣೆ ಪಡೆಯಬಹುದಾದ ವಿಚಾರ. ಒಳ್ಳೆಯದನ್ನು ಎತ್ತಿಹಿಡಿಯುವುದಕ್ಕೆ ನಾನು ಬದ್ಧ. ನಾನಿದನ್ನು ಅಂಕಣಕ್ಕೆ ಬಳಸಿಯೇ ಸಿದ್ಧ!’ ಎಂದು ನನ್ನ ನಿರ್ಣಯವನ್ನು ಅರುಹಿದ ಮೇಲೆ ವೀಣಾ ಮತ್ತಷ್ಟು ಚಿತ್ರಗಳನ್ನೂ, ಭವ್ಯಶ್ರೀ ಮತ್ತವಳ ಅಮ್ಮನ ಬಗ್ಗೆ ಇನ್ನೊಂದಿಷ್ಟು ಅಂಶಗಳನ್ನೂ ಕಳುಹಿಸಿದರು.

ಅವರಿಗೆ ಕೃತಜ್ಞತೆ ಸಲ್ಲಿಸುತ್ತ ಅದೆಲ್ಲವೂ ಈಗ ನಿಮ್ಮ ಓದಿಗೆ: ಭವ್ಯಶ್ರೀ ಉಡುಪಿ ಜಿಲ್ಲೆಯ ಬಾರ್ಕೂರು ಎಂಬ ಊರಿನವಳು. ದೇವಾಲಯಗಳ ಊರಾದ ಬಾರ್ಕೂರಿಗೆ ಭವ್ಯ ಇತಿಹಾಸವಿದೆ. ಒಂದಾನೊಂದು ಕಾಲದಲ್ಲಿ ತುಳುನಾಡಿನ ರಾಜಧಾನಿಯೂ ಆಗಿತ್ತೆಂಬ ಖ್ಯಾತಿ ಈ ಊರಿನದು. ಈಗಲೂ ಸಾಂಸ್ಕೃತಿಕವಾಗಿ ಸಮೃದ್ಧ. ಅಧ್ಯಾತ್ಮ, ಸಾಹಿತ್ಯ, ಸಂಗೀತ, ಚಿತ್ರಕಲೆ, ವೈದ್ಯಕೀಯ, ಜನಪದ, ಕಂಬಳ, ವಾಣಿಜ್ಯ, ವಿಜ್ಞಾನ- ಎಲ್ಲ ಕ್ಷೇತ್ರಗಳಲ್ಲೂ ಹೆಸರು ಮಾಡಿದ ಜನರಿರುವ ಊರು. ಅಲ್ಲೊಬ್ಬಳು ಎಲೆಮರೆಯ ಕಾಯಿ ಈ ಭವ್ಯಶ್ರೀ.

ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಪುಷ್ಪಾ-ಶೇಖರ ದೇವಾಡಿಗ ದಂಪತಿಯ ಪುತ್ರಿ. ಮನೆಯಲ್ಲಿ ಬಡತನ ಇದ್ದಿರಬಹುದು ಆದರೆ ಮಗಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂಬ ಮನಸ್ಸಿಗೆ ಬಡತನವಿರಲಿಲ್ಲ. ಮಗಳನ್ನು ಶಾಲೆಗೆ ಸೇರಿಸಿದರು. ಪುಟ್ಟ ಕೈಗಳಿಗೆ ಪೆನ್ಸಿಲ್ ಸಿಕ್ಕಿತು, ಅಂದೇ ಚಿತ್ರ ಬಿಡಿಸಲು ಶ್ರೀಕಾರ. ಭವ್ಯಶ್ರೀಗೆ ಬಹುಶಃ ದೈವದತ್ತವಾಗಿ ಒಲಿದಿದೆ ಚಿತ್ರಕಲೆ (ಹಾಗಾಗಿ ಅಭಿಜಾತ ಕಲಾವಿದೆ ಎಂದು ನಾನು ಅಂದಾಜಿಸಿದ್ದು ಸರಿಯೇ ಇದೆ). ಬಾಲ್ಯದಲ್ಲಿ ಭವ್ಯಶ್ರೀ ಅಕ್ಷರಗಳಿಗಿಂತ ಹೆಚ್ಚಾಗಿ ಚಿತ್ರಗಳನ್ನೇ ಬರೆಯುತ್ತಿದ್ದಳೋ ಏನೋ.

