Wednesday, 27th November 2024

ರಘು ಏನಾಗಿದ್ದರೆಂಬುದು ನಮಗೆ ಅರ್ಥವಾಗಲೇ ಇಲ್ಲ !

ಸುಪ್ತ ಸಾಗರ

rkbhadti@gmail.com

ಸಾಮಾನ್ಯವಾಗಿ ಆಪ್ತರು, ಬಂಧು-ಮಿತ್ರರು ನಿಧನರಾದಾಗ ಮೃತರ ವ್ಯಕ್ತಿತ್ವ, ಅವರೊಂದಿಗಿನ ಒಡನಾಟದ ಕ್ಷಣಗಳು, ನಮಗೆ ಆ ವ್ಯಕ್ತಿಯ ಜತೆಗಿನ ಸಂಬಂಧ, ಮಿತ್ರತ್ವ, ಆತ್ಮೀಯತೆ ಇತ್ಯಾದಿಗಳ ಕುರಿತು ಶ್ರದ್ಧಾಂಜಲಿಯ ರೂಪದಲ್ಲಿ ಒಂದಷ್ಟನ್ನು ಬರೆಯುವುದು ಸಹಜ. ವಿಷಯ ಗೊತ್ತಿಲ್ಲದವರ
ಗಮನಕ್ಕೆ ಬಂದಂತೆಯೂ ಆಗುವುದು ಇದರ ಇನ್ನೊಂದು ಅನುಕೂಲ. ಈಗಂತೂ ಸಾಮಾಜಿಕ ಜಾಲತಾಣಗಳ ಬಳಕೆಗೆ ಬಂದಿರುವುದರಿಂದ ನಿತ್ಯ ಒಬ್ಬರಲ್ಲ ಒಬ್ಬರ ಗೋಡೆಯ ಮೇಲೆ ಯಾರದ್ದೋ ಸಾವಿನ ಸುದ್ದಿ ಪೋಟೋದೊಂದಿಗೆ ಇದ್ದೇ ಇರುತ್ತದೆ ಎಂಬಂತಾಗಿದೆ.

ಅಸಲಿಗೆ ಸತ್ತವರು ಯಾರೆಂಬುದು ಗೊತ್ತಿಲ್ಲದೇ ಕೆಳಗೆ ಒಂದಷ್ಟು ಮಂದಿ (ರಿಪ್) ‘ಆರ್‌ಐಪಿ’ ಎಂಬ ಮೂರಕ್ಷರವನ್ನು ಹಾಕೆ ಕೈತೊಳೆದುಕೊಂಡಿರುತ್ತಾರೆ. ಬಹುಶಃ ಪೋಸ್ಟ್ ಹಾಕಿದವರಿಗೆ ಸಮಾಧಾನ ವಾಗಲಿ ಎಂಬ ಕಾರಣಕ್ಕೋ, ಅವರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬದನ್ನು ಸಾರಲೋ, ಯಾವುದಕ್ಕೂ ಇರಲಿ ಎಂದೋ… ಹೀಗೆ ಯಾವ್ಯಾವುದೋ ಕಾರಣಕ್ಕೆ ಅವರನ್ನು ಫಾಲೋ ಮಾಡುತ್ತಿರುವವರು ಕಾಟಾಚಾರಕ್ಕೆ ಇಂಥ ಕಾಮೆಂಟ್ ಹಾಕಿರುತ್ತಾರೆ (ಕೆಲವು ನೈಜ ಶ್ರದ್ಧಾಂಜಲಿಯ ಅಪವಾದವೂ ಇದೆ, ಎಲ್ಲದಕ್ಕೂ ಇದು ಅನ್ವಯವಲ್ಲ).

ಇನ್ನೂ ದುರದೃಷ್ಟಕರವೆಂದರೆ ಆರ್‌ಐಪಿ ಎಂದರೇನೆಂಬುದು, ಅದನ್ನು ಯಾರಿಗೆ, ಯಾವಾಗ ಬಳಸಬೇಕೆಂಬ ಕನಿಷ್ಠ ಪರಿಜ್ಞಾನವೂ ಹಾಗೆ ಹಾಕುವವ ರಲ್ಲಿ ಬಹುತೇಕರಿಗೆ ಗೊತ್ತಿದ್ದಂತಿಲ್ಲ. ಅವರಿಗಿಂತ ಮುಂಚೆ ಯಾರೋ ಹಾಗೆ ಹಾಕಿದ್ದು ಕಾಮೆಂಟ್ ಬಾಕ್ಸ್‌ನಲ್ಲಿ ಮೇಲೆ ಇರುತ್ತದೆ. ಅದನ್ನೇ ಅನುಕರಿಸಿ ಹಾಕಿರುವವರಿಗೂ ಬರವಿಲ್ಲ. ಇನ್ನು ಕೆಲವರಂತೂ ಇಮೋಜಿ ಗಳನ್ನು ಒತ್ತಿ ಹರಕೆ ತೀರಿಸಿರುತ್ತಾರೆ.

