Monday, 16th September 2024

ಶೆಟ್ಟರ್‌ ಅವರೇ ಬೆಟರ್‌ ಅನ್ನುತ್ತಿದೆ…

ಮೂರ್ತಿ ಪೂಜೆ

ಆರ‍್.ಟಿ.ವಿಠ್ಠಲಮೂರ್ತಿ

ಈ ಬಾರಿ ಬೊಮ್ಮಾಯಿಯನ್ನು ಬದಲಿಸಿ, ಶೆಟ್ಟರ್ ಅವರನ್ನು ಮತ್ತೊಮ್ಮೆ ಸಿಎಂ ಮಾಡಿ ಅಂತ ಬಹುತೇಕ ಬೆಂಬಲಿಗರು ಯಡಿಯೂರಪ್ಪ
ಅವರ ಬಳಿ ಹೇಳತೊಡಗಿzರೆ. ಅದು ಅಲ್ಲದೇ, ಜಗದೀಶ್ ಶೆಟ್ಟರ್ ಅವರು ಕೂಡಾ ಸಿಎಂ ಆಗಲು ರೆಡಿ ಅಂತ ಎನ್ನುತ್ತಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸ ಕಾವೇರಿ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದೆ. ಯಡಿಯೂರಪ್ಪ ಇರುವಲ್ಲಿ ಇಂತಹ ಚಟುವಟಿಕೆಗಳು ಹೊಸತೇನಲ್ಲವಾದರೂ ಈಗಿನ ಚಟುವಟಿಕೆಗಳು 2011ಮತ್ತು 2012 ರ ಸನ್ನಿವೇಶವನ್ನು ಪುನರಾವರ್ತಿಸುವ ಸಂಕೇತದಂತೆ ಕಾಣಿಸತೊಡಗಿದೆ. ಅಂದ ಹಾಗೆ 2011 ಮತ್ತು 2012 ರಲ್ಲಿ ಏನಾಗಿತ್ತು?ಎಂಬುದು ರಹಸ್ಯವೇನಲ್ಲ.

2011ರಲ್ಲಿ ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನೀಡಿದ ವರದಿ ಯಡಿ ಯೂರಪ್ಪ ಅವರ ಗದ್ದುಗೆಯನ್ನು ಕಬಳಿಸಿತ್ತು, ಹೀಗೆ ಗದ್ದುಗೆಯಿಂದ ಇಳಿದರೂ ಪಟ್ಟು ಬಿಡದ ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು ಹಿಂದಿಟ್ಟುಕೊಂಡು ಸಿಎಂ ಹುದ್ದೆಗೆ ತಮ್ಮ ಆಪ್ತರಾದ ಡಿ.ವಿ.ಸದಾನಂದ ಗೌಡ ಅವರನ್ನು ತಂದು ಕೂರಿಸುವಲ್ಲಿ ಯಶಸ್ವಿಯಾದರು.

ಮುಂದೆ 2012 ರ ಹೊತ್ತಿಗೆ ಅವರಿಗೆ ತಮ್ಮ ಆಯ್ಕೆಯ ಬಗ್ಗೆ ಹಳಹಳಿಕೆ ಶುರುವಾಗಿತ್ತು. ಕಾರಣ? ಸಿ.ಎಂ. ಹುದ್ದೆಯನ್ನು ತಮ್ಮಿಚ್ಚೆಯಂತೆ ಸದಾನಂದಗೌಡರು ನಿರ್ವಹಿಸುತ್ತಾರೆ ಎಂಬ ಯಡಿಯೂರಪ್ಪ ಅವರ ಲೆಕ್ಕಾಚಾರ ಹುಸಿಯಾಗಿತ್ತು.

