ವೈದ್ಯ ವೈವಿಧ್ಯ
drhsmohan@gmail.com
ಚೀನಿ ಸಂಶೋಧಕರು ಮಂಗನ ಸಿಂಥೆಟಿಕ್ ಭ್ರೂಣ ಸೃಜಿಸಿ ಸಹಜ ಮಂಗನ ಗರ್ಭಕೋಶಕ್ಕೆ ಇಂಪ್ಲಾಂಟ್ ಮಾಡಿದಾಗ ಕೆಲವು ಮಂಗಗಳಲ್ಲಿ ಗರ್ಭಸ್ಥ ಹಂತದ ಆರಂಭಿಕ ಲಕ್ಷಣಗಳು ಕಂಡುಬಂದವು. ಆದರೆ ಯಾವುವೂ ಕೆಲವು ದಿನಗಳ ಬೆಳವಣಿಗೆಯ ಮುಂದಿನ ಹಂತ ತಲುಪಲಿಲ್ಲ.
ವಿಜ್ಞಾನಿಗಳು ಇತ್ತೀಚೆಗೆ ಆಕರಕೋಶ ಅಥವಾ ಕಾಂಡಕೋಶಗಳನ್ನು (Stemcells) ಉಪಯೋಗಿಸಿ ಸಿಂಥೆಟಿಕ್ ಮಾನವ ಭ್ರೂಣ ವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ ದ್ದಾರೆ. ಇದರಲ್ಲಿ ಅವರು ಮಾನವನ ವೀರ್ಯ ಅಥವಾ ಅಂಡವನ್ನು ಉಪಯೋ ಗಿಸಿಲ್ಲ ಎಂಬುದು ಬಹಳ ಗಮನಾರ್ಹವಾದ ವಿಚಾರ. ಮಾನವ ಬೆಳವಣಿಗೆಯ ತುಂಬಾ ಮೊದಲ ಹಂತದ ಭ್ರೂಣವನ್ನು ಇವು ಹೋಲು ತ್ತವೆ. ಇದನ್ನು ವಿಜ್ಞಾನಿಗಳು ಭ್ರೂಣದ ಮಾಡೆಲ್ ಎಂದು ಕರೆಯುತ್ತಾರೆ.
ಜೆನೆಟಿಕ್ ಊನಗಳ ಪರಿಣಾಮ ಹಾಗೂ ಆಗಾಗ ಸಂಭವಿಸುವ ಗರ್ಭಸ್ರಾವದ ಮೇಲೆ ಇದು ಬೆಳಕು ಚೆಲ್ಲಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಹಾಗೆಯೇ ಇದು ಗಂಭೀರ ವಾದ ನೈತಿಕ ಅಥವಾ ಕಾನೂನಿನ ತೊಡಕನ್ನು ಎದುರಿಸಬಹುದೆಂಬ ವಾದವೂ ಕೇಳಿಬರುತ್ತಿದೆ. ಏಕೆಂದರೆ ಹಲವು ದೇಶಗಳಲ್ಲಿರುವ ಈಗಿನ ಕಾನೂನಿನ ಪ್ರಕಾರ ಈ ತರಹದ ಸಿಂಥೆಟಿಕ್ ಭ್ರೂಣವನ್ನು ಸೃಷ್ಟಿಸುವಂತಿಲ್ಲ. ಇದರಲ್ಲಿರುವ ಆಕೃತಿಗಳಲ್ಲಿ ಬಡಿದುಕೊಳ್ಳುವ ಹೃದಯ ಅಥವಾ ಮಿದುಳಿನ ಆರಂಭದ ಹಂತದ ತುಣುಕು ಗಳು ಇಲ್ಲ. ಆದರೆ ಪ್ಲಾಸೆಂಟಾ (ಮಾಸು), ಯೋಕ್ ಸ್ಟಾಕ್ ಮತ್ತು ಭ್ರೂಣ ಇವೆಲ್ಲಾ ಇವೆ.