ಸಂವಹನಕ್ಕೆಂದೇ ಪರಿಚಯಗೊಂಡಿರುವ ಸಾಮಾಜಿಕ ಜಾಲತಾಣಗಳ ಸ್ಥಿತಿ ಇಂದು ಇಮೋಜಿಗಳಿಗೆ ಸೀಮಿತವಾಗಿ ನಿಂತಿದೆ. ಕೆಲವೊಮ್ಮೆ ಯಾವ ಇಮೋಜಿಯ ಅರ್ಥ ಏನೆಂಬುದೇ ಗೊತ್ತಾಗದಷ್ಟು ಮಾತು ಸತ್ತವರಾಗಿಬಿಟ್ಟಿದ್ದೇವೆ ನಾವಿಂದು. ಇನ್ನು ಕೆಲವರಿಗೆ ಇನ್ನೊಂದು ವಿಚಿತ್ರ ಖಯಾಲಿ. ಯಾರೇ ಗಣ್ಯರು ಮೃತಪಟ್ಟರೂ, ಅವರ ಜತೆ ತಾವು ಯಾವಾಗಲೋ ತೆಗೆಸಿಕೊಂಡ, ಯಾವುದೋ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಸೆಲ್ಫಿಗಳನ್ನು ಅಪ್‌ಲೋಡ್ ಮಾಡಿ, ತಮ್ಮ ‘ದೊಡ್ಡಸ್ಥಿಕೆ’ ಪ್ರದರ್ಶನ ಮಾಡಿಕೊಳ್ಳುವ ಹಪಾಹಪಿ.

ಸಾವಿನ ವಿಷಯದಲ್ಲಿನ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿನ ಅಪಸ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದು ಬೇರೆಯದೇ ವಿಷಯ. ಆ ಬಗ್ಗೆ ಬರೆಯುವುದು ಸಾಕಷ್ಟಿದೆ. ಆದರೆ ಇವತ್ತು ವಿಷಯ ಅದಲ್ಲ. ಈ ವ್ಯಕ್ತಿ ಇನ್ನಿಲ್ಲವಾಗಿ ಇಂದಿಗೆ (ಭಾನುವಾರಕ್ಕೆ) ಒಂದು ವಾರವಾಯಿತು. ಇವತ್ತಿಗೂ ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿಗೆ ಪ್ರತಿಯಾಗಿ ಅಕ್ಷರ ಕಂಬನಿಯ ಸರಮಾಲೆ ನಿಂತಿಲ್ಲ. ವಯಸ್ಸು, ಕ್ಷೇತ್ರ, ದೇಶ, ಕಾಲವನ್ನು ಮೀರಿ
ಒಬ್ಬರಲ್ಲ ಒಬ್ಬರು ಅವರ ಗುಣಗಾನ ಮಾಡಿ, ಅವರಲ್ಲಿದ್ದ ಅಪರೂಪದ ಗುಣಗಳ ಬಗ್ಗೆ ನಮೂದಿಸಿ, ಅವರ ಜತೆಗಿನ ಒಡನಾಟದ ಕ್ಷಣಗಳ ಸಿಹಿಯನ್ನು ನೆನಪಿಸಿಕೊಂಡು ಬರೆಯುತ್ತಲೇ ಇದ್ದಾರೆ.

ಸಾವಿಗೆ ಮರುಗುತ್ತಿದ್ದಾರೆ. ಅಷ್ಟಕ್ಕೂ ಕೆ.ಸಿ.ರಘು ಬದುಕಿದ್ದಾಗ ಯಾವತ್ತಿಗೂ ‘ಸೋ ಕಾಲ್ಡ್ ಸೆಲೆಬ್ರಿಟಿ’ ಎನಿಸಿಕೊಂಡವರೇನಲ್ಲ. ಆದರೆ, ರಘು ನಿಜವಾಗಿ ಆಹಾರ ತಜ್ಞರಾಗಿದ್ದರೋ, ವಿಜ್ಞಾನಿಯಾಗಿದ್ದರೂ, ಸಾವಯವದ ಪ್ರತಿಪಾದಕರಾಗಿದ್ದರೋ, ಸೂಕ್ಷ್ಮ ಚಿಕಿತ್ಸಕ ಮನೋಭಾವದ ಛಲಬಿಡದ ವ್ಯಕ್ತಿಯಾಗಿ ದ್ದರೋ, ಶಿಸ್ತಿನ ಸಂಶೋಧಕರಾಗಿದ್ದರೋ, ದೇಸಿ ಪದ್ಧತಿಗಳ ಕೊಂಡಿಯಾಗಿದ್ದರೋ, ನೂರಾರು ಕೋಟಿ ವ್ಯವಹಾರವನ್ನು ಮಾಡುತ್ತಿದ್ದ ಸಾಧಕ-ಪರಿಶ್ರಮಿ ಉದ್ಯಮಿಯಾಗಿದ್ದರೋ ಅಥವಾ ಇವೆಲ್ಲವೋ ಒತ್ತೊಟ್ಟಿಗೇ ಆಗಿದ್ದರೋ ಗೊತ್ತಿಲ್ಲ. ಏಕೆಂದರೆ ಅವರನ್ನು ಈ ಯಾವುದೇ ಒಂದು ಹುದ್ದೆಯಲ್ಲಿ, ಹೆಸರಲ್ಲಿ ಗುರುತಿಸಿದರೆ ಅದು ಆ ವ್ಯಕ್ತಿತ್ವಕ್ಕೇ ಮಾಡುವ ಅಪಮಾನ ಅಥವಾ ಅದು ನಮ್ಮ ಮಿತಿ.

