Friday, 18th October 2024

ಶಾರ್ದೂಲ ವಿಕ್ರೀಡಿತ ಛಂದ- ಚಂದದ ಆಧುನಿಕ ಪದಗಳು

ತಿಳಿರು ತೋರಣ

srivathsajoshi@yahoo.com

‘ಅತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ -ಣೀ| ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾ ಸಿಂಹೋಧಿಪಿ ನಾಗಾನನಮ್| ಗೌರೀ ಜಹ್ನುಸು ತಾಮಸೂಯತಿ ಕಲಾನಾಥಂ ಕಪಾಲಾನಲೋ| ನಿರ್ವಿಣ್ಣಃ ಸ ಪಪೌ ಕುಟುಂಬಕಲಹಾದೀಶೋಧಿಪಿ ಹಾಲಾ ಹಲಮ್||’ ಇದೊಂದು ತಮಾಷೆಯ ಸುಭಾಷಿತ, ಅಥವಾ ಚಾಟು ಶ್ಲೋಕ.

ಶಿವನು ವಿಷಪಾನ ಮಾಡಿದ್ದಕ್ಕೆ ಕಾರಣವೇನು ಎಂದು ಒಬ್ಬ ಕವಿಯ ಕಲ್ಪನೆ. ಸಂಸಾರದ ಒಳಜಗಳದಿಂದ ಬೇಸರವಾಗಿದ್ದೇ ಶಿವನ ನಿರ್ಧಾರಕ್ಕೆ ಕಾರಣ ವಂತೆ. ಹೇಗಿತ್ತು ಒಳಜಗಳ? ಶಿವನ ಕೊರಳಲ್ಲಿರುವ ಹಾವು ಗಣಪತಿಯ ವಾಹನವಾದ ಇಲಿಯನ್ನು ತಿನ್ನಲು ಹವಣಿಸುತ್ತಿದೆ. ಶಿವನ ಮತ್ತೊಬ್ಬ ಮಗ ಷಣ್ಮುಖನ ವಾಹನವಾದ ನವಿಲು, ಶಿವನ ಕೊರಳಲ್ಲಿರುವ ಸರ್ಪ ವನ್ನು ತಿನ್ನಲಿಕ್ಕೆ ಹೊಂಚುಹಾಕುತ್ತಿದೆ. ಪಾರ್ವತಿಯ ವಾಹನ ಸಿಂಹ, ಆನೆಯ ಬದ್ಧವೈರಿ. ಅದು ಗಜಮುಖನನ್ನೇ ತಿನ್ನಲು ಯತ್ನಿಸುತ್ತಿದೆ.

ಶಿವನ ತೊಡೆಮೇಲೆ ಕೂತಿರುವ ಗೌರಿಯು ಶಿವನ ತಲೆಮೇಲೆ ಕುಳಿತಿರುವ ಗಂಗೆಯನ್ನು ಮತ್ಸರದಿಂದ ನೋಡುತ್ತಿರುತ್ತಾಳೆ. ಗಂಗೆಗೂ ಗೌರಿಯ ಮೇಲೆ ಸವತಿಮಾತ್ಸರ್ಯ. ಶಿವನ ಕೈಯಲ್ಲಿರುವ ಕಪಾಲದಲ್ಲಿ ಉರಿಯುತ್ತಿರುವ ಬೆಂಕಿಗೆ ಶಿವನ ಜಟೆಯಲ್ಲಿರುವ ಚಂದ್ರನನ್ನು ಕರಗಿಸಬೇಕೆಂಬ ಹುನ್ನಾರ. ಹೀಗೆ
ಕುಟುಂಬದಲ್ಲಿ ಕ್ಷಣಕ್ಷಣಕ್ಕೂ ಜಗಳವೇ ನಡೆಯುತ್ತಿದ್ದರೆ ಇನ್ನೇನಾಗಬೇಕು? ರೋಸಿಹೋದ ಶಿವ ಬೇರೆ ದಾರಿಕಾಣದೆ ಕೊನೆಗೆ ಹಾಲಾಹಲವನ್ನೇ ಕುಡಿದುಬಿಟ್ಟನಂತೆ!

ಆಗಲೇ ಹೇಳಿದಂತೆ ಇದೊಂದು ತಮಾಷೆ ಪದ್ಯ ಅಷ್ಟೇ. ಆದರೆ ಎಲ್ಲ ಸಂಸಾರಗಳ ಕಥೆಯಂತೆಯೇ ಶಿವನ ಸಂಸಾರದ್ದೂ ಎಂದು ಅರ್ಥೈಸಿಕೊಳ್ಳ ಲಿಕ್ಕಡ್ಡಿಯಿಲ್ಲ. ಇಲ್ಲಿ ಇಂದಿನ ಅಂಕಣದ ವಿಷಯಕ್ಕೆ ಸಂಬಂಧಿಸಿದ್ದಲ್ಲವಾದರೂ ಪ್ರಚಲಿತ ವಿದ್ಯಮಾನಕ್ಕೂ ಈ ಚಾಟು ಶ್ಲೋಕವನ್ನು ಅನ್ವಯಿಸಬಹು ದೆಂದು ನನಗನಿಸುತ್ತದೆ. ಏನೆಂದರೆ, ಮೊನ್ನೆ ಲೋಕಸಭಾ ಚುನಾವಣೆಯಲ್ಲಿ ಮೋದಿಯವರೇನೋ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ; ಆದರೆ ಈ ಮೈತ್ರಿಕೂಟಗಳಿವೆಯಲ್ಲ, ಎನ್‌ಡಿಎ ಇರಲಿ ಐಎನ್‌ಡಿಐಎ ಇರಲಿ ಒಂದಕ್ಕಿಂತ ಒಂದು ತಕ್ಕಡಿಕಪ್ಪೆಗಳಂಥವು, ಅವುಗಳ ಮರ್ಜಿಗಳೋ  ಮಸಲತ್ತು ಗಳೋ ಶಿವನ ಸಂಸಾರಕ್ಕಿಂತಲೂ ಘನಘೋರ ಅಲ್ಲವೇ? ಇರಲಿ, ರಾಜಕಾರಣದ ಸುದ್ದಿ ನಮಗಿಲ್ಲಿ ಬೇಡ.

