Wednesday, 21st February 2024

ಇದು ಹೆಸರುಬೇಳೆ ಹುರಿದು ತಯಾರಿಸಿದ ಪನ್‌-ಚ-ಕಜ್ಜಾಯ

ತಿಳಿರು ತೋರಣ

srivathsajoshi@yahoo.com

ಹೆಸರಿನ ಪದವಿನೋದಗಳು ಕೆಲವು ಲೋಕೋಕ್ತಿ ಅಥವಾ ಫೋಕ್‌ಲೋರ್ ಆಗಿರುವಂಥವೂ ಇವೆ. ಅವು ಯಾರಿಗೆ ಮೊದಲು ಹೊಳೆದವು ಎಂದು ಯಾರಿಗೂ ಗೊತ್ತಿಲ್ಲ. ಉದಾಹರಣೆಗೆ ‘ವರದರಾಜ ಬಾಣಾವರ’ ಎಂಬ ಹೆಸರಿನ ಫಲಕವನ್ನು ‘ವಾರದ ರಜಾ ಭಾನುವಾರ’ ಎಂದು ಓದಿ ತಮಾಷೆ ಮಾಡುವುದು ಶಿಲಾಯುಗದಿಂದಲೂ ಕೇಳಿಬಂದಿರುವ ಜೋಕ್.

ಅನಿಶುದ್ಧಿಯೋ ಅಥವಾ ಅನ್ನಶುದ್ಧಿಯೋ? ಎಂಬ ಒಂದು ಜಿeಸೆಯಿಂದಾಗಿ ಇಂದಿನ ಈ ಹೆಸರು-ಹರಟೆ (ಬೇಕಿದ್ದರೆ ಹೆಸರಿನ ಹುಗ್ಗಿ ಎನ್ನಿ) ರೂಪುಗೊಂಡಿದೆ. ಅದೇನಾಯ್ತೆಂದರೆ ಅಭಿರುಚಿ ಎಂಬ ವಾಟ್ಸ್ಯಾಪ್ ಗ್ರೂಪ್‌ನ ಸದಸ್ಯೆ ಗಾಯತ್ರಿ ನಾಗರಾಜ್ ಮೊನ್ನೆ ‘ಬ್ರಾಹ್ಮಣಃ ಭೋಜನಪ್ರಿಯಃ’ ಎಂಬೊಂದು ಕವಿತೆ ಹಂಚಿಕೊಂಡಿದ್ದರು. ಅವರೇ ಡಿಸ್‌ಕ್ಲೇಮರ್ ಹಾಕಿಕೊಂಡಿದ್ದಂತೆ ಅದೇನೂ ಅವರ ರಚನೆಯಲ್ಲ; ಆದರೆ ಕವಿತೆ ಓದಲಿಕ್ಕೆ ಚೆನ್ನಾಗಿತ್ತು, ತುಂಬ ಅರ್ಥವತ್ತಾಗಿಯೂ ಇತ್ತು. ಒಂದೆರಡು ದಶಕಗಳ ಹಿಂದಿನವರೆಗೂ ಚಾಲ್ತಿಯಲ್ಲಿದ್ದ, ಈಗ ಬಫೆ ಪದ್ಧತಿಯಿಂದಾಗಿ ಅಳಿವಿನಂಚಿ ನಲ್ಲಿರುವ, ನೆಲದ ಮೇಲೆ ಪಂಕ್ತಿಯಲ್ಲಿ ಬಾಳೆಲೆಯಲ್ಲಿ ಊಟ, ಅದರಲ್ಲಿರುವ ಶಿಸ್ತು ಅಚ್ಚುಕಟ್ಟುತನ ಗಳನ್ನು ಕವಿತೆಯಲ್ಲಿ ಸುಂದರವಾಗಿ ಬಣ್ಣಿಸಲಾಗಿತ್ತು.

ಆಮೇಲೆ ಗೂಗಲ್ ಸರ್ಚ್ ಮಾಡಿದಾಗ, ಅದನ್ನು ಬರೆದವರು ಪುತ್ತೂರಿನ ಅಶ್ವಿನಿ ಕೋಡಿಬೈಲು, ಐದು ವರ್ಷಗಳ ಹಿಂದೆ ಅದು ಫೇಸ್‌ಬುಕ್‌ನಲ್ಲಿ ನೂರಾರು ಲೈಕು-ಕಾಮೆಂಟು-ಶೇರುಗಳ ಜನಮನ್ನಣೆ ಗಳಿಸಿತ್ತು ಎನ್ನುವ ಮಾಹಿತಿಯೂ ಸಿಕ್ಕಿತು. ನನಗದು ಗೊತ್ತಿರಲಿಲ್ಲ ಅಷ್ಟೇ. ಸರಿ, ಆ
ಕವಿತೆಯಲ್ಲಿ ‘ಅನಿಶುದ್ಧಿ’ ಅಂತೊಂದು ಪದಪ್ರಯೋಗ ನನಗೆ ವಿಶೇಷವಾಗಿ ಗೋಚರಿಸಿತು. ಬ್ರಾಹ್ಮಣರ ಸಮಾರಂಭಗಳಲ್ಲಿ ಬಾಳೆಲೆಯಲ್ಲಿ ಪಂಕ್ತಿ ಭೋಜನದ ಕ್ರಮ ನನಗೆ ಚೆನ್ನಾಗಿಯೇ ಗೊತ್ತಿರುವುದರಿಂದ, ಎಲ್ಲ ಭಕ್ಷ್ಯಭೋಜ್ಯಗಳನ್ನು ಎಲೆಯಲ್ಲಿ ಬಡಿಸಿ ಆದಮೇಲೆ ಮನೆಯೊಡತಿಯು ಎಲ್ಲ ಎಲೆಗಳ ಮೇಲೂ ಒಂದೊಂದು ಹನಿ ತುಪ್ಪ ಬಡಿಸುತ್ತ ಹೋಗುವುದಕ್ಕೆ ಆ ಪದವನ್ನು ಬಳಸಿದ್ದಾರೆಂದು ನಾನು ಸುಲಭದಲ್ಲೇ ಗ್ರಹಿಸಿದೆ. ಆದರೆ ನನ್ನ
ತಿಳಿವಳಿಕೆಯ ಪ್ರಕಾರ ಅದನ್ನು ಅನಿಶುದ್ಧಿ ಎನ್ನುವುದಿಲ್ಲ ‘ಅನ್ನಶುದ್ಧಿ’ ಎನ್ನುತ್ತಾರೆ.

