Monday, 16th September 2024

ಮುಂಬರುವ ಚುನಾವಣೆ ಕ್ಲಬ್‌ ಹೌಸ್‌ನಲ್ಲಿ ನಡೆದರೆ ಆಶ್ಚರ್ಯಪಡಬೇಡಿ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಇತ್ತೀಚಿನ ದಿನಗಳಲ್ಲಿ ಕರೋನಾಗಿಂತ ವೇಗವಾಗಿ ಹಬ್ಬುತ್ತಿರುವ ಸೋಂಕು ಅಂದರೆ, ಕ್ಲಬ್ ಹೌಸ್. ಕರೋನಾವನ್ನು ಮಾಸ್ಕ್ ಧರಿಸುವುದರಿಂದ, ಸಾಮಾಜಿಕ
ಅಂತರ ಕಾಪಾಡುವುದರಿಂದ ಮತ್ತು ಲಸಿಕೆ ಹಾಕಿಸಿಕೊಳ್ಳುವುದರಿಂದ ನಿಯಂತ್ರಿಸಬಹುದು. ಆದರೆ ಕ್ಲಬ್ ಹೌಸ್ ಸೋಂಕನ್ನು ನಿಯಂತ್ರಿಸುವುದು ಹೇಗೆ? ಕಾರಣ ಇದು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ಕ್ಲಬ್ ಹೌಸ್ ಸೋಂಕು ಎಷ್ಟು ದಿನ ಇರುವುದೋ ಗೊತ್ತಿಲ್ಲ. ಆರಂಭದಲ್ಲಿ ಎಲ್ಲ ಸೋಷಿಯಲ್ ಮೀಡಿಯಾ ಆಪ್ (App)ಗಳೂ ವ್ಯಸನ, ಗೀಳು, ಚಟವಾಗಿ ಕಾಡುವುದುಂಟು.

ಆದರೆ ಕ್ಲಬ್ ಹೌಸ್ ಇವೆಲ್ಲಕ್ಕಿಂತ ತುಸು ಭಿನ್ನ. ನಾವು ಸೋಷಿಯಲ್ ಮೀಡಿಯಾದ ಯಾವ ಆಪ್‌ನಲ್ಲಿ ಎಷ್ಟು ಹೊತ್ತು (stickiness) ಇರುತ್ತೇವೆ ಎಂಬುದರ ಮೇಲೆ, ವ್ಯಸನದ ತೀವ್ರತೆಯನ್ನು ಅಂದಾಜಿಸಬಹುದು. ಆ ನಿಟ್ಟಿನಲ್ಲಿ ಹೇಳುವುದಾದರೆ, ಕ್ಲಬ್ ಹೌಸ್ ನಮ್ಮನ್ನು ಆರಂಭದಲ್ಲಿಯೇ ಮೂರು – ನಾಲ್ಕು ಗಂಟೆಗಳ ಕಾಲ, ಕುಳ್ಳಿರಿಸುತ್ತಿದೆ. ರಾತ್ರಿ ಹತ್ತರ ಮೇಲೆ ನಡೆಯುವ ಸ್ವಾರಸ್ಯಕರ ಚರ್ಚೆಗಳನ್ನು ತಪ್ಪಿಸಿಕೊಳ್ಳಲು ಮನಸ್ಸಾಗುವುದಿಲ್ಲ. ಗೊತ್ತಿಲ್ಲ, ಮುಂದೆ ಇದೇ ಕ್ಲಬ್ ಹೌಸ್ ನಮ್ಮಲ್ಲಿ ಮಗಚಿಟ್ಟು ತರಿಸಲೂಬಹುದು. ಆದರೆ ಪ್ರತಿ ವ್ಯಕ್ತಿ, ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚು ಹೊತ್ತು ಕ್ಲಬ್ ಹೌಸ್‌ನಲ್ಲಿ ಕಾಲ ಕಳೆಯುತ್ತಿರುವುದಂತೂ ಸುಳ್ಳಲ್ಲ.

ಇತರ ಸೋಷಿಯಲ್ ಮೀಡಿಯಾಗಳಲ್ಲಿ ವಿಹರಿಸುತ್ತಲೇ, ಕ್ಲಬ್ ಹೌಸ್‌ನಲ್ಲಿ ನಡೆಯುವ ಸಂವಾದಗಳನ್ನೂ ಕೇಳಲು ಅನುಕೂಲ ಇರುವುದು, ಇದು ಉಳಿದೆಲ್ಲವು ಗಳಿಗಿಂತ ಒಂದು ಕೈ ಮೇಲು ಎನ್ನುವಂತಾಗಿದೆ. ಅಂದರೆ ಫೇಸ್ ಬುಕ್‌ನಲ್ಲಿ ಬರೆಯುತ್ತಾ ಅಥವಾ ಟ್ವೀಟ್ ಮಾಡುತ್ತಾ, ಕ್ಲಬ್ ಹೌಸ್ ಕಲಾಪಗಳನ್ನು ಸಹ ಕೇಳಿಸಿಕೊಳ್ಳಲು ಸಾಧ್ಯವಾಗುವುದರಿಂದ, ಇದು ನೀಡುವ ಅನುಭವವೇ ಭಿನ್ನ. ಕ್ಲಬ್ ಹೌಸ್ ಗೀಳು ತಗಲುವುದಕ್ಕಿಂತ ಮೊದಲು, ನಾವು ದಿನದಲ್ಲಿ ಹೆಚ್ಚಿನ ಸಮಯವನ್ನು ವಾಟ್ಸಾಪ್ ನಲ್ಲಿ ಕಳೆಯುತ್ತಿದ್ದೆವು.

