Friday, 20th September 2024

ಈ ಅನಿವಾಸಿ ಮಕ್ಕಳೇ ನಿಜವಾದ ‘ಕನ್ನಡ-ಕಲಿ’ಗಳು!

ತಿಳಿರು ತೋರಣ
ಶ್ರೀವತ್ಸ ಜೋಶಿ

ಅನರ್ಘ್ಯಾ ಅಭಿರಾಮ್ ಎಂದು ಆ ಹುಡುಗಿಯ ಹೆಸರು. ಕೆನಡಾದ ಟೊರೊಂಟೊದವಳು, ಆರು ವರ್ಷದ ಪುಟ್ಟ ಬಾಲೆ. ಹಾಲುಹಲ್ಲು ಬಿದ್ದಿದ್ದು ಹೊಸ ಹಲ್ಲುಗಳಿನ್ನೂ ಬರಬೇಕಷ್ಟೇ. ಬಣ್ಣಬಣ್ಣದ ಡಿಸೈನ್‌ನ ಚಂದದ ಫ್ರಾಕ್ ತೊಟ್ಟುಕೊಂಡು, ಕೈಯಲ್ಲೊಂದು ದೀಪ ಹಿಡಿದುಕೊಂಡಿದ್ದಾಳೆ. ‘ವಿಷಯ ಆಧಾರಿತ ಮಾತು’ ಸ್ಪರ್ಧೆಯಲ್ಲಿ ಅವಳು ಆಯ್ದುಕೊಂಡಿರುವ ವಿಷಯ ದೀಪಾವಳಿ ಹಬ್ಬ.

ಕೈಯಲ್ಲಿದ್ದ ದೀಪವನ್ನು ಪಕ್ಕಕ್ಕಿಟ್ಟು ಅನರ್ಘ್ಯಾ ಮಾತನ್ನಾರಂಭಿಸುತ್ತಾಳೆ: ‘ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಅನರ್ಘ್ಯಾ. ನನಗೆ ಆರು ವರ್ಷ. ನಾನು ಕೆನಡಾ ದೇಶದ ಟೊರೊಂಟೊದಲ್ಲಿ ವಾಸವಾಗಿದ್ದೇನೆ. ನನ್ನ ಮೆಚ್ಚಿನ ಹಬ್ಬ ದೀಪಾವಳಿ. ಇದು ದೀಪಗಳ ಹಬ್ಬ. ನರಕಚತುರ್ದಶಿಯಿಂದ ಪ್ರಾರಂಭವಾಗಿ ಬಲಿಪಾಡ್ಯಮಿವರೆಗೆ ಆಚರಿಸುತ್ತಾರೆ. ಈ ದಿನದಂದು ಮೈಕೈಗಳಿಗೆ ಎಣ್ಣೆೆ ಹಚ್ಚಿಿ ಬಿಸಿನೀರಲ್ಲಿ ಸ್ನಾನ ಮಾಡುವ ಪದ್ಧತಿ ಇದೆ. ನಾನು ಹೊಸ ಬಟ್ಟೆೆಯನ್ನು ಧರಿಸಿ ದೇವರಿಗೂ
ಮನೆಯಲ್ಲಿರುವ ಹಿರಿಯರಿಗೂ ನಮಸ್ಕರಿಸಿ ಆಶೀರ್ವಾದ ಪಡೆಯುತ್ತೇನೆ. ದೀಪಾವಳಿಯ ದಿನಗಳಲ್ಲಿ ನಾವು ಬೆಳೆದ
ದವಸಧಾನ್ಯಗಳನ್ನು ಮನೆಗೆ ತಂದು ಅವುಗಳಿಗೆ ದೀಪ ಬೆಳಗಿ, ಧನಲಕ್ಷ್ಮಿ ಧಾನ್ಯಲಕ್ಷ್ಮಿ ಮತ್ತು ಬಲೀಂದ್ರನನ್ನು ಪೂಜಿಸುವ
ಪದ್ಧತಿ ಇದೆ. ಇವೆಲ್ಲದರ ನಡುವೆ ನನಗೆ ಬಹಳ ಇಷ್ಟವಾದದ್ದು ಮನೆಯ ಸುತ್ತಲೂ ದೀಪ ಹಚ್ಚುವುದು, ಬಗೆಬಗೆಯ
ಸಿಹಿತಿನಿಸುಗಳನ್ನು ತಿನ್ನುವುದು, ಮತ್ತು ಪಟಾಕಿ ಸಿಡಿಸುವುದು.

ಅದರಲ್ಲೂ ಸುರಸುರಬತ್ತಿ, ಹೂ ಕುಂಡ, ನೆಲಚಕ್ರ ನನಗೆ ತುಂಬಾ ಇಷ್ಟ. ದೀಪಾವಳಿ ಹಬ್ಬವನ್ನು ಭಾರತದ ಎಲ್ಲ ಕಡೆ
ವಿಜೃಂಭಣೆಯಿಂದ ಆಚರಿಸುತ್ತಾರೆ. ದೀಪ ಬೆಳಗುವುದು ಎಂದರೆ ನಮ್ಮ ಬದುಕಿನ ಕತ್ತಲೆ ದೂರವಾಗಿ, ಬೆಳಕು ಅಂದರೆ
ಶಾಂತಿ ನೆಮ್ಮದಿಯ ಜೀವನ ನೆಲೆಸಲಿ ಎಂದು ಅರ್ಥ. ಈ ವರ್ಷ ಕರೋನಾ ವೈರಸ್ ಎಂಬ ರಾಕ್ಷಸನನ್ನು ದೀಪಾವಳಿಯ ಜ್ಯೋತಿ
ನಾಶ ಮಾಡಿ ನೆಮ್ಮದಿಯ ಜೀವನ ನೀಡುವಂತಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ. ತಮಸೋ ಮಾ
ಜ್ಯೋತಿರ್ಗಮಯ. ಧನ್ಯವಾದಗಳು.’ ಅನರ್ಘ್ಯಾಳ ಪುಟ್ಟ ಭಾಷಣ ಮುಗಿಯುತ್ತದೆ. ಅವಳ ಹೆತ್ತವರು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ನಾನದನ್ನು ಇಲ್ಲಿ ವಾಂಷಿಗ್ಟನ್‌ನಲ್ಲಿ ನಮ್ಮನೆಯಲ್ಲೇ ಕುಳಿತು ನೋಡುತ್ತೇನೆ. ಸ್ಪರ್ಧೆಯ ತೀರ್ಪುಗಾರರಲ್ಲಿ ನಾನೂ ಒಬ್ಬ.

