Monday, 16th September 2024

ಶಂಕ್ರ ಹೋಗ್ಬಿಟ್ಟ ಎಂದು ಅವರು ಭಾವುಕರಾಗಿ ಹೇಳಿದರು

ತಿಳಿರು ತೋರಣ

srivathsajoshi@yahoo.com

ಕಥೆ ಬಿಚ್ಚಿಟ್ಟ ವಿಮಲಾ ಕೊನೆಗೆಂದರು: ‘ನೋಡಿ, ನೀವು ಶಂಕರ ಬೆಳವಾಡಿಯ ಹೆಸರನ್ನು ಅಂಕಣದಲ್ಲಿ ಉಲ್ಲೇಖಿಸಿದ್ದೇ ನೆಪ ಆಯ್ತು. ನಾನು ನೆನಪಿನ ಓಣಿಯಲ್ಲಿಳಿದು ಬಾಲ್ಯಕ್ಕೇ ಹಿಂದಿರುಗಿಬಿಟ್ಟೆ. ಅಲ್ಲಿಂದಾರಂಭಿಸಿ ಶಂಕರನ ಒಡನಾಟದ ಕ್ಷಣಗಳನ್ನೆಲ್ಲ ಮತ್ತೆಮತ್ತೆ ಮೆಲುಕುಹಾಕಿದೆ. ನೀವೇನೋ ಲೇಖನದಲ್ಲಿ ಡಾ. ನಟರಾಜ್ ಅವರ ಲೇಖನದಿಂದ ಕಲೆಹಾಕಿದ ಮಾಹಿತಿ ಎಂದಿದ್ದೀರಿ.

ಅಳುವೇ ಬಂದುಬಿಟ್ಟಿತ್ತು ವಿಮಲಾ ರಾಜಗೋಪಾಲ್ ಅವರಿಗೆ ಅದನ್ನು ಹೇಳುವಾಗ! ಕಳೆದ ವಾರದ ಅಂಕಣದಲ್ಲಿ ಇಲ್ಲಿನ ನಮ್ಮ ‘ಕಾವೇರಿ’ ಕನ್ನಡ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಬಗ್ಗೆ ಬರೆದಿದ್ದನಷ್ಟೆ? ಅದರಲ್ಲಿ ಆರಂಭದ ಒಂದು ಪ್ಯಾರಗ್ರಾಫ್ ನಲ್ಲಿ ಕಾವೇರಿ ಕನ್ನಡ ಸಂಘ ಹೇಗೆ ಹುಟ್ಟಿತೆಂಬ ವಿವರಗಳಿದ್ದವಷ್ಟೆ? ಬಾಲ್ಟಿಮೋರ್‌ನ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಓದಿ ಮೇರಿಲ್ಯಾಂಡ್ ಪ್ರಾಂತ್ಯದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಬೆಳವಾಡಿ ಶಂಕರ್ ಎಂಬುವವರ ಆಸ್ಥೆಯಿಂದಾಗಿ ಅಮೆರಿಕದಲ್ಲಿ ಕಾವೇರಿಯ ಉಗಮವಾಯಿತು ಎಂದು ಬರೆದಿದ್ದೆ.

ನಾನಾದರೋ ಅದನ್ನು ಸ್ಮರಣಸಂಚಿಕೆಯ ಲೇಖನವೊಂದರಿಂದ ಮಾಹಿತಿ ಯನ್ನು ಆಯ್ದುಕೊಂಡು ಬರೆದುದಾಗಿತ್ತು. ಬೆಳವಾಡಿ ಶಂಕರ್ ಯಾರು ಏನು ಅಂತೆಲ್ಲ ನನಗೇನೂ ಗೊತ್ತಿರಲಿಲ್ಲ. 60ರ ದಶಕದಲ್ಲಿ ಅಮೆರಿಕೆಗೆ ಬಂದ ಯಾರೋ ಒಬ್ಬ ಹಿರಿಯ ಕನ್ನಡಿಗರಿರಬಹುದು, ಈಗೆಲ್ಲಿದ್ದಾರೋ ಗೊತ್ತಿಲ್ಲ ಎಂದಷ್ಟೇ ಅಲ್ಲಿ ನನ್ನ ಭಾವನೆಯಿದ್ದದ್ದು.

ಕೆಲವೊಮ್ಮೆ ಹೀಗಾಗುತ್ತದೆ. ನಾವು ಸುಮ್ಮನೆ ಮ್ಯಾಟರ್ ಆಫ್ ಫ್ಯಾಕ್ಟ್ ರೀತಿಯಲ್ಲಿ ಬರೆದುದನ್ನು, ಅದರಲ್ಲಿನ ಯಾವುದೋ ಒಂದು ಪದವನ್ನೋ, ಹೆಸರನ್ನೋ, ಯಾರೋ ಒಬ್ಬ ಓದುಗರು ತೀವ್ರವಾಗಿ ರಿಲೇಟ್ ಮಾಡಿಕೊಂಡಿರುತ್ತಾರೆ. ಓದುತ್ತಿದ್ದಂತೆ ಅವರಿಗೆ ಭಾವನೆಗಳು ಉಕ್ಕಿಹರಿಯುತ್ತವೆ. ವಿಮಲಾ ಅವರಿಗೆ ಆವತ್ತು ಅದೇ ಆದದ್ದು. ಫಿಲಡೆಲಿಯಾದಲ್ಲಿರುವ ಆ ಹಿರಿಯ ಅಮೆರಿಕನ್ನಡಿತಿ ಪ್ರತಿವಾರ ತಿಳಿರುತೋರಣ ಅಂಕಣ ಓದುತ್ತಾರೆ. ಯಾವಾಗಾದರೂ ಒಮ್ಮೆ ಭೇಟಿಯಾದಾಗ ಮೆಚ್ಚುಗೆಯ ಮಾತುಗಳನ್ನೂ ಆಡುತ್ತಾರೆ.

