Thursday, 19th September 2024

ದೇಹ ಪೋಷಣೆ, ದೇಹ ರಕ್ಷಣೆ ಸರಿ… ಆತ್ಮಪೋಷಣೆ, ಆತ್ಮರಕ್ಷಣೆ ?

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನನಗೆ ಒಮ್ಮೊಮ್ಮೆ ಈ ಕಂಪ್ಯೂಟರ್, ಲ್ಯಾಪ್‌ಟಾಪ್ ಗಳನ್ನು ಈ ಟ್ವಿಟರ್, ಫೇಸ್‌ಬುಕ್, ವಾಟ್ಸಪ್ ಗಳನ್ನು ನೋಡುತ್ತಿರುವಾಗ ಈ ಪಿಡಿಎಫ್, ಯುನಿಕೋಡ್ ಮಾಡುವುದು ನೋಡುತ್ತಿರುವಾಗ ಎಂಥ ಅದ್ಭುತ ಆವಿಷ್ಕಾರಗಳು ಇವೆಲ್ಲ ಎನಿಸುತ್ತಿರುತ್ತದೆ. ಸ್ಲೇಟು, ಬಳಪ, ಆಮೇಲೆ ಕಾಪಿ, ಪೆನ್ಸಿಲ್, ಆಮೇಲೆ ಮಸಿಯ
ಪೆನ್ನು, ಬಾಲ್‌ಪೆನ್ನು, ಲೇಖಕ್ ನೋಟ್‌ಬುಕ್‌ಗಳು ಮಾರ್ಕೆಟ್‌ಗೆ ಬಂದಾಗ, ಒಂದೇ ಒಂದು ಕೊಂಡು ತಂದಾಗ ಅದೇ ಸಂಜೆಯಾಗಿರುತ್ತಿತ್ತು. ಅದರ ಪೇಪರ್‌ನ ಒಂದುತರಹದ ವಾಸನೆಗೇ ರೋಮಾಂಚನವಾಗುತ್ತಿತ್ತು, ರಾತ್ರಿ ಕಳೆದು ಬೆಳಗಾದರೆ ಅದರ ಮೇಲೆ ಏನಾದರೂ ಬರೆಯಬೇಕು ಎಂಬ ಉಮೇದಿಗೆ ರಾತ್ರಿ ಬೇಗ ನಿದ್ರೆಯೇ ಬರುತ್ತಿರಲಿಲ್ಲ.

ಏಳನೆಯ ಕ್ಲಾಸಿಗೆ ಆರು ವಿಷಯಗಳಿಗೆ ನೂರು ಪೇಜಿನ ಆರು ನೋಟ್‌ಬುಕ್ಕುಗಳನ್ನು ಒಮ್ಮೆಲೆ ತಂದಾಗ ಓಹ್! ಅದೆಂಥಾ ಖುಷಿ. ಆರೂ ನೋಟುಬುಕ್ಕುಗಳನ್ನು ಸೇರಿಸಿ ಸ್ವಸ್ತಿಕ್ ಆಕಾರದಲ್ಲಿ ಅಂಗಡಿಯವನು ಕಟ್ಟಿದ್ದ ಪ್ಯಾಕಿಂಗ್‌ನ ಹುರಿಕೋನಿಯ (ಸಣಬು) ದಾರದ ಒಂದೊಂದೇ ನೋಟುಬುಕ್ಕಿನ ಒಂದೊಂದೇ ಹಾಳೆಗಳನ್ನು ತಿರುಗಿಸಿ, ತಿರುಗಿಸಿ ನೋಡುತ್ತಾ, ಮೂಲೆಯಲ್ಲಿ ಅಂಟಿಕೊಂಡಿದ್ದರೆ, ಮಗುವಿನ ಕಾಲಿಗೆ ಚುಚ್ಚಿಕೊಂಡಿರುವ ಮುಳ್ಳನ್ನು ಬಿಡಿಸುವಂತೆ ಬಿಡಿಸಿ,
ಕೈಯಿಂದ ಹಾಳೆಯನ್ನು ಸವರಿ ಸಮಮಾಡಿ, ಎಲ್ಲ ಹಾಳೆಗಳನ್ನೂ ಹೀಗೆ ಗಂಟು ಮುಕ್ತ, ಜಂಟಿ ಮುಕ್ತ ಮಾಡಿ, ಕೊನೆಗೆ ಮತ್ತೊಮ್ಮೆ, ಹೆಬ್ಬೆರಳಿನಿಂದ ಪರ್ರ್‌ರ್ರ್‌ರ್ರ್ ಎಂದು ಏಕಕಾಲಕ್ಕೆ ಸಮ ಮಾಡಿ ಆ ನೋಟುಬುಕ್ಕನ್ನು ಬದಿಗಿಟ್ಟು, ಇನ್ನೊಂದನ್ನು ತೆಗೆದುಕೊಳ್ಳುವದು, ಅದಕ್ಕೂ ಇಷ್ಟೇ ರಾಜೋಪಚಾರ ಮಾಡಿ, ಬರಮಾಡಿಕೊಳ್ಳುವ ಆ ಖುಷಿ ಈಗ ಟ್ಯಾಬ್, ಕಂಪ್ಯೂಟರ್ ಮಕ್ಕಳಿಗೆ ತಿಳಿದಿಲ್ಲವೆನಿಸುತ್ತದೆ.

