Monday, 16th September 2024

ಸಮಸ್ಯೆೆ ನಡುವೆಯೂ ಅಂಚೆ ಸೇವೆ ಅನನ್ಯ

ಇಂದು ವಿಶ್ವ ಅಂಚೆ ದಿನ

ತನ್ನಿಮಿತ್ತ

ಸುರೇಶ ಗುದಗನವರ

ಸಪೋಸ್ಟ್‌, ಪೋಸ್ಟ್‌ ಎಂದು ಪೋಸ್ಟ್‌‌ಮನ್ ಮನೆಗೆ ಬಂದಾಗ ಎಷ್ಟೊಂದು ಸಂಭ್ರಮ. ದೂರವಾಣಿ ಮತ್ತು ಮೊಬೈಲುಗಳು ಇಲ್ಲದ ಆ ಕಾಲದಲ್ಲಿ ಸುದ್ದಿಯನ್ನು, ಭಾವನೆಯನ್ನು ಹೊತ್ತು ತರುತ್ತಿದ್ದ ಪ್ರಮುಖ ಸಂಪರ್ಕಗಳೆಂದರೇ ಪೋಸ್ಟ್‌‌ಕಾರ್ಡ್ ಮತ್ತು ಇನ್’ ಲ್ಯಾಂಡ್ ಪತ್ರಗಳು, ಹಲವು ನೆನಪುಗಳನ್ನು ಕೂಡಿಟ್ಟುಕೊಂಡಿರೋ ಹಳೆಯ ಪತ್ರಗಳು ಕೊಡೋ ಆನಂದವೇ ಬೇರೆ. ಆದರೆ 1980ರ ದಶಕದಿಂದಲೇ ನಿಧಾನವಾಗಿ ಪತ್ರ ವ್ಯವಹಾರ ಕಡಿಮೆಯಾಗುತ್ತಾ ಬಂದಿತು.

ಪೋಸ್ಟ್‌ ಕಾರ್ಡ್‌ಗಳಂತೂ ಬ್ಯಾಂಕು, ಪತ್ತಿನ ಸಹಕಾರ ಸಂಘದ ಸೂಚನೆ ಪತ್ರಗಳಿಗೆ ಸೀಮಿತವಾದವು. ಗಾಂಧೀಜಿಯವರ ಅಂಚೆ ಚೀಟಿಗಳನ್ನು ಅಂಟಿಸಿಕೊಂಡು ಬರುತ್ತಿದ್ದ ಪತ್ರಗಳು ಸರಕಾರಿ ಮಾಹಿತಿ ರವಾನೆಗಷ್ಟೇ ಸೀಮಿತಗೊಂಡವು. ಇಂದು ಬದಲಾವಣೆ ಯ ಗಾಳಿ ಎಲ್ಲ ರಂಗಗಳಲ್ಲೂ ಬೀಸತೊಡಗಿದೆ. ಇದಕ್ಕೆ ಅಂಚೆ ಸೇವೆಯು ಹೊರತಲ್ಲ. ಮನೆಯವರು, ಸ್ನೇಹಿತರು, ಪ್ರೇಮಿಗಳು, ಕೋರ್ಟ್, ಕಚೇರಿ ವ್ಯವಹಾರಸ್ಥರು ದಿನ, ವಾರಗಟ್ಟಲೇ ತಮ್ಮವರಿಂದ ಬರುವ ಒಂದು ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಈಗ ಇಲ್ಲದಾಗಿದೆ.

ಇಂದಿನ ದಿನಗಳಲ್ಲಿ ನಾವು ಮೊಬೈಲ್, ಸ್ಮಾರ್ಟ್ ಫೋನ್‌ಗಳ ಮೂಲಕ ಹೊಸ ಹೊಸ ದಾರಿಗಳನ್ನು ಕಂಡುಕೊಂಡಿದ್ದೇವೆ. ಕೇವಲ ಇ-ಮೇಲ್‌ಗಳಲ್ಲದೆ ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂಪರ್ಕ ಸಾಧ್ಯ ವಾಗಿದೆ. ಆದರೂ ಕೂಡ ಇಂದಿಗೂ ಅಂಚೆ ಇಲಾಖೆ ಪ್ರಮುಖ ಸಂವಹನ ವಿಧಾನಗಳಲ್ಲಿ ಒಂದಾಗಿ ಉಳಿದು ಕೊಂಡಿದೆ. ಅಂಚೆ ಸೇವೆ ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತೀ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಭಾರತದಲ್ಲಿ ಸಾರ್ವಜನಿಕ ಅಂಚೆ ವ್ಯವಸ್ಥೆಯು 1964ರಲ್ಲಿ ಪ್ರಾರಂಭಗೊಂಡಿತು. ಅಲ್ಲದೇ ಒಂದುವರೆ ಲಕ್ಷಕ್ಕಿಂತಲೂ ಹೆಚ್ಚಿನ ಅಂಚೆ ಕಚೇರಿ ಗಳು ದೇಶಾದ್ಯಂತ ಕಾರ್ಯನಿರ್ವಸುತ್ತಿವೆ.

ಪ್ರಸ್ತುತ ಭಾರತೀಯ ಅಂಚೆ ಇಲಾಖೆಯಲ್ಲಿ 5ಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಮಗೆ ಅಂಚೆ ಕಚೇರಿ ಕಾಣಸಿಗುತ್ತದೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ. ಭಾರತ ಮತ್ತು ಭಾರತೀಯರನ್ನು ಒಂದು ಗೂಡಿಸುವಲ್ಲಿ ಅಂಚೆ ಸೇವೆಗಳು ಮಹತ್ವದ ಪಾತ್ರವನ್ನು ನಿಭಾಯಿಸಿವೆ. ಸಂಸ್ಕೃತಿ, ಸಂಪ್ರದಾಯದ ವೈವಿಧ್ಯತೆ ಮತ್ತು ಕ್ಲಿಷ್ಟ ಭೌಗೋಳಿಕ ಭೂಪ್ರದೇಶ ಗಳನ್ನು ಹೊಂದಿರುವ ಭಾರತದಲ್ಲಿ ಅಂಚೆ ಸೇವೆಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಆದರೂ ಭಾರತೀಯ ಅಂಚೆ ಇಲಾಖೆ ಉತ್ಸಾಹ ಮತ್ತು ಪ್ರೇರಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು.

ಇಂದು ವಿಶ್ವ ಅಂಚೆ ದಿನ, ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ. 1874ರಲ್ಲಿ ಸ್ವಿಜರ್ ಲ್ಯಾಂಡ್‌ನ ‘ವಿಶ್ವ ಅಂಚೆ ಒಕ್ಕೂಟ’ವು ವಿಶ್ವ ಅಂಚೆ ದಿನವನ್ನು ಹುಟ್ಟುಹಾಕಿತ್ತು. ನಂತರ 1969ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ‘ವಿಶ್ವ ಅಂಚೆ ಒಕ್ಕೂಟ’ ವು ಅಂತಾರಾಷ್ಟ್ರೀಯ ಅಂಚೆ ದಿನವನ್ನಾಗಿ ಘೋಷಿಸಿತು. ಅದಕ್ಕೆ ಯುನೆಸ್ಕೊ ಕೂಡಾ ಸಮ್ಮತಿ ನೀಡಿತು. ಹೀಗಾಗಿ ಅಕ್ಟೋಬರ್ 9ರಂದು ವಿಶ್ವದೆಲ್ಲೆಡೆ ಪ್ರತಿ ವರ್ಷವೂ ವಿಶ್ವ ಅಂಚೆ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲಾಗು ತ್ತದೆ.

ಅಂಚೆ ಕಚೇರಿಗಳು ಮತ್ತು ಕೇಂದ್ರಗಳು ಕಾರ್ಯಾಗಾರ, ಸೆಮಿನಾರ್, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಅಂಚೆ ದಿನದಂದು ಆಯೋಜಿಸಲಾಗುತ್ತದೆ. ಈ ದಿನವನ್ನು ವ್ಯವಹಾರಗಳಲ್ಲಿ ಅಂಚೆಯ ಕೊಡುಗೆಯ ಕುರಿತು ಅರಿವು ಮೂಡಿಸುವುದೇ ಆಗಿದೆ. ಅಂಚೆ ಇಲಾಖೆಗಳು ಎಲ್ಲ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆಗಳನ್ನು ನೀಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಭಾಷೆಯಲ್ಲಿ ಅಂಚೆ ಎಂಬುದರ ಅರ್ಥ ‘ಹಂಸ’ ಎಂಬುದಾಗುತ್ತದೆ.

ಕ್ರಿ.ಶ.1672ರವರೆಗೆ ಅಂಚೆ ಎಂಬುದರ ಅರ್ಥ ಹಂಸವಾಗಿತ್ತು. ಅಂದಿನ ಮೈಸೂರು ಸಂಸ್ಥಾನದ ದೊರೆಗಳಾದ ಚಿಕ್ಕದೇವರಾಜ ಒಡೆಯರ್ ಅವರು ಟಪಾಲು ವಿಭಾಗವನ್ನು ಸ್ಥಾಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ನಮ್ಮ ಪುರಾಣಗಳಲ್ಲಿ ಅಮರಪ್ರೇಮಿ ಗಳಾದ ನಳ – ದಮಯಂತಿ ಯರಿಗೆ ಪ್ರೀತಿಯ ಸಂದೇಶ ವಾಹಕವಾಗಿದ್ದು ಹಂಸ, ಅದನ್ನು ರಾಜರು ಆಯ್ಕೆ ಮಾಡಿ ‘ಹಂಸ’ ಅಥವಾ ’ಅಂಚೆ’ ಎಂದು ಕರೆದರು.

‘ಹಂಸ’ ಎಂಬುದು ಸಂಸ್ಕೃತ ಪದ. ಅದು ರೂಪಾಂತರಗೊಂಡು ಕನ್ನಡಕ್ಕೆೆ ಬಂದಾಗ ಅಂಚೆಯಾಯಿತು. ಹೀಗೆ ನಾಮಕರಣ ಗೊಂಡ ‘ಅಂಚೆ ವಿಭಾಗ’ ಕನ್ನಡದಲ್ಲಿ ಶಾಶ್ವತವಾಗಿ ಉಳಿದಿದೆ. ಭಾರತೀಯ ಅಂಚೆ ಸೇವೆಯು ವಿವಿಧ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಇದರಲ್ಲಿ ಪತ್ರ ವ್ಯವಹಾರ, ಶೀಘ್ರ ಅಂಚೆ, ನೋಂದಾಯಿತ ಪತ್ರ ವ್ಯವಹಾರ, ಪಾರ್ಸಲ್ ಸೇವೆ, ಇ-ಅಂಚೆ ಮುಂತಾದ ಸೇವೆಗಳು ಒಳಗೊಂಡಿವೆ. ಅಲ್ಲದೇ ಹಣಕಾಸಿನ ವ್ಯವಹಾರಗಳಲ್ಲಿ ಮನಿ ಆರ್ಡರ್, ಮ್ಯುಚವಲ್ ಫಂಡ್, ಹಣ ವರ್ಗಾವಣೆ, ನಿಶ್ಚಿತ ಠೇವಣಿ, ಆವರ್ತಿತ ಠೇವಣಿ, ರಾಷ್ಟ್ರೀಯ ಉಳಿತಾಯ ಪತ್ರ ಮುಂತಾದವುಗಳನ್ನು ಮಾಡುತ್ತದೆ. ಸರಕಾರದ, ಯೋಜನೆ ಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ವೃದ್ಧಾಪ್ಯ, ಅಂಗವಿಕಲ, ವಿಧವೆ ಮುಂತಾದ ವೇತನಗಳನ್ನು ಅಂಚೆ ಕಚೇರಿಯಿಂದಲೇ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ.

ಹಾಗೆಯೇ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಅಂಚೆ ಇಲಾಖೆಯೂ ಸಹ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಭಾರತೀಯ ಅಂಚೆ ಸೇವೆ ವಿಶ್ವದಲ್ಲಿಯೇ ಅತೀ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಪ್ರಸ್ತುತ ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕನ್ನು ಪ್ರಾರಂಭಿಸಿದ್ದು, ಇದು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ  ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಉಂಟುಮಾಡುತ್ತಿದೆ. ಹೀಗಾಗಿ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಪೋಸ್ಟಮನ್ ಮೂಲಕ ಮನೆಯಬಾಗಿಲಿಗೆ ಬರುತ್ತಿದೆ. ಆರ್‌ಟಿಜಿಎಸ್, ಎನ್ ಇಎಫ್‌ಟಿ, ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಪರವಾನಗಿ ಪಡೆದುಕೊಂಡಿದೆ. ಅಂಚೆ ವ್ಯವಸ್ಥೆಯೊಂದಿಗೆ ಹುಟ್ಟಿದ ಕೂಸೇ ಅಂಚೆ ಚೀಟಿ, ಅಂಚೆ ಚೀಟಿಗಳಲ್ಲಿ ಇರು ವಷ್ಟು ವೈವಿದ್ಯತೆ ಮತ್ತೆಲ್ಲೂ ಕಂಡುಬರುವುದಿಲ್ಲ.

ಅನೇಕ ವಿಷಯಗಳ ವಿಸ್ತಾರ ರೂಪಗಳು ಅಂಚೆ ಚೀಟಿಯಲ್ಲಿ ಮೂಡಿ ಜನತೆಯ ಮನಸ್ಸಿಗೆ ಮುದಕೊಟ್ಟಿವೆ. ಅಂಚೆ ಚೀಟಿಗಳ ಲ್ಲಿಯ ಹಣ್ಣುಗಳು, ಹೂವುಗಳು, ನದಿಗಳು, ಸರೋವರಗಳು, ಮರಗಿಡಗಳು, ಪರ್ವತ ಶ್ರೇಣಿಗಳು, ಪ್ರಾಣಿಪಕ್ಷಿಗಳು, ವಿವಿಧ ಕ್ಷೇತ್ರಗಳ ಖ್ಯಾತಿವೆತ್ತ ಮಹನೀಯರು, ಆರೋಗ್ಯ ಪರಿಸರ ಮುಂತಾದವುಗಳ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸುವ ಸರಕಾರದ ಪ್ರಯತ್ನವನ್ನು ಅಲಕ್ಷಿಸಲಾಗದು. 1840, ಮೇ 6ರಂದು ಇಂಗ್ಲೆಂಡಿನಲ್ಲಿ ವಿಶ್ವದ ಪ್ರಪ್ರಥಮ ಅಂಚೆ ಚೀಟಿ ಬಳಕೆಗೆ ಬಂದಿತು. ಭಾರತದಲ್ಲಿ ಮೊದಲ ಅಂಚೆ ಚೀಟಿ 1852ರಲ್ಲಿ ಬಿಡುಗಡೆಯಾಯಿತು.

1948ರಲ್ಲಿ ಗಾಂಧೀಜಿಯ ಸ್ಮರಣಾರ್ಥವಾಗಿ ಹೊರತರಲಾದ ನಿತ್ಯ ಉಪಯೋಗಿಸುವ ಅಂಚೆ ಚೀಟಿಗಳು ಸರ್ವಿಸ್ ಸ್ಟಾಂಪುಗಳಾಗಿ ಬಳಸಲ್ಟಟ್ಟು ಅಂಚೆ ಇತಿಹಾಸದಲ್ಲಿ ವಿಶಿಷ್ಟ ಸ್ಥಾನಗಳಿಸಿವೆ. 1985ರಲ್ಲಿ ಅಂಚೆ ಇಲಾಖೆಯು ತಂತಿ ಇಲಾಖೆಯಿಂದ ಬೇರ್ಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅಕ್ಟೋಬರ್ 9, 1993ರ ವಿಶ್ವ ಅಂಚೆ ದಿನದಂದು ತನ್ನದೇ ಆದ ಚಿಹ್ನೆ ಯನ್ನು ಜಾರಿಗೊಳಿಸಿತು. ಇದು ಚಲನಾತ್ಮಕ ಮತ್ತು ಕಾರ್ಯತತ್ಪರತೆಯ ಸಂಕೇತವಾಗಿ ರುವುದು. 2008ರಲ್ಲಿ ಪುನಃ ಇನ್ನೊಂದು ಚಿಹ್ನೆ ಬಂದಿತು. ಇದರಲ್ಲಿ ಎರಡು ರೆಕ್ಕೆಗಳು ಅಂಚೆ ಇಲಾಖೆಯ ವಿಶೇಷ ವಿಶಿಷ್ಟವಾಗಿರುವುದು. ಇದು ಆಯತಾಕಾರದಲ್ಲಿದ್ದು ಎನ್ವಾಲಾಪ್ ಹೋಲಿಕೆ ಹೊಂದಿತ್ತು. ಇದರಲ್ಲಿ ಹಳದಿ ವರ್ಣದಲ್ಲಿ ಪಕ್ಷಿಯ ರೆಕ್ಕೆೆಗಳಿದ್ದವು. ದಟ್ಟ ಕೆಂಪು ಬಣ್ಣವೂ ಇತ್ತು. ಕೆಂಪು ಬಣ್ಣವು ಸಂಪ್ರದಾಯದ ಅಂಚೆ ಇಲಾಖೆಯ ಸಂಬಂಧವನ್ನು ಪ್ರತಿನಿಧಿಸಿದರೆ ಹಳದಿ ಸುಖ-ಸಂತೋಷ ಹಾಗೂ ನಂಬಿಕೆಯನ್ನು ಪ್ರತಿನಿಧಿಸುತ್ತದೆ.

ಭಾರತೀಯ ಅಂಚೆಯು 2011ರ ಆಗಸ್ಟ್‌‌ನಲ್ಲಿ ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ತೇಲುವ ಅಂಚೆಯನ್ನು ಪ್ರಾರಂಭಿಸಿ ರುವುದು ವಿಶೇಷವಾಗಿದೆ. ಇತ್ತೀಚಿನ ಆರ್ಥಿಕ ಬೆಳವಣಿಗೆಗಳು ಗ್ರಾಹಕರನ್ನು ಬ್ಯಾಂಕಿಂಗ್ ಕ್ಷೇತ್ರದಿಂದ ಅಂಚೆ ಇಲಾಖೆಯ ಬ್ಯಾಂಕಿಂಗ್ ಕಡೆಗೆ ವಾಲುವಂತೆ ಆಕರ್ಷಕ ಬಡ್ಡಿದರ ಜತೆಗೆ ಸುರಕ್ಷತೆಯ ವಿಚಾರವನ್ನು ಬೋಧಿಸುತ್ತಿದೆ. ಆದರೆ ಇದೇ ಸಮಯ ದಲ್ಲಿ ಅಂಚೆ ಇಲಾಖೆಯ ನೆಟ್‌ವ್ಯವಸ್ಥೆೆ ಸರಿಯಾಗಿಲ್ಲದ ಪರಿಣಾಮ ಇಲಾಖೆಯ ಬ್ಯಾಂಕಿಂಗ್ ವಹಿವಾಟು ಸೇರಿದಂತೆ ಅಂಚೆಯ ವಿಚಾರದಲ್ಲೂ ಪೂರ್ಣ ಪ್ರಮಾಣದ ಕೆಲಸ ನಡೆಯುತ್ತಿಲ್ಲ.

ಭಾರತೀಯ ಅಂಚೆ ಇಲಾಖೆ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. ಆದರೆ ಇದನ್ನು ಸಂಸ್ಥೆಯ ಜತೆಯಲ್ಲಿ ಒಡಂಬಡಿಕೆ ಮಾಡಿಕೊಂಡಿಲ್ಲ. ಆದರೆ ರಾಜ್ಯದಲ್ಲಿ ಅಂಚೆ ಇಲಾಖೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನೆಟ್ ವ್ಯವಸ್ಥೆ ಕುರಿತು ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಜತೆಯಲ್ಲಿ ಚರ್ಚೆಗಳು ನಡೆದರೂ ವ್ಯವಸ್ಥೆಯಂತೂ ಸುಧಾರಣೆ ಯಾಗುವ ಲಕ್ಷಣ ಗಳು ಗೋಚರವಾಗುತ್ತಿಲ್ಲ. ಈ ಕುರಿತು ಅಂಚೆ ಇಲಾಖೆಯ ಸಿಬ್ಬಂದಿ ಹೇಳುವಂತೆ, ಅಂಚೆ ಇಲಾಖೆಯ ಎಲ್ಲ ಕೆಲಸಗಳಿಗೆ ನೆಟ್ ಬೇಕೆ ಬೇಕು. ಅಲ್ಲದೇ ಕೆಲವೊಮ್ಮೆ ನೆಟ್ ಕನೆಕ್ಟ್‌ ಆದರೂ ಸ್ಲೋ ಆಗಿರುತ್ತದೆ. ಹೀಗಾಗಿ ಗ್ರಾಹಕರು ಸಿಟ್ಟು ಮಾಡಿಕೊಂಡು ಸಿಬ್ಬಂದಿ ಜತೆ ಜಗಳಕ್ಕೆ ನಿಲ್ಲುವುದು ಸ್ವಾಭಾವಿಕವಾಗಿದೆ.

ಅಂಚೆ ಇಲಾಖೆಯ ಈ ಸಮಸ್ಯೆ ಬಹಳಷ್ಟು ತೀವ್ರವಾಗಿದೆ. ಇಂದಿಗೂ ಅಂಚೆ ಇಲಾಖೆ ಎಂದರೆ ಗ್ರಾಮೀಣ ಭಾಗ ದಿಂದ ಹಿಡಿದು ನಗರದವರೆಗೂ ಅದಕ್ಕೊಂದು ವಿಶಿಷ್ಟವಾದ ಗೌರವವಿದೆ. ಭಾರತೀಯ ಇಲಾಖೆಯ ಅರ್ಧದಷ್ಟು ನೌಕರರು ಗ್ರಾಮೀಣ ಭಾಗ ದಲ್ಲಿ ದುಡಿಯುತ್ತಿರುವ ಡಾಕ್ ಸೇವಕರ ಸಂಬಳ ಬಹಳಷ್ಟು ಕಡಿಮೆಯಿದೆ. ಆದರೂ ಇವರೂ ಭಾರತೀಯ ಅಂಚೆ ಇಲಾಖೆಯ ಹೆಮ್ಮೆಯ ನೌಕರರು ಮತ್ತು ಕೇಂದ್ರ ಸರಕಾರದ ಉದ್ಯೋಗಿಗಳು. ಇವರೆಲ್ಲ ಘನತೆಯಿಂದ ಬದುಕಲು ಕೇಂದ್ರ ಸರಕಾರ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ. ಭಾರತೀಯ ಅಂಚೆ ಇಲಾಖೆಯ ವ್ಯಾಪ್ತಿ ಗ್ರಾಮೀಣ ಭಾಗದಲ್ಲಿ ಅಧಿಕವಾಗಿದ್ದು ಅಲ್ಲಿನ ನೌಕರರಿಗೆ ಉತ್ತಮ ಸೌಲಭ್ಯ ಒದಗಿಸುವುದು ಅವಶ್ಯವಾಗಿದೆ.

ಕರೋನಾ ಲಾಕ್‌ಡೌನ್ ಸಮಯದಲ್ಲಿ ಅಂಚೆ ಇಲಾಖೆಯ ಕಾರ್ಯಕ್ಷಮತೆಯನ್ನು ಪ್ರತಿಯೊಬ್ಬ ರೂ ಮೆಚ್ಚಲೇ ಬೇಕು. ಕರೋನಾ ಭಯದ ವಾತಾವರಣದಲ್ಲಿಯೂ ಅಂಚೆ ಇಲಾಖೆಯ ನೌಕರರು ತಮ್ಮ ಜೀವನವನ್ನು ಪಣಕ್ಕಿಟ್ಟು ಪಾರ್ಸೆಲ್‌ಗಳನ್ನು ವಿತರಿಸಿದ್ದಾರೆ. 24 ಮಾರ್ಚ್ 2020ರಿಂದ 14 ಮೇ 2020ರ ವರೆಗೆ ಅಂಚೆ ಇಲಾಖೆಯಿಂದ ಒಟ್ಟು 34 ಸಾವಿರ ಪಾರ್ಸೆಲ್ ಗಳ ವಿತರಣೆಯಾಗಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಕರೋನಾ ವಿರುದ್ಧದ ಹೋರಾಟದಲ್ಲಿ ಅತ್ಯಗತ್ಯ ವಾಗಿರುವ ವೈದ್ಯಕೀಯ ಉಪಕರಣಗಳಾದ ವೆಂಟಿಲೇಟರ್‌ಗಳು, ಗ್ಲೌಸ್, ಮಾಸ್ಕ್‌ ಮತ್ತು ಇತರ ಔಷಧ ಗಳನ್ನು ಲಾಕ್‌ಡೌನ್ ಸಂದರ್ಭದಲ್ಲಿ ವಿತರಿಸಿದ್ದಾರೆ.

ಪ್ರತಿದಿನವೂ ಒಂದು ಸಾವಿರಕ್ಕೂ ಹೆಚ್ಚು ವೈದ್ಯಕೀಯ ಉಪಕರಣಗಳನ್ನು ಯಾವುದೇ ತಡವಿಲ್ಲದೇ ಸಮಯಕ್ಕೆ ಸರಿಯಾಗಿ ವಿತರಿಸುತ್ತಿದ್ದರು ಈ ಕರೋನಾ ವಾರಿಯರ್ಸ್ ಎಂದು ಕರ್ನಾಟಕದ ಪೋಸ್ಟ್‌ ಮಾಸ್ಟರ್ ಜನರಲ್ ಶಾರದಾ ಸಂಪತ್ ಹೆಮ್ಮೆ ಯಿಂದ ಹೇಳುತ್ತಾರೆ. ಕರೋನಾ ಸೋಂಕು ಹರಡುವ ಭೀತಿ ನಡುವೆಯೂ ಯಾವ ಅಡತಡೆಗಳಿಗೂ ಅಂಜದೇ ಕಾರ್ಯ ನಿರ್ವಹಿಸಿ ರುವ ಇವರ ಸೇವೆ ಶ್ಲಾಘನೀಯವಾದುದು.

Leave a Reply

Your email address will not be published. Required fields are marked *