ಬಾಸ್ಟನ್‌ನಲ್ಲಿ ಇತ್ತೀಚೆಗೆ ಜರುಗಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಮತ್ತು ಕ್ಯಾಲಿಫೋ ರ್ನಿಯಾ ಟೆಕ್ನಾಲಜಿ ಸಂಸ್ಥೆಯ ಪ್ರೊ. ಮ್ಯಾಗ್ದಲೀನಾ ಜರ್ನೀಕಾ ಗೋಟ್ಜ್ ಅವರು ಈ ಬಗೆಗೆ ವಿವರಗಳನ್ನು ನೀಡಿದರು. ಆದರೆ ಇದನ್ನು ವೈದ್ಯಕೀಯದಲ್ಲಿ ಉಪಯೋಗಿಸುವ ಯಾವ ಇರಾದೆಯೂ ಸದ್ಯಕ್ಕೆ ಇಲ್ಲ ಎಂದು ಆಕೆ ತಿಳಿಸಿದರು. ಯಾವುದೇ ರೋಗಿಯ ಗರ್ಭಕೋಶಕ್ಕೆ ಇದನ್ನು ಇಂಪ್ಲಾಂಟ್ ಮಾಡುವುದು ಕಾನೂನಿಗೆ ವಿರುದ್ಧವಾದುದು.
ಆರಂಭದ ಕೆಲವು ಹಂತಗಳ ನಂತರ ಬೆಳವಣಿಗೆ ಹೊಂದುವ ಸಾಧ್ಯತೆ ಈ ಭ್ರೂಣಕ್ಕೆ ಇದೆಯೇ ಎಂಬುದು ಇನ್ನೂ ಗೊತ್ತಿಲ್ಲ ಎಂದು ಅವರು ನುಡಿಯುತ್ತಾರೆ. ಭ್ರೂಣದ ಬೆಳವಣಿಗೆಯ ಬ್ಲಾಕ್ ಬಾಕ್ಸ್ ಅವಧಿ ಎಂದರೆ ಮೊದಲ ೧೪ ದಿವಸಗಳವರೆಗೆ ಮಾತ್ರ ಈ ಭ್ರೂಣವನ್ನು ಪ್ರಯೋಗಾಲಯದಲ್ಲಿ ಬೆಳೆಸಬಹುದು. ಹಾಗಾಗಿ ಈ ಅವಧಿಯ ವಿವರಗಳು ಇಲ್ಲಿಯವರೆಗೆ ಸ್ಪಷ್ಟವಾಗಿ ಗೊತ್ತಿಲ್ಲದಿರುವುದರಿಂದ ಅದನ್ನು ವಿವರವಾಗಿ ತಿಳಿಯುವುದು ಇದರ ಮುಖ್ಯ ಉದ್ದೇಶ. ಆದರೆ ನಂತರದ ಅವಧಿಯ ಭ್ರೂಣದ ಬೆಳವಣಿಗೆಯನ್ನು ಗರ್ಭಿಣಿಯರ ಸ್ಕ್ಯಾನಿಂಗ್‌ನಲ್ಲಿ ಮತ್ತು ಸಂಶೋಧನೆಗಾಗಿ ದಾನ ಮಾಡಲ್ಪಟ್ಟ ಭ್ರೂಣಗಳಿಂದ ತಿಳಿಯ ಬೇಕಾಗುತ್ತದೆ.
Read E-Paper click here
ಇದಕ್ಕಿಂತ ಮೊದಲು ಜರ್ನಿಕಾ ಗೋಟ್ಜ್ ಅವರ ತಂಡ ಹಾಗೂ ಇಸ್ರೇಲಿನ ವೀಸ್‌ಮನ್ ಸಂಸ್ಥೆಯ ಇವರ ಪ್ರತಿಸ್ಪರ್ಧಿ ತಂಡ, ಇಲಿಗಳಲ್ಲಿ ಆಕರ ಕೋಶ ಗಳಿಂದ ಆರಂಭದ ಭ್ರೂಣದ ರೀತಿಯ ಆಕೃತಿಗಳನ್ನಾಗಿ ಮಾರ್ಪಡಿಸಬಹುದು ಎಂದು ತೋರಿಸಿದರು. ಈ ಆಕೃತಿಗಳಲ್ಲಿ ಕರುಳಿನ ವ್ಯೂಹ, ಮಿದುಳಿನ ಆರಂಭದ ಕುರುಹುಗಳು ಹಾಗೂ ಬಡಿದುಕೊಳ್ಳುವ ಹೃದಯ ಇವು ಇದ್ದವು. ಅದರ ನಂತರ ಇದೇ ಸಂಶೋಧನೆಯನ್ನು ಮಾನವರಲ್ಲಿಯೂ ಮಾಡಿ ತೋರಿಸಲು ಹಲವಾರು ತಂಡಗಳು ತೊಡಗಿ ಕೊಂಡಿ ದ್ದವು. ಅದರಲ್ಲಿ ಕೆಲವು ಸಫಲವೂ ಆದವು.
ಈಗ ಮೊದಲು ತಿಳಿಸಿದ ಕೇಂಬ್ರಿಜ್ ವಿಶ್ವವಿದ್ಯಾಲಯದ ತಂಡ ತೋರಿಸಿದ ಪ್ರಯೋಗದಲ್ಲಿ ಭ್ರೂಣದ ಆರಂಭದ ಹಂತ ಎಂದರೆ ಗ್ಯಾಸ್ಟ್ರುಲೇಶನ್ ಹಂತದವರೆಗೆ ಅವು ಸಫಲವಾಗಿವೆ. ಇದರಲ್ಲಿ ಜೀವಕೋಶಗಳ ಒಂದು ಸರಣಿ ನಿರ್ದಿಷ್ಟವಾದ ಜೀವಕೋಶಗಳ ಲೈನ್‌ಗಳಾಗಿ ಪ್ರತ್ಯೇಕಗೊಂಡಿವೆ. ಹಾಗೆಯೇ ದೇಹದ ಆರಂಭಿಕ ಅಕ್ಷಗಳಾಗಿ ಪರಿವರ್ತನೆಗೊಂಡಿವೆ. ಈ ಹಂತದ ಭ್ರೂಣದಲ್ಲಿ ಬಡಿದುಕೊಳ್ಳುವ ಹೃದಯ, ಕರುಳು ಅಥವಾ ಮಿದುಳಿನ ಆರಂಭದ ಭಾಗಗಳಿಲ್ಲ. ಆದರೆ ಈ ಮಾಡೆಲ್ ಅಂಡ ಮತ್ತು ವೀರ್ಯ ಕೋಶಗಳ ಆರಂಭದ ಜೀವಕೋಶಗಳಿರುವುದನ್ನು ದೃಢವಾಗಿ ತೋರಿಸಿದವು.
ಈ ಸಂಶೋಧನೆಯೂ ವೈಜ್ಞಾನಿಕ ರಂಗದಲ್ಲಿ ವಿಜ್ಞಾನವು ಕಾನೂನನ್ನು ಹಿಂದೆ ಹಾಕಿ ಮುಂದುವರಿಯುತ್ತಿದೆ ಎಂಬುದನ್ನು ತೋರಿಸುತ್ತದೆ. ಹಾಗೆಯೇ ಯುನೈಟೆಡ್ ಕಿಂಗ್ಡಂನ ವಿಜ್ಞಾನಿಗಳು ಈ ಸಿಂಥೆಟಿಕ್ ಭ್ರೂಣದ ಬಗ್ಗೆ ತಮ್ಮದೇ ಗೈಡ್‌ಲೈನ್‌ಗಳನ್ನು
ಹಾಕಿಕೊಳ್ಳಲು ತಯಾರಿ ನಡೆಸಿದ್ದಾರೆ. ಈ ಸಂಶೋಧನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗ ಲ್ಯಾಬ್‌ನಲ್ಲಿ ಹುಟ್ಟು ಹಾಕಿದ ಈ ಆಕೃತಿಗಳು ಹಾಗೆಯೇ ಜೀವಂತ ಮನುಷ್ಯನಾಗಿ ಮುಂದುವರಿಯಲು ಸಾಧ್ಯವೇ? ಇಲಿಗಳಲ್ಲಿ ಕೈಗೊಂಡ ಪ್ರಯೋಗ ಗಳಲ್ಲಿ ಅವುಗಳ ಸಿಂಥಟಿಕ್ ಭ್ರೂಣವು ಸಹಜ ಭ್ರೂಣವನ್ನು ಸಂಪೂರ್ಣವಾಗಿ ಹೋಲುತ್ತಿತ್ತು.