ಆದರೆ ಮೊನ್ನೆಯ ಅಂಕಣವನ್ನೋದಿ ಅವರಿಗೆ ಭಾವನೆಗಳು ಉಕ್ಕಿಬಂದದ್ದನ್ನು ತಡೆದುಕೊಳ್ಳಲಿಕ್ಕಾಗಲಿಲ್ಲ. ತತ್‌ಕ್ಷಣ ನನಗೆ
ಕರೆ ಮಾಡಿದರು. ‘ಈ ವಾರದ ಲೇಖನದಲ್ಲಿ, ಕಾವೇರಿ ಕನ್ನಡ ಸಂಘದ ಬಗ್ಗೆ ಬರೆಯುತ್ತ ಶಂಕರ ಬೆಳವಾಡಿ ಅಂತ ಒಬ್ಬರ
ಹೆಸರು ಉಲ್ಲೇಖಿಸಿದ್ದೀರಲ್ಲ, ಆತ ನನ್ನ ತಂದೆಯ ಸ್ವಂತ ತಂಗಿಯ ಮಗ. ನಾವಿಬ್ಬರೂ ಬಾಲ್ಯದಲ್ಲಿ ಒಟ್ಟಿಗೇ ಬೆಳೆದವರು.
ಕೆಲ ತಿಂಗಳ ಹಿಂದೆ ಅವನು ಹೋಗ್ಬಿಟ್ಟ…’ ಎಂದರು. ಗದ್ಗದಿತರಾದರು. ಶಂಕರ ಬೆಳವಾಡಿ ಎಂಬ ಹೆಸರನ್ನೋದಿದೊಡನೆ ಅವರಿಗೆ ನೆನಪುಗಳ ಮೆರವಣಿಗೆಯೇ ಹೊರಟಿತಂತೆ.

ಅದನ್ನೆಲ್ಲ ನನಗೆ ತಿಳಿಸಿದರು. ಪಾಪ, ಅವರು ಅಷ್ಟು ಉತ್ಸಾಹದಿಂದ ಕಥೆಯಂತೆ ಹೇಳುತ್ತಿದ್ದರು, ನನಗೆ ಸುವರ್ಣ ಮಹೋತ್ಸವ ತಯಾರಿಯದೇ ಒಂದು ಝೂಮ್ ಮೀಟಿಂಗ್ ನಲ್ಲಿ ಭಾಗವಹಿಸುವುದಿತ್ತು. ಇನ್ನೊಮ್ಮೆ ಯಾವಾಗಾದರೂ
ಮಾತಾಡೋಣ ಎಂದು ಕರೆಯನ್ನು ನಿಲ್ಲಿಸಬೇಕಾಯಿತು. ಆಮೇಲೊಂದು ದಿನ ನಾನೇ ಅವರಿಗೆ ಕರೆ ಮಾಡಿ ಹೇಳಿದೆ,
‘ನೀವು ಅರ್ಧ ನಿಲ್ಲಿಸಿದ್ದ ಕಥೆಯನ್ನು ಒಂದು ಬರಹವಾಗಿಸಿ ಅಥವಾ ಧ್ವನಿಮುದ್ರಿಸಿ ಕಳಿಸುತ್ತೀರಾ? ನಾನದನ್ನು ಈ ವಾರದ
ಅಂಕಣದಲ್ಲೇ, ನಮ್ಮ ಕಾವೇರಿ ಕನ್ನಡ ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲೇ ಬೆಳವಾಡಿ ಶಂಕರರ ಸಂಸ್ಮರಣೆ
ಎಂದು ಬಳಸಿಕೊಳ್ಳುತ್ತೇನೆ’ ಎಂದೆ. ವಿಮಲಾ ಒಪ್ಪಿಕೊಂಡರು.

ಆವತ್ತೇ ಅವರ ಹುಟ್ಟಿದಹಬ್ಬ ಇದ್ದುದರಿಂದ ಮಕ್ಕಳು- ಮೊಮ್ಮಕ್ಕಳೆಲ್ಲ ಮನೆಗೆ ಬಂದಿದ್ದರಿಂದ ಅದರಲ್ಲೇ ವ್ಯಸ್ತರಾದರು;
ಮತ್ತೊಂದು ದಿನ ಮೆಡಿಕಲ್ ಚೆಕ್‌ಅಪ್ ಇದ್ದುದರಿಂದ ಬಿಜಿಯಾದರು. ಆದರೆ ಮರೆಯಲಿಲ್ಲ, ಬರೆದು ಕಳುಹಿಸುವುದು
ತಡವಾಗುತ್ತದೆಂದು ಶುಕ್ರವಾರ ಸಂಜೆ ಧ್ವನಿಮುದ್ರಿಸಿ ಕಳುಹಿಸಿದರು. ಪ್ಲೇ ಮಾಡಿ ಕೇಳಿಸಿಕೊಂಡೆ. ಸುಮಾರು ಅರ್ಧಗಂಟೆ
ಕಾಲ ಅವರ ಪ್ರೀತಿಯ ‘ಶಂಕ್ರ’ನ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅಮೆರಿಕದ ನ್ಯಾಷನಲ್ ಪಬ್ಲಿಕ್ ರೇಡಿಯೊದಲ್ಲಿ ಪ್ರತಿ ಶುಕ್ರವಾರ ಬರುವ ‘ಸ್ಟೋರಿ ಕೋರ್’ ಕೇಳಿದಂತೆ ಅನಿಸಿತು ನನಗೆ. ಆ ಕಾರ್ಯಕ್ರಮದಲ್ಲಿ ಹೀಗೆಯೇ.