ಎಲೆ, ಹೂವು, ಗಿಡ, ಮರ, ಹಕ್ಕಿ ಎಲ್ಲವೂ ಚಿತ್ತಾರವಾಗುತ್ತಿದ್ದವು. ದೇವರ ಫೋಟೋ, ಕ್ಯಾಲೆಂಡರ್ ನೋಡಿ ದೇವ ದೇವಿಯರ ಚಿತ್ರಗಳನ್ನೂ ಬಿಡಿಸುತ್ತಿದ್ದಳು. ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಗಳ ಫಲಿತಾಂಶ ಘೋಷಣೆ ಮಾಡುವಾಗ ಮೊದಲ ಹೆಸರು ಭವ್ಯಶ್ರೀಯದೇ ಇರುತ್ತಿತ್ತು. ಐದನೆಯ ತರಗತಿಯಲ್ಲಿದ್ದಾಗ ಭವ್ಯಶ್ರೀ ಪ್ರತಿಭಾ ಕಾರಂಜಿಯ ಚಿತ್ರಕಲಾ ವಿಭಾಗದಲ್ಲಿ ಸ್ಪಽಸಿದಳು. ಆದರೆ ಅವಳ ಬಳಿ ಚಿತ್ರಕ್ಕೆ ತುಂಬಿಸಲು ಬಣ್ಣಗಳೇ ಇರಲಿಲ್ಲ.

ಬೇಸರದಿಂದಲೇ ಶಾಲೆಗೆ ಹೊರಟ ಮಗಳ ಬಾಡಿದ ಮುಖ ನೋಡಲಾಗದೇ, ತಾಯಿ ಪುಷ್ಪಾ ಬಹಳ ಕಷ್ಟದಿಂದ ಇಪ್ಪತ್ತು ರೂಪಾಯಿಗಳನ್ನು ಹೊಂದಿಸಿ, ಒಂದು ಪುಟ್ಟ ವಾಟರ್ ಕಲರ್ ಬಾಕ್ಸ್ ತಂದು ಕೊಟ್ಟಿದ್ದರು. ಕುಣಿಯುತ್ತಲೇ ಹೊರಟ ಭವ್ಯಶ್ರೀ ಬಹುಮಾನದೊಂದಿಗೆ ಮರಳಿದ್ದಳು. ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿದ್ದ ಪುಷ್ಪಾ- ಶೇಖರ ದಂಪತಿಗೆ ಮಗಳಲ್ಲಿದ್ದ ಕಲೆಯ ಚಿಗುರಿಗೆ ಇಂಬು ಕೊಟ್ಟು, ನೀರುಣಿಸುವ ಹಂಬಲ ಬೆಟ್ಟದೆತ್ತರವಿದ್ದರೂ, ಹಣದ ಮುಗ್ಗಟ್ಟಿನಿಂದ ಕುಗ್ಗಿಹೋಗಿದ್ದರು.

ಆದರೆ ಆ ಚಿಗುರು, ಭವ್ಯಶ್ರೀಯ ಕೈಗಳಲ್ಲಿ ತಾನಾಗಿಯೇ ಬೆಳೆದು ಬಳ್ಳಿಯಾಗಿ ಹಬ್ಬುತ್ತಿತ್ತು. ಅವಳ ಕಲ್ಪನೆಯ ಮೊಗ್ಗುಗಳು ಕಾಗದದಲ್ಲಿ ಹೂವುಗಳಾಗಿ ಅರಳುತ್ತಿದ್ದವು. ಬಾಲ್ಯದಲ್ಲಿ ಹೆಚ್ಚಾಗಿ ಪೆನ್ಸಿಲ್ ಶೇಡಿಂಗ್ ಮಾಡುತ್ತಿದ್ದ ಭವ್ಯಶ್ರೀ, ಶಾಲೆಯ ಪಠ್ಯಪುಸ್ತಕಗಳಲ್ಲಿರುವ ಚಿತ್ರಗಳನ್ನೆಲ್ಲ ಬಿಡಿಸಿ ಖುಷಿ ಪಡುತ್ತಿದ್ದಳು. ಶಾಲಾ ದಿನಗಳಲ್ಲಿ ಅವಳು ಬಿಡಿಸಿದ ಚಿತ್ರಗಳ ಒಂದು ಆಲ್ಬಂ ಇನ್ನೂ ಬಾರ್ಕೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆಯಂತೆ.