ಮೌಲ್ಯಮಾಪನ ಮಾಡಿ ಅನರ್ಘ್ಯಾಳಿಗೆ ಎಷ್ಟೋ ಅಂಕಗಳನ್ನು ನೀಡಬೇಕು. ಭಾಷೆ ಉಚ್ಚಾರ ಸ್ಪಷ್ಟತೆ ಹೇಗಿದೆ, ಮಾತು
ವಿಷಯದ ಪರಿಮಿತಿಯಲ್ಲಿದೆಯೇ, ಸಮಯದ ನಿಯೋಗ ಸರಿಯಾಗಿದೆಯೇ, ಸಮುಚಿತ ಕನ್ನಡ ಶಬ್ದಗಳ ಬಳಕೆ ಆಗಿದೆಯೇ – ಇವು ನಾಲ್ಕು ಮಾನದಂಡಗಳು. ಅನರ್ಘ್ಯಾಳ ಸ್ಫುಟವಾದ ಮುದ್ದಾದ ಮಾತು, ಅದಕ್ಕೆೆ ತಕ್ಕ ಸಹಜ ಹಾವಭಾವ, ಮುಖದಲ್ಲಿ ಕಿರುನಗು, ಕಣ್ಗಳಲ್ಲಿ ಮಿನುಗು, ಮುಗ್ಧತೆಯ ಪ್ರತಿಬಿಂಬ. ಆರು ವರ್ಷದ ಹುಡುಗಿ, ಕೆನಡಾ ದೇಶದಲ್ಲಿದ್ದು ಇಷ್ಟು ಚೆನ್ನಾಗಿ ಕನ್ನಡ ಮಾತನಾಡುವವಳು. ಯಾವ ಅಂಶಗಳಲ್ಲಿ ಅಂತ ಅವಳಿಗೆ ಅಂಕ ಕಟ್ ಮಾಡಲಿ? ನನ್ನ ಮನಸ್ಸು ಒಪ್ಪುವುದಿಲ್ಲ.

ಫುಲ್ ಮಾರ್ಕ್‌ಸ್‌ ಕೊಟ್ಟು ಮುಂದಿನ ಸ್ಪರ್ಧಿಯ ವಿಡಿಯೊ ನೋಡತೊಡಗುತ್ತೇನೆ. ಈತ ಐದು ವರ್ಷದ ಹುಡುಗ. ಅದ್ವಯ ಪೆಜತ್ತಾಯ ಎಂದು ಹೆಸರು. ಒಮಾನ್ ದೇಶದ ನಿವಾಸಿ. ಆಯ್ದುಕೊಂಡ ವಿಷಯ ‘ನನ್ನ ನೆಚ್ಚಿನ ಆಟ ಚದುರಂಗ’. ಚೂಟಿಯಾಗಿ ಕಾಣುವ ಹುಡುಗ ಭಾಷಣ ಆರಂಭಿಸುತ್ತಾನೆ. ಪಕ್ಕದಲ್ಲೊೊಂದು ಚೆಸ್‌ಬೋರ್ಡ್. ಅದರ ಚೌಕುಳಿಗಳ ಮೇಲೆ ಜೋಡಿಸಿಟ್ಟ ಕಾಯಿಗಳು. ‘ಈ ಆಟದಿಂದ ಬುದ್ಧಿಶಕ್ತಿ ಮತ್ತು ಏಕಾಗ್ರತೆ ಬೆಳೆಯುತ್ತದೆ. ಇದು ಆನೆ. ಇದು ಅಡ್ಡಸಾಲು ಮತ್ತು ಕಂಬ ಸಾಲುಗಳಲ್ಲಿ ಹೋಗುತ್ತದೆ…’ ಎಂದು ಚದುರಂಗದ ಸ್ಥೂಲ ಪರಿಚಯ ಮಾಡುತ್ತ ಕನ್ನಡದಲ್ಲಿ ನಿರರ್ಗಳ ಮಾತನಾಡುತ್ತಾನೆ. ‘ವ್ಹೆೆ ಟ್ ಇಂದ ಆಟ ಆರಂಭ. ಸೈನಿಕ ಮೊದಲು ಎರಡು ಸ್ಟೆೆಪ್ಪು ಹೋಗುತ್ತಾನೆ ಆಮೇಲೆ ಅವನ ನಡೆ ಒಂದೊಂದೇ ಸ್ಟೆೆಪ್ಪು…’ ಎನ್ನುವಾಗ ಎರಡು ಇಂಗ್ಲಿಷ್ ಪದ ಬಳಸಿದ್ದಾನೆಂಬ ಕಾರಣಕ್ಕೆೆ ಒಲ್ಲದ ಮನಸ್ಸಿನಿಂದ ಅರ್ಧ ಮಾರ್ಕ್ಕಟ್ ಮಾಡುತ್ತೇನೆ. ಇಲ್ಲವಾದರೆ ಅವನಿಗೂ ಪೂರ್ಣ ಅಂಕಗಳೇ.

