Wednesday, 30th October 2024

ಸಾಮರಸ್ಯದ ಹರಿಕಾರ

ಸಂಘಸಂಪದ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ರಾಷ್ಟ್ರೀಯ ಸ್ವಯಂಸೇವಕ ಸಂಘ, ಆರೆಸ್ಸೆಸ್ ಎಂಬ ಹೆಸರು ಕೇಳದವರೇ ಇಲ್ಲ. ಆರೆಸ್ಸೆಸ್ ಎಂದರೆ ಶಿಸ್ತು, ಸ್ಪಷ್ಟ ವಿಚಾರಧಾರೆ, ಸ್ವಚ್ಛ ಬದುಕಿನ ದಾರಿದೀಪ, ಸಾಮಾಜಿಕ ವರ್ತನೆಯ ಪ್ರತಿರೂಪ, ವ್ಯಕ್ತಿತ್ವ ನಿರ್ಮಾಣದ ಕೇಂದ್ರ, ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿರುವ ಸಂಸ್ಥೆ ಎಂದೆಲ್ಲಾ ಸಮಾಜದಲ್ಲಿ ಜನಜನಿತ
ವಾಗಿದೆ. ಸಂಸ್ಥೆಯೊಂದು ಹುಟ್ಟಿ ಹೆಮ್ಮರವಾಗಿ ಬೆಳೆದು ನಿಲ್ಲಬೇಕಾದರೆ, ಟೀಕೆ-ಟಿಪ್ಪಣಿ, ವ್ಯಂಗ್ಯ-ವಿರೋಧ, ಕುಹಕ ಇವೆಲ್ಲವನ್ನೂ ಎದುರಿಸಬೇಕಾಗುತ್ತದೆ. ಟೀಕೆ ಯಾರನ್ನೂ ಬಿಟ್ಟಿಲ್ಲ, ಸಂಘವೂ ಇದರಿಂದ ಹೊರತಾಗಿಲ್ಲ.

ಟೀಕೆಯಿಂದ ಆರೆಸ್ಸೆಸ್ ವಿಚಲಿತವೂ ಆಗಿಲ್ಲ. ೨೦೨೫ನೇ ವರ್ಷಕ್ಕೆ ತನ್ನ ನೂರು ವರ್ಷವನ್ನು ಪೂರ್ತಿಗೊಳಿಸಲಿದೆ ಆರೆಸ್ಸೆಸ್. ಇದು ಸಾಗಿಬಂದ  ಹಾದಿ ಯನ್ನೊಮ್ಮೆ ಅವಲೋಕಿಸಿ ದರೆ, ಕಲ್ಲು-ಮುಳ್ಳು, ಬೆಂಕಿ ಮುಂತಾದವು ಅಲ್ಲಿ ಕಾಣಸಿಗುತ್ತವೆ. ಹೌದು, ಸಂಘವು ಸಲೀಸಾಗಿ ಇಂದು ಜಗತ್ತಿನ ಅತಿದೊಡ್ಡ
ಸಂಘಟನೆಯಾಗಿ ಹೊರಹೊಮ್ಮಿಲ್ಲ. ನಾಗಪುರದ ಮೊಹಿತೇವಾಡ ದಲ್ಲಿ ಡಾ. ಕೇಶವ ಬಲಿರಾಂ ಹೆಡಗೇವಾರ್ ಅವರು ಸಂಘವನ್ನು ಶೂನ್ಯದಿಂದ ಆರಂಭಿಸಿದಾಗ ಮೂದಲಿಸಿದವರೇ ಹೆಚ್ಚು. ಹಾಗಂತ ಅವರು ವಿಚಲಿತರಾಗಿ ಹೆಜ್ಜೆಯನ್ನು ಹಿಂದಕ್ಕೆ ಇಟ್ಟಿದ್ದಿದ್ದರೆ, ಇಂಥ ಸಾಮಾಜಿಕ ಸಾಧನೆಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗುತ್ತಿತ್ತು.