ಇದೆಲ್ಲವನ್ನೂ ಮೀರಿ ಆತ್ಮಿಯ ಗೆಳೆಯ, ಕಷ್ಟದಲ್ಲಿರುವವರ ಆಪದ್ಭಾಂಧವ, ತೀರ ಮುಚ್ಚುಮರೆಯಿಲ್ಲದ ಮುಗುದ, ಅತ್ಯುತ್ಕೃಷ್ಟ ಭಾಷಣಕಾರ, ಮನಮುಟ್ಟುವಂತೆ ಬರೆಯಬಲ್ಲ ವಿಭಿನ್ನ ಲೇಖಕ, ಗೆಳೆಯರೊಂದಿಗೆ ಕೂತರೆ ಮಹಾ ಹರಟೆ ಕೋರ, ಸಹೃದಯಿ, ಅಜಾತಶತ್ರು, ನಿಜವಾಗಿ ನಮ್ಮ ನಡು
ವಿದ್ದ ನೈಜ ‘ಹೀರೋ’. ಒಮ್ಮೊಮ್ಮೆ ಎಂಥವರಿಗೂ ಹೊಟ್ಟೆ ಕಿಚ್ಚಾಗಬಹುದಾದಷ್ಟು ಒಳ್ಳೆಯವರಾಗಿದ್ದ ರಘು ಇದ್ದದ್ದೇ ಹಾಗೆ. ಒಮ್ಮೆ ಅವರ ಪರಿಚಯ ವಾದರೆ ಎಂದಿಗೂ ಅವರು ಮರೆಯುತ್ತಿರಲಿಲ್ಲ; ಅವರದೂ ಮರೆಯುವ ವ್ಯಕ್ತಿತ್ವಾಗಿರಲಿಲ್ಲ. ಸ್ನೇಹದ ತೆಕ್ಕೆಗೆ ಬಂದರಂತೂ ಬಿಡಿಸಿಕೊಳ್ಳ ಲಾಗದ ಬಂಧ. ನನಗವರು ಪರಿಚಯವಾದದ್ದೇ ಟಿವಿ ಡಿಸ್ಕಷನ್ ಮೂಲಕ. ಬಹುಶಃ ಹದಿನೈದಿಪ್ಪತ್ತು ವರ್ಷಗಳ ಹಿಂದಿನ ಮಾತು.

ಯಾವುದೋ ಪ್ಯಾನೆಲ್ ಚರ್ಚೆಗಾಗಿ ಪತ್ರಕರ್ತ ಮಿತ್ರ ರಂಗನಾಥ್ ಭಾರದ್ವಾಜ್ ನಮ್ಮಿಬ್ಬರನ್ನೂ ಒಂದೇ ವೇದಿಕೆಗೆ ಜೋಡಿಸಿದ್ದರು. ಅಲ್ಲಿಂದ ಮುಂದೆ ‘ಅನ್ನ-ನೀರು’ ಎಂತಲೇ ನಾವಿಬ್ಬರೂ ಹಲವು ಬಾರಿ ಟಿವಿ ಪ್ಯಾನೆಲ್‌ಗಳಲ್ಲಿ ಕಾಣಿಸಿಕೊಂಡೆವು. ಅದಕ್ಕಿಂತ ಹೆಚ್ಚಾಗಿ ಅವರ ಪ್ರಭಾವಲಯಕ್ಕೆ ನನ್ನನ್ನವರು ಸೆಳೆದುಬಿಟ್ಟಿದ್ದರು. ಕೃಷಿ, ಅದರಲ್ಲಿನ ರಾಸಾಯನಿಕ-ಕಲುಷಿತತೆ ಇತ್ಯಾದಿಗಳಿಂದ ಆರಂಭವಾಗುತ್ತಿದ್ದ ಮಾತು ಕೊನೆಗೆ ಯಾವುದೋ ಪುಸ್ತಕ, -ಕೋ ವೋಕಾನಂಥ ಇನ್ಯಾವುದೋ ವ್ಯಕ್ತಿಯ ಬರಹ, ಮತ್ತೆಲ್ಲಿಯದೋ ಯಶೋ ಗಾಥೆ… ಹೀಗೆ ಮಾತು ಸಾಗಿ ಕೊನೆಗೆ ವೇದಕಾಲೀನ ಭಾರತದ ವರಾಹಮಿಹಿರ, ಪರಾಶರರವ ರೆಗೂ ಹೋಗಿ ನಿಲ್ಲುತ್ತಿತ್ತು.

