Wednesday, 27th November 2024

ಹೆಗಡೆ @98: ದೂರದೃಷ್ಟಿ ನಾಯಕತ್ವ, ಪರಂಪರೆಯ ಮೆಲುಕು

ನೆನಪಿನ ದೋಣಿ

ಪ್ರತಿಭಾ ಪ್ರಹ್ಲಾದ್

ಹಡಗು ಪೂರ್ವಕ್ಕೂ, ಪಶ್ಚಿಮಕ್ಕೂ ಹೋಗುತ್ತದೆ, ಗಾಳಿ ಯಾವ ದಿಕ್ಕಿನಲ್ಲಾದರೂ ಬೀಸಲಿ, ಹಡಗಿಗೆ ಗುರಿ ಮುಖ್ಯವೇ ಹೊರತು, ಗಾಳಿ ಹೇಗೆ ಬೀಸುತ್ತದೆ ಎಂಬುದಲ್ಲ…’

ಇತ್ತೀಚೆಗೆ ರಾಹುಲ್ ಗಾಂಧಿ ಆಡಿದ ಅಪ್ಪಟ ಮೂರ್ಖತನದ ಮಾತೊಂದನ್ನು ಕೇಳಿದಾಗ ರಾಮಕೃಷ್ಣ ಹೆಗಡೆ ಇದ್ದಿದ್ದರೆ ಏನು ಹೇಳುತ್ತಿದ್ದರು ಎಂದು ಯೋಚಿಸುತ್ತಿದ್ದೆ. ಮೀಸಲಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ರಾಹುಲ್ ಗಾಂಧಿ ‘ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದಲಿತರು, ಒಬಿಸಿಗಳು ಇತ್ಯಾದಿ ವರ್ಗಗಳಿಗೆ ಮೀಸಲಾತಿ ಏಕಿಲ್ಲ?’ ಎಂದು ಕೇಳಿದ್ದರು.

ಅದೊಂದು ಜೋಕ್ ಇರಬಹುದು ಎಂದೇ ಭಾವಿಸೋಣ. ಆದರೂ ಲೋಕಸಭೆಯ ವಿರೋಧ ಪಕ್ಷದ ನಾಯಕನಂಥ ದೊಡ್ಡ ವ್ಯಕ್ತಿಯ ಬಾಯಿಯಿಂದ ಈ ಮಾತು ಬಂದರೆ ಅದನ್ನು ಬೇಜವಾಬ್ದಾರಿ ಹೇಳಿಕೆಯೆಂದೇ ಪರಿಗಣಿಸಬೇಕಾಗುತ್ತದೆ. ಅಂಥ ಸ್ಥಾನದಲ್ಲಿರುವವರು ಈ ರೀತಿಯ ಮಾತುಗಳನ್ನಾಡು ವುದು ಅಪಾಯಕಾರಿ ಕೂಡ.

ಈ ಘಟನೆಯ ಬಗ್ಗೆ ಯೋಚಿಸುತ್ತಿದ್ದಾಗ ನನ್ನ ಮನಸ್ಸು ೧೯೯೦ರ ದಶಕಕ್ಕೆ ಓಡಿತು. ಆಗಿನ ಪ್ರಧಾನಿ ವಿ.ಪಿ.ಸಿಂಗ್ ಅವರು ಆತುರಾತುರವಾಗಿ ಮಂಡಲ ಆಯೋಗದ ವರದಿಯನ್ನು ಜಾರಿಗೊಳಿಸುವ ಬಗ್ಗೆ ಘೋಷಣೆ ಮಾಡಿದ್ದರು. ಕನಿಷ್ಠಪಕ್ಷ ತಮ್ಮ ಸಚಿವ ಸಂಪುಟವನ್ನು ಕೂಡ ವಿಶ್ವಾಸಕ್ಕೆ ತೆಗೆದು ಕೊಂಡಿರಲಿಲ್ಲ. ಆಗ ನನ್ನ ಕಣ್ಣೆದುರೇ ಸಾಕಷ್ಟು ಬೆಳವಣಿಗೆಗಳು ನಡೆದಿದ್ದವು. ಆರ್.ಕೆ. (ನಾನು ರಾಮಕೃಷ್ಣ ಹೆಗಡೆಯವರನ್ನು ಕರೆಯುತ್ತಿದ್ದುದು ಹಾಗೆ) ಮತ್ತು ನಾನು ನಮ್ಮ ದೆಹಲಿಯ ಮನೆಯಲ್ಲಿದ್ದೆವು. ಅದು ಸಂಜೆಯ ಹೊತ್ತು. ಇದ್ದಕ್ಕಿದ್ದಂತೆ ಎಲ್ಲಾ ಫೋನುಗಳೂ ಹೊಡೆದುಕೊಳ್ಳಲು ಆರಂಭಿಸಿದವು.