‘ವ್ಯಕ್ತಿಯು ಶ್ರೇಷ್ಠನೂ ಅಲ್ಲ, ಪರಿಪೂರ್ಣನೂ ಅಲ್ಲ; ತತ್ತ್ವಸಿದ್ಧಾಂತ, ವಿಚಾರಧಾರೆಗಳೇ ಶ್ರೇಷ್ಠ’ ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ ಭಗವಧ್ವಜವನ್ನೇ ಗುರುವಾಗಿಸಿ ಕೊಂಡು ೧೯೨೫ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಶಾಖೆಗಳ ಮೂಲಕ ತನ್ನ ಕಾರ್ಯವನ್ನು ವಿಸ್ತರಿಸುತ್ತಲೇ ಸಾಗಿದೆ. ವ್ಯಕ್ತಿ-ಕೇಂದ್ರಿತವಾಗಿ ರೂಪುಗೊಂಡ ಯಾವುದೇ ಸಂಘಟನೆ /ಚಳವಳಿ ಈ ಜಗತ್ತಿನಲ್ಲಿ ಶಾಶ್ವತವಾಗಿ ಬದುಕಿ ಬಾಳಿಲ್ಲ. ದಿನನಿತ್ಯದ ಒಂದು ಗಂಟೆಯ ಶಾಖೆಯೇ ಸಂಘದ ಜೀವಾಳ. ‘ಹಳೇಬೇರು
ಹೊಸಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತಿನಂತೆ ಸಂಘಕ್ಕೆ ಹೊಸ ಹೊಸ ಕಾರ್ಯಕರ್ತರ ಪರಿಚಯವಾಗುತ್ತಲೇ ಇದೆ.

ಇಲ್ಲಿಗೆ ಬಂದವರೆಲ್ಲ ಸ್ವಯಂಸೇವಕರೇ. ದೇಶಭಕ್ತಿಯ ಪಾಠ, ವೀರಪುರುಷರ ಸಾಹಸಗಾಥೆ, ಪ್ರೇರಣಾದಾಯಿ ಕಥೆಗಳು, ಯೋಗ, ಸೂರ್ಯ ನಮಸ್ಕಾರ, ಸ್ವದೇಶಿ ಆಟಗಳು, ಹಿತವಚನ, ಶ್ಲೋಕಪಠಣ ಹೀಗೆ ಇಲ್ಲಿ ದಕ್ಕುವ ಸಂಸ್ಕಾರಯುತ ಶಿಕ್ಷಣಕ್ಕೆ ಬೆಲೆಕಟ್ಟಲಾಗದು. ಸಂಘದ ಆಳ-ಅಗಲ, ಚಟುವಟಿಕೆಗಳನ್ನು ಅರಿಯದವರು
‘ಸಂಘವು ಕೋಮುವಾದದ ವಿಷಬೀಜವನ್ನು ಬಿತ್ತುತ್ತದೆ’ ಎಂದೆಲ್ಲಾ ಜರಿಯುವುದುಂಟು. ಸಂಘದ ಶಾಖೆಯಲ್ಲಿ ದೇಶಭಕ್ತಿಯ ಪಾಠ, ರಾಷ್ಟ್ರವನ್ನು ಉನ್ನತಿಯೆಡೆಗೆ ಸಾಗಿಸುವ ಸಂಕಲ್ಪ, ಜೀವನಶೈಲಿಯ ಶಿಕ್ಷಣ ಬಿಟ್ಟರೆ ಅದರಾಚೆಗೆ ಬೇರೇನೂ ಇಲ್ಲ.