ಈಗ ಅದೇ ಸಮಯದಲ್ಲಿ, ಕ್ಲಬ್ ಹೌಸ್ ಸಂಭಾಷಣೆ ಅಥವಾ ಕಲಾಪಗಳನ್ನೂ ಕೇಳಲು ಸಾಧ್ಯವಿರುವುದರಿಂದ, ಅವೆರಡೂ (ವಾಟ್ಸಾಪ್ ಮತ್ತು ಕ್ಲಬ್ ಹೌಸ್‌ನಲ್ಲಿ ನಿರತರಾಗುವುದು) ಏಕಕಾಲದಲ್ಲಿ ನಡೆಯಲಿದೆ. ಅಂದರೆ ಧ್ವನಿಯಿಲ್ಲದ, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ, ಕ್ಲಬ್ ಹೌಸ್ ಜತೆಯ ಬೇರೆ ಕೆಲಸಗಳನ್ನೂ ಮಾಡುತ್ತಿರಬಹುದು. ಕಾರಿನಲ್ಲಿ ಹೋಗುವಾಗ ಲಂತೂ ಕ್ಲಬ್ ಹೌಸ್ ಒಳ್ಳೆಯ ಸಂಗಾತಿ. ಕ್ಲಬ್ ಹೌಸ್‌ನ ಮಜಕೂರು ಇರುವುದು ಅದು ಜನತಾಂತ್ರಿಕ ವೇದಿಕೆ ಎಂಬ ಕಾರಣಕ್ಕೆ. ಇಲ್ಲಿ ಉತ್ತಮ ಮಾತು ಮತ್ತು ಸ್ಪಷ್ಟ ವಿಚಾರ ಇರುವ ಅವೆಷ್ಟೋ ಮಂದಿ ಹೇಳುವ ವಿಚಾರಗಳನ್ನು ಕೇಳಿದರೆ, ನಮ್ಮ ಗ್ರಹಿಕೆಯ ವ್ಯಾಪ್ತಿಯ ಬಗ್ಗೆ ಕಳವಳವಾಗುವುದುಂಟು.

ಅದ್ಭುತ ಪ್ರತಿಭೆಗಳ ಮಾತುಗಳನ್ನು ಕೇಳಲು ನಮ್ಮ ಮುಂದೆಯೇ ಅವತರಿಸಿದ ಕಲಾಕ್ಷೇತ್ರ ಸಭಾಂಗಣವಿದು. ನಾವು ಈ ತನಕ ಕೇಳಿರದ, ಪ್ರತಿಭಾವಂತರೆಲ್ಲ
ಅಚ್ಚರಿ ಮೂಡಿಸುವಂತೆ ಮಾತಾಡುವುದನ್ನು ಕೇಳುವುದೇ ಸುಗ್ಗಿ. ಇದು ಒಂದು ರೀತಿಯಲ್ಲಿ ಅತ್ಯುತ್ತಮ ಯೋಚನೆ, ಆಲೋಚನೆ ಮತ್ತು ಚಿಂತನೆಗಳನ್ನು ಹೊಂದಿರುವವರ ಕೂಡುತಾಣ. ಒಂದು ವೇದಿಕೆಯಲ್ಲಿ ಜಗತ್ತಿನ ಯಾವ ಯಾವುದೋ ಭಾಗದಲ್ಲಿರುವ, ದೇಶದಲ್ಲಿರುವವರನ್ನು ಕೂಡಿ ಹಾಕಿ, ಅವರ ವಿಚಾರಗಳಿಗೆ ಕಿವಿಯಾಗುವುದೇ ಒಂದು ಅದ್ಭುತ ಚಮತ್ಕಾರ.

