ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಮಗ ಎಲ್ಲಾ ಬಿಟ್ಟ, ಭಂಗಿ ನೆಟ್ಟ ಎಂಬಂತೆ ಆಗಬಾರದಲ್ಲವೇ ?!

ತಾವು ಸಿನಿಮಾದವರು ಅನ್ನೋದೂ ಬಹುಶಃ ಇಷ್ಟೊತ್ತಿಗೆ ಅವರಿಗೆಲ್ಲ ಮರೆತು ಹೋಗಿರಬಹುದು. ಹಿಂದೆಲ್ಲ ಒಬ್ಬ ನಟ ಇನ್ನೊಬ್ಬ ನಟನನ್ನು ಭೇಟಿ ಮಾಡಿದರೆ, ಯಾವ ಸಿನಿಮಾ ಮಾಡ್ತಿದೀಯ ಅಂತ ಕೇಳ್ಕೋತಾ ಇದ್ದವ್ರು, ಈಗ ಯಾವ ಲೀಗ್ ಆಡ್ತಾ ಇದೀಯ? ಅಂತ ಕ್ರಿಕೆಟ್ ಬಗ್ಗೆ ಮಾತಾಡಿ ಕೊಳ್ಳೋಷ್ಟು ಕ್ರಿಕೆಟಿನ ದಾಸರಾಗಿ ಹೋಗಿದ್ದಾರೆ.

ಮಗ ಎಲ್ಲಾ ಬಿಟ್ಟ, ಭಂಗಿ ನೆಟ್ಟ ಎಂಬಂತೆ ಆಗಬಾರದಲ್ಲವೇ ?!

ಪದಸಾಗರ

ನಮ್ಮ.. ಅಂದ್ರೆ ಕನ್ನಡ ಸಿನಿಮಾ ನಟ-ನಟಿಯರು ತಂತ್ರಜ್ಞರು ಈಗ ತುಂಬ ಬ್ಯುಸಿ. ಅವ್ರಿಗೆ ಕೈ ತುಂಬ ಕೆಲಸ. ದಿನ ಬೆಳಗಾದ್ರೆ ಪಾಪ ಕ್ರಿಕೆಟ್ ನೆಟ್ಸ್‌ಗೆ ಹೋಗಬೇಕು, ಕ್ರಿಕೆಟ್‌ಗೋಸ್ಕರ ಫಿಟ್ನೆಸ್ ವರ್ಕೌಟ್ ಮಾಡಬೇಕು. ಇದರ ಮಧ್ಯ ಬ್ಯಾಡ್ಮಿಂಟನ್ ಬೇರೆ ಪ್ರಾಕ್ಟಿಸ್ ಮಾಡಬೇಕು. ತಿಂಗಳಿಗೊಂದು ಟೂರ್ನ ಮೆಂಟ್, ಪ್ರೀಮಿಯರ್ ಲೀಗ್ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಅಬ್ಬಾ ನಮ್ಮ ಪ್ರೊಫೆಷನಲ್ ಕ್ರಿಕೆಟರ್ಸ್ ಕೂಡ ಇವರಷ್ಟು ಆಟದಲ್ಲಿ ಮುಳುಗಿಲ್ಲ.

ತಾವು ಸಿನಿಮಾದವರು ಅನ್ನೋದೂ ಬಹುಶಃ ಇಷ್ಟೊತ್ತಿಗೆ ಅವರಿಗೆಲ್ಲ ಮರೆತು ಹೋಗಿರಬಹುದು. ಹಿಂದೆಲ್ಲ ಒಬ್ಬ ನಟ ಇನ್ನೊಬ್ಬ ನಟನನ್ನು ಭೇಟಿ ಮಾಡಿದರೆ, ಯಾವ ಸಿನಿಮಾ ಮಾಡ್ತಿದೀಯ ಅಂತ ಕೇಳ್ಕೋತಾ ಇದ್ದವ್ರು, ಈಗ ಯಾವ ಲೀಗ್ ಆಡ್ತಾ ಇದೀಯ? ಅಂತ ಕ್ರಿಕೆಟ್ ಬಗ್ಗೆ ಮಾತಾಡಿ ಕೊಳ್ಳೋಷ್ಟು ಕ್ರಿಕೆಟಿನ ದಾಸರಾಗಿ ಹೋಗಿದ್ದಾರೆ.

ಸೀರಿಯಸ್ಲೀ.. ಕನ್ನಡ ಚಿತ್ರರಂಗದ ಮಂದಿಗೆ ಇದ್ಯಾವ ವ್ಯಸನ ಅಂಟಿಕೊಂಡುಬಿಡ್ತು? ಯಾಕಪ್ಪಾ.. ಸಿನಿಮಾದವರು ಕ್ರಿಕೆಟ್ ಆಡಬಾರದಾ ಅಂತ ನೀವು ಕೇಳಬಹುದು. ಆಡ್ಲಿ. ಅಪರೂಪಕ್ಕೊಮ್ಮೆ ಆಡಿದ್ರೆ ಚೆಂದ. ವರ್ಷಕ್ಕೊಮ್ಮೆ ಕ್ರಿಕೆಟ್ ಅಥವಾ ಇನ್ಯಾವುದೋ ಆಟದ ನೆಪದಲ್ಲಿ ಇಂಡಸ್ಟ್ರಿ ಒಟ್ಟುಗೂಡಿದರೆ ಅದು ