ಶಿಶಿರ ಕಾಲ
shishirh@gmail.com
ಈಗೀಗ ಹೆಚ್ಚಿನ ವಿಸ್ತೃತ ಕುಟುಂಬಗಳು ಅವರದೇ ಆದ ವಾಟ್ಸಾಪ್ ಗ್ರೂಪ್ ಹೊಂದಿರುವುದು ಸಾಮಾನ್ಯ. ಬೇರೆ ಬೇರೆ ಊರುಗಳಲ್ಲಿ, ರಾಜ್ಯ- ದೇಶಗಳಲ್ಲಿ ರುವ ಎಲ್ಲರನ್ನು ಒಂದಾಗಿ ಬಂಧಿಸಿಡುವ ಸೂತ್ರವಾಗಿ ಈ ಗ್ರೂಪ್ ಗಳು ಕೆಲಸಮಾಡುತ್ತವೆ. ಮೊದಲೆಲ್ಲ ಹಬ್ಬ-ಮದುವೆ ಹೀಗೆ ಸಮಾರಂಭಗಳಲ್ಲಿ, ವರ್ಷಕ್ಕೊಮ್ಮೆ ಅಥವಾ ತಿಂಗಳುಗಳ ಅಂತರದಲ್ಲಿ ಜಾಗೃತವಾಗುತ್ತಿದ್ದ ಕೌಟುಂಬಿಕ ಭಾವ – ವಾಟ್ಸಾಪ್ ಗ್ರೂಪ್ ನಿಂದಾಗಿ ನಿತ್ಯ ಚಾಲ್ತಿಯಲ್ಲಿರುತ್ತದೆ. ಇದರಿಂದಾಗಿ ಕುಟುಂಬದ ಅನ್ಯ ಸದಸ್ಯರ ಬದುಕಿನಲ್ಲಿ ಏನೇನಾಗುತ್ತಿದೆ ಎಂಬ ಒಂದು ಹಂತದ ಅಪ್ಡೇಟ್ ಎಲ್ಲರಿಗೂ ಇರುತ್ತದೆ.
ಕುಟುಂಬದಂದು ಪಾರದರ್ಶಕತೆ ಬೆಳೆಯುತ್ತದೆ. ಇದು ಭದ್ರತೆಯ ಪ್ರಜ್ಞೆ ಕೊಡಬಲ್ಲದು – ಹುಟ್ಟುವ ಏಕಾಂತವನ್ನು ತಣಿಸಬಲ್ಲದು ಇತ್ಯಾದಿ. ಇದರಿಂ
ದಾಗಿ ತಿಂಗಳುಗಟ್ಟಲೆ ಮಾತನಾಡದಿದ್ದರೂ ಸಂಪರ್ಕ ತಪ್ಪಿಹೋಗುವುದಿಲ್ಲ. ಕುಟುಂಬ ಸದಸ್ಯರು ಅವರ ಬದುಕಿನ ಬೆಳವಣಿಗೆ, ಖರೀದಿ, ಹಬ್ಬದ ಆಚರಣೆ, ಹುಟ್ಟುಹಬ್ಬದ ಶುಭಾಶಯ ಹೀಗೆ ಏನೇನೋ ಹಂಚಿಕೊಳ್ಳುತ್ತಾರೆ. ಎಲ್ಲರೂ ಸಂಭ್ರಮಿಸುತ್ತಾರೆ. ಅನಾದರು ದಾಯಾದಿ ಮಾತ್ಸರ್ಯಗಳಿದ್ದರೆ ಈ ಗ್ರೂಪ್ಪುಗಳು ಅದನ್ನು ತಿಳಿಯಾಗಿಸಬಲ್ಲವು.
ಆಗೀಗ ಕುಟುಂಬ ಸದಸ್ಯರ ನಡುವೆ ಒಂದು ಚಿಕ್ಕ ಮಾತುಕತೆ – ಚಿಟ್ ಚ್ಯಾಟ್ ಶುರುವಾಗಿಬಿಡುತ್ತದೆ. ಅದು ಥಟ್ಟನೆ ನೆನಪಿನ ಬುತ್ತಿಯೊಂದನ್ನು ತೆರೆದಿರಿಸಿಬಿಡುತ್ತದೆ. ಒಂದೇ ಘಟನೆಯನ್ನು ಸದಸ್ಯರು ‘ಉಳಿದವರು ಕಂಡಂತೆ’ ಮಾದರಿ ಯಲ್ಲಿ ನೆನಪು ಮಾಡಿಕೊಳ್ಳುವುದು ಎಲ್ಲರಿಗೂ ಖುಷಿಯ
ಅನುಭವ ಕೊಡಬಲ್ಲದು. ನಾನು ಗ್ರಹಿಸಿದಂತೆ ತೀರಾ ನಾಚಿಕೆಯ ಸ್ವಭಾವದವರು ಇಲ್ಲಿ ತಮ್ಮನ್ನು ಕುಟುಂಬದೆದುರಿಗೆ ತೆರೆದುಕೊಳ್ಳುತ್ತಾರೆ. ಇನ್ನು ಕೆಲವರದ್ದು ಅಲ್ಲಿ ಗುಮ್ಮನಾಗುಸ್ಕ ನಂತಿರುತ್ತಾರೆ. ಅವರು ಒಂದೂ ಮೆಸೇಜ್ ಕಳಿಸುವುದಿಲ್ಲ.