ಅದ್ಯಾಕೆ ಈ ಕ್ಲಬ್ ಹೌಸ್‌ನ್ನು ಇದಕ್ಕಿಂತ ಮುಂಚೆ ಕಂಡು ಹಿಡಿಯಲಿಲ್ಲ ಎಂದು ನನಗೆ ಕಳೆದ ಒಂದು ತಿಂಗಳಿನಿಂದ ಬಲವಾಗಿ ಅನಿಸಲಾರಂಭಿಸಿದೆ. ಕಾರಣ ಈ ಜನ್ಮದಲ್ಲಿ ಭೇಟಿಯಾಗಲು ಸಾಧ್ಯವಿಲ್ಲದವರೆಲ್ಲ ಇಲ್ಲಿ ಸಿಗುತ್ತಿದ್ದಾರೆ. ಅವರ ಉತ್ತಮ ವಿಚಾರಗಳನ್ನು ಕೇಳಲು ಸಾಧ್ಯವಾಗುತ್ತಿದೆ. ಕೆಲವು ವೇದಿಕೆಗಳು ನಡೆಸಿ ಕೊಡುವ ಕಾರ್ಯಕ್ರಮಗಳು ಟಾಪ್ ಕ್ಲಾಸ್! ಜಗತ್ತಿನ ಮೇಧಾವಿಗಳು, ವಿಜ್ಞಾನಿಗಳು, ಪರಿಣತರು, ಶ್ರೀಮಂತರು, ಅಭಿಪ್ರಾಯ ರೂಪಿಸುವವರು, ನೀತಿ
-ನಿರೂಪಕರು, ಕಾನೂನು ಪಂಡಿತರು ಮಾತಿಗೆ ಸಿಗುತ್ತಿದ್ದಾರೆ. ಕ್ಲಬ್ ಹೌಸಿಗೆ ಕಿವಿ ಕೊಡಲಾರಂಭಿಸಿದಂದಿನಿಂದ ನನ್ನ ಮುಂದೆ ಹೊಸ ಅನುಭವ ಲೋಕ ತೆರೆದುಕೊಂಡಂತೆ ಭಾಸವಾಗುತ್ತಿದೆ.

ಆದರೆ ನೀವು ಯಾರ ಮಾತಿಗೆ, ಯಾವ ವೇದಿಕೆಯಲ್ಲಿ ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂಬುದು ಮುಖ್ಯ. ಕೆಲಸಕ್ಕೆ ಬಾರದವರೂ ತಮ್ಮ ರಾಗ, ದ್ವೇಷಗಳನ್ನು ಕಕ್ಕಿಕೊಳ್ಳಲೂ ಈ ವೇದಿಕೆ ಬಳಕೆಯಾಗುತ್ತಿದೆ. ಕೆಲವರು ತಮ್ಮ ವಾದ, ಸಿದ್ಧಾಂತವನ್ನು ಒಪ್ಪದವರನ್ನು ಟೀಕಿಸಲು, ಅವಮಾನಿಸಲು ಈ
ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದು ದುರ್ದೈವ. ಕ್ಲಬ್ ಹೌಸ್‌ನ್ನು ಆರಂಭಿಸುವಾಗ, ಅದರ ಸಂಸ್ಥಾಪಕರಾದ ಪಾಲ್ ಡೆವಿಸನ್ ಮತ್ತು ರೋಹನ್ ಸೇಥ್ ಅವರ ಮುಂದೆ ಹಲವು ಗೊಂದಲಗಳಿದ್ದವು. ಈ ವೇದಿಕೆ ಯಾವುದಕ್ಕೆ ಬಳಕೆಯಾಗಬೇಕು ಎಂದು ಅವರಿಬ್ಬರೂ ಸುಮಾರು ಆರು ತಿಂಗಳುಗಳ ಕಾಲ, ತಮ್ಮಲ್ಲಿ ವಿಚಾರ ಮಂಥನ ನಡೆಸಿದರು.

ತಮ್ಮಲ್ಲಿ ಒಂದು ಸ್ಪಷ್ಟತೆ ಮೂಡಿಸಿಕೊಳ್ಳಬೇಕು ಎಂದು ಅವರು ಹಲವು ತಜ್ಞರ ಜತೆ ವಿಚಾರ – ವಿನಿಮಯ ಮಾಡಿದರು. ಆಗ ಅವರ ಮುಂದೆ ತೆರೆದುಕೊಂಡಿದ್ದು ಅದ್ಭುತ ಅವಕಾಶಗಳುಳ್ಳ, ವಿಶ್ವವನ್ನೇ ವ್ಯಾಪಿಸಿಕೊಳ್ಳಲು ಅನುವಾಗುವಂಥ ಒಂದು ಬೃಹದ್ಭವ್ಯ ವೇದಿಕೆ. ಈ ವೇದಿಕೆಯನ್ನು ಯಾರು, ಯಾವ ರೀತಿ
ಉಪಯೋಗಿಸಿಕೊಳ್ಳಬೇಕು ಮತ್ತು ಬಳಸಿಕೊಳ್ಳಬಹುದು ಎಂಬ ಪ್ರಶ್ನೆ ಎದುರಾದಾಗ ಅವರಲ್ಲಿ ಗೊಂದಲ ಆರಂಭವಾದವು. ಕಾರಣ ಈ ವೇದಿಕೆಯನ್ನು ಯಾವ ರೀತಿಯದರೂ ಬಳಸಿಕೊಳ್ಳಲು ಆಗುವ ಸಾಧ್ಯತೆ ಹಾಗೂ ಯಾವ ಹೊಸ ತಂತ್ರಜ್ಞಾನ, ಆವಿಷ್ಕಾರಗಳ ಬೆನ್ನಲ್ಲಿಯೇ ಬರುವ ಪರ – ವಿರೋಧಗಳು ಮತ್ತು ಒಳಿತು – ಕೆಡಕುಗಳು. ಬರೀ ಒಳಿತನ್ನೇ ಬಯಸಿದ್ದರೆ, ಇಂಟರ್ನೆಟ್ ಜಾರಿಗೇ ಬರುತ್ತಿರಲಿಲ್ಲ.