ಆದರೆ ಅವನ್ನು ಹೆಣ್ಣು ಇಲಿಯ ಗರ್ಭಕೋಶದಲ್ಲಿ ಇಂಪ್ಲಾಂಟ್ ಮಾಡಿದಾಗ ಅವು ಜೀವಂತ ಇಲಿಯಾಗಿ ಬೆಳವಣಿಗೆ ಹೊಂದ ಲಿಲ್ಲ. ಇತ್ತೀಚೆಗೆ ಚೀನಾದಲ್ಲಿ ಅಲ್ಲಿನ ಸಂಶೋಧಕರು ಮಂಗನ ಸಿಂಥೆಟಿಕ್ ಭ್ರೂಣ ಸೃಜಿಸಿ ಸಹಜ ಮಂಗನ ಗರ್ಭ ಕೋಶಕ್ಕೆ ಇಂಪ್ಲಾಂಟ್ ಮಾಡಿದಾಗ ಕೆಲವು ಮಂಗಗಳಲ್ಲಿ ಗರ್ಭಸ್ಥ ಹಂತದ ಆರಂಭಿಕ ಲಕ್ಷಣಗಳು ಕಂಡುಬಂದವು. ಆದರೆ ಯಾವುವೂ ಕೆಲವು ದಿನಗಳ ಬೆಳವಣಿಗೆಯ ಮುಂದಿನ ಹಂತ ತಲುಪಲಿಲ್ಲ. ಇದಕ್ಕೆ ತಾಂತ್ರಿಕ ಕಾರಣವು ಕಾರಣವೇ ಅಥವಾ ಮೂಲಭೂತ ಜೈವಿಕ ಕಾರಣಗಳಿವೆಯೇ ಇಂದು ಹೇಳಲು ಬರುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.
ಮೇಲಿನ ಸಿಂಥೆಟಿಕ್ ಭ್ರೂಣದ ಸಂಶೋಧನೆ ಹಲವು ರೀತಿಯ ವಾದ-ವಿವಾದ ಮತ್ತು ಟೀಕೆ ಗಳನ್ನು ಹುಟ್ಟುಹಾಕಿದೆ. ಮಾನವನು ದೇವರ ಕಾರ್ಯವಾದ ಸೃಷ್ಟಿಕಾರ್ಯ ಮಾಡಬಹುದೇ? ಹೊಸ ರೀತಿಯ ತನ್ನದೇ ಜಗತ್ತನ್ನು ಸೃಷ್ಟಿಸಬಹುದೇ? ಈ ರೀತಿಯ ಟೀಕೆಗಳು ವಿವಿಧ ವಲಯದಲ್ಲಿ ಹುಟ್ಟಿವೆ. ಈಗಾಗಲೇ ತಿಳಿಸಿದಂತೆ ಈಗಿರುವ ಕಾನೂನಿನ ಪ್ರಕಾರ ಹೆಚ್ಚಿನ ದೇಶಗಳಲ್ಲಿ ಭ್ರೂಣದ ಸಂಶೋಧನೆಗೆ ಸ್ಪಷ್ಟವಾದ ಕಾನೂನಿನ ಚೌಕಟ್ಟಿಲ್ಲ. ಹಾಗಾಗಿ ಹೊಸ ರೀತಿಯ ಗೈಡ್‌ಲೈನ್ ಗಳು ಹಾಗೂ ಕಾನೂನುಗಳು ಅವಶ್ಯಕ ಎಂಬುದು ವಿಜ್ಞಾನಿಗಳ ಅಭಿಮತ. ಮೇಲೆ ತಿಳಿಸಿದ ಭ್ರೂಣದ ಮಾಡೆಲ್‌ಗಳನ್ನು ಜಗತ್ತಿನಲ್ಲಿ ೨ ಗುಂಪಿನ ವಿಜ್ಞಾನಿಗಳು ಹುಟ್ಟುಹಾಕಿದ್ದಾರೆ.