ಚಿತ್ರಕಲಾ ಶಿಕ್ಷಕರೊಬ್ಬರು ಆಕೆಗೆ ಕಡಿಮೆ ಶುಲ್ಕಕ್ಕೆ ಡ್ರಾಯಿಂಗ್ ಕಲಿಸುವುದಕ್ಕೆ ಮುಂದೆ ಬಂದರು. ಒಂದೆರಡು ವಾರ ರೇಖೆಗಳನ್ನಷ್ಟೇ ಕಲಿಸಿ, ತನಗಿನ್ನು ತರಗತಿ ನಡೆಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಅವಳು ಮತ್ತೆ ತರಗತಿಗೆ ಬರದಂತೆ ಉಪಾಯ ಹೂಡಿದರು. ‘ಕೊಂಡು ತಂದು ಹೊತ್ತು ಮಾರಿ ಲಾಭ ಗಳಿಸಿ ಹೊಟ್ಟೆಹೊರೆಯಲು ವಿದ್ಯೆಯೇನು ಬಳೆಯ ಮಲಾರವೇ?’ ಎಂದು ರನ್ನನನ್ನು ಗದರಿಸಿದ್ದ ಗುರುವಿನಂತೆ ನಡೆದುಕೊಂಡರೋ ಅಥವಾ ಶಂಕರಾಭರಣಂನ ದಾಸುವಿನಂತೆ ನಡೆದುಕೊಂಡರೋ ಗೊತ್ತಿಲ್ಲ, ಅಂತೂ ಭವ್ಯಶ್ರೀಯ ಚಿತ್ರಕಲಿಕೆ ಅಲ್ಲಿಗೇ ನಿಂತಿತು.

ರೋಟಿ-ಕಪಡಾ-ಮಕಾನ್ ನಿರ್ವಹಣೆಯೇ ಕಷ್ಟವಾಗಿದ್ದ ಹೆತ್ತವರು, ಚಿತ್ರಶಿಕ್ಷಕರಿಗೆ ಶುಲ್ಕವನ್ನು ಎಲ್ಲಿಂದ ಹೊಂದಿಸಿ ಯಾರು? ಮಗಳ ಭವಿಷ್ಯ ಉಜ್ವಲವಾಗಬೇಕಾದರೆ ತಾನೂ ದುಡಿಯುವುದು ಅನಿವಾರ್ಯ ಎಂದರಿತ ತಾಯಿ ಪುಷ್ಪಾ ಸಂಸಾರದ ನೊಗಕ್ಕೆ ಹೆಗಲು ನೀಡಲು ಸಂಕಲ್ಪಿಸಿದರು. ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸತೊಡಗಿತು. ಹತ್ತನೆಯ ತರಗತಿ
ಮುಗಿಸಿದ ಮಗಳನ್ನು ಬಾರ್ಕೂರಿನ ನ್ಯಾಷನಲ್ ಜ್ಯೂನಿಯರ್ ಕಾಲೇಜಿಗೆ ಸೇರಿಸಿದರು. ಕಷ್ಟಪಟ್ಟು ಹಣ ಹೊಂದಿಸಿ ಮಗಳಿಗೊಂದು ಸ್ಮಾರ್ಟ್‌ಫೋನ್ ಸಹ ಕೊಡಿಸಿದರು.