ಏನಕ್ಕೂ ಪ್ರತಿಕ್ರಿಯಿಸುವುದಿಲ್ಲ. ಅವರು ಜೀವನದಲ್ಲಿ ಎಲ್ಲರಿಗಿಂತ ಬ್ಯುಸಿ. ಅಂದೆರಡು ಮಂದಿ ಕೆಲಸಕ್ಕೆ ಬಾರದ ವಿಡಿಯೋಗಳನ್ನು ಫಾರ್ವರ್ಡ್ ಮಾಡುವುದು, ಗುಡ್ ಮಾರ್ನಿಂಗ್, ಗುಡ್ ನೈಟ್ ಇತ್ಯಾದಿ ಸಂದೇಶಗಳನ್ನು ಕಳಿಸುವುದು ಇತ್ಯಾದಿ ಇದ್ದೇ ಇರುತ್ತದೆ. ಅವರನ್ನು ಸಹಿಸಿಕೊಂಡು ಬಿಟ್ಟರೆ ಕುಟುಂಬದ ವಾಟ್ಸ ಅಪ್ ಗ್ರೂಪ್ ಗಳು ಇಂದು ನಮಗಿರುವ ಒಂದೊಳ್ಳೆ ಅಭೂತಪೂರ್ವ ಸೌಲಭ್ಯ – ಅವಶ್ಯಕತೆ. ನನ್ನ ಚಿಕ್ಕಪ್ಪಂದಿರು, ಅಪ್ಪ, ಅತ್ತೆ ಮಾವಂದಿರೆಲ್ಲ ಸೇರಿ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿzರೆ. ಇತ್ತೀಚೆ ಚಿಕ್ಕಪ್ಪಗೆ ಇಲ್ಲಿ ಯಾವುದೊ ಒಂದು ಹಳೆಯ ಬಾಲ್ಯದ ನೆನಪನ್ನು
ಹಂಚಿಕೊಂಡರು. ತಕಳಿ ಶುರುವಾಯ್ತು, ಒಬ್ಬರಾದ ಮೇಲೆ ಇನ್ನೊಬ್ಬ ಹಿರಿಯರು ತಮ್ಮ ನೆನಪುಗಳನ್ನೂ ಹಂಚಿಕೊಳ್ಳಲು ಶುರುಮಾಡಿದರು.
ಅವರು ಮಾಡಿದ ಪುಂಡು ಕೆಲಸ, ಕೀಟಲೆ, ಆಡುತ್ತಿದ್ದ ಆಟಗಳು ಇವೆಲ್ಲ ಹಂಚಿಕೆಯಾದವು. ಅವನ್ನೆಲ್ಲ ಓದಿಕೊಂಡ ನಾವು ಚಿಕ್ಕವರೆಲ್ಲ ನಮ್ಮ ಬಾಲ್ಯವನ್ನು ಅವರ ಬಾಲ್ಯಕ್ಕೆ ಹೋಲಿಸಿಕೊಂಡೆವು. ಅವರ ಬಾಲ್ಯಕ್ಕೂ, ಮೂರು- ನಾಲ್ಕು ದಶಕದ ನಂತರದ ನಮ್ಮ ಬಾಲ್ಯಕ್ಕೂ ವ್ಯತ್ಯಾಸ ಅಜ-ಗಜ. ಅವರ ತಲೆಮಾರಿನ ಮಕ್ಕಳ ಆಟದಲ್ಲಿದ್ದ ಅಪಾಯದ ಸಾಧ್ಯತೆಯ ಅವಕಾಶ ಅವರದೇ ಮಕ್ಕಳಾದ ನಮ್ಮ ಬಾಲ್ಯದಲ್ಲಿ ಒಂದಂಶ ಇರಲಿಲ್ಲ. ಅದೇ ಸಮಯದಲ್ಲಿ ನಮ್ಮ ಮಕ್ಕಳ ಬಾಲ್ಯಕ್ಕೆ ಹೋಲಿಸಿಕೊಂಡರೆ ನಮ್ಮ ಬಾಲ್ಯವೇ ರೋಚಕವೆನಿಸುತ್ತದೆ, ಆದರೆ ನಮ್ಮ ತಂದೆ ತಾಯಂದಿರ ಬಾಲ್ಯಕ್ಕೆ ಹೋಲಿಸಿದರೆ ನಮ್ಮದು ಸಪ್ಪೆಯ ಬಾಲ್ಯ.