ಅದರಲ್ಲಿರುವ ಅಶ್ಲೀಲ (Porno)ಗಳನ್ನು ಸಹಿಸಿಕೊಂಡೇ, ಒಪ್ಪಿಕೊಂಡೇ, ಅದು ತರುವ ಒಳ್ಳೆಯ ಸಂಗತಿಗಳನ್ನೂ ಹೀರಿಕೊಳ್ಳಬೇಕಾಗಿದೆ. ಇಂಟರ್ನೆಟ್ ಜನ್ಯ ಎಲ್ಲಾ ಹೊಸ ಆವಿಷ್ಕಾರ ಮತ್ತು ಸಾಧ್ಯತೆಗಳಿಗೂ ಇದೇ ಅಡಿಪಾಯ. ಹೀಗಾಗಿ ನಾವು ಯಾವುದೇ ಹೊಸ ತಂತ್ರಜ್ಞಾನವನ್ನು ವೈಯಕ್ತಿಕವಾಗಿ, ಸಾಮಾಜಿಕವಾಗಿ ಹಾಗೂ ಸಮಷ್ಟಿ ಪ್ರe ಮತ್ತು ಹಿತದಿಂದ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಚಿಂತನೆಯ ಮೂಸೆಯ ಅರಳಿದ್ದು ಕ್ಲಬ್ ಹೌಸ್. ಮುಖ್ಯ ವಾಗಿ, ಇದು ವಿಚಾರ ವಿನಮಯಗಳ ತ್ರಿವೇಣಿ ಸಂಗಮ, ಕೂಡಲ ಸಂಗಮ. ಇಲ್ಲಿ ವಿಚಾರಗಳು, ಆಲೋಚನೆಗಳು ಸೇರಬೇಕು, ಹೀರಬೇಕು, ಕೂಡಬೇಕು, ಕಳೆಯಬೇಕು, ಅಳೆಯಬೇಕು, ಬೆಳೆಯಬೇಕು, ನಂತರ ಇವೆಲ್ಲವನ್ನೂ ಮೀರುತ್ತಾ, ಮೀರುತ್ತಾ ಇನ್ನಷ್ಟು ಬೆಳೆಯಬೇಕು, ಅನಂತರ ಹೊಸ ಹೊಸ ಪ್ರಶ್ನೆಗಳೊಂದಿಗೆ ಹುಡುಕಾಟಕ್ಕೆ ಅಣಿಯಾಗಬೇಕು.

ಇಂಗ್ಲಿಷಿನಲ್ಲಿ ಒಂದು ಮಾತಿದೆ. ಅದೇನೆಂದರೆ, Dialogue should continue. ಕ್ಲಬ್ ಹೌಸಿನ ಆಶಯವೂ ಅದೇ. ಮಾತು ನಿಲ್ಲಬಾರದು. ಅದು ಹೊಸ ಶೋಧಕ್ಕೆ ಇಂಬು ನೀಡಬೇಕು. ಇಂಥ ಒಂದು ಉತ್ತಮ ವೇದಿಕೆಯನ್ನು ಜ್ಞಾನಾರ್ಜನೆಗೆ, ಬೌದ್ಧಿಕ ವಿಕಾಸಕ್ಕೆ, ಸದಭಿರುಚಿಯ ಮನರಂಜನೆಗೆ, ವಿಚಾರ ವಿನಿಮಯಕ್ಕೆ, ಸಮಾಜ ಹಿತಕ್ಕೆ ಬಳಸಿಕೊಳ್ಳಬೇಕಾದ ಜವಾಬ್ದಾರಿ ಅದನ್ನು ಬಳಸುವ ಎಲ್ಲರ ಮೇಲಿದೆ. ಕ್ಲಬ್ ಹೌಸ್ ನೀಡಿರುವ ಸಾಧ್ಯತೆಗಳನ್ನು ನೋಡಿದರೆ, ನಮ್ಮ ಜನಪ್ರತಿನಿಧಿಗಳು ತಮಗೆ ಮತ ನೀಡಿದ ಮತದಾರರ ಜತೆ ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಕ್ಲಬ್ ಹೌಸ್ ಸಂವಾದ – ಚರ್ಚೆ ಮೂಲಕ ನಿರಂತರ ಸಂಪರ್ಕದಲ್ಲಿರಲು ಸಾಧ್ಯವಾಗಬಹುದು.