ಆ ಫೋನೇ ಭವ್ಯಶ್ರೀಯ ಫುಲ್‌ಕೈಮ್ ಚಿತ್ರಕಲಾ ಗುರುವಾಯಿತು. ಯೂಟ್ಯೂಬ್‌ನಿಂದ ಚಿತ್ರಕಲೆಯ ಹಲವಾರು ಮಟ್ಟುಗಳನ್ನು ಭವ್ಯಶ್ರೀ ಕಲಿತಳು. ಸಾಧ್ಯವಿದ್ದಲ್ಲೆಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿದಳು. ಆದರೆ ಅಂತರ್ಮುಖಿಯೂ, ಸಂಕೋಚ ಸ್ವಭಾವದವಳೂ ಆದ ಭವ್ಯಶ್ರೀಗೆ ಪ್ರೈಜ್ ಬಂದಾಗ ಸ್ಟೇಜ್ ಹತ್ತಿ ಬಹುಮಾನ ಪಡೆದುಕೊಳ್ಳಲಿಕ್ಕೂ ಹಿಂಜರಿಕೆ. ಆರ್ಥಿಕವಾಗಿ ಹಿಂದುಳಿದ ಕಾರಣ
ದಿಂದಲೋ ಏನೋ, ಮುನ್ನುಗ್ಗುವ ಆಸೆ ಇದ್ದರೂ ಭಯ, ಕೀಳರಿಮೆ, ಸಂಕೋಚಗಳಿಂದಾಗಿ ಹಲವಾರು ಅವಕಾಶಗಳಿಂದ
ತಪ್ಪಿಸಿಕೊಳ್ಳುವಂತಾಯಿತು. ಆಗೆಲ್ಲ ಅವಳ ಗೆಳತಿಯರು ಅವಳನ್ನು ಬಲವಂತದಿಂದ ಸ್ಪರ್ಧೆಗೆ ನಿಲ್ಲಿಸುತ್ತಿದ್ದರು.

ಬಹುಮಾನವೂ ಬರುತ್ತಿತ್ತು. ಆದರೆ ಆ ಬಹುಮಾನವನ್ನು ಸ್ಟೇಜಿನಿಂದ ತಂದುಕೊಡುತ್ತಿದ್ದದ್ದು ಆ ಗೆಳತಿಯರಲ್ಲೊಬ್ಬರು! ಅವಳ ನಾಚಿಕೆ, ಅಂಜಿಕೆ ಸ್ವಭಾವ ಎಷ್ಟಿತ್ತೆಂದರೆ- ನೀವು ನಂಬಲಿಕ್ಕಿಲ್ಲ, ಪ್ರಾಥಮಿಕ ಶಾಲೆಗೆ ಹೋಗುವಾಗ ಬಿಡಿ, ಹೈಸ್ಕೂಲ್ ಮತ್ತು ಕಾಲೇಜಿಗೆ ಹೋಗುವಾಗಲೂ ಅವಳನ್ನು ಬಿಡಲಿಕ್ಕೆ ಅಮ್ಮ ಜೊತೆಗೆ ಹೋಗುತ್ತಿದ್ದರು, ಸಂಜೆ ಕರೆದುಕೊಂಡು ಬರುತ್ತಿದ್ದರು ಅಥವಾ ಯಾರಿದರೂ ಆ ಜವಾಬ್ದಾರಿ ಒಪ್ಪಿಸುತ್ತಿದ್ದರು ಎನ್ನುತ್ತಾರೆ ವೀಣಾ.

ಅವರ ಮನೆಮುಂದಿನಿಂದಲೇ ಅಮ್ಮ-ಮಗಳು ಹೋಗುವುದನ್ನು ದಿನಾ ಬೆಳಗ್ಗೆ ಸಂಜೆ ನೋಡಿದವರು ಅವರು. ಪಿಯುಸಿ ಮುಗಿದ ಮೇಲೆ ಭವ್ಯಶ್ರೀ ತನ್ನೂರಿನ ಬ್ಯಾಂಕ್ ಶಾಖೆಯಲ್ಲಿ ಎಟೆಂಡರ್ ಆಗಿ ಕೆಲಸಕ್ಕೆ ಸೇರಿದಳು. ಜೊತೆಗೆ ಓದನ್ನೂ ಮುಂದುವರಿಸಿದಳು. ಬಿ.ಕಾಂ ಡಿಗ್ರಿ ಪಡೆದ ಬಳಿಕ ಉದ್ಯೋಗ ಬಿಟ್ಟು ಸಂಪೂರ್ಣವಾಗಿ ಚಿತ್ರಕಲೆಯ ಕಡೆಗೆ ಗಮನ ಹರಿಸಿದಳು. ಭವ್ಯಶ್ರೀ ಈಗ ಲೀಫ್ ಆರ್ಟ್, ಕ್ಯಾನ್ವಾಸ್ ಪೈಂಟಿಂಗ್, ವಾಲ್ ಆರ್ಟ್, ಪೋರ್ಟ್ರೇಟ್, ಪೆನ್ಸಿಲ್ ಶೇಡ್, ಪೆನ್ಸಿಲ್ ಆರ್ಟ್(ಪೆನ್ಸಿಲ್ಲಿನಲ್ಲಿ ಕೆತ್ತನೆ), ಹೆನ್ನಾ ಡಿಸೈನ್, ೩-ಡಿ ಆರ್ಟ್, ಕ್ವಿಕ್ ಆರ್ಟ್ ಎಲ್ಲವನ್ನೂ ಮಾಡಬಲ್ಲಳು. ಆದರೆ ನೆನಪಿರಲಿ, ಏಕಲವ್ಯನಂತೆಯೇ ಅವಳ ಕಲಿಕೆಯೂ. ತಾನು ಬಿಡಿಸಿದ ಚಿತ್ರಗಳನ್ನು ಫೇಸ್‌ಬುಕ್ ಗೋಡೆಯ ಮೇಲೆ ಅಂಟಿಸುತ್ತಿದ್ದಳು.

ಬಹಳಷ್ಟು ಪ್ರಶಂಸೆಗಳೂ ಬರುತ್ತಿದ್ದವು. ಯಕ್ಷಗಾನವೆಂದರೆ ಆಕೆಗೆ ಪ್ರಾಣ. ಭಾಗವತರ, ಪಾತ್ರಧಾರಿಗಳ ಚಿತ್ರ ಬಿಡಿಸುವು
ದೆಂದರೆ ಬಹಳ ಖುಷಿ. ಹಲವು ಯಕ್ಷಗಾನ ಕಲಾವಿದರ ಪೈಂಟಿಂಗ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತಿದ್ದಳು. ಯಾರ್ಯಾರಿಂದಲೋ ತಿಳಿದುಕೊಂಡು ಆ ಕಲಾವಿದರು ತಮ್ಮ ಪೈಂಟಿಂಗ್ ಭವ್ಯಶ್ರೀಯ ಫೇಸ್‌ಬುಕ್ ಗೋಡೆ ಮೇಲೆ ವಿರಾಜಿಸುವುದನ್ನು ಕಂಡು ಸಂತಸ ವ್ಯಕ್ತಪಡಿಸಿ, ಅವಳ ಪೋಸ್ಟ್ ಮೇಲೆ ಕಮೆಂಟ್ ಮಾಡಿದ್ದಾರೆ.

ಅವಳಿನ್ನೂ ಎತ್ತರಕ್ಕೆ ಬೆಳೆಯಬೇಕೆಂದು ಹರಸಿದ್ದಾರೆ. ಸುಗಮಸಂಗೀತದ ಮೇರು ಪ್ರತಿಭೆ, ದಶಕಗಳ ಹಿಂದೆ ಕರ್ನಾಟಕದಲ್ಲೆಲ್ಲ ಮನೆಮಾತಾಗಿದ್ದ, ಬಾರ್ಕೂರಿನವರೇ ಆದ ಪಿ. ಕಾಳಿಂಗರಾಯರ ಸುಂದರ ಚಿತ್ರವನ್ನೂ ಭವ್ಯಶ್ರೀ ಬಿಡಿಸಿದ್ದಾಳೆ. ಈಗ ಆ ಚಿತ್ರವು ಕಾಳಿಂಗರಾಯರ ಮೊಮ್ಮಗನ ಮನೆಯಲ್ಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಭವ್ಯಶ್ರೀ ಬಿಡಿಸಿದ ತಮ್ಮ ಚಿತ್ರವನ್ನು ಕಂಡು, ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದರಷ್ಟೇ ಅಲ್ಲ, ಒಂದು ಅಭಿನಂದನಾ ಪತ್ರವನ್ನೂ ಅಂಚೆಯ ಮೂಲಕ ಕಳುಹಿಸಿದರು.

ಶ್ರೀ ಕ್ಷೇತ್ರಕ್ಕೆ ಬರುವಂತೆ ಆಹ್ವಾನವಿತ್ತು ಭವ್ಯಶ್ರೀಯ ಕೈಯಿಂದಲೇ ಚಿತ್ರವನ್ನು ಸ್ವೀಕರಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುಕುಮಾರ ಶೆಟ್ಟಿ, ಉಡುಪಿಯ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್, ಯಕ್ಷಗಾನ ಭಾಗವತರಾದ ಪಟ್ಲ ಸತೀಶ್, ರಾಘವೇಂದ್ರ ಆಚಾರ್ಯ ಜನ್ಸಾಲೆ- ಮುಂತಾದವರೆಲ್ಲ ತಮ್ಮ ಚಿತ್ರಗಳನ್ನು ಕಂಡು ಭವ್ಯಶ್ರೀಗೆ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರಕಲೆಯು ಭವ್ಯಶ್ರೀಗೆ ಜೀವನಪ್ರೀತಿ ಕಲಿಸಿದ್ದಲ್ಲದೇ ಜೀವನ ಸಂಗಾತಿಯನ್ನೂ ತಂದುಕೊಟ್ಟಿದೆ. ಫೇಸ್‌ಬುಕ್‌ನಲ್ಲಿ ಭವ್ಯಶ್ರೀ ಪೋಸ್ಟ್ ಮಾಡಿದ ಚಿತ್ರ ಕೃತಿಯೊಂದು ಯಾವುದೋ ಗ್ರೂಪ್‌ನಲ್ಲಿ ಶೇರ್ ಆಗಿತ್ತು. ಆ ಗ್ರೂಪಿನಲ್ಲಿದ್ದ ಉಪ್ಪುಂದದ ರವಿ ಮಾಧವ ದೇವಾಡಿಗರನ್ನು ಆ ಚಿತ್ರ ಸೆಳೆಯಿತು. ಚಿತ್ರ ಬಿಡಿಸಿದವರನ್ನು ಹುಡುಕಿ ಬಂದಾಗ ಭವ್ಯಶ್ರೀಯ ಪರಿಚಯವಾಯಿತು.

ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿತು ಆ ಹುಡುಗನಿಗೆ. ‘ಮದುವೆಯಾದರೆ ಇವಳನ್ನೇ’ ಎಂದು ಭವ್ಯಶ್ರೀಯ ಹೆತ್ತವರ ಮುಂದೆ ಮದುವೆ ಪ್ರಸ್ತಾವ ಇಟ್ಟರು. ಮನೆಯವರು ಓಲಗ ಊದಿಸಿಯೇ ಬಿಟ್ಟರು. ಗಂಡನ ಮನೆಗೆ ಭವ್ಯಶ್ರೀ ಎಷ್ಟು  ಹೊಂದಿಕೊಂಡಿದ್ದಾಳೆಂದರೆ ಗಂಡ ಮತ್ತು ಅತ್ತೆ ಒಟ್ಟಿಗೇ ಇರುವ ಒಂದು ಲೀಫ್ ಆರ್ಟ್ ಬಿಡಿಸಿದ್ದಾಳೆ! ರವಿ ಪತ್ನಿಯ ಚಿತ್ರಕಲಾ ಕೌಶಲಕ್ಕೆ ಮಾರುಹೋಗಿದ್ದು ಮಾತ್ರವಲ್ಲ, ಆಕೆಯ ಆಸಕ್ತಿಯನ್ನು ಪೋಷಿಸುತ್ತಿದ್ದಾರೆ.