ಅದಕ್ಕಿಂತ, ಛಂದದ ಚಂದದ ವಿಷಯವನ್ನೆತ್ತಿಕೊಳ್ಳೋಣ. ಶಾರ್ದೂಲವಿಕ್ರೀಡಿತ ವೃತ್ತ ಎಂಬ ಛಂದಸ್ಸಿನ ಸೊಬಗನ್ನು ಸವಿಯೋಣ. ಶಾರ್ದೂಲ ಅಂದರೆ ಹುಲಿ. ವಿಕ್ರೀಡಿತ ಅಂದರೆ ನಡಿಗೆ. ಹುಲಿಯ ನಡಿಗೆಯಂಥ ಗಾಂಭೀರ್ಯ ಮತ್ತು ಗತ್ತಿನ ಬಳುಕು ಈ ಛಂದಸ್ಸಿನ ಪದ್ಯಗಳ ವಾಚನಕ್ಕೆ ಇರುತ್ತದೆಂಬ ಕಾರಣಕ್ಕೆ ಆ ಹೆಸರು. ಮೇಲೆ ಉಲ್ಲೇಖಿಸಿದ ಶಿವಸಂಸಾರದ ಶ್ಲೋಕವನ್ನು ಕವಿ ಹೆಣೆದಿರುವುದು ಶಾರ್ದೂಲವಿಕ್ರೀಡಿತ ವೃತ್ತದಲ್ಲೇ.

ತಲಾ ೧೯ ಅಕ್ಷರಗಳ ನಾಲ್ಕು ಸಾಲುಗಳು. ಪ್ರತಿ ಸಾಲಿನ ಮೂರು ಮೂರು ಅಕ್ಷರಗಳನ್ನು ಒಂದೊಂದು ಗಣವಾಗಿ ವಿಂಗಡಿಸಿ ಲಘು- ಗುರು ಪ್ರಸ್ತಾರ ಹಾಕಿ ‘ಯಮಾತಾರಾಜಭಾನಸಲಗಂ’ ಸೂತ್ರದಂತೆ ಗಣಗಳನ್ನು ಗುರುತಿಸಿದರೆ ಪ್ರತಿ ಸಾಲಿನಲ್ಲೂ ಅನುಕ್ರಮವಾಗಿ ಮ, ಸ, ಜ, ಸ, ತ, ತ ಗಣಗಳಿರುತ್ತವೆ. ೧೯ನೆಯ ಅಕ್ಷರ ಯಾವಾಗಲೂ ಗುರು ಎಂದೇ ಪರಿಗಣನೆ. ಸಂಸ್ಕೃತದಲ್ಲಷ್ಟೇ ಅಲ್ಲ, ಕನ್ನಡದಲ್ಲೂ ಪಂಪ-ರನ್ನ ಆದಿಯಾಗಿ ಶ್ರೇಷ್ಠ ಕವಿಗಳು ಈ
ಛಂದಸ್ಸಿನ ಬಳಕೆ ಮಾಡಿದ್ದಾರೆ. ‘ಕಣ್ಗೊಪ್ಪಲ್ ಮಸಜಂಸತಂತಗ ಮುಮಾ ಶಾರ್ದೂಲವಿಕ್ರೀಡಿತಂ’ ಅಂತೊಂದು ನೆನೆಗುಬ್ಬಿಯೂ ಇದೆ.

ಶಾರ್ದೂಲವಿಕ್ರೀಡಿತ ವೃತ್ತದಲ್ಲಿರುವ ಪದ್ಯವನ್ನು ಓದುವಾಗ ಪ್ರತಿ ಸಾಲಿನ ಉಚ್ಚರಣೆಯಲ್ಲೂ ಮೊದಲ ೧೨ ಅಕ್ಷರಗಳನ್ನು ಒಂದು ಗುಂಪಿನಂತೆ, ಆಮೇಲಿನ ೭ ಅಕ್ಷರಗಳನ್ನು ಇನ್ನೊಂದು ಗುಂಪಿನಂತೆ- ‘ನಾನಾನಾನನನಾನನಾನನನನಾ| ನಾನಾನನಾ ನಾನನಾ’ ಎಂಬಂತೆ ಉಚ್ಚರಿಸುವುದು ಕ್ರಮ. ಇದರಿಂದ ಪದ್ಯಕ್ಕೆ ಒಳ್ಳೆಯ ಲಯ, ಧಾಟಿ ಸಿಗುತ್ತದೆ. ಮಾತ್ರವಲ್ಲ, ನಿಮಗೆ ಲಘು- ಗುರುಗಳ ಸ್ಪಷ್ಟ ಅರಿವಿದ್ದರೆ ಇದೇ ಜಾಡನ್ನು ಹಿಡಿದುಕೊಂಡು, ಅಂದರೆ ಇದೇ ಟ್ಯೂನ್‌ಗೆ ಹೊಂದಿಕೊಳ್ಳುವಂತೆ ಪದಗಳನ್ನು ಜೋಡಿಸುತ್ತ ಹೋದರೆ ನೀವೇ ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ಪದ್ಯ ಹೆಣೆಯುವುದೂ ಸಾಧ್ಯವಾಗುತ್ತದೆ!