ವ್ಯಕ್ತಿಪೂಜೆ ಎಂದಿಗೂ ಇಲ್ಲದ ಕಾರಣಕ್ಕೆ ಸಂಘವು ಇಂದು ಜಗತ್ತಿನಾದ್ಯಂತ ಹೆಮ್ಮರವಾಗಿ ಬೆಳೆದು ನಿಂತಿದೆ. ಸಂಘಟನೆಯೊಂದು ೩೨ಕ್ಕೂ ಅಧಿಕ ವಿವಿಧ ಕ್ಷೇತ್ರ
ಗಳಲ್ಲಿ ವಿಸ್ತರಿಸಿ, ಕೋಟ್ಯಂತರ ಸ್ವಯಂಸೇವಕ ಬಳಗವನ್ನು ಹೊಂದುವುದು, ಲಕ್ಷಾಂತರ ಕಾರ್ಯಕರ್ತರು ಮನೆ-ಮಠವೆಲ್ಲವನ್ನೂ ತೊರೆದು ಸಮಾಜಕ್ಕಾಗಿ ಕಾರ್ಯನಿರ್ವಹಿಸುವುದು ಇದೆಯಲ್ಲಾ, ಅದು ಆರೆಸ್ಸೆಸ್‌ನಲ್ಲಿ ಮಾತ್ರ ಸಾಧ್ಯ. ಸಂಘದ ಇಂಥ ಬೆಳವಣಿಗೆಯ ಹಿಂದೆ ಅದೆಷ್ಟೋ ಹಿರಿಯರ ತ್ಯಾಗ, ಬಲಿದಾನ ಇರುವುದರ ಜತೆಗೆ, ಭಾವನಾತ್ಮಕವಾಗಿ ಕಾರ್ಯನಿರ್ವಹಿಸುವ ಸ್ವಯಂಸೇವಕರ/ ಕಾರ್ಯಕರ್ತರ ಬೆಲೆಕಟ್ಟಲಾಗದ ಪರಿಶ್ರಮವೂ ಇದೆ.

ದೇಶದ ಯಾವುದೇ ಮೂಲೆಯಲ್ಲಿ ಭೀಕರ ಕ್ಷಾಮ, ಗಂಡಾಂತರ, ಪ್ರಕೃತಿ ವಿಕೋಪ, ಮಾರಕ ಕಾಯಿಲೆ ಎದುರಾದಾಗ, ಅಶಕ್ತ ಕುಟುಂಬಗಳನ್ನು ಹಾಗೂ ಸಂತ್ರಸ್ತರನ್ನು ಯೋಧರಂತೆ ರಕ್ಷಿಸುವಲ್ಲಿ ಸಂಘದ ಸ್ವಯಂಸೇವಕರು ಯಾವತ್ತೂ ಮುಂದು. ಇಂಥ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಸ್ವಯಂಸೇವಕರು ಯಾವುದೇ ಪ್ರಚಾರದ ಹಂಗಿಲ್ಲದೆ ಅಗತ್ಯ ಆಹಾರ ವಸ್ತುಗಳು ಮತ್ತು ಔಷಽಗಳ ವಿತರಣೆ, ಆರ್ಥಿಕ ನೆರವಿನಂಥ ಚಟುವಟಿಕೆಗಳ ಮೂಲಕ ಸಮಾಜದ ಮುಖ್ಯವಾಹಿನಿ
ಯಲ್ಲಿ ಕಾರ್ಯನಿರ್ವಹಿಸಿದ ಸಾಕಷ್ಟು ನಿದರ್ಶನಗಳಿವೆ. ರಾಜಕೀಯ ವ್ಯವಸ್ಥೆಯಲ್ಲಿ ಬಿಜೆಪಿ, ವಿದ್ಯಾರ್ಥಿಗಳ ನಡುವೆ ಎಬಿವಿಪಿ, ಧಾರ್ಮಿಕ ಹಾಗೂ ಯುವ ಸಮುದಾಯಗಳ ಮಧ್ಯೆ ವಿಶ್ವ ಹಿಂದೂ ಪರಿಷತ್ -ಬಜರಂಗದಳ, ಕಾರ್ಮಿಕರ ಮಧ್ಯೆ ಬಿಎಂಎಸ್, ಕೃಷಿಕರ ಮಧ್ಯೆ ಕಿಸಾನ್ ಸಂಘ, ಸಹಕಾರಿಗಳ ಮಧ್ಯೆ ಸಹಕಾರ ಭಾರತಿ, ಆದಿವಾಸಿ ಬುಡಕಟ್ಟು ಸಮುದಾಯದ ಮಧ್ಯೆ ವನವಾಸಿ ಕಲ್ಯಾಣ, ಶಿಕ್ಷಣ ಕ್ಷೇತ್ರದ ಮಧ್ಯೆ ವಿದ್ಯಾಭಾರತಿ ಹೀಗೆ ಆರೆಸ್ಸೆಸ್‌ನ ೩೦ಕ್ಕೂ ಅಽಕ ವಿವಿಧ ಕ್ಷೇತ್ರಗಳು ಸಮಾಜದ ತಳಮಟ್ಟದವರೆಗೆ ತಲುಪಿವೆ.