ಅದು ಕೇಂಬ್ರಿಜ್ ವಿಶ್ವವಿದ್ಯಾಲಯದ ಜರ್ನಿಕಾ ಗೋಟ್ಜ್ ತಂಡ ಮತ್ತು ಇಸ್ರೇಲಿನ ವೀಸ್‌ಮನ್ ಸಂಸ್ಥೆಯ ಜೇಕಬ್ ಹನ್ನಾ ತಂಡ. ಮೊದಲು ತಿಳಿಸಿದಂತೆ ಈ ಸಿಂಥೆಟಿಕ್ ಭ್ರೂಣವು ಆಕರ ಕೋಶಗಳಿಂದ ಬೆಳವಣಿಗೆ ಹೊಂದಿತು. ಹಾಗೆಯೇ ಫರ್ಟಿಲೈಜೇಷನ್‌ನ
೧೪ನೆಯ ದಿನದವರೆಗಿನ ಬೆಳವಣಿಗೆಯನ್ನು ಇದು ತೋರಿಸುತ್ತದೆ. ಇದು ವ್ಯಕ್ತಿತ್ವ ಬೆಳವಣಿಗೆಯ ಮೊದಲ ಹಂತ ಎಂದು ಹೇಳ ಲಾಗುತ್ತದೆ. ಮಾನವ ಸಂಶೋಧನೆಯನ್ನು ಈ ಹಂತದವರೆಗೆ ಮಾತ್ರ ಮಾಡಬಹುದು. ಇದರ ನಂತರ ಸಂಶೋಧನೆ ಕೈಗೊಳ್ಳ ಬಾರದೆಂದು ಹೆಚ್ಚಿನ ಎಲ್ಲಾ ದೇಶಗಳಲ್ಲಿ ನಿಷೇಧ ಹೇರಲಾಗಿದೆ.
ಅದರ ನಂತರದ ಭ್ರೂಣದ ಬೆಳವಣಿಗೆಯ ವಿವರಗಳು ಉಳಿದ ಪ್ರಾಣಿಗಳಲ್ಲಿನ ಸಂಶೋಧನೆಗಳ ವಿವರಗಳು. ಉದಾಹರಣೆಗೆ,
ಇಲಿಗಳಲ್ಲಿನ ಭ್ರೂಣದ ಬೆಳವಣಿಗೆಯ ವಿವರಗಳು. ಇವು ಬೆಳವಣಿಗೆಯನ್ನು ಕೊಲ್ಲುತ್ತವೆ ಎಂದು ಹೇಳಲು ಬರುವುದಿಲ್ಲ ಇದರ ನಂತರದ ವಿವರಗಳು ನಮಗೆ ಲಭ್ಯವಾದರೆ ಮಾನವ ಶಿಶುಗಳ ಗರ್ಭಸ್ರಾವ ನಾಲ್ಕರಲ್ಲಿ ಒಂದರಷ್ಟು ಏಕೆ ಆಗುತ್ತದೆ ಎಂದು ನಮಗೆ ತಿಳಿಯಬಹುದು. ಹಾಗಾಗಿ ಈ ಹಂತದ ವಿವರಗಳನ್ನು ತಿಳಿಯಲು ನಮಗೆ ಈ ಸಿಂಥೆಟಿಕ್ ಭ್ರೂಣದ ಬೆಳವಣಿಗೆ ತುಂಬಾ ಸಹಾಯಕಾರಿ ಎಂಬುದು ವಿಜ್ಞಾನಿಗಳ ಅಭಿಮತ.
