M J Akbar Column: ಟ್ರಂಪ್ ಗೂ ಒಂದು ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕಾ ?
ಹೀಗಾಗಿ ಈಗ ಮತ್ತೊಮ್ಮೆ ನೊಬೆಲ್ ಶಾಂತಿ ಪ್ರಶಸ್ತಿಯ ಸಮಿತಿ ಅತ್ಯಂತ ಶಾಂತಿಯುತವಾಗಿ ಟ್ರಂಪ್ ಮುಂದೆ ಮಂಡಿಯೂರಿ ಕುಳಿತುಕೊಳ್ಳಲು ಎಲ್ಲಾ ಕಾರಣಗಳೂ ಇವೆ.ಆದರೆ ನಾವು ಇಲ್ಲೊಂದು ವಿಷಯ ವನ್ನು ಮರೆತುಬಿಟ್ಟಿದ್ದೇವೆ. ಪತ್ರಿಕೆಗಳಲ್ಲಿ ಅಂಕಣ ಬರೆಯುವವರಿಗೆ ಸಲ್ಲಿಸಿದ ಸೇವೆಗಾಗಿ ಟ್ರಂಪ್‌ಗೆ ನಿಜವಾಗಿಯೂ ನೊಬೆಲ್ ಪ್ರಶಸ್ತಿ ಸಿಗಬೇಕು
![ಟ್ರಂಪ್ ಗೂ ಒಂದು ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕಾ ?](https://cdn-vishwavani-prod.hindverse.com/media/original_images/M_J_Akbar_Column_110225.jpg)
ಲೇಖಕರು ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್
![Profile](https://vishwavani.news/static/img/user.png)
ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಜಗತ್ತಿನ ಕೆಲ ಭಾಗಗಳಲ್ಲೀಗ ಒಂದು ಕೂಗು ಶುರುವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂಬ ಕೂಗು ಅದು. 2009ರಲ್ಲಿ ಬರಾಕ್ ಒಬಾಮಾಗೆ ವಿನಾ ಕಾರಣ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದ್ದರಿಂದ ಈಗ ಟ್ರಂಪ್‌ಗೆ ಆ ಪ್ರಶಸ್ತಿ ಕೊಡಬೇಕು ಎಂಬ ಕೂಗು ಎದ್ದರೆ ಅಪ್ರಸ್ತುತ ಏನಲ್ಲ. ಒಬಾಮಾಗೆ ಶಾಂತಿ ಪ್ರಶಸ್ತಿ ಕೊಟ್ಟಾಗ ನೊಬೆಲ್ ಸಮಿತಿ ‘ಅಂತಾ ರಾಷ್ಟ್ರೀಯ ರಾಜತಾಂತ್ರಿಕತೆ ಯನ್ನು ಗಟ್ಟಿಗೊಳಿಸಲು ಅದ್ಭುತ ಪ್ರಯತ್ನ ಮಾಡಿದ ಹಾಗೂ ಜನರ ನಡುವೆ ಅಪ್ರತಿಮ ಸಹಭಾಗಿತ್ವವನ್ನು ತರಲು ಶ್ರಮಿಸಿದ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಹೇಳಿತ್ತು.
ಮಜಾ ಏನು ಅಂದರೆ ಆಗಷ್ಟೇ ಒಬಾಮಾ ಶ್ವೇತಭವನದ ಕುರ್ಚಿಯಲ್ಲಿ ಕುಳಿತು ಸೆಟಲ್ ಆಗುತ್ತಿ ದ್ದರು. ಅಷ್ಟು ಸಣ್ಣ ಸಮಯದಲ್ಲೇ ಅವರು ಇಷ್ಟೆಲ್ಲಾ ಸಾಧನೆ ಮಾಡಿಬಿಟ್ಟಿದ್ದರು!
ಹೀಗಾಗಿ ಈಗ ಮತ್ತೊಮ್ಮೆ ನೊಬೆಲ್ ಶಾಂತಿ ಪ್ರಶಸ್ತಿಯ ಸಮಿತಿ ಅತ್ಯಂತ ಶಾಂತಿಯುತವಾಗಿ ಟ್ರಂಪ್ ಮುಂದೆ ಮಂಡಿಯೂರಿ ಕುಳಿತುಕೊಳ್ಳಲು ಎಲ್ಲಾ ಕಾರಣಗಳೂ ಇವೆ.ಆದರೆ ನಾವು ಇಲ್ಲೊಂದು ವಿಷಯವನ್ನು ಮರೆತುಬಿಟ್ಟಿದ್ದೇವೆ. ಪತ್ರಿಕೆಗಳಲ್ಲಿ ಅಂಕಣ ಬರೆಯುವವರಿಗೆ ಸಲ್ಲಿಸಿದ ಸೇವೆಗಾಗಿ ಟ್ರಂಪ್‌ಗೆ ನಿಜವಾಗಿಯೂ ನೊಬೆಲ್ ಪ್ರಶಸ್ತಿ ಸಿಗಬೇಕು.
