Wednesday, 27th November 2024

ಮದಗಜ ಕೆರೆಯಿಂದ ಮಾಯವಾದ ಮಳೆ !

ಸುಪ್ತ ಸಾಗರ

rkbhadti@gmail.com

ಇನ್ನೂ ಈ ವರ್ಷದ ಶಿವರಾತ್ರಿಗೆ ವಾರವಿದೆ. ಆಗಲೇ ರಾಜ್ಯದ ಉತ್ತರದ ತುದಿಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬೀದರ್ ಹೊರತುಪಡಿಸಿ, ಯಾದಗಿರಿ, ಗುಲ್ಬರ್ಗ, ರಾಯಚೂರುಗಳಲ್ಲಿ ಪ್ರತಿ ಹನಿ ನೀರಿಗೂ ತತ್ವಾರ ಆರಂಭವಾಗಿದೆ. ತುಸು ಕೆಳಗಿಳಿದರೆ, ಕೊಪ್ಪಳ, ಬಾಗಲಕೋಟದಲ್ಲಿ ಖಾಸಗಿ ಬೋರ್‌ವೆಲ್‌ಗಳಿಗೆ ಬೀಗ ಹಾಕಿ ಮಲಗುತ್ತಿದ್ದಾರೆ ಮಂದಿ.

ಉತ್ತರ ಕರ್ನಾಟಕದ ಗದಗ್, ಹಾವೇರಿಯಲ್ಲಿ ನೀರಿಗೆ ಹಾಹಾಕಾರವೆದ್ದಿದೆ. ಮಲೆನಾಡಿನ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲ ತಾಲೂಕುಗಳಲ್ಲಿ ವಾರದಿಂದ ನೀರಿನ ಪರಿಸ್ಥಿತಿ ಹಿಂದೆಂದೂ ಕಾಣದಂತೆ ಬಿಗಡಾಯಿಸಿದೆ. ಇಡೀ ರಾಜಧಾನಿ ಬೆಂಗಳೂರನ್ನು ನೀರಿನ ಟ್ಯಾಂಕರ್‌ಗಳ ಲಾಭಿ ಆಳಲು ಆರಂಭಿಸಿದೆ. ಒಂದೇ ಒಂದು ಟ್ಯಾಂಕರ್ ನೀರು ೨೫೦೦-೨೮೦೦ ರು.ಗೆ ಬಿಕರಿಯಾಗುತ್ತಿದೆ. ಇದು ಸಾಲದೆಂಬಂತೆ ಎಲ್‌ನಿನೊ ಪರಿಣಾಮ ದಿಂದ ದಕ್ಷಿಣದ ರಾಜ್ಯಗಳ ತಾಪಮಾನ ಮಾರ್ಚ್ ಮಧ್ಯಭಾಗದ ಹೊತ್ತಿಗೆ ತೀವ್ರ ಏರಿಕೆ ಕಂಡು, ಬಿಸಿಗಾಳಿ ಅಪ್ಪಳಿಸುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕೊಳ್ಳೆ ಹೋದ ನಂತರ ಇದೀಗ ನೀರಿನ ಸಂರಕ್ಷಣೆಯ ಮಾತುಗಳು ಎಲ್ಲೆಲ್ಲೂ ಕೇಳಿ ಬರುತ್ತಿದೆ. ನೀರಾವರಿಯ ವಿಷಯದಲ್ಲಿ ನಮ್ಮ ವಿಸ್ಮೃತಿ ಇದೆಯಲ್ಲ, ಅದು ನಿಜಕ್ಕೂ ಅಕ್ಷಮ್ಯ. ಭಾರತಕ್ಕೆ ಜಗತ್ತಿನ ಯಾವ ರಾಷ್ಟ್ರವೂ ನೀರಿನ ಪಾಠವನ್ನು ಕಲಿಸಬೇಕಾಗಿಲ್ಲ. ಯಾರೂ ನಮಗೆ ಒಡ್ಡು ಕಟ್ಟಲು ಕಲಿಸಬೇಕಿಲ್ಲ. ಅಣೆಕಟ್ಟಿನ ಪಾಠ ಮಾಡಬೇಕಿಲ್ಲ. ನೀರು ಹರಿಸಲು, ನಿಲ್ಲಿಸಲು, ಇಂಗಿಸಿಕೊಳ್ಳಲು ಬೋಧಿಸಲೇಬೇಕಿಲ್ಲ. ಲಾಗಾಯ್ತಿನಿಂದ ನಾವು ಏನನ್ನು ನೀರಿನ ವಿಚಾರದಲ್ಲಿ ಅನುಸರಿಸಿಕೊಂಡು ಬಂದಿದ್ದೇವೋ ಅದನ್ನು ಉಳಿಸಿ ಕೊಂಡು ಬಂದಿದ್ದರೆ ಇವತ್ತು ನಮಗೆ ನೀರಿನ ಕೊರತೆ ಎಂಬುದೂ ಇರುತ್ತಿರಲಿಲ್ಲ, ಯಾವ ಬೃಹತ್ ನೀರಾವರಿ ಯೋಜನೆಗಳೂ ಅಗತ್ಯವಿರಲ್ಲಿ.