ನಲ್ವತ್ತು ಪೇಜ್, ನೂರು ಪೇಜ್, ಎರಡುನೂರು ಪೇಜ್ ಇರುವ ಮೂರುವರ್ಗದ ನೋಟುಬುಕ್ಕುಗಳಿದ್ದವು. ಮಾರ್ಜಿನ್ ಬಿಟ್ಟರೆ ಅಷ್ಟು ಜಾಗ ವೇಸ್ಟ್ ಆಗುತ್ತದೆ
ಎಂದು, ಮಾರ್ಜಿನ್ ಬಿಡದೇ ಬರೆದು ಮಾಸ್ತರ್‌ರಿಂದ ಬೈಗಳು, ಛಡಿ ಏಟು ಅನುಭವಿಸಿದ್ದೂ ಉಂಟು. ನಮ್ಮಣ್ಣ ಬಾಲ್ಯದಿಂದಲೂ ಶ್ರೀಕೃಷ್ಣನ ಪರಮಭಕ್ತ, ಆತ ಆರೂ ನೋಟುಬುಕ್ಕುಗಳ ಮೊದಲ ಪೇಜಿನ ಮೇಲ್ಗಡೆಯಲ್ಲಿ ಶ್ರೀಕೃಷ್ಣಾಯ ನಮಃ ಎಂದು ಬರೆದಿಟ್ಟು ಮಲಗುತ್ತಿದ್ದ, ನನಗೆ ಆ ಧೈರ್ಯ ಬರದೇ ಹಾಗೇ ಬಿಟ್ಟು ಮಲಗಿದ್ದು ಉಂಟು. ಇಂಥ ಸಣ್ಣ ಸಣ್ಣ ಖುಷಿಗಳೇ, ಯೌವ್ವನಕ್ಕೆ, ವೃದ್ಧಾಪ್ಯಕ್ಕೆ ಮುದ ನೀಡುತ್ತವೆ ಎಂಬುದು ಈಗ ಅನುಭವಕ್ಕೆ ಬರುತ್ತಿವೆ.

ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹೇಳಿದರೆ, ಕೈಯಿಂದ ಬರೆಯುವುದಾ? ಓಹ್.. ಶಿಟ್, ಬೋರ್ ಎನ್ನುತ್ತಿದ್ದಾರೆ. ಅವರೀಗ ಬರೆಯುತ್ತಿಲ್ಲ, ಬೆರಳನಿಂದ ಬಟನ್‌ಗಳನ್ನು ಕುಟ್ಟುತ್ತಿದ್ದಾರೆ. ಕುಟ್ಟಿ ಹೊಡೆದು, ಜಜ್ಜಿ, ಒತ್ತಿ ಒಳಗಿನ ಅಕ್ಷರಗಳನ್ನು ಕರುಳು, ಹುಣ್ಣುಗಳನ್ನು ಹೊರ ತೆಗೆಯುತ್ತಿರುವ ಇಂದಿನ ಪೀಳಿಗೆಯಲ್ಲಿ? ಮೃದುವಾಗಿ ಮಗುವಿನ ಮೈ ನೇವರಿಸಿದಂತೆ, ಮಲಗಿದ್ದ ಮಗುವಿನ ಮುಂಗುರುಳಲ್ಲಿ ಬೆರಳಾಡಿಸಿ ಎಬ್ಬಿಸಿದಂತೆ ಮೆದುಳಿನಲ್ಲಿದ್ದ ಅಕ್ಷರಗಳನ್ನು  ಪೆನ್ನಿನ ಮೂಲಕ ಹಾಳೆಗಳ ಮೇಲೆ ಹೊರಹೊಮ್ಮಿಸಿ ಎಬ್ಬಿಸುತ್ತಿದ್ದ ನಮ್ಮಗಳ ಬರಹವೆಲ್ಲಿ? ನಮ್ಮದು ಅಕ್ಷರ ಪ್ರೀತಿ, ಈಗಿನವರದು ಅಕ್ಷರ ದ್ವೇಷ, ಕುಟ್ಟಿ, ಜಜ್ಜಿ ತೆಗೆಯುತ್ತಾರಲ್ಲವೇ? ಹೀಗಾಗಿ ಇಂದು ಕಂಪ್ಯೂಟರ್‌ನ ಎಲ್ಲ ಕಾಪಿಗಳೂ ಒಂದೇ ತರಹ.

ನಮ್ಮ ಬರಹಗಳು ಒಬ್ಬೊಬ್ಬರದು ಒಂದೊಂದು ತರಹ ಮುತ್ತು ಪೋಣಿಸಿದಂತೆ, ಮೊಗ್ಗು ಹೆಣೆದಂತೆಯಿಂದ ಹಿಡಿದು ಕಾಗಿಕಾಲು, ಗುಬ್ಬಿಕಾಲುವರೆಗೆ ವೈವಿಧ್ಯಮಯ. ನನ್ನ ಅಕ್ಷರಗಳು ಕಾಗಿಕಾಲು, ಗುಬ್ಬಿಕಾಲೇ “ಬ್ಯಾಡ್ ಹ್ಯಾಂಡ್ ರೈಟಿಂಗ್ ಇಸ್ ಎ ಸೈನ್ ಆಫ್ ಇಮ್-ರ-ಕ್ಟ್ ಎಜುಕೇಷನ್” ಎಂದಿದ್ದಾರೆ ಗಾಂಧೀಜಿ. ನಾವು ರ ಠ ಈ ಕ ದಿಂದ ಅಯ್ಯನವರ ಮಠದ ಶಾಲೆ, ಡಿಗ್ರಿಯ ಸರಕಾರಿ ಶಾಲೆಗಳಲ್ಲಿ ಕಲಿತವರು. ಒತ್ತು, ದೀರ್ಘ, ಕೊಂಬು, ಸುಳಿಗಳನ್ನು ಕರೆಕ್ಟ್ ಬರೆಯುತ್ತೇನಾಗಲಿ, ಮುತ್ತು ಕೊಡುವಂಥ ಲಿಪಿಕಾರನಲ್ಲ.