ಇದನ್ನೂ ಓದಿ: M J Akbar Column: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರ ದಿನಗಳು
ಅವರಿಂದಾಗಿ ನಮ್ಮಂಥ ಅಂಕಣಕಾರರಿಗೆ ಭರಪೂರ ವಿಷಯಗಳು ಸಿಗುತ್ತಿವೆ. ಪ್ರತಿ ವಾರ ‘ಈ ಸಲ ಏನು ಅಂಕಣ ಬರೆಯಲಿ’ ಎಂದು ತಲೆ ಕೆರೆದುಕೊಳ್ಳುವ ಪ್ರಮೇಯವೇ ಇಲ್ಲ. ಟ್ರಂಪ್ ಏನಾದ ರೊಂದು ಸುದ್ದಿ ಕೊಡುತ್ತಿರುತ್ತಾರೆ. ಹೀಗಾಗಿ ಸಿಐಎ ತಪ್ಪು ತಿಳಿದುಕೊಳ್ಳದಿರಲಿ ಎಂಬ ಕಾರಣಕ್ಕೆ ಇನ್ನೊಮ್ಮೆ ಅತ್ಯಂತ ವಿನೀತ ಭಾವದಿಂದ ಹಾಗೂ ಕೃತಜ್ಞತೆಯಿಂದ ಅವರಿಗೆ ನೊಬೆಲ್ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ.
ಇತ್ತೀಚೆಗೆ ಜಗತ್ತಿನಾದ್ಯಂತ ಪತ್ರಿಕಾ ಸಂಪಾದಕರನ್ನು ಬ್ಯುಸಿಯಾಗಿಡಲು ಅಮೆರಿಕದ ಶ್ವೇತಭವನ ದಿನಕ್ಕೊಂದು ಹೆಡ್ ಲೈನ್ ಸೃಷ್ಟಿ ಮಾಡುತ್ತಿದೆ. ಕೆಲ ಸುದ್ದಿಗಳು ನಿಜಕ್ಕೂ ಪರಿಣಾಮಕಾರಿಯಾಗಿ ದ್ದರೆ, ಕೆಲವು ಭಯಾನಕವಾಗಿರುತ್ತವೆ. ಆದರೆ ಎಲ್ಲವೂ ಅಗಾಧ ಪ್ರಭಾವ ಬೀರುವ ಶಕ್ತಿಯನ್ನಂತೂ ಹೊಂದಿರುತ್ತವೆ.
ಜಗತ್ತಿನ ಮುಂದೆ ಟ್ರಂಪ್ ಇಡುವ ಕೆಲ ಬೇಡಿಕೆಗಳು ವಿವಿಧ ದೇಶಗಳ ನರನಾಡಿಗಳಲ್ಲಿ ವಿದ್ಯುತ್ ಸಂಚಾರ ಮಾಡಿಸುತ್ತವೆ. ಅದರಲ್ಲೂ ವಿಶೇಷವಾಗಿ, ಅಮೆರಿಕ ಇಷ್ಟು ಕಾಲ ನಿಮಗೆ ನೀಡುತ್ತಿದ್ದ ಉಚಿತ ನೆರವು ಅಥವಾ ತೆರಿಗೆ ವಿನಾಯಿತಿಯನ್ನು ನಿಲ್ಲಿಸುತ್ತೇವೆಂದು ಹೇಳಿದಾಗ ಕೆಲ ದೇಶಗಳು ಕಂಗಾಲಾಗುತ್ತವೆ. ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‌ಗೆ ನೆರವು ನೀಡಿದ ಯಾವುದೇ ದೇಶಗಳೂ ಇಲ್ಲಿಯವರೆಗೆ ಉಕ್ರೇನ್ ನಿಂದ ಪ್ರತ್ಯುಪಕಾರವನ್ನು ಕೇಳಿರಲಿಲ್ಲ. ಆದರೆ ಟ್ರಂಪ್ ಬರುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿಗೆ ಚಳಿಜ್ವರ ಶುರುವಾಗಿದೆ.
ಭ್ರಷ್ಟಾಚಾರ ಹಾಗೂ ಅಸಹಾಯಕತೆಯ ತೂಗುಯ್ಯಾಲೆಯಲ್ಲಿ ಕುಳಿತಿರುವ ಜೆಲೆನ್‌ಸ್ಕಿ ಬಳಿ ಟ್ರಂಪ್ ದೊಡ್ಡ ಬೇಡಿಕೆಯನ್ನೇ ಇಟ್ಟಿದ್ದಾರೆ. ನಿಮಗೆ ಯುದ್ಧ ಮಾಡಲು ಅಮೆರಿಕದಿಂದ 200 ಬಿಲಿಯನ್ ಡಾಲರ್ ನೆರವು ನೀಡಿದ್ದೇವಲ್ಲವೆ, ಅದಕ್ಕೆ ಪ್ರತಿಯಾಗಿ ನಿಮ್ಮ ದೇಶದಲ್ಲಿರುವ ಖನಿಜಗಳನ್ನು ತೆಗೆಯಲು ನಮಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ.