ಒಮ್ಮೆಮ್ಮೆ ‘ಅಬ್ಬಾ, ಇಷ್ಟೊಂದು ಅಗಾಧ ಜ್ಞಾನ ವನ್ನುಈ ಮನುಷ್ಯ ದಕ್ಕಿಸಿಕೊಂಡಿದ್ದಾದರೂ ಎಲ್ಲಿಂದ?’ ಎಂಬ ಬೆರಗು ಹುಟ್ಟುತ್ತಿದ್ದ ಜತೆಗೇ ಅವರನ್ನು ಯಾವಾ ಗಲೇ ಭೇಟಿ ಯಾಗಲಿ, ಫೋನ್ ಮಾಡಲಿ ಗಂಟೆಗಟ್ಟಲೆ ಮಾತಾಡುತ್ತಿದ್ದ ಅವರ ಸಮಯ ಹೊಂದಾಣಿಕೆಯ ಕುರಿತೂ ಸೋಜಿಗವೆನಿಸುತ್ತಿತ್ತು. ಸೈದ್ಧಾಂತಿಕವಾಗಿ ಅವರೊಂದಿಗೆ ಖಾಡಾಖಾಡಿ ಜಗಳ ಮಾಡಿದ ಬಳಿಕವೂ, ಆ ವಿಷಯವನ್ನು ಬಿಟ್ಟು ಹೊರಬಂದಮೇಲೆ ಅದೇ ಮೊದಲಿನ ಆತ್ಮೀಯತೆ ಯನ್ನು ಇನಿತೂ ಮುಕ್ಕಿಲ್ಲದಂತೆ ಮುಂದುವರಿಸಿಕೊಂಡು ಹೋಗಬಹುದಾದ ಅಪರೂಪದ ಗುಣ, ಅವಕಾಶ ಅವರಲ್ಲಿತ್ತು.

ಹಿರಿಯ ಪತ್ರಕರ್ತ, ವಿಜ್ಞಾನಿ, ವಿಜ್ಞಾನ ಬರಹಗಾರ ನಾಗೇಶ ಹೆಗಡೆಯವರು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ ; ‘ಯಾವುದೇ ಒಂದು ವಿಷಯದ ಬಗೆಗೆ ಸತತ ಹತ್ತು ವರ್ಷ ಮಾತಾಡುತ್ತಲೇ ಇದ್ದರೆ ಸಹಜವಾಗಿ ಆ ವಿಷಯದಲ್ಲಿ ತಜ್ಞತೆ ಬರುತ್ತದೆ. ಅದೇ ಸಂಶೋಧನೆ, ಅದನ್ನೇ ತಪಸ್ಸು’ ಎನ್ನುವುದು ಎಂದು. ಹಾಗಿದ್ದ ಮೇಲೆ ರಘು ಸತತ ಮೂರು ದಶಕಗಳಿಂದ ಆಹಾರ ಹಾಗೂ ದೇಸಿ ಆಹಾರ ಪದ್ಧತಿಯ ಮೇಲೆ ಕೇವಲ ಮಾತಾಡುವುದಲ್ಲ; ಅದೇ ವಿಷಯದಲ್ಲಿ ಕೆಲಸ, ಸಂಶೋಧನೆ ಮಾಡುತ್ತಲೇ ಬಂದಿದ್ದಾರೆಂದರೆ ಅವರು ಇನ್ಯಾವಮಟ್ಟದ ಜ್ಞಾನ ಸಂಪಾದಿಸಿದ್ದ ರೆಂಬುದನ್ನು ಊಹಿಸಬ ಹುದು.

ಹೀಗಾಗಿ ಅವರೊಬ್ಬ ‘ಆಹಾರ ತಜ್ಞ’ ಎಂದಷ್ಟೇ ಹೊರಜಗತ್ತಿಗೆ ಪರಿಚಿತ. ಆದರೆ ಅದನ್ನು ಮೀರಿ ಅವರೊಬ್ಬ ತತ್ವಜ್ಞಾನಿಯಾಗಿದ್ದರು; ಮಹಾ ಮೇಧಾವಿ ಯಾಗಿದ್ದರು. ಅರಿವಿನ ದಾಹ-ಹಸಿವುಗಳು ಸದಾ ಅವರನ್ನು ಕಿತ್ತು ತಿನ್ನುತ್ತಲೇ ಇದ್ದವು. ಹೀಗಾಗಿ ಕಂಡಕಂಡಲ್ಲೆಲ್ಲ ಬಾಚಿಬಾಚಿ ತಲೆಯೊಳಕ್ಕೆ ತುರುಕಿಕೊಳ್ಳುತ್ತಿದ್ದರು. ಬಹುಶಃ ಆಮೇಲೆ ತಮಗೆ ಸಮಯವಿಲ್ಲ ಎಂಬುದಕ್ಕಾಗಿಯೇ ಹಾಗೆ ಆತುರಾತುರವಾಗಿ ವಿಷಯಗಳನ್ನು ತಡಕಾಡಿ ಬಾಚಿ ಕೊಳ್ಳುತ್ತಿದ್ದರೋ ಏನೋ?! ನಾನು ಹೀಗೆ ಹೇಳಿದರೆ ಉತ್ಪ್ರೇಕ್ಷೆ ಎನಿಸಬಹುದು; ಎನಿಸಿದರೂ ನನಗಂತೂ ತೊಂದರೆ ಇಲ್ಲ.

ಆದರೆ ಖಂಡಿತಾ ರಘು ಅವರಲ್ಲಿ ನನಗೆ ಅಭಿನವ ಪೂಚಂತೆಯೋ, ಕಾರಂತರೋ ಕಂಡಿದ್ದರು. ಹೀಗಾಗಿ ಅವರಿಬ್ಬರನ್ನು ನೋಡಿ ಬಲ್ಲ, ಒಡನಾಟದ ಅದೃಷ್ಟ ಪಡೆದಿಲ್ಲದ ನಾನು ರಘು ಜತೆಗಿನ ಮಾತಿಗಾಗಿ ಕಾತರಿಸುತ್ತಲೇ ಇದ್ದೆ. ಅದರಲ್ಲೂ ‘ಹಸಿರುವಾಸಿ’ ಆರಂಭಿಸಿದ ಮೇಲಂತೂ ಎಷ್ಟೋ ವಿಚಾರಕ್ಕೆ
ಮೇಲಿಂದ ಮೇಲೆ ಬೆನ್ನುಬಿದ್ದು ಅವರನ್ನು ಕಾಡಿದ್ದಿದೆ. ಅದೇ ಪ್ರೀತಿಗೆ ಕಟ್ಟುಬಿದ್ದು ನಿರಂತರ ಅವರು ಪತ್ರಿಕೆಗೆ ಅಂಕಣವನ್ನೂ ಬರೆದುಕೊಟ್ಟರು.

ಅದೇನು ದುರದೃಷ್ಟವೋ ಕರೋನಾ ವಕ್ಕರಿಸಿತು. ‘ಹಸಿರುವಾಸಿ’ಗೂ ತಗುಲಿದ ಸಾಂಕ್ರಮಿಕ ಇಂದಿಗೂ ನಿಗಾ ಘಟಕದಿಂದ ಪತ್ರಿಕೆ ಹೊರಬದಂತೆ ಆಗಿದೆ; ಬಹುಶಃ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಹಸಿರುವಾಸಿಯ ದುರ್ದಿನಗಳನ್ನು ಹಿರಿಯ ಮಿತ್ರರಾದ ಧಾರವಾಡದ ಪ್ರಕಾಶ್ ಭಟ್ ಅವರಿಂದ ತಿಳಿದು, ‘ಹೇಗಾದರೂ ಅದನ್ನು ಉಳಿಸಿಕೊಳ್ಳೋಣ ಭಡ್ತಿಯವರೇ’ ಎಂದು ಎಲ್ಲ ರೀತಿಯಿಂದ ಬೆಂಬಲಕ್ಕೆ ಮುಂದಾಗಿದ್ದರು. ಆದರೆ, ಆ ಕ್ಷಣದಲ್ಲೇ ಅವರೊಳಕ್ಕೂ
ಜೀವವನ್ನೇ ಬಲಿಪಡೆವ ‘ವೈರಸ್’ ಹೊಕ್ಕಿದೆ ಎಂಬುದರ ಕಲ್ಪನೆಯೂ ನಮಗ್ಯಾರಿಗೂ ಇರಲಿಲ್ಲ. ಸ್ವತಃ ರಘುವಿಗೂ ಅದು ಗೊತ್ತಿರಲಿಲ್ಲ. ಒಂದೊಮ್ಮೆ ಗೊತ್ತಿರುತ್ತಿದ್ದರೆ ಕನ್ನಡ ಜ್ಞಾನವಲಯಕ್ಕೆ ಇಂದು ಇಂಥ ಲಾಸು ಆಗುತ್ತಿರಲಿಲ್ಲ.

ಕಳೆದ ಭಾನುವಾರ ಬೆಳಗ್ಗೆ ಕೊನೆಗೂ ಕೆ ಸಿ ರಘು ಎಂಬ ಅತಿವಿಸ್ಮಯದ ವ್ಯಕ್ತಿ ಇನ್ನಿಲ್ಲವೆಂಬ ಸುದ್ದಿ ಬಂದೆರಗಿತ್ತು. ಅದೂ ಗೊತ್ತಾಗಿದ್ದೂ ಫೇಸ್‌ಬುಕ್‌ ನಿಂದಲೇ. ರಘು ಸಾವು ಅವರ ಆತ್ಮೀಯ ವಲಯದಲ್ಲಿನ ನಮ್ಮೆಲ್ಲರಿಗೆ ನಿರೀಕ್ಷಿತವೇ ಆಗಿದ್ದರೂ ಅದನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ನಾವ್ಯಾರೂ
ಇರಲಿಲ್ಲ ಹಾಗೂ ಆ ಸಾವು ನಮಗ್ಯಾರಿಗೂ ಬೇಕಿರಲಿಲ್ಲ. ಹಾಗೆ ನೋಡಿದರೆ ಕರೋನಾ ಎಂಬ ಮನುಕುಲದ ಮಹಾ ಶಾಪ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಜೀವಿಗಳನ್ನು ಬಲಿತೆಗೆದುಕೊಂಡಿದ್ದಷ್ಟೇ ಅಲ್ಲ. ಅದರ ಆಟೋಪ ಅಡಗಿದ (ಹಾಗೆಂದು ನಾವು ಘೋಷಿಸಿಕೊಂಡಿ
ದ್ದೇವೆ) ವರ್ಷಗಳ ಬಳಿಕವೂ ಇಂದಿಗೂ ಸದ್ದಿಲ್ಲದೇ, ಎಷ್ಟೋ ಅಮೂಲ್ಯ ಜೀವಿಗಳನ್ನು ಬೇರೆಬೇರೆ ರೂಪದಲ್ಲಿ ಅದು ಆಪೋಷನ ತೆಗೆದುಕೊಳ್ಳುತ್ತಲೇ ಇದೆ. ರಘು ಸಹ ಅದೇ ಸಾಲಿಗೆ ಸೇರಿದ್ದವರಿರಬೇಕು.

