Monday, 16th September 2024

ಆಕಾಶಕ್ಕೆ ಏಣಿ ಹಾಕೋ ಜಾಣ ಇನ್ನಿಲ್ಲ

ವಿದೇಶವಾಸಿ

dhyapaa@gmail.com

ಸರಿಯಾಗಿ ಒಂದು ವಾರದ ಹಿಂದೆ, ಅಂದರೆ ಕಳೆದ ಸೋಮವಾರ, ವಿಮಾನ ತಯಾರಿಸುವ ‘ಏರ್‌ಬಸ್’ ಸಂಸ್ಥೆಯ
ಕಾರ್ಖಾನೆಗೆ ಭೇಟಿ ಕೊಟ್ಟಿದ್ದೆ.

ಅದೊಂದು ಮಾಯಾ ಲೋಕ ಎನ್ನುವುದಕ್ಕಿಂತ ಮಾನವ ನಿರ್ಮಿತ, ಯಂತ್ರ ಲೋಕ ಎನ್ನುವುದೇ ಸರಿ. ನಮ್ಮಂಥ ಮಾನವರನ್ನು ಹೊತ್ತು ಆಗಸದಲ್ಲಿ ಹಾರುವ ಯಂತ್ರದ ಹಕ್ಕಿಯ ಇಂಚಿಂಚೂ ಮಾಹಿತಿ ಅಲ್ಲಿ ಲಭ್ಯ. ಯಾರು ವಿಮಾನ ಏರಿ ಹಾರುತ್ತಾರೊ ಇಲ್ಲವೋ, ಇಂತಹ ಒಂದು ಸ್ಥಳಕ್ಕಂತೂ ಭೇಟಿ ಕೊಡಲೇ ಬೇಕು.

ಆತ್ಮೀಯ ಮಿತ್ರ, ಭಾರತೀಯರು ಹೆಮ್ಮೆಪಡಬಹುದಾದ ವಿಜ್ಞಾನಿ, ಜರ್ಮನಿಯ ಉತ್ತರ ಭಾಗದಲ್ಲಿರುವ ಹ್ಯಾಂಬರ್ಗ್ ನಗರ ದಲ್ಲಿ ನೆಲೆಸಿರುವ ಡಾ.ಶ್ರೀಕಾಂತ್ ಭಟ್ ಅವರ ಒಡನಾಟ, ಆತಿಥ್ಯ ಮತ್ತು ಅನುಭವಗಳ ಕುರಿತು ಬರೆಯಲು ಸಾಕಷ್ಟಿತ್ತು. ಅದರಲ್ಲೂ ಲೋಹದ ಹಕ್ಕಿಯ ಹೆರಿಗೆ ಆಸ್ಪತ್ರೆಯ ಕುರಿತೇ ಈ ವಾರದ ಅಂಕಣ ಬರೆಯಬೇಕು ಎಂದು ಎಣಿಸು ತ್ತಿರುವಾಗಲೇ, ಬೇಸರದ ಸುದ್ದಿಯೊಂದು ನಿನ್ನೆ ಭಾನುವಾರದ ಬೆಳ್ಳಂಬೆಳಗ್ಗೆ ಕೇಳಿಬಂದಾಗ, ಇರಾದೆ ಬದಲಾಯಿ ಸಬೇಕಾಯಿತು.

ಅದರ ವಿಷಯ ಖಂಡಿತ ಮತ್ತೊಮ್ಮೆ ಬರೆಯುತ್ತೇನೆ. ಒಂದು ವೇಳೆ ಹಾಗೇನಾದರೂ ಬರೆಯದೇ ಇದ್ದರೆ ನನ್ನನ್ನು ನಾನೇ
ಕ್ಷಮಿಸಿಕೊಳ್ಳುವಂತಿಲ್ಲ. ಆದರೆ ಇಂದಿನ ವಿಷಯವೂ ಸಣ್ಣ ಮಟ್ಟಿಗೆ ವಿಮಾನ ಯಾನಕ್ಕೆ ಸಂಬಂಧಿಸಿದ್ದೇ. ಕೊನೆಯ ಘಳಿಗೆ ಯಲ್ಲಿ ನಿರ್ಧರಿಸಿದ್ದರಿಂದ, ಟರ್ಕಿ ಮೂಲದ ‘ಪೆಗಸಸ್’ ಏರ್‌ಲೈನ್ಸ್ ನಲ್ಲಿ ಜರ್ಮನಿಗೆ ಹೋಗಬೇಕಾಯಿತು. ಪೆಗಸಸ್
ಒಂದು ಬಜೆಟ್ ಏರ್‌ಲೈನ್ಸ್ ಸಂಸ್ಥೆ. ನಮ್ಮಲ್ಲಿ ‘ಸ್ಪೈಸ್ ಜೆಟ್’, ‘ಇಂಡಿಗೋ’, ‘ಏರ್ ಇಂಡಿಯಾ ಎಕ್ಸ್‌ಪ್ರೆಸ್’ ಇದ್ದಂತೆ. ಇವೆಲ್ಲ ಕಮ್ಮಿ ಬೆಲೆಗೆ ವಿಮಾನ ಪ್ರಯಾಣದ ಸೌಲಭ್ಯ ಒದಗಿಸಿಕೊಡುವ ಸಂಸ್ಥೆಗಳು.