ಶೇ. ೩೦ರಿಂದ ೪೦ರಷ್ಟು ಗರ್ಭ ಸ್ರಾವಗಳು ಈ ಅವಧಿಯಲ್ಲಿಯೇ ಆಗುತ್ತವೆ. ಹಾಗಾಗಿ ಅವುಗಳ ಸರಿಯಾದ ಕಾರಣ ನಮಗೆ
ಗೊತ್ತಾದರೆ ಅಂಥ ಅವಘಡಗಳನ್ನು ತಪ್ಪಿಸಲು ಯತ್ನಿಸಬಹುದು. ೧೪ ದಿನಗಳವರೆಗಿನ ಭ್ರೂಣದ ಬೆಳವಣಿಗೆಯನ್ನು ತಿಳಿಯು ವುದರಲ್ಲಿ ಇನ್ನೊಂದು ಉಪಯೋಗವಿದೆ. ಮಾನವ ಜೀವಶಾಸದ ಮೂಲಭೂತ ವಿಷಯಗಳು ನಮಗೆ ಮನವರಿಕೆ ಯಾಗುತ್ತವೆ. ಹಾಗೆಯೇ ಹಲವು ಕಾಯಿಲೆಗಳ ಹುಟ್ಟಿನ ಬಗ್ಗೆಯೂ ನಮಗೆ ತಿಳಿಯುತ್ತದೆ.
ಹಾಗಾದರೆ ಈ ಭ್ರೂಣದ ಮಾಡೆಲ್ ಅನ್ನು ೧೪ ದಿನಗಳಿಗಿಂತ ಜಾಸ್ತಿ ಬೆಳೆಸಲು ಸಾಧ್ಯವೇ? ಬಹುಶಃ ಅದನ್ನು ೨೧ ದಿನಗಳವರೆಗೆ ಮುಂದುವರಿಸಬಹುದು ಎಂಬುದು ಸೊಜೆನ್ ಎಂಬ ವಿಜ್ಞಾನಿಯ ಅಭಿಪ್ರಾಯ. ಆದರೆ ಕಳೆದ ವರ್ಷ ಈ ಸಂಶೋಧನೆಯಲ್ಲಿ ತೊಡಗಿಕೊಂಡ ಎರಡೂ ಗುಂಪುಗಳು ಇಲಿಗಳಲ್ಲಿ ಭ್ರೂಣವನ್ನು ಅಭಿವೃದ್ಧಿಪಡಿಸಿದಾಗ ಇದರ ನಂತರದ ಹಂತ ಎಂದರೆ
ಅದರಲ್ಲಿ ತಲೆ ಮತ್ತು ಆರಂಭಿಕ ಹೃದಯದ ಬೆಳವಣಿಗೆ ಈ ಹಂತದವರೆಗೆ ಅವರಿಗೆ ಬೆಳೆಯಲು ಸಾಧ್ಯವಾಯಿತು. ಹಾಗಾಗಿ ಮಾನವರಲ್ಲೂ ಮುಂದಿನ ದಿನಗಳಲ್ಲಿ ಈ ಹಂತದವರೆಗೆ ಸಂಶೋಧನೆ ಮುಂದುವರಿಸಬಹುದು ಎಂಬುದು ಕೇಂಬ್ರಿಜ್ ವಿಶ್ವವಿದ್ಯಾಲಯದ ಬೆಳವಣಿಗೆ ಜೀವಶಾಸದ ತಜ್ಞ ಮಾರ್ತಾ ಶಾಬಾಜಿ ಅವರ ಅಭಿಪ್ರಾಯ.