ಯಾರಾದರೊಬ್ಬ ಹಿರಿಯ ನಾಗರಿಕರು ಅವರ ಜೀವನಾನುಭವದ ಮಾತುಗಳನ್ನು, ಹಳೆಯ ನೆನಪುಗಳನ್ನು, ಮುಂದಿನ ತಲೆಮಾರಿನವರಿಗೆ ಕೇಳಲಿಕ್ಕಾಗಿಯೇ ಹೇಳುತ್ತಾರೆ. ತುಂಬ ಚೆನ್ನಾಗಿರುತ್ತದೆ. ಹಾಗೆ ಇತ್ತು ವಿಮಲಾ ಅವರ ಧ್ವನಿಮುದ್ರಣ.
ವಿಮಲಾ ರಾಜಗೋಪಾಲ್ ಅವರ ಕಿರುಪರಿಚಯವನ್ನೂ ನಾನಿಲ್ಲಿ ಬರೆಯಲೇಬೇಕು. ಅವರು, ಮೂರು ವರ್ಷಗಳ ಹಿಂದೆ ದಿವಂಗತರಾದ ಅಕ್ಷರಪ್ರೇಮಿ ಅಮೆರಿಕನ್ನಡಿಗ ಎಚ್.ವೈ.ರಾಜಗೋಪಾಲ್‌ರ ಪತ್ನಿ.

ಅಷ್ಟೇ ಮುಖ್ಯವಾಗಿ, ಕನ್ನಡದ ಹಿರಿಯ ಸಾಹಿತಿ ಎಲ್.ಗುಂಡಪ್ಪನವರ ಮಗಳು. ಎಲ್.ಗುಂಡಪ್ಪ ಅಂದರೆ ‘ತಾಯಿ ದೇವರೆಂದು ವೇದ ಬಾಯಿಬಿಟ್ಟು ಹೇಳುತಿಹುದು’ ಪದ್ಯ ಬರೆದವರು. ಎಲ್‌ಜಿ ಸೋದರಿಯರು ಎಂದೇ ಜನಪ್ರಿಯರಾಗಿದ್ದ, ಆಕಾಶವಾಣಿಯ ಬೇರೆ ಬೇರೆ ಕೇಂದ್ರಗಳಲ್ಲಿ ಕೆಲಸ ಮಾಡಿದ್ದ, ‘ಸುಮಿತ್ರಾ, ಕಮಲಾ, ಮತ್ತು ವಿಮಲಾ’ರ ಪೈಕಿ ವಿಮಲಾ ಅಂದರೆ ಇವರೇ. ಜನಪದ ಸಂಗ್ರಹಣೆ ಮತ್ತು ಸಂಶೋಧನೆಯಲ್ಲಿ ತಂದೆ ಮತ್ತು ಚಿಕ್ಕಪ್ಪ ಮತ್ತಿಘಟ್ಟ ಕೃಷ್ಣಮೂರ್ತಿಯವರಂತೆಯೇ ತುಂಬ ಕೆಲಸ
ಮಾಡಿದವರು. ತುಂಟರ ತೇರು ಎಂಬ ಮಕ್ಕಳ ಸಾಹಿತ್ಯ ಕೃತಿ ಬರೆದವರು.

ಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಲ್ಲಿ, ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲಿ ಕಥೆ, ಲೇಖನ ಬರೆದವರು. ಅಮೆರಿಕದ ಫಿಲಡೆಲಿಯಾದಲ್ಲಿ ಇಂಡಸ್ ಎಂಬ ಸಂಸ್ಥೆ ನಡೆಸಿ ಮಕ್ಕಳಿಗೆ ಇಂದ್ರಾಣಿ ರೆಹಮಾನ್ ಮತ್ತು ಖ್ಯಾತ ತಾರೆ ಪದ್ಮಿನಿ ಅವರಿಂದ ನೃತ್ಯ ತರಗತಿಗಳನ್ನು ಏರ್ಪಡಿಸಿದವರು. ಪೀಸ್ ಕೋರ್‌ನಲ್ಲಿ ಅಮೆರಿಕನ್ನರಿಗೆ ಕನ್ನಡ ಬೋಧನೆ ಮಾಡಿ ಯೂನಿವರ್ಸಿಟಿ ಆಫ್ ಫಿಲಡೆಲಿಯಾದ ಕನ್ನಡ ವಿಭಾಗದಲ್ಲಿ ಕನ್ನಡ ಭಾಷೆಯ ಬೋಧನೆಯ ಕಾರ್ಯ ನಿರ್ವಹಿಸಿದವರು.

ಅಂತಹ ವಿಮಲಾ ರಾಜಗೋಪಾಲ್ ನನ್ನಲ್ಲಿ ಹೇಳಿದ ‘ಶಂಕ್ರನ ಕಥೆ’ಯಿಂದ ಆಯ್ದ ಕೆಲ ಭಾಗಗಳನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಶಂಕರ ಮೂರು ವರ್ಷಗಳ ಪುಟ್ಟ ಹುಡುಗನಾಗಿದ್ದಾಗ ಅವನ ಅಜ್ಜಿ ಜೊತೆ ನಮ್ಮನೆಗೆ ಬಂದಿದ್ದ. ಅವನ ಉದ್ದ ಜಡೆ ನೋಡಿ ನನಗೆ ಬಹಳ ಆಶ್ಚರ್ಯ ಆಗಿದ್ದು ಈಗಲೂ ನೆನಪಿದೆ. ಅವನು ಎಷ್ಟು ಕಷ್ಟಗಳನ್ನು ಅನುಭವಿಸಿ ಬೆಳೆದ, ಎಂಥ ಸಾಧನೆಗಳನ್ನು ಮಾಡಿದ, ಅವನು ಎಷ್ಟೊಂದು ಉತ್ಸಾಹಿ ತರುಣ ಅನ್ನೋದೆಲ್ಲ ಜ್ಞಾಪಕಕ್ಕೆ ಬಂತು. ಅವನು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಿಧನನಾದ ನ್ನೋದೂ ನೆನಪಾಗಿ ಅಳುವೇ ಬಂದುಬಿಡ್ತು.

