Thursday, 12th December 2024

ಪಿಒಪಿ ಗಣೇಶನ ಪ್ರತಿಷ್ಠಾಪನೆ ಬೇಡ

ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ಜೋರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ಗೂ ಹೆದರದೆ, ಬೀಗಮುದ್ರೆ ಹಾಕಿದ್ದರೂ ಹಿಂಬಾಗಿಲಿನಿಂದ ಪಿಒಪಿ ಗಣಪತಿ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದಾರೆ. ನೀರಿನಲ್ಲಿ ಕರಗದ ಪಿಒಪಿ ವಿಗ್ರಹಗಳು ಜಲಮೂಲಗಳಿಗೆ ಅಪಾಯಕಾರಿಯಾಗಿದ್ದು, ಇಂತಹ ಮೂರ್ತಿಗಳ
ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯಬೇಕು ಎಂಬ ಉದ್ದೇಶದಿಂದಲೇ ಅಧಿಕಾರಿಗಳು ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೂ ಕದ್ದಮುಚ್ಚಿ
ಮಾರಾಟ ಮುಂದುವರಿದಿದೆ. ಆದ್ದರಿಂದ ಪ್ರಕೃತಿ ಮತ್ತು ಪರಿಸರ ಉಳಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂಬುದನ್ನು ಸಾರ್ವಜನಿಕರು ಅರಿತು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ನಿರ್ಧಾರ ಮಾಡಬೇಕಿದೆ.
ಪಿಒಪಿ ಅಥವಾ ಥರ್ಮಾಕೋಲ, ನೀರಿನಲ್ಲಿ ಕರಗದ ವಸ್ತುಗಳಿಂದ ತಯಾರಿಸಿದ ಗಣಪತಿ ವಿಗ್ರಹಗಳಿಗೆ ಒತ್ತು ನೀಡದೆ ಮಣ್ಣಿನಿಂದ ಅಥವಾ ನೀರಿನಲ್ಲಿ ಸುಲಭವಾಗಿ ಕರಗುವ ಪರಿಸರಕ್ಕೆ ಹಾನಿಯಾಗದಂತ ಗಣಪತಿ
ವಿಗ್ರಹಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಪ್ಲಾಸ್ಟಿಕ್ ಥರ್ಮಾಕೋಲ, ನೀರಿನಲ್ಲಿ ಕರಗದ ಅಲಂಕಾರಿಕ ವಸ್ತುಗಳ ಬದಲಿಗೆ ಪೇಪರ್ ಹಾಗೂ ಹೂ ಎಲೆಗಳನ್ನು ಅಲಂಕಾರಕ್ಕೆ ಬಳಸಬೇಕಿದೆ. ಬಟ್ಟೆ ಕಾಗದ ಮರದಿಂದ
ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಬೇಕಿದೆ. ದೊಡ್ಡ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದರಿಂದ ಸ್ಥಳವಕಾಶ, ಬಹು ಪ್ರಮಾಣದಲ್ಲಿ ನಾನಾ ವಸ್ತುಗಳು ಬೇಕಾಗಿರುವುದರಿಂದ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ. ಇದರ ಬದಲಿಗೆ ಚಿಕ್ಕ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದರಿಂದ ಹಲವು ಅನುಕೂಲಗಳಾಗುವುದರ ಜತೆಗೆ ಅತಿಯಾದ ಜನಸಂಖ್ಯೆ ಒಂದಡೆ ಸೇರುವುದು
ಕಡಿಮೆಯಾಗಿ ಅನಾರೋಗ್ಯಕ್ಕೆ ಕಾರಣವಾಗುವ ಸೋಂಕು ನಿಯಂತ್ರಣಕ್ಕೂ ಆದ್ಯತೆ ನೀಡಿದಂತಾಗುತ್ತದೆ. ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಅತಿಯಾದ ರಾಸಾಯನಿಕ ಅಲಂಕಾರಿಕ ಬಣ್ಣಗಳಿಗಿಂತ ಪ್ರಾಕೃತಿಕ ಬಣ್ಣಗಳಿಂದ ರಂಗೋಲಿ ರಚಿಸುವುದು ಉತ್ತಮ. ಅರಿಸಿನ, ಮದರಂಗಿ, ಮೆಹಂದಿ, ಅಕ್ಕಿಯ ಪುಡಿ, ಗುಲಾಬಿ ಪುಡಿ ಮಣ್ಣನ್ನು ಬಳಸಿ ಪರಿಸರಾತ್ಮಕವಾಗಿರುವ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಬೇಕು. ಒಟ್ಟಾರೆ ಹಿಂದೂ ಸಂಪ್ರದಾಯದ ಹಬ್ಬವೊಂದು ಪರಿಸರ ಸ್ನೇಹಿಯಾಗಿ ಆಚರಣೆಯಾಗಲಿ.