ಮೊದಲಿಗೆ ಅಮೆರಿಕ ನಮಗೆ 200 ಬಿಲಿಯನ್ ಡಾಲರ್ ನೆರವು ನೀಡಿರುವುದೇ ಕಟ್ಟುಕತೆ ಎಂದ ಜೆಲೆನ್‌ಸ್ಕಿ, ಬಳಿಕ ಟ್ರಂಪ್ ಹಾಕಿದ ಬಿಗಿಪಟ್ಟುಗಳನ್ನು ನೋಡಿ ಯೋಗಗುರುಗಳು ತಮ್ಮ ಯೌವನದ ತುರೀಯದಲ್ಲಿ ಬಿಲ್ಲಿನ ರೀತಿ ಬಾಗುವಂತೆ ಟ್ರಂಪ್ ಎದುರು ನಡು ಬಗ್ಗಿಸಿ ನಿಂತಿದ್ದಾರೆ. ಅಮೆರಿಕದ ಕಂಪನಿಗಳು ನಮ್ಮ ದೇಶದಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಬರಲು ಅಡ್ಡಿಯಿಲ್ಲ ಎಂದು ಈಗ ಮುಕ್ತ ಆಹ್ವಾನ ನೀಡುತ್ತಿದ್ದಾರೆ.
ಅಷ್ಟೇ ಅಲ್ಲ, ರಷ್ಯಾದ ಪುಟಿನ್ ಜತೆ ಮಾತುಕತೆ ನಡೆಸುವುದಕ್ಕೂ ನಾನು ಸಿದ್ಧ ಎಂದು ಪ್ರಕಟಿಸಿ, ಮುಂದಿನ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಅಂದರೆ ಟ್ರಂಪ್ ತಂತ್ರ ಕೆಲಸ ಮಾಡುತ್ತಿದೆ. ಆದರೆ ಎಲ್ಲಾ ಸಲವೂ ಅದು ಕೆಲಸ ಮಾಡುವುದಿಲ್ಲ. ರಕ್ತಸಿಕ್ತ ಗಾಜಾಪಟ್ಟಿಯನ್ನು ಜಗತ್ತಿನ ಶ್ರೀಮಂತರ ಬೀಚ್ ವಾಲಿಬಾಲ್ ಆಡುವ ಮೋಜಿನ ಜಾಗ ಮಾಡಲು ಟ್ರಂಪ್ ಹೊರಟಿದ್ದರು.
ಅಲ್ಲೇ ಪಕ್ಕದಲ್ಲಿ ‘ಟ್ರಂಪ್ ಟವರ್’ ಹಾಗೂ ‘ಟ್ರಂಪ್ ಕ್ಯಾಸಿನೋ’ ನಿರ್ಮಿಸುವ ಯೋಚನೆ ಕೂಡ ಅವರಲ್ಲಿತ್ತು ಅಂತ ಕಾಣಿಸುತ್ತದೆ. ಆದರೆ ಅದೆಲ್ಲ ಯಾವತ್ತೂ ಸಾಧ್ಯವಿಲ್ಲ. ನಿಜ ಹೇಳಬೇಕೆಂದರೆ, ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳುತ್ತೇವೆಂದು ಟ್ರಂಪ್ ಹೇಳಿದ್ದು ಪೂರ್ತಿ ನಿಜವಲ್ಲ. ಅವರಿಗೂ ಗೊತ್ತು, ನಾನಿದನ್ನು ಗಂಭೀರವಾಗಿ ಹೇಳುತ್ತಿಲ್ಲ ಎಂದು. ಟ್ರಂಪ್ ಬಹಳ ಚಾಣಾಕ್ಷ ಮನುಷ್ಯ.
ಯಾವುದೇ ಕೊಲ್ಲಿ ರಾಷ್ಟ್ರವಾಗಲಿ ಅಥವಾ ಯಾವೊಬ್ಬ ಪ್ಯಾಲೆಸ್ತೀನಿಯಾಗಲಿ ಗಾಜಾದಿಂದ ಗುಳೆ ಹೋಗುವ ಪ್ಯಾಲೆಸ್ತೀನಿಯನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಟ್ರಂಪ್ ಗಾಜಾಪಟ್ಟಿಯನ್ನು ವಶಪಡಿ ಸಿಕೊಳ್ಳುತ್ತೇವೆ ಎಂದು ಹೇಳಿದ್ದು ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹುಗೆ ತೋರಿಸಿದ ಕ್ಯಾರೆಟ್ ಅಷ್ಟೆ. ಇಸ್ರೇಲ್ ಜತೆಗೆ ಯಾವುದೋ ಡೀಲ್ ಮಾಡಿಕೊಳ್ಳಲು ಟ್ರಂಪ್ ಈ ಪಟ್ಟು ಹಾಕಿದ್ದಾರೆ.
ಅಪಾಯ ಇರುವುದು ಎಲ್ಲಿ ಅಂದರೆ, ಕೆಲವೊಮ್ಮೆ ಇಂಥ ಭಯಂಕರ ಐಡಿಯಾಗಳು ಒಳ್ಳೆಯ ಸಂಗತಿಗಳನ್ನು ಹಾಳುಗೆಡವುತ್ತವೆ. 21ನೇ ಶತಮಾನ ಬಹುಶಃ ನೊಬೆಲ್ ಪ್ರಶಸ್ತಿಯನ್ನೇ ಅಣಕ ವಾಡುವ ಶತಮಾನವಿದ್ದಂತಿದೆ. ಬಾಂಗ್ಲಾದೇಶದ ಸ್ವಯಂಘೋಷಿತ ನಾಯಕ ಮೊಹಮ್ಮದ್ ಯೂನಸ್ ಕೂಡ ಹಿಂದೊಮ್ಮೆ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದವರು. ಈಗ ಬಾಂಗ್ಲಾದೇಶದಲ್ಲಿ ರಕ್ತ ಹರಿಸುತ್ತಿದ್ದಾರೆ.
