Saturday, 23rd November 2024

ಚಕ್ರವ್ಯೂಹ ಭೇದಿಸಿದಷ್ಟೇ, ಹೊರ ಬಂದಿಲ್ಲ !

ಅಶ್ವತ್ಥಕಟ್ಟೆ

ranjith.hoskere@gmail.com

‘ಮೀಸಲು’ ಎನ್ನುವ ಚಕ್ರವ್ಯೂಹದೊಳಗೆ ಪ್ರವೇಶಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರೀಕ್ಷೆಗೂ ಮೀರಿ ‘ಸುಲಭ’ ದಾರಿಯೊಂದಿಗೆ ಈ ವ್ಯೂಹ ಭೇದಿಸಿದ್ದಾರೆ. ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯ ಸಮಯ ದಲ್ಲಿ ಇಂತಹ ಕಠಿಣ ವ್ಯೂಹದೊಳಗೆ ಹೊಕ್ಕು ಹೊರಬಂದಿರುವ ಅವರ ಕೈ ಮೇಲಾಗಿರುವುದರಲ್ಲಿ ಎರಡನೇ ಮಾತಿಲ್ಲ. ಆದರೀಗ ಮೀಸಲಿನ ಆಗ್ರಹವನ್ನು ತಣಿಸಲು ‘ಹಂಚಿಕೆ’ ಮಾಡಿರುವ ರೀತಿಯನ್ನು ಸಮರ್ಥಿಸಿಕೊಂಡು ‘ಸುಳಿ’ ಯಿಂದ ಹೊರಬರುವಲ್ಲಿ ಸಾಧ್ಯವೇ ಕಾದು ನೋಡಬೇಕಿದೆ.

ಹೌದು, ಪರಿಶಿಷ್ಟ ಜಾತಿ, ಪಂಗಡದ ಮೀಸಲು ಹೆಚ್ಚಳ, ಒಕ್ಕಲಿಗ, ಲಿಂಗಾ ಯತರಿಗೆ ಪ್ರತ್ಯೇಕ ಮೀಸಲು ಹೀಗೆ ಅಸಾಧ್ಯ ಎನಿಸಿಕೊಂಡಿದ್ದ ಹಲವು ವಿಷಯಗಳನ್ನು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಹ್ಯಾಂಡಲ್ ಮಾಡಿರುವ ಮಾತುಗಳು ಕೇಳಿಬಂದಿದೆ. ಆದರೆ ಈ ರೀತಿ ನಿರ್ವಗಣೆ ಮಾಡಿರುವುದು ಕಾನೂನಾತ್ಮಕವಾಗಿ ಊರ್ಜಿತವಾಗುವುದೇ ಅಥವಾ ಇತರೆ ರಾಜ್ಯಗಳು ಏರಿಸಿರುವ ಮೀಸಲಿನ ರೀತಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ‘ವಜಾ’ಗೊಳ್ಳುವ ಅಥವಾ ಸ್ಟೇ ಆಗುವ  ತೀರ್ಮಾನ ವಾಗುವುದೋ ಎನ್ನುವುದು ಅನೇಕರಲ್ಲಿರುವ ಪ್ರಶ್ನೆಯಾಗಿದೆ.

ಏಕೆಂದರೆ ಯಾವುದೇ ಮೀಸಲು ಪ್ರಮಾಣ ಶೇ.50ನ್ನೂ ಮೀರಬಾರದು ಎನ್ನುವುದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶ ವಾಗಿದೆ. ಆದರೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲನ್ನು ಹೆಚ್ಚಿಸುವ ಮೂಲಕ ಈ ಆದೇಶದ ಸ್ಪಷ್ಟ ಉಲ್ಲಂಘನೆ ಯಾಗಿದೆ. ಇಷ್ಟು ದಿನ ಸುಗ್ರೀವಾಜ್ಞೆಯ ಮೂಲಕ ಜಾರಿಯಾಗಿದ್ದ ಮೀಸಲು ಹೆಚ್ಚಳಕ್ಕೆ ಚಳಿಗಾಲದ ಅಧಿವೇಶನ ದಲ್ಲಿ ವಿಧೇಯಕ ಪಾಸ್ ಆಗುವ ಮೂಲಕ ಕಾಯಿದೆಯಾಗಲಿದೆ.