ಅದಕ್ಕೆಲ್ಲ ಸರಸ್ವತಿಯ ಅನುಗ್ರಹ ಇರಬೇಕು ಅಂತೀರಾ? ‘ಯಾ ಕುಂದೇಂದು ತುಷಾರಹಾರಧವಳಾ ಯಾ ಶುಭ್ರವಸಾನ್ವಿತಾ| ಯಾ ವೀಣಾ ವರದಂಡಮಂಡಿತಕರಾ ಯಾ ಶ್ವೇತ ಪದ್ಮಾಸನಾ| ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಃ ಸದಾ ಪೂಜಿತಾ| ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ||’ ಎಂದು ಪ್ರಾರ್ಥಿಸಿ. ಶಾರದೆ ಒಲಿಯುತ್ತಾಳೆ. ಏಕೆಂದರೆ ಈ ಶಾರದಾ ಸ್ತುತಿಯೂ ಶಾ.ವಿ ವೃತ್ತದ್ದೇ! ಬೇಕಿದ್ದರೆ ಅಕ್ಷರಗಳನ್ನು ಎಣಿಸಿ
ನೋಡಿ. ಇದೊಂದೇ ಅಲ್ಲ, ನಿಮಗೆ ಗೊತ್ತಿರಬಹುದಾದ ಬೇರೆ ಕೆಲವು ಶ್ಲೋಕ/ಸ್ತೋತ್ರಗಳೂ ಶಾ.ವಿ ವೃತ್ತದವೇ.

ರಾಮರಕ್ಷಾ ಸ್ತೋತ್ರದ ಕೊನೆಯಲ್ಲಿ ಬರುತ್ತದಲ್ಲ ಎಂಟೂ ವಿಭಕ್ತಿಗಳಿರುವ ‘ರಾಮೋ ರಾಜಮಣಿಸ್ಸದಾ ವಿಜಯತೇ ರಾಮಂ ರಮೇಶಂ ಭಜೇ…’ ಅದು, ರಾಮಾಯಣಪಾರಾಯಣದ ಮಂಗಲಶ್ಲೋಕ ‘ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾ ಮಂಡಪೇ…’, ಏಕಶ್ಲೋಕೀ ರಾಮಾಯಣ ‘ಪೂರ್ವಂ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ…’, ಏಕಶ್ಲೋಕೀ ಮಹಾಭಾರತ ‘ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಾಕ್ಷಾಗೃಹೇ ದಾಹನಂ…’, ಏಕಶ್ಲೋಕೀ ಭಾಗವತ ‘ಆದೌ ದೇವಕಿದೇವಿ ಗರ್ಭಜನನಂ ಗೋಪೀಗೃಹೇ ವರ್ಧನಂ…’, ಕೃಷ್ಣನನ್ನು ಬಣ್ಣಿಸುವ ‘ಕಸ್ತೂರೀತಿಲಕಂ ಲಲಾಟಪಟಲೇ ವಕ್ಷಃಸ್ಥಲೇ ಕೌಸ್ತುಭಂ…’, ಶಿವಮಾನಸಪೂಜೆಯ ‘ರತ್ನೈಃಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ…’, ಭಗವದ್ಗೀತೆಯ
ಶ್ರೇಷ್ಠತೆಯನ್ನು ಸಾರುವ ‘ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ…’, ಭಗವದ್ಗೀತೆಯನ್ನು ಕಮಲದ ಹೂವಿಗೆ ಹೋಲಿಸುವ ‘ಪಾರಾಶರ್ಯವಚಃ ಸರೋಜ ಮಮಲಂ ಗೀತಾರ್ಥಗಂಧೋತ್ಕಟಂ…’, ಮಹಾಭಾರತವನ್ನು ಒಂದು ನದಿಗೆ ಹೋಲಿಸುವ ‘ಭೀಷ್ಮದ್ರೋಣತಟಾ ಜಯದ್ರಥ ಜಲಾ ಗಾಂಧಾರನೀಲೋತ್ಪಲಾ…’, ಪರಮಾತ್ಮನ ಸಾರ್ವ ಭೌಮತ್ವದ ‘ಯಂ ಬ್ರಹ್ಮಾ ವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಃ ಸ್ತವೈಃ…’, ಲೋಕಕ್ಕೆಲ್ಲ ಅವನೊಬ್ಬನೇ ಎನ್ನುವ ‘ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ…’ ಮುಂತಾದುವೆಲ್ಲವೂ.

ಅಂತೆಯೇ ಕೆಲವು ಜನಜನಿತ ಸುಭಾಷಿತಗಳು: ಒಡವೆ-ಅಲಂಕಾರಗಳೆಲ್ಲ ವ್ಯರ್ಥ ಮತ್ತು ಮಾತೊಂದೇ ನಿಜವಾದ ಭೂಷಣ ಎಂದು ಬೋಽಸುವ
‘ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋ ಜ್ಜ್ವಲಾ…’, ಸಿಂಹದ ಸ್ವಾಭಿಮಾನವನ್ನು ಸಾರುವ ‘ಕ್ಷುತ್ಕ್ಷಾ ಮೋಧಿಪಿ ಜರಾಕೃಶೋಧಿಪಿ ಶಿಥಿಲಪ್ರಾಯೋಧಿಪಿ ಕಷ್ಟಾಂ ದಶಾಂ…’, ಬೊಕ್ಕ ತಲೆಯವನ ದುರದೃಷ್ಟವನ್ನು ಚಿತ್ರಿಸುವ ‘ಖಲ್ವಾಟೋ ದಿವಸೇಶ್ವರಸ್ಯ ಕಿರಣೈಃ ಸಂತಾಪಿತೋ ಮಸ್ತಕೇ…’, ಗುಣಗಳು ಒಡನಾಟದಿಂದ ಬರುತ್ತವೆನ್ನುವ ‘ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಶ್ರೂಯತೇ…’ ಇತ್ಯಾದಿ.