ಅಥವಾ ನನ್ನ ತಿಳಿವಳಿಕೆಯೇ ತಪ್ಪೇ? ಅನಿಶುದ್ಧಿಯೇ ಸರಿಯಾದ ಪದವೇ? ಎಂಬ ಸಂದೇಹ ನನ್ನನ್ನು ಕಾಡಿತು. ಅದಕ್ಕೆ ತಕ್ಕಂತೆ ಇನ್ನ್ಯಾವುದೋ ವೆಬ್ ಪುಟದಲ್ಲಿ ಬೇರಾವುದೋ ಸಂದರ್ಭದ ವಿವರಣೆಯಲ್ಲಿ ಅನಿಶುದ್ಧಿ ಪದಬಳಕೆ ಮತ್ತು ಆವರಣದಲ್ಲಿ ‘ದನದ ತುಪ್ಪ’ ಅಂತಲೂ ಇತ್ತು!
ಬಲ್ಲವರನ್ನು ಕೇಳಿ ನೋಡುವಾ ಎಂದು ಆ ಗ್ರೂಪಿನಲ್ಲೇ ಕವಿತೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ‘ಇದೊಂದು ಒಳ್ಳೆಯ ಕವಿತೆ. ಉತ್ತಮ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಸಂಪ್ರದಾಯಬದ್ಧ ಭೋಜನದ ಆದರ್ಶವನ್ನು, ಭೋಜನವೂ ಒಂದು ಪವಿತ್ರ ಯಜ್ಞವೆಂಬ ಉನ್ನತ ಮೌಲ್ಯವನ್ನು, ಚೆನ್ನಾಗಿ
ಬಿಂಬಿಸುತ್ತದೆ. ಆದರೆ ನನಗೊಂದು ಜಿಜ್ಞಾಸೆ.

ಇದರಲ್ಲಿ ಬಳಕೆಯಾಗಿರುವ ಅನಿಶುದ್ಧಿ ಸರಿಯೇ ಅಥವಾ ಅದು ಅನ್ನಶುದ್ಧಿ ಆಗಿರಬೇಕಿತ್ತೇ?’ ಎಂದು ಬರೆದೆ. ನನ್ನ ಪ್ರಶ್ನೆಗೆ ಸಮರ್ಪಕ ಉತ್ತರ
ಸಿಗಲಿಲ್ಲವಾದರೂ ಬೇರೆಯೇ ಒಂದು ಹೊಳಹು ಅಲ್ಲಿ ಮೂಡಿತು. ಗ್ರೂಪಿನ ಸಕ್ರಿಯ ಸದಸ್ಯ, ಸೆನ್ಸ್ ಆಫ್ ಹ್ಯೂಮರ್ ತುಂಬಿತುಳುಕುವ ಅರವಿಂದ ಸಿಗದಾಳ್ ಪ್ರತಿಕ್ರಿಯಿಸಿದರು: ‘ನಾನು ಬೆಂಗಳೂರಿನ ಎನ್ ಆರ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದಾಗ, ನಮ್ಮಂತೆ ಅಲ್ಲೇ ಕೆಳಗಡೆ ಮನೆಯಲ್ಲಿ ಇನ್ನೊಂದು ಕುಟುಂಬ ಬಾಡಿಗೆಗಿತ್ತು. ಅವರಿಗೆ ಇಬ್ಬರು ಮಕ್ಕಳು.

ಮಗಳು ಅನಿತಾ, ಮಗ ಅನಿಲ. ಆ ಮಕ್ಕಳ ತಾಯಿ ಮಕ್ಕಳನ್ನು ಕೂಗುವಾಗ, ಸ್ವಲ್ಪ ಜಾಸ್ತಿ ಒತ್ತು ಕೊಟ್ಟು ಕೂಗೋರು. ಅನ್ನಿತ್ತಾ… ಅನ್ನಿಲ್ಲಾ… ಅಂತ. ಅದು, ಅನ್ನ ಇತ್ತಾ? ಅನ್ನ ಇಲ್ಲಾ ಅಂತ ಅರ್ಥ ಬರುವ ಹಾಗೆ ನಮಗೆ ಕೇಳಿಸುತ್ತಿತ್ತು. ಒಂದುದಿನ ಅವರು ಯಥಾಪ್ರಕಾರ ‘ಅನ್ನಿತ್ತಾ, ಅನ್ನಿಲ್ಲಾ, ಊಟಕ್ಕೆ ಬನ್ನಿ…’ ಎಂದು ಮಕ್ಕಳನ್ನು ಕರೆದರು. ಅನ್ನ ಇಲ್ಲ ಅಂದ್ರೆ ಊಟಕ್ಕೆ ಎಂತ ಬಡಿಸ್ತೀರಿ ಅಂತ ಆಗ ನನ್ನ ರೂಮ್‌ಮೇಟ್ ತಮಾಷೆ ಮಾಡಿದ್ದ. ಇಂದು ನೀವಿಲ್ಲಿ ಅನ್ನಶುದ್ಧಿ, ಅನಿಶುದ್ಧಿ ಪದಗಳನ್ನು ಬಡಿಸಿದಾಗ, ಈ ಹಾಸ್ಯ ಮೇಲೋಗರ ನೆನಪಾಯ್ತು.’