ಹಿಂದೆ 1971ರ ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಬಾಂಗ್ಲಾದಲ್ಲಿ ಲಕ್ಷಾಂತರ ಜನರ ನೆತ್ತರು ಹರಿದ ಇತಿಹಾಸವನ್ನೇ ಮುಚ್ಚಿಹಾಕಲು ಅವರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಮಾಡುತ್ತಿರುವ ಸಾಕಷ್ಟು ಪ್ರಯತ್ನಗಳಲ್ಲಿ ಇತ್ತೀಚಿನ ಹೊಸ ನಿರ್ಧಾರವೆಂದರೆ ಕರಾಚಿ ಮತ್ತು ಢಾಕಾ ನಡುವೆ ನೇರ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿರುವುದು. ‘- ಜಿನ್ನಾ’ ಹೆಸರಿನ ವಿಮಾನ ಬಾಂಗ್ಲಾ ಮತ್ತು ಪಾಕ್ ನಡುವೆ ಹಾರಾಟ ನಡೆಸಲು ಯೂನಸ್ ಒಪ್ಪಿಗೆ ನೀಡಿದ್ದಾರೆ.
ಪಾಕಿಸ್ತಾನ ಸೃಷ್ಟಿಯಾದ ಮರುವರ್ಷವೇ 1948ರಲ್ಲಿ ಮೊಹಮ್ಮದ್ ಅಲಿ ಜಿನ್ನಾ ಒಂದು ದಿನ ದೇಶವನ್ನುದ್ದೇಶಿಸಿ ಮಾತನಾಡಿ ‘ಇಂದಿನಿಂದ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿಯ ಬದಲು ಉರ್ದು ಅಧಿಕೃತ ರಾಷ್ಟ್ರೀಯ ಭಾಷೆಯಾಗಲಿದೆ’ ಎಂದು ಘೋಷಿಸಿದ್ದರು. ಅದನ್ನು ಕೇಳಿ ಎಲ್ಲರೂ ಅವಾಕ್ಕಾಗಿದ್ದರು. ಬಂಗಾಳಿ ಭಾಷೆಗೆ ಸಮಾನಾಂತರ ಸ್ಥಾನಮಾನ ಕೂಡ ಸಿಗಲಿಲ್ಲ.
ಅಲ್ಲಿಯವರೆಗೆ ಹೀರೋ ಆಗಿದ್ದ ಜಿನ್ನಾ ಏಕಾಏಕಿ ಈ ಘೋಷಣೆಯೊಂದಿಗೆ ಪೂರ್ವ ಪಾಕಿಸ್ತಾನಕ್ಕೆ ವಿಲನ್ ಆಗಿಬಿಟ್ಟರು. ಪೂರ್ವ ಪಾಕಿಸ್ತಾನದಲ್ಲಿ ನಡೆದ ಮೊದಲ ಚುನಾವಣೆಯಲ್ಲೇ ಜಿನ್ನಾರ ಮುಸ್ಲಿಂ ಲೀಗ್ ಪಕ್ಷ ಸರ್ವನಾಶವಾಯಿತು. ಬಾಂಗ್ಲಾದೇಶದ ಉದಯಕ್ಕೆ ಕಾರಣವಾಗಿದ್ದೇ ಭಾಷೆಯ ಸಂಘರ್ಷ. ಯೂನಸ್‌ಗೆ ಆ ಇತಿಹಾಸವೂ ನೆನಪಿಲ್ಲವೇ? ಇತಿಹಾಸದ ಅಪಾಯಕಾರಿ ಅಧ್ಯಾಯ ವನ್ನೂ ಮರೆಯುವಷ್ಟು ಈ ಮನುಷ್ಯನ ಮಿದುಳು ಮಂಕಾಗಿದೆಯೇ?- ಜಿನ್ನಾ ವಿಮಾನ ಢಾಕಾ ದಲ್ಲಿ ಬಂದಿಳಿದರೆ ಬಹುಶಃ ಪ್ರತಿರೋಧ ಜೋರಾಗಬಹುದು.
ಏರ್‌ಲೈನ್ಸ್‌ನ ಪಾಕಿಸ್ತಾನಿ ಮಾಲೀಕನಿಗಾದರೂ ಹಳೆಯದು ನೆನಪಿದೆಯೋ ಇಲ್ಲವೋ. ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕ ಖುಷಿಯಲ್ಲಿರುವ ಆತ ಮುಂದೆ ಏನೇನು ನೋಡಬೇಕಿದೆಯೋ ಗೊತ್ತಿಲ್ಲ. - ಜಿನ್ನಾ ಏರ್‌ಲೈನ್ಸ್ ಸೋವಿ ದರದ ವಿಮಾನ. ಅದು ಢಾಕಾ ಪ್ರಯಾಣಕ್ಕೆ ದುಬಾರಿ ಬೆಲೆ ತೆರಬೇಕಾದೀತು.