ಸಮಾಜದಲ್ಲಿ ಬಹಳ ಕಾಲದಿಂದ ತಾಂಡವವಾಡುತ್ತಿರುವ ಸಾಮಾಜಿಕ ಪಿಡುಗುಗಳಲ್ಲೊಂದಾದ ಅಸ್ಪೃಶ್ಯತೆಯನ್ನು ಹಾಗೂ ಸಾಮಾಜಿಕ ಅಸಮಾನತೆ
ಯನ್ನು ಹೋಗಲಾಡಿಸಲು ಆರೆಸ್ಸೆಸ್ ವಿಶೇಷ ಒತ್ತನ್ನು ನೀಡುತ್ತಾ ಬಂದಿದೆ. ಜಾತಿವ್ಯವಸ್ಥೆಯನ್ನು, ಮೇಲು-ಕೀಳು ಭಾವನೆಯನ್ನು ತೊಡಗಿಸುವ ನಿಟ್ಟಿನಲ್ಲಿ ಸಂಘದ ಶಾಖೆಗಳು ಮೇಲ್ಪಂಕ್ತಿ ಹಾಕುತ್ತಿವೆ. ಸಂಘದ ದಿನನಿತ್ಯದ ಶಾಖೆಯಲ್ಲಿ, ‘ನಾವೆಲ್ಲ ಒಂದು, ನಾವೆಲ್ಲರೂ ಬಂಧು’ ಎಂಬ ನಾಣ್ಣುಡಿಯನ್ನು ಅಕ್ಷರಶಃ ಪಾಲಿಸಲಾಗುತ್ತದೆ. ಸಂಘದ ಗತಿವಿಽಗಳಲ್ಲೊಂದಾದ ಸಾಮರಸ್ಯ ವಿಭಾಗದ ಮೂಲಕ ಮನೆಯಂಗಳದಲ್ಲಿ ಭಜನೆ, ಸಹಭೋಜನ, ದೀಪಾವಳಿಯ ಸಂದರ್ಭದಲ್ಲಿ ದೇವಾಲಯದ ಮೊದಲ ದೀಪವನ್ನು ಉಪೇಕ್ಷಿತ ಬಂಧುಗಳ ಕಾಲನಿಗಳಲ್ಲಿ ಬೆಳಗಿಸುವಿಕೆ ಇತ್ಯಾದಿ ಕಾರ್ಯಕ್ರಮ ಗಳನ್ನು ಆಚರಿಸಲಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಮುಖ್ಯವಾಹಿನಿಯಲ್ಲಿ ತಂದು ನಿಲ್ಲಿಸುವ, ಅವರನ್ನು ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಒಯ್ಯುವ ಸಂಘದ ಪ್ರಯತ್ನಗಳು ಯಾವುದೇ ಪ್ರಚಾರಗಳಿಲ್ಲದೆ ನಿತ್ಯ-ನಿರಂತರವಾಗಿ ಸಾಗಿವೆ.