ಈ ಮಿತವ್ಯಯದ ವಿಮಾನ ಪ್ರಯಾಣದ ದರ ಮತ್ತು ರೈಲಿನಲ್ಲಿ ಹವಾನಿಯಂತ್ರಿತ ಬೋಗಿಯ ಪ್ರಯಾಣದ ದರ ಹೆಚ್ಚು ಕಮ್ಮಿ
ಒಂದೇ ಎಂದರೂ ತಪ್ಪಿಲ್ಲ. ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆ ತಲುಪಿಸುವುದನ್ನು ಬಿಟ್ಟರೆ, ಪ್ರತಿಯೊಂದ ಕ್ಕೂ ಇಲ್ಲಿ ಬೇರೆ ಬೆಲೆ ತೆರಬೇಕು. ಕೈಯ್ಯಲ್ಲಿರುವ ಬ್ಯಾಗ್ ಬಿಟ್ಟು ಕೊಂಡುಹೋಗುವ ಲಗೇಜ್‌ನಿಂದ ಹಿಡಿದು, ಊಟ-ತಿಂಡಿಯ ವರೆಗೆ ಎಲ್ಲವನ್ನೂ ಬೇರೆಯಾಗಿ ಕೊಂಡುಕೊಳ್ಳಬೇಕು. ಬಹುತೇಕ ಏರ್‌ಲೈನ್ಸ್ ಗಳಲ್ಲಲ್ಲಂತೂ ಪುಕ್ಕಟೆಯಾಗಿ ಸಿಗುವುದು ಉಸಿರಾಡಲು ಗಾಳಿ ಮಾತ್ರ.

ಉಳಿದಂತೆ ಕುಡಿಯುವ ನೀರಿಗೂ ಹಣ ಕೊಡಬೇಕು. ಅದಕ್ಕೆ ಅವರನ್ನು ಶಪಿಸಿ ಫಲವಿಲ್ಲ. ಬಜೆಟ್ ಏರ್‌ಲೈನ್ಸ್ ಗಳು
ನಡೆಯುವುದೇ (ಹಾರುವುದೇ) ಹಾಗೆ. ಒಮ್ಮೆ ಎಮರೈಟ್ಸ್, ಇತೆಹಾದ್, ಖರ್ತಾ ಏರ್ ವೇಸ್‌ನಂತಹ ವಿಮಾನದಲ್ಲಿ ಪ್ರಯಾಣಿಸಿದವರಿಗೆ, ಯಾವುದೇ ಬಜೆಟ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುವುದೆಂದರೆ ಶಿಕ್ಷೆಯೇ ಸೈ. ಕಮ್ಮಿ ಹಣ ಕೊಡುತ್ತೇವೆ
ಅಂದ ಮಾತ್ರಕ್ಕೆ ಕೈ ಆಡಿಸಲೂ ಆಗದ ಕುರ್ಚಿ ಯಲ್ಲಿ ಕುಳಿತು ಹೋಗುವುದಕ್ಕಿಂತ ರೈಲಿನ, ಬಸ್ಸಿನ ಕಾಲು ಬಿಟ್ಟು ಮಲಗಿ ಹೋಗುವುದು ಉತ್ತಮ ಎಂದು ಅನಿಸಬೇಕಾದರೆ ಇಂತಹ ವಿಮಾ ನದಲ್ಲಿ ಕುಳಿತು ಹೋಗಬೇಕು.