ಇಂದಿನ, ಅದರಲ್ಲಿಯೂ ಮಿಲೇನಿಯಲ್ ತಂದೆ ತಾಯಂದಿರ ಅತ್ಯಂತ ದೊಡ್ಡ ಗೊಂದಲವೆಂದರೆ ಮಕ್ಕಳಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು, ಎಷ್ಟು ರಿ ತೆಗೆದುಕೊಳ್ಳಬೇಕು ಎಂಬುದು. ಆಟವಾಡಲು ಒಬ್ಬನನ್ನೇ ಮೈದಾನದಲ್ಲಿ ಬಿಡಬೇಕಾ ಬೇಡವಾ? ಅಂಗಡಿಗೆ ಒಬ್ಬನನ್ನೇ ಕಳುಸುವುದಾ ಬೇಡವಾ? ಸ್ನೇಹಿತರ ಜೊತೆ ಪ್ರವಾಸಕ್ಕೆ ಕಳಿಸುವಾಗ, ಎಲ್ಲಿಯೋ ಸ್ವತಂತ್ರವಾಗಿ ಹೊರಗೆ ಬಿಡುವಾಗ ಈ ಪ್ರಶ್ನೆ ಎದುರಿಗೆ ಬಂದು ನಿಲ್ಲುತ್ತದೆ. ಇಂದಿನ ಪಾಲಕರಲ್ಲಿ
ಬಹುತೇಕರು over protective. ಇಂದಿನ ತಂದೆ-ತಾಯಿಯರ ಮೊದಲ ಆದ್ಯತೆಯೇ ಮಕ್ಕಳನ್ನು ರಕ್ಷಿಸಿಕೊಳ್ಳುವುದು. ಹಲವು ತಂದೆತಾಯಂದಿರ ಬದುಕಿನ ಬಹುತೇಕ ಭಾಗ ಮಕ್ಕಳ ಚಿಂತೆ, ಆರೈಕೆಯಲ್ಲಿಯೇ ಕಳೆದುಹೋಗುತ್ತಿರುತ್ತದೆ. ಒಟ್ಟಾರೆ ಇದರಿಂದಾಗಿ, ಇಂದು ಮನುಷ್ಯ ಬಾಲ್ಯದಿಂದ ಪ್ರೌಢಾ ವಸ್ಥೆಗೆ ಪ್ರವಹಿಸುವ ರೀತಿ ಸಂಪೂರ್ಣ ಬದಲಾಗಿದೆ. ಇದರ ಸುತ್ತಲಿನ ಕೆಲವು ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಸುಮ್ಮನೆ ಆದಿಮಾನವನ ಜೀವನ ಕ್ರಮವನ್ನು ಕಲ್ಪಿಸಿಕೊಳ್ಳಿ. ಅವನ ಮಕ್ಕಳು ಹೇಗಿರುತ್ತಿದ್ದರು, ಹೇಗೆ ಆಡಿಕೊಂಡು ಬೆಳೆಯುತ್ತಿದ್ದರು, ಇತ್ಯಾದಿಯನ್ನು ಕಣ್ಣೆದುರು ತಂದುಕೊಳ್ಳಿ. ಅವರೆಲ್ಲ ಗುಂಪಿನಲ್ಲಿ ವಾಸಿಸುತ್ತಿದುದರಿಂದ ಅಲ್ಲಿ ಎಲ್ಲ ವಯಸ್ಸಿನ ಮಕ್ಕಳಿರುತ್ತಿದ್ದರು. ಮಕ್ಕಳು ಬೇಟೆ, ಗಡ್ಡೆ-ಗೆಣಸು ತರುವುದು ಇತ್ಯಾದಿಯಲ್ಲಿ ತಂದೆ ತಾಯಂದಿರ ಜೊತೆಯಾದರೂ ಅವರೆಲ್ಲ ಬಹುತೇಕ ಸಮಯ ಕಳೆಯುತ್ತಿದ್ದುದು ಬಯಲಿನಲ್ಲಿ, ಮರಗಳ ಮಧ್ಯೆ ಆಟವಾಡಿಕೊಂಡು. ಬಹುಷಃ ಅಂದಿನ ಅಪ್ಪ ಅಮ್ಮಂದಿರು ಮಕ್ಕಳಿಗೆ ಇಂತಿಂಥದ್ದನ್ನು ತಿನ್ನಬೇಡಿ, ವಿಷ ಎಂದು ಗುರುತು ಮಾಡಿಕೊಡುತ್ತಿದ್ದುದನ್ನು
ಬಿಟ್ಟರೆ, ಉಳಿದ ಪಾಠಗಳನ್ನು ಮಕ್ಕಳೇ ಪ್ರಾಯೋಗಿಕವಾಗಿ ಮನೆಯಿಂದ ಹೊರಗೆ ಕಲಿಯುತ್ತಿದ್ದರು.
ಆ ಮಕ್ಕಳು ಬೆಳೆಯುತ್ತಿದ್ದುದು ಅವರಿಗಿಂತ ಚಿಕ್ಕ, ಮತ್ತು ದೊಡ್ಡ ಮಕ್ಕಳೊಂದಿಗೆ. ಮಕ್ಕಳನ್ನು ಅವರಷ್ಟಕ್ಕೆ ಅವರಾಗಿ, ಯಾವುದೇ ಆಟಿಕೆ ಸಾಮಾನನ್ನು ಕೊಡದೇ ಗುಂಪಿನಲ್ಲಿ ಬಿಟ್ಟಾಗ ಅವರ ಆಟೋಟಗಳನ್ನು ಗಮನಿಸಿ. ಆಗೆಲ್ಲ ಮಕ್ಕಳು ದೊಡ್ಡವರ ಅನುಕರಣೆಯ ಆಟಗಳನ್ನು ಆಡುವುದು. ಅಡುಗೆಯ ಆಟ, ಗಂಡ ಹೆಂಡತಿ, ಕುಟುಂಬ ಆಟಗಳು, ಕಳ್ಳ ಪೊಲೀಸ್, ಯುದ್ಧ ಇತ್ಯಾದಿ ಕಲ್ಪಿತ ಆಟಗಳು. ನಾವು ಆದಿನಮಾನವನ ಕಾಲದಿಂದಲೂ ಜೀವನ ಕಲೆ ಕಲಿಯುತ್ತಿದ್ದುದೇ ಹೀಗೆ. ತಂದೆ ತಾಯಂದಿರು ಮಾಡುತ್ತಿದ್ದುದರ ಚಿಕ್ಕ ಕಲ್ಪಿತ ಮಾಡೆಲ್‌ಗಳನ್ನು ಮಾಡಿ ಅದನ್ನು ಮೊದಲು ಮಾನಸಿಕವಾಗಿ ಅಳವಡಿಸಿ ಕೊಳ್ಳುವುದು, ಸಂದರ್ಭವನ್ನು ಕಲ್ಪಿಸಿಕೊಂಡು ಪಾತ್ರಾಭಿನಯಿಸುವುದು.