‘ಬರೆದಿದ್ದು ತಿಳಿತದಿಲ್ಲೋ ಸಾಕು, ಚೆಂದ ತಗೊಂಡು ಏನು ಮಾಡ್ತಿ?’ ಎಂಬ ಪಾರ್ಟಿ ನನ್ನದು. ಹೀಗೆ ಕೈ ಬರಹ, ಕಥೆ, ಕಾದಂಬರಿ ಓದುವುದು, ಪುರಾಣ, ಹರಿಕಥೆಗಳಿಗೆ ಹೋಗುವದು, ಸಿನಿಮಾಗಳಿಗೆ ಹೋಗುವುದೇ ಆಗಿನ ಕಾಲಕ್ಕೆ ಬಹಳ ಉಡಾಳ ಇದ್ದಾನ ಅನಿಸಿಕೊಳ್ಳೊ ಕಾಲ, ಅದು ಅರವತ್ತು, ಎಪ್ಪತ್ತರ ದಶಕದ್ದು. ಅದರಲ್ಲೂ ಸೆಕೆಂಡ್ ಶೋ ಸಿನಿಮಾಗೆ ಹೋಗುತ್ತಾನೆ ಎಂದರಂತೂ ಹುಡುಗ ಲಪುಟ ಇದ್ದಾನ ಅಂತಿದ್ದರು. (ಈ ಲಪೂಟಾ ಎಂದರೇನು? ಇದು
ಯಾವ ಭಾಷೆ ಎಂಬುದು ಇಂದಿಗೂ ನನಗೆ ಗೊತ್ತಿಲ್ಲ. ಮರಾಠಿ, ಹಿಂದಿ ಇರಬೇಕಿನಿಸುತ್ತದೆ). ಅದರಲ್ಲೂ ಈ ಸಾಫ್ಟ್ವೇರ್ ತಂತ್ರಜ್ಞಾನ ಬಂದ ಮೇಲಂತೂ ಯಾವುದೂ ಆಶ್ಚರ್ಯವಿಲ್ಲ, ಕೌತುಕವಿಲ್ಲ, ಭಯ, ಭಕ್ತಿ ಉಳಿದಿಲ್ಲ, ಹೊಸದೆಂಬುದೇ ಇಲ್ಲ, ಹೀಗಾದ್ದರಿಂದಲೇ ಏನು ಮಾಡಿದರೂ ಬಹುಬೇಗ ಬೋರ್ ಎನಿಸಿಬಿಡುತ್ತಿದೆ ಅಲ್ಲವೇ? ಆದರೆ ನನಗೆ ಮಾತ್ರ ಇಂದಿಗೂ, ಈ ಕ್ಷಣಕ್ಕೂ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆಗಳು ನಿತ್ಯನೂತನ ಎನಿಸುತ್ತಿವೆ. ಓದಿ ಹಳಸಾಗುವಂಥ ಕೃತಿಗಳಲ್ಲ ಅವು. ಅವುಗಳನ್ನು ಪ್ರತಿ ವರುಷ ಓದಬೇಕು, ಮತ್ತೆ ಮತ್ತೆ ಓದಬೇಕು.