ಸಾಹಿತ್ಯೋತ್ಸವಗಳಲ್ಲಿ ನಾನಾ ವಿಧದ ಹೊಸ ಚಿಂತನೆಗಳು ಮೂಡುತ್ತವೆ. ಇತ್ತೀಚೆಗೆ ಭೋಪಾಲ್ ಲಿಟ್ ಫೆಸ್ಟ್‌ಗೆ ಹೋಗಿದ್ದೆ. ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ರಾಜ್ ಶುಕ್ಲಾ ಜತೆ ಮಧ್ಯಪ್ರಾಚ್ಯದ ಬಗ್ಗೆ ಸಂವಾದವಿತ್ತು. ಅಲ್ಲಿ ನಡೆದ ಮಾತುಕತೆಯ ಕೆಲ ತುಣುಕನ್ನು ನಾನಿಲ್ಲಿ ಪ್ರಸ್ತಾಪಿಸಬೇಕು. ಭಾಷೆ ಯ ಉಗಮ ಮತ್ತು ಇತಿಹಾಸದ ಬಗ್ಗೆ ಆಸಕ್ತಿಯಿರುವವರಿಗೆ ಇದು ಇಷ್ಟವಾಗಬಹುದು.
ಮೊದಲಿಗೆ ಮಧ್ಯಪ್ರಾಚ್ಯದಿಂದಲೇ ಶುರುಮಾಡೋಣ. ಇದರಲ್ಲಿರುವ ಪ್ರಾಚ್ಯ ಯಾವುದಕ್ಕೆ ಪೂರ್ವ? ಇದರಲ್ಲಿರುವ ಮಧ್ಯ ಯಾವುದರ ಮಧ್ಯ? ಜಗತ್ತಿನ ಪೂರ್ವಭಾಗದ ಮಧ್ಯ ಎಂದು ಯಾವುದಾದರೂ ಏಷ್ಯನ್ ಪ್ರದೇಶವನ್ನು ಕರೆಯುವುದಾದರೆ ಅದು ಭಾರತವೇ ಆಗುತ್ತದೆ. ಬ್ರಿಟಿಷ್ ಕಾಲದ ಹೆಸರುಗಳು ಬ್ರಿಟಿಷರ ದೃಷ್ಟಿಕೋನದಿಂದ ಸೃಷ್ಟಿಯಾಗಿವೆ. ಆದರೆ ನಾವು ಇವತ್ತಿಗೂ ನಮ್ಮದೇ ಆದ ಸ್ವತಂತ್ರ ಭೂರಾಜಕೀಯ ಪರಿಭಾಷೆಯೊಂದನ್ನು ಅಭಿವೃದ್ಧಿಪಡಿಸಿಕೊಳ್ಳಲಾಗದೆ ಹೆಣಗಾಡುತ್ತಿದ್ದೇವೆ.
ಭೋಪಾಲ್ ಸಂವಾದದಲ್ಲಿ ಭಾಗವಹಿಸಿದ್ದಾಗ ನಾವು ಬಳಸುವ ಪದಗಳ ನಿಗೂಢ ಜಗತ್ತು ನನ್ನನ್ನು ಗಾಢವಾದ ಚಿಂತನೆಗೆ ಹಚ್ಚಿತ್ತು. ಇಂಗ್ಲಿಷ್‌ನಲ್ಲಿ ಹರ್ಸ್ ಎಂಬ ಪದವಿದೆ. ಅದರ ವಿರುದ್ಧಾರ್ಥಕ ಪದ ರಿಹರ್ಸ್ ಆಗಬಹುದೇ? ಹರ್ಸ್ ಅಂದರೆ ಶವಾಗಾರ ಅಥವಾ ಹೆಣ ಸಾಗಿಸುವ ವಾಹನ. ರಿಹರ್ಸ್ ಅಂದರೆ ತಾಲೀಮು! ಎಂಥಾ ವ್ಯತ್ಯಾಸ. ರಿಹರ್ಸಲ್‌ಗೂ ಹೆಣಕ್ಕೂ ಏನು ಸಂಬಂಧ? ಪದಗಳ ಜತೆಗೆ ಆಟವಾಡಲು ನಮ್ಮ ಕಲ್ಪನಾಶಕ್ತಿಯನ್ನು ಕೊಂಚ ವಿಸ್ತರಿಸಿಕೊಳ್ಳಬೇಕು. ಆಗ ಅದರ ಮಜಕೂರು ಏನೆಂಬುದು ತಿಳಿಯುತ್ತದೆ.
ಇಂಗ್ಲಿಷ್ ಭಾಷೆ ಹೇಗೆ ಇಂದು ಜಾಗತಿಕ ಭಾಷೆಯಾಗಿ ಯಶಸ್ಸು ಪಡೆದಿದೆ ಎಂಬ ಬಗ್ಗೆ ನಿಮಗೆ ಕುತೂಹಲವಿದ್ದರೆ ಇಲ್ಲೊಂದಷ್ಟು ಸಂಗತಿಗಳಿವೆ, ಗಮನಿಸಿ. ಇಂಗ್ಲಿಷ್‌ನಲ್ಲಿರುವ ಸುಮಾರು 80000 ಪದಗಳು, ಅಂದರೆ ಇಂಗ್ಲಿಷ್‌ನ ಹೆಚ್ಚುಕಮ್ಮಿ ಶೇ.40ರಷ್ಟು ಶಬ್ದಕೋಶದ ಮೂಲವು ಫ್ರೆಂಚ್‌ನಲ್ಲಿದೆ. 11ನೇ ಶತಮಾನದ ಮಧ್ಯಭಾಗದಲ್ಲಿ ಉತ್ತರ ಫ್ರೆಂಚರು ಅಥವಾ ನಾರ್ಮನ್‌ಗಳು ಬ್ರಿಟನ್ನನ್ನು ಗೆದ್ದ ಮೇಲೆ ಆ ಕಾಲದ ಫ್ರೆಂಚ್ ಭಾಷೆಯು ಕುಲೀನ ಇಂಗ್ಲಿಷ್ ಜನರ ಭಾಷೆಯಾಯಿತು.
ಹೊಸ ಶ್ರೀಮಂತ ವರ್ಗವು ತಮ್ಮ ಮೇಲ್ಮೆಯನ್ನು ತೋರಿಸಿಕೊಳ್ಳಲು ಫ್ರೆಂಚ್ ಮಾತನಾಡುತ್ತಿತ್ತು. ಆದರೆ, ಅವರಿಗೆ ಸರಿಯಾಗಿ ಫ್ರೆಂಚ್ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಫ್ರೆಂಚನ್ನೂ ಇಂಗ್ಲಿಷ್ ಭಾಷೆ ಯನ್ನೂ ಮಿಕ್ಸ್ ಮಾಡುತ್ತಿದ್ದರು. ನಂತರ ಅದೇ ಶ್ರೀಮಂತ ಬ್ರಿಟಿಷರ ಭಾಷೆಯಾಯಿತು. ಅದರ ಪರಿಣಾಮವಾಗಿ 16ನೇ ಶತಮಾನದಲ್ಲಿ ಶೇಕ್ಸ್‌ಪಿಯರ್ ಹುಟ್ಟಿದ. ಇಂದು ಇಂಗ್ಲಿಷ್ ಓದುವವರಿಗೆ ಶೇಕ್ಸ್‌ಪಿಯರ್ ಏಕೆ ಕಷ್ಟ ಅಂದರೆ, ಅವನು ಆ ಕಾಲದಲ್ಲಿ ಶ್ರೀಮಂತ ಬ್ರಿಟಿಷರು ಆಡುತ್ತಿದ್ದ ಫ್ರೆಂಚ್ ಮಿಶ್ರಿತ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ.
ಇಂಗ್ಲಿಷರ ಜತೆಗೆ ಫ್ರೆಂಚರು ಪೈಪೋಟಿಗಿಳಿಯಲು ಹೋಗಲಿಲ್ಲ, ಏಕೆಂದರೆ ಇಂಗ್ಲಿಷೇ ಫ್ರೆಂಚ್ ನ ಅಪಭ್ರಂಶವಾಗಿತ್ತು. ಇಂದಿಗೂ ಇಂಗ್ಲಿಷ್ ಭಾಷೆಗೆ ಭಾಷಾ ಶುದ್ಧತೆಯ ಬಗ್ಗೆ ಅಸೀಮ ನಿರ್ಲಕ್ಷ್ಯವಿದೆ. ಗ್ರಾಮರ್ ಬಗ್ಗೆ ಇಂಗ್ಲಿಷ್ ಭಾಷೆ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಇಂಗ್ಲಿಷ್ ಅತ್ಯಂತ ಪ್ರಜಾ ಸತ್ತಾತ್ಮಕ ಭಾಷೆಯಾಗಿದೆ. ಇಂಥ ನಿರ್ಲಕ್ಷ್ಯದಿಂದಾಗಿಯೇ ಅದು ಎಲ್ಲಿ ಬೇಕಾದರೂ ಅಡ್ಜೆಸ್ಟ್ ಆಗಬಲ್ಲ ಭಾಷೆಯಾಗಿ ಹೊರಹೊಮ್ಮಿದೆ. ಅಯ್ಯೋ ಎನ್ನಲು ಫ್ರೆಂಚರು ವೊಯ್ಲಾ ಎನ್ನುತ್ತಾರೆ. ಇಂಗ್ಲಿಷರು ಅಯ್ಯೋ ಎನ್ನುವುದಕ್ಕೆ ಏನು ಬೇಕಾದರೂ ಹೇಳುತ್ತಾರೆ!
ಇತ್ತೀಚೆಗೆ ನಾನು ಓದುತ್ತಿದ್ದ ‘ಹೌ ದ ವರ್ಲ್ಡ್ ಮೇಡ್ ದಿ ವೆಸ್ಟ್: ಎ 4000 ಇಯರ್ ಹಿಸ್ಟರಿ’ ಪುಸ್ತಕ ದಿಂದ ಹೆಕ್ಕಿಟ್ಟುಕೊಂಡಿದ್ದ ಕೆಲ ತುಣುಕುಗಳು ಇಲ್ಲಿವೆ. ಈ ಕೃತಿಯ ಲೇಖಕ ಜೋಸೆಫಿನ್ ಕ್ವಿನ್. ಜಗತ್ತಿನಲ್ಲಿ ಅತ್ಯಂತ ಜಾತ್ಯತೀತ ಎಂದು ಕರೆಯಬಹುದಾದ ಭಾಷೆ ಜನಿಸಿದ್ದು ಪುರಾತನ ಈಜಿಪ್ಟ್ ನಲ್ಲಿ. ಹೀಗಾಗಿ ನಮಗಿಂದು ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಅರ್ಥ ನೀಡುವ ಒಂದೇ ರೀತಿಯ ಪದಗಳೇನಾದರೂ ಕಾಣಿಸಿದರೆ ಅವುಗಳ ಮೂಲ ಈಜಿಪ್ಷಿಯನ್ ಭಾಷೆಯಲ್ಲಿರುತ್ತದೆ.
ಈಜಿಪ್ಷಿಯನ್ ಭಾಷೆಯಲ್ಲಿ ಇಂಗ್ಲಿಷ್‌ನ ‘ಎ’ ಅಕ್ಷರ ಗೂಳಿಯ ತಲೆಯನ್ನು ಹೋಲುತ್ತದೆ. ಅಲ್ಲಿ ಅಲೆಪ್ ಅಂದರೆ ಗೂಳಿ. ಇಂಗ್ಲಿಷ್‌ನ ‘ಬಿ’ ಅಕ್ಷರ ಈಜಿಪ್ಷಿಯನ್‌ನಲ್ಲಿ ಮನೆಯನ್ನು ಹೋಲುತ್ತದೆ. ಮನೆಗೆ ಅಲ್ಲಿ ಬಾಯಿತ್ ಎನ್ನುತ್ತಾರೆ. ಇಂಗ್ಲಿಷ್‌ನ ‘ಡಿ’ ಅಕ್ಷರ ಈಜಿಪ್ಷಿಯನ್ ಭಾಷೆಯಲ್ಲಿ ಬಾಗಿಲು ಎಂಬರ್ಥದಲ್ಲಿ (ಡೇಲೆಟ್) ಬಳಕೆಯಾಗುತ್ತದೆ. ಇಂಥ ಸಾಕಷ್ಟು ಉದಾಹರಣೆಗಳಿವೆ.
ಲೆಬನಾನ್‌ನ ವ್ಯಾಪಾರಿಗಳು ಈಜಿಪ್ಟ್‌ನ ಲಿಪಿಯನ್ನು ಕ್ರಿಸ್ತಪೂರ್ವ 750ರಲ್ಲಿ ಗ್ರೀಸ್‌ಗೆ ತಂದರು. ಯುರೋಪಿಯನ್ನರಿಗೆ ತುಂಬಾ ಉತ್ಸಾಹವಿದೆ, ಆದರೆ ಅವರ ತಲೆಯಲ್ಲಿ ಹೆಚ್ಚು ಬುದ್ಧಿಯಿಲ್ಲ ಎಂದು ಅರಿಸ್ಟಾಟಲ್ ಹೇಳುತ್ತಿದ್ದ. ಅದೇ ರೀತಿ, ಏಷ್ಯನ್ನರ ತಲೆಯಲ್ಲಿ ಅಪಾರ ಬುದ್ಧಿವಂತಿಕೆಯಿದೆ, ಆದರೆ ಅವರಿಗೆ ಉತ್ಸಾಹವಿಲ್ಲ ಎಂದೂ ಹೇಳುತ್ತಿದ್ದ.
ಯುರೋಪಿಯನ್ ನಾಗರಿಕತೆಯ ಮೊದಲ ಶಿಕ್ಷಕ ಎಂದು ಅರಿಸ್ಟಾಟಲ್‌ನನ್ನು ಗುರುತಿಸಲಾಗುತ್ತದೆ. ಅವನ ಪ್ರಭಾವ ಅರೇಬಿಯನ್ ಮತ್ತು ಪರ್ಷಿಯನ್ ತತ್ವಶಾಸ್ತ್ರದ ಮೇಲೂ ಸಾಕಷ್ಟಾಗಿದೆ. ಅರೇ ಬಿಕ್ ನಲ್ಲಿ ಅರಿಸ್ಟಾಟಲ್‌ನನ್ನು ಅರಿಸ್ತು ಎಂದು ಕರೆಯುತ್ತಾರೆ. ಅವನಿಂದು ಬದುಕಿರಬೇಕಿತ್ತು. ಭಾಷೆ ಎಷ್ಟೆಲ್ಲಾ ಬದಲಾಗಿದೆ, ಆದರೂ ಎಷ್ಟೊಂದು ಕಡಿಮೆ ಬದಲಾವಣೆಯಾಗಿದೆ!
ಪುರಾತನ ಅಥೆನ್ಸ್‌ನ ಪ್ರಜಾಪ್ರಭುತ್ವದಲ್ಲಿ ಏಳರಲ್ಲಿ ಆರು ಮಂದಿ ಸರಕಾರಿ ಅಧಿಕಾರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿದ್ದರು. ಏಳನೆಯ ಹುದ್ದೆಯನ್ನು ಮಿಲಿಟರಿಗೆ ಮೀಸಲಿಡ ಲಾಗಿತ್ತು. ಇಂದೂ ಚುನಾವಣೆಗಳಲ್ಲಿ ಕೆಲವೊಮ್ಮೆ ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಸಂಗ ಗಳು ಬರುತ್ತವೆ. ಆ ಕಾಲದಲ್ಲಿ ಅಥೆನ್ಸ್‌ನ ಮಹಿಳೆಯರು ಮುಖವನ್ನು ಪರದೆಯಿಂದ ಮುಚ್ಚಿ ಕೊಳ್ಳುತ್ತಿದ್ದರು. ಅವರು ಹೊರಗೆ ಪ್ರಯಾಣಿಸಬೇಕು ಅಥವಾ ಹೊರಗೆ ಕೆಲಸ ಮಾಡಬೇಕು ಅಂದರೆ ಮನೆಯ ಗಂಡಸರು ಯಾರಾದರೂ ಜತೆಗಿರಬೇಕಿತ್ತು.
ಈಗಿನ ತಾಲಿಬಾನ್ ಸರಕಾರವೊಮ್ಮೆ ಇಸ್ಲಾಮಿಕ್-ಪೂರ್ವ ಇತಿಹಾಸವನ್ನು ಅಧ್ಯಯನ ಮಾಡ ಬೇಕು! ಇದಕ್ಕೆ ವ್ಯತಿರಿಕ್ತವಾಗಿ ಪರ್ಷಿಯಾದ ಮಹಿಳೆಯರು ಆ ಕಾಲದಲ್ಲೇ ಉದ್ದಿಮೆಗಳನ್ನು ನಡೆಸು ತ್ತಿದ್ದರು. ಆಸ್ತಿಗಳನ್ನು ಹೊಂದುತ್ತಿದ್ದರು. ಅಂಗಡಿಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ಹೊರಗೆಲ್ಲ ಮುಕ್ತವಾಗಿ ಸಂಚರಿಸುತ್ತಿದ್ದರು.
ಭಾಷೆಯನ್ನು ಎಷ್ಟೆಲ್ಲಾ ಅದ್ಭುತವಾಗಿ ಬಳಸಬಹುದು ನೋಡಿ. ಅಮೆರಿಕದ ರಿಪಬ್ಲಿಕನ್ ಪಕ್ಷದ ರಾಜಕಾರಣಿ ಜಾನ್ ವಾರ್ನರ್. ಆತ ವರ್ಜೀನಿಯಾದಿಂದ ಸತತ 5 ಬಾರಿ ಸೆನೆಟ್‌ಗೆ ಆಯ್ಕೆಯಾಗಿದ್ದ ರೂ ಯಾವತ್ತೂ ಪ್ರಸಿದ್ಧ ವ್ಯಕ್ತಿಯಾಗಿರಲಿಲ್ಲ. ಆದರೆ 1976ರಲ್ಲಿ ಹಾಲಿವುಡ್ ನಟಿ ಎಲಿಜಬೆತ್ ಟೇಲರ್‌ಳನ್ನು ಮದುವೆಯಾದಾಗ ಅವನು ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟ.
ಹಾಲಿವುಡ್ ಬಗ್ಗೆ ತಿಳಿದುಕೊಂಡವರಿಗೆ ಎಲಿಜಬೆತ್ ಟೇಲರ್‌ಗೆ ಅವನೊಬ್ಬನೇ ಗಂಡ ಅಲ್ಲ ವೆಂಬುದು ಗೊತ್ತಿರುತ್ತದೆ. ಸುಂಟರಗಾಳಿಯಂಥ ವ್ಯಕ್ತಿತ್ವದ ಎಲಿಜಬೆತ್ ಗಂಡನನ್ನು ಪದೇಪದೆ ಬದಲಿಸುತ್ತಿದ್ದಳು. ಎಷ್ಟು ಅಂದರೆ, ಕೆಲವೊಮ್ಮೆ ಈ ಹಿಂದೆ ಮದುವೆಯಾದವನನ್ನೇ ಇನ್ನೊಮ್ಮೆ ಮದುವೆಯಾಗುತ್ತಿದ್ದಳು. ರಿಚರ್ಡ್ ಬರ್ಟನ್‌ನನ್ನು ಅವಳು ಎರಡು ಬಾರಿ ಮದುವೆಯಾಗಿದ್ದಳು. ಅವಳಿಗೆ ಜಾನ್ ವಾರ್ನರ್ ಆರನೇ ಗಂಡನಾಗಿದ್ದ.
ಅವನ ಜತೆಗೆ ಎಲಿಜಬೆತ್ ಆರು ವರ್ಷ ಸಂಸಾರ ಮಾಡಿದ್ದಳು. ಅವರ ಮದುವೆ ಮುರಿದುಬಿದ್ದ ಮೇಲೆ ಜಾನ್ ವಾರ್ನರ್‌ನ ಎದುರಾಳಿಯೊಬ್ಬ ತನ್ನ ಚುನಾವಣಾ ಭಾಷಣದಲ್ಲಿ ‘ವರ್ಜೀನಿಯಾದ ಜನರು ದೇಶದ ಮೂರು ಅತಿದೊಡ್ಡ ಬೂಬ್ಸ್ ಆಯ್ಕೆ ಮಾಡಿದ್ದರು’ ಎಂದು ಹೇಳಿದ್ದ! ಬೂಬ್ ಎಂಬುದಕ್ಕೆ ಇಂಗ್ಲಿಷ್‌ನಲ್ಲಿ ಸ್ತನ ಮತ್ತು ಮೂರ್ಖ ಎಂಬ ಎರಡು ಅರ್ಥಗಳಿವೆ!
(ಲೇಖಕರು ಹಿರಿಯ ಪತ್ರಕರ್ತರು)