ತಾವು ಇರುವೆಡೆಯಿಂದಲೇ, ಕ್ಲಬ್ ಹೌಸ್ ಪತ್ರಿಕಾಗೋಷ್ಠಿ ಮಾಡಬಹುದು. ನಮ್ಮ ನಮ್ಮ ಮನೆಗಳಲ್ಲಿ ಕುಳಿತು ಪುಸ್ತಕ ಬಿಡುಗಡೆ ಕಾರ್ಯಕ್ರಮ, ವಿಚಾರ ಗೋಷ್ಠಿಗಳನ್ನು ಮಾಡಬಹುದು. ಇದಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಕನ್ನಡಿಗರನ್ನು ಆಹ್ವಾನಿಸಬಹುದು. ಭದ್ರತೆ ಮತ್ತು ಗೌಪ್ಯತೆ ವಿಷಯದ ಬಗ್ಗೆ ಮೂಡಿರುವ ಸಂದೇಹಗಳಿಗೆ ಸೂಕ್ತ ಪರಿಹಾರ ಸಿಕ್ಕರೆ, ಕ್ಲಬ್ ಹೌಸ್‌ನಲ್ಲಿ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳ ಜತೆಗೆ, ಅನಿವಾರ್ಯ ಅಥವಾ ತುರ್ತು ಸಂದರ್ಭದಲ್ಲಿ, ಕ್ಲಬ್ ಹೌಸ್ ಮೀಟಿಂಗುಗಳನ್ನು ನಡೆಸಬಹುದು. ಗೃಹ ಸಚಿವರು ಪೊಲೀಸ್ ಅಧಿಕಾರಿಗಳಿಗೆ ತಮ್ಮ ಮನೆಯಲ್ಲಿಯೇ ಕುಳಿತು ಅಧಿಕಾರಿ ಗಳಿಗೆ ಸೂಚನೆ ನೀಡಬಹುದು.

ಸಂಪಾದಕರು ನಿಂತ, ಓಡಾಡುವ ವರದಿಗಾರರ ಜತೆ ಮೀಟಿಂಗ್ ಮಾಡಬಹುದು. ಕ್ಲಬ್ ಹೌಸ್ ವೈಶಿಷ್ಟ್ಯಗಳನ್ನು ನೋಡಿದರೆ, ಪ್ರಾಯಶಃ ಮುಂಬರುವ ವಿಧಾನ ಸಭಾ ಚುನಾವಣೆಯ ಪ್ರಚಾರ, ಮತದಾರ ಸಂಪರ್ಕ, ಚರ್ಚೆ, ಅಭ್ಯರ್ಥಿಗಳ ಮುಖಾಮುಖಿ ಗಳೆ ಟಿವಿ ಸ್ಟುಡಿಯೋದಿಂದ ಕ್ಲಬ್ ಹೌಸಿಗೆ ವರ್ಗವಾದರೂ
ಆಶ್ಚರ್ಯ ಪಡಬೇಕಿಲ್ಲ. ಕಾರಣ ಇವೆಲ್ಲವುಗಳನ್ನು ಪರಿಣಾಮಕಾರಿಯಾಗಿ ಮಾಡಲು ಕ್ಲಬ್ ಹೌಸಿನಲ್ಲಿ ಅವಕಾಶಗಳಿವೆ.

ಕ್ಲಬ್ ಹೌಸ್ ಸಾರ್ಥಕಗೊಳಿಸಿಕೊಳ್ಳುವುದು

ಕ್ಲಬ್ ಹೌಸ್ ಒಂದು ರೀತಿಯಲ್ಲಿ ಜಾತ್ರೆ ಅಥವಾ ಸಂತೆಪೇಟೆಯಿದ್ದಂತೆ. ಅಲ್ಲಿ ಏಕಕಾಲಕ್ಕೆ ಸಾವಿರಾರು ಚಟುವಟಿಕೆ ಗಳು ನಡೆಯುತ್ತಿರುತ್ತವೆ. ಅಲ್ಲಿ ಎಲ್ಲಾ ರೀತಿಯ ಚರ್ಚೆ, ವಿಚಾರ ಸಂಕಿರಣ, ಹಾಡು, ಮನರಂಜನೆ, ಹರಟೆ, ಸಂವಾದ, ಪ್ರಶ್ನೋತ್ತರ, ಜಗಳ, ಅಬ್ಬರ, ಉಪನ್ಯಾಸ, ಸಂಗೀತ.. ಹೀಗೆ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಕ್ಲಬ್ ಹೌಸ್ ಮೌನಕ್ಕೆ ಜಾರುವುದೇ ಇಲ್ಲ. ಅಲ್ಲಿ ಮಾತುಗಳು ಹರಿಯು ತ್ತಲೇ ಇರುತ್ತವೆ.

ಅತಿಯಾದ ಕ್ಲಬ್ ಹೌಸ್ ಬಳಕೆ ನಮ್ಮೊಳಗೊಂದು ಕರ್ಕಶ ಕೋಣೆಯನ್ನೂ, ಗದ್ದಲದ ಗೊಂಡಾರಣ್ಯವನ್ನೂ ನಿರ್ಮಿಸಬಹುದು. ಅದಕ್ಕಿಂತ ಹೆಚ್ಚಾಗಿ ಕಾಡು ಹರಟೆಯಲ್ಲಿ ಭಾಗವಹಿಸಿದ ನಿರರ್ಥಕಭಾವ ಕಾಡಬಹುದು. ಅದರ ಬದಲು ಕ್ಲಬ್ ಹೌಸ್ ಒಳಗೆ ಪ್ರವೇಶಿಸುವ ಮುನ್ನ ನಮಗೇ ಕೆಲವು ಶಿಸ್ತು ಮತ್ತು ಶಿಷ್ಟಾಚಾರ ಗಳನ್ನು ವಿಧಿಸಿಕೊಳ್ಳುವುದು ಒಳ್ಳೆಯದು. ಕಂಡ ಕಂಡ ರೂಮಿನೊಳಗೆ ಪ್ರವೇಶಿಸಿ ಬರುವುದೆಂದರೆ, ವಿಂಡೋ ಶಾಪಿಂಗ್ ಮಾಡಿದಂತೆ. ಆರಂಭದಲ್ಲಿ ಇದು ಚೆನ್ನಾಗಿರುತ್ತದೆ. ಆದರೆ ಇದನ್ನೇ ರೂಢಿಸಿಕೊಳ್ಳಬಾರದು. ನಮ್ಮ ಆಸಕ್ತಿಯ ವಿಷಯವನ್ನು ಆಯ್ದುಕೊಂಡು, ಅದರ ಬಗ್ಗೆ ಮಾತಾಡುವ ಹತ್ತಾರು ಜನರನ್ನು ಹಿಂಬಾಲಿಸುವುದು ಒಳ್ಳೆಯ ಉಪಾಯ.