ತಮ್ಮ  ಬಳಿ ಯಾರೇ ಬಂದರೂ ರೀ,ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮಾಡಿಟ್ಟ ಕೊಳೆಯನ್ನು ತೊಳೆಯುವುದೇ ದೊಡ್ಡ ಕೆಲಸವಾಗಿ ಹೋಗಿದೆ ಎಂದು ಸದಾನಂದಗೌಡರು ಹೇಳುತ್ತಿzರೆ ಅಂತ ಖುದ್ದು ಯಡಿಯೂರಪ್ಪ ಅವರ ಬೆಂಬಲಿಗರೇ ಪದೇ ಪದೇ ದೂರು
ಹೊತ್ತುಕೊಂಡು ಬರುತ್ತಿದ್ದರಲ್ಲ? ಇಂತಹ ದೂರನ್ನು ಕೇಳಿ, ಕೇಳಿ ಯಡಿಯೂರಪ್ಪ ಬೇಸತ್ತು ಹೋಗಿದ್ದರು. ಮತ್ತು ಇದೇ ಕಾರಣಕ್ಕಾಗಿ ಪರ್ಯಾಯ ನಾಯಕನ ಹುದ್ದೆಗೆ ಯಾರನ್ನು ತರಬೇಕು? ಅಂತ ತಮ್ಮ ಬೆಂಬಲಿಗರನ್ನು ಅವರು ಕೇಳಿದರೆ ಬಹುತೇಕ ಎಲ್ಲರೂ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರ ಹೆಸರನ್ನೇ ಹೇಳುತ್ತಿದ್ದರು.

ಹಾಗೆ ನೋಡಿದರೆ ಪಕ್ಷಕ್ಕೆ ಅಧಿಕಾರವಿಲ್ಲದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಗೆ ಜಗದೀಶ್ ಶೆಟ್ಟರ್ ಅವರನ್ನು ಕಂಡರೆ ವಿಶ್ವಾಸ. ಆದರೆ ಯಾವಾಗ ಬಿಜೆಪಿ ಅಧಿಕಾರಕ್ಕೆ ಬಂದು ತಾವು ಸಿಎಂ ಹುದ್ದೆಯ ಮೇಲೆ ಕೂರುವುದು ನಿಕ್ಕಿಯಾಗುತ್ತಿತ್ತೋ?ಆ ಕ್ಷಣದಿಂದ ಅವರಿಗೆ ಜಗದೀಶ್ ಶೆಟ್ಟರ್ ಅವರನ್ನು ಕಂಡರೆ ಏನೋ ಅನುಮಾನ ಶುರುವಾಗುತ್ತಿತ್ತು. ಹೀಗಾಗಿಯೇ 2008 ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೂ ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಒಪ್ಪಿರಲಿಲ್ಲ. ಆದರೆ ಅವರ ಹಿರಿತನಕ್ಕೆ ಸೂಕ್ತ ಸ್ಥಾನಮಾನ ನೀಡುವುದು ಅನಿವಾರ್ಯವಾಗಿದ್ದರಿಂದ ವಿಧಾನಸಭೆಯ ಅಧ್ಯಕ್ಷ ಹುದ್ದೆಯನ್ನು ಕೊಡೋಣ ಎಂದು ವರಸೆ ಶುರು ಮಾಡಿದ್ದರು.