ಅದರಲ್ಲೂ, ಹತ್ತಿರದ ಪ್ರಯಾಣವಾದರೆ ಓಕೆ. ದೂರದ ಪ್ರಯಾಣ ಮಾಡಬೇಕೆಂದರೆ ಜೋಕೆ? ಜೋಕೆ! ಆದರೆ ಒಂದಂತೂ ಸತ್ಯ; ಬಹುತೇಕ ಅಂತಾರಾಷ್ಟ್ರೀಯ ಬಜೆಟ್ ಏರ್‌ಲೈನ್ಸ್‌ಗೆ ಹೋಲಿಸಿದರೆ, ನಮ್ಮ ಭಾರತೀಯ ಬಜೆಟ್ ಏರ್‌ಲೈನ್ಸ್‌ಗಳೇ
ವಾಸಿ. ಕೆಲವು ಸಂಸ್ಥೆಗಳು ನೀರಿನ ಜತೆ ಬಾಯಿ ವ್ಯಾಯಾಮಕ್ಕೆ ಸಣ್ಣ ತಿನಿಸನ್ನೂ ನೀಡುತ್ತವೆ. ಹಾಗೆಂದುಕೊಳ್ಳುತ್ತಲೇ ಪೆಗಸಸ್ನಲ್ಲಿ ಕುಳಿತು ಜರ್ಮನಿಯಿಂದ ಟರ್ಕಿ ಮೂಲಕ ಬಹ್ರೈನ್‌ಗೆ ಬರುತ್ತಿರುವಾಗ ಅಕಾಸ ಏರ್‌ಲೈನ್ಸ್ (ಕ್ರಮೇಣ ಇದು ‘ಆಕಾಶ’ ಎಂದು ಕನ್ನಡೀಕರಣಗೊಂಡರೆ ಆಶ್ಚರ್ಯವೂ ಇಲ್ಲ, ತಕರಾರೂ ಇಲ್ಲ) ಬಗ್ಗೆ ಕುತೂಹಲ ಕೆರಳಿತ್ತು.

ಕಳೆದ ಭಾನುವಾರ, ಆಗಸ್ಟ್ ಏಳರಂದು ಭಾರತದ ಅಕಾಸ ಬಜೆಟ್ ಏರ್‌ಲೈನ್ಸ್ ಪ್ರಯಾಣಿಕರನ್ನು ಹೊತ್ತು ಮೊದಲ ಹಾರಾಟ
ನಡೆಸಿತ್ತು. ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿದ್ದ ಅಕಾಸ ಅಂದು ಮುಂಬೈನಿಂದ ಅಹಮ್ಮದಾಬಾದ್ ಗೆ ಹಾರಿತ್ತು. ಅದರಲ್ಲಿ ಪ್ರಯಾಣಿಸಿದವರ ಅನುಭವ ಕೇಳುತ್ತಿದ್ದೆ. ಬಹುತೇಕರು ಹೇಳಿದ್ದು ಎರಡೇ ವಿಷಯ. ಒಂದು, ಉಳಿದ ಏರ್‌ಲೈನ್ಸ್ ಗಿಂತ
ಊಟ ಚೆನ್ನಾಗಿದೆ, ಇನ್ನೊಂದು, ಕುಳಿತುಕೊಳ್ಳಲು ಸೀಟು ಚೆನ್ನಾಗಿದೆ. ಕೆಲವರು ಮಾತ್ರ ಬೇರೆಯದಕ್ಕೆ ಹೋಲಿಸಿದರೆ ಬೆಲೆ ಸ್ವಲ್ಪ ಕಮ್ಮಿ ಎಂದಿದ್ದರು.