ಇದೀಗ ಇದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ, ಅಲ್ಲಿ ಸಂಸತ್‌ನಲ್ಲಿ ಹೆಚ್ಚಿಸಿಕೊಳ್ಳಬೇಕಿದೆ. ಆದರೆ ಇದರಿಂದಾಗಿ ರಾಜ್ಯದಲ್ಲಿನ ಮೀಸಲು ಶೇ.57ಕ್ಕೆ ಹೋಗುವುದರಿಂದ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಸಿದಂತಾಗುವುದರಿಂದ ಯಾರಾದರೂ ನ್ಯಾಯ ಲಯದ ಮೊರೆ ಹೋದರೆ ಕಾನೂನು ಸಂಘರ್ಷ ಎದುರಿಸಬೇಕಾಗುತ್ತದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ.

ಇದಕ್ಕೆ ಹೊಸದಾಗಿ ಲಿಂಗಾಯತ ಹಾಗೂ ಒಕ್ಕಲಿಗರ ಮೀಸಲು ಹೆಚ್ಚಳವೂ ಸೇರಿಕೊಂಡಿದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡು ಸಮುದಾಯಗಳಿಗೂ ಹೊಸದಾಗಿಯೇನು ಮೀಸಲನ್ನು ನೀಡುತ್ತಿಲ್ಲ. ಬದಲಿಗೆ ಈಗಾಗಲೇ ಇದ್ದ ಮೀಸಲು ಆಚೀಚೆ ಮಾಡಿ, ಹೆಚ್ಚುವರಿಯಾಗಿ ತಲಾ ಎರಡಷ್ಟು ಮೀಸಲನ್ನು ಮಾತ್ರ ನೀಡಲಾಗುತ್ತಿದೆ. ಒಕ್ಕಲಿಗರು ಕೇಳಿದ್ದ ಶೇ.15ರಷ್ಟು ಮೀಸಲನ್ನು ಏನು ಈ ಹಂತದಲ್ಲಿ ನೀಡಲಾಗುತ್ತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದಂತೆ ‘ತಲೆಗೆ ತುಪ್ಪ ಸುರಿದಂತಾಗಿದೆ’. ಏಕೆಂ ದರೆ ಈ ಎರಡೂ ಸಮುದಾಯಗಳು ಈಗಾಗಲೇ 3ಬಿಯಲ್ಲಿ ಲಿಂಗಾಯತರನ್ನು 2ಡಿಗೆ ಹಾಗೂ 3‘ಎ’ನಲ್ಲಿದ್ದ ಒಕ್ಕಲಿಗರನ್ನು 2‘ಸಿ’ಗೆ ವರ್ಗಾಯಿಸಲಾಗಿದೆ.

ಅಲ್ಲಿದ್ದ ಮೀಸಲಿಗ ಜತೆಯಲ್ಲಿ ಹೆಚ್ಚುವರಿಯಾಗಿ ಶೇ.2ರಷ್ಟು ಮೀಸಲನ್ನು ನೀಡಲು ಸರಕಾರ ತೀರ್ಮಾನಿಸಿದೆ. ಆದರೆ ಈ ಎರಡೂ ಸಮುದಾಯದ ಜನಸಂಖ್ಯೆ ರಾಜ್ಯದ ಶೇ.30ರಷ್ಟು ಜನಸಂಖ್ಯೆಗೆ ಇರುವುದರಿಂದ ಶೇಕಡ ಐದಾರು ಪರ್ಸೆಂಟ್
ಮೀಸಲು ನೀಡುವುದರಿಂದ ಹೆಚ್ಚು ಬದಲಾವಣೆಯಾಗುವುದಿಲ್ಲ. ಹಾಗೇ ನೋಡಿದರೆ ಈ ಹಿಂದೆ ಲಿಂಗಾಯತರಿಗೆ ನೀಡಿದ್ದ ಕೋಟಾದಲ್ಲಿ ಬಹುದೊಡ್ಡ ಪಂಗಡವಾಗಿರುವ ಪಂಚಮಸಾಲಿಗಳನ್ನು ಸೇರಿಸಿರಲಿಲ್ಲ. ಆದರೀಗ ಈ ಸಮುದಾಯವನ್ನು ಸೇರಿಸಿರುವುದರಿಂದ, ಇನ್ನಷ್ಟು ಹೊರೆಯಾಗಿದೆ ಎನ್ನುವದರಲ್ಲಿ ಎರಡನೇ ಮಾತಿಲ್ಲ.

ಈ ಎಲ್ಲಕ್ಕಿಂತ ಮುಖ್ಯವಾಗಿ ಇದೀಗ ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ನೀಡಿರುವ ಮೀಸಲನ್ನು ಸಮರ್ಥಿಸಿಕೊಳ್ಳುವುದು ಸರಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಏಕೆಂದರೆ, ಈ ರೀತಿ ಮೀಸಲನ್ನು ಘೋಷಣೆ ಮಾಡುತ್ತಿದ್ದಂತೆ, ಎಲ್ಲವೂ ಮುಗಿಯಿತು ಎಂದಲ್ಲ. ಈ ವಿಷಯ ಸುಪ್ರೀಂ ಕೋರ್ಟ್ ಮುಂದೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಆ ಸಮಯದಲ್ಲಿ ಎರಡೂ ತಾಂತ್ರಿಕ ಸಮಸ್ಯೆ ಎದುರಾಗಲಿದೆ.

ಮೊದಲನೇಯದ್ದು ಶೇ.50 ಮೀಸಲನ್ನು ಮೀರಿರುವುದು ಸಮರ್ಥಿಸಿಕೊಳ್ಳುವುದು ಹಾಗೂ ಆರ್ಥಿಕ ಹಿಂದುಳಿದ ವರ್ಗಕ್ಕೆ ನೀಡಿರುವ ಶೇ.10ರಷ್ಟು ಮೀಸಲನ್ನು ಹಿಂದುಳಿದ ವರ್ಗಗಳಿಗೆ ನೀಡಿರುವ ವಿಷಯವನ್ನು ಸಮರ್ಥಿಸಿಕೊಳ್ಳುವುದು. ಏಕೆಂದರೆ ಕೇಂದ್ರ ಸರಕಾರ ಆರ್ಥಿಕ ಹಿಂದುಳಿದ ವರ್ಗಗಳ ಮೀಸಲನ್ನು ಜಾರಿಗೊಳಿಸಿದ್ದೇ, ಯಾವುದೇ ಮೀಸಲಿನ ಒಳಗೆ ಬಾರದೇ ಇರುವ ಮೇಲ್ವರ್ಗದ ಬಡವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ. ಏಕೆಂದರೆ ಕೇಂದ್ರ ಸರಕಾರ ಆರ್ಥಿಕ ಹಿಂದುಳಿದ ವರಿಗೆ ಶೇ.೧೦ರಷ್ಟು ಮೀಸಲನ್ನು ಘೋಷಿಸಿದಾಗ, ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