ಮುಂದಿನ ಸ್ಪರ್ಧಿ ಆಸ್ಟ್ರೇಲಿಯಾದಿಂದ ನಿತ್ಯಾ ಕುಲಕರ್ಣಿ. 6 ವರ್ಷ. ವಿಷಯ: ನನ್ನ ನೆಚ್ಚಿನ ತಿಂಡಿ ಮಸಾಲೆದೋಸೆ. ಬಹುಶಃ
ಅಮ್ಮನದಿರಬೇಕು ‘ಕಾಣದ ಕೈ’ಯೊಂದು ಬೆಣ್ಣೆೆ ಚಟ್ನಿ ಸಹಿತ ಮಸಾಲೆದೋಸೆ ಇರುವ ಪ್ಲೇಟ್ ತಂದುಕೊಡುತ್ತದೆ. ನಿತ್ಯಾಳ
ದೋಸೆ ಬಣ್ಣನೆಯಿಂದ ನಮಗೂ ಬಾಯಿಯಲ್ಲಿ ನೀರೂರುತ್ತದೆ. ‘ಇಂಗ್ಲಿಷ್ ಜನರು ದೋಸಾ ಅಂತಾರೆ. ನಾವು ದೋಸಾ ಅನ್ನೊಲ್ಲ ದೋಸೆ ಅಂತೇವೆ. ಮತ್ತೆ ಇಂಗ್ಲಿಷ್ ಜನರು ಫೋರ್ಕು ನೈಫು ಇಟ್ಕೊೊಂಡು ತಿಂತಾರೆ, ನಾವು ಹಾಂಗೆಲ್ಲ ಮಾಡೊಲ್ಲ. ನಾವು ಕೈಯಿಂದನೇ ತಿಂತೀವಿ. ನಮಗೆ ಅದೇ ಮಜಾ’ ಎನ್ನುತ್ತಾಳೆ.

ಸಿಡ್ನಿಯಲ್ಲಿ ಅತ್ಯುತ್ತಮ ದೋಸೆ ಸಿಗೋದು ಅವಳ ಮನೆಯಲ್ಲೇ ಅಂತೆ! ಏನೀ ಅದ್ಭುತವೇ ದೋಸೆ ಎಂಥ ಅದ್ಭುತವೇ ಎನ್ನುತ್ತ
ಭಾಷಣ ಮುಗಿಸುತ್ತಾಳೆ. ಈ ದೋಸೆಯವಳ ಮಾತೂ ದೋಷರಹಿತ, ಮುಗ್ಧ. ತೀರ್ಪುಗಾರನಾಗಿ ನನ್ನ ಪರಿಸ್ಥಿತಿ ಸಂದಿಗ್ಧ! ಇನ್ನೊಬ್ಬ ಸ್ಪರ್ಧಿ ಸಮರ್ಥ ಮಾಟಂ. ಅಮೆರಿಕದ ಅಟ್ಲಾಾಂಟದವನು. ವಯಸ್ಸು 6. ರೇಷ್ಮೆೆ ಜುಬ್ಬಾ ಕಚ್ಚೆೆಪಂಚೆ
ಉಟ್ಟುಕೊಂಡು, ಹೆಗಲ ಮೇಲೆ ಶಲ್ಯ ಬಿಟ್ಟುಕೊಂಡು, ಕೈಯಲ್ಲೊೊಂದು ಪುಟ್ಟ ಗಣೇಶನನ್ನು ಹಿಡಿದುಕೊಂಡು, ನೆಲಕ್ಕೆೆ
ಹಾಸಿದ ಕಂಬಳಿಯ ಮೇಲೆ ಚಕ್ಳಮಕ್ಳ ಹಾಕ್ಕೊೊಂಡು ಕುಳಿತಿದ್ದಾನೆ.

ದಪ್ಪ ಕನ್ನಡಕವೂ ಇರುವುದರಿಂದ ತುಸು ಹೆಚ್ಚೇ ಪ್ರೌಢನಂತೆ ಕಾಣುತ್ತಾನೆ. ಆದರೆ ಮಾತಿನಲ್ಲಿ ತುಂಟತನ ಚುರುಕು ಹುರುಪಿನ
ಅಪ್ಪಟ ಬಾಲ್ಯ ರಾರಾಜಿಸುತ್ತದೆ. ವಿಷಯ: ಗಣೇಶನ ಹಬ್ಬ. ಮೋದಕ ಚಕ್ಲಿ ಕಡುಬಿಂದ ಹಿಡಿದು ಸ್ಯಮಂತಕೋಪಾಖ್ಯಾನ
ದವರೆಗೆ ಎಲ್ಲವನ್ನೂ ಲವಲವಿಕೆಯಿಂದ ವಿವರಿಸುತ್ತಾನೆ. ಆ ಭಾಗದ ಅಂತಿಮ ಸುತ್ತಿನ ಹದಿನೈದು ವಿಡಿಯೊಗಳನ್ನೂ ನೋಡಿ
ನಾವು ಮೂವರು ತೀರ್ಪುಗಾರರು ಅಂಕಪಟ್ಟಿಗಳ ಷರಾ ತೆಗೆದಾಗ ಸಮರ್ಥ ಮೊದಲ ಬಹುಮಾನ ಪಡೆದಿರುತ್ತಾನೆ!

ಇದು, ಕಳೆದ ತಿಂಗಳು ‘ನಾಟಕೋತ್ಸವ’ದ ಅಂಗವಾಗಿ, ಅನಿವಾಸಿ ಭಾರತೀಯ ಮಕ್ಕಳಿಗೆ ನಡೆಸಿದ್ದ ಕನ್ನಡ ಪ್ರತಿಭಾ
ಸ್ಪರ್ಧೆಗಳ ತೀರ್ಪುಗಾರರಲ್ಲೊಬ್ಬನಾಗಿ ನಾನು ಪಡೆದ ಅವಿಸ್ಮರಣೀಯ ಅನುಭವದ ಒಂದು ಚಿಕ್ಕ ತುಣುಕು. ತೀರ್ಪುಗಾರರ ತಂಡದ ಮುಖ್ಯಸ್ಥನೆಂಬ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಎಲ್ಲ ನಾಲ್ಕು ಭಾಗಗಳ ಸ್ಪರ್ಧೆಗಳಲ್ಲಿ ಅಂತಿಮ
ಸುತ್ತಿನ ಒಟ್ಟು ಐವತ್ತಕ್ಕಿಿಂತಲೂ ಹೆಚ್ಚು ವಿಡಿಯೊಗಳನ್ನು ನೋಡಿ ಮೌಲ್ಯಮಾಪನ ಮಾಡುವ ಕೆಲಸ. ನನಗೆ ಒಂಚೂರೂ
ಬೇಸರವೆನಿಸಲಿಲ್ಲ. ಮಾತ್ರವಲ್ಲ, 2020ರ ಪ್ರಥಮಾರ್ಧದಲ್ಲಿ ಮನಸ್ಸನ್ನೆೆಲ್ಲ ಕೋಡಾಯಣದ ಕಗ್ಗತ್ತಲೆ ಆವರಿಸಿದ್ದಾಗ
ಇದೊಂದು ನಕ್ಷತ್ರಲೋಕ ಬೆಳಗಿತು ಎಂದುಕೊಳ್ಳುವಷ್ಟು ಈ ಚಟುವಟಿಕೆ ನನ್ನನ್ನು ಖುಷಿಗೊಳಿಸಿತು, ರೋಮಾಂಚನ
ತಂದಿತು. ಈ ಇಡೀ ಪ್ರಕ್ರಿಯೆಯ ಒಂದು ಸ್ಥೂಲ ನೋಟವನ್ನಿಲ್ಲಿ ಕೊಡುತ್ತೇನೆ. ಇದರ ಅನನ್ಯತೆ, ವಿಶಿಷ್ಟತೆ ನಿಮಗೂ
ಅಂದಾಜಾಗುತ್ತದೆ. ಏಕೆ ಮತ್ತು ಹೇಗೆ ಇದೊಂದು ಅರ್ಥಪೂರ್ಣ ಚಟುವಟಿಕೆ ಎಂಬುದು ನಿಮಗೂ ಮನವರಿಕೆ
ಯಾಗುತ್ತದೆ.

ಅಮೆರಿಕದ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಸ್ಥೆೆ ಎರಡು ವರ್ಷಕ್ಕೊಮ್ಮೆ ನಡೆಸುವ ನಾಟಕೋತ್ಸವ ಈ ಬಾರಿ
ಸಂಪೂರ್ಣವಾಗಿ ಅಂತರಜಾಲಚಾಲಿತ ಸಮ್ಮೇಳನವಾಗ ಬೇಕಾಯಿತು. ಇಡೀ ಸಮ್ಮೇಳನವೇ ಆನ್‌ಲೈನ್ ಅಂತಾದರೆ,
ಜಗದಗಲ ಹರಡಿರುವ ಕನ್ನಡಿಗರ ಮಕ್ಕಳಿಗೋಸ್ಕರ ಕನ್ನಡ ಪ್ರತಿಭಾ ಸ್ಪರ್ಧೆಗಳನ್ನೂ ಆನ್‌ಲೈನ್‌ನಲ್ಲೇ ನಡೆಸೋಣವೆಂಬ
ಮಹತ್ವಾಕಾಂಕ್ಷೆಯ ಆಲೋಚನೆ ಬಂತು. ಲಾಸ್‌ಏಂಜಲೀಸ್‌ನ ಗೋಪಾಲಕೃಷ್ಣ ಸುಬ್ರಮಣಿ ಅವರಿಗೆ. ಮೂಲತಃ ಕೋಲಾರದ
ಮಾಲೂರಿನ ಅವರ ಮನೆಮಾತು ತೆಲುಗು, ಆದರೂ ಕನ್ನಡವೆಂದರೆ ಪ್ರಾಣ. ಲಾಸ್‌ಏಂಜಲೀಸ್‌ನಲ್ಲಿ ಮಕ್ಕಳಿಗೆ ಕನ್ನಡ
– ಕಲಿ ಶಾಲೆ ನಡೆಸುವ ಶಿಕ್ಷಕರಲ್ಲಿ ಅವರೂ ಒಬ್ಬರು. ತನ್ನ ಯೋಜನೆಗೆ ನಾವಿಕ ಮುಖ್ಯಸ್ಥ ವಲ್ಲೀಶ ಶಾಸ್ತ್ರಿಯವರಿಂದ,
ನಾಟಕೋತ್ಸವದ ಸಂಚಾಲಕ ಡಾ.ಅಶೋಕ ಕಟ್ಟಿಮನಿ ಯವರಿಂದ, ಸ್ಪರ್ಧೆಗಳ ಸಂಯೋಜಕ ರಾಮರಾವ್‌ರಿಂದ
ಹಸಿರುನಿಶಾನೆ ಪಡೆದರು. ಪ್ರಪಂಚದ ಬೇರೆಬೇರೆ ಕಡೆಗಳಲ್ಲಿ ಕನ್ನಡ – ಕಲಿ ಶಾಲೆಗಳನ್ನು ನಡೆಸುವ ಶಿಕ್ಷಕ/ಕಿಯರನ್ನು ಇದರಲ್ಲಿ
ಸೇರಿಸಿಕೊಂಡರೆ ಕೆಲಸ ಸುಗಮ ಎಂದು ಆಲೋಚಿಸಿದರು.