ಇಲ್ಲಿ ನಾನು ಪ್ರತಿಯೊಂದರ ಮೊದಲ ಸಾಲನ್ನಷ್ಟೇ ಉಲ್ಲೇಖಿಸಿದ್ದೇನೆ, ಸ್ಥಳಾಭಾವದ ಒಂದು ಕಾರಣಕ್ಕೆ ಮತ್ತು ಇವೆಲ್ಲ ಶ್ಲೋಕಗಳ ಅರ್ಥವ್ಯಾಖ್ಯಾನ ಇಲ್ಲಿಯ ಉದ್ದೇಶವಲ್ಲ ಎಂಬ ಇನ್ನೊಂದು ಕಾರಣಕ್ಕೆ. ಅದಕ್ಕಿಂತ, ನಿಮಗೆ ಇದುವರೆಗೆ ಗೊತ್ತಿರಲಾರದ ಕೆಲವು ಶಾ.ವಿ ಪದ್ಯಗಳನ್ನು ಪೂರ್ತಿ ಪರಿಚಯಿಸಬೇಕೆಂಬುದು ನನ್ನ ಉದ್ದೇಶ. ಅದು ನಿಮಗೆ ಶಾವಿಗೆ ಖೀರು ಸವಿದಂತೆ ಖುಷಿಕೊಟ್ಟರೆ ಉದ್ದೇಶ ಸಾರ್ಥಕ. ಮುದ್ರಿತ ಪತ್ರಿಕೆಯಲ್ಲಿ ಅಂಕಣಕ್ಕೆ ಇಂತಿಷ್ಟೇ ಸ್ಥಳವೆಂದು ಮಿತಿ ಇರುವುದರಿಂದ, ಅದರ ಸಮರ್ಥ ಬಳಕೆಯಾಗಬೇಕೆಂದು ಪದ್ಯಗಳನ್ನು ಒಂದರ ಕೆಳಗೊಂದು ಸಾಲಿನಂತೆ ಬರೆಯುತ್ತಿಲ್ಲ.
ಬದಲಿಗೆ ರನ್ನಿಂಗ್ ಟೆಕ್ಸ್ಟ್‌ನಂತೆ ಪ್ಯಾರಗ್ರಾಫ್ ನಲ್ಲೇ ಅಳವಡಿಸಿ ಕೊಳ್ಳುತ್ತೇನೆ.

ದಯವಿಟ್ಟು ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡು ಓದಬೇಕಾಗಿ ವಿನಂತಿ. ಮೊದಲಿಗೆ, ಭಾಸ್ಕಾರಾಚಾರ್ಯ ವಿರಚಿತ ಲೀಲಾವತಿ ಗ್ರಂಥದಲ್ಲಿರುವ ಒಂದು ಲೆಕ್ಕ. ಕಪಿಚೇಷ್ಟೆಯದು. ಶಾ.ವಿ ವೃತ್ತದಲ್ಲಿ: ‘ವೃಕ್ಷಾತ್ ಹಸ್ತಶತೋಚ್ಛ್ರಯಾಚ್ಛತಯುಗೇ ವಾಪಿಂ ಕಪಿಃ ಕೋಧಿಪ್ಯಗಾತ್| ಉತ್ತೀರ್ಯಾಥ ಪರೋ ದ್ರುತಂ
ಶ್ರುತಿಪಥೇನೋಡ್ಡೀಯ ಕಿಂಚಿದ್ದ್ರುಮಾತ್| ಜಾತೈವಂ ಸಮತಾ ತಯೋರ್ಯದಿ ಗತಾವುಡ್ಡೀನಮಾನಂ ಕಿಯತ್| ವಿದ್ವನ್ ಚೇತ್ಸುಪರಿಶ್ರಮೋಸ್ತಿ ಗಣಿತೇ ಕ್ಷಿಪ್ರಂ ತದಾಚಕ್ಷ್ವ ಮೇ||’ ಅಂದರೆ, ೧೦೦ ಹಸ್ತಗಳಷ್ಟು ಎತ್ತರದ ಒಂದು ಮರದ ತುದಿಯಲ್ಲಿರುವ ಮಂಗ ಅಲ್ಲಿಂದಿಳಿದು ಮರದ ಬುಡದಿಂದ ೨೦೦ ಹಸ್ತಗಳಷ್ಟು ದೂರವಿರುವ ಕೆರೆಯ ದಡಕ್ಕೆ ನಡೆದುಕೊಂಡು ಹೋಗುತ್ತದೆ.

ಅಷ್ಟರಲ್ಲಿ ಇನ್ನೊಂದು ಮಂಗವು ಅದೇ ಮರದ ತುದಿಯಿಂದ ಇನ್ನೂ ಸ್ವಲ್ಪ ಮೇಲಕ್ಕೆ ಜಿಗಿದು, ವಿಕರ್ಣಮಾರ್ಗದಲ್ಲಿ ಬಂದು ಕೆರೆಯನ್ನು ತಲುಪುತ್ತದೆ. ಬಹುಶಃ ಅದು ಪೈಥಾಗೊರಸನ ಪೂರ್ವಜನಿರಬೇಕು. ಎರಡೂ ಮಂಗಗಳು ಕ್ರಮಿಸಿದ ಹಾದಿಯ ಅಳತೆ ಸಮಾನವಿದೆ. ಹಾಗಾದರೆ ಎರಡನೆಯ ಮಂಗವು ಮರದ ತುದಿಯಿಂದ ‘ಇನ್ನೂ ಸ್ವಲ್ಪ ಮೇಲಕ್ಕೆ’ ಜಿಗಿಯಿತಲ್ಲ, ಆ ಎತ್ತರ ಎಷ್ಟು? ಆಸಕ್ತಿಯಿದ್ದವರು ಜಾಣ್ಮೆಲೆಕ್ಕವನ್ನು ಆಮೇಲೆ ಬಿಡಿಸುವಿರಂತೆ.