ಅರವಿಂದರ ಪ್ರತಿಕ್ರಿಯೆಯಲ್ಲಿ ಆ ಹಾಸ್ಯಪ್ರಸಂಗದ ಜತೆಜತೆಗೇ ಬಹುಶಃ ನನ್ನ ಪ್ರಶ್ನೆಗೆ ಉತ್ತರವೂ ಇತ್ತು. ಏನೆಂದರೆ ಅನ್ನಶುದ್ಧಿಯೇ ಆಡುಮಾತಿನಲ್ಲಿ ಅನ್ಶುದ್ಧಿ ಆಗಿ ಕವಯಿತ್ರಿ ತನ್ನ ಕವಿತೆಯಲ್ಲಿ ಅದನ್ನು ಅನಿಶುದ್ಧಿ ಎಂದು ಬರೆದಿರಬಹುದು. ಇರಲಿ, ತೊಂದರೆಯೇನಿಲ್ಲ. ಅಷ್ಟರಲ್ಲಿ ಅಭಿರುಚಿಯ ಇನ್ನೊಬ್ಬ ಸದಸ್ಯ ರಮಾಕಾಂತ್ ಒಂದು ಕ್ವಿಕ್‌ವಿಟ್ ಸೇರಿಸಿದರು, ‘ಅಖಿಲಾ ಅಂತ ಒಬ್ಬಳಿದ್ದಿದ್ರೆ ಅಕ್ಕಿ ಇಲ್ಲ ಅಂತನೂ ಕೇಳಿಸುತ್ತಿತ್ತು!’ ಎಂದು.
ಕ್ರಿಯೇಟಿವಿಟಿ ಅಂದರೆ ಹಾಗೆಯೇ. ಅವರು ಅಕ್ಕಿ ಇಲ್ಲ ಎಂದಾಗ ನನಗೆ ‘ಉಪ್ಪಿಲ್ಲ ಮೆಣಸಿಲ್ಲ ತರಕಾರಿ ಏನಿಲ್ಲ… ಏನ್ಮಾಡಲೀ ನಾನು ಏನ್ಮಾಡಲೀ ಹೇಳಮ್ಮ ಏನ್ಮಾಡಲಿ… ಸುತ್ತೂರ ಸಿಂಗಾರಿ ಸುರಸುಂದರೀ…’ ರಮೇಶ ಭಟ್ ಪರಮೇಶಿ ಪ್ರೇಮಪ್ರಸಂಗ ನೆನಪಾಯಿತು. ಆ ಹಾಡನ್ನು ಉಲ್ಲೇಖಿಸಿ ಒಂದು ಸ್ಮೈಲಿ ಇಮೋಜಿ ಹಾಕಿದೆ.

ಅಲ್ಲಿಗೆ ಆ ವಿಚಾರವಿನಿಮಯ ಮುಗಿಯಿತು. ಆದರೆ ಅದೇ ಹೇಳಿದ್ನಲ್ಲಾ ಅಲ್ಲೊಂದು ಹೊಸ ಹೊಳಹು ಮೂಡಿತು ಅಂತ? ಹೀಗೆ ವ್ಯಕ್ತಿಗಳ ಹೆಸರುಗಳಿಂದ ಅಂದರೆ ಪ್ರಾಪರ್ ನೌನ್ ಅಂಕಿತ ನಾಮಗಳಿಂದ ಆಗುವ ಪದವಿನೋದಗಳನ್ನೇ ಪೋಣಿಸಿ ಒಂದು ತಿಳಿರುತೋರಣ ಕಟ್ಟಬಹುದು ಎಂಬ ಆಲೋಚನೆ ಬಂತು. ಆಗ ಮೊದಲಿಗೆ ನೆನಪಾದದ್ದೇ ಆರಾಮಿತ್ತ್ರಾ ಪ್ರಸಂಗ. ವರ್ಷಗಳ ಹಿಂದೆ ಇದನ್ನು ನನಗೆ ಹೇಳಿದವರು ನನ್ನೊಬ್ಬ ಹಿರಿಯ ಹಿತೈಷಿ, ಇಂಗ್ಲೇಂಡ್‌ನಲ್ಲಿರುವ ಡಾ. ಶ್ರೀವತ್ಸ ದೇಸಾಯಿ. ಅವರು ಮೂಲತಃ ಉತ್ತರ ಕರ್ನಾಟಕದವರು. ಇದು ಬಹುಶಃ ಅವರ ಸ್ವಂತ ಅನುಭವದ ಹಾಸ್ಯ ಪ್ರಸಂಗ. ಖ್ಯಾತ ನಗೆಸಾಹಿತಿ, ವಿದ್ವಾಂಸ ಪ್ರೊ. ಅ. ರಾ. ಮಿತ್ರರನ್ನು ಒಮ್ಮೆ ಇಂಗ್ಲೆಂಡ್‌ಗೆ ಅಲ್ಲಿನ ಕನ್ನಡ ಕೂಟದಲ್ಲಿ ಹಾಸ್ಯಭಾಷಣಕ್ಕೆಂದು ಕರೆದಿದ್ದರಂತೆ. ಅವರ ವಸತಿ ವ್ಯವಸ್ಥೆಯನ್ನೆಲ್ಲ ನೋಡಿಕೊಂಡವರು ಡಾ. ದೇಸಾಯಿ.

‘ನಿಮಗೆ ಮಲಗಲಿಕ್ಕೆ ವ್ಯವಸ್ಥೆಯೆಲ್ಲ ಸರಿಯಾಯ್ತೇ? ಚೆನ್ನಾಗಿ ನಿದ್ದೆ ಬಂತೇ?’ ಎಂದು ಶಿಷ್ಟಾಚಾರ-ಸೌಹಾರ್ದ-ಆತ್ಮೀಯತೆಯ ಧಾಟಿಯಲ್ಲಿ ಅತಿಥಿಯನ್ನು ವಿಚಾರಿಸುವುದಿರುತ್ತದಲ್ಲ, ದೇಸಾಯಿಯವರು ‘ರಾತ್ರಿ ಆರಾಮಿತಾ?’ ಎಂದು ವಿಚಾರಿಸಿದರಂತೆ. ‘ರಾತ್ರಿಯಲ್ಲಷ್ಟೇ ಅಲ್ಲ ನಾನು ಹಗಲಿನಲ್ಲೂ ಅ.ರಾ.ಮಿತ್ರನೇ!’ ಎಂದು ನಸುನಗುತ್ತ ಥಟ್ಟನೆ ಉತ್ತರಿಸಿದರಂತೆ ಅ.ರಾ.ಮಿತ್ರ. ಎಂಥ ಪ್ರತ್ಯುತ್ಪನ್ನಮತಿ! ತನ್ನದೇ ಹೆಸರನ್ನು ಬಳಸಿ
ಎಂಥ ಪದವಿನೋದ! ಅಭಿರುಚಿ ಗ್ರೂಪಿನಲ್ಲಿ ನಾನಿದನ್ನು ಹಂಚಿಕೊಂಡಾಗ ಎಲ್ಲರೂ ಆನಂದಿಸಿದರು.

ಆಫ್‌ಕೋರ್ಸ್, ಅಲ್ಲಿರುವವರೆಲ್ಲ ಸದಭಿರುಚಿಯ ಸಜ್ಜನರೇ. ಅಷ್ಟುಹೊತ್ತಿಗೆ ಅರವಿಂದರು ಇನ್ನೊಂದು ಪ್ರಸಂಗವನ್ನು ನೆನಪಿಸಿಕೊಂಡು  ದಾಖಲಿಸಿದರು. ‘ಕನ್ನಡ, ತಮಿಳು, ತೆಲುಗು ಈ ಮೂರೂ ಭಾಷೆಗಳಲ್ಲಿ ಒಂದು ಸಿನಿಮಾ ಮಾಡಲು ಹೊರಟ ನಿರ್ಮಾಪಕರು ‘ಈ ಕತೆಗೆ
ಕನ್ನಡದಲ್ಲಿ ನಾಯಕನಾಗಿ ರಾಜ್‌ಕುಮಾರ್ ಇರಲಿ, ತಮಿಳಲ್ಲಿ ಶಿವಾಜಿ ಆಗಬಹುದು, ತೆಲುಗಲ್ಲಿ ಅಕ್ಕಿ ನೆನಿ ಹಾಕ್ಕೊಂಡ್ರೆ ಸಿನಿಮಾ ಹಿಟ್ ಆಗುತ್ತೆ’ ಅಂದರಂತೆ! ಪಕ್ಕದಲ್ಲಿದ್ದವರು ಕಿಸಕ್ ಅಂತ ನಕ್ಕಿದ್ದರಂತೆ.

ಯಾಕೆ ಹೇಳಿ? ಅಕ್ಕಿನೇನಿ ನಾಗೇಶ್ವರ ರಾವ್ ಅಂತ ಪೂರ್ತಿ ಹೇಳದೆ, ಹೆಸರನ್ನು ಅರ್ಧ ಹೇಳಿ ಸಿನಿಮಾ ಹಿಟ್ಟಾಗಿಸಿದ್ದು ಜೋಕಾಗಿತ್ತು.’ ಅಲ್ವೇ ಮತ್ತೆ? ಅಕ್ಕಿ ನೆನಿ ಹಾಕ್ಕೊಂಡು ರುಬ್ಬಿದರೆ ದೋಸೆ ಹಿಟ್ಟಾಗಲೇಬೇಕಲ್ಲ? ಹಾಗೆಯೇ, ಸ್ಪೀಕಿಂಗ್ ಆಫ್ ಅಕ್ಕಿಹಿಟ್ಟು, ‘ನಮ್ಮ ದೇಶದ ಆಗಿನ ಪ್ರಧಾನಿಯ ಹೆಸರು
ಮರೆತುಹೋದರೂ, ಜಪಾನ್ ದೇಶದ ಆವತ್ತಿನ ಚಕ್ರವರ್ತಿ ಅಕಿಹಿಟೋ ಹೆಸರು ಇವತ್ತಿಗೂ ಮರೆತುಹೋಗಿಲ್ಲ!’ ಎಂದು ಕೂಡ ಅವರೇ ಸೇರಿಸಿದರು. ಅಂದಹಾಗೆ ಚಕ್ರವರ್ತಿಯ ಬಾಣಸಿಗರು ಕನ್ನಡದವರಾಗಿದ್ದರೆ ಅವರು ‘ಗೌರವಾನ್ವಿತ ಅಕಿಹಿಟೋ, ನಿಮಗೆ ಬ್ರೇಕ್‌ಫಾಸ್ಟಿಗೆ ರಾಗಿಹಿಟ್ಟೋ ಗೋಧಿ
ಹಿಟ್ಟೋ?’ ಎಂದು ಕೇಳಬಹುದು!

ಇಷ್ಟು ಸಂಭಾಷಣೆ ಆಗುವ ಹೊತ್ತಿಗೆ ಇದಕ್ಕೆ ಇನ್ನಷ್ಟು ಒಗ್ಗರಣೆ ಸೇರಿಸಿ ಅಂಕಣಬರಹವಾಗಿಸಿಯೇ ಸೈ ಎಂದು ನಿರ್ಧಾರ ಮಾಡಿದೆ. ‘ಗ್ರೂಪಿನಲ್ಲಿ ನಮ್ಮ ಕಾಡುಹರಟೆ ಬೇಡ, ನಿಮ್ಮ ಬಳಿ ಈ ರೀತಿಯ ಸರಕು ಇದ್ದರೆ ಅಥವಾ ಹೊಸದಾಗಿ ಹೊಳೆದರೆ ನನಗೆ ಕಳುಹಿಸಿಕೊಡಿ.’ ಎಂದು ಅರವಿಂದರಿಗೆ ಪ್ರತ್ಯೇಕ ಮೆಸೇಜು ಬರೆದೆ. ತಥಾಸ್ತು ಎಂದರು. ಅಂಕಣಬರಹಕ್ಕೊಂದು ಸೂಕ್ತವಾದ ಚಿತ್ರವೂ ಬೇಕಾಗುವುದರಿಂದ ವ್ಯಂಗ್ಯಚಿತ್ರಕಾರ ಸ್ನೇಹಿತ
ರಘುಪತಿ ಶೃಂಗೇರಿ ಅವರನ್ನು ಕೇಳಿದೆ. ಅವರೂ ಅಭಿರುಚಿ ಗ್ರೂಪಿನ ಸದಸ್ಯರೇ. ಈ ಎಲ್ಲ ಹೆಸರು ಪುರಾಣವನ್ನು ಅಲ್ಲಿ ಓದಿ ಆನಂದಿಸಿದವರೇ. ಆರಾಮಿತ್ತ್ರಾ ಪ್ರಸಂಗವನ್ನೇ ವ್ಯಂಗ್ಯಚಿತ್ರವಾಗಿಸುವೆ ಎಂದು ಕೂಡಲೇ ಒಪ್ಪಿಕೊಂಡರು.

ಮಾತ್ರವಲ್ಲ ರಾತ್ರಿ ಬೆಳಗಾಗುವುದರೊಳಗೆ ಒಳ್ಳೆಯದೊಂದು ಕಾರ್ಟೂನ್ ಬಿಡಿಸಿ ನನಗೆ ಕಳುಹಿಸಿದರು. ಹೀಗೆ, ಒಂದರ್ಥದಲ್ಲಿ ಈವತ್ತಿನ ಅಂಕಣವು ಮೂವರು ಮಸ್ಕೆಟೀರ್ ಗಳ ಜಾಯಿಂಟ್ ವೆಂಚರ್. ಓದಿ ಮುಗಿಸಿದಾಗ ಇದರಲ್ಲಿ ಉಲ್ಲೇಖಗೊಳ್ಳದ ಅಥವಾ ನಿಮ್ಮ ಅನುಭವದ ಬುತ್ತಿಯಲ್ಲಿರುವ ಈರೀತಿಯ ಪದವಿನೋದ ಸ್ವಾರಸ್ಯಕರ ಸಂಗತಿಗಳು(ಹೆಸರಿಗೆ ಸಂಬಂಧಪಟ್ಟವು ಮಾತ್ರ) ನೆನಪಾದರೆ ನೀವೂ ಧಾರಾಳವಾಗಿ ಬರೆದು ತಿಳಿಸಬಹುದು. ಹೆಸರಿನ ಪದವಿನೋದಗಳು ಕೆಲವು ಲೋಕೋಕ್ತಿ ಅಥವಾ ಫೋಕ್‌ಲೋರ್ ಆಗಿರುವಂಥವೂ ಇವೆ. ಅವು ಯಾರಿಗೆ ಮೊದಲು ಹೊಳೆದವು ಎಂದು ಯಾರಿಗೂ ಗೊತ್ತಿಲ್ಲ.

ಉದಾಹರಣೆಗೆ ‘ವರದರಾಜ ಬಾಣಾವರ’ ಎಂಬ ಹೆಸರಿನ ಫಲಕವನ್ನು ‘ವಾರದ ರಜಾ ಭಾನುವಾರ’ ಎಂದು ಓದಿ ತಮಾಷೆ ಮಾಡುವುದು ಶಿಲಾಯುಗದಿಂದಲೂ ಕೇಳಿಬಂದಿರುವ ಜೋಕ್. ‘ಪ್ರೊ. ಹುಚ್ಚೂರಾಯ’ ಎಂದು ಮನೆಗೋಡೆಗೆ ನಾಮಫಲಕ ಇದ್ದದ್ದು, ಎಲ್ಲರೂ ತಮಾಷೆ
ಮಾಡತೊಡಗಿದರೆಂದು ಗೊತ್ತಾಗಿ ಹುಚ್ಚೂರಾಯರು ಅದನ್ನು ‘ಪ್ರೊ. ಎಚ್. ರಾಯ’ ಎಂದು ಬದಲಾಯಿಸಿದ್ದು, ಆಮೇಲೆ ಜನರು ‘ಹುಚ್ಚೂರಾಯರ ಹುಚ್ಚು ಈಗ ಹೆಚ್ಚಾಗಿದೆ’ ಎಂದು ಆಡಿಕೊಳ್ಳತೊಡಗಿದ್ದು… ಇದೂ ಜನಜನಿತ ವಿನೋದ.

ಕಲ್ಪವೃಕ್ಷ ಚಿತ್ರಕ್ಕಾಗಿ ಮನ್ನಾಡೇ ಹಾಡಿದ ಕನ್ನಡ ಚಿತ್ರಗೀತೆ ‘ಜಯತೇ ಜಯತೇ ಜಯತೇ ಸತ್ಯಮೇವ ಜಯತೇ…’ಯನ್ನು ಜಯತ್ತೆಯ ನಾಮಸ್ಮರಣ ನಾಲ್ಕು ಸಲ ಏಕೆಂದರೆ ಆಕೆ ಘಟವಾಣಿ ಹೆಂಗಸು, ಸತ್ಯಮಾವನ ಸ್ಮರಣೆ ಒಂದೇ ಸಲ ಏಕೆಂದರೆ ಅವರೊಬ್ಬ ಅಮಾಯಕ ಗಂಡಸು ಎಂದು ತಿಳಿಯಬೇಕು- ಇದು ನಾನು ತುಂಬ ಹಿಂದೆ ಮಯೂರ ಮಾಸಪತ್ರಿಕೆಯ ಬುತ್ತಿಚಿಗುರುವಿನಲ್ಲೋ ಅಂಗೈಯಲ್ಲಿ ಅರಮನೆಯಲ್ಲೋ ಓದಿ
ಇಷ್ಟಪಟ್ಟದ್ದು. ಇನ್ನೊಂದು ನನ್ನ ಫೇವರಿಟ್ ಅಂದರೆ, ಸುಬ್ಬಣ್ಣ- ಸು ತೆಗೆದರೆ ಬಣ್ಣ, ಬ ತೆಗೆದರೆ ಸುಣ್ಣ, ಣ ತೆಗೆದರೆ ಸುಬ್ಬ! ಎನ್ನುವ ಚಮತ್ಕಾರ. ಶಾಂತಾರಾಮ ಎಂಬ ಹೆಸರಿನಲ್ಲಿ ಶಾಂತಾ, ತಾರಾ, ರಾಮ, ಶಾಮ ನಾಲ್ಕು ಮಂದಿ ಅಡಗಿಕೊಂಡಿದ್ದಾರೆ ಅಂತ ಇನ್ನೊಂದು.

ಶಾಲೆ-ಕಾಲೇಜಲ್ಲಿ ತರಗತಿಯಲ್ಲಿ ಹಾಜರಿ ಕರೆಯುವಾಗ ಹೆಸರುಗಳ ವೈವಿಧ್ಯವು ವಿನೋದವಾಗುವುದಿದೆ. ನಾನು ಉಜಿರೆ ಕಾಲೇಜಲ್ಲಿ ಪಿಯುಸಿ ಓದುತ್ತಿದ್ದಾಗ ನಮ್ಮ ಕ್ಲಾಸಲ್ಲಿ ನಂದಾ ಮತ್ತು ನೀನಾ ಎಂಬ ಹುಡುಗಿಯರಿಬ್ಬರ ಹೆಸರು ಎಟೆಂಡೆನ್ಸ್ ರಿಜಿಸ್ಟರಲ್ಲಿ ಅನುಕ್ರಮವಾಗಿ ಇತ್ತು. ‘ನಂದಾ… ನೀನಾ…’ ಎಂದು ಫಾಸ್ಟಾಗಿ ಕರೆಯುವಾಗ ಯೆಸ್ ಸರ್ ಎನ್ನುವ ಬದಲಿಗೆ ‘ಹೌದು ನಾನೇ’ ಎನ್ನಿ ಎಂದಿದ್ದರು ನಮ್ಮ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ
ಮಹಾಬಲ ಭಟ್ಟರು. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುವಾಗ ಕೃಷ್ಣರಂಜನ್ ಎಂಬ ಸಹಪಾಠಿಯ ಹೆಸರನ್ನು ಲೆಕ್ಚರರ್ರು ‘ಕೃಷ್ಣರಾಜನ್’ ಎಂದೇ ಕರೆಯುತ್ತಿದ್ದರು.

‘ಇಟ್ಸ್ ನಾಟ್ ರಾಜನ್, ಇಟ್ಸ್ ರಂಜನ್. ಆರ್ ಎ ಎನ್ ಜೆ ಎ ಎನ್…’ ಎಂದು ಪ್ರತಿಸಲ ಆತ ಅವರನ್ನು ತಿದ್ದುತ್ತಿದ್ದನು. ಇನ್ನೊಬ್ಬ ಸಹಪಾಠಿ ರಾಜೇಶ ಶಿವಗೌಡ ಪಾಟೀಲ್. ನಮ್ಮ ಮ್ಯಾಥಮೆಟಿಕ್ಸ್ ಪ್ರೊಫೆಸರರು ಎಟೆಂಡೆನ್ಸ್ ಕರೆಯುವಾಗ ‘ರಾಜೇಶ್ ಶಿವನಗೌಡ ಪಾಟೀಲ್’ ಎಂದು ಕರೆಯೋರು. ಈತ ಪ್ರತಿಸಲವೂ ‘ಕ್ಯಾನ್ಸಲ್ ಎನ್ ಎ’ ಎನ್ನೋನು. ಅಂದರೆ ‘ಶಿವನಗೌಡ ಅಲ್ಲ ಶಿವಗೌಡ. ಎನ್ ಎ ಅಕ್ಷರಗಳೆರಡು ಬೇಡ’ ಎಂಬರ್ಥದಲ್ಲಿ. ಆಮೇಲೆ ಪಾಪ ಆ ಹುಡುಗನನ್ನು ನಾವೆಲ್ಲ ‘ಕ್ಯಾನ್ಸಲ್ ಎನ್ ಎ’ ಎಂದೇ ಕರೆಯಲಿಕ್ಕಾರಂಭಿಸಿದೆವು. ಮತ್ತೊಬ್ಬ ಸಹಪಾಠಿ ಯು.ಆರ್. ಸುಬ್ರಹ್ಮಣ್ಯ. ಆತನನ್ನು ಲೆಕ್ಚರರ್ರು ‘ಆರ್ ಯು ಸುಬ್ರಹ್ಮಣ್ಯ?’ ಎಂದು ಕೇಳಿದರೆ ಈತನದು ‘ಯು ಆರ್ ಸುಬ್ರಹ್ಮಣ್ಯ’ ಎಂದು ಉತ್ತರ.

ಈ ‘ಯು ಆರ್’ ಇನಿಷಿಯಲ್‌ಗಳ ತಮಾಷೆಯನ್ನು ನಾನೊಮ್ಮೆ ಪವನಜ ಅವರ ಮೇಲೆ ಪ್ರಯೋಗಿಸಿದ್ದೆ. ಅದೇನೋ ಅನಂತಮೂರ್ತಿಯವರ ಸಾಹಿತ್ಯ ವಿಚಾರಗಳ ಬಗ್ಗೆ ಚರ್ಚೆ ನಡೆದಿತ್ತು. ‘ಯು ಆರ್ ನಾಟ್ ಅನಂತಮೂರ್ತಿ; ಯು ಬಿ ಪವನಜ!’ ಎಂದು ನಾನು ಅವರಿಗೆ ಇಂಗ್ಲಿಷ್ ವಾಕ್ಯದ ರೀತಿಯಲ್ಲಿ ಹೇಳಿದ್ದೆ. ಪವನಜರ ಇನಿಷಿಯಲ್ಸ್ ಯು.ಬಿ ಆದ್ದರಿಂದ ಅಲ್ಲೊಂದು ಭಲೇ ಪನ್ ಆಗಿತ್ತು. ಇನಿಷಿಯಲ್‌ಗಳಿಂದ ಕೆಲವೊಮ್ಮೆ ಮುಜುಗರದ ಆಭಾಸಗಳೂ ಆಗುವುದಿದೆ. ಚರಣ್ ಎಂಬ ಹುಡುಗನಿಗೇನಾದರೂ ಡಿ ಅಂತ ಇನಿಷಿಯಲ್ ಇದ್ದರೆ, ಅದನ್ನವನು ಹೆಸರಿನ ಹಿಂದೆ ಹೇಳಿದರೆ ‘ಚರಂಡಿ’ ಎಂದು ಕೇಳಿಸುವುದು ಗ್ಯಾರಂಟಿ. ಅದೇರೀತಿ ಮೂರಕ್ಷರ ಹ್ರಸ್ವ ರೂಪಗಳೂ ಕೆಲವೊಮ್ಮೆ ವಿನೋದಮಯವಾಗುತ್ತವೆ.

ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ‘ಸುಭಗ’ ಆದರೆ ಪಿರಿಯಾಪಟ್ಟಣದ ಶಾಮರಾಯರ ಮಗ ಚಿನ್ನಯ್ಯ ‘ಪಿಶಾಚಿ’ ಆಗುತ್ತಾನೆ! ಮೂರಕ್ಷರ ಅಲ್ಲ, ಹೆಸರನ್ನು ಒಂದೇ ಅಕ್ಷರಕ್ಕೆ ಹ್ರಸ್ವಗೊಳಿಸುವ ಟ್ರೆಂಡ್ ಆರಂಭಿಸಿದ್ದು ಲಂಕೇಶ್. ಒಂದು ಕಾಲದಲ್ಲಿ ಅವರ ಪತ್ರಿಕೆಯಲ್ಲಿ ಬಂ(ಬಂಗಾರಪ್ಪ) ಮತ್ತು ಗುಂ(ಗುಂಡೂರಾವ್) ಪ್ರತಿ ಸಂಚಿಕೆಯಲ್ಲೂ ಎಂಬಂತೆ ಕಾಣಿಸಿಕೊಳ್ಳುತ್ತಿದ್ದರು. ನಮ್ಮೆಲ್ಲರ ನೆಚ್ಚಿನ ಹನಿಗವನಗಳ ರಾಜ ಡುಂಡಿರಾಜ್ ತನ್ನ ಹೆಸರನ್ನು ಕೆಲವೊಮ್ಮೆ ‘ಡುಂ’ ಎಂದಷ್ಟೇ ನಮೂದಿಸುತ್ತಾರೆ. ಒಮ್ಮೆ ಅವರದೊಂದು ಹನಿ-ಸಂಕಲನಕ್ಕೆ ಮುನ್ನುಡಿ ಬರೆಯುವ ಅಸೈನ್‌ಮೆಂಟನ್ನು ನನಗೆ ಕೊಡುವಾಗ ‘ಹಸ್ತಪ್ರತಿ ಅಚ್ಚಿಗೆ ರೆಡಿ|

ಬಾಕಿ ಇರುವುದು ನನ್ನ ಡುಂ ನುಡಿ ನಿಮ್ಮ ಪನ್ನುಡಿ| ಆದರೂ ಇಲ್ಲ ಗಡಿಬಿಡಿ| ಒಂದು ವಾರದೊಳಗೆ ಬರೆದುಕೊಡಿ’ ಎಂದು ಒಂದು ಹನಿಗವನದ ರೂಪದಲ್ಲೇ ಆರ್ಡರಿಸಿದ್ದರು. ಪದಗಳನ್ನು ಹೇಗೆಬೇಕಾದರೂ ತಿರುಚಬಲ್ಲ ಅವರು ಹೆಸರುಗಳನ್ನೂ ಕತ್ತರಿಸಿ ಕಟ್ಟಬಲ್ಲರು- ‘ಚಿನ್ನದ ಬಳೆ ಹೇಮಾಳಿಗೆ| ಮುತ್ತಿನ ಸರ ಪ್ರೇಮಾಳಿಗೆ| ರೇಷ್ಮೆ ಸೀರೆ ಸೀಮಾಳಿಗೆ| ಮಲ್ಲಿಗೆದಂಡೆ ಕುಸುಮಾಳಿಗೆ| ಈತನ ಪ್ರೀತಿಯ ಸೌಧಕ್ಕೆ| ಆಹಾ! ಎಷ್ಟೊಂದು ಮಾಳಿಗೆ!’ ರೀತಿಯಲ್ಲಿ. ಅಥವಾ, ಸೊಗಸಾದ ಪ್ರಾಸಕ್ಕೆ ಗ್ರಾಸವಾಗಿಸಬಲ್ಲರು- ‘ತಪ್ಪಾದ್ರೆ ಬರೀಬೇಕು ಹತ್ಸಲ; ಅಂತಾರೆ ನಂಮಿಸ್ಸು ವತ್ಸಲ’ ರೀತಿಯಲ್ಲಿ. ಮತ್ತು ಅವರ ಸಾರ್ವಕಾಲಿಕ ಉಪದೇಶವಾಕ್ಯ ‘ರಾವಣನ ಹೆಂಡತಿ ಮಂಡೋದರಿ; ಕನ್ನಡ ಪುಸ್ತಕ ಕೊಂಡೋದಿರಿ’ ರೀತಿಯಲ್ಲಿ.

ಏಕಾಕ್ಷರೀ ಹೆಸರುಗಳ ವಿನೋದ ಇನ್ನೊಂದು ನೆನಪಾಗುವುದು ನಾನೊಮ್ಮೆ ಸುಧಾದಲ್ಲಿ ಸುದ್ದಿಸ್ವಾರಸ್ಯ ಅಂಕಣದಲ್ಲಿ ಓದಿದ್ದು. ಒಂದು ಚೈನಿಸ್ ಯುವ ಜೋಡಿ. ಹುಡುಗನ ಹೆಸರು ಗೆ ಮತ್ತು ಹುಡುಗಿಯ ಹೆಸರು ಯು ಎಂದು. ಅವರಿಬ್ಬರದು ಗಾಢವಾದ ಪ್ರೇಮ ಅಂತೆ. ಸುದ್ದಿಸ್ವಾರಸ್ಯದಲ್ಲಿ ಅವರ ಪ್ರೇಮಕಥನವನ್ನು ಕೊನೆಗೊಳಿಸಿದ್ದು ‘ಗೆ ಯು ಯು ಗೆ ಸಂಭವಾಮಿ ಯುಗೇ ಯುಗೇ ಎಂದನು.’ ಎಂಬ ವಾಕ್ಯದಿಂದ.

ಗಾಢವಾಗಿ ಅಲ್ಲದಿದ್ದರೂ ಅಷ್ಟಿಷ್ಟು ಹುಡುಗಾಟದ ಪ್ರೇಮ ಕಾಲೇಜು ಕ್ಯಾಂಪಸ್‌ಗಳಲ್ಲಿ ನಮ್ಮ ಕಾಲದಲ್ಲೂ ಇತ್ತು. ಹುಡುಗಿಯರ ಹೆಸರು ಬರುವ ಹಾಡುಗಳನ್ನೇ ಬೇಕಂತಲೇ ಗುನುಗುನಿಸುವುದು. ‘ಓ ನನ್ನ ಚೇತನಾ ಆಗು ನೀ ಅನಿಕೇತನ…’ ಕುವೆಂಪು ಅವರ ಭಾವಗೀತೆ, ‘ಪ್ರೀತಿಯಲ್ಲಿ
ಇರೋ ಸುಖ ಗೊತ್ತೇ ಇರಲಿಲ್ಲ ಹೂಂ ಅಂತೀಯಾ ಊಹುಂ ಅಂತೀಯಾ’ ಅಂಜದ ಗಂಡು ಚಿತ್ರಗೀತೆ ನಮ್ಮ ಕ್ಲಾಸಿನ ಹುಡುಗರಿಗೆ ಫೇವರಿಟ್. ಕ್ಲಾಸಲ್ಲಿ ಚೇತನಾ ಮತ್ತು ಪ್ರೀತಿ ಹೆಸರಿನ ಹುಡುಗಿಯರಿದ್ದ ಒಂದೇ ಕಾರಣಕ್ಕೆ!

ಭಾರತಿ ಎಂಬ ಹೆಸರಿನ ಹುಡುಗಿಗೆ ಕಚ್ಚಿದ ಸೊಳ್ಳೆಗಳು ‘ಕಣಕಣದಲಿ ಭಾರತಿಯ ರಕ್ತ ನಮ್ಮದೂ…’ ವೃಂದಗಾನ ಮಾಡುತ್ತವೆಂಬ ಪನ್ ನಾನೇ ಹೊಸೆದಿದ್ದೆ.

ಕೊನೆಯಲ್ಲಿ ಪುಂಡಲೀಕ-ಕುಂಡಲೀಕ ಪುರಾಣವನ್ನು ಪ್ರಸ್ತಾವಿಸಿ ಈ ಹೆಸರು-ಹರಟೆಗೆ ಮುಕ್ತಾಯ. ಹತ್ತಾರು ವರ್ಷಗಳ ಹಿಂದೆ ನನಗಿದನ್ನು ಬರೆದು ಕಳುಹಿಸಿದವರು ಅನಿರುದ್ಧ ಕುಲಕರ್ಣಿ ಎಂಬುವವರು, ಉತ್ತರ ಕರ್ನಾಟಕದವರೇ. ಉತ್ತರ ಕರ್ನಾಟಕದಲ್ಲಿ ಗಂಡುಮಕ್ಕಳ ಹೆಸರನ್ನು ಕರೆಯುವಾಗ- ಬಸವರಾಜ ಇದ್ದವನು ‘ಬಸ್ಯಾ’, ಸಂತೋಷ ಎಂಬ ಹೆಸರಿನವನು ‘ಸಂತ್ಯಾ’, ಸಂಪನ್ನ ಎಂಬ ಹೆಸರಿನವನು ‘ಸಂಪ್ಯಾ’, ರಾಘವೇಂದ್ರ ಎಂಬ ಹೆಸರಿನವನು ರಾಗ್ಯಾ’, ಅನಿರುದ್ಧ- ಅನ್ಯಾ; ಪವನ್- ಪವ್ವ್ಯಾ ಅಂತೆಲ್ಲ ಆಗುವುದು ಸಹಜ.

ಉತ್ತರ ಕರ್ನಾಟಕದಲ್ಲೇ ಯಾವುದೋ ಒಂದು ಊರಿನಲ್ಲಿ ಪುಂಡಲೀಕ ಮತ್ತು ಕುಂಡಲೀಕ ಎಂಬ ಹೆಸರಿನ ಅಣ್ಣತಮ್ಮಂದಿರಿದ್ದರು. ಅವರ ಪ್ರಸಂಗವನ್ನು ಉತ್ತರ ಕರ್ನಾಟಕದ ಕನ್ನಡ ಶೈಲಿಯಲ್ಲೇ ಬರೆದರೆ ಸೊಗಸು. ಒಮ್ಮೆ ಪುಂಡಲೀಕ ಮತ್ತು ಕುಂಡಲೀಕ ಅವ್ವನ ಜತೆ ಮಠದಾಗ ಊಟಕ್ಕ ಕುಂತಿದ್ರು. ಪಾಯ್ಸ ಬಂತು. ಆಕಿ ಅಂದ್ಲು ನಮ್ಮ ಪುಂಡ್ಯಾಗ ಇನ್ನಷ್ಟು ಪಾಯ್ಸ ಹಾಕ್ರಿ. ಆಮ್ಯಾಲ ಸಾರು ಬಂತು. ಕುಂಡಲೀಕಗ ಸಾರು ಬೇಕಾಯ್ತು. ಅವ್ವಗ ಕಿವಿಯಲ್ಲಿ ಹೇಳಿದ. ಆಕಿ ಜೋರಂಗ ಹೇಳಿದ್ಲು- ನಮ್ಮ ಕುಂಡ್ಯಾಗ ಇನ್ನಷ್ಟು ಸಾರು ಹಾಕ್ರಿ!

 
Read E-Paper click here

error: Content is protected !!