ಇಲ್ಲಿಗೆ ವ್ಯಾಪಾರಕ್ಕೆ ತಕ್ಕಡಿ ಹಿಡಕೊಂಡು ಬಂದು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬ್ರಿಟಿಯರೇ ನಮ್ಮ ನೀರಾವರಿ ವ್ಯವಸ್ಥೆ ಕಂಡು ದಂಗಾಗಿ ಹೋಗಿ ದ್ದರು. ಯೂರೋಪ್‌ನಿಂದ ಆಗಿನ ಕಾಲಕ್ಕೆ ಭಾರತಕ್ಕೆ ಭೇಟಿ ನೀಡಿದ್ದ ಎಲ್ಲ ಅಧ್ಯಯನಿಗಳೂ ನಮ್ಮ ನೀರ ವ್ಯವಸ್ಥೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ನಮ್ಮ ಕೆರೆಗಳು ಹೇಗಿದ್ದ ವೆಂದರೆ, ಯೂರೋಪಿನ ಜಲಾಶಯಗಳೂ ಇವಕ್ಕೆ ಹೋಲಿಸಿದರೆ ಬಹು ಚಿಕ್ಕವಾಗಿದ್ದವಂತೆ. ಇಂಥ ಮಾತನ್ನು ಹೇಳಿದ್ದು, ಕರ್ನಲ್ -ಫಾರ್ ಎಂಬ ಬ್ರಿಟಿಷ್ ಅಧಿಕಾರಿ; ೧೮೬೬ರಲ್ಲಿ ನಮ್ಮ ಮದಗದ ಕೆರೆಯನ್ನು ಕಂಡು. ಹೌದು, ಅದೇ ‘ಮಾಯದಂಥಾ ಮಳೆ ಬಂತಣ್ಣ…’ ಖ್ಯಾತಿಯ ಮದಗದ ಕೆರೆಯೇ!

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದ ಸಮೀಪದ ಮದಗದ ಕೆರೆ ತನ್ನ ವಿಸ್ತಾರ, ಬಲಿಷ್ಠತೆಗೆ ಹೆಸರಾದದ್ದು. ಮದಗದ ಕೆರೆ ತುಂಬಬೇಕೆಂದರೆ ಮಾಯದ ಮಳೆಯೇ ಬರಬೇಕೆಂಬುದು ಜನಪದರ ಹಾಡುಗಳಲ್ಲಿಯೂ ಹಾಸುಹೊಕ್ಕು. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಗಡಿಯಂಚಿ
ನಲ್ಲಿ ನೆಲೆಗೊಂಡಿರವು ಈ ಕೆರೆ ನಿರ್ಮಾಣವಾದ್ದು ಶ್ರೀಕೃಷ್ಣದೇವರಾಯನ ಆಡಳಿತಾವಽಯಲ್ಲಿ. ಈ ಬಗ್ಗೆ ‘ಕೆಳದಿ ನೃಪತುಂಗವಿಜಯ’ ಎಂಬ ಕೃತಿಯಲ್ಲಿ ಉಲ್ಲೇಖಗಳಿವೆ.

ರಾಜಾಜ್ಞೆಯಂತೆ ಕೆಳದಿ ಸದಾಶಿವನಾಯಕ ಬಂಕಾಪುರದ ಮಾದಣ್ಣ ಒಡೆಯನ ನೆರವಿನಲ್ಲಿ ಈ ಕೆರೆ ನಿರ್ಮಿಸಿದನಂತೆ. ಕುಮದ್ವತಿ ನದಿಯ ಪಾತ್ರದಲ್ಲಿ ಬರುವ ಈ ಕೆರೆ ಅಡ್ಡಲಾಗಿ ಇರುವುದು ಕೇವಲ ಮಣ್ಣಿನ ನಿರ್ಮಾಣ ಎಂದರೆ ಅಚ್ಚರಿಯಾಗುತ್ತದೆ. ನೂರು ಅಡಿ ದಪ್ಪದ ಕಲ್ಲು ಹಾಸನ್ನು ಹೊಂದಿ
ರುವ ಕೆರೆಯ ಮೇಲ್ಭಾಗ ೪೦೦ ರಿಂದ ೬೦೦ ಅಡಿ ಅಗಲವಿದೆ. ಕೆರೆ ಏರಿಯ ಉದ್ದವೇ ೧೮೫೦ ಅಡಿ ಎಂದರೆ ಅದರ ವಿಸ್ತಾರವನ್ನು ಊಹಿಸಿಕೊಳ್ಳಿ. ೧೮೬೩ರಲ್ಲಿ ಬ್ರಿಟಿಷರು ಕೆರೆಯನ್ನು ದುರಸ್ತಿಮಾಡಿಸಿದ್ದರೆಂದು ಹೇಳಲಾಗಿದ್ದರೂ ಆ ಸನ್ನಿವೇಶದಲ್ಲಿ ಕೆರೆ ಸುಸ್ಥಿತಿಯಲ್ಲೇ ಇತ್ತೆಂಬುದು ತಿಳಿದುಬರುತ್ತದೆ. ನಿಜವಾಗ ೧೮೬೨ರಲ್ಲಿ ಧಾರವಾಡದ ಎಂಜಿನಿಯರ್ ಆಗಿದ್ದ -ಫಾರ್ ಕೆರೆಯ ಪಶ್ಚಿಮದ ಕಟ್ಟೆಯನ್ನು ಬಲಗೊಳಿಸಿದ್ದ ಎಂಬ ದಾಖಲೆ ಇದೆ. ನಂತರ ೧೯೩೮ರಲ್ಲಿ ಮೈಸೂರು ಸಂಸ್ಥಾನ ಅಂಜನಾಪುರ ಜಲಾಶಯ ನಿರ್ಮಿಸುವವರೆಗೂ ಸುತ್ತಮುತ್ತಲ ತಾಲೂಕುಗಳನ್ನು ಮದಗ ಕೆರೆಯೇ ಪೊರೆದಿತ್ತು.