ಇದು ಮಕ್ಕಳಲ್ಲಿ ಸಹಜವಾಗಿ ಬೆಳೆದುಬರುತ್ತದೆ. ಅನಂತರದಲ್ಲಿ ದೊಡ್ಡವರಾಗುತ್ತಿದ್ದಂತೆ ಬದುಕಿನ ಮುಂದಿನ ತಯಾರಿಯ ಕಲ್ಪನೆ ಮಾಡಿಕೊಳ್ಳುತ್ತ, ಕಲಿಯುತ್ತ, ಬದುಕು ಸಾಗಿಸುವುದು. ದೊಡ್ಡ ಮಕ್ಕಳಿಂದ ಚಿಕ್ಕವರು ಕೌಶಲ್ಯಗಳನ್ನು ಕಲಿತರೆ, ತಮಗಿಂತ ಚಿಕ್ಕವರನ್ನು ನಿಭಾಯಿಸುವುದು ಹೇಗೆಂದು ದೊಡ್ಡ ಮಕ್ಕಳು ಕಲಿಯುವುದು. ಇದೆಲ್ಲವೂ ಕಲ್ಪಿತ ಆಟಗಳಿಂದ. ಹೀಗೊಂದು ಕಲಿಕೆಯ ಸರಪಳಿಯಿತ್ತು. ಅದೇ ಕಾರಣಕ್ಕೆ ನಿಮ್ಮ ಮಕ್ಕಳಿಗೆ ಯಾವತ್ತೂ ಅವರಿಗಿಂತ ದೊಡ್ಡ ಮಕ್ಕಳು ಪಾಲಕರಿಗಿಂತ ಜಾಸ್ತಿ ಇಷ್ಟವಾಗುವುದು. ಅಷ್ಟೂ ಕಾಲ ಅಪ್ಪ ಅಮ್ಮ ಯಾವತ್ತೂ ಮಕ್ಕಳ ಮೊದಲ ಗುರುವಾಗಿರಲಿಲ್ಲ. ಹಾಗಾಗಿಯೇ ಮಕ್ಕಳಿಗೆ ತಂದೆ ತಾಯಂದಿರ ಪಾಠ ರಗಳೆಯೆನಿಸುವುದು. ಏನೇ ಒಂದನ್ನು ಕ್ಲಾಸ್ ಮೇಟ, ಅಥವಾ ಅಕ್ಕ – ಅಣ್ಣಂದಿರು ಹೇಳಿದರೆ ಹೆಚ್ಚಾಗಿ ನಂಬುವುದು. ಇಂದಿನ ಮಕ್ಕಳು ಹೇಗೆ ಸ್ಪೈಡರ್ ಮ್ಯಾನ್, ಡ್ರಾಕುಲಾ, ಕಳ್ಳ ಪೊಲೀಸ್, ಛೋಟಾ ಭೀಮ್ ಹೀಗೆಲ್ಲ ಕಲ್ಪಿಸಿಕೊಂಡು ಆಡುವಂತೆ ಅಂದಿನ ಮಕ್ಕಳು ಬೇಟೆ, ಪ್ರಾಣಿಗಳ ದಾಳಿ, ಅಡಗಿಕೊಳ್ಳುವುದು, ಮರವೇರಿ ರಕ್ಷಿಸಿಕೊಳ್ಳುವುದು ಇಂಥದ್ದೇ ಕಲ್ಪನೆಯ ಆಟದ ಮೂಲಕ ಬದುಕಿಗೆ ತಯಾರಾಗು ತ್ತಿದ್ದರು.
ಈ ಇಂದಿನ ಕಾಲದ ಅಪ್ಪ ಅಮ್ಮಂದಿರ ‘ಪೇರೆಂಟಿಂಗ್’ ಶುರುವಾಗಿದ್ದು ತೀರಾ ಇತ್ತೀಚೆ. ಈಗೊಂದು ಮೂವತ್ತು ನಲವತ್ತು ವರ್ಷದಿಂದೀಚೆ. ಭಾರತ, ಚೀನಾ ಇ ಗುರುಕುಲ ವ್ಯವಸ್ಥೆ ಒಂದು ಕಾಲದಲ್ಲಿ ಶುರುವಾಯಿತು. ಬೇರೆ ಉಳಿದ ಕಡೆ ಅದೂ ಇರಲಿಲ್ಲ. ಮನೆ ತುಂಬಾ ಮಕ್ಕಳು – ಪ್ರಪಂಚವೇ ಗುರು, ಆಟವೇ ಕಲಿಕೆ. ಅಷ್ಟೇ ಅಲ್ಲ, ಈ ರೀತಿ ಮಕ್ಕಳಿಂದಲೇ ಮಕ್ಕಳು ಆಟವಾಡುತ್ತ ಕಲಿಯುವ ಶಿಕ್ಷಣ ಪದ್ಧತಿಗೆ ನಾವು ಆನುವಂಶಿಕವಾಗಿ ವಿಕಾಸನ ಹೊಂದಿದ್ದೇವೆ. ನಾವು ಆಡುವಾಗ ನಮ್ಮ ದೇಹದಲ್ಲಿ ಡೋಪಮೈನ್ ಬಿಡುಗಡೆಯಾಗುತ್ತದೆ. ಅದು ಖುಷಿ, ಉತ್ತೇಜನ, ಹುರುಪು ಕೊಡಬಲ್ಲದು. ಅಷ್ಟು ಆಂತರಿಕವಾಗಿ ನಾವು ಆಟಕ್ಕೆ ಒಗ್ಗಿಕೊಂಡಿದ್ದೇವೆ. ಅದರ ಉತ್ಕಟತೆ ದೇಹಸಹಜವಾಗಿದೆ. ವಿಕಸನ ಆಟಕ್ಕೇಕೆ ಅಷ್ಟು ಪ್ರಾಮುಖ್ಯ ಕೊಟ್ಟಿತು? ಏನೋ ಕಾರಣವಿರಲೇಬೇಕಲ್ಲ. ಅಲ್ಲಿಯೇ ಆಟಕ್ಕೆ ಮತ್ತು ಕಲಿಕೆಗೆ ಸಂಕಲನವಾಗುವುದು.