ಯಡಿಯೂರಪ್ಪ ಅವರ ಈ ವರಸೆಯಿಂದ ಜಗದೀಶ್ ಶೆಟ್ಟರ್ ಬೇಸತ್ತಿ ದ್ದಷ್ಟೇ ಅಲ್ಲ, ನನಗೆ ಸ್ಪೀಕರ್ ಹುದ್ದೆ ಬೇಡ, ನಾನು ಕಾರ್ಯ ಕರ್ತನಾಗಿಯೇ ಮುಂದುವರಿಯುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಆ ಸಂದರ್ಭದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರೇನಾದರೂ ಮಧ್ಯೆ ಪ್ರವೇಶಿಸದೆ ಹೋಗಿದ್ದರೆ ಶೆಟ್ಟರ್ ತಮ್ಮ ನಿಲುವಿನಿಂದ ಹಿಂದೆ ಸರಿಯುತ್ತಿರಲಿಲ್ಲ. ಆದರೆ ಲಾಲ್ ಕೃಷ್ಣ ಅಡ್ವಾಣಿ ಅವರು ಮಾತನಾಡಿ ಶೆಟ್ಟರ್ ಜೀ, ರಾಜ್ಯದಲ್ಲಿ ಪಕ್ಷ ಅಽಕಾರಕ್ಕೆ ಬಂದಾಗ ನಮ್ಮಿಂದ ಒಡಕಿನ ಸಂದೇಶ ರವಾನೆಯಾಗಬಾರದು. ಸ್ವಲ್ಪ ದಿನ ಸಹಿಸಿಕೊಳ್ಳಿ. ಆನಂತರ ನೀವು ನಿಶ್ಚಿತವಾಗಿ ಮಂತ್ರಿ ಮಂಡಲ ಸೇರುತ್ತೀರಿ ಎಂದಾಗ ಶೆಟ್ಟರ್ ಮರುಮಾತನಾಡದೆ ಒಪ್ಪಿಕೊಂಡರು.

ಎಲ್ಲಿಯವರೆಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೋ? ಅಲ್ಲಿಯವರೆಗೂ ಶೆಟ್ಟರ್ ವಿಷಯದಲ್ಲಿ ಅವರ ಧೋರಣೆ ಬದಲಾಗಲಿಲ್ಲ. ಆದರೆ ಯಾವಾಗ ಸದಾನಂದಗೌಡರ ವಿಷಯದಲ್ಲಿ ಅವರಿಗೆ ಕಿರಿಕಿರಿ ಆಯಿತೋ? ಆಗ ಅವರೇ ದೂರ ವಾಣಿಯಲ್ಲಿ ಶೆಟ್ಟರ್ ಅವರನ್ನು
ಸಂಪರ್ಕಿಸಿ ಮುಂದಿನ ಮುಖ್ಯಮಂತ್ರಿಯಾಗಲು ಸಜ್ಜಾಗಿ ಎಂದು ಹೇಳಿದ್ದರು. ಹೀಗೆ 2011 ಮತ್ತು 2012 ರಲ್ಲಿ ನಡೆದ ಈ ಎರಡು ಬೆಳವಣಿಗೆಗಳ ಕಾಲಕ್ಕೂ, ಈಗಿನ ಸನ್ನಿವೇಶಕ್ಕೂ ತಾಳೆಯಾಗುತ್ತಿರುವುದು ಕುತೂಹಲಕಾರಿ.

ಅರ್ಥಾತ್, ಈ ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಯಡಿಯೂರಪ್ಪ ತಮ್ಮ ಜಾಗಕ್ಕೆ ಬಸವರಾಜ ಬೊಮ್ಮಾಯಿ ಬರಲಿ
ಎಂದು ಸಲಹೆ ನೀಡಿದಾಗ ದಿಲ್ಲಿಯ ಬಿಜೆಪಿ ವರಿಷ್ಠರು ದುಸುರಾ ಮಾತನಾಡದೆ ಒಪ್ಪಿಕೊಂಡರು. ಎಷ್ಟೇ ಆದರೂ ರಾಜ್ಯ ಬಿಜೆಪಿಯ ಒನ್ ಅಂಡ್ ಓನ್ಲಿ ಮಾಸ್ ಲೀಡರ್ ಯಡಿಯೂರಪ್ಪ. ಹೀಗಿದ್ದಾಗ ಅವರನ್ನು ನಿರ್ಲಕ್ಷಿಸಿ ಪರ್ಯಾ ಯ ನಾಯಕರನ್ನು ಆಯ್ಕೆ ಮಾಡಿದರೆ
ಭವಿಷ್ಯದಲ್ಲಿ ತೊಂದರೆಯಾಗಬಹುದು ಎಂಬ ಲೆಕ್ಕಾಚಾರಕ್ಕಿಳಿದ ಬಿಜೆಪಿ ವರಿಷ್ಠರು ಬಸವರಾಜ ಬೊಮ್ಮಾಯಿ ಅವರನ್ನು ತಂದು ಕೂರಿಸಿ ದರು. ಆದರೆ 2012 ರಲ್ಲಿ ಡಿ.ವಿ. ಸದಾನಂದಗೌಡರ ಬಗ್ಗೆ ಯಡಿಯೂರಪ್ಪ ಅವರಿಗೆ ಯಾವ ಭ್ರಮನಿರಸನವಾಯಿತೋ? ಅಂತಹದೇ ಭ್ರಮ ನಿರಸನ ಮತ್ತೆ ಮೊಳಕೆಯೊಡೆದಿದೆ.