ನೀವು ಒಂದು ರೂಮಿನೊಳಗೆ ಕುಳಿತು ಮಾತುಗಳನ್ನು ಆಲಿಸುವ ಸಂದರ್ಭದಲ್ಲಿ, ಸಮಾನಾಂತರವಾಗಿ ಹತ್ತಾರು ಗೋಷ್ಠಿಗಳು ನಡೆಯುತ್ತಿರುತ್ತವೆ. ಪದೇ ಪದೆ ಒಂದು ರೂಮಿನಿಂದ ಇನ್ನೊಂದು ರೂಮಿಗೆ ಜಿಗಿಯುವುದು ಮತ್ತು ವಾಪಸು ಬರುವುದು, ಮತ್ತೆ ಹೋಗಿ ಮರಳುವುದು ಒಳ್ಳೆಯ ಅಭ್ಯಾಸವಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಒಂದೇ ರೂಮಿನಲ್ಲಿ, ಎರಡು ಗಂಟೆಗಿಂತ ಜಾಸ್ತಿ ವಿಸ್ತರಿಸದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಜಾಣತನ. ಯಾವುದೇ ರೂಮಿನೊಳಗೆ ಪ್ರವೇಶಿಸು ವಾಗಲೂ ಟಿಪ್ಪಣಿ ಮಾಡಿಕೊಳ್ಳಲು ಒಂದು ನೋಟ್ ಬುಕ್ ಮತ್ತು ಪೆನ್ ಇಟ್ಟುಕೊಳ್ಳುವುದು ಒಳ್ಳೆಯದು. ಕಾರಣ, ಉತ್ತಮ ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳದಿದ್ದರೆ, ಕೇಳಿದ್ದೇ ಹಾರಿ ಹೋಗುವ ಸಾಧ್ಯತೆಯಿರುತ್ತದೆ. ಅದರ ಬದಲು ಪ್ರತಿ ಕಾರ್ಯಕ್ರಮದ ನಂತರ ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿ ಕೊಂಡರೆ, ಅಷ್ಟು ಹೊತ್ತು ಕೇಳಿದ ಸಾರ ಸದಾ ನಮ್ಮಲ್ಲಿಯೇ ಇರುತ್ತದೆ. ಇಲ್ಲದಿದ್ದರೆ ನಿದ್ದೆಗೆಟ್ಟು ಹರಿಕಥೆ ಕೇಳಿದಂತೆ.

ಅದಕ್ಕಾಗಿಯೇ ಒಂದು ನೋಟ್ ಬುಕ್ ಮೀಸಲಿಟ್ಟರೆ, ಅದು ಭರ್ತಿಯಾದಾಗ, ಒಮ್ಮೆ ಪುಟ ತಿರುವಿದರೂ, ಒಂದಷ್ಟು ಪಡೆದ, ಗ್ರಹಿಸಿದ, ಗಿಟ್ಟಿಸಿದ ಧನ್ಯತೆ ಮೂಡಬಹುದು. ಕ್ಲಬ್ ಹೌಸಿನಲ್ಲಿ ಇದ್ದಷ್ಟು ಹೊತ್ತು ನೀವು ಒಂದು ರೀತಿಯಲ್ಲಿ ಆನ್ ಲೈನ್ ಪಾಠ ಕೇಳುವ ವಿದ್ಯಾರ್ಥಿ ಎಂಬ ಮನಸ್ಥಿತಿ ರೂಢಿಸಿಕೊಂಡರೆ
ಕ್ಲಬ್ ಹೌಸ್ ನಮಗೆ ಕಲಿಕೆಯ ಸಾಧನವಾಗಬಹುದು. ಅದಕ್ಕಾಗಿ ನಾವು ಯಾರನ್ನು ಕೇಳಬೇಕು, ನಮ್ಮ ಬೌದ್ಧಿಕ ಮಟ್ಟವನ್ನು ಯಾರು ಎತ್ತರಿಸಬಲ್ಲರು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರತಿದಿನ ಎರಡು – ಮೂರು ಗಂಟೆ ಕ್ಲಬ್ ಹೌಸಿನಲ್ಲಿ ಸೋರಿ ಹೋಗಬಹುದು.