ನ್ಯೂಜೆರ್ಸಿಯ ಕನ್ನಡ – ಕಲಿ ಶಾಲೆಯ ಶಿಕ್ಷಕಿ ಉಮಾ ಮೂರ್ತಿ, ಟೊರೊಂಟೊದಲ್ಲಿ ಕನ್ನಡ ಶಾಲೆ ನಡೆಸುವ ಡಾ.ಸುಧಾ ಸುಬ್ಬಣ್ಣ ಸೇರಿಕೊಂಡರು. ಉಮಾ ಜೊತೆ ನ್ಯೂಜೆರ್ಸಿಯಿಂದ ಇನ್ನಿಬ್ಬರು ಶಿಕ್ಷಕಿಯರು – ಉಷಾ ಬಸ್ರೂರು ಮತ್ತು ಅರ್ಚನಾ ಆಚಾರ್ಯ ಸೇರಿದರು. ಡೆಲವೇರ್‌ನಲ್ಲಿರುವ ಶ್ರೀನಿಧಿ ಹೊಳ್ಳ ತಾನೂ ನೆರವಾಗುವೆನೆಂದರು. ಅಟ್ಲಾಾಂಟದಿಂದ ಮಂಗಳಾ ಉಡುಪ ಸೇರಿಕೊಂಡರು. ಹೀಗೆ ಒಬ್ಬರಿಗೊಬ್ಬರು ಪರಿಚಯದ ನೆಟ್ ವರ್ಕ್ ಬೆಳೆಯಿತು. ಯುಕೆಯಿಂದ ರಾಜೇಶ್, ಜರ್ಮನಿಯಿಂದ ಗೀತಾ ಶ್ರವಣ್, ಸಿಂಗಪುರದಿಂದ ರಾಮನಾಥ್, ಮತ್ತು ಸಿಡ್ನಿಿಯಿಂದ ಕನಕಾಪುರ ನಾರಾಯಣ ಸೇರಿದಾಗ ಅದೊಂದು ಅಕ್ಷರಶಃ ವಿಶ್ವವ್ಯಾಪಿ ಸಮಿತಿಯಾಯಿತು!

ಇವರೆಲ್ಲರೂ ಕಳೆದ ಹತ್ತಾರು ವರ್ಷಗಳಿಂದ ತಮ್ಮತಮ್ಮ ನಗರಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಕೆ ತರಗತಿಗಳನ್ನು ನಡೆಸುತ್ತಿರುವ ಸ್ವಯಂಸೇವಕರು. ‘ಕನ್ನಡ ಎನೆ ಕುಣಿದಾಡುವುದೆನ್ನೆೆದೆ ಕನ್ನಡ ಎನೆ ಕಿವಿ ನಿಮಿರುವುದು’ ಎನ್ನುವವರು. ವೃತ್ತಿಗಳು ಬೇರೆಬೇರೆ, ಪ್ರವೃತ್ತಿ ಮಾತ್ರ ಕನ್ನಡ. ಇನ್ನು, ಸ್ಪರ್ಧೆಗಳಿಗೆ ತೀರ್ಪುಗಾರರು ಬೇಕಲ್ಲ? ಕಳೆದ ವರ್ಷ ಅಮೆರಿಕದ ಕನ್ನಡ – ಕಲಿ ಶಾಲೆಗಳ ಬಗ್ಗೆೆ ನಾನೊಂದು ವಿಶೇಷ ಲೇಖನ ತಯಾರಿಸಿದ್ದಾಗ ನನಗೆ ಗೋಪಾಲಕೃಷ್ಣರ ಸ್ನೇಹಸಂಪರ್ಕ ಆಗಿತ್ತು. ಎರಡು ತಿಂಗಳ ಹಿಂದೆ ಒಂದುದಿನ ಅವರು ವಾಟ್ಸಪ್ ಮೆಸೇಜು ಮಾಡಿ, ದೂರವಾಣಿಯಲ್ಲಿ ಮಾತಾಡಿ ಯೋಜನೆಯ ನೀಲನಕ್ಷೆ ಬಿಚ್ಚಿಟ್ಟರು. ನಾನೂ
ಕೈಜೋಡಿಸುತ್ತೇನೆಂದು ಒಪ್ಪಿಗೆ ಸೂಚಿಸಿದೆ. ಇನ್ನೂ ನಾಲ್ಕು ಮಂದಿ – ಫಿಲಡೆಲ್ಫಿಯಾದಿಂದ ಶ್ರೀವತ್ಸ ಬಲ್ಲಾಳ, ಟೊರೊಂಟೊ
ದಿಂದ ಬೃಂದಾ ಮುರಳೀಧರ್, ಕ್ಯಾಲಿಫೋರ್ನಿಯಾದಿಂದ ಅಟ್ಲಾಾಂಟಾ ನಾಗೇಂದ್ರ ಮತ್ತು ಕಲಬುರಗಿಯಿಂದ ಡಾ.ಗೀತಾ
ಪಾಟೀಲ – ಇವರೆಲ್ಲರನ್ನೂ ತೀರ್ಪುಗಾರರನ್ನಾಗಿ ಗೊತ್ತುಪಡಿಸಿದರು. ಇವರೆಲ್ಲ ಪ್ರಚಂಡ ಪ್ರತಿಭಾನ್ವಿತರು. ಶ್ರೀವತ್ಸ ಬಲ್ಲಾಳ
ಜಿ.ವಿ. ಐಯರ್‌ರ ಮಧ್ವಾಚಾರ್ಯ ಸಿನೆಮಾದಲ್ಲಿ ಬಾಲಮಧ್ವ ನಾಗಿ ಅಭಿನಯಿಸಿ ಪ್ರಶಸ್ತಿ ಪಡೆದವರಾದರೆ, ಬೃಂದಾ
ರಂಗಭೂಮಿಯ ಪಕ್ವ ಅನುಭವವುಳ್ಳವರು.

ನಾಗೇಂದ್ರ ‘ಜೋಕ್ ಫಾಲ್‌ಸ್‌’ ನಿರ್ಮಾಣವೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಡಾ.ಗೀತಾ ಕಲಬುರಗಿಯಲ್ಲಿ
ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ, ಹವ್ಯಾಸಿ ಕವಯಿತ್ರಿ. ಹೀಗೆ ಸುಮಾರು ಇಪ್ಪತ್ತು ಜನ ಉತ್ಸಾಹಿಗಳ ತಂಡ
ವಾರಕ್ಕೊಮ್ಮೆ ಝೂಮ್ ಮೀಟಿಂಗ್ ನಡೆಸಿ, ದಿನವ ವಿಚಾರ ವಿನಿಮಯಕ್ಕೆೆ ವಾಟ್ಸಪ್ ಗ್ರೂಪ್ ರಚಿಸಿ, ಕಾರ್ಯಾಚರಣೆ
ಆರಂಭಿಸಿತು. ಲಾಸ್‌ಏಂಜಲೀಸ್‌ನಲ್ಲಿ ಗೋಪಾಲಕೃಷ್ಣ ಬೆಳಗ್ಗೆೆ ಐದಕ್ಕೆೆಲ್ಲ ಎದ್ದು ಮೀಟಿಂಗ್ ಆರಂಭಿಸಿದರೆ ಅಲ್ಲಿ ಸಿಡ್ನಿಯಲ್ಲಿ
ಅದಾಗಲೇ ರಾತ್ರಿ ಹತ್ತು ಗಂಟೆ! ಅಮೆರಿಕದ ಸಂಜೆ ಹೊತ್ತಿನಲ್ಲಿ ಮೀಟಿಂಗ್ ಇಟ್ಟುಕೊಳ್ಳೋಣವೆಂದರೆ ಯುರೋಪ್‌ನಲ್ಲಿ ಆಗ
ಮಧ್ಯರಾತ್ರಿ. ಅಂತೂ ಹೇಗೋ ನಿಭಾಯಿಸಿದೆವು.

ಭೌತಿಕವಾಗಿ ಎಲ್ಲೆೆಲ್ಲೋ ಇದ್ದರೂ ಅಂತರಜಾಲದ ಮೂಲಕ ಭಾವನಾತ್ಮಕವಾಗಿ ಒಂದೆಡೆ ಸೇರಿ ಕ್ರಮೇಣ ಒಂದು
ಕೂಡುಕುಟುಂಬವೇ ಆದೆವು. ಕೆಲಸದ ದಣಿವು ಅರಿವಾಗದಂತೆ ಹಾಸ್ಯಚಟಾಕಿ, ಪರಸ್ಪರ ಕಿಚಾಯಿಸುವಿಕೆಯ ಲಘುಬಗೆ. ಒಟ್ಟು
ನಾಲ್ಕು ಭಾಗಗಳಲ್ಲಿ ಸ್ಪರ್ಧೆ ನಡೆಸುವುದೆಂದು ನಿರ್ಣಯವಾಯಿತು. ‘ವಿಷಯಾಧಾರಿತ ಮಾತು’ 5ರಿಂದ 7 ವರ್ಷದ ಮಕ್ಕಳಿಗೆ; 8ರಿಂದ 10 ವಯಸ್ಸಿನವರಿಗೆ ಏಕಪಾತ್ರಾಭಿನಯ; 11ರಿಂದ 13 ವರ್ಷದವರಿಗೆ ಕವನವಾಚನ; 14ರಿಂದ 16ರ ಹರೆಯದವರಿಗೆ ‘ನನ್ನ ಮೆಚ್ಚಿನ ಕನ್ನಡ ಚಲನಚಿತ್ರ’ ವಿಮರ್ಶೆ ಸ್ಪರ್ಧೆ. ನಿಯಮಾವಳಿ ಸಿದ್ಧವಾಯಿತು.

ಸೋಶಿಯಲ್ ಮೀಡಿಯಾ ಮೂಲಕ ಪ್ರಚಾರ. ಸಿಂಗಪುರದ ಮಾನ್ಯಾ ಗದ್ದೆೆಮನೆ, ಅಮೆರಿಕದಿಂದ ಪಯಸ್ವಿನಿ ಹೊಳ್ಳ,
ಅಭೀಷ್ಟಾ ತಂತ್ರಿ, ಪ್ರಕೃತಿ ಪ್ರವೀಣ್, ಜರ್ಮನಿಯಿಂದ ಕೌಸ್ತುಭ್ ಕಾರ್ತಿಕ್ ಮತ್ತು ಪದ್ಮಶ್ರೀ ಗಣೇಶ್- ಈ ಮಕ್ಕಳು ಮಾದರಿ
ವಿಡಿಯೊಗಳನ್ನು, ಪ್ರಚಾರ ಸಾಮಗ್ರಿಯನ್ನೂ ಮಾಡಿಕೊಟ್ಟರು. ಪ್ರಪಂಚದ ನಾನಾ ಕಡೆಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಮಕ್ಕಳಿಂದ ಒಂದೊಂದಾಗಿ ವಿಡಿಯೊಗಳು ಬರಲಾರಂಭಿಸಿದವು.

ಇಷ್ಟೆೆಲ್ಲ ಶ್ರಮಪಟ್ಟಿದ್ದಕ್ಕೆೆ 100 ವಿಡಿಯೊ ಬಂದರೆ ಸಾರ್ಥಕ ಎಂದುಕೊಂಡಿದ್ದಾಗ ಆಗಸ್‌ಟ್‌ 10ರಂದು ಗಡುವು ತೀರಿದಾಗ
ಬಂದಿದ್ದ ಒಟ್ಟು ವಿಡಿಯೊಗಳ ಸಂಖ್ಯೆೆ ಹತ್ತಿರಹತ್ತಿರ ಇನ್ನೂರು! ನಿರೀಕ್ಷಿಸಿದ್ದಂತೆಯೇ ಕಿರಿಯ ವಯಸ್ಸಿನ ಭಾಗಗಳಲ್ಲಿ ಹೆಚ್ಚು
ಸ್ಪರ್ಧಿಗಳು. ಅಮೆರಿಕ, ಕೆನಡಾ, ಸಿಂಗಪುರ, ಆಸ್ಟ್ರೇಲಿಯ, ಗಲ್‌ಫ್‌ ದೇಶಗಳಿಂದ ಹೆಚ್ಚು ಸ್ಪರ್ಧಿಗಳು. ಆಶ್ಚರ್ಯವೆಂಬಂತೆ
ಇಂಡೋನೇಷ್ಯಾ, ಸ್ವೀಡನ್, ಆಫ್ರಿಕಾದ ಘಾನಾ, ಕೆರಿಬಿಯನ್ ದ್ವೀಪ ಸೈಂಟ್ ಮಾರ್ಟಿನ್ ಮುಂತಾದೆಡೆಗಳಿಂದಲೂ
ಒಂದೆರಡು ಪ್ರವೇಶಗಳಿದ್ದವು!