ವ್ಯತ್ಯಾಸವೆಂದರೆ ಸದಾನಂದಗೌಡರಂತೆ ಆಡಿ ಬಸವ ರಾಜ ಬೊಮ್ಮಾಯಿ ಕೆಟ್ಟವರೆನಿಸಿಕೊಂಡಿಲ್ಲ ಬದಲಿಗೆ, ಯಡಿಯೂರಪ್ಪ ಆಪ್ತರು ತಮ್ಮನ್ನು ಭೇಟಿ ಮಾಡಲು ಬಂದರೆ ಗಂಟೆಗಟ್ಟಲೆ ಕಾಯಿ ಸುವುದರಿಂದ ಹಿಡಿದು,ಅನುದಾನ ಬಿಡುಗಡೆಯ ವಿಷಯದಲ್ಲಿ ನಿರ್ಲಕ್ಷ್ಯ
ತೋರುವ ತನಕ ಕಿರಿಕಿರಿ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಮುಖ್ಯಮಂತ್ರಿಯನ್ನು ಇಟ್ಟುಕೊಳ್ಳುವ ಬದಲು ಜಗದೀಶ್ ಶೆಟ್ಟರ್ ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೆ ತರುವುದು ಬೆಟರ್ ಎಂಬ ಮಾತು ಬೆಂಬಲಿಗರಿಂದ ಯಡಿಯೂರಪ್ಪ ಅವರ ಮುಂದೆ ಮಂಡನೆಯಾಗುತ್ತಿದೆ. ಅಂದ ಹಾಗೆ ಸದಾನಂದ ಗೌಡರು ಕೆಳಗಿಳಿದ ನಂತರ ಸಿಎಂ ಆದ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ತಮಗೆ ಯಾವ ಮುಜುಗರವೂ ಆಗುತ್ತಿರಲಿಲ್ಲ.

ನಮ್ಮನ್ನು ಕಂಡರೆ ಜಗದೀಶ್ ಶೆಟ್ಟರ್ ನೆಪ ಮಾತ್ರಕ್ಕೂ ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ಹೀಗಾಗಿ ಅವರೇ ಮತ್ತೊಂದು ಅವಧಿಗೆ ಸಿಎಂ ಆದರೆ ಒಳ್ಳೆಯ ದು ಎಂದು ಬೆಂಬಲಿಗರ ಪಡೆ ಯಡಿಯೂರಪ್ಪ ಅವರ ಬಳಿ ಪದೇ ಪದೇ ಹೇಳತೊಡಗಿದೆ. ತಮ್ಮ ನಿವಾಸ ಧವಳಗಿರಿಯಲ್ಲಿ ಕೆಲ ಬೆಂಬ ಲಿಗ ಶಾಸಕರು ಬಂದು ಶೆಟ್ಟರ್ ಬಗ್ಗೆ ಒಲವು ತೋರುತ್ತಿರುವ ಕಾಲಕ್ಕೆ ಸರಿಯಾಗಿ ಯಡಿಯೂರಪ್ಪ ಅವರ ಮನಸ್ಸಿನಲ್ಲಿ ಬೊಮ್ಮಾ ಯಿ ಅವರ ಬಗ್ಗೆ ಒಂದು ಅನುಮಾನ ಹುಟ್ಟಿಕೊಂಡಿದೆ.

ಅದೆಂದರೆ, ಸರಕಾರ ಬಂದು ಅರು ತಿಂಗಳು ಕಳೆದರೂ ಬೊಮ್ಮಾಯಿ ದಿಲ್ಲಿ ನಾಯಕರ ಬಳಿ, ತಮ್ಮ ಪುತ್ರ ಬಿ.ವೈ.ವಿಜಯೇಂದ್ರ
ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆಯ ಬಗ್ಗೆ ಪ್ರಸ್ತಾಪಿಸುತ್ತಿಲ್ಲ ಎಂಬುದು ಯಡಿಯೂರಪ್ಪ ಅವರ ಅನು ಮಾನ. ಅವರಲ್ಲಿ ಇಂತಹ ಅನುಮಾನ ಮೊಳಕೆಯೊಡೆಯಲು ದಿಲ್ಲಿಯ ಕೆಲ ಬಿಜೆಪಿ ನಾಯಕರೇ ಕಾರಣ. ಏನು ಯಡಿಯೂರಪ್ಪ ನವರೇ? ಬೊಮ್ಮಾಯಿ ಅವರ ಸಂಪುಟದಲ್ಲಿ ನನ್ನ ಮಗ ಮಂತ್ರಿಯಾಗಲಿ ಎಂದು ನೀವು ಬಯಸುತ್ತಿದ್ದೀರಿ.

ಆದರೆ ಈ ಬಗ್ಗೆ ಮೋದಿ-ಅಮಿತ್ ಷಾ ಅವರ ಬಳಿ ಇರಲಿ, ಕನಿಷ್ಟ ಪಕ್ಷ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಬಳಿಯಲ್ಲೂ ಬೊಮ್ಮಾಯಿ ಪ್ರಸ್ತಾಪಿಸಿಲ್ಲ ಎಂದು ಈ ನಾಯಕರು ತಿವಿಯುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತಮ್ಮ ಸಂಪುಟಕ್ಕಿರುವ ಅನಿವಾರ್ಯತೆಗಳ ಬಗ್ಗೆ ಮಾತನಾಡದೆ ಹೋದರೆ ದಿಲ್ಲಿಯ ಬಿಜೆಪಿ ವರಿಷ್ಟರೇಕೆ ಉತ್ಸಾಹ ತೋರಿಸುತ್ತಾರೆ? ಅದರಲ್ಲೂ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ನಂತರ ವಿಜಯೇಂದ್ರ ಕೇಸಿನಲ್ಲೂ ವರಿಷ್ಟರು ಉದ್ದೇಶ ಪೂರ್ವಕವಾಗಿ ಮೌನವಾಗಿದ್ದಾರೆ.

ಇದು ಗೊತ್ತಿರುವುದರಿಂದಲೇ ಯಡಿಯೂರಪ್ಪ ಅವರು ಪಕ್ಷದ ವರಿಷ್ಟರ ಜತೆ ಈ ಕುರಿತಂತೆ ಚಕಾರ ಎತ್ತುತ್ತಿಲ್ಲ. ಬದಲಿಗೆ, ಬಸವರಾಜ ಬೊಮ್ಮಾಯಿ ಅವರ ಬಳಿ ದಿಲ್ಲಿಯ ನಾಯಕರ ಜತೆ ಮಾತನಾಡುವಾಗ ನನ್ನ ಸಂಪುಟಕ್ಕೆ ವಿಜಯೇಂದ್ರ ಅವರ ಅಗತ್ಯವಿದೆ ಎಂದು ಹೇಳಿ ಅಂತ ಬೊಮ್ಮಾಯಿ ಅವರಿಗೆ ಹೇಳುತ್ತಾ ಬಂದಿದ್ದಾರೆ. ಆದರೆ ತಾವು ಇಲ್ಲಿ ಬೊಮ್ಮಾಯಿ ಅವರಿಗೆ ಹೇಳುವುದು, ಬೊಮ್ಮಾಯಿ ಮಾತ್ರ ದಿಲ್ಲಿಗೆ ಹೋದಾಗ ಈ ವಿಷಯದಲ್ಲಿ ಮೌನ ತಾಳು ವುದು ನಡೆದಿರುವುದರಿಂದ ತಮ್ಮ ಉದ್ದೇಶ ಈಡೇರುತ್ತಿಲ್ಲ ಎಂಬುದು ಯಡಿಯೂ ರಪ್ಪ ಅವರ ಸಿಟ್ಟು.

ಬಸವರಾಜ ಬೊಮ್ಮಾಯಿ ಹೀಗೇಕೆ ಮಾಡುತ್ತಿzರೆ ಅಂತ ಯೋಚಿಸುತ್ತಿದ್ದ ಕಾಲಕ್ಕೇ ಬೊಮ್ಮಾಯಿ ಸಂಪುಟದ ಕೆಲ ಸಚಿವರು ಮತ್ತು ಬೆಂಬಲಿಗ ಶಾಸಕರು ಯಡಿಯೂರಪ್ಪ ಅವರ ಬಳಿ ಒಂದು ವಿಷಯವನ್ನು ಹೇಳಿದ್ದಾರೆ. ಅದೆಂದರೆ, ಬಸವರಾಜ ಬೊಮ್ಮಾಯಿ ಅವರು ಹೀಗೆ ವರ್ತಿಸಲು ಅವರ ಅಕ್ಕ-ಪಕ್ಕ ಇರುವ ಇಬ್ಬರು ಸಚಿವರು ಕಾರಣ. ಈ ಇಬ್ಬರು ಬೊಮ್ಮಾಯಿ ಅವರ ಮೇಲೆ ಕಣ್ಣಿಡಲಿ ಅಂತ ನೀವು ಬಯಸಿದಿರಿ. ಪರಿಣಾಮವಾಗಿ ಅವರಿಬ್ಬರೂ ಸರಕಾರದಲ್ಲಿ ಪವರ್ ಫುಲ್ ಮಂತ್ರಿಗಳಾಗಿ ಕುಳಿತಿದ್ದಾರೆ. ಅಷ್ಟೇ ಅಲ್ಲ, ಸರಕಾರದ ದೇಖರೇಖಿಯೇ ನಮ್ಮದು ಅನ್ನುವ ಮೆಸೇಜ್ ರವಾನಿಸಿ ಪುಷ್ಟಿ ಪುಷ್ಟಿಯಾಗಿದ್ದಾರೆ.

ಇವರಿಬ್ಬರು ಸೇರಿ ಬಸವರಾಜ ಬೊಮ್ಮಾಯಿ ಅವರ ಬಳಿ ಯಾವ ಕಾರಣಕ್ಕೂ ನೀವು ಪಕ್ಷದ ವರಿಷ್ಟರ ಬಳಿ ನನ್ನ ಸಂಪುಟಕ್ಕೆ
ಬಿ.ವೈ.ವಿಜಯೇಂದ್ರ ಬೇಕು ಅಂತ ಪಟ್ಟು ಹಿಡಿಯಬೇಡಿ. ಯಾಕೆಂದರೆ ನೀವೇ ಯೋಚಿಸಿ. ಒಂದು ಸಲ ವಿಜಯೇಂದ್ರ ಸಚಿವ ಸಂಪುಟಕ್ಕೆ ನುಗ್ಗಿದರೆ ಸಹಜವಾಗಿಯೇ ನಿಮ್ಮ ನಾಯಕತ್ವ ದುರ್ಬಲವಾಗುತ್ತದೆ. ಎಷ್ಟೇ ಆದರೂ ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಮಗ.
ಹಾಗೆಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸರಕಾರವನ್ನು ನಡೆಸಿದ ಅನುಭವ ಅವರಿಗಿದೆ.

ತಂದೆಯ ಹಿಂದೆ ನಿಂತು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮತ್ತು ಇಡೀ ಕ್ಯಾಬಿನೆಟ್ ಅನ್ನು ಹ್ಯಾಂಡಲ್ ಮಾಡುತ್ತಿದ್ದವರು ವಿಜ ಯೇಂದ್ರ. ಒಂದು ವೇಳೆ ಅವರೇನಾದರೂ ನಿಮ್ಮ ಸಂಪುಟಕ್ಕೆ ಸೇರಿಕೊಂಡರೆ ನಾಳೆ ಅವರು ಪರ್ಯಾಯ ಶಕ್ತಿ ಕೇಂದ್ರವಾಗಿ ಪ್ರತಿಷ್ಟಾ ಪಿತರಾಗುತ್ತಾರೆ. ಯಡಿಯೂರಪ್ಪ ಅವರ ಮಗ ಅಂದರೆ ಕೇಳಬೇಕೇ? ಸಚಿವರು ಮತ್ತು ಶಾಸಕರು ವಿಜಯೇಂದ್ರ ಅವರ ಬೆನ್ನ ಹಿಂದೆ ನಿ ಲ್ಲುತ್ತಾರೆ. ಅಷ್ಟಾದರೆ ಸಾಕು, ನಿಮ್ಮ ನಾಯಕತ್ವ ಕುಸಿದು ಹೋಗುತ್ತದೆ ಅಂತ ಈ ಇಬ್ಬರು ಮಂತ್ರಿಗಳು ಬೊಮ್ಮಾಯಿ ಅವರ ಕಿವಿ ಊದಿದ್ದಾರೆ.

ಅಂತವರನ್ನು ಸಿಎಂ ಹುದ್ದೆಯಲ್ಲಿ ಮುಂದುವರಿಸಿದರೆ ಸಧ್ಯಕ್ಕಲ್ಲ, ಅವಧಿ ಮುಗಿದರೂ ವಿಜಯೇಂದ್ರ ಮಂತ್ರಿಯಾಗುವುದಿಲ್ಲ. ಮತ್ತು ಅದೇ ರೀತಿ ನಿಮ್ಮ ಬೆಂಬಲಿಗರ ಶಕ್ತಿಯೂ ಕುಸಿದು ಹೋಗುತ್ತದೆ. ಹೀಗಾಗಿ 2012 ರಲ್ಲಿ ಡಿ.ವಿ.ಸದಾನಂದಗೌಡರನ್ನು ಬದಲಿಸಿದಂತೆ, ಈ ಬಾರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಿ, ಜಗದೀಶ್ ಶೆಟ್ಟರ್ ಅವರನ್ನು ಮತ್ತೊಮ್ಮೆ ಸಿಎಂ ಮಾಡಿ ಅಂತ ಬಹುತೇಕ ಬೆಂಬಲಿಗರು ಯಡಿಯೂರಪ್ಪ ಅವರ ಬಳಿ ಹೇಳತೊಡಗಿದ್ದಾರೆ. ಅಂದ ಹಾಗೆ ಬೆಂಬಲಿಗ ಶಾಸಕರ ವರಾತ ಹೀಗೆ ಮುಂದುವರಿದಿರುವ ಕಾಲದ ಖುದ್ದು ಜಗದೀಶ್ ಶೆಟ್ಟರ್ ಅವರು ಕೂಡಾ ಸಾರ್, ಇದು ನನ್ನ ಲಾಸ್ಟ್ ಚಾನ್ಸ್ ನಿಮ್ಮ ಬೆಂಬಲವಿದ್ದರೆ ನಾನು ಸಿಎಂ ಆಗಲು ರೆಡಿ ಅಂತ ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.