ಇಂಥ ಮಾತೃ ಸಮಾನ ತಾಣವನ್ನು ನಾವಿಂದು ಮರೆತು ಮೆರೆಯುತ್ತಿದ್ದೇವೆ. ದಾಹ ನಮ್ಮನ್ನು ಕಾಡದೇ ಉಳಿದೀತೆ? ನೀರೆಷ್ಟು ಅಗಾಧವೋ ನೀರಿನ ಸಮಸ್ಯೆಯೂ ಅಗಾಧವೇ. ನೀರಿನ ಬಗ್ಗೆ ನಕಾರಾತ್ಮಕವಾಗಿ ಬರೆಯಬಾರದೆಂಬುದು ನನ್ನ ವ್ರತ. ಮೊದಲಿಂದಲೂ ನನ್ನ ಪ್ರತಿಪಾದನೆ ಸಮಸ್ಯೆ ಇರು
ವುದು ನೀರಿನದ್ದಲ್ಲ. ಈ ಭೂಮಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಎಷ್ಟು ಮಳೆ ಆಗುತ್ತಿತ್ತೋ, ಇವತ್ತಿಗೂ ಅಷ್ಟೇ ಮಳೆ ಸುರಿಯುತ್ತಿದೆ. ಆದರೆ ಸಮಸ್ಯೆ ಇರುವುದು ನೀರಿನ ನಿರ್ವಹಣೆಯಲ್ಲಿ ಬೆಳೆಯುತ್ತಿರುವ ನಗರಗಳು, ಹೆಚ್ಚಿದ ಜನಸಂಖ್ಯೆ, ಕೈಗಾರಿಕೆಗಳ ಬೆಳವಣಿಗೆ, ವಾಹನ ದಟ್ಟಣೆ ಇತ್ಯಾದಿಗಳಿಂದ
ನೀರಿನ ಬಳಕೆ ಹೆಚ್ಚಿದೆ. ಅಪವ್ಯಯ ಸಾಮಾನ್ಯವಾಗಿದೆ. ಇದರ ಜತೆಗೆ ಮಾಲಿನ್ಯ ನಿಯಂತ್ರಣ, ಜಲಮೂಲಗಳ ನಿರ್ವಹಣೆಯನ್ನು ಮರೆತಿದ್ದೇವೆ.

ಸುತ್ತೆಲ್ಲವೂ ನೀರಿನ ಋಣಾತ್ಮಕ ಅಂಶಗಳೇ ತುಂಬಿರುವಾಗ ಸಕಾರಾತ್ಮಕವಾಗಿ ಯೋಚಿಸುವುದಾದರೂ ಹೇಗೆ? ಇದು ನಮ್ಮೊಬ್ಬರ ಸಮಸ್ಯೆ ಅಲ್ಲ. ಜಗತ್ತೆ ನೀರಿನ ಸಂಕಷ್ಟವನ್ನು ಎದುರಿಸುತ್ತಿದೆ. ವಿಶ್ವದ ಮೂರನೇ ಒಂದು ಭಾಗದಷ್ಟು ಜನರು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾಸ್ ವೇಗಾಸ್ ಮತ್ತು ಲಾಸ್ ಎಂಜಲೀಸ್‌ನ ತಗ್ಗು ಪ್ರದೇಶದಲ್ಲಿರುವ ರೈತರು ಕೊಲೊರಡೊ ನದಿಯಿಂದ ನೀರು ಪಡೆಯಲು ಹರಸಾಹಸಪಡುತ್ತಿದ್ದಾರೆ. ಅಲ್ಲಿನ ಕೃಷಿ ದಿನ ದಿಂದ ದಿನಕ್ಕೆ ಕುಂಠಿತಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಬದುಕಿಗೆ ನೀರು ಬಹಳ ದುಬಾರಿಯಾಗುತ್ತಿದೆ.

ನದಿಗಳು ಬತ್ತುತ್ತಿವೆ. ಕೊಳಗಳು ಕರಗುತ್ತಿವೆ. ಅಂತರ್ಜಲ ಬರಿದಾಗುತ್ತಿದೆ. ಪರಿಣಾಮ ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ೨೦೨೫ರ ಹೊತ್ತಿಗೆ ನೀರಿನ ಒತ್ತಡದಿಂದ ಬಳಲುವವರ ಸಂಖ್ಯೆ ೮ ಶತಕೋಟಿ ದಾಟುವ ಲಕ್ಷಣಗಳಿವೆ. ಇವೆಲ್ಲದರ ಪರಿಣಾಮ ಇಡೀ ಮನುಕುಲದ ಅಭಿವೃದ್ಧಿಗೆ ಮಾರಕ ವಾಗಿ ಪರಿಣಮಿಸುತ್ತದೆ. ಪಟ್ಟಣದಲ್ಲಿ ಕೊಳೆಗೇರಿ, ಗುಡಿಸಿಲು ಗಳಲ್ಲಿ ವಾಸಿಸುವ ಜನರಿಗೆ ನೀರು ಒದಗಿಸುವುದು ಕಷ್ಟವಾಗುತ್ತಿದೆ. ಮುಂದಿನ ಕೆಲವೇ ವರ್ಷ ಗಳಲ್ಲಿ ಹಳ್ಳಿಯ ಜನರೆಲ್ಲ ಪಟ್ಟಣ ಸೇರದಿದ್ದರೆ ಕೇಳಿ. ಏಕೆಂದರೆ ಹಳ್ಳಿಗಳಲ್ಲಿ ಸಿಗಬೇಕಾದ್ದು ಸಿಗದಿದ್ದಾಗ ಅದನ್ನರಸಿ ಪಟ್ಟಣಗಳಿಗೆ ವಲಸೆ ಹೋಗುವುದು ಸಹಜ.

ಅದು ಉದ್ಯೋಗವೇ ಇರಬಹುದು, ವಿದ್ಯೆಗೆ ತಕ್ಕ ಮಾನ್ಯತೆಯೇ ಇರಬಹುದು, ಜೀವನೋಪಾಯ ಮಾರ್ಗವೇ ಇರಬಹುದು….ಇಂಥವನ್ನು ಅರಸಿ ಪಟ್ಟಣಕ್ಕೆ ವಲಸೆ ಹೋಗುವುದು ಸಹಜ. ನಮ್ಮಲ್ಲಿ ಗಾದೆಯೇ ಇದೆಯಲ್ಲ. ಕೆಟ್ಟು ಪಟ್ಟಣ ಸೇರು ಎಂದು. ಈಗ ಈ ಮಾತನ್ನು ಸ್ವಲ್ಪ ಬದಲಿಸಬೇಕಾಗಿ ಬಂದಿದೆ. ಇದಕ್ಕೆ ‘ನೀರು ಕೆಟ್ಟು ಪಟ್ಟಣ ಸೇರು’ ಎಂದು ಸೇರಿಸಿಕೊಳ್ಳುವುದು ಒಳಿತು. ಹೌದು, ಹಳ್ಳಿಗಳಲ್ಲಿ ಮುಖ್ಯ ಉದ್ಯೋಗವಾದ ಕೃಷಿಗೆ ನೀರು ಸಿಗುತ್ತಿಲ್ಲ. ಹೀಗಾಗಿ ಕೃಷಿ ಉದ್ಯೋಗ ಮಾಡುತ್ತಿದ್ದವರೆಲ್ಲ ಹೊಟ್ಟೆ ಪಾಡನ್ನು ಅರಸಿ ಪಟ್ಟಣ ಸೇರುತ್ತಲೇ ಬಂದಿದ್ದಾರೆ; ಬರುತ್ತಿದ್ದಾರೆ.

ನಮ್ಮಲ್ಲಿ ಒಂದು ಮಾತಿದೆ; ‘ಎಲ್ಲಾ ಸರಿ, ಆದರೆ ಮದು ಮಗನಿಗೆ ಅದೇ ಕೊರತೆ…’ ಅಂತ. ಹಳ್ಳಿಗಳ ಕಡೆಯ ಗಾದೆ ಗಳೆಂದರೇ ಹಾಗೆ ಅವು ಒಂದಷ್ಟು ನಗೆ ಬುಗ್ಗೆಯನ್ನು ಉಕ್ಕಿಸುತ್ತವೆ, ಅರಿವನ್ನು ಮೂಡಿಸುತ್ತವೆ, ಮೇಲ್ನೋಟಕ್ಕೆ ಪೋಲಿ ಪೋಲಿಯಾಗಿ ಕಾಣುತ್ತವೆ, ಇಷ್ಟೆಲ್ಲದರ ಜತೆ ಅದ್ಭುತ ಸತ್ಯವೊಂದನ್ನು ಸಾರುತ್ತವೆ. ರಾಜಧಾನಿ ಬೆಂಗಳೂರಿನಲ್ಲಿ ಕೆರೆಗಳೆಲ್ಲ ಒತ್ತುವರಿಯಾಗಿ, ರಾಜಕಾರಣಿಗಳು, ಅಧಿಕಾರಸ್ಥರ ದಾಹಕ್ಕೆ ನೀರು ಬಲಿಯಾಗಿ ಸರ್ವನಾಶದ ಮೆಟ್ಟಿಲಿನಲ್ಲಿ ನಿಂತಿರುವಾಗ ಈ ಮಾತು ನೆನಪಾಗುತ್ತಿದೆ. ಬಿಡಿಎದಂಥ ಸರಕಾರ ಸಂಸ್ಥೆಯೇ ಕೆರೆಯನ್ನು ನುಂಗಿ ನೀರು ಕುಡಿದಿದೆ. ಆಡಳಿತದಲ್ಲಿರುವ
ಪ್ರಮುಖರಿಗೇ ಕೆರೆ ಅಂಗಳದಲ್ಲಿ ನಿವೇಶನ ನೀಡಲಾಗಿದೆ.

ಚನ್ನೈನಂಥ ನಗರದಲ್ಲಿ ಇತ್ತೀಚೆಗಷ್ಟೇ ಸೃಷ್ಟಿಯಾದ ಪ್ರವಾಹದ ಅವಾಂತರವನ್ನು ನೆನೆಸಿಕೊಂಡರೆ ಬೆಂಗಳೂರಿನ ಬಗ್ಗೆ ಕುಳಿತಲ್ಲಿಯೇ ಬೆವರು ವಂತಾಗುತ್ತದೆ. ಕೆರೆ ಇಲ್ಲದಿದ್ದ ಮೇಲೆ ಅದು ಹೇಗೆ ಸ್ವಾಮೀ ಊರೆಂಬುದು ಊರು ಆದೀತು ? ಊರೆಂದರೆ ಅದಕ್ಕೆ ಮೊದಲು ನಿಮಗೆ ಕೆರೆ ಸಿಗಲೇಬೇಕು. ಅದು ತುಂಬಿ ತುಳುಕಾಡಬೇಕು. ನಲುಗುವ ಕೆರೆಯ ಮೇಲಣ ಗಾಳಿ ಬೀಸಿ ಹೊಲವ ಹಾದು ಹೋಗಬೇಕು. ಅಲ್ಲೊಂದಿಷ್ಟು ದನಕರುಗಳು ನೀರು ಕುಡಿಯಬೇಕು. ನೀರೆಯರು ಬಟ್ಟೆ ತೊಳೆಯಬೇಕು, ಚಿಣ್ಣರು ಆಡಬೇಕು. ಚೆನ್ನಾದ ತಾವರೆ ಅಲ್ಲಿ ಅರಳಿ ನಗಬೇಕು. ಇವೆಲ್ಲವನ್ನೂ ದಾಟಿಯೇ ನೀವು ಊರನ್ನು ಪ್ರವೇಶಿಸಬೇಕು. ನಮ್ಮ ಭಾರತೀಯ ಹಳ್ಳಿಗಳೆಂದರೇ ಹಾಗೆ. ಕೆರೆ ಅದರ ಅವಿಭಾಜ್ಯ ಅಂಗ.

ಕೆರೆಗಳಲ್ಲಿ ತುಂಬಿರುವ ಹೂಳಿನಿಂದ ೨.೫ ಲಕ್ಷ ಎಕರೆಗೆ ಕೊಡುವ ನೀರಿನ ಪ್ರಮಾಣ ಕಡಿಮೆ ಆಗಿದೆ ಎಂದು ಸರಕಾರಿ ಅಂದಾಜು ಹೇಳುತ್ತಿದೆ. ಬರ ಮತ್ತು ನೆರೆ ಎರಡಕ್ಕೂ ಪರಿಹಾರ ಕೆರೆ ಎಂಬುದು ಯಾವತ್ತಿಗೋ ಕಂಡುಂಡ ಸತ್ಯ. ಇದರ ನಾಶದ ಪರಿಣಾಮವಾಗಿಯೇ ಇಂದು ಬೆಳೆಯುತ್ತಿರುವ ಬೆಂಗಳೂರು ನೀರಿನ ಹಾಹಾಕಾರವನ್ನು ಎದುರಿಸುತ್ತಿದೆ. ಇದೇ ವೇಳೆ ಒಂದೇ ಒಂದು ಮಳೆಗೆ ಬೆಂಗಳೂರಿನ ರಸ್ತೆಗಳೆಲ್ಲ ಕೃತಕ ಪ್ರವಾಹದಿಂದ ಆವರಿಸಿಕೊಳ್ಳುತ್ತದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಭಾರತವನ್ನು ಕೊಳ್ಳೆ ಹೊಡೆದ ಬಹುತೇಕ ವಿದೇಶಿ ಆಡಳಿತಗಾರರೆಲ್ಲರೂ ಶ್ಲಾಸಿದ್ದು ನಮ್ಮಲ್ಲಿದ್ದ ಸಮರ್ಥ ಕೆರೆಗಳನ್ನು, ಅದರ ನಿರ್ವಹಣೆಯನ್ನು.

ಇಂಗ್ಲಿಷರಂತೂ ನಮ್ಮ ಕೆರೆಗಳ ತಂತ್ರಜ್ಞಾನವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಭಾರತದ ಜನಗಣತಿಯ ಕಮಿಷನರ್ ಆಗಿದ್ದ ಸರ್ ಚಾರ್ಲ್ಸ್ ಎಲಿಯಬ್ ೧೮೭೦ರಲ್ಲಿ ಈ ವರದಿ ಮಾಡಿದ್ದಾರೆ. ‘ಒಂದೊಂದು ಕಣಿವೆಯಲ್ಲಿಯೂ ನೀರಾವರಿ ಕೆರೆಗಳ ಒಂದು ದೊಡ್ಡ ಜಾಲವೇ ಇರುತ್ತದೆ. ಒಂದೊಂದು ನದಿಯೂ ಹತ್ತಾರು ನೀರಾವರಿ ಕಾಲುವೆಗಳಿಗೆ ನೀರನ್ನು ಪೂರೈಸುತ್ತದೆ. ಈ ಇಡೀ ವ್ಯವಸ್ಥೆ ನಿಜಕ್ಕೂ ಚಮತ್ಕಾರ ಪೂರ್ಣ’ ಎನ್ನುತ್ತಾರೆ
ಅವರು. ೧೮೮೩ರಲ್ಲಿ ಜೆ. ಥಾಮ್ಸನ್ ಎಂಬಾತ ‘ಇಂಡಿಯಾ ಅಂಡ್ ದಿ ಕಾಲೋನಿಸ್’ ಎಂಬ ಗ್ರಂಥದಲ್ಲಿ ಈ ದೇಶದ ಜನತೆ ಗಾಗಿ ಹಿಂದೆ ಪ್ರಭುತ್ವಗಳು ನಿರ್ಮಿಸಿದ ರಸ್ತೆ, ಕಾಲುವೆ ಮತ್ತು ಕೆರೆಗಳನ್ನು ಹಾಳಾಗಲು ಅವಕಾಶ ಕೊಟ್ಟಿದೆ ಎಂದು ತಿಳಿಸಿದ್ದಾರೆ.

ಯಾರು ಹೊಗಳಿದ್ದರೋ ಅವರೇ ಇಂದು ನಮ್ಮ ಕೆರೆಗಳ ದುಃಸ್ಥಿತಿಯ ಬಗ್ಗೆ ಮರುಗುತ್ತಿದ್ದಾರೆ. ಇಷ್ಟಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಪಶ್ಚಾತ್ತಾಪ ಪಟ್ಟರೂ ಪ್ರಯೋಜನ ವಿಲ್ಲದಂತಾಗುತ್ತದೆ. ದೇಶದ ಬಹುದೊಡ್ಡ ಶತ್ರು ನಾವೆಲ್ಲ ಅಂದುಕೊಂಡಂತೆ ಪಾಕಿಸ್ಥಾನವಲ್ಲ, ಆ ದೇಶವನ್ನು ಈವರೆಗೆ ಎತ್ತಿಕಟ್ಟುತ್ತಿದ್ದ ಅಮೆರಿಕವಲ್ಲ. ನೆರೆಯ ಕಿರಿಕಿರಿ ಆಗಿರುವ ಚೀನಾವೂ ಅಲ್ಲ. ದೇಶಾದ್ಯಂತ ತಲ್ಲಣ ಸೃಷ್ಟಿಸುತ್ತಿದ್ದ, ನಿರಂತರ ಭಯೋತ್ಪಾದನೆ
ಮಾಡುತ್ತಲೇ ಬಂದಿದ್ದ ಉಗ್ರಗಾಮಿ ಸಂಘಟನೆಗಳೂ ಅಲ್ಲ. ಬಡತನ, ನಿರುದ್ಯೋಗ ಇವ್ಯಾವುವೂ ಅಲ್ಲ. ಭಾರತದ ಮಟ್ಟಿಗೆ ಅತಿದೊಡ್ಡ ಶತ್ರು ನೀರಿನ ಸಮಸ್ಯೆ. ಇದು ನಮ್ಮ ಆರ್ಥಿಕ ಅಭಿವೃದ್ಧಿಯನ್ನು ನಿರ್ಬಂಧಿಸುತ್ತಿದೆ.

ಕೃಷಿಯನ್ನು ಕುಂಠಿತಗೊಳಿಸುತ್ತಿದೆ. ರಾಜಕೀಯ ವ್ಯವಸ್ಥೆಯನ್ನು ಏರು ಪೇರಾಗಿಸುತ್ತಿದೆ. ಬಡತನ ಪ್ರಮಾಣ ಏರಿಕೆಗೆ ಕಾರಣ ವಾಗುತ್ತಿದೆ. ದೇಶದ ಪ್ರಗತಿಗೆ ಮಾರಕವಾಗುತ್ತಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನೀರಿನ ಸಮಸ್ಯೆ ದೇಶದಲ್ಲಿನ ಜನರನ್ನು ರೋಗಗ್ರಸ್ಥವನ್ನಾಗಿಸುತ್ತಿದೆ. ಮಾತ್ರವಲ್ಲ ಭ್ರಷ್ಟಾಚಾರ ಹೆಚ್ಚುತ್ತಿರುವು ದಕ್ಕೆ ನೀರು ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿಯೇ ಶೇ.೪೦ರಷ್ಟು ನೀರು ವಿತರಣೆಯ ಸಂದರ್ಭದಲ್ಲಿ ಸೋರಿಕೆಯಾಗುತ್ತಿದೆ. ಪೈಪ್‌ಗಳಲ್ಲಿ, ಕಾಲುವೆ ಗಳಲ್ಲಿ ಇರುವ ಬಿರಕು ಈ ಸೋರಿಕೆ ಕಾರಣ. ಇದೆಲ್ಲದಕ್ಕೆ ಮೂಲ ಕಾರಣ ಆಡಳಿತದಲ್ಲಿರುವ ಭ್ರಷ್ಟಾಚಾರ. ಪರಿಣಾಮ ನೀರಿನ ಬೆಲೆ ಕೂಡ ದುಬಾರಿ ಯಾಗುತ್ತಿದೆ. ಬಡವರು ನೀರನ್ನು ಕೊಂಡು ಬದುಕಲಾರದ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ. ಹೇಗೇ ನೋಡಿದರೂ ಇಂದು ಗಂಭೀರ ಸಮಸ್ಯೆ ಗಳನ್ನು ತಂದೊಡ್ಡುತ್ತಿರುವುದು ನೀರಿನ ಸಮಸ್ಯೆಯೇ ಯಾವುದೇ ದೇಶದ ಶತ್ರು.

ಇದು ಒಂದು ತೆರನಾದರೆ, ಇನ್ನು ಮಿತಿಮೀರಿದ ನಗರೀ ಕರಣ ನೀರಿನ ಮೇಲೆ ನಡೆಸುತ್ತಿರುವ ಅತ್ಯಾಚಾರ ಇನ್ನೊಂದು ಬಗೆಯದು. ಇಲ್ಲೂ ಕುಲಗೆಡು ವುದು ನೀರೇ. ಇವೆರಡೂ ಸವಾಲನ್ನು ಎದುರಿಸುವಲ್ಲಿನ ನಮ್ಮ ವೈಫಲ್ಯಕ್ಕೆ ನಾವು ‘ಕೊರತೆ’ಯ ವ್ಯಾಖ್ಯಾನ ಸೃಷ್ಟಿಸಿಕೊಳ್ಳುತ್ತಿದ್ದೇವೆ. ನಿಜವಾಗಿ ನೀರು ನಿರ್ವಹಣೆಯ ಬಗ್ಗೆ ಸರಕಾರ ಇನ್ನಷ್ಟು ಕಾಳಜಿ ವಹಿಸಬೇಕು. ಸರಕಾರವೆಂದರೆ ಕೇವಲ ಯೋಜನೆಗಳನ್ನು ರೂಪಿಸಲಿರುವುದು ಎಂಬಂತೆ ವರ್ತಿಸಲಾಗು ತ್ತಿದೆ. ಅನುಷ್ಠಾನ ನಮ್ಮದಲ್ಲವೇ ಅಲ್ಲ ಎಂಬ ಧೋರಣೆ ಕಂಡು ಬರುತ್ತಿದೆ.

ವಿಶ್ವ ಸಂಸ್ಥೆಯ ಮಾಹಿತಿಯ ಪ್ರಕಾರ ೫ ವರ್ಷದೊಳಗಿನ ೪,೪೦೦ ಮಕ್ಕಳು ಪ್ರತಿ ವರ್ಷ ಕಲುಷಿತ ನೀರಿನಿಂದಾಗಿ ಸಾಯುತ್ತಿದ್ದಾರೆ. ಅಭಿವೃದ್ಧಿಯ ಮಾನದಂಡದಲ್ಲಿ ಇದೂ ಸಹ ಪರಿಗಣನೆಗೆ ಒಳಪಡುತ್ತದೆ. ನೀರಿನಿಂದ ಸಂಕಷ್ಟಕ್ಕೆ ಒಳಗಾಗಿ ಅಭಿವೃದ್ಧಿ ಹೆಣಗುತ್ತಿರುವುದಕ್ಕೆ ದಕ್ಷಿಣ ಆಫ್ರಿಕಾ ಅತಿ ದೊಡ್ಡ ಉದಾಹರಣೆ. ಇಲ್ಲಿನ ನಗರಗಳಲ್ಲಿ ಶೇ ೬೦ರಷ್ಟು ಮಂದಿ ಪಟ್ಟಣಿಗರು ಕೊಳೆಗೇರಿ ನಿವಾಸಿಗಳು. ನೀರಿನಿಂದ ಉತ್ಪತ್ತಿಯಾಗುತ್ತಿರುವ ರೋಗಗಳ
ಸಂಖ್ಯೆ ಇಲ್ಲಿ ವರ್ಷಂಪ್ರತಿ ವಿಸ್ತಾರವಾಗುತ್ತಲೇ ಹೋಗುತ್ತಿದೆ. ಅದು ಹೋಗಲಿ, ನೀರಿನ ಸಮಸ್ಯೆಯಿಂದಾಗಿ ಶ್ರೀಮಂತ ರಾಷ್ಟ್ರಗಳು ಆಹಾರ ಬೆಳೆಯುವು ದನ್ನೇ ಬಿಟ್ಟು, ಆಮದು ಮಾಡಿಕೊಳ್ಳಲಾರಂಭಿಸಿವೆ.

ಹೆಚ್ಚಾಗಿ ನೀರು ಬೇಡುವ ಬೆಳೆಗಳನ್ನು ಬೆಳೆಯುತ್ತಿರುವ ಪರಿಣಾಮ ಭಾರತವೂ ಸೇರಿದಂತೆ ಹಲವು ದೇಶಗಳ ಅಂತರ್ಜಲ ಕುಸಿಯುತ್ತಿದೆ. ಇಷ್ಟಕ್ಕೆ ನಿಲ್ಲುವುದಿಲ್ಲ. ನೀರಿನ ಕೊರತೆ ಜಾಗತಿಕ ತಾಪ ಮಾನ ಏರಿಕೆಗೂ ಪೂರಕವಾಗಿದೆ. ವಿಶ್ವದ ಕೆಲ ರಾಷ್ಟ್ರಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ. ಕೆಲವು ಕಡೆ ಹಿಮಪಾತ, ಗ್ಲೇಸಿಯರ್ ಸಮಸ್ಯೆ ಆರಂಭ ವಾಗಿದೆ. ಸಮುದ್ರ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರಾಕೃತಿಕ ವಿಕೋಪ ಗಳು ಸಂಭವಿಸಿದೆ. ಇನ್ನಯಾವ ಶತ್ರು ಬೇಕು ನಮ್ಮನ್ನು ನಾಶ ಮಾಡಲು? ಜಲ ವ್ಯವಸ್ಥಾಪನೆಯೆಂಬುದು ಸಮುದಾಯದಿಂದ ದೂರವಾದ ಫಲಶ್ರುತಿಯಿದು. ಅದು ಮೊದಲಿನಂತೆಯೇ
ಸಮುದಾಯದಿಂದಲೇ ಆಗಬೇಕು.

ಸರಕಾರದ ಹಿಡಿತದಲ್ಲಿ ಇದ್ದೂ ಇಲ್ಲದಂತಿರುವ ಈ ವ್ಯವಸ್ಥೆ ವಿಕೇಂದ್ರೀಕರಣವಾಗಬೇಕು. ಹಳ್ಳಿಗಳಲ್ಲಿನ ಕೆರೆ, ಬಾವಿ, ಹೊಂಡ, ಕಾಲುವೆಗಳನ್ನು
ಸ್ಥಳೀಯರೇ ನಿರ್ವಹಿಸಬೇಕು. ಅದಕ್ಕೆ ಜನಪ್ರತಿನಿಗಳು ಸಲಹೆ ಸೂಚನೆಗಳನ್ನು ಕೊಡಬಹುದು. ಸರಕಾರ ಮಾರ್ಗಸೂಚಿಯನ್ನು ರಚಿಸಿಕೊಡಬಹುದು. ಹೀಗಾದಾಗ ಮಾತ್ರ ಸ್ಥಳೀಯರಲ್ಲಿ ನೀರಿನ ಬಗೆಗೆ ಕಾಳಜಿ ಮೂಡಲು ಸಾಧ್ಯ. ಹೊರತಾಗಿ ನೀರಿನ ವಿಚಾರದಲ್ಲಿ ಸಬ್ಸಿಡಿ, ಶುಲ್ಕ, ವಿನಾಯಿತಿ, ರಿಯಾಯಿತಿಗಳು ಕೆಲಸಕ್ಕೆ ಬರುವುದಿಲ್ಲ.