ಊಟ, ಸೀಟು ಚೆನ್ನಾಗಿರಬೇಕು, ಒಪ್ಪುವಂಥದ್ದೇ ಆದರೂ ಎಂಬತ್ತು ನಿಮಿಷದ (ಮುಂಬೈನಿಂದ ಅಹಮದಾಬಾದ್‌ಗೆ ಸಮಯ) ಹಾರಾಟದಲ್ಲಿ ಅದಕ್ಕೆ ಅಷ್ಟೊಂದು ಮಹತ್ವ ಕೊಡಬೇಕಾಗಿಲ್ಲ. ಇನ್ನು ಬೆಲೆ ನೋಡಿದಾಗ, ಕೆಲವು ವಿಮಾನಕ್ಕಿಂತ ಎರಡು ನೂರು ರೂಪಾಯಿ ಕಮ್ಮಿಯಾದರೆ, ಕೆಲವುದಕ್ಕಿಂತ ಮೂವತ್ತು ರೂಪಾಯಿ ಕಮ್ಮಿ ಇತ್ತು. ಸಂಸ್ಥೆಯೇ ಹೇಳುವಂತೆ, ಮುಂದಿನ ದಿನಗಳಲ್ಲಿ ಅಕಾಸ ಪ್ರಯಾಣ ದರ ಉಳಿದವುಗಳಿಗಿಂತ ಸುಮಾರು ಐದು ನೂರು ರೂಪಾಯಿ ಕಮ್ಮಿ ಇರಲಿ
ದೆಯಂತೆ. ನಿಜ ಹೇಳಬೇಕೆಂದರೆ ಅದೂ ಅಷ್ಟೊಂದು ಮಹತ್ವದ ವಿಷಯವಲ್ಲ.

ವಿಮಾನದಲ್ಲಿ ಪ್ರಯಾಣಿಸುವ ಬಹುತೇಕರಿಗೆ ಐದು ನೂರು ರೂಪಾಯಿಗಿಂತ ಐವತ್ತು ನಿಮಿಷ ಹೆಚ್ಚಿನ ಮಹತ್ವದ್ದಾಗಿರುತ್ತದೆ. ತಾನು ತಲುಪಬೇಕಾದ ಸ್ಥಳಕ್ಕೆ ಎಷ್ಟು ವಿಮಾನದ ಸೌಲಭ್ಯ ಇದೆ ಎನ್ನುವುದು ಗಣನೀಯವಾಗುತ್ತದೆ. ಜತೆಗೆ, ಪ್ರಯಾಣ ದಲ್ಲಿ ತಾನು ಕುಳಿತುಕೊಳ್ಳುವ ಆಸನ, ಸ್ವಚ್ಛತೆ ಮಹತ್ವದ್ದಾಗಿರುತ್ತದೆ. ಆದ್ದರಿಂದಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ದಿನಕ್ಕೆ ಒಂದೋ ಎರಡೋ ವಿಮಾನ ಹಾರಿಸುವ ಏರ‍್ ಇಂಡಿಯಾಕ್ಕಿಂತ ಇಂಡಿಗೋ, ಸ್ಪೈಸ್ ಜೆಟ್ ಸಂಸ್ಥೆಗಳು ಜನಪ್ರಿ
ಯವಾಗುತ್ತವೆ. ನಿಜವಾಗಿ ನನ್ನನ್ನು ಅಕಾಸ ಆಕರ್ಷಿಸಿದ್ದು ಊಟ-ಸೀಟು ಚೆನ್ನಾಗಿದೆ ಎಂಬ ಕಾರಣಕ್ಕೆ ಅಲ್ಲವೇ ಅಲ್ಲ. ಅದರಿಂದ ಅಕಾಸ ಯಶಸ್ಸು ಕಾಣಲು ಸಾಧ್ಯವೂ ಇಲ್ಲ.

ಇನ್ನೂ ಒಂದು ವಿಷಯವೆಂದರೆ, ಹೊಸದಾಗಿ ಆಕಾಶ ಚುಂಬಿಸಿರುವ ಅಕಾಸ ಸಂಸ್ಥೆಯ ಬಳಿ ಇರುವುದು ಎರಡೇ ಎರಡು ವಿಮಾನ. ಮೊದಲ ದಿನ ಆಕಾಸ ಮಾಡಿದ್ದು ಮೂರು ತಿರುಗಾಟ ಮಾತ್ರ. ಹಾಗಿದ್ದಲ್ಲಿ ಅಕಾಸ ದಿನಕ್ಕೆ ಎಷ್ಟು ತಿರುಗಾಟ ಮಾಡಬಹುದು, ಎಷ್ಟು ಲಾಭ ಗಳಿಸಬಹುದು? ಅದರಲ್ಲೂ ಬಜೆಟ್ ಏರ್‌ಲೈನ್ಸ್‌ಗಳ ಹುಚ್ಚಾಪಟ್ಟೆ ಮಾರುಕಟ್ಟೆಯಲ್ಲಿ ಇದು ಇಷ್ಟು ದಿನ ನಡೆಯಬಹುದು? ‘ಜೆಟ್ ಏರ್’ನಂತಹ ತಿಮಿಂಗಲಗಳೇ ನೀರು ಕುಡಿದಾಗ, ಅಕಾಸದಂತಹ ಶೆಟ್ಲಿ ಮೀನು ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಸಹಜ. ಆದರೂ ಅಕಾಸ ಆಕರ್ಷಿಸುತ್ತದೆ ಎಂದರೆ ಅದಕ್ಕೆ ಕಾರಣ ಇದೆ.

ಕಳೆದ ಎರಡು ವರ್ಷದ ಹಿಂದೆ ಕೊರೋನಾ ಸಂದರ್ಭದಲ್ಲಿ, ಕ್ಯಾಲೆಂಡರ್ನಲ್ಲಿ ಮಾತ್ರ ದಿನ ಮುಂದೆ ಹೋಗುತ್ತಿತ್ತು ಬಿಟ್ಟರೆ, ಜನ ಸಂಚಾರ ಬಹುತೇಕ ಸ್ತಬ್ಧವಾಗಿತ್ತು. ವಿಮಾನಗಳಂತೂ ನೆಲ ಕಚ್ಚಿ ನಿಂತಿದ್ದವು. ಬರೀ ಭಾರತದ ಏರ್‌ಲೈನ್ಸ್ ಸಂಸ್ಥೆಗಳೇ ಎಂಟು ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದವು. ಸ್ಪೈಸ್ ಜೆಟ್, ಗೋ ಏರ್ ನಂತಹ ಸಂಸ್ಥೆಗಳು ತುರ್ತು ಸರಕಾರಿ ಸಾಲದ
ಮೊರೆ ಹೋಗಿದ್ದವು. ಕೊರೋನಾ ಆರಂಭವಾದ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ, ಆರು ತಿಂಗಳಿನಲ್ಲಿ ಏರ್‌ಲೈನ್ಸ್ ಸಂಸ್ಥೆ ಗಳಲ್ಲಿ ಕೆಲಸ ಮಾಡುವ ಸುಮಾರು ನಲವತ್ತು ಸಾವಿರ ಜನ ಉದ್ಯೋಗ ಕಳೆದುಕೊಂಡಿದ್ದರು.

ಮಣ್ಣು ತಿನ್ನುತ್ತಿರುವ ವಿಮಾನಗಳು ಪುನಃ ಆಕಾಶ ಕಾಣುತ್ತವೆಯೋ ಇಲ್ಲವೋ ಎಂಬ ಆತಂಕದ ಸಮಯದಲ್ಲಿ ಹೊದೊಂದು ಏರ್‌ಲೈನ್ಸ್ ಸಂಸ್ಥೆ ಆರಂಭಿಸುತ್ತೇನೆ ಎಂದು ಯಾರಾದರೂ ಹೇಳಿದರೆ ಅಂಥವರನ್ನು ಹುಚ್ಚರು ಎನ್ನಬೇಕೋ ಅಥವಾ ಭಂಡರು ಎನ್ನಬೇಕೋ? ಎರಡೂ ಅಲ್ಲ, ಅಂಥವರನ್ನು ರಾಕೇಶ್ ಜುಂಝುನ್‌ವಾಲ ಎಂದು ಕರೆಯಬೇಕು. ಕರೋನಾ ಕರಾಳ ದಿನಗಳಲ್ಲಿ ಅಕಾಸ ಏರ್ ಲೈನ್ಸ್ ಆರಂಭಿಸಿದ ರಾಕೇಶ್, ಅದಕ್ಕಾಗಿ ಮೂವತ್ತೈದು ಮಿಲಿಯನ್ ಡಾಲರ್ (ಸುಮಾರು ಇನ್ನೂರ
ಅರವತ್ತೈದು ಕೋಟಿ ರೂಪಾಯಿ) ತೊಡಗಿಸುವುದಾಗಿ ಹೇಳಿದ್ದರು.

ಅಮೆರಿಕದ ವಿಮಾನ ತಯಾರಿಸುವ ಬೋಯಿಂಗ್ ಸಂಸ್ಥೆಗೆ ಎಪ್ಪತ್ತು ವಿಮಾನ ತಯಾರಿಸಲು ಮುಂಗಡವನ್ನೂ ಕೊಟ್ಟರು.
ಒಪ್ಪಂದದ ಪ್ರಕಾರ ಮುಂದಿನ ನಾಲ್ಕು ವರ್ಷದಲ್ಲಿ ಬೋಯಿಂಗ್ ಸಂಸ್ಥೆ ಅಕಾಸಕ್ಕೆ ಈ ವಿಮಾನಗಳನ್ನು ಪೂರೈಸಬೇಕು. ಒಂದು ವಿಷಯ ತಿಳಿದಿರಲಿ, ಇಷ್ಟೇ ಸಂಖ್ಯೆಯ ವಿಮಾನ ಖರೀದಿಸಲು ಗೋ ಏರ್ ಸಂಸ್ಥೆಗೆ ಹದಿನೈದು ವರ್ಷ ಹಿಡಿದಿತ್ತು.
ಜುಂಝುನ್‌ವಾಲಾ ವಿಶೇಷವೇ ಅದು. ಮಾರುಕಟ್ಟೆಯಲ್ಲಿ ಯಾವುದಾದರೂ ವಸ್ತುವಿನ ಮೌಲ್ಯ ಕುಸಿದಾಗ ಅದನ್ನು ಖರೀದಿಸುವುದು ಅಥವಾ ಅದರಲ್ಲಿ ಹಣ ತೊಡಗಿಸುವುದು.

ಎರಡು ವಿಮಾನದಿಂದ ಲಾಭ ಗಳಿಸುವುದು ಕಷ್ಟ. ಆದರೆ, 72 ವಿಮಾನ ಬಳಿ ಇದ್ದರೆ ಅದರ ಶಕ್ತಿಯೇ ಬೇರೆ ಎನ್ನುವುದನ್ನು ಅವರು ಅರಿತಿದ್ದರು. 2018 ರಲ್ಲಿ ಆದ ಎರಡು ಅಪಘಾತದಿಂದ ಬೋಯಿಂಗ್ ಸಂಸ್ಥೆಗೆ ಕಳಂಕ ಅಂಟಿತ್ತು. ಸುಮಾರು ಮುನ್ನೂರ ಐವತ್ತು ಜನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ರೈಲು, ರಸ್ತೆ ಅಪಘಾತಕ್ಕೆ ಹೋಲಿಸಿದರೆ ಅದು ದೊಡ್ಡ ಸಂಖ್ಯೆ ಅಲ್ಲದಿದ್ದರೂ, ಸಾವು ಸಾವೇ. ಕೆಲವು ಏರ್‌ಲೈನ್ಸ್ ಸಂಸ್ಥೆಗಳು ತಮ್ಮ ಕರಾರು ಮುರಿದು, ಏರ್ಬಸ್ ಸಂಸ್ಥೆಯೊಂದಿಗೆ
ಒಪ್ಪಂದ ಮಾಡಿಕೊಂಡವು.

ಇದರಿಂದಾಗಿ ಬೋಯಿಂಗ್ ಮತ್ತು ಏರ್‌ಬಸ್ ಸಂಸ್ಥೆಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿತು. ಬೋಯಿಂಗ್ ತಾನು ತಯಾರಿಸುವ ವಿಮಾನಗಳ ದರವನ್ನು ಕಡಿತಗೊಳಿಸಿತು. ಅದರ ಲಾಭ ಪಡೆಯುವಲ್ಲಿ ಭಾರತದ ರಾಜಸ್ತಾನಿ ಮಾರ್ವಾಡಿ ಮೊದಲಿಗ ರಾದರು.

ರಾಕೇಶ್ ಜುಂಝುನ್ವಾಲಾ; ಕೆಲವರು ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆದರು. ಕೆಲವರು ಸಂಪೂರ್ಣವಾಗಿ ಅದನ್ನು ಒಪ್ಪದಿರಬಹುದು. ಕಾರಣ, ಬಫೆಟ್ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನವೂ ಸೇರಿದಂತೆ, ಸದಾ ಮೊದಲ ಹತ್ತು ಸ್ಥಾನದಲ್ಲಿದ್ದವರು. ಜುಂಜುನ್ವಾಲಾ ಎಂದೂ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಇಪ್ಪತ್ತೈದು
ಸ್ಥಾನ ತಲುಪಿದವರಲ್ಲ. ಇತ್ತೀಚಿನ ಒಂದು ವರದಿ ಪ್ರಕಾರ, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅವರು 36ನೆಯ ಸ್ಥಾನದಲ್ಲಿದ್ದರು. ವಾರೆನ್ ಬಫೆಟ್ರಂತೆಯೇ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಹಣ ಗಳಿಸಿದವರು ಜುಂಝುನ್ವಾಲಾ.
ಆಗಲೇ ಹೇಳಿದಂತೆ, ಮಾರುಕಟ್ಟೆಯಲ್ಲಿ ಮೌಲ್ಯ ಕುಸಿದಾಗ ಅದರ ಹಿಂದೆ ಬೀಳುವುದು ಅವರ ವ್ಯವಹಾರದ ರೀತಿ. 1992 ರಲ್ಲಿ ಹರ್ಷದ್ ಮೆಹ್ತಾ ಷೇರು ಹಗರಣದಲ್ಲಿ ಬಹುತೇಕರು ಹಣ ಕಳೆದುಕೊಂಡಿದ್ದರು.

ಆದರೆ, ಜುಂಝುನ್ವಾಲಾ ಹೆಚ್ಚು ಹಣ ಗಳಿಸಿದ್ದೇ ಆಗ. ಹಾಗಂತ ಅವರು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವಷ್ಟು
ಹುಟ್ಟಾ ಶ್ರೀಮಂತರೂ ಆಗಿರಲಿಲ್ಲ. ರಾಕೇಶ್ ಅವರ ತಂದೆ ಆಯಕರ ವಿಭಾಗದ ಅಽಕಾರಿಯಾಗಿದ್ದರು. ರಾಕೇಶ್‌ಗೆ ಮೊದಲಿ
ನಿಂದಲೂ ಷೇರುಗಳ ವಹಿವಾಟಿನಲ್ಲಿ ಆಸಕ್ತಿ ಇತ್ತು. ತಂದೆಯ ಬಳಿ ಕೇಳಿದಾಗ ಶೇರಿನಲ್ಲಿ ತೊಡಗಿಸುವುದಕ್ಕೆ ಹಣ ನೀಡುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು. ಆಗ ತಮ್ಮ ಸ್ನೇಹಿತನಿಂದ ಹಣ ಪಡೆದು ಷೇರು ಖರೀದಿಸಿದ್ದರು ರಾಕೇಶ್.
ಮೂವತ್ತೇಳು ವರ್ಷದ ಹಿಂದೆ, ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ, ಕೇವಲ ಐದು ಸಾವಿರ ರೂಪಾಯಿಯೊಂದಿಗೆ ಷೇರು ವ್ಯವಹಾರ ಆರಂಭಿಸಿದ ರಾಕೇಶ್, ಸಾಯುವ ಮೊದಲು ಸುಮಾರು ಐವತ್ತು ಸಾವಿರ ಕೋಟಿಯ ಕುಳ.

ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ಷೇರುಗಳಲ್ಲಿ ಹೂಡಿ, ಅಜೀಮ್ ಪ್ರೇಮ್‌ಜಿ ಮತ್ತು ರಾಧಾಕೃಷ್ಣ ದಮಾನಿ ನಂತರ ಹೂಡಿಕೆದಾರರ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದರು. ಅವರು ವ್ಯವಹಾರಕ್ಕೆ ಇಳಿದು ಒಂದೇ ವರ್ಷದಲ್ಲಿ, ಐದು ಸಾವಿರ ಟಾಟಾ ಟೀ ಷೇರು ಖರೀದಿಸಿದ್ದರು. ಮೂರೇ ತಿಂಗಳಿನಲ್ಲಿ ಮೂರು ಪಟ್ಟು ಬೆಲೆ ಹೆಚ್ಚಾದಾಗ ಅದನ್ನು ಮಾರಿ,
ಸುಮಾರು ಐದು ಲಕ್ಷ ರೂಪಾಯಿಯ ಲಾಭ ಗಳಿಸಿದರು. ಒಂದೇ ದಿನದಲ್ಲಿ ಒಂಬೈನೂರು ಕೋಟಿ ಗಳಿಸಿದ ಉದ್ಯಮಿ, ಹತ್ತು ನಿಮಿಷದಲ್ಲಿ ಎಂಟುನೂರ ಐವತ್ತು ಕೋಟಿ ಗಳಿಸಿದ ಬಿಗ್ ಬುಲ್, ಹೀಗೆ ಜುಂಜುನ್ವಾಲಾ ಕುರಿತು ಅನೇಕ ಶೇರು ವ್ಯಾಪಾರದ ಕಥೆಗಳಿವೆ. ಅಲ್ಲದೆ, ರಾರೆ (ರಾಕೇಶ್ ಮತ್ತು ಪತ್ನಿ ರೇಖಾ ಹೆಸರಿನ ಮೊದಲ ಅಕ್ಷರ) ಎಂಟರ್‌ಪ್ರೈಸಸ್ ಮೂಲಕ ‘ಶಮಿತಾಭ್’,
’ಇಂಗ್ಲಿಷ್ ವಿಂಗ್ಲಿಷ್’ ನಂತಹ ಚಿತ್ರಗಳನ್ನೂ ನಿರ್ಮಿಸಿದರು.

ಅವರ ಪ್ರಕಾರ, ‘ಷೇರು ಮಾರುಕಟ್ಟೆಯ ವ್ಯವಹಾರ ಎಂದರೆ, ಇಷ್ಟ ಇರಲಿ, ಬಿಡಲಿ ನೀವು ಅದರ ಆಳಕ್ಕೆ ಇಳಿದು ಅನುಭವಿಸ ಬೇಕು. ನಮ್ಮ ಒಳ್ಳೆಯ ಸಮಯದ ನಾವು ಮೈ ಮರೆತು ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚು. ಜನ ನಮ್ಮನ್ನು ಹೊಗಳು ತ್ತಿದ್ದಾರೆ ಎಂದರೆ ನಾವು ಹೆಚ್ಚು ಜಾಗೃತರಾಗಿರಬೇಕು. ನಾವು ಆಶಾವಾದಿಯಾಗಿರಬೇಕು ಆದರೆ ನಾವೂ ತಪ್ಪು ಮಾಡುವುದಕ್ಕೆ ಅತೀತರಲ್ಲ ಎಂಬ ಎಚ್ಚರ ನಮ್ಮಲ್ಲಿರಬೇಕು’.

ಅಕಾಸ ಏರ್‌ಲೈನ್ಸ್‌ನ ಕನಸುಗಾರ, ಮೊನ್ನೆ ಮೊದಲ ವಿಮಾನದಲ್ಲಿ ವ್ಹೀಲ್ ಚೇರ್‌ನಲ್ಲಿ ಕುಳಿತು ಪ್ರಯಾಣಿಸಿದ್ದು ನೋಡಿಯೇ ಬೇಜಾರಾಗಿತ್ತು. ಕೆಲವು ವರ್ಷ ಆಕಾಶದಲ್ಲಿ (ಅಕಾಸದಲ್ಲಿ) ಹಾರಾಡಬೇಕಾದ ಜೀವದ ಪ್ರಾಣ ಪಕ್ಷಿಯೇ ಇಂದು ಹಾರಿ ಹೋಗಿದ್ದು ಕೇಳಿ ಬೇಸರವಾಯಿತು. ತೀರಾ ಅನಾರೋಗ್ಯದಿಂದ ಬಳಲುತ್ತಿದ್ದ ಜುಂಜಝುನ್‌ವಾಲಾ ಇನ್ನಿಲ್ಲ ಎಂದು ಬೇಸರ ಪಡಬೇಕಾ, ಹೋಗುವ ಮೊದಲು ಅಕಾಸದಂತಹ ಸೌಲಭ್ಯ ಒದಗಿಸಿಕೊಟ್ಟರು ಎಂದು ಸಮಾಧಾನ ಪಟ್ಟುಕೊಳ್ಳಬೇಕಾ, ಕಾಲವೇ ಉತ್ತರಿಸಬೇಕು.

ಒಂದಂತೂ ಸತ್ಯ, ತಮ್ಮ ವ್ಯಾಪಾರದಲ್ಲಿ ಎಂದೂ ನಷ್ಟ ಅನುಭವಿಸದ ಜುಂಝುನ್‌ವಾಲಾ ಅಗಲು ವಿಕೆ, ಭಾರತದ ಉದ್ಯಮ ಲೋಕಕ್ಕೆ ಒಂದು ನಷ್ಟವಂತೂ ಹೌದು.