ವರ್ಕ್ ಆರ್ಡರ್ ಗಳನ್ನು ತಂದುಕೊಡುತ್ತಿದ್ದಾರೆ. ಆಕೆಗೊಬ್ಬ ಸೂಕ್ತ ಕಲಾಶಿಕ್ಷಕರನ್ನು ಗೊತ್ತು ಮಾಡಬೇಕು ಎಂಬ ಹಂಬಲ ಅವರದು. ಭವ್ಯಶ್ರೀ ಸ್ಮರಣಿಕೆಗಳನ್ನು ತಯಾರಿಸುತ್ತಾಳೆ. ಸಂಸ್ಥೆಗಳಿಗೆ ಲೋಗೊ ಡಿಸೈನ್ ಮಾಡುತ್ತಾಳೆ. ಅವಳ ಸ್ಮರಣಿಕೆ ಗಳು, ಲಾಂಛನಗಳು ಜನಮೆಚ್ಚುಗೆ ಪಡೆದಿವೆ. ಬಾರ್ಕೂರಿನಲ್ಲಿ ಜರುಗಿದ ‘ಆಳುಪ ಉತ್ಸವ’ದಲ್ಲಿ ಅವಳ ಕಲಾಕೃತಿಗಳ ಪ್ರದರ್ಶನ ಏರ್ಪಾಡಾಗಿತ್ತು. ಬಾರ್ಕೂರಿನ ವೆಂಕಟರಮಣ ಭಂಡಾರ್ಕರ್ ಅವರು ತಮ್ಮ ಮನೆಯಲ್ಲಿಟ್ಟಿದ್ದ ಪುರಾತನ ವಸ್ತುಗಳ ಪ್ರದರ್ಶನದ ಜೊತೆಯಲ್ಲಿ ಭವ್ಯಶ್ರೀಯ ಕಲಾಕೃತಿಗಳನ್ನಿರಿಸಲು ಅನುವು ಮಾಡಿ ಕೊಟ್ಟಿದ್ದರು.

ಆದರೆ ಲೋಕದಲ್ಲಿ ಎಂತೆಂತಹ ನೀಚರೂ ಇರುತ್ತಾರೆ ನೋಡಿ. ಭವ್ಯಶ್ರೀಯ ಫೇಸ್‌ಬುಕ್ ಎಕೌಂಟನ್ನು ಯಾರೋ ಹ್ಯಾಕ್
ಮಾಡಿದರು. ಕೆಲವರು ಆಕೆಯ ಚಿತ್ರಗಳನ್ನು ಕದ್ದು ಅದರಲ್ಲಿ ಹೆಸರನ್ನಳಿಸಿ ತಮ್ಮ ಗೋಡೆ ಮೇಲೆ ತಮ್ಮದೇ ಚಿತ್ರಗಳೆಂಬಂತೆ
ಅಂಟಿಸತೊಡಗಿದರು. ಅವರ ವಿರುದ್ಧ ಸೆಣಸಾಡುವ ಸಾಮರ್ಥ್ಯವಾಗಲೀ ಧೈರ್ಯವಾಗಲೀ ಇಲ್ಲದ ಭವ್ಯಶ್ರೀ ಫೇಸ್‌ಬುಕ್
ಎಕೌಂಟ್ ಡಿಲೀಟ್ ಮಾಡಿಬಿಟ್ಟಳು. ಇನ್ನೊಂದೆಂದರೆ ಅವಳ ಎಷ್ಟೋ ಚಿತ್ರಗಳು, ಹಾಳಾಗಿವೆ.