ಖಂಡಿತವಾಗಿಯೂ ಇದನ್ನು ಕಾಲಕ್ಷೇಪಕ್ಕೆ ಬಳಸಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ನೀವು ಗಣ್ಯರನ್ನು ಅನುಸರಿಸುವುದನ್ನು ರೂಢಿಸಿಕೊಂಡರೆ, ಕ್ಲಬ್ ಹೌಸಿನಲ್ಲಿ ಕಳೆಯುವ ಪ್ರತಿ ಕ್ಷಣವೂ ಸಾರ್ಥಕವಾದೀತು.

ನಾವು ನೋಡಬೇಕಾದ ಊರುಗಳು

ನನ್ನ ಸ್ನೇಹಿತರೊಬ್ಬರು ತಮ್ಮ ಪತ್ನಿಯೊಂದಿಗೆ ಯುರೋಪ್ ಪ್ರವಾಸಕ್ಕೆ ಹೋಗಿದ್ದರು. ಇಪ್ಪತ್ನಾಲ್ಕು ದಿನಗಳಲ್ಲಿ ಹದಿನೇಳು ದೇಶಗಳಿಗೆ ಹೋಗಿದ್ದರು. ಅವರು ಹೋದ ದೇಶಗಳ ಹೆಸರುಗಳನ್ನೆಲ್ಲ ಹೇಳಿದರು. ಆ ಎಲ್ಲಾ ದೇಶಗಳನ್ನು ನಾನೂ ನೋಡಿದ್ದೆ. ನೀವು ಬೆಲ್ಜಿಯಂಗೆ ಹೋಗಿದ್ದೆವು ಅಂತ ಹೇಳಿದಿರಿ, ಅದರ ರಾಜಧಾನಿ ಬ್ರುಸೆಲ್ಸ ಹತ್ತಿರವಿರುವ ಅಂಟ್ವಾರ್ಪ್‌ಗೆ ಹೋಗಿದ್ರಾ?’ ಎಂದು ಕೇಳಿದೆ. ಇಲ್ಲ, ಇಲ್ಲ, ಕೇವಲ ಬ್ರುಸೆಲ್ಸಗೆ ಮಾತ್ರ ಹೋಗಿದ್ದೆವು ಅಂದರು. ಹೌದಾ? ನೀವು ಬ್ರೂಶ್ (Bruges)ಗೆ ಹೋಗಿದ್ರಾ? ಅಂತ ಕೇಳಿದೆ. ಅದಕ್ಕೂ ಇಲ್ಲ, ಇಲ್ಲ…ಅಲ್ಲಿಗೆ ಹೋಗಬೇಕೆಂದಿದ್ದೆವು..ಆದರೆ ಆಗಲಿಲ್ಲ’ ಎಂದರು.

ಅಯ್ಯೋ ನೀವು ಬ್ರುಸೆಲ್ಸಗೆ ಹೋಗಿ ಬ್ರೂಶ್‌ಗೆ ಹೋಗದಿದ್ದರೆ ಹೇಗೆ?’ ಎಂದು ಕೇಳಿದೆ. ಅದ್ಸರಿ, ಫ್ರಾನ್ಸ್‌ಗೆ ಹೋದವರು ಅಲ್ಲಿನ ಬರ್ಗಂಡಿ ಪ್ರದೇಶದಲ್ಲಿರುವ ಮಾಂಟ್ಸೆಂಟ್ ಮಿಚೆಲ್ ಎಂಬ ಊರಿಗೇನಾದರೂ ಹೋಗಿದ್ರಾ ? ಎಂದು ಕೇಳಿದೆ. – ನಲ್ಲಿ ಪ್ಯಾರಿಸ್ ಬಿಟ್ಟರೆ ಮತ್ತೆಲ್ಲೂ ಹೋಗಿಲ್ಲ’ ಎಂದರು. ಜರ್ಮನಿಗೆ ಹೋದ ವರು ಬರ್ಲಿನ್, ಹ್ಯಾಂಬರ್ಗ್ ಹಾಗೂ ಮ್ಯುನಿಕ್ ಗೆ ಹೋಗಿರಬೇಕು ಆಲ್ವಾ ?’ ಅಂತ ಕೇಳಿದೆ. ಇಲ್ಲ ಸರ್, ನಾವು ಜರ್ಮನಿಯಲ್ಲಿ ಫ್ರಾಂಕ್ ಫರ್ಟ್ ಮಾತ್ರ ನೋಡಿದ್ದು’ ಎಂದರು.