ಈಗ ಶತಾವಧಾನಿ ಡಾ. ಆರ್.ಗಣೇಶರು ಅವಧಾನ ಕಾರ್ಯಕ್ರಮವೊಂದರಲ್ಲಿ ಹೆಣೆದ ಒಂದು ಶಾ.ವಿ ಪದ್ಯ. ಪೃಚ್ಛಕರು ಅವರನ್ನು ಕೇಳಿದ್ದು ‘ಪೋಲಿ, ಲೋಫರ್, ಸ್ಟುಪಿಡ್, ಕಮಾನ್- ಈ ಪದಗಳು ಬರುವಂತೆ, ಶ್ರೀರಾಮನು ಸಮುದ್ರ ರಾಜನನ್ನು ಸ್ತುತಿಸುತ್ತಿರುವಂತೆ ಪದ್ಯ ರಚಿಸಿರಿ’ ಎಂದು. ಅವಧಾನಿ ಗಳ
ಉತ್ತರ: ‘ಸ್ರೋತೋನಾಯಕ ನಿರ್ಭರಾನೃತರಿಪೋ ಲಿಪ್ಸಾ ವಿದೂರ ಸ್ಥಿರ| ಪ್ರೀತಿಸೋರಕ ಸೇತುವಾಗಲಿದೆಲೋ ಪರ್ಯಂತ ಚಿಂತಾಕುಲಂ| ಸೀತಾನ್ವೇಷಣಕಾರ್ಯಕಿಷ್ಟು ಪಿಡುಗೇಂ ನಿನ್ನಿಂದೆ ಯಾದೋಧವ| ಸೀತಾಂಬು ಪ್ರಸರಕ್ಕಮಾನುಷಬಲಂ ಕೊರ್ವಿ ರ್ಪುದಂ ಕಾಣೆಯೇಂ||’- ಇದರಲ್ಲಿ ಪೋಲಿ, ಲೋಪ(-)ರ್, ಷ್ಟು(ಸ್ಟು)ಪಿಡ್, ಮತ್ತು ಕಮಾನ್ ಎಲ್ಲಿವೆಯೆಂದು ಗುರುತಿಸುವುದು ಈಗ ನಿಮ್ಮ ಕೆಲಸ.

ಪದ್ಯ ಸಂಸ್ಕೃತ ಶ್ಲೋಕದಂತೆಯೇ ಕಾಣುತ್ತಿದೆಯಲ್ಲ ಎನ್ನುವಿರಾದರೆ ಅದನ್ನಲ್ಲಿಗೇ ಬಿಟ್ಟು, ಪ್ರೊ.ಅ.ರಾ.ಮಿತ್ರ ಅವರು ‘ಛಂದೋಮಿತ್ರ’ ಪುಸ್ತಕದಲ್ಲಿ ಶಾ.ವಿ ವೃತ್ತಕ್ಕೆ ಉದಾಹರಣೆಯಾಗಿ ಕಟ್ಟಿದ ಪದ್ಯವನ್ನು ಓದಿ. ಇದು ಸರಳಗನ್ನಡದಲ್ಲಿ, ಸುಲಭವಾಗಿ ಅರ್ಥವಾಗುವಂತಿದೆ: ‘ಚೌಕಾಶೀ ವ್ಯವಹಾರವೇ ಹೊಲಸು ಒಂದೇ ಮಾತು ಒಂದೇ ದರಂ| ಬೇಕಾಗಿದ್ದರೆ ಕೊಳ್ಳಿ ಬೇಡವೆನೆ ಬೇರೊಬ್ಬಂಗೆ ಜಾಗಂ ಬಿಡೀ| ಸಾಕೋ ಸಾಕಿದು ವಾದತಂತ್ರ ಬೆಲೆಯಂ ನಿರ್ಧಾರದಿಂ ಹೇಳುವೆಂ| ನಾಗಾಲೋಟದಿ ಓಡುತಿರ್ಪ ಜಗದೊಳ್ ಚಾಂಚಲ್ಯಕೇಕಾಸ್ಪದಂ?’ ಸರಿ, ಈಗಿನ್ನು ನಿಮಗೆ ಮೈನ್ ಕೋರ್ಸ್ ಸುಗ್ರಾಸ ಭೋಜನ.

ಕಬ್ಬಿಣದ ಕಡಲೆಯೆಂದೆನಿಸುವ ಸಂಸ್ಕೃತ, ಹಳಗನ್ನಡಗಳನ್ನೆಲ್ಲ ಬಿಟ್ಟು ಮಾಡರ್ನ್ ಕನ್ನಡದಲ್ಲಿ ಮಾಡರ್ನ್ ಕವಿಗಳು ಹೊಸೆದ ಕೆಲವು ಶಾ.ವಿ ಪದ್ಯಗಳು. ಬಾಯಿಯಲ್ಲಿ ನೀರೂರಿಸುವಂಥವು. ನನ್ನ ಸಂಗ್ರಹದಲ್ಲಿ ಇವು ಸೇರಿದ್ದು ಛಂದೋಬದ್ಧ ಕವಿತೆ ರಚನೆ ಹವ್ಯಾಸವಿರುವ ಸ್ನೇಹಿತರು -ಸ್‌ಬುಕ್‌ನಲ್ಲಿ ವಾಟ್ಸ್ಯಾಪ್‌ನಲ್ಲಿ ಹಂಚಿಕೊಂಡಿದ್ದರಿಂದ. ಇವುಗಳನ್ನು ನೀವೂ ಸವಿಯಬೇಕೆಂದು ನನ್ನ ಒತ್ತಾಸೆ. ಮೊದಲಿಗೆ, ತಾಲಿಪೆಟ್ಟಿನ ರುಚಿ ನೋಡಿ. ಶಾ.ವಿ ವೃತ್ತದಲ್ಲಿ ಇದನ್ನು ತಟ್ಟಿದವರು ವಸುಮತಿ ರಾಮಚಂದ್ರ.