ಶಂಕರ ಮಾತ್ರವಲ್ಲ, ನಿಮ್ಮ ಲೇಖನದಲ್ಲಿ ವೈ.ಎಸ್.ಇಂದಿರಾ ಮತ್ತು ಸುಬ್ರಹ್ಮಣ್ಯ ದಂಪತಿಯ ಬಗ್ಗೆ ಇದೆಯಲ್ಲ, ಅವರೂ ನನಗೆ
ಗೊತ್ತಿರುವವರೇ. ನಮ್ಮ ಬಂಧುಗಳಲ್ದೇಇದ್ರೂ ನಮ್ಮನೆಯಲ್ಲೇ ಬೆಳೆದವರು. ನಮ್ಮ ತಾತ ಲಿಂಗಣ್ಣಯ್ಯನವರ ಸ್ನೇಹಿತರು ಜಾವಗಲ್‌ನಲ್ಲಿದ್ದವ್ರು ನಮ್ಮನೆಗೆ ಬಂದು ನಾರಾಯಣ-ಸುಬ್ರಹ್ಮಣ್ಯ ಎಂಬಿಬ್ಬರು ಗಂಡುಮಕ್ಕಳನ್ನು ನಮ್ಮನೆಯಲ್ಲಿ ಬಿಟ್ಟುಹೋದರು.

ಅವರಿಬ್ಬರೂ ನನ್ನನ್ನು ಸ್ವಂತ ಅಣ್ಣಂದಿರಂತೆ ನೋಡ್ಕೊಳ್ತಿದ್ರು. ಶಂಕರನ ಪತ್ನಿ ಶಾರದಾ ಸಹ ನನಗೆ ಸಂಬಂಧವೇ. ನಮ್ಮ ತಾಯಿ ಅಕ್ಕಿಹೆಬ್ಬಾಳಿನವರು. ಅವರ ತಂಗಿಯ, ಅಂದರೆ ರತ್ನಾಚಿಕ್ಕಮ್ಮನ ಮಗಳೇ ಶಾರದಾ. ಆಕೆಯ ಪೂರ್ವಿಕರು ತಗರೆ ವಂಶದವರು. ಅವರು ಮತ್ತು ನನ್ನ ತಾತ ಲಿಂಗಣ್ಣಯ್ಯನವರ ಪೂರ್ವಿಕರು, ಮೀರ್ ಜಾಫರ್ ಮತ್ತು ಮೀರ್ ಸಾದಕ್ ಇಬ್ಬರೂ ಸೇರಿ ಟಿಪ್ಪು ಸುಲ್ತಾನ್‌ಗೆ ದ್ರೋಹ ಬಗೆದಾಗ ಆ ಸುಂಕದಕಟ್ಟೆಯವರು ಎಂದು ಹೆಸರು ಪಡೆದಿದ್ದವರು.

ಸುಲ್ತಾನನ ಆಗ್ರಹಕ್ಕೆ ಗುರಿಯಾಗಿ ಸುಂಕದಕಟ್ಟೆ ಬಿಟ್ಟು ಓಡಿಹೋದವರು. ಬರೀ ಹುಲಿಗಳಿಗೆ ಹೆಸರಾಗಿದ್ದ ಗೊಂಡಾರಣ್ಯ ವಾಗಿದ್ದ ಮತ್ತಿಘಟ್ಟಕ್ಕೆ ಬಂದು ನೆಲೆಸಿದವರು. ನಮ್ಮ ತಾತನಿಗಾಗಲೇ ವಯಸ್ಸಾಗಿತ್ತು. ಕಳಸಾಪುರದ ಅಜ್ಜಿಯನ್ನು ಅವರು ಮದುವೆ ಮಾಡ್ಕೊಂಡಾಗ ಆಕೆ ಅವರಿಗಿಂತ ೨೫ ವರ್ಷ ಕಿರಿಯರು! ಮುತ್ತುರಾಮಸ್ವಾಮಿ, ಗುಂಡಪ್ಪ, ಕೃಷ್ಣಮೂರ್ತಿ-
ಮೂವರು ಗಂಡುಮಕ್ಕಳು ನಮ್ಮ ತಾತನಿಗೆ. ಆ ಮೂವರೇ ‘ನಾಡಪದಗಳು’ ಎಂಬ ಸಂಗ್ರಹ ಮಾಡಿದವರು. ಈ ಶಂಕರ,
ಬೆಳವಾಡಿಯಲ್ಲಿ ಬೆಳೆದವನು. ಸುಂದರವಾದ ಊರು ಅದು. ಒಂದೇ ವಿಗ್ರಹದಲ್ಲಿ ನರಸಿಂಹ, ಶಿವ, ಕೊಳಲಗೋಪಾಲ ಇರುವ
ಸುಂದರ ದೇವಾಲಯವನ್ನು ಅಲ್ಲಿ ನೋಡಿದ ನೆನಪಿದೆ.

ನನ್ನ ಅಜ್ಜಿ ಯಾವಾಗ್ಲೂ ಹೇಳ್ತಿದ್ರು ‘ನೀವೆಲ್ಲ ಪಟ್ಟಣವಾಸಿಗಳು, ನಾವು ಹಳ್ಳಿಯಲ್ಲಿ ಬೆಳ್ದವ್ರು’ ಅಂತ. ಬೆಂಗಳೂರಿನಲ್ಲಿ ಬೆಳೆದ ನನಗೆ ಆಗ ಅದು ಅಷ್ಟೇನೂ ಅರ್ಥವಾಗುತ್ತಿರಲಿಲ್ಲ. ಶಂಕ್ರ ಮೂರು ವರ್ಷದವನಿದ್ದಾಗ ಅವನನ್ನು ನಮ್ಮನೆಗೆ ಕರ್ಕೊಂಡು ಬಂದಿದ್ರು. ತಲೆಮೇಲೆ ಅರ್ಧಚಂದ್ರಾಕಾರವಾಗಿ ಹೇರ್‌ಕಟ್, ಅದರ ಕೆಳಗೆ ಉದ್ದ ಜಡೆ. ನನಗೋ ಆಶ್ಚರ್ಯದಿಂದ ನಗುವೂ ಬಂದಿತ್ತು. ನಾವಿಬ್ರೂ ಒಟ್ಟಿಗೆ ಆಟ ಆಡ್ತಿದ್ವು. ಉತ್ಸಾಹ ಪುಟಿದೇಳುವ ಹುಡುಗ ಅವನು. ಜನಪದ ಗೀತೆಗಳನ್ನೆಲ್ಲ ತುಂಬ ಚೆನ್ನಾಗಿ ಕಲಿತಿದ್ದನು. ಅವನ ಅಪ್ಪ ಕಠಿಣ ಸ್ವಭಾವದವ್ರು. ತುಂಬ ಸ್ಟ್ರಿಕ್ಟು. ಮಕ್ಕಳನ್ನು ಎಲ್ಲಾದ್ರು ಕರೆದುಕೊಂಡು ಹೋಗೋದೆಲ್ಲ ಇಲ್ಲವೇ ಇಲ್ಲ. ಒಂದ್ಸಲ ಮಾತ್ರ ಶಂಕರ ಅಜ್ಜಿ ಜೊತೆ ನಮ್ಮನೆಗೆ ಬಂದಿದ್ದ.