ಎಲ್ಲ ಭಾಗಗಳಲ್ಲೂ ತೀವ್ರ ಪೈಪೋಟಿ. ಯಾರಿಗಪ್ಪಾ ಬಹುಮಾನ ನೀಡುವುದು ಎಂದು ತೀರ್ಪುಗಾರರಿಗೆ ತಲೆಬಿಸಿ.
ಪಂಜೆ ಮಂಗೇಶರಾಯರ ಉದಯರಾಗ ಕತೆ ವಾಚಿಸಿದ ಪ್ರಣತಿ ನಂದಾ, ಸೋಮೇಶ್ವರ ಶತಕದ ಚೌಪದಿಗಳನ್ನು ನಿರರ್ಗಳವಾಗಿ
ಓದಿ ಅರ್ಥವನ್ನೂ ವಿವರಿಸಿದ ಶ್ರೇಯಾ ಪ್ರಸನ್ನ, ಕಷ್ಟಕರ ಉಚ್ಚಾರಗಳ ರತ್ನನ್ ಪದಗೋಳ್ ಅನ್ನು ಲೀಲಾಜಾಲವಾಗಿ
ವಾಚಿಸಿದ ನವ್ಯಶ್ರೀ ವೆಂಕಟ್, ಕಾವ್ಯವಾಚನ ಅಥವಾ ಗಮಕಗಾಯನಕ್ಕೆೆ ತಕ್ಕುದಾಗಿ ಪಂಚೆ ಉಟ್ಟುಕೊಂಡು ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯಿಂದ ಷಟ್ಪದಿಗಳನ್ನು ವಾಚಿಸಿದ ಸ್ಕಂದ ಕುಲಕರ್ಣಿ… ಒಬ್ಬರಿಗಿಂತ ಒಬ್ಬರು ಮೇಲು.
ಕರ್ನಾಟಕದಲ್ಲಿರುವ ಮಕ್ಕಳು ಸಹ ಇಷ್ಟು ಸ್ಫುಟವಾಗಿ ಹಳಗನ್ನಡ ಪದ್ಯಗಳನ್ನು ವಾಚಿಸುವುದು ಅನುಮಾನವೇ.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಸಾಂಪ್ರದಾಯಿಕ ಉಡುಗೆ, ಹೆಣ್ಣುಮಕ್ಕಳು ಜಡೆ ಹೆಣೆದುಕೊಂಡು ಹಣೆಗೆ ಬಿಂದಿ
ಇಟ್ಟುಕೊಂಡಿದ್ದು, ಲಂಗ ರವಿಕೆ ಧರಿಸಿದ್ದನ್ನು ನೋಡಿ ಗೀತಾ ಪಾಟೀಲರಿಗೆ ಮಹದಾಶ್ಚರ್ಯ. ಅನಿವಾಸಿ ಕನ್ನಡಿಗರ ಮಕ್ಕಳು
ಸಾಗರದಾಚೆಯಲ್ಲೂ ನಮ್ಮ ಭಾಷೆಯನ್ನು ಜೀವಂತ ವಾಗಿಡುವುದರ ಜೊತೆಗೆ ಭವ್ಯಭಾರತದ ಸಂಸ್ಕೃತಿಯನ್ನು
ಪೋಷಿಸುತ್ತಿದ್ದಾರೆಂಬ ಹೆಮ್ಮೆ. ಘಾನಾ ದೇಶದಿಂದ ಭಾಗವಹಿಸಿದ್ದ ಅಶ್ವಿಿನ್ ವಾಚಿಸಿದ್ದು ಶಿಕಾರಿಪುರ ಹರಿಹರೇಶ್ವರರ ಒಂದು ಕವನ.

ದೇಶಗಳಲ್ಲಿ ಕನ್ನಡದ ನಾವೆಯನ್ನು ಮುನ್ನಡೆಸಿದ ಹರಿಗೋಲೇ ಆಗಿದ್ದ ಹರಿಯ ಸ್ಮರಣೆ, ಅಯಾಚಿತವಾಗಿ! ಏಕಪಾತ್ರಾಭಿನಯ ಭಾಗದಲ್ಲಿ ಕೆಲ ಮಕ್ಕಳು ಅತ್ಯದ್ಭುತ ಅಭಿನಯದಿಂದ, ಭಾವಪೂರ್ಣ ಸಂಭಾಷಣೆಯಿಂದ ತೀರ್ಪುಗಾರರನ್ನು
ಮೂಕಸ್ಮಿತರಾಗಿಸಿದರು. ಸುಧನ್ವ ರಾವ್‌ನ ತೆನಾಲಿರಾಮ – ಕಾಳಿದೇವಿ, ಇಂಪನಾಳ ರಣ್ಯಕಶಿಪು-ಪ್ರಹ್ಲಾದ, ಅನನ್ಯಾಳ
ರಾವಣ – ಹನುಮಂತ, ಪಾವನಿಯ ಕಿತ್ತೂರ ಚೆನ್ನಮ್ಮ -ಥ್ಯಾಕರೆಸಾಹೇಬ ಮುಂತಾದ ನಟನೆಗಳು ಯಾವ ಪ್ರಸಿದ್ಧ
ಕಲಾವಿದರಿಗೂ ಕಮ್ಮಿಯಲ್ಲ. ಅಮೆರಿಕ ಅಮೆರಿಕ ಕನ್ನಡ ಚಿತ್ರದ ವಿಮರ್ಶೆ ಮಾಡಿದ ಅನನ್ಯಾ ಬದರಿ ಮಾತಾಡಿದಷ್ಟು ಸ್ಪಷ್ಟ ಶುದ್ಧ ಕನ್ನಡವನ್ನು ಕನ್ನಡ ಸುದ್ದಿವಾಹಿನಿಗಳವರು, ಚಿತ್ರರಂಗದವರು ದೇವರಾಣೆಗೂ ಮಾತನಾಡಲಿಕ್ಕಿಲ್ಲ.