‘ತಾಲಿಪ್ಪಿಟ್ಟನು ಮಾಡಲೆಂದು ತುರಿದೆನ್ ಈರುಳ್ಳಿ ಮುಳ್ಸೌತೆಯಂ| ನಾರೀಕೇಳವ ಮಿಕ್ಸಿಯಲ್ಲಿ ಅರೆದೆನ್ ಕೊತ್ತೊಂಬ್ರಿ ಕರ್ಬೇವ್ ಜೊತೆ| ಬಾಣ್ಲೇಯಲ್ಲಿಯೆ ಎಣ್ಣೆಯನ್ನು ಸವರೀ ಹಿಟ್ಟನ್ನು ತಟ್ಟಿಟ್ಟೆನೂ| ಬಂಗಾರ್ದಂತಹ ಕೆಂಪು ಬಣ್ಣ ಬರುವಾ ಹಾಗೇನೆ ಬೇಯ್ಸಿರ್ಪೆನೂ||’ ಅದೇ ರೀತಿಯಲ್ಲಿ ರಾಗಿರೊಟ್ಟಿ ಸವಿಯು ತ್ತೀರಾದರೆ ಮೋಹಿನಿ ದಾಮ್ಲೆಯವರ ಕಾವ್ಯಭವನದಲ್ಲಿ ಸಿಗುತ್ತದೆ: ‘ನುಗ್ಗೇಸೊಪ್ಪನು ಉಪ್ಪು ಕಾಯ್ತುರಿಯನೂ ಕುಟ್ಟಿರ್ದ
ಕಾಯ್ಮೆಣ್ಸನೂ| ರಾಗೀಹಿಟ್ಟಲಿ ಸೇರಿಸುತ್ತ ಕಲಸೀ ನೀರ್ ಜೀರ್ಗೆ ಚೂರ್ ಮೊಸ್ರನೂ| ಎಣ್ಣೇ ಹಚ್ಚುತ ಬಾಳೆಸೀಳ ಮೊಗಕೇ ಹಿಟ್ಟುಂಡೆ ತಟ್ಟುತ್ತಲೀ| ಕಾದಿರ್ದಾ ತವ ಮೇಲೆ ಹಾಕಿ ಹದದೀ ಬೇಯ್ಸಾದ ಮೇಲ್ ತಿನ್ನಿರೀ||’ ಅಥವಾ, ನಿಮಗೆ ಉಪ್ಪಿಟ್ಟೇ ಪರಮಪ್ರೀತಿ ಅಂತಾದರೆ ನಂಜುಂಡ ಭಟ್ಟರ ಖಾನಾವಳಿಗೆ ಬನ್ನಿ: ‘ಉಪ್ಪಿಟ್ಟು ಣ್ಣುತ ಕನ್ಯೆಯಾರಿಸಿದವನ್ ಮತ್ತೇನನೂ ಕೇಳದೇ| ತಪ್ಪಂಗೈದಿ ಹೆನೆಂದು ತೋರ್ಗೊಡದೆಯೇ ತಾಪತ್ರಯಂ ನುಂಗುತಂ| ಅಪ್ಪುತ್ತೆಲ್ಲವ ಸುಮ್ಮನಾಗುತಿರಲೇಂ ಬಾಯ್ಮುಚ್ಚಿ ತಿನ್ನುತ್ತಲೇ| ಎಪ್ಪತ್ತೈದರ ರಾಮ ಹೇಳು ನಿನಗೂ ಉಪ್ಪಿಟ್ಟು ಅಷ್ಟಿಷ್ಟವೇ?’ ಅಂದಹಾಗೆ ನಿಮಗೆ ಈ ಪದ್ಯವನ್ನೋದುವಾಗ ಶುಭವಿವಾಹದ ನೆನಪಾದರೆ ಅದು ಸಹಜವೇ.