ನಮ್ಮ ವಯಸ್ಸು, ಅನುಭವ, ಪರಿಸರ, ಸಂಪರ್ಕಗಳ ಮೇಲೆ ಹೊಸ ಹೊಸ ಹೊಳಹುಗಳನ್ನು ಕೊಡುವ ಗ್ರಂಥಗಳಿವು. ಬೇರೆ ಬೇರೆ ಲೇಖಕರು ಬರೆದ ಈ ಒಂದೇ ಗ್ರಂಥಗಳು ಲೇಖಕರ ವಿಭಿನ್ನ ದೃಷ್ಟಿಕೋನಗಳಿಂದ ನಮಗೂ ಓದಿನ, ಅಭಿಪ್ರಾಯಗಳ ವೈವಿಧ್ಯತೆಯನ್ನು ನೀಡುವ ಮೂಲಕ ಗ್ರಂಥ ಪ್ರೀತಿಯನ್ನು ಹೆಚ್ಚು ಮಾಡುತ್ತವೆ. ದಿ. ಬನ್ನಂಜೆ ಗೋವಿಂದಾಚಾರ್ಯ, ದಿ. ಭದ್ರಗಿರಿ ಅಚ್ಯುತದಾಸ್, ನಮ್ಮ ನಡುವೆಯೇ ಇರುವ ಶ್ರೀ ಕೆ.ಎಸ್.ನಾರಾಯಣಾಚಾರ್, ಶ್ರೀ ಗ.ನಾ.ಭಟ್, ಶ್ರೀ ಕಬ್ಬಿನಾಲೆ ವಸಂತ ಭಾರಧ್ವಾಜರು, ಶ್ರೀ ಅರಳು ಮಲ್ಲಿಗೆ ಪಾರ್ಥಸಾರಥಿಯವರು, ಶ್ರೀ ಹಯವದನ ಪುರಾಣಿಕರು, ಶ್ರೀ ಶತಾವಧಾನಿ ಗಣೇಶರು ಪುರಾಣ, ಕಾವ್ಯ, ಕಗ್ಗಗಳ ಮೇಲೆ ಬರೆದಿರುವ ಪುಸ್ತಕಗಳು ನಮ್ಮನ್ನು ಸನ್ಮಾರ್ಗಕ್ಕೆ ಹಚ್ಚುತ್ತವೆ. ಇಂದು ಸಾವಿರಾರು ರುಪಾಯಿ ಕೊಟ್ಟು ಇಂಟರ್‌ನ್ಯಾಷನಲ್ ಟ್ರೇನರ‍್ಸ್‌ ಗಳನ್ನು ವಿಮಾನಗಳಲ್ಲಿ ಕರೆಸಿ, ಎ.ಸಿ ಹಾಲ್‌ನಲ್ಲಿ ಇಡೀ ದಿನ ತರಬೇತಿ ಏರ್ಪಡಿಸಿ, ತರಬೇತಿಯಲ್ಲಿ ಸ್ನೇಹ ಗಳಿಕೆ, ಬಂಧುತ್ವ, ನಾಯಕತ್ವ, ವ್ಯವಹಾರ ಚತುರತೆ, ಶಿಸ್ತು, ಸಮಯ ಪಾಲನೆ, ಏಕಾಗ್ರತೆಗಳನ್ನು ಹೇಳಿಕೊಟ್ಟ ಆ ಟ್ರೇನರ್ ಜತೆಗೇ ಕುಡಿದು ಕುಪ್ಪಳಿಸಿ ಲೇಟಾಗಿ ಮಲಗಿ ಬೆಳಗ್ಗೆ ಬಂದ ಟ್ರೇನರ್‌ಗಳಿಗೆ ವಿಮಾನ ತಪ್ಪಿಸಿ, ನೀವು ಹ್ಯಾಂಗೋವರ್‌ಗೆ ಆಫೀಸ್ ತಪ್ಪಿಸಿ, ಇಡೀ ದಿನ ನಿನ್ನೆ ಕಲಿತಿದ್ದನ್ನೆಲ್ಲ ಮರೆಯುವುದಕ್ಕಿಂತ, ನೂರು, ನೂರಾ ಐವತ್ತು ರುಪಾಯಿಗಳಿಗೆ ನಾನು ಮೇಲೆ ಬರೆದ ಮಹನೀಯರ ಪುಸ್ತಕ ಖರೀದಿಸಿ ಓದಿದರೆ, ನೀವು ನಿಜವಾದ ತರಬೇತಿಯನ್ನು ಪಡೆಯುತ್ತೀರಿ ಇದು ಶತಸಿದ್ಧ, ನನ್ನ ಅನುಭವ ಕೂಡಾ.

ನಮ್ಮ ಪುರಾಣ, ಇತಿಹಾಸಗಳಲ್ಲಿ, ಪುರಾಣಗಳು ಆದರ್ಶವನ್ನೂ, ಇತಿಹಾಸಗಳು ಅದರ ಪ್ರಾತ್ಯಕ್ಷತೆಗಳನ್ನೂ ಹೇಳುವುದು. ಇದನ್ನು ಸ್ಥೂಲವಾಗಿ ಹೇಳಬಹು ದಾದರೆ ಒಂದು ಕಲ್ಪನೆ, ಇನ್ನೊಂದು ವ್ಯವಹಾರ. ಒಮ್ಮೆ ಕಲ್ಪನೆ ಮತ್ತು ವ್ಯವಹಾರ ಇವು ಎರಡೂ ಬ್ರಹ್ಮ ದೇವರ ಬಳಿಗೆ ಬಂದವು. ನಾನು ಸದಾ ಆಕಾಶದಲ್ಲೇ ಸಂಚರಿಸುವೆ, ನಾನೇ ಹೆಚ್ಚಿನವನು ಎಂದು ಕಲ್ಪನೆ ಹೇಳಿತು. ಅದಕ್ಕೆ ವ್ಯವಹಾರವು ನಾನು ಸದಾ ಭೂಮಿಯಲ್ಲಿ ಜನರ ಜತೆಗೆ ಇರುವವ, ಜನಪ್ರೀತ, ಜನರಿಗೆ ಆಪ್ತ ಸಹಾಯಕ, ನಾನೇ ಹೆಚ್ಚಿನವನು ಎಂದು ವಾದಿಸಿತು.

ಬ್ರಹ್ಮ ದೇವ ಈ ಇಬ್ಬರಿಗೂ ಒಂದು ಕೆಲಸ ಹೇಳಿದ. ‘ಎಲೈ ಆಕಾಶದಲ್ಲಿರುವ ಕಲ್ಪನೆಯೇ ನೀನು ಭೂಮಿಯನ್ನು ಮುಟ್ಟಿದರೆ ನೀನು ಶ್ರೇಷ್ಠ, ಎಲೈ ವ್ಯವಹಾರವೇ ನೀನು ಆಕಾಶವನ್ನು ಮುಟ್ಟಿ ತೋರಿಸು’ ಎಂದ. ಎರಡೂ ಎಷ್ಟು ಪ್ರಯತ್ನಿಸಿದರೂ ಮಾಡಲು ಸಾಧ್ಯವಾಗಲೇ ಇಲ್ಲ. ಆಗ ಕಲ್ಪನೆ, ವ್ಯವಹಾರಗಳು ಖಿನ್ನವಾಗಿ ಇಲ್ಲ, ನಮಗೆ ಸೇರಲಾಗುವುದಿಲ್ಲ ಎಂದು ಅಳುಮೋರೆ ಮಾಡಿದಾಗ ಬ್ರಹ್ಮದೇವ ಹೇಳಿದ. ‘ನಿನಗೆ ಕೆಳಗಿಳಿಯಲು ಬರುವುದಿಲ್ಲ, ಭೂಮಿಯೇ ನಿನಗೆ ಮೇಲೆ ಹೋಗಲು ಬರುವುದಿಲ್ಲ. ಆದರೆ, ನೀವಿಬ್ಬರೂ ಕೈಗಳನ್ನು ಚಾಚಿ ಕೈ, ಕೈ ಮಿಲಾಯಿಸಬಹುದು, ಆಕಾಶದಲ್ಲಿರುವ ಕಲ್ಪನೆ ವ್ಯವಹಾರದೆಡೆಗೆ ಕೈ ಚಾಚಬೇಕು, ಭೂಮಿಯ
ವ್ಯವಹಾರವು ಆಕಾಶದ ಕಲ್ಪನೆಗೆ ಕೈ ಚಾಚಬೇಕು, ಇಬ್ಬರೂ ಸೇರಿದರೆ ಭೂಮಿ ಆಕಾಶಗಳನ್ನು ಒಂದು ಮಾಡಿದಂತಾಗುತ್ತದೆ. ಆಗ ಭೂಮಿ, ಆಕಾಶಗಳು ಒಂದನ್ನೊಂದು ಕೈಹಿಡಿದು ವಿಜ್ಞಾನ, ಕಲೆ, ವ್ಯವಹಾರ ಇವುಗಳು ಪರಸ್ಪರ ಸಹೋದರರು ಎಂಬುದನ್ನು ಜ್ಞಾಪಿಸಿದವು.

ತಾತ್ಪರ್ಯವಿಷ್ಟೆ, ಅನುಷ್ಟಾನವಿಲ್ಲದ ಆದರ್ಶವಾಗಲಿ, ಆದರ್ಶವಿಲ್ಲದ ಅನುಷ್ಟಾನವಾಗಲಿ ಏನನ್ನೂ ಸಾಧಿಸದು. ಇಂದಿನ ಎಲ್ಲ ವ್ಯವಹಾರಿಕ ವೈಜ್ಞಾನಿಕ ಪ್ರಗತಿಯ ಹಿಂದೆ ನಮ್ಮ ಪೂರ್ವಜರ ಕಲ್ಪನೆ (ಆದರ್ಶದ) ಬೀಜವಿದೆ ಎಂದು ಮರೆಯಬೇಡಿ. ಸತ್ಯ ಪ್ರಪಂಚದ ನಿತ್ಯ ನೂತನವಾದ ವಿಜ್ಞಾನವು ಒಂದು ಪ್ರವಾಹ. ಪ್ರವಾಹಕ್ಕೆ ಒಂದು ಮೂಲವಿರಲೇ ಬೇಕು. ಅದೇ ವೇದಾಂತ. ಆ ಮೂಲಕವೇ ವಿಜ್ಞಾನ ವೇದದ ಸುನಿಶ್ಚಿತಾರ್ಥ. ಪೂರ್ವಕಾಲದಲ್ಲಿ ಶರ‍್ಯಾತಿಯ ಮೊಮ್ಮಗನಾದ ರೇವತ ನೆಂಬುವವನು ಸಮುದ್ರದ ತಳದಲ್ಲಿ ಕುಶಸ್ಥಳಿ ಎಂಬ ನಗರವನ್ನೇ ನಿರ್ಮಾಣ ಮಾಡಿದನಂತೆ.