ನಿಜ, ಈ ಎಲ್ಲ ಮಕ್ಕಳ ಹೆತ್ತವರು, ಊರಲ್ಲಿರುವ ಅಜ್ಜಿ – ತಾತ ಸಹ ಮುತುವರ್ಜಿ ವಹಿಸಿ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸಿ
ದ್ದಾಾರೆ. ಮನೆಯಲ್ಲಿ, ಕುಟುಂಬದಲ್ಲಿ ಕನ್ನಡದ ವಾತಾವರಣ, ಕನ್ನಡತನದ ವಿಜೃಂಭಣೆ ಎಷ್ಟಿದೆ ಎನ್ನುವುದಕ್ಕೆೆ
ಅಳತೆಗೋಲಾದವು ಈ ಸ್ಪರ್ಧೆಗಳು. ಇಷ್ಟೊೊಂದು ಸಂಖ್ಯೆೆಯಲ್ಲಿ ಮಕ್ಕಳು ಭಾಗವಹಿಸಿದ್ದರಿಂದ ಪ್ರತಿಯೊಂದು ಭಾಗದಲ್ಲೂ
ಪ್ರಥಮ, ದ್ವಿತೀಯ, ಮತ್ತು ಐದು ಸಮಾಧಾನಕರ ಬಹುಮಾನ ನೀಡುವುದೆಂದಾಯಿತು. ತಾನೊಂದಿಷ್ಟು ಬಹುಮಾನಗಳನ್ನು
ಪ್ರಾಯೋಜಿಸುತ್ತೇನೆಂದರು ಡಾ.ಸುಧಾ ಸುಬ್ಬಣ್ಣ.

ನಾಟಕೋತ್ಸವಕ್ಕೆೆ ಇನ್ನೂ ಒಂದು ವಾರ ಇರುವಾಗಲೇ ಬಹುಮಾನ ವಿತರಣೆ ಸಮಾರಂಭ ಝೂಮ್ ಕಾನ್ಫರೆನ್‌ಸ್‌‌ನಲ್ಲಿ
ನಡೆಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಸಕ್ತ ಅಧ್ಯಕ್ಷ ಟಿ.ಎಸ್. ನಾಗಾಭರಣ ಮುಖ್ಯ ಅತಿಥಿ. ಅವರಿಂದ ಈ ಯೋಜನೆಗೆ
ಮನಃಪೂರ್ವಕ ಮೆಚ್ಚುಗೆ, ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನೆ ಮತ್ತು ಪ್ರೋತ್ಸಾಹದ ನುಡಿ. ಎರಡು ಗಂಟೆ
ಅವಧಿಯ ಆ ಕಾರ್ಯಕ್ರಮದ ವಿಡಿಯೊವನ್ನು ಮುಕ್ಕಾಲು ಗಂಟೆ ಅವಧಿಗೆ ಕಿರಿದಾಗಿಸಲು ಇನ್ನಿಬ್ಬರು ಪರಿಣತರು –
ವಿಜಯೇಂದ್ರ ಕುಮಾರ್ ಮತ್ತು ಭವಿಷ್ಯಾ ಶರಧಿ ನೆರವಾದರು.

ನಾಟಕೋತ್ಸವದಲ್ಲಿ ಈ ಸಂಕಲಿತ ಕಾರ್ಯಕ್ರಮ ಪ್ರಸಾರವಾಯಿತು. ಇದು ಆರಂಭ. ಗೋಪಾಲಕೃಷ್ಣರ ಕನಸಿರುವುದು ಸ್ಪೆೆಲ್ಲಿಂಗ್ ಬೀ ಮುಂತಾದ ಸ್ಪರ್ಧೆಗಳಂತೆ ಅನಿವಾಸಿ ಕನ್ನಡಿಗ ಮಕ್ಕಳಲ್ಲಿ ಕನ್ನಡ ನಾಡು – ನುಡಿ – ಸಂಸ್ಕೃತಿಯ ಬೇರುಗಳನ್ನು
ಭದ್ರಪಡಿಸಲು ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂತನ ಸ್ಪರ್ಧೆಗಳನ್ನು ನಡೆಸುವುದು. ಮುಂದೊಂದು ದಿನ ಅದನ್ನೂ
ಅವರು ನನಸಾಗಿಸುವವರೇ. ಒಂದು ಮಾತನ್ನು ನೆನಪಿಟ್ಟುಕೊಳ್ಳಿ.

ಕನ್ನಡವನ್ನು ಉಳಿಸಿ ಬೆಳೆಸುವುದು ರಕ್ಷಣಾ ವೇದಿಕೆಗಳಂಥ ದಂಧೆಕೋರ ಹಫ್ತಾವಸೂಲಿ ಸಂಘಟನೆಗಳಲ್ಲ. ಸದ್ದಿಲ್ಲದೆ ಕನ್ನಡ
ಕೈಂಕರ್ಯ ಮಾಡುವ ಈ ಅನಿವಾಸಿ ಮಕ್ಕಳೇ ನಿಜವಾದ ‘ಕನ್ನಡ-ಕಲಿ’ಗಳು. ಹಾಗೆಯೇ ಇನ್ನೂ ಒಂದು ಕಹಿಸತ್ಯವನ್ನು
ಅರಗಿಸಿಕೊಳ್ಳಿ. ಬೆಂಗಳೂರಿಗರಿಗಿಂತ ಹೆಚ್ಚು ಪ್ರಮಾಣದಲ್ಲಿ, ಹೆಚ್ಚು ಶುದ್ಧವಾಗಿ, ಪ್ರೀತಿಯಿಂದ ಕನ್ನಡ ಮಾತಾಡುವವರು ಈ
ಅನಿವಾಸಿ ಕನ್ನಡಿಗರು!