ಆದರೆ ಯಾವುದೇ ಮೀಸಲು ಪಡೆಯದೇ ಇರುವ ಸಾಮಾನ್ಯ ವರ್ಗದ ಹಿಂದುಳಿದವರಿಗೆ ಮೀಸಲು ನೀಡುವುದಕ್ಕಾಗಿ ಈ ಮೀಸಲು ಕ್ರಮವನ್ನು ಜಾರಿಗೊಳಿಸಲಾಗಿದೆ ಎನ್ನುವ ಮಾತನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿ ದಾಗ, ಈ 10ರಷ್ಟು ಮೀಸಲನ್ನು ‘ಈಗಿರುವ ಮೀಸಲಿನ’ ವ್ಯಾಪ್ತಿಗೆ ಸೇರಿಸದೇ ಪ್ರತ್ಯೇಕವಾಗಿ ನೋಡಿತ್ತು. ಆ ಕಾರಣ ಕ್ಕಾಗಿಯೇ ಶೇ.50ರಷ್ಟು ಮೀಸಲನ್ನು ಮೀರಿದರೂ ಇಡ್ಲ್ಯೂಸಿಯ ಮೀಸಲನ್ನು ನೀಡಲು ಸುಪ್ರೀಂ ಒಪ್ಪಿತ್ತು.

ಆದರೀಗ ಕರ್ನಾಟಕ ಸರಕಾರ ಈ ಮೀಸಲಿನಲ್ಲಿ ಶೇ.ನಾಲ್ಕರಿಂದ ಆರರಷ್ಟು ಮೀಸಲನ್ನು ಪುನಃ ಹಿಂದುಳಿದ ವರ್ಗಕ್ಕೆ ಹಂಚಲು ಮುಂದಾಗಿದೆ. ಈ ರೀತಿ ಹಂಚುವುದಾದರೆ, ಆರ್ಥಿಕ ಹಿಂದುಳಿದವರಿಗಾಗಿ ಮೀಸಲಿರುವ ಮೀಸಲನ್ನು ಎನ್ನುವು ದರಲ್ಲಿ ಅರ್ಥವಿಲ್ಲ ಎನ್ನುವುದು ಅನೇಕರ ವಾದವಾಗಿದೆ. ಇದರೊಂದಿಗೆ ಈ ರೀತಿಯ ಸಾಮಾನ್ಯ ವರ್ಗದ ಬಡವರಿಗೆ ಇರುವ ಮೀಲಸನ್ನು ಹಿಂದುಳಿದ ವರ್ಗದ ಬಡವರಿಗೆ ಹಂಚಲು ಮುಂದಾಗಿರುವುದರಲ್ಲಿಯೂ ಕರ್ನಾಟಕವೇ ಮೊದಲು. ಆದ್ದರಿಂದ
ಕರ್ನಾಟಕದ ಈ ವಾದವನ್ನು ಸುಪ್ರಿಂ ಕೋರ್ಟ್ ಒಪ್ಪುವುದೋ ಇಲ್ಲವೋ ಎನ್ನುವುದು ಅನೇಕರಲ್ಲಿರುವ ಪ್ರಶ್ನೆ.

ಈ ವಿಷಯದಲ್ಲಿ ಅಧಿಕಾರಿಗಳ ಹಾಗೂ ಕಾನೂನು ತಜ್ಞರ ಅಭಿಪ್ರಾಯವೇನೆಂದರೆ, ಬೇರೆ ರಾಜ್ಯಗಳಲ್ಲಿರುವ ಜಾಟ್,
ಪಟೇಲ್, ಮರಾಠಾ ಸಮುದಾಯದ ರೀತಿ ಕರ್ನಾಟಕದಲ್ಲಿ ಮೇಲ್ವರ್ಗದ ಪ್ರಬಲ ಸಮುದಾಯಗಳು ಯಾವುದೂ ಇಲ್ಲ. ಇತರ ರಾಜ್ಯಗಳಲ್ಲಿರುವ ಮೇಲ್ವರ್ಗದ ಸಮುದಾಯಗಳ ಜನಸಂಖ್ಯೆಗೆ ಹೋಲಿಸಿದಾಗ ಕೇಂದ್ರ ಸರಕಾರ ಶೇ.10ರಷ್ಟು ಆರ್ಥಿಕ ಹಿಂದುಳಿದವರ ಮೀಸಲು ಸರಿಯಾಗುತ್ತದೆ. ಆದರೆ ಕರ್ನಾಟಕದ ವಿಷಯದಲ್ಲಿ ಮೇಲ್ವರ್ಗ ಅಥವಾ ಯಾವುದೇ ರೀತಿಯ ಮೀಸಲಿನ ಸೌಲಭ್ಯವನ್ನೂ ಅನುಭವಿಸದೇ ಇರುವ ಸಮುದಾಯಗಳು ಎಂದರೆ, ಬ್ರಾಹ್ಮಣ, ವೈಶ್ಯ ಸೇರಿದಂತೆ ಕೆಲವೇ ಕೆಲವು ಸಮುದಾಯಗಳು.

ಅವರ ಜನಸಂಖ್ಯೆ ಕರ್ನಾಟಕದಲ್ಲಿ ಶೇ.4ರಷ್ಟನ್ನು ಮೀರುವುದಿಲ್ಲ. ಅದರಲ್ಲಿ ಇಡ್ಲ್ಯೂಸಿ ವ್ಯಾಪ್ತಿಗೆ ಬರುವವರು ಇನ್ನು ಕಡಿಮೆ. ಆದ್ದರಿಂದ ಶೇ.೪ ರಷ್ಟಿರುವ ಜನಸಂಖ್ಯೆಗೆ ಶೇ.10ರಷ್ಟನ್ನು ಮೀಸಲಿಡುವುದು ಸರಿಯಲ್ಲ. ಆದ್ದರಿಂದ ಅಲ್ಲಿರುವ ಜನಸಂಖ್ಯೆಗೆ ಅನುಗುಣ ವಾಗಿ, ಮೀಸಲನ್ನು ಹಂಚಿ, ಇನ್ನುಳಿದಿರುವ ಹೆಚ್ಚುವರಿ ಮೀಸಲನ್ನು ಹಿಂದುಳಿದ ವರ್ಗಗಳಿಗೆ ಹಂಚಲಾಗುವುದು
ಎನ್ನುವುದಾಗಿದೆ. ಆದರೆ ಈ ರೀತಿ ಮಾಡುವುದಕ್ಕೆ ಸಾಧ್ಯವೇ ಎನ್ನುವ ಬಗ್ಗೆ ಸ್ವತಃ ಸರಕಾರದಲ್ಲಿಯೇ ಸ್ಪಷ್ಟತೆಯಿಲ್ಲವಾಗಿದೆ.

ಹಾಗೇ ನೋಡಿದರೆ ರಾಜ್ಯವೊಂದರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಜನಸಂಖ್ಯೆಯಲ್ಲಿ ಪ್ರಬಲ ಸಮುದಾಯಗಳಾಗಿರುವ ಸಮುದಾಯಗಳನ್ನು ಒಬಿಸಿಯಲ್ಲಿ ಸೇರಿಸಿರುವುದು ಕರ್ನಾಟಕದಲ್ಲಿಯೇ ಮೊದಲು. ಮಹಾರಾಷ್ಟ್ರದಲ್ಲಿ ಮರಾಠ, ಗುಜರಾತ್‌ ನಲ್ಲಿ ಜಾಟ್ ಹಾಗೂ ಪಟೇಲ್ ಸಮುದಾಯಗಳು ಪ್ರಭಾವಿಗಳಾಗಿದ್ದರೂ ಅವುಗಳನ್ನು ‘ಸಾಮಾನ್ಯ’ ವರ್ಗದಲ್ಲಿ ಸೇರಿಸಲಾಗಿದೆ.

ಆದರೆ ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಹಿಂದುಳಿದ ಪಟ್ಟಿಯಲ್ಲಿದೆ. ನಾಲ್ಕೈದು ತಿಂಗಳಲ್ಲಿ ಕರ್ನಾಟಕದಲ್ಲಿ ಎದುರಾಗ ಲಿರುವ ವಿಧಾನಸಭಾ ಚುನಾವಣೆಯ ದೃಷ್ಠಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಯಿಂದ ಬಿಜೆಪಿ
ವರಿಷ್ಠರು ಈ ಎಲ್ಲ ತಂತ್ರಗಳನ್ನು ಒಂದೊಂದಾಗಿಯೇ ಬಿಡುತ್ತಿದೆ. ಮೀಸಲು ವಿಷಯದಲ್ಲಿ ಬಿಜೆಪಿ ತೆಗೆದುಕೊಳ್ಳುತ್ತಿರುವ ಈ ಎಲ್ಲ ನಿರ್ಧಾರಗಳು ಕಾನೂನಾತ್ಮಕವಾಗಿ ನಿಲ್ಲುವುದೋ ಅಥವಾ ಇತರೆ ರಾಜ್ಯಗಳಲ್ಲಿ ಸರಕಾರ ನೀಡಿದ್ದ ಮೀಸಲನ್ನು ವಜಾಗೊಳಿಸಿದಂತೆ ಸುಪ್ರೀಂ ಕೋರ್ಟ್ ವಜಾಗೊಳಿಸುವುದೋ ಗೊತ್ತಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಅವರ ‘ಛರೀಸ್ಮ’ವಂತೂ ಚುನಾವಣಾ ಸಮಯದಲ್ಲಿ ಸದ್ದಿಲ್ಲದೇ ಹೆಚ್ಚಾಗುತ್ತಿದೆ.

ಆದರೆ ಆರ್ಥಿಕ ಹಿಂದುಳಿದವರಿಗೆ ಇದ್ದ ಮೀಸಲನ್ನು ಲಿಂಗಾಯತ ಹಾಗೂ ಒಕ್ಕಲಿಗೆ ನೀಡಿರುವುದಕ್ಕೆ ಇತ್ತ ಕೊಟ್ಟರವರಿಗೂ ಸಮಾಧಾನವವಿಲ್ಲದೇ, ಪಡೆದವರಿಗೂ ಸಮಾಧಾನ ಇಲ್ಲದ ಪರಿಸ್ಥಿತಿ ನಿರ್ಮಾಣವಾದರೇ ಎನ್ನುವ ವಾತಾವರಣ ನಿರ್ಮಾಣ ವಾಗಬಹುದೇ ಎನ್ನುವ ಪ್ರಶ್ನೆಗೆ ‘ಮತದಾನ’ವೇ ಉತ್ತರವಾಗಲಿದೆ. ಒಟ್ಟಾರೆ ಬೆಳವಣಿಯೆನ್ನು ನೋಡಿದರೆ, ಒಕ್ಕಲಿಗ ಹಾಗೂ ಲಿಂಗಾಯತರ ವಿಷಯದಲ್ಲಿ ರಾಜ್ಯ ಸರಕಾರ ಮೀಸಲನ್ನು ಕೊಟ್ಟು ಕೊಡದಂತೆ ಮಾಡಿದೆ. ಆದ್ದರಿಂದ ಈ ವಿಷಯದಲ್ಲಿ ಹೋರಾಟ ಮಾಡಬೇಕೆ ಅಥವಾ ಸಿಕ್ಕಿದ್ದಕ್ಕೆ ಖುಷಿಪಟ್ಟು ಮುಂದೆ ಸಾಗಬೇಕೆ ಅಥವಾ ಇನ್ಯಾವುದಾದರೂ ದಾರಿಗಳು ತಮ್ಮ ಮುಂದಿದೆಯೇ ಎನ್ನುವ ಎನ್ನುವ ಗೊಂದಲದಲ್ಲಿ ಸಮುದಾಯಗಳ ಮುಖಂಡರಿದ್ದಾರೆ.

ಈ ಗೊಂದಲ ಮುಂದಿನ ನಾಲ್ಕೈದು ತಿಂಗಳು ಮುಂದುವರಿದರೂ ರಾಜ್ಯ ಸರಕಾರ ‘ಚುನಾವಣೆ’ ಎನ್ನುವ ಪರೀಕ್ಷೆಯಲ್ಲಿ ಪಾಸ್
ಆಗಲಿದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ.