Saturday, 27th July 2024

ರಾಹುಲರೇ ಮೋದಿಯನ್ನು ತೆಗಳಿ, ದೇಶವನ್ನಲ್ಲ !

ಹಿತೋಪದೇಶ

ಮಾರುತೀಶ್ ಅಗ್ರಾರ

ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ತೆಗಳುವುದನ್ನು ರಾಹುಲರು ಇನ್ನಾದರೂ ನಿಲ್ಲಿಸಲಿ; ಅದೇ ಅವರು ದೇಶಕ್ಕೆ ಕೊಡುವ ಗೌರವ. ರಾಹುಲರಿಗೆ ಸಾಕಷ್ಟು ವಯಸ್ಸಾಗಿದ್ದರೂ ಪ್ರೌಢತೆ ಮಾತ್ರ ಬಂದಿಲ್ಲ ಎಂಬುದು ಅವರ ವಿವೇಕವಿಲ್ಲದ ಮಾತು ಗಳಿಂದಲೇ ಗೊತ್ತಾಗುತ್ತದೆ. ಇಲ್ಲದಿದ್ದರೆ, ‘ಮುಸ್ಲಿಂ ಲೀಗ್ ಒಂದು ಜಾತ್ಯತೀತ ಪಕ್ಷ’ ಎಂದು ಯಾರಾದರೂ ಹೇಳುತ್ತಾರಾ?!

ಅನೇಕರಿಗೆ ನೆನಪಿರಬಹುದು. ಕಾಂಗ್ರೆಸ್ ಪಕ್ಷದ ಒಂದು ಕಾಲದ ಪ್ರಭಾವಿ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಜತೆಗಿನ ತಮ್ಮ ದೀರ್ಘ ಕಾಲದ ನಂಟನ್ನು ಕಡಿದುಕೊಂಡು ಹೊರಬರುವಾಗ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಒಂದು ಪತ್ರ ಬರೆದಿದ್ದರು. ಹಿಂದಿನ ಕಾಂಗ್ರೆಸ್ ನಾಯಕತ್ವ ಯಾವ ರೀತಿ ಪ್ರಬಲವಾಗಿತ್ತು ಹಾಗೂ ಇಂದಿನದು ಹೇಗೆ ದುರ್ಬಲ ವಾಗಿದೆ ಎನ್ನುವ ಕುರಿತು ಆ ಪತ್ರದಲ್ಲಿ ಆಜಾದ್ ಅವರು ಸಾಕಷ್ಟು ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ಜತೆಗೆ, ಕಾಂಗ್ರೆಸ್ ಪಕ್ಷ ದೇಶದಲ್ಲಿಂದು ಈ ರೀತಿಯಾಗಿ ಅವನತಿ ಹೊಂದುತ್ತಿ ರುವುದು ಏಕೆ? ಯಾರಿಂದ? ಎಂಬುದನ್ನೂ ಅವರು ಸೋನಿಯಾ ಮೇಡಂಗೆ ನಿರ್ಭೀತಿಯಿಂದ ತಿಳಿಸಿದ್ದರು. ಅಂದಹಾಗೆ, ಕಾಂಗ್ರೆಸ್ ಪಕ್ಷವಿಂದು ದೇಶದಲ್ಲಿ ತನ್ನ ವರ್ಚಸ್ಸು ಕಳೆದುಕೊಂಡು, ಅನೇಕ ರಾಜ್ಯಗಳಲ್ಲಿ ಚುನಾವಣೆಗಳನ್ನು ಸೋತು (ಸದ್ಯದ ಕರ್ನಾಟಕ ಚುನಾವಣೆಯ ಗೆಲುವನ್ನು ಹೊರತುಪಡಿಸಿ) ಸುಣ್ಣವಾಗಿರುವುದಕ್ಕೆ ಆ ಪಕ್ಷದ ನಾಯಕತ್ವವೇ ಕಾರಣ! ಇದನ್ನು ಸಾಕಷ್ಟು ದಿನ ಮುಂಚೆಯೇ ತಮ್ಮ ಪತ್ರದಲ್ಲಿ ಮುನ್ನುಡಿದಿದ್ದ ಗುಲಾಂ ನಬಿಯವರು, ‘ಕಾಂಗ್ರೆಸ್‌ನ ಮಹಾರಾಜ ರಾಹುಲ್ ಗಾಂಧಿ ಯವರ ಅಪ್ರಬುದ್ಧ ನಡ ವಳಿಕೆಯೇ ಕಾಂಗ್ರೆಸ್‌ನ ವರ್ಚಸ್ಸು ಕುಸಿಯಲು ಕಾರಣ’ ಎಂದಿದ್ದರು.

ಅವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ‘ಗಾಂಭೀರ್ಯವಿಲ್ಲದ ವ್ಯಕ್ತಿಯನ್ನು ಮುಖವಾಣಿ ಮಾಡಿಕೊಂಡಿದ್ದರಿಂದ
ಪಕ್ಷವು ದೇಶದಲ್ಲಿ ಅತ್ಯಂತ ಕೆಳಮಟ್ಟವನ್ನು ತಲುಪಿದೆ’ ಎಂದು ಉಲ್ಲೇಖಿಸುವ ಮೂಲಕ ರಾಹುಲರ ನಾಯಕತ್ವದ ವೈಫಲ್ಯದ ಕುರಿತಾದ ತಮ್ಮ ಅನಿಸಿಕೆಯನ್ನು ಸೋನಿಯಾರ ಮುಂದೆ ನೇರವಾಗಿ ಹೊರಹಾಕಿದ್ದರು ಗುಲಾಂ ನಬಿ. ಆದರೆ, ಕಹಿ
ಔಷಧಿಯಂತಿದ್ದ ಅವರ ಮಾತುಗಳು ಯಾರಿಗೂ ರುಚಿಸಲಿಲ್ಲ, ಅವನ್ನು ಯಾರೂ ಕಿವಿಗೆ ಹಾಕಿ ಕೊಳ್ಳುವ ಗೊಡವೆಗೂ ಹೋಗಲಿಲ್ಲ! ಏಕೆಂದರೆ, ಕಾಂಗ್ರೆಸ್ ಪಕ್ಷದ ಮೇಲ್ಪಂಕ್ತಿಯ ನಾಯಕರಿಂದ ಮೊದಲ್ಗೊಂಡು ಕಾರ್ಯಕರ್ತರ ತನಕ ಯಾರಿ ಗಾದರೂ ರಾಹುಲ್ ಅವರನ್ನು ತಮಾಷೆಗಾದರೂ ಪ್ರಶ್ನೆ ಮಾಡಲು ಸಾಧ್ಯವಿದೆಯೇ? ಜತೆಗೆ, ಪಕ್ಷಕ್ಕೆ ಗುಲಾಂ ನಬಿಯವರ ಅಗತ್ಯವಿರಲಿಲ್ಲ ಹಾಗೂ ಅವರ ಸಲಹೆಗಳೂ ಬೇಕಾಗಿರಲಿಲ್ಲ.

ಹೀಗಾಗಿ ಅವರು ಮುನ್ನುಡಿದ ಎಚ್ಚರಿಕೆಯ ಮಾತುಗಳಾವುವೂ ದೊಡ್ಡ ಸುದ್ದಿಯಾಗಲಿಲ್ಲ. ಆದರೆ ವಾಸ್ತವವಾಗಿ ರಾಹುಲ್ ಗಾಂಧಿ ವಿಚಾರದಲ್ಲಿ ಗುಲಾಂ ನಬಿಯವರು ಹೇಳಿದ್ದು ಸರಿಯಾಗಿಯೇ ಇತ್ತು! ನಿಜ ಹೇಳಬೇಕೆಂದರೆ, ತಮ್ಮ ತಂದೆ ರಾಜೀವ್
ಗಾಂಽಯವರಂತೆಯೇ ರಾಹುಲರಿಗೂ ರಾಜಕೀಯವು ಆಸಕ್ತಿ ಇರದ ಕ್ಷೇತ್ರವಾಗಿತ್ತು. ಆದರೆ ಕೆಲವರ ಒತ್ತಡದಿಂದಾಗಿ ಅನಿವಾರ್ಯವಾಗಿ ರಾಜಕೀಯಕ್ಕೆ ಬಂದ ರಾಹುಲರಿಗೆ ಪಕ್ಷದ ಹಿರಿಯರು ರಾಜಕೀಯದ ‘ಅಕ್ಷರಮಾಲೆ’ ಕಲಿಸುವುದನ್ನು
ಬಿಟ್ಟು ಅವರ ತಲೆಗೆ ನೇರವಾಗಿ ಸಿಂಹಾಸನದ ಕನಸು ಬಿತ್ತಿದರು.

ಪರಿಣಾಮ ರಾಹುಲ್‌ಗೆ ರಾಜಕೀಯದ ಪಟ್ಟುಗಳು ತಿಳಿಯದೇ ಹೋದವು. ಸಾಲದೆಂಬಂತೆ, ಅವರಲ್ಲಿ ಜಾಗತಿಕ ರಾಜಕಾರಣದ ಜ್ಞಾನವೂ ಅಷ್ಟಾಗಿ ಇಲ್ಲ. ಹೀಗಾಗಿ ಎಲ್ಲಿ ಏನೇನು ಮಾತಾಡಬೇಕು, ಯಾವ ವಿಷಯವನ್ನು ಹೇಗೆ ಪ್ರಸ್ತಾಪಿಸ ಬೇಕು ಎಂಬ ಸಾಮಾನ್ಯ ತಿಳಿವಳಿಕೆ ಕೂಡ ಅವರಲ್ಲಿ ಇಲ್ಲವಾಗಿದೆ! ಇದರ ಪರಿಣಾಮವಾಗಿಯೇ, ಪ್ರತಿಬಾರಿ ವಿದೇಶ ಪ್ರವಾಸ
ಕೈಗೊಂಡಾಗಲೂ ಅಲ್ಲಿನ ವಿವಿಧ ವೇದಿಕೆಗಳಲ್ಲಿ  ತಾವು ನೀಡುವ ಅವಿವೇಕದ ಅಥವಾ ಬಾಲಿಶ ಹೇಳಿಕೆಗಳಿಂದಾಗಿ ರಾಹುಲ್ ಅಪ್ರಬುದ್ಧರಾಗಿ ಕಾಣುತ್ತಾರೆ.

ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲೂ ಮತ್ತದೇ ವಿವಾದಾತ್ಮಕ ಹೇಳಿಕೆಗಳನ್ನು ರಾಹುಲ್ ನೀಡಿ ಭಾರತವನ್ನು ಅವಮಾನಿಸಿದ್ದಾರೆ, ತನ್ಮೂಲಕ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಅಮೆರಿಕದಲ್ಲಿ ಆಗಿದ್ದೇನು? ಸ್ಯಾನ್
-ನ್ಸಿಸ್ಕೋದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಮಾತನಾಡುತ್ತಾ, ‘೧೯೮೦ರ ದಶಕದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದಂತೆಯೇ ಈಗ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮುಷ್ಲಿಮರಷ್ಟೇ ಅಲ್ಲ, ಸಿಖ್ಖರು,
ಕ್ರೈಸ್ತರು, ದಲಿತರು ಹಾಗೂ ಬುಡಕಟ್ಟು ಸಮುದಾಯದವರಲ್ಲಿಯೂ ಇಂಥದೇ ಅಸುರಕ್ಷಿತ ಭಾವನೆ ಮಾಡುತ್ತಿದೆ’ ಎಂದು ಹೇಳಿ ಭಾರತದ ಘನತೆಯನ್ನು ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಹಾಳುಮಾಡಿದರು.

ರಾಹುಲ್ ಒಂದಕ್ಕಿಂತ ಹೆಚ್ಚು ಬಾರಿ ಹೀಗೆ ನಡೆದುಕೊಂಡಿರುವುದಕ್ಕೆ ಇಲ್ಲಿವೆ ಕೆಲ ಉದಾಹರಣೆಗಳು: ಕಳೆದ ಬಾರಿಯ ಲಂಡನ್ ಪ್ರವಾಸದ ವೇಳೆ, ‘ಭಾರತದಲ್ಲಿ ಪ್ರಜಾಪ್ರಭುತ್ವ ನಿಸ್ತೇಜಗೊಂಡಿದೆ. ಹೀಗಾಗಿ ಇಲ್ಲಿನ ಪ್ರಜಾಪ್ರಭುತ್ವವನ್ನು ಉಳಿಸಲು
ಅಮೆರಿಕ ಹಾಗೂ ಐರೋಪ್ಯ ದೇಶಗಳು ಭಾರತದ ರಕ್ಷಣೆಗೆ ಬರಬೇಕು’ ಎನ್ನುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದರು. ಅಮೆರಿಕ ಮಾಜಿ ರಾಯಭಾರಿ ಮತ್ತು ಹಾರ್ವರ್ಡ್ ಕೆನಡಿ ಶಾಲೆಯ ಪ್ರೊಫೆಸರ್ ನಿಕೋಲಸ್ ಬರ್ನ್ಸ್ ಅವರೊಂದಿಗಿನ ಆನ್‌ಲೈನ್ ಚರ್ಚೆಯ ವೇಳೆ, ‘ಭಾರತದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳ ಬಗ್ಗೆ
ಅಮೆರಿಕ ಏಕೆ ಚಕಾರವೆತ್ತುತ್ತಿಲ್ಲ? ಈ ವಿಷಯದಲ್ಲಿ ಭಾರತವನ್ನು ಅಮೆರಿಕ ಪ್ರಶ್ನಿಸಬೇಕು’ ಎಂದಿದ್ದರು.

ಭಾರತ-ಚೀನಾ ಯೋಧರ ಮಧ್ಯೆ ಘರ್ಷಣೆ ನಡೆದ ಸಂದರ್ಭದಲ್ಲಿ ‘ಭಾರತೀಯ ಸೈನಿಕರ ಪಿಟಾಯಿ ಆಗುತ್ತಿದೆ’ (ಅಂದರೆ, ನಮ್ಮ ಸೈನಿಕರನ್ನು ಹೊಡೆಯಲಾಗುತ್ತಿದೆ) ಎನ್ನುವ ಮೂಲಕ ನಮ್ಮ ಯೋಧರಿಗೆ ಅವಮಾನಿಸಿದ್ದರು. ಹಿಂದೊಮ್ಮೆ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಇಡೀ ದೇಶವೇ ಚೀನಾದ ವಿರುದ್ಧ ತಿರುಗಿಬಿದ್ದಿದ್ದ ಸಮಯದಲ್ಲಿ,
ರಾಹುಲರು ಭಾರತದಲ್ಲಿ ಚೀನಾ ರಾಯಭಾರಿ ಅಧಿಕಾರಿಯನ್ನು ಭೇಟಿಮಾಡಿದ್ದು ದೊಡ್ಡ ವಿವಾದವನ್ನು ಎಬ್ಬಿಸಿತ್ತು.

ರಾಹುಲರ ಇಂಥ ಅವಿವೇಕದ ವರ್ತನೆಗಳ ಬಗ್ಗೆ ಹೇಳುತ್ತಾ ಹೋದರೆ ಅದು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮುಸ್ಲಿಂ ಬಾಹುಳ್ಯದ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಟರ್ಕಿ ದೇಶಗಳು ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸಿ ದೇಶದಲ್ಲಿ ಕೋಮು ಸಾಮರಸ್ಯ ಹಾಳುಮಾಡುವ ಪಿತೂರಿ ನಡೆಸುತ್ತಿವೆ ಹಾಗೂ ಭಾರತದ ವಿರುದ್ಧ ಜಾಗತಿಕ ಸಮುದಾಯವನ್ನು ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿವೆ.

ಇಂಥ ಸಮಯದಲ್ಲಿ ರಾಹುಲರು ಆಡುವ ಮಾತುಗಳನ್ನು ಕೇಳಿದರೆ, ಅವರಿಗೇನಾದರೂ ಭಾರತವಿರೋಧಿ ಗ್ಯಾಂಗಿನ
ಲಿಂಕ್ ಇದೆಯಾ? ಎಂಬ ಅನುಮಾನವೂ ಕಾಡುತ್ತದೆ. ಏಕೆಂದರೆ, ಜಾಗತಿಕ ಗಣ್ಯರೇ ಭಾರತ ವನ್ನಿಂದು ಪ್ರಶಂಸಿಸುತ್ತಿದ್ದಾರೆ ಮತ್ತು ಭಾರತವೂ ಜಾಗತಿಕ ಮಟ್ಟದಲ್ಲಿ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ದೇಶದ ಜಿಡಿಪಿ ವಿಶ್ವದಲ್ಲೇ ಅಗ್ರಗಣ್ಯತೆ ಸಾಧಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಭಾರತದಲ್ಲಿ ಹೂಡಿಕೆ ಮಾಡಲು ವಿಶ್ವದ ದೊಡ್ಡ ದೊಡ್ಡ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ.

ಇಂಥ ಸಮಯದಲ್ಲಿ ವಿವೇಕವಿರುವ ಯಾರೇ ಆದರೂ ವಿದೇಶಿ ನೆಲದಲ್ಲಿ ನಿಂತು ಭಾರತದ ಆಂತರಿಕ ವಿಚಾರದ ಬಗ್ಗೆ ಮಾತನಾಡುತ್ತಾರಾ? ಅಂಥ ದ್ರೋಹವನ್ನು ಪಾಕಿಸ್ತಾನದವರು ಮಾತ್ರ ಮಾಡಬಹುದು! ಆದರೆ ರಾಹುಲರೇಕೆ ಹಾಗೆ ಮಾಡುತ್ತಿದ್ದಾರೆ ಎನ್ನುವುದು ದೇವರಿಗೊಬ್ಬನಿಗೇ ಗೊತ್ತು. ರಾಹುಲರು ಅಮೆರಿಕದಲ್ಲಿ ನಿಂತು ಭಾರತದ ಪ್ರಜಾಪ್ರಭುತ್ವ
ವನ್ನು ಪ್ರಶ್ನಿಸುತ್ತಿದ್ದರೆ, ಮತ್ತೊಂದೆಡೆ ಅಮೆರಿಕವೇ ‘ಭಾರತದ ಪ್ರಜಾಪ್ರಭುತ್ವ ಪ್ರಕಾಶಿಸುತ್ತಿದೆ, ಬೇಕಾದರೆ ದೆಹಲಿಗೆ ಹೋಗಿ ನೋಡಿ’ ಎಂದಿದೆ!

ಮತ್ತೊಂದು ಸ್ವಾರಸ್ಯಕರ ಸಂಗತಿಯೇನು ಗೊತ್ತಾ? ರಾಹುಲರ ವಿದೇಶಿ ಭೇಟಿಗಳನ್ನು ಯಾರಾದರೂ ಸೂಕ್ಷ್ಮವಾಗಿ ಗಮನಿಸಿದರೆ, ಅವರು ಭೇಟಿಮಾಡುವ ವ್ಯಕ್ತಿಗಳು ಬಹುತೇಕ ಭಾರತವಿರೋಧಿ ನೀತಿಗಳನ್ನು ಹೊಂದಿರುತ್ತಾರೆ! ಅಂಥ ವ್ಯಕ್ತಿಗಳ ಜತೆಯೇ ರಾಹುಲರ ಸಂವಾದಗಳು ಏಕೆ ಏರ್ಪಾಡಾಗಿರುತ್ತವೆ? ಗೊತ್ತಿಲ್ಲ.

ಅಂದಹಾಗೆ, ರಾಹುಲರಿಗೆ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಯಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಮೋದಿಯವರು ರಾಜಕಾರಣದಲ್ಲಿ ಸಕ್ರಿಯರಾಗಿರುವವರೆಗೂ ತಮ್ಮ ಹಾಗೂ ಕಾಂಗ್ರೆಸ್ಸಿಗರ ಯಾವ ಆಟವೂ ನಡೆಯುವುದಿಲ್ಲ ಎಂಬುದು ಸ್ವತಃ ರಾಹುಲರಿಗೂ ಗೊತ್ತಿದೆ. ಹೀಗಾಗಿ ಮೋದಿಯ ವರನ್ನು ತೆಗಳುವುದು, ವಿನಾಕಾರಣ ಕಾಲೆಳೆಯುವುದು ಅವರ ಕೆಲಸ. ಮೋದಿಯವರನ್ನು, ಬಿಜೆಪಿಯನ್ನು ರಾಹುಲರು ವಾಚಾಮಗೋಚರವಾಗಿ ಟೀಕಿಸು ವುದಕ್ಕೆ ಯಾರ ವಿರೋಧವೂ, ಆಕ್ಷೇಪಣೆಯೂ ಇಲ್ಲ ಮತ್ತು ಅದಕ್ಕೆ ಯಾರ ಅಪ್ಪಣೆಯೂ
ಬೇಕಾಗಿಲ್ಲ. ಏಕೆಂದರೆ, ಸರಕಾರ ಮತ್ತು ಅದರ ನಾಯಕರ ನಡವಳಿಕೆಗಳನ್ನು ಪ್ರಶ್ನಿಸುವುದು ವಿಪಕ್ಷ ನಾಯಕರ ಕೆಲಸ.

ಅವರನ್ನು ಇವರು, ಇವರನ್ನು ಅವರು ತೆಗಳುವುದು ರಾಜಕೀಯ ನಾಯಕರುಗಳ ತೆವಲೂ ಹೌದು. ಆದರೆ ಮೋದಿಯವರ ಮೇಲಿನ ಸಿಟ್ಟನ್ನು ದೇಶದ ಹೆಸರಿನಲ್ಲೇಕೆ ತೀರಿಸಿಕೊಳ್ಳಬೇಕು? ಅಷ್ಟಕ್ಕೂ ರಾಹುಲರಿಗೆ ದೇಶ ಅಂಥ ಯಾವ ಅನ್ಯಾಯವನ್ನು ಮಾಡಿದೆ? ದೇಶದಲ್ಲೇ ಇದ್ದುಕೊಂಡು ಇಲ್ಲಿನ ಚರ್ಚಾವಿಷಯಗಳನ್ನೇ ಮುಂದಿಟ್ಟುಕೊಂಡು ರಾಹುಲರು ಮೋದಿ ಸರಕಾರದ ವಿರುದ್ಧ ಎಂಥ ಹೇಳಿಕೆಯನ್ನಾದರೂ ನೀಡಲಿ.

ಅದನ್ನು ಬಿಟ್ಟು, ವಿದೇಶಿ ನೆಲದಲ್ಲಿ ನಿಂತು ಭಾರತದ ಆಂತರಿಕ ವಿಚಾರವನ್ನು ಪ್ರಶ್ನಿಸುವುದಕ್ಕೆ ಒಬ್ಬ ಭಾರತೀಯನಾಗಿ ನಾಚಿಕೆಯಾಗುವುದಿಲ್ಲವೇ?! ಇಂಥ ಕೆಲಸವನ್ನು ಯಾವ ದೇಶದ ನಾಯಕನಾದರೂ ಮಾಡುತ್ತಾರಾ, ಹೇಳಿ? ಇಂಥ
ಘಟನೆಗಳು ದೇಶಕ್ಕೆ ಮಾಡುವ ಅವಮಾನವಲ್ಲದೆ ಮತ್ತೇನು? ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ತೆಗಳುವುದನ್ನು ರಾಹುಲರು ಮುಂದಿನ ದಿನಗಳಲ್ಲಾದರೂ ನಿಲ್ಲಿಸಲಿ; ಅದೇ ಅವರು ದೇಶಕ್ಕೆ ಕೊಡುವ ಗೌರವ.

ಏನೇ ಹೇಳಿ, ರಾಹುಲರಿಗೆ ಸಾಕಷ್ಟು ವಯಸ್ಸಾಗಿದ್ದರೂ ಪ್ರೌಢತೆ ಮಾತ್ರ ಬಂದಿಲ್ಲ ಎಂಬುದು ಅವರ ವಿವೇಕವಿಲ್ಲದ ಮಾತು ಗಳಿಂದಲೇ ಗೊತ್ತಾಗುತ್ತದೆ. ಇಲ್ಲದಿದ್ದರೆ ‘ಮುಸ್ಲಿಂ ಲೀಗ್ ಒಂದು ಜಾತ್ಯತೀತ ಪಕ್ಷ’ ಎಂದು ಯಾರಾದರೂ ಹೇಳುತ್ತಾರಾ?! ಅಂದಹಾಗೆ, ರಾಹುಲ್ ಗಾಂಧಿಯವರ ವಿಷಯದಲ್ಲಿ ಅವರಿವರ ಅನಿಸಿಕೆಗಳು ಏನೇ ಇರಲಿ, ಸೋನಿಯಾ ಗಾಂಧಿಯವರಿಗೆ ಬರೆದ ಪತ್ರದಲ್ಲಿ ಗುಲಾಂ ನಬಿ ಆಜಾದರು ಉಲ್ಲೇಖಿಸಿದಂತೆ ಅವರಿನ್ನೂ ‘ಚೈಲ್ಡಿಶ್’ ಮತ್ತು ಒಬ್ಬ ಅಪ್ರಬುದ್ಧ ನಾಯಕ ಎಂಬುದಂತೂ ದಿಟ!!

error: Content is protected !!