ಅದೂ ಹೇಗೆಂದರೆ ತಾನು ಬೆಂಗಳೂರಿಗೆ ಹೋಗುವವನೇ ಎಂದು ಹಠ ಮಾಡಿ ಎತ್ತಿನಗಾಡಿಯ ಮುಂದೆ ಮಲಗಿ ಧರಣಿ
ಹೂಡಿದ್ದನಂತೆ. ಅವನ ಅಪ್ಪ ಗದರಿಸಿ ಕಟ್ಟಪ್ಪಣೆ ವಿಧಿಸಿದರೂ ಹೇಗೋ ಬೆಂಗಳೂರಿಗೆ ಬಂದಿದ್ದ. ಅಂತೂ ವಿದ್ಯಾವಂತನಾಗಿ
ಬೆಳೆದ. ಚೆನ್ನಾಗಿ ಹಾಡ್ತಿದ್ದ ಕೂಡ. ಅಂತ್ಯಾಕ್ಷರಿ ಆಡೋದು, ನಾನಾ ಥರದ ಹಾಡುಗಳನ್ನು ಕಟ್ಟೋದೆಲ್ಲ ಅವನಿಗೆ ತುಂಬ
ಇಷ್ಟ. ಶಾರದಾಳನ್ನು ಮದುವೆಯಾಗಿ ಅಮೆರಿಕಕ್ಕೆ ಬಂದಮೇಲೆ ಅವರಿಬ್ಬರೂ ಇಲ್ಲಿ ನಮ್ಮನೆಗೆ ಆಗಾಗ ಬಂದುಹೋಗಿ
ಮಾಡ್ತಿದ್ರು. ಶಾರದಾ ಹಳ್ಳಿಹುಡುಗಿಯಾಗ್ರೂ ಇತ್ತ ಅಡುಗೆಯಲ್ಲೂ ಪರಿಣತಳು, ಅತ್ತ ಪಿಎಚ್‌ಡಿವರೆಗೆ ಓದನ್ನೂ
ಮುಂದುವರಿಸಿದ ಪ್ರತಿಭಾನ್ವಿತೆ.

ಬಹುಕಾಲ ಅವ್ರಿಬ್ರೂ ಅನ್ಯೋನ್ಯರಾಗಿಯೇ ಇದ್ರು. ‘ತಿಮ್ಮ’ ಎಂಬ ಹೆಸರಿನ ಕೆಂಪಗಿನ ನಾಯಿ ಸಾಕಿದ್ದರು. ನಮ್ಮನೆಗೆ ಬಂದಾಗ ಅದನ್ನೂ ಕರ್ಕೊಂಡು ಬರ್ತಿದ್ರು. ಶಂಕರ ಕನ್ನಡದ ಕೆಲಸಗಳಲ್ಲಿ ತನ್ನನ್ನು ತೊಡಗಿಸ್ಕೊಳ್ತಿದ್ದ. ತುಂಬ ಜನರಿಗೆ ಕನ್ನಡದ ಹಾಡುಗಳನ್ನು ಹೇಳ್ಕೊಡ್ತಿದ್ದ. ಬಹುಶಃ ‘ಕಾವೇರಿ’ ಕಟ್ಟುವ ಕನಸೂ ಆತನಿಗೆ ಹಾಗೇ ಬಂದಿರಬೇಕು. ಶಂಕರನ ಪೂರ್ವಿಕರು ಮತ್ತು ನಮ್ಮ ಪೂರ್ವಿಕರ ಬಗ್ಗೆ ಹೇಳಿದೆನಷ್ಟೆ? ಟಿಪ್ಪುಸುಲ್ತಾನನ ಆಡಳಿತ, ಬ್ರಿಟಿಷರ ಆಳ್ವಿಕೆ, 1857ರಲ್ಲಿ ನಡೆದ ದಂಗೆ, ಸ್ವಾತಂತ್ರ್ಯ ಹೋರಾಟದ ಕಥೆಗಳನ್ನೆಲ್ಲ ಹಿರಿಯರಿಂದ ಕೇಳಿ ಬೆಳೆದವರು ಅವನೂ ನಾನೂ.

ಹಾಗೆ ಒಂಥರದ ಸಂಘಟನಾ ಶಕ್ತಿ ಉತ್ಸಾಹಗಳು ಅವನ ಮೈಮನಗಳಲ್ಲಿ ತುಂಬಿಕೊಂಡಿದ್ದಿರಬಹುದು ಎಂದು ನನ್ನ ಅಂದಾಜು. ಶಂಕರನಿಗೆ ಇಬ್ಬರು ಅಣ್ಣಂದಿರಿದ್ರು. ನರಸಿಂಹಮೂರ್ತಿ ಅಂತ ಒಬ್ಬ, ಸಿಡುಬು ಕಾಯಿಲೆಗೆ ತುತ್ತಾದ. ಆಗೆಲ್ಲ ಸಿಡುಬಿನ ವಿರುದ್ಧ ದೇವಿ ಹಾಕಿಸುವುದಕ್ಕೆ ಹಳ್ಳಿಯ ಜನ ಹಿಂಜರಿಯುತ್ತಿದ್ದರು. ಕಾಯಿಲೆ ಬಂದರೆ ಸಾಯುವುದೇ. ಶಂಕರನ ಅಕ್ಕ
ಸತ್ಯಭಾಮೆ ಅನ್ನೋವ್ಳು ಚಿಕ್ಕಂದಿನಲ್ಲೇ ವಿಧವೆಯಾದಳು.

ಶಂಕರನಿಗೆ ಪಟ್ಟಣವಾಸದಲ್ಲಿರೋಕೆ ಇಷ್ಟ. ತಂದೆಯ ಕಾಠಿಣ್ಯವು ಮನೆಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಿಸಿತ್ತು.
ಶಂಕರನ ಇನ್ನೊಬ್ಬ ಅಣ್ಣ ಸೂರಣ್ಣ ಎಂಬುವವ, ದೊಡ್ಡವನಾದ ಮೇಲೆ ಮೈಸೂರಿನಲ್ಲಿ ಒಂದು ಪತ್ರಿಕೆ ನಡೆಸುತ್ತಿದ್ದ. ಅವನೂ
ತಂದೆಯ ಕಟ್ಟಪ್ಪಣೆಗಳಿಂದಾಗಿ ನಲುಗಿದವನೇ. ನಮ್ಮನೆಗೆ ಬಂದಾಗೆಲ್ಲ ಆ ಹುಡುಗ್ರಿಗೆ ಹಾಯೆನಿಸುತ್ತಿತ್ತು. ಅದಕ್ಕೆ ತಕ್ಕಂತೆ
ನಮ್ಮ ಅಮ್ಮ ಕರುಣಾಮಯಿ ಮಹಾಮಾತೆ. ಬಂದವರಿಗೆಲ್ಲ ಕೊಡುಗೈಯಿಂದ ಆತಿಥ್ಯ ಮಾಡೋವ್ಳು.

ನಮ್ಮ ತಂದೆನೂ ಅಷ್ಟೇ. ಸ್ವಾತಂತ್ರ್ಯ, ದೇಶಪ್ರೇಮದ ವಿಚಾರಗಳನ್ನೆಲ್ಲ ಮಕ್ಕಳಿಗೆ ಹೇಳ್ಕೊಡ್ತಿದ್ರು. ಜಾತಿಮತ ಭೇದಭಾವ ಇಲ್ಲದ ಮುಕ್ತ ವಾತಾವರಣ ಕಲ್ಪಿಸುತ್ತಿದ್ದರು. ಇದು ಶಂಕರನಿಗೆ ತುಂಬ ಸಹಾಯವಾಯ್ತು. ಮತ್ತಿಘಟ್ಟ ಕೃಷ್ಣಮೂರ್ತಿಗಳ ಮನೆಯಲ್ಲೂ ಶಂಕರನಿಗೆ ಅಂಥದ್ದೇ ಸೌಹಾರ್ದ ಸ್ನೇಹಮಯಿ ವಾತಾವರಣ ಸಿಗುತ್ತಿತ್ತು. ಜನಪದ ಗೀತೆಗಳನ್ನು ಕಲಿತದ್ದಷ್ಟೇ ಅಲ್ಲ, ಅದಕ್ಕೆ ನೃತ್ಯಗಳನ್ನೂ ಮಾಡುತ್ತಿದ್ದ.

ಮತ್ತಿಘಟ್ಟದಲ್ಲಿ ಒಂದು ಮಲ್ಲಯ್ಯನ ಗುಡಿ ಇತ್ತು, ನಮ್ಮ ತಾತನ ತೋಟದ ಪಕ್ದಲ್ಲೇನೇ. ಮಲ್ಲಯ್ಯ ಮತ್ತು ಮಲ್ಲವ್ವ, ಅಂದರೆ ಶಿವ-ಪಾರ್ವತಿಯ ಗುಡಿಗಳು. ಅದರ ಮುಂದೆ ಕೋಲಾಟಗಳೆಲ್ಲ ನಡೀತಿದ್ವು. ಗಂಡಸರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ಕೋಲು ಹಿಡ್ಕೊಂಡು ಒಳ್ಳೊಳ್ಳೆಯ ಹಾಡುಗಳಿಗೆ ನರ್ತಿಸ್ತಿದ್ದದ್ದು ಈಗಲೂ ಜ್ಞಾಪಕ ಇದೆ. ನಮ್ಮ ಶಂಕರನಿಗೆ ತುಂಬ ಇಷ್ಟವಾಗಿದ್ದ ಹಾಡು ‘ಹತ್ತವಳಿ ಕಟ್ಟೆಸೂಳೆ ತುಪ್ಪದ್‌ಚಟ್ಟಿ ಎಲ್ಲಿಟ್ಟೆ ವಾಳ್ಣ ವಾಗಿರ್ತಿತ್ತೆಂದು ಬೆಕ್ಕಿನ್ಮುಂದೆ ಇಟ್ಬುಟ್ಟೆ…’ ಅಂತ ಹಾಡನ್ನು ತುಂಬ ಡ್ಯಾನ್ಸ್ ಮಾಡ್ಕೊಂಡು ಹೇಳೋವ್ನು.

ಹಾಂಗ್ಹೇಳ್ಬಾರ್ದು ಕಣೋ ಅಂದ್ರೆ ಇಲ್ಲ ಕಣೇ ತುಂಬ ಚೆನ್ನಾಗಿರುತ್ತೆ ಈ ಹಾಡು ಎಂದು ಮತ್ತೆ ಹಾಡಿ ನೆಗೆದು ನೆಗೆದು ಕುಣಿಯೋನು. ಜಾನಪದ ಗೀತೆಗಳನ್ನೇ ಉಪಯೋಗಿಸಿ ಅಂತ್ಯಾಕ್ಷರಿ ಆಡೋನು. ತುಂಬ ತಮಾಷೆ ಸ್ವಭಾವ. ನಗ್‌ನಗ್ತಾ ಇರ್ತಿದ್ದ. ಶಾರದಾ ಒಳ್ಳೇ ಅಡುಗೆ ಮಾಡ್ತಿದ್ಳು. ಶಂಕರ ಸ್ನೇಹಿತರನ್ನೆಲ್ಲ ಕರೆದು ಅವರಿಗೆ ಉಣಬಡಿಸುತ್ತಿದ್ದ. ಅವರಿಬ್ಬರ ಆತಿಥ್ಯವನ್ನು ನಾನು ಮತ್ತು ರಾಜಗೋಪಾಲ್ ಎಷ್ಟೋ ಸರ್ತಿ ಸವಿದಿದ್ದೇವೆ.

ಶಾರದಾ ಮತ್ತು ಶಂಕರ- ಅವರಿಬ್ಬರ ಜೀವನದ ಮುಖಗಳು ಬೇರೆಬೇರೆ ರೀತಿಯವಾದವು. ಇಬ್ಬರೂ ಎಲ್ಲರಿಗೂ ಬೇಕಾದವರೇ, ಆದರೆ ಏನೋ ವೈಮನಸ್ಯ ಅವರಿಬ್ಬರಲ್ಲಿ ಬಂದು ಪ್ರತ್ಯೇಕರಾದರು. ಶಂಕರ ಇನ್ನೊಬ್ಬ ವೈದ್ಯೆಯನ್ನು
ಮದುವೆಯಾಗಿ ಜೀವನ ಮುಂದುವರಿಸಿದ. ಅದೂ ಮತ್ತಷ್ಟು ಕಷ್ಟಗಳನ್ನೇ ತಂದೊಡ್ಡಿತು. ಆಮೇಲೆ ಬೆಂಗಳೂರಿಗೆ ಹೋಗಿ
ಜಿಗಣಿ ಸಮೀಪದಲ್ಲಿ ವಾಸವಾಗಿದ್ದ. ಅಲ್ಲಿ ಸುಖವಾಗಿ ದಿನಗಳನ್ನು ಕಳೆಯುತ್ತಿದ್ದ ಎಂದು ಕೇಳಿತಿಳಿದಿದ್ದೆ.

ಶಾರದಾ ಈಗಲೂ ಚೆನ್ನಾಗಿಯೇ ಇದ್ದಾಳೆ. ನಮ್ಮ ವಿಚಾರದಲ್ಲಿ ಪ್ರೀತಿಯಿಂದಲೇ ಇದ್ದಾಳೆ. ಈ ನಡುವೆ ಶಾರದಾ-ಶಂಕರರ
ಮಗ ಶ್ಯಾಮ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಿ ಅವನೂ ಚೆನ್ನಾಗಿ ಮುಂದಕ್ಕೆ ಬಂದಿದ್ದಾನೆ. ಶಂಕರನ ಬಗ್ಗೆ ನನಗೆ ಇನ್ನೊಂದು ನೆನಪೆಂದರೆ ಅವನು ತುಂಬ ಚೆನ್ನಾಗಿ ಕೋಡುಬಳೆ ಮಾಡ್ತಿದ್ದ. ಅದನ್ನು ಅಷ್ಟು ಚೆನ್ನಾಗಿ ಹೇಗೆ ಮಾಡೋದು ಎಂದು ನನಗೂ ಹೇಳ್ಕೊಟ್ಟಿದ್ದ.

ಮೈಸೂರ್‌ಪಾಕ್ ಹೇಗೆ ಮಾಡೋದು ಎಂದು ಶಾರದಾ ಹೇಳ್ಕೊಟ್ಟಿದ್ದಳು. 1983ರಲ್ಲಿ ನನ್ನ ತಂಗಿ ವಾಸಂತಿಯು ಇಲ್ಲಿ
ಅಮೆರಿಕದಲ್ಲಿ ಬಾಬ್ ಕೆಲಟನ್ ಎಂಬ ಐರಿಷ್ ಹುಡುಗನನ್ನು ಮದುವೆಯಾದಾಗ ಶಾರದಾ-ಶಂಕರ ಇಬ್ಬರೂ ಬಂದಿದ್ದರು.
ಶಾರದಾ ಒಳ್ಳೊಳ್ಳೆಯ ಅಡುಗೆಗಳನ್ನು ಮಾಡ್ಕೊಂಡು ಬಂದಿದ್ದಳು. ನಾನೂ ಸೇರಿ ಅಡುಗೆ ಎಲ್ಲ ನಾವೇ ಮಾಡಿಟ್ಟಿದ್ವಿ.
ನಮ್ಮ ತಂದೆಯವರೂ ಬೆಂಗಳೂರಿಂದ ಬಂದಿದ್ರು, ಕನ್ಯಾದಾನ ಮಾಡೋಕೆ. ಸೋದರಮಾವನ ಪಾತ್ರ ನಿರ್ವಹಿಸಿದವನು
ಶಂಕರ. ಯಥಾಪ್ರಕಾರ ಉತ್ಸಾಹ, ತಮಾಷೆ, ನಗು.

ವಧುವನ್ನು ಹಸೆಮಣೆಗೆ ಕರೆದುಕೊಂಡು ಬಂದ. ನಾವು ಹಸೆಹಾಡುಗಳನ್ನೆಲ್ಲ ಬರೆದಿದ್ವಿ. ತುಂಬ ಸಂಭ್ರಮವಾಗಿತ್ತು.
ಶಂಕರ ಏನ್ಮಾಡಿದ ಅವನ ಉತ್ಸಾಹದಲ್ಲಿ- ನಾವು ಮಾಡಿಟ್ಟಿದ್ದ ಮೊಸರನ್ನ ಮತ್ತಿತರ ಪದಾರ್ಥಗಳನ್ನೆಲ್ಲ ಕೈತಪ್ಪಿ ವಿದ್ಯುತ್
ಒಲೆ(ಓವನ್)ಒಳಗೆ ಇಟ್ಟುಬಿಟ್ಟ! ಶಾಕಾಹಾರಿ ಊಟ ಬಡಿಸ ಬೇಕೆಂದು ಬೆಳಗ್ಗೆಯಂದ ಮಾಡಿಟ್ಟಿದ್ದ ಅಡುಗೆಯೆಲ್ಲ ಓವನ್
ಒಳಗೆ ಕೂತುಬಿಟ್ಟಿತ್ತು. ನಮಗರಿವಿಲ್ಲದಂತೆಯೇ ಎಲ್ಲ ಕರಟಿಹೋಯ್ತು. ಆಮೇಲೆ ಮತ್ತೆ ಹೊಸದಾಗಿ ನಾವು ಅಡುಗೆ
ಮಾಡಬೇಕಾಯ್ತು. ನನ್ನ ಮಗ ಈಗಲೂ ತಮಾಷೆ ಮಾಡ್ತಿರ್ತಾನೆ, ಶಂಕ್ರಣ್ಣನಿಗೆ ಹೇಳಿದ್ರೆ ಬಿಸಿಬಿಸಿ ಮೊಸರನ್ನ ಮಾಡ್ಕೊಡ್ತಾನೆ ಅಂತ.

ಆ ಮದುವೆಸಮಾರಂಭದ್ದೂ ಅಷ್ಟೆಲ್ಲ ನೆನಪಿರಲಿಕ್ಕೆ ಕಾರಣ ಎಸ್.ಕೆ ಹರಿಹರೇಶ್ವರ ಅವರು ಬಂದು ಪೌರೋಹಿತ್ಯ ನಡೆಸಿದ್ದು. ಅವರ ವಿಶೇಷ ಪುರೋಹಿತಿಕೆಯಿಂದ ಆಕರ್ಷಿತನಾದ ವಿಡಿಯೊಗ್ರಾಫರ್ ವಧೂವರರನ್ನು ಬಿಟ್ಟು ಬರೀ ಪುರೋಹಿತರನ್ನೇ ಚಿತ್ರಿಸುತ್ತ ಇದ್ದ! ಹೀಗೆ ಅದೆಷ್ಟೋ ತಮಾಷೆ ಪ್ರಸಂಗಗಳ ನೆನಪುಗಳು.

ಇಷ್ಟೆಲ್ಲ ಕಥೆ ಬಿಚ್ಚಿಟ್ಟ ವಿಮಲಾ ಕೊನೆಗೆಂದರು: ‘ನೋಡಿ, ನೀವು ಶಂಕರ ಬೆಳವಾಡಿಯ ಹೆಸರನ್ನು ಅಂಕಣದಲ್ಲಿ ಉಲ್ಲೇಖಿಸಿದ್ದೇ ನೆಪ ಆಯ್ತು. ನಾನು ನೆನಪಿನ ಓಣಿಯಲ್ಲಿಳಿದು ಬಾಲ್ಯಕ್ಕೇ ಹಿಂದಿರುಗಿಬಿಟ್ಟೆ. ಅಲ್ಲಿಂದಾರಂಭಿಸಿ ಶಂಕರನ ಒಡನಾಟದ ಕ್ಷಣ ಗಳನ್ನೆಲ್ಲ ಮತ್ತೆಮತ್ತೆ ಮೆಲುಕುಹಾಕಿದೆ. ನೀವೇನೋ ಲೇಖನದಲ್ಲಿ ಡಾ. ನಟರಾಜ್ ಅವರ ಲೇಖನದಿಂದ ಕಲೆ ಹಾಕಿದ
ಮಾಹಿತಿ ಎಂದಿದ್ದೀರಿ. ಅದಕ್ಕೋಸ್ಕರ ಅವರಿಗೂ ದೂರವಾಣಿ ಕರೆ ಮಾಡಿ ಇದನ್ನೆಲ್ಲ ಹೇಳಿದ್ದೇನೆ. ನಿಮಗಿಬ್ಬರಿಗೂ ನಾನು
ಧನ್ಯವಾದ ಸಲ್ಲಿಸಬೇಕು. ಅಂತೆಯೇ ಕಾವೇರಿ ಸುವರ್ಣ ಮಹೋತ್ಸವದ ಸ್ಮರಣಸಂಚಿಕೆಯಲ್ಲಿ, ಅಗಲಿದ ಕಾವೇರಿಗರಿಗೆ
ಶ್ರದ್ಧಾಂಜಲಿ ಬರಹಗಳಿವೆ ಎಂದು ತಿಳಿಸಿದ್ದೀರಿ.

ಶಂಕರ ನಮ್ಮನ್ನಗಲಿದ್ದಾನೆ ಎಂದು ಬಹುಶಃ ನಿಮಗೆ ಗೊತ್ತಾಗಿದ್ದಿಲ್ಲ. ನೀವು ಸ್ಮರಣಸಂಚಿಕೆ ಹೊರತರುತ್ತಿದ್ದೀರಿ ಎಂದು ನನಗೂ ಗೊತ್ತಾಗಿದ್ದಿಲ್ಲ. ಒಂದುವೇಳೆ ಗೊತ್ತಾಗಿರುತ್ತಿದ್ದರೆ ನಮ್ಮ ಶಂಕ್ರನ ಬಗೆಗೆ ಶ್ರದ್ಧಾಂಜಲಿ ಬರಹ ನಾನೇ ಬರೆದು ಕೊಡುತ್ತಿದ್ದೆ! ಇರಲಿ, ನಿಮ್ಮ ಕಾವೇರಿ ಕನ್ನಡ ಸಂಘದ ಸುವರ್ಣ ಸಂಭ್ರಮವು ಚೆನ್ನಾಗಿ ಆಗಲಿ. ನಮ್ಮ ಶಂಕ್ರನ ಕನಸಿನ ಕೂಸಾದ ಕಾವೇರಿ ನೂರ್ಕಾಲ ಬಾಳಲಿ.’