ಮದುವೆಮಂಟಪದಲ್ಲಿ ವಧೂ- ವರರ ನಡುವೆ ಅಂತರಪಟ ಹಿಡಿದ ಪುರೋಹಿತರು ಸುಮು ಹೂರ್ತ ಸಾವಧಾನ ಎಂದು ಸೇರಿಸಿ ಮಂಗಲಾಷ್ಟಕ ಹೇಳುತ್ತಾರಷ್ಟೆ? ಅವೆಲ್ಲವೂ ಶಾ.ವಿ ಶ್ಲೋಕಗಳೇ! ನಂಜುಂಡ ಭಟ್ಟರ ಪದ್ಯವನ್ನು ಸೂಕ್ಷ್ಮವಾಗಿ ಗಮನಿಸಿದಿರಾದರೆ ಅದರಲ್ಲಿ ಆದಿಪ್ರಾಸ (ಪ್ರತಿ ಸಾಲಿನ ಎರಡನೆಯ ಅಕ್ಷರವು ಒಂದೇ ವ್ಯಂಜನದಿಂದಾಗಿರುವುದು) ಅಳವಡಿಸಿರುವುದು ತಿಳಿಯುತ್ತದೆ. ಸಂಸ್ಕೃತದಲ್ಲಿ ಅಷ್ಟೇನೂ ಪಾಲನೆಯಾಗದ ಈ ಕ್ರಮವನ್ನು ಕನ್ನಡದ ಕವಿಗಳು ಹೆಮ್ಮೆಯಿಂದ ಪಾಲಿಸುತ್ತಾರೆ- ಶಾ.ವಿ ವೃತ್ತನಿಯಮದಲ್ಲಿ ಹಾಗೇನೂ ಕಡ್ಡಾಯವಿಲ್ಲದಿದ್ದರೂ. ಆದ್ದರಿಂದ ಮೆಚ್ಚುಗೆಗೋಸ್ಕರ ನಂಜುಂಡ ಭಟ್ಟರದೇ ಇನ್ನೊಂದು ಪದ್ಯ: ‘ಎದ್ದಾಯ್ತಾಗಲೆ ಸದ್ದುಗದ್ದಲವಿರಲ್ ರದ್ದಾಯ್ತು ಮಧ್ಯಾಹ್ನದಾ| ಸಿದ್ಧಾರೂಢಿತ
ನಿದ್ದೆಗಂಟಿದ ಸುಖಂ ಕಾಲ್ಜಾರಿ ಬಿದ್ದಂತೆಯೇ| ಹೊದ್ದಿರ್ಪಾ ಬಲು ದಪ್ಪ ಚಾದರದಲೇ ನಿದ್ರಾರಿ ಹೂತಿರ್ಪನೇ?| ಸದ್ದಂಗೈಯುವ ರಾರು ನಮ್ಮೊಳಗಲೇ ನಿಂತಿರ್ದು ನೋವೀವರೇ?||’ ಹೀಗೆ ಆದಿಪ್ರಾಸವನ್ನೂ ಇಟ್ಟುಕೊಂಡು ಛಂದೋಬದ್ಧ ಕವಿತೆ ಹೆಣೆಯುವ ಇನ್ನೊಬ್ಬ ಮಿತ್ರ ಮೃತ್ಯುಂಜಯ ತೇಜಸ್ವಿಯವರ ಶಾ.ವಿ ಪದ್ಯಗಳು ಇಲ್ಲಿವೆ. ಮೊದಲನೆಯದು ಗೂಗಲ್ ದೇವರಿಗೆ ನಮನ: ‘ಸಾಗಲ್ಕೆನ್ನಯ ದೂರ ದೇಶ ಪಯಣಂ ನೀ ದಾರಿಯಂ
ತೋರುತಾ| ನೀಗುತ್ತೆನ್ನಯ ಸಂಶಯಾದಿಗಳನಂ ನೀ ನಿತ್ಯ ಕಾಪಾಡಿರಲ್| ಬಾಗುತ್ತಾ ಕರ ಜೋಡಿಸುತ್ತ ನಿಲುತಾ ಕಣ್ಮುಚ್ಚುತಾನಂದದೀ| ಗೂಗಲ್ದೇವನೆ ನಿನ್ನ ನಾನು ನಮಿಪೆಂ ಸಾಷ್ಟಾಂಗದಲ್ಲೀದಿನಂ||’ ಇನ್ನೊಂದು ಮೊನ್ನೆ ಆರ್‌ಸಿಬಿ ತಂಡ ಇನ್ನೇನು ಕಪ್ ಗೆಲ್ಲಲಿಕ್ಕೆ ಮೂರೇ ಗೇಣಿನಷ್ಟರವರೆಗೂ ಬಂದಿದ್ದ
ದಿನದ ಸಂಭ್ರಮ: ‘ಧಾರಾಕಾರದಿ ವರ್ಷರಾಶಿ ಸುರಿಯಲ್ ಕ್ರೀಡಾಂಗಣಕ್ ರನ್ನಿನೊಲ್| ಯಾರೂ ಯೋಚನೆ ಮಾಡದಂಥ ಪರಿಯೊಳ್ ಗೆದ್ದಿರ್ಪರೀ ಪಂದ್ಯಮಂ| ಮೂರೇ ಮೆಟ್ಟಿಲು ಬಾಕಿಯಿನ್ನು ನಮಗೀ ಸಮ್ಮಾನವಂ ಸಾಧಿಸಲ್| ಮೂರೂ ಪಂದ್ಯವ ಗೆದ್ದು ಬೀಗಿರೆನುತಾ ಹಾರೈಕೆಯಂ ಮಾಡುವಾ|’
ಕೊನೆಗೂ ಆ ಹಾರೈಕೆ ಫಲಿಸಲಿಲ್ಲವೆನ್ನಿ.