ಕರೋನಾದ ಬಳಿಕ ಸಣ್ಣಗೆ ಆರಂಭವಾಗಿದ್ದ ಕೆಮ್ಮು ಇಂದಿನ ರಘು ಸಾವಿಗೆ ಒಂದು ನೆಪವಾಯಿತಷ್ಟೆ. ಆದರೆ, ಅದಕ್ಕೆ ವೈದ್ಯ ಜಗತ್ತು ಕೊಟ್ಟ ಹೆಸರು
ಮಾತ್ರ ‘ಶ್ವಾಸಕೋಶದ ಕ್ಯಾನ್ಸರ್’ ಎಂಬುದು. ವೈದ್ಯ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಪರಿಣತರ ಬೃಹತ್ ತಲೆಮಾರೇ ನಮ್ಮ ನಡುವೆ ಇಂದು ಇದ್ದರೂ ರಘುವಿನಂಥ ಅಮಾಯಕ, ಅಮೂಲ್ಯರ ಜೀವವನ್ನು ಉಳಿಸಿಕೊಡುವಲ್ಲಿ ಆ ಸಮುದಾಯದ ವೈಫಲ್ಯ, ನಿರ್ಲಕ್ಷ್ಯ, ನಿಷ್ಕಾಳಜಿಯ ಬಗೆಗೆ ಬೇಸರ-ಆಕ್ರೋಶ ಮೂಡದೇ ಇರದು.

ಹೌದು, ಹಾಗೆ ಹೇಳದೇ ವಿಧಿಯೇ ಇಲ್ಲ. ಇಲ್ಲದಿದ್ದರೆ ಜೀವನ ಶಿಸ್ತಿನ ವಿಚಾರದಲ್ಲಿ ಸದಾ ಕಟ್ಟೆಚ್ಚರ ವಹಿಸುವ ರಘು ಅವರನ್ನು ಮೂರು ವರ್ಷಗಳಿಂದ ಬಾಽಸುತ್ತಲೇ ಇದ್ದ ಕೆಮ್ಮನ್ನು ಕೇವಲ ‘ಅಲರ್ಜಿ, ಇನೆಕ್ಷನ್’ ಎಂಬರ್ಥದಲ್ಲಿ ವೈದ್ಯರು ಕಡೆಗಣಿಸುವ ಪ್ರಮೇಯವೇ ಇರಲಿಲ್ಲ. ಪ್ರತಿಬಾರಿ ತಪಾಸಣೆ ಬಂದಾಗಲೂ ಯಾವುದೋ ಸಿರಪ್ ಅನ್ನೋ, ಆಂಟಿಬಯೋಟಿಕ್ ಮಾತ್ರೆಯನ್ನೋ ಬರೆದುಕೊಟ್ಟು ಕೈತೊಳೆದುಕೊಳ್ಳುತಿದ್ದ ಜಾಗದಲ್ಲಿ ವೈದ್ಯರಿಗೆ ಸಣ್ಣದೊಂದು ಅನುಮಾನ ಬಂದಿದ್ದರೂ ಇವತ್ತು ರಘು ಉಳಿದಿರುತ್ತಿದ್ದರು.

ಸ್ವತಃ ಅವರಿಗೇ ಅನೇಕ ಬಾರಿ ತಮಗಂಟಿದ ಈ ಕೆಮ್ಮಿನ ಪೀಡೆಯ ಬಗೆಗೆ ಅನುಮಾನ, ಆತಂಕಗಳಿದ್ದವು. ಹಾಗೆಂದು ಸ್ವತಃ ಅವರೇ ನಮ್ಮಂಥ ಕೆಲ ಮಿತ್ರರ ಜತೆ ಭಯವನ್ನು ವ್ಯಕ್ತಪಡಿಸಿದ್ದಿದೆ. ಅಂದ ಮಾತ್ರಕ್ಕೆ ಎಂದಿಗೂ ರಘು ಧೃತಿಗೆಟ್ಟವರಲ್ಲ. ನಿರಂತರ ಹೋಗುತ್ತಿದ್ದ ವೈದ್ಯರ ಉಪಚಾರದಿಂದ
ಕೆಮ್ಮು ನಿಯಂತ್ರಣಕ್ಕೆ ಬಾರದೇ ಹೋದಾಗ, ಬೇರೊಬ್ಬ ಪರಿಣತರ ಬಳಿ ಹೋಗಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು. ಅವರು ಪರೀಕ್ಷಿಸಿ, ಅದರ ವರದಿ ಬಂದು ‘ಒಳಹೊಕ್ಕಿದ್ದು ಕೇವಲ ಅಲರ್ಜಿ ತರುವ ವೈರಸ್ ಅಲ್ಲ, ಜೀವವನ್ನೇ ನುಂಗಿ ಹಾಕಬಲ್ಲ ಕ್ಯಾನ್ಸರ್‌ನ ಜೀವಕೋಶ’ ಎಂಬುದು ಗೊತ್ತಾಗು
ವಷ್ಟರಲ್ಲಿ ಬಹುತೇಕ ಅದು ಶ್ವಾಸಕೋಶದಿಂದ ಮಿದುಳಿನ ವರೆಗೂ ಆಕ್ರಮಿಸಿಕೊಂಡುಬಿಟ್ಟಿತ್ತಂತೆ.

ಕೊನೆಗಂತೂ ಅದಕ್ಕೆ ಅವರೇ ಮುಂದಾಗಿ ಚಿಕಿತ್ಸೆ ಪಡೆದು, ತುಸು ಆರಾಮಾಗಿ ಆರೆಂಟು ತಿಂಗಳ ಹಿಂದೆ ದಾಸರಹಳ್ಳಿಯಲ್ಲಿ ಅವರ ಕಂಪನಿಯಲ್ಲೇ ಭೇಟಿಯಾದಾಗ ಸಾವನ್ನು ಗೆದ್ದ ಸಂಭ್ರಮದಲ್ಲಿದ್ದರು. ಇನ್ನು ತೊಂದರೆ ಇಲ್ಲ, ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಮಾತನ್ನೂ ಹೇಳಿದ್ದರು. ಆಮೇಲೆಯೂ ಹಲವಾರು ಸೆಮಿನಾರ್‌ಗಳಲ್ಲಿ ಭಾಗವಹಿಸಿದ್ದರು. ನೆಚ್ಚಿನ ಬರವಣಿಗೆ- ಪುಸ್ತಕದ ಕೆಲಸ, ಸಂಶೋಧನೆ ಮುಂದುವರಿಸಿದ್ದರು. ‘ಅಬ್ಬಾ…’ ಎಂದು ನಿಟ್ಟುಸಿರುಬಿಟ್ಟು, ನನ್ನ ಅನಿವಾರ್ಯ ನೌಕರಿಯ ‘ಅಗತ್ಯ’ದಲ್ಲಿ ನಾನು ಕಳೆದುಹೋಗಿದ್ದಾಗಲೇ ಅವರ ಮೆದುಳಿನಲ್ಲಿದ್ದ ಟ್ಯೂಮರ್ರೋ, ಶ್ವಾಸಕೋಶದಲ್ಲಿನ ಕ್ಯಾನ್ಸರ್ ಸೆಲ್ಲೋ ಸದ್ದಿಲ್ಲದೇ ಮತ್ತೆ ಮೊಳೆತು ಬೆಳೆದಿದ್ದ ವಿಷಯ ಗೊತ್ತಾಗಲೇ ಇಲ್ಲ. ಅದು ಗೊತ್ತಾಗಿದ್ದು ಕಳೆದ ಭಾನಿವಾರ ಅವರು ಕೊನೆಯುಸಿರು ಎಳೆದ ಮೇಲೆಯೇ.

ಇದಕ್ಕಿಂತ ಕ್ರೌರ್ಯ ಮತ್ತೊಂದಿಲ್ಲ. ಕನ್ನಡದ ಜ್ಞಾನವಲಯಕ್ಕೆ ಇದಕ್ಕಿಂತಲೂ ನಷ್ಟ ಬೇರಿಲ್ಲ. ಕೊನೆಯವರೆಗೂ ಸರಕಾರವಾಗಲೀ, ಈ ಸಮಾಜ ವಾಗಲೀ ಇಂಥ ಮೇಧಾವಿಯೊಬ್ಬನನ್ನೂ ಗುರುತಿಸಲೂ ಇಲ್ಲ, ಬಳಸಿಕೊಳ್ಳಲೂ ಇಲ್ಲ ಎಂಬ ಕೊರಗೂ, ಅಪರಾಧಪ್ರಜ್ಞೆ ಯಾವ ತ್ಕಾಲಕ್ಕೂ ಕಾಡುತ್ತದೆ; ಕಾಡಬೇಕು. ಅಕ್ಷರಶಃ ಹಲವು ವಿಷಯಗಳಲ್ಲಿ ವಿಶ್ವವಿದ್ಯಾಲಯವೇ ಆಗಿದ್ದ ರಘುವಿನ ಜ್ಞಾನವನ್ನು ನಮ್ಮನ್ನಾಳು ವವರು, ವೈದ್ಯ ಕ್ಷೇತ್ರ ಬಳಸಿಕೊಂಡಿರು ತ್ತಿದ್ದರೆ ಈ ಸಮಾಜದ ಅದೆಷ್ಟೋ ಮಕ್ಕಳು ಅಕಾಲಕ್ಕೆ ಸಾಯುವುದು ಎಂದೋ ನಿಲ್ಲುತ್ತಿತ್ತು.