ವಿಜ್ಞಾನಿ ಹನ್ನಾ ಅವರ ಪ್ರಕಾರ ಈ ಭ್ರೂಣವನ್ನು ೪೦ ದಿನದವರೆಗೆ ಮುಂದುವರಿಸಬಹುದು. ಇದರ ಮತ್ತಷ್ಟು ಉಪಯೋಗ ಗಳಿವೆ. ಔಷಧಗಳನ್ನು ಪರೀಕ್ಷಿಸಲು, ಹಲವು ಕಾಯಿಲೆಗಳಲ್ಲಿ ಕಸಿಯ ಅಂಗಾಂಶವಾಗಿ ಉಪಯೋಗಿಸಲು, ಗರ್ಭಸ್ಥ ಶಿಶುವಿನ ಆರಂಭಿಕ ಹಂತವನ್ನು ವಿವರವಾಗಿ ತಿಳಿಯಲು, ಭ್ರೂಣದ ಲಿವರ್‌ನಲ್ಲಿರುವ ರಕ್ತವನ್ನು ಉತ್ಪಾದಿಸುವ ಆಕರ ಕೋಶಗಳನ್ನು ಪರೀಕ್ಷಿಸಲು ಹೀಗೆ ಹಲವು ರೀತಿಯ ಉಪಯೋಗಗಳಿವೆ.
ಮೇಲಿನ ಹಲವು ಟೀಕೆ ಟಿಪ್ಪಣಿ ಮತ್ತು ಪರಿಮಿತಿಯ ಹೊರತಾಗಿಯೂ ಈ ಸಂಶೋಧನೆ ಬಹಳ ಮುಖ್ಯ ಎಂಬುದು ಈ ರಂಗದಲ್ಲಿ ರುವ ಹಲವು ವಿಜ್ಞಾನಿಗಳ ಅಭಿಪ್ರಾಯ. ಈಗಾಗಲೇ ಈ ರೀತಿಯ ಪ್ರಯೋಗಗಳನ್ನು ಇನ್ನೂ ಹಲವು ವಿಜ್ಞಾನಿಗಳು, ಪ್ರಯೋ ಗಾಲಯಗಳು ನಡೆಸಿದ್ದಿದೆ. ೨೦೨೧ರಲ್ಲಿ ನಡೆಸಿದ ಒಂದು ಪ್ರಯೋಗದಲ್ಲಿ ಭ್ರೂಣದ ಆಕರ ಕೋಶಗಳು ಒಂದುಗೂಡಿ ಭ್ರೂಣದ ರೀತಿಯ ಆಕೃತಿಗಳು ಹುಟ್ಟಬಹುದು, ನಂತರ ಅದು ಬ್ಲಾಸ್ಟೋಸಿಸ್ಟ್ ಹಂತದವರೆಗೆ ಮುಂದುವರಿಯಬಹುದು ಎಂದು ಗೊತ್ತಾಗಿದೆ. ಈ ಹಂತ ಎಂದರೆ ಫರ್ಟಿಲೈಜೇಷನ್ ಆಗಿ ೫ ಅಥವಾ ೬ನೇ ದಿವಸದ ಹೊತ್ತಿಗೆ ಉಂಟಾಗುವ ಬೆಳವಣಿಗೆ. ಅದನ್ನು ಅವರು ಬ್ಲಾಸ್ಟಾಯ್ಡ್‌ಗಳು ಎಂದು ಕರೆದರು.
ಇದನ್ನು ನ್ಯೂಯಾರ್ಕ್‌ನ ರಾಕ್ -ಲರ್ ವಿಶ್ವವಿದ್ಯಾಲಯದ ಸಂಶೋಧಕ ಆಲಿ ಬ್ರಿವೆನ್ಲೂ ಮತ್ತು ಅವರ ತಂಡ ಈ ಬ್ಲಾಸ್ಟಾಯ್ಡ್ ಗಳು ಇಂಪ್ಲಾಂಟೇಷನ್ ಕ್ರಿಯೆಯನ್ನು ಅನುಕರಿಸಬಹುದು. ನಂತರ ಅವು ಗ್ಯಾಸ್ಟ್ರುಲೇಶನ್ ಹಂತವನ್ನು ತಲುಪುತ್ತವೆ ಎಂದಿ ದ್ದಾರೆ. ಭ್ರೂಣವು ಈ ಹಂತ ತಲುಪುವುದನ್ನು ಇನ್ನೂ ಕೆಲವು ತಂಡಗಳು ಪ್ರಯೋಗ ನಡೆಸಿ ಸಾಬೀತು ಪಡಿಸಿವೆ. ಆ ಪೈಕಿ ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯ, ಚೀನಾದ ಕುಸ್ ಮಿಂಗ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮುಖ್ಯ ವಾದವು.
ಹೀಗೆ ಹಲವು ರೀತಿಯ ಮಾನವ ಭ್ರೂಣದ ಮಾಡೆಲ್‌ಗಳು ನಮಗೆ ಮಾನವನ ಆರಂಭಿಕ ಬೆಳವಣಿಗೆಯ ಬಗ್ಗೆ ಬಹಳಷ್ಟು ಮಾಹಿತಿ ಒದಗಿಸುತ್ತವೆ. ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಏನು ಪ್ರಯೋಗ ಕೈಗೊಂಡರೂ ಮಾನವ ದೇಹದಲ್ಲಿ ಆಗುವ ಭ್ರೂಣದ ಬೆಳವಣಿಗೆ ಮತ್ತು ನಂತರ ಘಟಿಸುವ ಶಿಶುವಿನ ಜನನ ಇವು ಭಿನ್ನವಾಗಿಯೇ ಇರುತ್ತವೆ. ಮೊದಲು ತಿಳಿಸಿದ ಸಂಶೋ ಧನಾ ಗುಂಪುಗಳು ಬೆಳವಣಿಗೆ ಮಾಡಿದ ಭ್ರೂಣದ ಮಾಡೆಲ್‌ಗಳು ಮುಂದೆ ಗರ್ಭಸ್ಥ ಶಿಶುವಾಗಿ ಮಾರ್ಪಡುವ ಸಾಧ್ಯತೆಗಳಿಲ್ಲ.
ಆದರೆ ಮಾನವ ಬ್ಲಾಸ್ಟಾಯ್ಡ್ ಮಾಡೆಲ್‌ಗಳನ್ನು ಮಾನವ ಗರ್ಭಕೋಶಕ್ಕೆ ಇಪ್ಲಾಂಟ್ ಮಾಡಿದರೆ ಸಂಪೂರ್ಣ ಬೆಳವಣಿಗೆ ಹೊಂದಿ ಶಿಶುವಾಗುವ ಸಾಧ್ಯತೆ ಇದೆ. ಇವುಗಳ ಮುಖ್ಯ ಉದ್ದೇಶ ಶಿಶುವಿನ ಬೆಳವಣಿಗೆಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳು ವುದು ಹಾಗೂ ಗರ್ಭಸ್ರಾವ ಆಗುವ ಸಾಧ್ಯತೆಯನ್ನು ತೊಡೆದು ಹಾಕುವುದು. ಆದರೆ ಈ ರಂಗದಲ್ಲಿ ಯಾವ ಹಂತದವರೆಗೆ ಸಂಶೋಧನೆ ಕೈಗೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟವಾದ ಗೈಡ್‌ಲೈನ್‌ಗಳು ಹಾಗೂ ಕಾನೂನು ಇಲ್ಲ ಎಂಬುದು ವಿಜ್ಞಾನಿಗಳ ಅಭಿಮತ.