ಶಾ.ವಿ ಶಾವಿಗೆ ಪಾಯಸ ನಿಮಗೆ ಇಷ್ಟವಾಯ್ತೆಂದು ನನ್ನ ಗ್ರಹಿಕೆ. ಈಗ, ತುಳು ಭಾಷೆಯ ಒಂದು ಶಾ.ವಿ ಪದ್ಯವನ್ನೂ ಸವಿಯಿರಿ. ಅಜ್ಞಾತ ಕವಿ ಬರೆದ ಇದರಲ್ಲಿ ಆದಿಪ್ರಾಸ ಇದೆ, ಆದಿವಂದಿತನ ಸ್ತುತಿಯೂ ಇದೆ. ಭೋಜನದಲ್ಲಿ ಚೂರ್ಣಿಕೆಯಂತೆ ಇದನ್ನು ಹಾಡಬಹುದಾಗಿದೆ: ‘ಬೆಲ್ಲೋ ಬಾರೆದ -ಂರ್ದು ಗುಡ್ಡೆ ಬಜಿಲೂ ಕಲ್ಲಪ್ಪೊ ನೆಯ್ ಸಕ್ಕರೇ| ಬೊಳ್ಳೀ ಬಟ್ಟಲ ಪೇರು ತಾರಯಿ ಗಡೀ ಎಳ್ಳುಂಡೆಲಾ ಪೊದ್ದೊಳೂ| ಜಳ್ಳೂ ಕಂರ್ಬುದ ಕೋಲು -ತ್ತುದು ನಡತ್ ಬತ್ತಿಂಚಿ ವಿಘ್ನೇಶ್ವರೇ| ಮಲ್ಲಾ ಬಂಜಿತಾ ಗಣಪತೀ ಕುಳ್ಪುಲೇ ವಿಘ್ನೊಂಕುಳೇನ್ತಳ್ಪುಲೇ||’ ತುಳು ಬಾರದವರಿಗಾಗಿ ಭಾವಾರ್ಥ: ಬೆಲ್ಲ, ಬಾಳೆ ಹಣ್ಣು, ಅವಲಕ್ಕಿ, ಕಲ್ಲಪ್ಪ, ತುಪ್ಪ, ಸಕ್ಕರೆ, ಬೆಳ್ಳಿಬಟ್ಟಲಲ್ಲಿ ಹಾಲು, ತೆಂಗಿನಕಾಯಿಯ ಹೋಳು, ಎಳ್ಳುಂಡೆ, ಅರಳು, ಕಬ್ಬಿನ ಜಲ್ಲೆ- ಇವೆಲ್ಲವು ಗಳೊಂದಿಗೆ ಬಂದಿ ರುವ, ದೊಡ್ಡ ಹೊಟ್ಟೆಯ ಗಣಪತಿ ದೇವರೇ, ಬನ್ನಿ ಕುಳಿತುಕೊಳ್ಳಿ. ನಮ್ಮೆಲ್ಲ ವಿಘ್ನಗಳನ್ನೂ ದೂರ ತಳ್ಳಿ.

ಕೊನೆಯಲ್ಲೊಂದು, ಊಹೆಗೂ ನಿಲುಕದ ಔಟ್-ಆಫ್-ದ- ಬಾಕ್ಸ್ ಸ್ವಾರಸ್ಯ. ಸುಮಾರು ೩೫ ವರ್ಷಗಳ ಹಿಂದೆ ಬಿಡುಗಡೆಯಾಗಿ ಜಯಭೇರಿ ಬಾರಿಸಿದ್ದ, ರಾಷ್ಟ್ರಪ್ರಶಸ್ತಿ ವಿಜೇತ ‘ಗೀತಾಂಜಲಿ’ ತೆಲುಗು ಚಿತ್ರ ನಿಮಗೆ ನೆನಪಿರಬಹುದು. ಮಣಿರತ್ನಂ ನಿರ್ದೇಶನ, ನಾಗಾರ್ಜುನ-ಗಿರಿಜಾ ಅಭಿನಯ, ಇಳೆಯರಾಜ ಸಂಗೀತ. ಎಸ್ .ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೆ.ಎಸ್.ಚಿತ್ರಾ ಕಂಠದಲ್ಲಿ ಭೂತಪ್ರೇತಪಿಶಾಚಿಗಳ ಹಾಡು ‘ನಂದಿ ಕೊಂಡ ವಾಗುಲ್ಲೋನ ನಲ್ಲ ತುಮ್ಮ ನೀಡಲ್ಲೋ… ಚಂದ್ರ ವಂಕ ಕೋನಲ್ಲೋನ ಸಂದೆ ಪೊದ್ದು ಸೀಕಟ್ಲೋ… ನೀಡಲ್ಲೇ ಉನ್ನಾ ನೀತೋ ವಸ್ತುನ್ನಾ…’ ಅದರ ಹಿನ್ನೆಲೆ ಸಂಗೀತವಂತೂ ರೌದ್ರ, ಭಯಾನಕ.

ಕೊನೆಯ ಚರಣದಲ್ಲಿ ‘ಢಾಕಿನಿ ಢಕ್ಕಾ ಮುಕ್ಕಲ ಚೆಕ್ಕಾ… ಗುಂಟರಿ ನಕ್ಕ ಡೊಕ್ಕಲೋ ಚೊಕ್ಕಾ… ರಕ್ಕಿಸ ಮಟ್ಟ ತೊಕ್ಕಿಸ ಗುಟ್ಟ… ತೀತುವು ಪಿಟ್ಟ ಆಯುವು ಚಿಟ್ಟಾ… ಅಸಾಯ ಫಟ್ ಫಟ್ ಫಟ್ ಫಟ್… ವಸ್ತಾಯಾ ಝಟ್ ಝಟ್ ಝಟ್ ಫಟ್…’ ಅಂತೆಲ್ಲ ಭೂತೋಚ್ಚಾಟನೆ ಮಂತ್ರವಾದಿಯ ತೊದಲು ವಿಕೆಯಂಥ ಶಬ್ದಗಳು. ಕಟ್ಟಕಡೆಯ ಸಾಲು ‘ಕೋಪಾಲಾ ಮಸಜಸತತಗಾ ಶಾರ್ದೂಲಾ!’ ಎಂದು. ಅದೇನು ಗೊತ್ತೇ? ಶಾರ್ದೂಲವಿಕ್ರೀಡಿತ
ವೃತ್ತದಲ್ಲಿ ಮ, ಸ, ಜ, ಸ, ತ, ತ ಗಣಗಳು ಮತ್ತೊಂದು ಗುರು ಇರುತ್ತವೆಯಷ್ಟೇ, ಅದೇ- ಮಸಜಸತತಗಾ ಶಾರ್ದೂಲಾ!