ಮಕ್ಕಳು ಗುಂಪಿನಲ್ಲಿ ಆಡುವಾಗ ಕಲಿಯುವ ಮೊದಲ ಜೀವನ ಕಲೆಯೆಂದರೆ ಸಂಧಾನದ ಮಾತುಕತೆ. ಯಾರು ಮೊದಲು ಬ್ಯಾಟ್ ಮಾಡಬೇಕು, ಯಾರು ಎಲ್ಲಿ ಫೀಲ್ಡ ಮಾಡಬೇಕು? ಯಾರು ಯಾವ ಪಾತ್ರ ವಹಿಸಬೇಕು? ರಾಣಿ ಯಾರಾಗಬೇಕು? ರಾಜ ಯಾರಾಗಬೇಕು? ತಮ್ಮ ಗುಂಪಿನ ಲೀಡರ್ ಯಾರು ಇತ್ಯಾದಿಯನ್ನು ನಿಭಾಯಿಸುವ ಸಂಧಾನಗಳ ಪರಿಚಯವಾಗುವುದು ಆಟದಲ್ಲಿ. ಇದರ ಜೊತೆಯಲ್ಲಿ ಸೋಲು ಗೆಲುವು, ಸಮಸ್ಯೆ ಬಗೆಹರಿಸುವ ಚಾತುರ್ಯ ಇತ್ಯಾದಿ ಆಯಿತಲ್ಲ. ಅದರ ಜೊತೆಯಲ್ಲಿ ತಮಗಿಂತ ಚಿಕ್ಕವರನ್ನು ನಿಭಾಯಿಸುವ ಮತ್ತು ದೊಡ್ಡವರಿಂದ ಹವಾ ಭಾವ, ನಡತೆ ಇತ್ಯಾದಿ
ಕಲಿಯುವುದು ನಡೆಯುತ್ತದೆ.
ಈಗೀಗ ಈ ಸ್ಥಾನವನ್ನು ಕೆಲವೊಮ್ಮೆ ಟಿವಿಯ ಯಾವುದೊ ಕ್ಯಾರೆಕ್ಟರ್ ತುಂಬಿ, ಅದೇ ಮೈಮೇಲೆ ಅಹವಾಹನೆಯಾದಂತೆ ಮಕ್ಕಳು ಆಡುವುದನ್ನು ಗಮನಿಸಿರಬಹುದು. ಇದೆಲ್ಲ ಇಂದಿನ ಪೇರೆಂಟಿಂಗ್ ಪಾಲಕರಿಗೆ ಸಹ್ಯವಾಗುವುದಿಲ್ಲ. ಯಾರೋ ಒಬ್ಬ ಅಯೋಗ್ಯನನ್ನು ತನ್ನ ರೋಲ್ ಮಾಡೆಲ್ ಮಾಡಿಕೊಂಡುಬಿಡುತ್ತಾನೋ ಎಂಬುದೇ ನಿರಂತರ ಆತಂಕ. ಅವನಲ್ಲಿ ಅದು ಸರಿಯಿಲ್ಲ, ಇವನಲ್ಲಿ ಇದು ಸರಿಯಿಲ್ಲ ಎಂದು ಅವರಿಂದ ಅಂತರ ವಾಗುವಂತೆ ನೋಡಿಕೊಳ್ಳುತ್ತೇವೆ. ದೊಡ್ಡ ಮಕ್ಕಳೂ ಅಷ್ಟೆ, ಅವರಿಗೆ ಚಿಕ್ಕವರನ್ನು ನಿಭಾಯಿಸುವ ಅವಕಾಶವೇ ಇಲ್ಲವಾಗುವಷ್ಟು ಪಾಲಕರು
ಮಕ್ಕಳ ಹಿಂದೆ ಬಿದ್ದಿರುತ್ತಾರೆ. ಈ ಸಂಧಾನ, ಕಲಿಕೆ ಎಂದೆಲ್ಲ ಹೇಳಿದೆನಲ್ಲ, ಇದೆಲ್ಲ ತಂದೆ ತಾಯಂದಿರ ಅನುಪಸ್ಥಿತಿಯಲ್ಲಿ ಮಾತ್ರ ನಡೆಯುವಂಥದ್ದು, ತಂದೆಯೋ, ತಾಯಿಯೋ ಅಲ್ಲಿಯೊ ಇದ್ದಾರೆ ಎಂದರೆ ಮಕ್ಕಳು ಸ್ವತಂತ್ರರಾಗಿರಲಾರರು. ಮಕ್ಕಳು ಸ್ವತಂತ್ರವಾಗಿ ಬೇರೆಯಲಾರರು.