ಅ ಸಾರ್, ನೀವು ಯಾವ ಊರನ್ನು ನೋಡಬೇಕಿತ್ತೋ, ಅವನ್ನೇ ನೋಡಿಲ್ಲವಲ್ಲ. ಬರ್ಲಿನ್, ಹ್ಯಾಂಬರ್ಗ್, ಮ್ಯುನಿಕ್ ನೋಡದೇ, ಜರ್ಮನಿಯನ್ನು ನೋಡಲು ಹೇಗೆ ಸಾಧ್ಯ? ಎಂದು ಕೇಳಿದೆ. ಅದಕ್ಕೆ ಅವರ ಬಳಿ ಉತ್ತರ ಇರಲಿಲ್ಲ. ಯುರೋಪಿನಲ್ಲಿರುವ ಪ್ರತಿ ಊರು ಸಹ ಒಂದೊಂದು ಕಾರಣಕ್ಕೆ ವೈಶಿಷ್ಟ್ಯವೇ. ಎಲ್ಲಾ ಊರುಗಳಿಗೆ ಹೋಗಲಾಗುವುದಿಲ್ಲ, ನಿಜ. ಆದರೆ ಕೆಲವು ಊರುಗಳಿಗೆ ಹೋಗಲೇಬೇಕು. ಊರು ನೋಡುವ ತರಾತುರಿಯಲ್ಲಿ ಬೇಕಾಬಿಟ್ಟಿ ನೋಡುವ ಬದಲು, ಒಂದೇ ದೇಶದಲ್ಲಿರುವ ಪ್ರಮುಖ ಊರುಗಳನ್ನು ನೋಡುವುದು ಹೆಚ್ಚು ಕ್ರಮಬದ್ಧ.

ಸಾಮಾನ್ಯವಾಗಿ ಫ್ರಾನ್ಸ್ನಲ್ಲಿ ಎಲ್ಲರೂ, ಪ್ಯಾರಿಸ್‌ಗೆ ಹೋಗಿ ಬರುತ್ತಾರೆ. ಆದರೆ ಅಲ್ಲಿ ನೋಡಲೇಬೇಕಾದ ಹಲವಾರು ಊರುಗಳಿವೆ. ಮಾರ್ಸೆಇ, ಲಿಯೋನ್, ಸ್ಟ್ರಾಸ್ಬರ್ಗ್, ಲೋಯ್ರ್‌ವ್ಯಾಲಿ, ಬೋರ್ಡೆಕ್ಸ್, ಲ್ಯೂಬೆರೊನ್, ಡೊರಡೊನ್, ಫ್ರೆಂಚ್ ರಿವೀರಾ, ರೋಚಮಾರ್ದೌ, ಸೈ ಎಮಿಲಿಓನ್, ಫ್ರೆಂಚ್ ಆಲ್ಪ್ಸ್, ನೀಮ್ಸ್, ಲಿ ಮುಂತಾದ ನಗರಗಳನ್ನು ನೋಡಲೇಬೇಕು.

ಪ್ಯಾರಿಸ್ ಬೇರೆ ಕಾರಣಕ್ಕೆ ಈ ಊರುಗಳು ಪ್ರಸಿದ್ಧ. ಇವುಗಳನ್ನು ನೋಡದೇ – ನೋಡಿ ಬಂದೆ ಅಂದರೆ ಅದಕ್ಕೆ ಅರ್ಥವೇ ಇಲ್ಲ. ಹತ್ತಾರು ದೇಶಗಳನ್ನು ನೋಡುವ
ಬದಲು ಒಂದೇ ದೇಶವನ್ನು ಇಡಿಯಾಗಿ ನೋಡುವುದು ವಾಸಿ. ಬಫೆ ಆಹಾರದಲ್ಲಿ ನೂರಾರು ಭಕ್ಷ – ಭೋಜನ, ಪದಾರ್ಥಗಳನ್ನು ಇಟ್ಟಿರುತ್ತಾರೆ. ಅವೆಲ್ಲವುಗಳನ್ನು ನೋಡಿದ ಮಾತ್ರಕ್ಕೆ ಸೇವಿಸಿದಂತಲ್ಲ. ಅವುಗಳನ್ನು ಸವಿದರೆ ಮಾತ್ರ ರುಚಿ ಗೊತ್ತಾಗಲು ಸಾಧ್ಯ. ಈ ಮಾತು ನಾವು ನೋಡುವ ಪ್ರತಿ ಊರಿಗೂ ಅನ್ವಯ ವಾಗುತ್ತದೆ. ದೇಶ ನೋಡುವುದಕ್ಕೂ ವಿಶೇಷ ಕಣ್ಣು, ನೋಟ ಬೇಕು. ಅಪರಿಮಿತ ಆಸಕ್ತಿ ಬೇಕು.

ಅನಿದೆ ಮಣ್ಣು ಎಂಬ ಭಾವ ಇರುವವರು ಮನೆಯ ಇರುವುದು ವಾಸಿ. ಪ್ರತಿ ನೋಟವನ್ನೂ ಕಣ್ಣರಳಿಸಿಕೊಂಡು ಕಣ್ತುಂಬಿಕೊಳ್ಳುವ ಹಪಾಹಪಿ ಇಲ್ಲದಿದ್ದರೆ ಹೊಸ ಸಂಗತಿ ಕಾಣುವುದೇ ಇಲ್ಲ. ಹೊಸ ಅನುಭವ ಆಗುವುದಿಲ್ಲ. ಯಾವುದೇ ಊರಿಗೂ ಹೋದರೂ, ಮಗುವಿನಂಥ ಬೆರಗುಗಣ್ಣು ಇರದಿದ್ದರೆ ಎಲ್ಲವೂ ಒಂದೇ ರೀತಿ ಕಂಡೀತು.

Leave a Reply

Your email address will not be published. Required fields are marked *