ಸಂಘದ ಸಾಮರಸ್ಯ ವಿಭಾಗದ ಇಂಥದ್ದೊಂದು ಕಾರ್ಯವು ಇಂದು ರಾಜ್ಯದ ೬೦ಕ್ಕೂ ಹೆಚ್ಚಿನ ಶ್ರದ್ಧಾಕೇಂದ್ರಗಳ ಮೂಲಕ ದೀಪಾವಳಿಯ ಸಂದರ್ಭದಲ್ಲಿ ಜರುಗುತ್ತಿದೆ. ಇದನ್ನು ವ್ಯಾಪಕವಾಗಿ ವಿಸ್ತರಿಸುವ ಪ್ರಯತ್ನವು ಭರದಿಂದ ಸಾಗಿದೆ. ದೂರದಲ್ಲೆಲ್ಲೋ ನಿಂತುಕೊಂಡು ‘ಸಂಘ ಈ ಸಮಾಜಕ್ಕೆ ಏನು ಮಾಡಿದೆ?’ ಎಂದು ಕೇಳುವ ಮಂದಿಗೆ, ಸಂಘದ ತೆರೆಮರೆಯ ಕಾರ್ಯಚಟುವಟಿಕೆಗಳು ಮತ್ತು ಅವು ಸಮಾಜದ ಮೇಲೆ ಬೀರಿದ, ಬೀರುತ್ತಿರುವ ಪರಿಣಾಮ ಗಳು ಇನ್ನೂ ತಿಳಿದಿಲ್ಲವೆಂದೇ ಅರ್ಥ.

ಆರೆಸ್ಸೆಸ್ ಬೆಳೆದು ನಿಂತಿರುವುದೇ ಸವಾಲುಗಳನ್ನು ಎದುರಿಸಿ. ಬಿಜೆಪಿ ಎಂಬುದು ರಾಜಕೀಯ ವ್ಯವಸ್ಥೆ. ಆದರೆ ರಾಜಕೀಯ ವ್ಯವಸ್ಥೆ ಯಲ್ಲಿನ ಲೋಪದೋಷಗಳಿಗೂ ಸಂಘವನ್ನು ಎಳೆದು ತರುವ, ಅದನ್ನು ಸಂಘದ ತಲೆಗೆ ಕಟ್ಟುವ ಜನರೂ ಇದ್ದಾರೆ. ಚುನಾವಣೆ ಯಿರಲಿ, ಅಭ್ಯರ್ಥಿಗಳ ಆಯ್ಕೆಯಿರಲಿ ಅಥವಾ ಮತ್ತಿನ್ನಾವುದೇ ಸಮಸ್ಯೆಗಳು ಉಂಟಾದಾಗ ಆಗಲಿ, ಸಂಘವು ಸಲಹೆಯನ್ನಷ್ಟೇ ನೀಡುವುದು ಬಿಟ್ಟರೆ ಪೂರ್ಣಪ್ರಮಾಣದಲ್ಲಿ ತಲೆಹಾಕಿದ ನಿದರ್ಶನ
ಗಳಿಲ್ಲ. ಸಂಘದ ಕಾರ್ಯ ಏನಿದ್ದರೂ ವ್ಯಕ್ತಿತ್ವ ನಿರ್ಮಾಣ, ಸಂಘಟ ನಾತ್ಮಕ ಕಾರ್ಯ ಹಾಗೂ ದಿನನಿತ್ಯದ ಒಂದು ಗಂಟೆಯ ಶಾಖೆಯ ಮೂಲಕ ಕಾರ್ಯಚಟುವಟಿಕೆಯನ್ನು ವಿಸ್ತರಿಸುವುದಷ್ಟೇ. ಆ ಬಾಬತ್ತುಗಳಿಗೆ ಮಾತ್ರವೇ ಸಂಘವು ಆದ್ಯತೆಯನ್ನು ನೀಡುತ್ತಾ ಬಂದಿದೆ. ೨೦೨೫ರ ವರ್ಷದಲ್ಲಿ ಸ್ಥಾಪನೆಯ ನೂರು ವರ್ಷಗಳನ್ನು ಪೂರೈಸುತ್ತಿರುವ ಸಂಘವು ಅದರ ಸವಿನೆನಪಿಗೆ ಮತ್ತಷ್ಟು ಮಹತ್ವದ ಕಾರ್ಯಗಳನ್ನು ಹಮ್ಮಿಕೊಂಡಿದೆ. ಅದು ಸುಸೂತ್ರವಾಗಿ ನೆರವೇರಲಿ
ಎಂದು ಹಾರೈಸೋಣ.

(ಲೇಖಕರು ಹವ್ಯಾಸಿ ಬರಹಗಾರರು)