ರೇವತನ ಜಲದುರ್ಗವಾದ ಕುಶಸ್ಥಳಿಯನ್ನೇ ಮುಂದೆ ಶ್ರೀಕೃಷ್ಣ ಪರಮಾತ್ಮನು ವಿಸ್ತಾರಗೊಳಿಸಿ ಅದಕ್ಕೆ ದ್ವಾರಕೆ ಎಂದು ನಾಮಕರಣ ಮಾಡಿದನು.
ಪುರಾವೃತ್ತ ವೆನಿಸುವ ಪುರಾಣಗಳ ಅರ್ಥವನ್ನು ಸರಿಯಾಗಿ ಗ್ರಹಿಸಬೇಕಾದರೆ ವಿಜ್ಞಾನಿಯಾಗಬೇಕು. ಕಾವ್ಯಾತ್ಮಕವಾದ ಪುರಾಣ, ಸಾಹಿತ್ಯದಲ್ಲಿ ಹುದುಗಿರುವ ವೈಜ್ಞಾನಿಕಾಂಶವನ್ನು ಹುಡುಕಿ ತೆಗೆಯುವುದೇ ಒಂದು ದೊಡ್ಡ ವಿಜ್ಞಾನ. ಈ ಮಾಹಿತಿಯನ್ನು ದಿ. ಶ್ರೀ ಹರಿಕಥಾ ವಿದ್ವಾನ್ ಅಚ್ಯುತದಾಸರ ಶ್ರೀ ಹರಿಕಥಾಮೃತ ಸಿಂಧು ಶ್ರೀಕೃಷ್ಣ ಕಥಾವಾಹಿನಿ ಗ್ರಂಥದಿಂದ ತೆಗೆದುಕೊಂಡು ಓದುಗರ ಮುಂದಿಟ್ಟಿದ್ದೇನೆ. ಈಗ ಹೇಳಿ? ನಿಮ್ಮ ವಿಜ್ಞಾನಕ್ಕಿಂತಲೂ ರೋಚಕ ವಿಷಯಗಳು. ನಮ್ಮ ಪುರಾತತ್ವ ಪುರಾಣ, ವೇದಾಂತ ಗ್ರಂಥಗಳಲ್ಲಿ ತಾನೆ? ದೇಹ ಪೋಷಣೆಯ ಸರಕಾರಿ ಉದ್ಯೊಗಕ್ಕಾಗಿ ಶಾಲಾ ಕಾಲೇಜುಗಳ ಓದನ್ನು ಮಾರ್ಕ್ಗಾಗಿ ಓದಿ, ದೇಹ ಪೋಷಣೆಗೆ ಅನ್ನ, ದೇಹ ರಕ್ಷಣೆಗೆ ಮನೆ ಬೇಕು ಒಪ್ಪುತ್ತೇನೆ. ಆದರೆ ಈ ಎರಡೂ ಸಿಕ್ಕ ಮೇಲೆ? ಆ ಮನೆಯಲ್ಲೇ ಕುಳಿತು ಆತ್ಮಪೋಷಣೆಗೆ, ಪೂರ್ವಿಕರ ಸ್ಮರಣೆಗಾಗಿ ಇಂಥ ಗ್ರಂಥಗಳನ್ನು ಓದಿ ಮಕ್ಕಳಿಗೂ ಹೇಳಿ ಮುಂದಿನ ಪೀಳಿಗೆಯೂ ಇದನ್ನು ದಾಟಿಸಿರಿ ಎಂಬುದೇ ನನ್ನ ನಮ್ರ ವಿನಂತಿ.

Leave a Reply

Your email address will not be published. Required fields are marked *