ಅನೇಕ ರಾಜಕಾರಣಿಗಳು, ಪತ್ರಕರ್ತರು ಹಾಗೂ ಇನ್ನೂ ಯಾರ‍್ಯಾರೋ ವ್ಯಕ್ತಿಗಳು ದಾಂಗುಡಿಯಿಟ್ಟಂತೆ ನಮ್ಮ ಮನೆಗೆ ಬರತೊಡಗಿದರು. ನಮ್ಮದು ಸಾಧಾರಣ ಅಪಾರ್ಟ್‌ಮೆಂಟ್. ಅಲ್ಲಿ ಜನರು ತುಂಬಿಹೋಗಿದ್ದರು. ಪ್ರಧಾನ ಮಂತ್ರಿಗಳು ಮಂಡಲ ಆಯೋಗದ ವರದಿಯ ಪ್ರಕಾರ ಒಬಿಸಿಗಳಿಗೆ ಶೇ.೨೭ರಷ್ಟು ಮೀಸಲಾತಿ ನೀಡಲಾಗುವುದು ಎಂದು ಪ್ರಕಟಿಸಿದ್ದರು. ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ
ಈಗಾಗಲೇ ಮೀಸಲಾತಿಯಿತ್ತು. ಆದರೆ ‘ಇತರೆ ಹಿಂದುಳಿದ ವರ್ಗ’ (ಒಬಿಸಿ) ಎಂಬ ಇನ್ನೊಂದು ಕೆಟಗರಿ ಸೃಷ್ಟಿಸಿ, ಅದಕ್ಕೆ ಮೀಸಲಾತಿ ಕೋಟಾ ಘೋಷಿಸಿ ದ್ದರು. ಬಹಳ ಬೇಗನೆ ಅದು ಫ್ರಾಂಕೈನ್‌ಸ್ಟೀನ್‌ನ ಪೆಡಂಭೂತವಾಗಿ ಬೆಳೆಯುವುದಿತ್ತು.

ಅಂದು ಉಪ ಪ್ರಧಾನಿಯಾಗಿದ್ದ ದೇವಿಲಾಲ್ ಅವರು ದೊಡ್ಡದೊಂದು ಕೃಷಿಕರ ರ‍್ಯಾಲಿ ನಡೆಸಲು ಯೋಜಿಸಿದ್ದರಂತೆ. ಅಸ್ಥಿರ ಪ್ರಧಾನಿ ವಿ.ಪಿ.ಸಿಂಗ್ ಆ ಸುದ್ದಿ ಕೇಳಿ ಅದುರಿದ್ದರು. ಕೃಷಿಕರ ರ‍್ಯಾಲಿ ನಡೆದರೆ ಏನಾಗುತ್ತದೆ ಎಂಬುದನ್ನು ಅಂದಾಜಿಸಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ತರಾತುರಿಯಲ್ಲಿ
ಮಂಡಲ ಆಯೋಗದ ವರದಿ ಜಾರಿಗೊಳಿಸುವ ಘೋಷಣೆ ಮಾಡಿಬಿಟ್ಟರು. ಪರಿಣಾಮ, ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ರ‍್ಯಾಲಿಗಳು, ಪ್ರತಿಭಟನೆಗಳು, ಹರತಾಳಗಳು, ದಾಂಧಲೆ, ಹಿಂಸಾಚಾರಗಳು ಆರಂಭವಾದವು.

ಕೊನೆಗೆ ಅದು ವಿ.ಪಿ.ಸಿಂಗ್ ಅವರ ಸರಕಾರಕ್ಕೆ ಬಿಜೆಪಿ ನೀಡಿದ್ದಬೆಂಬಲವನ್ನು ವಾಪಸ್ ಪಡೆಯುವುದರಲ್ಲಿ ಪರ್ಯವಸಾನಗೊಂಡಿತು. ಅಲ್ಪಮತಕ್ಕೆ ಜಾರಿದ ವಿ.ಪಿ.ಸಿಂಗ್ ಸರಕಾರ ಪತನಗೊಂಡಿತು. ನ್ಯಾಷನಲ್ ಫ್ರಂಟ್ ಸರಕಾರಕ್ಕೆ ತಾನು ನೀಡಿದ್ದ ಬೆಂಬಲ ವಾಪಸ್ ಪಡೆಯಲು ಸರಕಾರ ಎಲ್.ಕೆ. ಆಡ್ವಾಣಿಯವರ ರಥಯಾತ್ರೆಯನ್ನು ತಡೆದಿದ್ದು ಕಾರಣ ಎಂದು ಬಿಜೆಪಿ ನೆಪ ಹೇಳಿದರೂ, ನಿಜವಾದ ಕಾರಣ ಅದಾಗಿರಲಿಲ್ಲ. ವಿ.ಪಿ.ಸಿಂಗ್ ಅವರ ಅಲ್ಪಾವಧಿ ನಾಯಕತ್ವದಲ್ಲಿ ಸಾಕಷ್ಟು ಎಡವಟ್ಟುಗಳು ನಡೆದಿದ್ದವು. ಕಾಶ್ಮೀರದಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳ ಕಿಡ್ನಾಪ್, ಆಕೆಯನ್ನು ಬಿಡಿಸಿಕೊಳ್ಳಲು ಅನೇಕ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದು, ಮಂಡಲ ಕಮಿಷನ್ ವರದಿಯನ್ನು ತರಾತುರಿಯಲ್ಲಿ ಜಾರಿಗೊಳಿ ಸಲು ನಿರ್ಧರಿಸಿದ್ದು, ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ಭಯೋತ್ಪಾದನೆ, ತತ್ಪರಿಣಾಮವಾಗಿ ಕಣಿವೆಯಿಂದ ಹಿಂದೂಗಳ ಬೃಹತ್ ವಲಸೆ, ರಾಮಕೃಷ್ಣ ಹೆಗಡೆ ವಿರುದ್ಧ ನ್ಯಾಯಮೂರ್ತಿ ಕುಲದೀಪ್ ಸಿಂಗ್ ನೀಡಿದ ವರದಿಯಲ್ಲಿ ಸಾಕಷ್ಟು ಲೋಪಗಳಿದ್ದರೂ ಆ ವರದಿಯ ಅಂಗೀಕಾರ, ಎಲ್.ಕೆ.ಆಡ್ವಾಣಿಯವರ ರಥಯಾತ್ರೆಗೆ ತಡೆ… ಹೀಗೆ ಅನೇಕ ನಿರ್ಧಾರಗಳನ್ನು ಹಿಂದೆಮುಂದೆ ಯೋಚಿಸದೆ, ಹಿರಿಯ ನಾಯಕರ ಅಭಿಪ್ರಾಯ ಕೇಳದೆ ವಿ.ಪಿ.ಸಿಂಗ್ ಏಕಪಕ್ಷೀಯವಾಗಿ ತೆಗೆದುಕೊಂಡು ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವೊಂದನ್ನು ಹುಟ್ಟುಹಾಕಬೇಕು ಎಂಬ ಹೆಗಡೆಯವರ ಒತ್ತಾಸೆ, ಶ್ರಮ, ಮನವೊಲಿಕೆ ಹಾಗೂ ಕಕ್ಕುಲಾತಿಯಿಂದಾಗಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದರು. ಆದರೆ ಅವರದೇ ಕರ್ಮ ಅವರ ಸರಕಾರವನ್ನು ಕೆಳಕ್ಕೆ ಬೀಳಿಸಿತು. ಮಂಡಲ ಆಯೋಗದ ವರದಿ ಜಾರಿಯ ಬಳಿಕ ಎದ್ದ ಭಾರಿ ಆಕ್ರೋಶದ ವೇಳೆ ಹೆಗಡೆ ನನಗೊಂದು ಸಂಗತಿಯನ್ನು ಹೇಳಿದರು. ಉತ್ತರ ಭಾರತದಲ್ಲಿ ಸಾಕಷ್ಟು ದಂಗೆಗಳು ನಡೆಯುತ್ತಿದ್ದರೂ ದಕ್ಷಿಣ ಭಾರತ ಶಾಂತವಾಗಿತ್ತು. ಏಕೆಂದರೆ ಅದಕ್ಕೂ ಮೊದಲೇ ಕರ್ನಾಟಕ ಹಾಗೂ ಇನ್ನಿತರ ದಕ್ಷಿಣದ ರಾಜ್ಯಗಳಲ್ಲಿ ಎಸ್‌ಟಿ, ಎಸ್‌ಸಿ ಹಾಗೂ ಹಿಂದುಳಿದ ವರ್ಗಗಳಿಗೆ ದೊಡ್ಡ ಪ್ರಮಾಣದಲ್ಲಿ ಮೀಸಲಾತಿಯಿತ್ತು ಎಂಬುದು ನನಗೆ ಗೊತ್ತಾಗಿದ್ದೇ ಹೆಗಡೆಯವರಿಂದ.

೧೯೯೦ರಲ್ಲಿ ಮಂಡಲ ಆಯೋಗದ ವರದಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದ್ದಕ್ಕಿಂತ ಹೆಚ್ಚಾಗಿ ಅದನ್ನು ಜಾರಿಗೊಳಿಸಿದ ಏಕಪಕ್ಷೀಯ ಧೋರಣೆ ಯ ಬಗ್ಗೆ ಹೆಗಡೆ ಬಹಳ ಬೇಸರಗೊಂಡಿದ್ದರು. ಸಂವಿಧಾನದಲ್ಲಿ ನಮ್ಮ ದೇಶದ ದುರ್ಬಲ ವರ್ಗಗಳ ಏಳ್ಗೆಗಾಗಿ ನೀಡಿದ ಅಸವನ್ನು ಹೇಗೆ ರಾಜಕೀಯ ಅಸವನ್ನಾಗಿ ಕೆಲವರು ಬಳಸಿಕೊಳ್ಳಲು ಹೊರಟಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ಹೇಗೆ ಸಮಾಜವನ್ನು ಒಡೆಯುತ್ತಿದ್ದಾರೆ ಎಂಬುದನ್ನು ನೋಡಿ ಅವರು ಕುದಿಯುತ್ತಿದ್ದರು. ಹೆಗಡೆಯವರ ಬಗ್ಗೆ ಯಾರಿಗೆ ತಿಳಿದಿದೆಯೋ ಅವರೆಲ್ಲರಿಗೂ ‘ಮೀಸಲಾತಿಯೊಳಗೆ ಮೀಸಲಾತಿ ನೀಡುವುದಕ್ಕೆ ಹೆಗಡೆ ವಿರುದ್ಧವಿದ್ದರು’ ಎಂಬುದೂ ತಿಳಿದಿರುತ್ತದೆ.

ಮೀಸಲಾತಿಯೊಳಗೆ ಮೀಸಲಾತಿ ನೀಡುವುದರ ಉದ್ದೇಶ ಎಸ್‌ಸಿ, ಎಸ್‌ಟಿ ಅಥವಾ ಯಾವುದೇ ಹಿಂದುಳಿದ ವರ್ಗ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್) ಏಳ್ಗೆಯೇ ಆಗಿದ್ದರೂ, ಹೀಗೆ ಮೀಸಲು ನೀಡುವುದರಿಂದ ಎಲ್ಲಾ ಜಾತಿಗಳೂ ‘ಇತರೆ ಹಿಂದುಳಿದ ವರ್ಗಗಳ’ ಸ್ಥಾನಮಾನ ಪಡೆಯಲು ಹೋರಾಟ ಆರಂಭಿಸುತ್ತವೆ ಎಂಬುದು ಹೆಗಡೆಯವರ ಕಳವಳವಾಗಿತ್ತು. ಸಾಕಷ್ಟು ಮುಂದುವರಿದ, ಅಭಿವೃದ್ಧಿ ಹೊಂದಿದ, ಆರ್ಥಿಕವಾಗಿ ಪ್ರಬಲವಾಗಿರುವ ವರ್ಗಗಳು ಕೂಡ ರಾಜಕೀಯ ಲಾಭಕ್ಕಾಗಿ ಮೀಸಲಾತಿ ಕೇಳುತ್ತವೆ ಎಂದು ಹೆಗಡೆ ಹೇಳಿದ್ದರು. ಏಕೆಂದರೆ ಕರ್ನಾಟಕದಲ್ಲಿ ಅದಾಗಲೇ ಎರಡು ಪ್ರಬಲ ಸಮುದಾಯಗಳು ಮೀಸಲಾತಿ ಕೇಳಲು ಆರಂಭಿಸಿದ್ದವು. ಹೀಗಾಗಿ ಹೆಗಡೆಯವರಿಗೆ ಭವಿಷ್ಯ ತಿಳಿದಿತ್ತು. ೩೦ ವರ್ಷಗಳ ಬಳಿಕ ನಾವೀಗ ಅದೇ ಪರಿಸ್ಥಿತಿ ಉಲ್ಬಣಗೊಂಡಿರುವುದನ್ನು ನೋಡುತ್ತಿದ್ದೇವೆ. ‘ಮೀಸಲಾತಿಯೊಳಗಿನ ಮೀಸಲಾತಿ’ ನೀತಿ ವಿಪರೀತ ರಾಜಕೀಕರಣದಿಂದ ಬಳಲುತ್ತಿದೆ.

ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಮೀಸಲಾತಿಯ ಗ್ರಹಣ ಅಂಟಿಕೊಂಡಿದೆ. ಇತ್ತೀಚೆಗೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ನಕಲಿ ಜಾತಿ ಪ್ರಮಾಣ ಪತ್ರ ಹಾಗೂ ನಕಲಿ ಅಂಗವೈಕಲ್ಯ ಪ್ರಮಾಣಪತ್ರ ಮಾಡಿಸಿಕೊಂಡು ಆಯ್ಕೆಯಾದ ಸುದ್ದಿಯನ್ನು ಕೇಳಿದ್ದೇವೆ. ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡುವುದು ನಮ್ಮ ವ್ಯವಸ್ಥೆಯಲ್ಲಿ ಯಾವ ಪರಿಹಾಸುಹೊಕ್ಕಾಗಿ ನುಸುಳಿದೆ ಅಂದರೆ, ಯಾರು ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದಿದ್ದಾರೋ, ಯಾರಿಗೆ ನಿಜವಾಗಿಯೂ ಸರಕಾರದ ನೆರವಿನ ಅಗತ್ಯವಿದೆಯೋ ಅವರು ಯಾರಿಗೂ ಕಾಣಿಸದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

‘ಮೀಸಲಾತಿಯೊಳಗೆ ಮೀಸಲಾತಿ’ ನೀತಿಯು ಪ್ರಬಲ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ಕೂಡ ಮೀಸಲಾತಿಯಡಿ ತಂದಿದೆ. ಈ
ಸಮಸ್ಯೆ ಇನ್ನೂ ಆಳಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಏಕೆಂದರೆ ಕೆಲ ರಾಜಕೀಯ ಪಕ್ಷಗಳು ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಲ್ಲಿ ಇರುವ ‘ಹಿಂದುಳಿದವರಿಗೆ’ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಬಲವಾಗಿ ಬೇರು ಬಿಟ್ಟಿದೆಯೇ ಹೊರತು, ಮುಸ್ಲಿಂ ಅಥವಾ ಕ್ರಿಶ್ಚಿಯನ್ನರಲ್ಲಿ (ತಮ್ಮ ಧರ್ಮದಲ್ಲಿ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲೇ ಇಲ್ಲ ಎಂದು ಇವರು ಹೇಳುತ್ತಾರೆ) ಜಾತಿ ವ್ಯವಸ್ಥೆ ಪ್ರಬಲವಾಗಿ ಇಲ್ಲ. ಹೀಗಾಗಿ ಅಲ್ಲಿ ಸಮಾನತೆ ತರುವ ಅಗತ್ಯವಿಲ್ಲ. ಆದರೂ ಇಂದು ದುಷ್ಟ ರಾಜಕೀಯ ಪಕ್ಷಗಳ ಕೈಗೆ ಸಿಲುಕಿ ಆ ಧರ್ಮಗಳೂ ರಾಜಕೀಯ ಗುರುತು ಪಡೆದುಕೊಳ್ಳಲು ಹೊರಟಿವೆ. ಈ ರಾಜಕೀಯ ಪಕ್ಷಗಳು ಈಗಾಗಲೇ ಒಡೆದಿರುವ ಸಮಾಜವನ್ನು ಇನ್ನಷ್ಟು ಒಡೆಯಲು ಹೊರಟಿವೆಯೇ ಹೊರತು ಏನೂ ಒಳ್ಳೆಯದು ಮಾಡುವುದಕ್ಕೆ ಹೊರಟಿಲ್ಲ ಎಂಬುದನ್ನು ನೆನಪಿಡಬೇಕು.

ಇದೇ ಬೆಳಕಿನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಗಮನಿಸಬೇಕು. ಅವರು ಪದೇಪದೆ ಜಾತಿಗಣತಿ ನಡೆಯಬೇಕು ಎಂದು ಕೇಳುವುದು, ಸಮಾಜದ ಎಲ್ಲಾ ರಂಗದಲ್ಲೂ ಮೀಸಲಾತಿಯಿರಬೇಕು ಎಂದು ಪ್ರತಿಪಾದಿಸುವುದು, ಸರಕಾರಿ ನೌಕರಿ ಅಥವಾ ಶಿಕ್ಷಣ ವ್ಯವಸ್ಥೆ ಮಾತ್ರವಲ್ಲ, ಕಾರ್ಪೊರೇಟ್ ಕಂಪನಿಗಳು, ಖಾಸಗಿ ಸಂಸ್ಥೆಗಳು ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲೂ ಮೀಸಲಾತಿ ಜಾರಿಗೆ ಬರಬೇಕು ಎಂದು ಒತ್ತಾಯಿಸುವುದು ಹಿಂದುಳಿದವರ ಮೇಲಿನ ಕನಿಕರದಿಂದ ಖಂಡಿತ ಅಲ್ಲ. ಬದಲಿಗೆ ಅವರಿಗೆ ಬೇಕಾಗಿರುವುದು ರಾಜಕೀಯ ಮೈಲೇಜು. ಕಾಂಗ್ರೆಸ್ ಪಕ್ಷ ಈ ಹಿಂದೆ ದೇಶಕ್ಕೆ ಮಾಡಿದ ದ್ರೋಹವೂ ಇದೇ ಆಗಿದೆ ಮತ್ತು ಈಗ ಮಾಡುತ್ತಿರುವ ದ್ರೋಹವೂ ಇದೇ ಆಗಿದೆ.

ಹೆಗಡೆಯವರು ಪದೇಪದೆ ಇದನ್ನು ಹೇಳುತ್ತಿದ್ದರು. ‘ಕಾಂಗ್ರೆಸ್ ಪಕ್ಷ ಯಾವಾಗಲೂ ವಿಭಜನೆಯ ರಾಜಕೀಯವನ್ನೇ ಮಾಡಿದೆ. ಅದನ್ನೇ ವೋಟ್‌ಬ್ಯಾಂಕ್ ಪೊಲಿಟಿಕ್ಸ್ ಎನ್ನುತ್ತೇವೆ’ ಎಂದು ಹೆಗಡೆ ಹೇಳುತ್ತಿದ್ದರು. ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಧರ್ಮೀಯರ ತುಷ್ಟೀಕರಣ, ರಾಜಕೀಯ ವ್ಯವಸ್ಥೆ
ಯನ್ನು ಜಾತಿ ಆಧಾರಿತವಾಗಿ ವಿಂಗಡಿಸುವುದು, ಉಪ ಜಾತಿಗಳನ್ನು ಸೃಷ್ಟಿಸಿ ಅವುಗಳಿಗೂ ಮೀಸಲಾತಿಯ ಆಸೆ ತೋರಿಸುವುದು, ಹಿಂದೂಗಳಲ್ಲಿರುವ ಮೇಲ್ವರ್ಗದ ಬಡವರನ್ನು ಮೀಸಲಾತಿಯಿಂದ ದೂರವೇ ಇರಿಸುವುದು- ಈ ನೀತಿ ಗಳೇ ಕಾಂಗ್ರೆಸ್ ಪಕ್ಷವನ್ನು ಇಂದು ನಿರ್ನಾಮದ ಅಂಚಿಗೆ ತಂದಿವೆ. ಈಗ ಖಾಸಗಿ ರಂಗದಲ್ಲೂ ಮೀಸಲಾತಿ ನೀಡಬೇಕೆಂದು ಕೇಳುವ ಮೂಲಕ ಸಮಾಜವನ್ನು ಇನ್ನಷ್ಟು ಒಡೆಯಲು ಹೊರಟಿದ್ದಾರೆ. ಇಂಥ ರಾಜಕಾರಣದ ಅಪಾಯ ಏನು ಗೊತ್ತಾ? ಇತ್ತೀಚೆಗೆ ಯೋಗಿ ಆದಿತ್ಯನಾಥ್ ಆಡಿದ ಮಾತು ಹೆಚ್ಚುಕಮ್ಮಿ ಇದಕ್ಕೆ ಸರಿಯಾಗಿ ಹೊಂದುತ್ತದೆ.

‘ಬಾಟೇಂಗೆ ತೋ ಕಾಟೇಂಗೆ’. ನಮ್ಮನ್ನು ಒಡೆಯಲು ಬಿಟ್ಟರೆ ಛಿದ್ರವಾಗುತ್ತೇವೆ. ಒಂದಾಗಿದ್ದರೆ ಮಾತ್ರ ಗಟ್ಟಿಯಾಗಿರುತ್ತೇವೆ. ಹೆಗಡೆ ಕೂಡ ಇದನ್ನೇ ನಂಬಿದ್ದರು. ಅಷ್ಟೇಕೆ, ನಮ್ಮ ಸಂವಿಧಾನದ ನಿರ್ಮಾತೃಗಳು ಕೂಡ ಇದನ್ನೇ ನಂಬಿದ್ದರು. ಆದರೆ, ಜಾತಿ ರಾಜಕಾರಣದ ವಿಷ ಬೀಜವನ್ನು ಬಿತ್ತುವ ಪ್ರಕ್ರಿಯೆ ಮಂಡಲ ಆಯೋಗದ ವರದಿಯ ಮೂಲಕ ಶುರುವಾಯಿತು. ಮಾತುಕತೆ, ಚರ್ಚೆ ಏನೂ ಇಲ್ಲದೆ ನ್ಯಾಷನಲ್ ಫ್ರಂಟ್ ಸರಕಾರ ಹಾಗೂ ಅದರ ಆತುರಗೇಡಿ ಪ್ರಧಾನಿ ವಿ.ಪಿ.ಸಿಂಗ್ ಅವರು ವಿಚ್ಛಿದ್ರಕಾರಿ ಮೀಸಲಾತಿ ನೀತಿಯನ್ನು ಜಾರಿಗೊಳಿಸುವುದರೊಂದಿಗೆ ಅಪಾಯಕಾರಿ ಆಕ್ಟೋಪಸ್ ಈ ಸಮಾಜದಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿ ಬೆಳೆಯತೊಡಗಿತು.

ಇದನ್ನೆಲ್ಲ ಹೀಗೇ ಮುಂದುವರಿಸುತ್ತಿದ್ದರೆ ನಮ್ಮ ದೇಶದಲ್ಲಿ ಪ್ರತಿಭೆಗೆ ಯಾವ ಬೆಲೆ ಉಳಿಯಲಿದೆ? ದೇಶ ಹೇಗೆ ಅಭಿವೃದ್ಧಿಯಾಗುತ್ತದೆ? ಭಾರತದಲ್ಲಿರುವ ಅದ್ಭುತ ಪ್ರತಿಭೆಗಳೆಲ್ಲ ವಿದೇಶಗಳಿಗೆ ಹೋಗಿ ನೆಲೆಸಿದರೆ ನಾವು ಶ್ರೀಮಂತ ರಾಷ್ಟ್ರವಾಗುವುದು ಯಾವಾಗ ಎಂಬುದು ರಾಮಕೃಷ್ಣ ಹೆಗಡೆ ೯೦ರ ದಶಕದಲ್ಲಿ ಕೇಳುತ್ತಿದ್ದ ಪ್ರಶ್ನೆಯಾಗಿತ್ತು. ಇಂದು ಅಮೆರಿಕದಲ್ಲಿ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯರು ಮುಖ್ಯಸ್ಥ ರಾಗಿರುವುದನ್ನು ನೋಡಿದರೆ ನಮಗೆ ಸಂತೋಷವೂ, ಬೇಸರವೂ, ಪಶ್ಚಾತ್ತಾಪವೂ ಒಟ್ಟೊಟ್ಟಿಗೇ ಆಗುತ್ತದೆ. ಎಂತೆಂಥಾ ಅದ್ಭುತ ಪ್ರತಿಭೆಗಳನ್ನು ನಾವು ಕಳೆದುಕೊಂಡು ಪಶ್ಚಿಮದ ದೇಶಗಳಿಗೆ ಕೈಎತ್ತಿ ಕೊಟ್ಟಿದ್ದೇವಲ್ಲವೇ? ಅಲ್ಪಾವಽಯ ರಾಜಕೀಯ ಲಾಭಕ್ಕಾಗಿ ನಾವು ಎಷ್ಟು ದೊಡ್ಡ ತಪ್ಪು ಮಾಡಿದ್ದೇವೆ ಎಂಬುದು ಈಗಲಾದರೂ ನಮಗೆ ಅರ್ಥವಾಗುತ್ತದೆಯೇ? ರಾಮಕೃಷ್ಣ ಹೆಗಡೆ ಮಾನವತಾವಾದಿಯಾಗಿದ್ದರು.

ಅದೇ ವೇಳೆಗೆ ರಾಷ್ಟ್ರೀಯವಾದಿಯೂ ಆಗಿದ್ದರು. ದೇಶದ ಬಗ್ಗೆ ಅವರಿಗೆ ಅಪಾರ ಪ್ರೀತಿಯಿತ್ತು. ಭಾರತ ಕೂಡ ಅಭಿವೃದ್ಧಿ ಹೊಂದಿದ ದೇಶಗಳ ರೀತಿಯಲ್ಲಿ ಸಮೃದ್ಧ ರಾಷ್ಟ್ರವಾಗಬೇಕು ಎಂದು ಅವರು ಕನಸು ಕಂಡಿದ್ದರು. ಶಿಕ್ಷಣ, ಆಡಳಿತ ಹಾಗೂ ಸರಕಾರಿ ಉದ್ಯೋಗದಲ್ಲಿ ಮತ್ತು ಶಾಸನ ಸಭೆಗಳಲ್ಲಿ ಸಮಾಜದ ಎಲ್ಲಾ ದುರ್ಬಲ ವರ್ಗಗಳಿಗೂ ಮೀಸಲಾತಿ ಇರಬೇಕು ಎಂದು ಅವರು ಬಯಸಿದ್ದರು. ಪಂಚಾಯತ್ ರಾಜ್ ಕಾಯ್ದೆಯ ಕನಸನ್ನು ಅವರು ನನಸು ಮಾಡಿದರು. ಏಕೆಂದರೆ ಅಧಿಕಾರದ ವಿಕೇಂದ್ರೀಕರಣದಿಂದ ಹಳ್ಳಿ, ಬ್ಲಾಕ್‌ಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವೆ ಒಳ್ಳೆಯ ಸಂಪರ್ಕ ವ್ಯವಸ್ಥೆ ಏರ್ಪಡುತ್ತದೆ ಎಂದು ಅವರು ನಂಬಿದ್ದರು.

‘ಅಭಿವೃದ್ಧಿಯ ಫಲ ಎಲ್ಲರಿಗೂ ಸಮಾನವಾಗಿ ಲಭಿಸದೆ ಅದು ಸಮಾಜದ ಕೆಲವೇ ವರ್ಗಗಳಿಗೆ ಹೋದರೆ ಅದಕ್ಕೆ ರಾಜಕಾರಣಿಗಳೂ ಅಧಿಕಾರಿಗಳೂ ಸಮಾನ ಹೊಣೆಗಾರರಾಗುತ್ತಾರೆ. ರಾಜಕಾರಣಿಗಳಲ್ಲಿ ಬದ್ಧತೆ ಇಲ್ಲದಿದ್ದರೆ ಮತ್ತು ಅಧಿಕಾರಿಗಳಲ್ಲಿ ಧೈರ್ಯವಿಲ್ಲದಿದ್ದರೆ ಹೀಗಾಗುತ್ತದೆ. ಹಿಂದುಳಿದ ಸಮಾಜವನ್ನು ಮುಂದುವರಿದ ಆಧುನಿಕ ಸಮಾಜವಾಗಿ ರೂಪಾಂತರಗೊಳಿಸುವಲ್ಲಿ ನಾವಿಬ್ಬರೂ ಸಮಾನ ಪಾಲುದಾರರು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಇವರಿಬ್ಬರೂ ಸಾರಾಸಗಟಾಗಿ ವಿಫಲರಾಗಿದ್ದಾರೆ. ಭಾರತದ ಪ್ರಗತಿಗೆ ಉದ್ಯೋಗ ಭದ್ರತೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ-
ಇವುಗಳ ಕೊರತೆಯು ಅಂಗಾಲಿನ ಹುಣ್ಣಿನಂತೆ ಮಾರಕವಾಗಿವೆ. ಜಗತ್ತಿನ ಯಾವ ದೇಶದಲ್ಲೂ ನಮ್ಮ ದೇಶದಲ್ಲಿರುವಂತೆ ಜನರಿಗೆ ಸರಕಾರಿ ನೌಕರಿಯ ಹುಚ್ಚು ಇಲ್ಲ.

ಉದ್ಯೋಗದ ಭದ್ರತೆಯಿರುವ ಸರಕಾರಿ ನೌಕರರು ದಕ್ಷವಾಗಿ ಆಡಳಿತ ನಡೆಸುತ್ತಿಲ್ಲ ಎಂಬುದು ಒಂದೆಡೆಯಾದರೆ, ರಾಜಕಾರಣಿಗಳು ಚುನಾವಣೆ ಎಂಬ ದೌರ್ಬಲ್ಯದಿಂದ ನರಳುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುತ್ತೇವೋ ಅಥವಾ ಸೋಲುತ್ತೇವೋ ಎಂಬ ಆತಂಕದಲ್ಲೇ ರಾಜಕಾರಣಿಗಳು ಅಧಿಕಾರದಲ್ಲಿ ದ್ದಾಗ ಅಡ್ಡ ದಾರಿಗಳನ್ನು ಹುಡುಕಿ ತಮಗೆ ಬೇಕಾದ್ದನ್ನೆಲ್ಲ ಮಾಡಿಕೊಳ್ಳುತ್ತಿದ್ದಾರೆ. ಅದಕ್ಷ ಸರಕಾರಿ ಅಧಿಕಾರಿ ವರ್ಗ ಮತ್ತು ದೂರದೃಷ್ಟಿಯಿಲ್ಲದ
ರಾಜಕಾರಣಿಗಳ ಹೊಂದಾಣಿಕೆ ನೀತಿಯಿಂದಾಗಿ ಭಾರತದ ಆಡಳಿತ ವ್ಯವಸ್ಥೆಗೆ ಪಾರ್ಶ್ವವಾಯು ಬಡಿದಿದೆ…’ ಎಂದು ಹೆಗಡೆ ಹೇಳುತ್ತಿದ್ದರು. ಪ್ರಚಂಡ ಬುದ್ಧಿವಂತ ಹಾಗೂ ನಿಸ್ವಾರ್ಥ ಮುತ್ಸದ್ದಿಯಿಂದ ಎಷ್ಟೆಲ್ಲಾ ಪಾಠ ಕಲಿತು ಅಳವಡಿಸಿಕೊಳ್ಳುವುದಕ್ಕಿದೆ ನೋಡಿ!

ಬದುಕಿನಲ್ಲಿ ನಮಗೆ ಎದುರಾಗುವ ಸಂದರ್ಭಗಳು ಮುಖ್ಯ ವಲ್ಲ, ಆ ಸಂದರ್ಭಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಭವಿಷ್ಯ ಹೇಗಿರುತ್ತದೆ ಎಂಬುದನ್ನು ಇದೇ ನಿರ್ಧರಿಸುತ್ತದೆ ಎಂಬ ಸಂಗತಿಯನ್ನು ರಾಜಕಾರಣಿಗಳೂ ಸೇರಿದಂತೆ ಎಲ್ಲರೂ ನೆನಪಿಡಬೇಕು.

ನಮ್ಮಿಬ್ಬರ ನಡುವಿನ ಸಂಬಂಧ ರಾಜಕಾರಣವನ್ನು ಬದಿಗಿರಿಸಿದರೆ, ನನ್ನ ಹಾಗೂ ರಾಮಕೃಷ್ಣ ಹೆಗಡೆ ನಡುವಿನ ಸಂಬಂಧ ತುಂಬಾ ವಿಶಿಷ್ಟವಾಗಿತ್ತು. ನಮಗಿಬ್ಬರಿಗೂ ಪರಸ್ಪರರ ಮೇಲೆ ಅಪಾರ ಗೌರವವಿತ್ತು. ಇಬ್ಬರ ನಡುವೆ ಆತ್ಮೀಯ ಗೆಳೆತನವಿತ್ತು. ರಾಜಕೀಯ ಮತ್ತು ಕಲಾ ಕ್ಷೇತ್ರವನ್ನು ಅಸಾಂಪ್ರದಾಯಿಕ ರೀತಿಯಲ್ಲಿ, ಆದರೆ ಅನ್ಯೋನ್ಯವಾಗಿ ಬೆಸೆಯುವ ಕೌಶಲ ನಮ್ಮಲ್ಲಿತ್ತು. ಆ ಸಮಯದಲ್ಲಿ ನಮ್ಮ ಸಂಬಂಧದ ಬಗ್ಗೆ ಸಮಾಜದಲ್ಲಿ ತುಂಬಾ ಕುತೂಹಲ ಹಾಗೂ ಗಾಸಿಪ್‌ಗಳು ಇದ್ದರೂ, ನಾವು ಮಾತ್ರ ನಮ್ಮ ಸಂಬಂಧಕ್ಕೆ ಬದ್ಧರಾಗಿ, ಪರಸ್ಪರರ ಬದುಕನ್ನು ಸುಂದರಗೊಳಿಸುವ
ರೀತಿಯಲ್ಲಿ ಬದುಕುತ್ತಿದ್ದೆವು.

ಹೆಗಡೆಯವರಿಗೆ ಕಲೆಯ ಬಗ್ಗೆ ಆಳವಾದ ಪ್ರೀತಿಯಿತ್ತು. ಹೀಗಾಗಿಯೇ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಲಾವಿದರ ಕಾರ್ಯಕ್ರಮಗಳು ಸರಕಾರದ ಆಶ್ರಯದಲ್ಲೇ ನಡೆಯುತ್ತಿದ್ದವು. ಅವರ ಅವಧಿಯಲ್ಲಿ ಪಾರಂಪರಿಕ ಪ್ರವಾಸೋದ್ಯಮ ಉತ್ಸವಗಳು ನಡೆದವು. ಅನೇಕ ಸಾಂಸ್ಕೃತಿಕ ಕಟ್ಟಡಗಳು ತಲೆಯೆತ್ತಿದವು. ಹೊಸ ಹೊಸ ಸಾಂಸ್ಕೃತಿಕ ಯೋಜನೆಗಳು ರೂಪುಗೊಂಡವು. ಬೆಂಗಳೂರನ್ನು ದೇಶದ ಸಾಂಸ್ಕೃತಿಕ ರಾಜಧಾನಿ ಮಾಡಬೇಕೆಂದು ಹೆಗಡೆ ಬಯಸಿದ್ದರು. ನನ್ನ ಪ್ರಕಾರ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರಕ್ಕೆ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿ ಸುವರ್ಣ ಯುಗವಿದ್ದಂತೆ.

ನನಗೆ ಒಂದೇ ಒಂದು ಕೊರಗಿದೆ. ನಮ್ಮ ಮಕ್ಕಳಾದ ಚಿರಂತನ್ ಮತ್ತು ಚಿರಾಯುವಿಗೆ ತಮ್ಮ ತಂದೆಯ ಜತೆಗೆ ಹೆಚ್ಚು ಒಡನಾಡುವ, ಅವರ ವಿಶಿಷ್ಟವಾದ ಸೌಜನ್ಯವನ್ನು ಅರಿಯುವ, ಅವರ ಒಳ್ಳೆಯತನ ಹಾಗೂ ಅದ್ಭುತ ವ್ಯಕ್ತಿತ್ವವನ್ನು ತಿಳಿದುಕೊಳ್ಳುವ, ದೊಡ್ಡ ವ್ಯಕ್ತಿಯಾಗಿದ್ದರೂ ಅತ್ಯಂತ ಸರಳವಾಗಿರು ವುದು ಹೇಗೆ ಎಂಬುದನ್ನು ಅರಿತುಕೊಳ್ಳುವ ಅವಕಾಶ ಸಾಕಷ್ಟು ಸಿಗಲಿಲ್ಲ. ‘ನನ್ನ ಮನಸ್ಸು ಈಗಲೂ ನಿಮ್ಮೊಂದಿಗೆ ಮಾತಾಡುತ್ತದೆ, ಹೃದಯ ಈಗಲೂ ನಿಮಗಾಗಿ ಹುಡುಕುತ್ತದೆ, ನಿಮ್ಮ ಚಿರಶಾಂತಿ ನನ್ನಾತ್ಮಕ್ಕೆ ತಿಳಿದಿದೆ, ೯೮ನೇ ಹುಟ್ಟುಹಬ್ಬದ ಶುಭಾಶಯಗಳು ಡಿಯರ್ ಆರ್‌ಕೆ’.

(ಲೇಖಕಿ ಪದ್ಮಶ್ರೀ ಪುರಸ್ಕೃತೆ, ಭರತನಾಟ್ಯ ಕಲಾವಿದೆ ಹಾಗೂ ಸಾಂಸ್ಕೃತಿಕ ರಾಯಭಾರಿ)