ಅಮೆರಿಕಾದೆಡೆ ಒಂದು ಸಂಸ್ಥೆಯಿದೆ. ಹೆಸರು BigBrother Big-Sister. ತಂದೆ ತಾಯಿ ಸರಿಯಿಲ್ಲದ ಅಥವಾ ಅನಾಥ ಮಕ್ಕಳನ್ನು ಶಾಲೆ ಇಲ್ಲಿ ರಿಜಿಸ್ಟರ್ ಮಾಡಿಸುತ್ತದೆ. ಅಲ್ಲಿ ಹೈಸ್ಕೂಲ್ ಮಕ್ಕಳು, ಡಿಗ್ರಿ ಮಕ್ಕಳು ಸ್ವಯಂ ಸೇವಕರಾಗಿ ನಮೂದಿಸಿಕೊಳ್ಳುತ್ತಾರೆ. ಮಕ್ಕಳನ್ನು ಈ ದೊಡ್ಡ ಮಕ್ಕಳ
ಜೊತೆಯಾಗಿಸಲಾಗುತ್ತದೆ. ಇದೆಲ್ಲ ಸಾಕಷ್ಟು ಹಿನ್ನೆಲೆಯನ್ನೆಲ್ಲ ಪ್ರಮಾಣೀಕರಿಸಿದ ನಂತರವೇ ನಡೆಯುವುದು. ಈ ದೊಡ್ಡ ಮಕ್ಕಳು ಆ ನಿರ್ಗತಿಕ ಮಕ್ಕಳ ಸಲಹೆಗಾರರಾಗುತ್ತಾರೆ.
ಅವರನ್ನು ಕಾಫಿ ಶಾಪ್, ಸುತ್ತಾಡಲು ಕರೆದುಕೊಂಡು ಹೋಗುತ್ತಾರೆ. ಹೀಗೊಂದು ಸ್ನೇಹ, ಸಲಹೆಯ ಅನುಕರಣೀಯ ವ್ಯವಸ್ಥೆಯಿದೆ. ಇದರ ಸಹಾಯ ದಿಂದಲೇ ಅದೆಷ್ಟೋ ಮಕ್ಕಳು ಇಂದು ಯಶಸ್ವೀ ಶಿಕ್ಷಣ ಮುಗಿಸಿ ಬದುಕನ್ನು ಕಟ್ಟಿಕೊಂಡು ಕಷ್ಟದಿಂದ ಹೊರಬಂದಿದ್ದಾರೆ. ಮನುಷ್ಯ ಬಾಲ್ಯ ರೂಪಿತ ವಾಗಿರುವುದೇ ಸ್ವಾತಂತ್ರ್ಯದತ್ತ ಬೆಳೆಯಲು. ಹಾಗಾಗಿಯೇ ಮಕ್ಕಳಿಗೆ ತಂದೆ ತಾಯಿಯಿಂದ ತಪ್ಪಿಸಿಕೊಂಡು ಏನೋ ಒಂದು ಸ್ವತಂತ್ರ ಕೆಲಸ ಮಾಡಿ ಬಿಟ್ಟರೆ ಅಷ್ಟು ಖುಷಿಯಾಗುವುದು, ಸಂಭ್ರಮಿಸುವುದು. ಮಕ್ಕಳು ಅವರಷ್ಟಕ್ಕೆ ಅವರೇ, ಯಾರೇ ದೊಡ್ಡವರಿಲ್ಲದಿರುವಾಗ ಹೆಚ್ಚು ಸ್ಪಷ್ಟವಾಗಿ ಸಂವಹಿಸ ಬಲ್ಲರು. ಕೆಲವೊಮ್ಮೆ ನಮ್ಮ ಮಗು ಅಷ್ಟೆಲ್ಲ ಮಾತಾಡಿಬಿಟ್ಟನಾ ಎಂದು ತಂದೆ ತಾಯಿಗೆ ಆಶ್ಚರ್ಯವಾಗುವುದು ಗಮನಿಸಿರಬಹುದು.
ಸಾಮಾನ್ಯವಾಗಿ ಮಕ್ಕಳೇ ಸೇರಿದಾಗ ಅವರು ಸಾಮಾನ್ಯಕ್ಕಿಂತ ಮೂರು ಪಟ್ಟು ಜಾಸ್ತಿ ಮಾತನಾಡುತ್ತಾರೆ. ಅದರಲ್ಲಿಯೂ ಆಟವಾಡುವಾಗ ಅವರ
ಮಾತು, ಸಲಹೆ, ವಾದ ಇತ್ಯಾದಿ ಅತ್ಯಂತ ಸ್ಪಷ್ಟರೂಪದಲ್ಲಿ ರುತ್ತದೆ. ವಟವಟಗುಡುವ ಮಕ್ಕಳು ಶಾಲೆಯನಾಯಿತು ಎಂದರೆ ತಡವರಿಸುವುದು ಇದೆ. ನಿಮ್ಮ ಮಗಳು ಕ್ಲಾಸಿನಲ್ಲಿ ತುಂಬಾ ಮಾತನಾಡುತ್ತಾಳೆ ಎಂದರೆ ಪಾಲಕರಿಗೆ ನಂಬಲಿಕ್ಕೇ ಸಾಧ್ಯವಾಗುವುದಿಲ್ಲ! ಮಕ್ಕಳು ಗುಂಪಿನಲ್ಲಿ ಆಟವಾಡುವಾಗ
ಆಡುವುದಕ್ಕಿಂತ ಜಾಸ್ತಿ ಸಮಯ ಮಾತನಾಡುವುದರಲ್ಲಿ ಕಳೆಯುವುದನ್ನೂ ಗ್ರಹಿಸಿರಬಹುದು.
ಮಕ್ಕಳು ಮನೆಗೆ ಬರುವಾಗ ಸಂಪೂರ್ಣ ಸೋತುಹೋಗುವುದನ್ನು ನೋಡಬಹುದು. ಅಷ್ಟು ಪ್ರಮಾಣದ ಉತ್ಕಟತೆ ಆಟದಲ್ಲಿದೆ. ಏಕೆಂದರೆ ಅದುವೇ ಕಲಿಕೆ. ಅದುವೇ ಮನುಷ್ಯನನ್ನು ಮನುಷ್ಯನನ್ನಾಗಿಸಿ ಪ್ರತ್ಯೇಕಿಸಿದ್ದು. ಆಟವೆಂದರೆ ಅದು ಕೇವಲ ದೈಹಿಕವಲ್ಲ. ಅದು ಜಾಸ್ತಿ ಮಾನಸಿಕ, ಸಂವಹನ,
ಪರಿಸ್ಥಿತಿಯನ್ನು ಸ್ವತಂತ್ರವಾಗಿ ನಿಭಾಯಿಸುವುದು. ಸಿಂಹ, ಮಂಗಾ ಇತ್ಯಾದಿ ಅನೇಕ ಪ್ರಾಣಿಗಳು ಆಟವಾಡುತ್ತವೆ, ಆದರೆ ಅವುಗಳ ಆಟದಲ್ಲಿ Dsoft skill ಕಲಿಕೆಯ ಸಾಧ್ಯತೆಯಿಲ್ಲ. ಈಗೊಂದು ಮೂರ್ನಾಲ್ಕು ದಶಕದಲ್ಲಿ ಇದೆಲ್ಲ ಕಲಿಕೆಯ ಕ್ರಮ, ಸಾಧ್ಯತೆ ಎಲ್ಲವೂ ಬದಲಾಗಿ ಬಿಟ್ಟಿದೆ.
ಅದರಲ್ಲಿಯೂ ಇಂದಿನ ಪೇಟೆಯ ಬದುಕಿನಲ್ಲಿ ಆಟದ ಮೈದಾನ ಬಹುತೇಕ ಮಕ್ಕಳ ಐಷಾರಾಮ. ಈಜಲು ಕಲಿಯುವುದು ಎಂಬುದು ಉಳಿದೆಲ್ಲ ಮೋಜು – ಕಲಿಕೆಯಿಂದ ಪ್ರತ್ಯೇಕವಾಗಿ ಸ್ವಿಮ್ಮಿಂಗ್ ಪೂಲಿಗೆ ಬಂದು ಮುಟ್ಟಿದೆ. ನಮ್ಮ ಹಳ್ಳಿಗಳಲ್ಲಿ ಗುಂಪಿನಲ್ಲಿ ನಿತ್ಯ ಆಡುವ ವಾತಾವರಣ ವಿರಬ ಹುದು, ಆದರೆ ಪೇಟೆಯಲ್ಲಿ ರಸ್ತೆಯಲ್ಲಿ ಆಡಿದರೆ ವಾಹನ ಹೊಡೆದೀತು ಎಂದು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂರಿಸುವವರೇ ಜಾಸ್ತಿಯಾಗುತ್ತಿದ್ದಾರೆ.
ಹೊಡೆದ ಬಾಲು ಮರಕ್ಕೆ ತಾಗಿದರೆ ಎರಡು ರನ್, ಹಳ್ಳಕ್ಕೆ ಬಿದ್ದರೆ ಔಟ, ಒಂದು ಪುಟಕಿ ಔಟ್ ಇತ್ಯಾದಿ ತಂತ್ರಗಾರಿಕೆ, ಯೋಚನೆ, ಅಳವಡಿಕೆ, ಹೊಂದಾ ಣಿಕೆ ಇವೆಲ್ಲ ಇದರಿಂದ ತಪ್ಪುತ್ತಿದೆ. ಕಾರ್ಪೊರೇಟ್ ಜಗತ್ತಿಗೆ ಇತ್ತೀಚೆ ಸೇರುತ್ತಿರುವ ಯುವಕ ಯುವತಿಯರನ್ನು ಗಮನಿಸಿದಾಗ ಹಲವರಲ್ಲಿ ಇಂತಹ ಜೀವನ ಕೌಶಲ್ಯದ ಕೊರತೆ ಕಾಣಿಸುತ್ತದೆ. ಇದಕ್ಕೂ ಅದಕ್ಕೂ ನೇರ ಸಂಬಂಧವನ್ನು ಯಾರೂ ಪ್ರಮಾಣೀಕರಿಸಿಲ್ಲದಿರಬಹುದು. ಆದರೆ ದೃಗ್ಗೋಚರ ಅನುಭವ ಹೇಳುತ್ತಿದ್ದೇನೆ. ಅವರೆಲ್ಲರ ಬುದ್ಧಿಮತ್ತೆ, ಚಾಣಾಕ್ಷತನ, ಭಾಷೆ ಇವೆಲ್ಲವೂ ನಾವು ಕೆಲ್ಸಕ್ಕೆ ಸೇರುವಾಗಿನದಕ್ಕಿಂತ ಉತ್ತಮವಾಗಿದೆ. ಆದರೆ ಚರ್ಚೆ, ಸಂಧಾನ, ಸಂಹವನ ಇಂಥದ್ದರಲ್ಲಿ ಹಿಂದೆ ಬೀಳುವುದು ಗಮನಿಸಿದ್ದೇನೆ. ಅಂತಹ ಕೆಲವರು ಸಂಹವನ ಮುಖ್ಯವಲ್ಲ, ಬುದ್ಧಿವಂತಿಕೆ, ಸಮಸ್ಯೆಯನ್ನು ಹೇಗೆ ಪರಿಹರಿಸಿದೆ ಎಂಬುದು ಮುಖ್ಯ ಎಂದು ನಂಬಿಕೊಂಡಿರುತ್ತಾರೆ.
ಆದರೆ ಇಂದು ಯಾವುದೇ ಉದ್ಯೋಗವಿರಲಿ, ಒಂದು ಹಂತದ ನಂತರ ಅತ್ಯಾವಶ್ಯಕವಾಗುವುದು ಕೇವಲ ಜೀವನ ಕಲೆ, ಸಂವಹನ, ಸಂಧಾನ ಚಾತುರ್ಯತೆ. ಉದ್ಯೋಗದಲ್ಲಿ ಪದೋನ್ನತಿ ಪಡೆಯುವುದೇ ಜೀವನ ಸಾಫಲ್ಯವಲ್ಲ. ಆದರೆ ಉದ್ಯೋಗದ ನಿರಾಳತೆಗಂತೂ ಇದು ಅತ್ಯವಶ್ಯ. ಸಂವಹನ,
ಸಂಧಾನ ಇವೆರಡು ಬಾರದ ವ್ಯಕ್ತಿ ಇಂದಿನ ಸಮಾಜದಲ್ಲಿ ಒದ್ದಾಡಿ ಬಿಡುತ್ತಾನೆ.
ಇಂದಿನ ಇನ್ನೊಂದು ಸಮಸ್ಯೆಯೆಂದರೆ ತಂದೆ-ತಾಯಂದಿರು ಜಗತ್ತು ತಮ್ಮ ಊಹೆಗೂ ಮೀರಿದ ಸ್ಪರ್ಧಾತ್ಮಕ ಅಂದು ಭಾವಿಸಿಕೊಂಡಿರುವುದು. ಜೊತೆಯಲ್ಲಿ ಜಗತ್ತು ನಾವು ಊಹಿಸಿದಕ್ಕಿಂತ ಜಾಸ್ತಿ ಅಪಾಯಕಾರಿ ಎಂದು ನಂಬಿರುವುದು. ಒಂದಿನ ಮೈಕ್ರೋ ಕುಟುಂಬದಲ್ಲಿ ಒಂದೋ ಎರಡೋ ಮಕ್ಕಳಿದ್ದರೆ ಅವರ ಜೋಪಾನ ಸಹಜವಾಗಿ ಮಹತ್ವ ಪಡೆಯುತ್ತದೆ. ಮನೆ ತುಂಬಾ ಮಕ್ಕಳಿದ್ದ ಹಾಗಲ್ಲವಲ್ಲ. ಇದೆಲ್ಲದರಿಂದ ಮಕ್ಕಳ ಪಾಲನೆ ಹೆಚ್ಚು ಕಟ್ಟುನಿಟ್ಟು ಇದ್ದಷ್ಟು ಒಳ್ಳೆಯದು ಎಂಬಂತಾಗಿದೆ. ಕೆಲವು ಪಾಲಕರು ತಮ್ಮ ಮಕ್ಕಳು ನಾವು ಹೇಳಿದ್ದು ಮೀರುವುದಿಲ್ಲ ಎಂದು ಪ್ರದರ್ಶನಕ್ಕೆ ಇಳಿದು ಬಿಡುತ್ತಾರೆ.
ಹೌದು, ಜಗತ್ತು ಬದಲಾಗಿದೆ. ಇಂದು ಹಾಳಾಗಲಿಕ್ಕೆ ಇರುವ ಮಾರ್ಗಗಳೂ ಅಂಥವೇ ಇವೆ. ಆದರೆ ಆಟೋಟದಿಂದ ಪ್ರತ್ಯೇಕಿಸಿ, ಕೇವಲ ಓದಿಗೆ ಹಚ್ಚುವುದು, ಅತ್ಯಂತ ಕಾಳಜಿಯಲ್ಲಿ ನಿರಂತರ ಕಣ್ಣಿಟ್ಟಿರುವುದು, ಅಪಾಯದ ಸಾಧ್ಯತೆಯ ಕಾರಣ ಕೊಟ್ಟು ಬಂಧನದಲ್ಲಿಡುವುದು ಇವೆಲ್ಲ ಮಕ್ಕಳನ್ನು
ಪೂರ್ಣವಾಗಿ ಬೆಳೆಸುವುದಿಲ್ಲ. ಇದುವೇ ಅನ್ಯ ರೂಪಗಳನ್ನು ತಳೆದು ಖಿನ್ನತೆ ಇತ್ಯಾದಿ ರೂಪ ಪಡೆಯುವುದಿದೆ. ಮನಶಾಸ್ತ್ರಜ್ಞರು Opposite of play is depression ಎನ್ನಲು ಇದೆಲ್ಲ ಕಾರಣವಿದೆ. ಅದೆಲ್ಲದಕ್ಕೆ ತುಪ್ಪ ಬೆರೆಸಿದಂತೆ ಸೋಷಿಯಲ್ ಮೀಡಿಯಾ ಇಂದು ಇದೆ.
ಮಕ್ಕಳ ಪಾಲನೆ ಖಂಡಿತವಾಗಿ ಪಾಲಕರಿಗೆ ಸುಲಭವಲ್ಲ. ಹೀಗೆಯೇ ಮಕ್ಕಳನ್ನು ಬೆಳೆಸಬೇಕೆಂದು ನಾನು ಹೇಳುವುದಿಲ್ಲ. ಇಲ್ಲಿ ಹೇಳಿರುವ ವಿಷಯ ಗಮನದಲ್ಲಿರಿಸಿ ಇಂದಿನ ಪಾಲಕರು ಆಗೀಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬುದಷ್ಟೇ ಇಲ್ಲಿನ ಆಶಯ. ಆಗ ಮಾತ್ರ ಒಂದೊಳ್ಳೆ ಸಮಾಜ ಸಮರ್ಥ ಮಗಳು/ಮಗನನ್ನು ಬೆಳೆಸಲು ಸಾಧ್ಯವಾಗುತ್ತದೆ.