ಇಡಲು ಸರಿಯಾದ ವ್ಯವಸ್ಥೆ ಮನೆಯಲ್ಲಿ ಇರದ ಕಾರಣ. ಕರಾವಳಿಯಲ್ಲಿ ಮಳೆ, ಅಧಿಕ ತೇವಾಂಶ, ಒರಲೆ ಬರುವುದು ಇತ್ಯಾದಿ ಸಮಸ್ಯೆಗಳು. ‘ಪುಷ್ಪಾ ಈಗಲೂ ಶ್ರಮಜೀವಿಯಾಗಿ, ಮಗಳಿಗೆ ಒಳ್ಳೆಯದಾಗಲೆಂದು ಕಷ್ಟಪಡುತ್ತಲೇ ಇದ್ದಾಳೆ. ಉಡಲು ಸೀರೆಗಳಿಗೂ ಕಷ್ಟ. ಆದರೂ ಸ್ವಾಭಿಮಾನಿ. ನಾನು ಒಂದೆರಡು ಸೀರೆ ಕೊಟ್ಟಿದ್ದನ್ನು ತೆಗೆದುಕೊಳ್ಳಲಿಕ್ಕೆ ತಯಾರಿರಲಿಲ್ಲ. ಒತ್ತಾಯಿಸಿದ ಮೇಲೆ ತಗೊಂಡರೂ ಉಡದೇ ಹಾಗೆಯೇ ಇಟ್ಟುಕೊಂಡಿದ್ದಾಳೆ. ಈಗ ಇಲ್ಲಿನ ಏಕನಾಥೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಸಂಜೆ ಕ್ಲೀನಿಂಗ್ ಕೆಲಸ ಮಾಡಿಕೊಂಡು ಇರುವುದರಿಂದ ಪರಿಸ್ಥಿತಿ ಸುಧಾರಿಸಿದೆ. ಮಗಳು ಇಷ್ಟು ಒಳ್ಳೆಯ ಕಲಾಕಾರಳು ಎಂಬ ವಿಷಯವನ್ನೂ ನನ್ನ ಬಳಿ ಪುಷ್ಪಾ ಹಂಚಿಕೊಂಡದ್ದಿಲ್ಲ. ದೇವಸ್ಥಾನದ ಅರ್ಚಕರಾಗಿದ್ದ ಕಿರಣ್ ಎನ್ನುವವರ ಲೀಫ್ ಆರ್ಟ್ ಭವ್ಯಶ್ರೀ ಮಾಡಿದ್ದನ್ನು ನೋಡಿದಾಗಲೇ ನನಗೆ ಅವಳ ಪ್ರತಿಭೆಯ ಬಗ್ಗೆ ಗೊತ್ತಾದದ್ದು.

ಮನೆಗೆ ಕರೆಯಿಸಿ ಮಾತನಾಡಿಸಿದ್ದು’ ಎನ್ನುತ್ತಾರೆ ವೀಣಾ. ಹೀಗೆ ಭವ್ಯಶ್ರೀಯ ಚಿತ್ರಕಲಾ ಪರಿಣತಿಯ ಬಗ್ಗೆ ತಿಳಿದುಕೊಂಡಾಗ, ಅದರಲ್ಲೂ ವೀಣಾಅವರ ವಾಟ್ಸ್ಯಾಪ್ ಫಾರ್ವರ್ಡಿಂದಾಗಿ ಅದು ನನ್ನ ಅರಿವಿಗೆ ಬಂದಿತೆನ್ನುವುದನ್ನು ಮನಗಂಡಾಗ, ನನಗೆ ಮಂಕುತಿಮ್ಮನ ಕಗ್ಗದ ಎರಡು ಸಾಲುಗಳು ನೆನಪಾಗುತ್ತವೆ: ‘ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ!

ಆವ ಧೂಳಿನೊಳಾವ ಚೈತನ್ಯಕಣವೊ!…’ ಯಾವ ವಾಟ್ಸ್ಯಾಪ್ ಫಾರ್ವರ್ಡಿನಲಾವ ಪ್ರತಿಭೆಯ ಅನಾವರಣವೋ!