ಎಷ್ಟೋ ಗರ್ಭಿಣಿಯರು ಅಪೌಷ್ಟಿಕತೆಯಿಂದ ಪ್ರಾಣಬಿಡುವುದು ತಪ್ಪುತ್ತಿತ್ತು. ಇದ್ಯಾವುದರ ಬಗೆಗೂ ಕಿಂಚಿತ್ತೂ ಬೇಸರ, ವಿಷಾದವಿಲ್ಲದೇ ತಮ್ಮಪಾಡಿಗೆ ತಾವು ನಗುನಗುತ್ತಲೇ ಕೆಲಸ ಮುಗಿಸಿ ರಘು ಹೋಗಿಬಿಟ್ಟರು. ವೈಯಕ್ತಿಕವಾಗಿ ತಾವೇ ಕಟ್ಟಿದ ಸಂಸ್ಥೆಯ ಮೂಲಕ ಭ್ರೂಣಗಳನ್ನು ಕಾಡುವ ಅದೇನೋ ಅಮೈನೋ ಆಸಿಡ್‌ನ ಪರಿಣಾಮಗಳ ಮೇಲೆ ಕೆಲಸಮಾಡಿ ಐದಾರು ಸಾವಿರಕ್ಕೂ ಹೆಚ್ಚು ಶಿಶುಗಳ ಪ್ರಾಣ ಉಳಿಸಿದ್ದರು ರಘು. ಜಿನೋಮುಗಳ ಮೇಲೆ ಕೆಲಸ ಮಾಡುತ್ತಿದ್ದ ಅವರ ಸಂಸ್ಥೆಗೆ, ಅಲ್ಲಿ ಸಂಶೋಧಿಸಿದ ಔಷಧಕ್ಕೆ ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿತ್ತು. ಸಿರಿಧಾನ್ಯಗಳ ಆಹಾರೋತ್ಪನ್ನ ಗಳನ್ನು ತಯಾರಿಸಿ ಸ್ವತಃ ಹಂಚಿದ್ದರು.

ಅವರ ಜ್ಞಾನದ ಸಾಮರ್ಥ್ಯ, ಸಮಾಜದ ಬಗೆಗಿನ ಕಾಳಜಿಗೆ ಇದಕ್ಕಿಂತ ಸಾಕ್ಷಿ ಬೇಕೆ? ಒಂದೇ ಒಂದು ದಿನ ಅವರು ಕೋಪ ಮಾಡಿಕೊಂಡಿದ್ದು ಕಂಡಿಲ್ಲ. ಅವರ ಮುಖದಲ್ಲಿ ಬೇಸರವಾಗಲೀ, ನೋವಾಗಲೀ ಇಣುಕಿದ್ದಿಲ್ಲ. ಸ್ನೇಹ-ಆತ್ಮೀಯತೆ ಮರೆತಿದ್ದಿಲ್ಲ. ಬಳಲಿಕೆ ಸುಳಿದಿಲ್ಲ. ಯಾರ ಬಗೆಗೂ ಕ್ಷುಲ್ಲಕ ಟೀಕೆಯಾಗಲೀ, ದ್ವೇಷದ ಮಾತಾಗಲೀ ಆಡಿದ್ದಿಲ್ಲ. ಹಾಗೆಯೇ ಕೊನೆಯವರೆಗೂ ಉಳಿದಿದ್ದರು. ಆದರೆ, ಕೊನೆ ಕ್ಷಣದಲ್ಲಿ ತಮ್ಮ ಎಂದಿನ ನಗುವಿ
ನೊಂದಿಗೇ ಅವರು ಪ್ರಾಣಬಿಟ್ಟರೋ, ನೋವಿನಲ್ಲಿ ನರಳುತ್ತಾ ಕೊನೆಯುಸಿರೆಳೆದರೋ ಗೊತ್ತಿಲ್ಲ. ನಮ್ಮ ಮಸ್ತಿಷ್ಕದಲ್ಲಿ ಉಳಿದದ್ದು ಮಾತ್ರ ಮಲೆನಾ ಡಿನ ಆ ಸುಂದರನ ನಗು ಮುಖ ಮಾತ್ರವೇ. ಆದರೆ, ಇಂಥ ವ್ಯಕ್ತಿಯ ವಿಚಾರದಲ್ಲಿ ಸಾವೇಕೆ ಇಷ್ಟು ಕ್ರೂರವಾಗಿ ವರ್ತಿಸುತ್ತದೆ? ಈ ಪ್ರಶ್ನೆಯಷ್ಟೇ ಈಗ ಉಳಿದಿರುವುದು ನಾನು ನನ್ನಂಥವರಲ್ಲಿ. ‘ಹೋಗಿಬನ್ನಿ ರಘು’ ಎನ್ನದೇ ವಿಧಿಯಿಲ್ಲ!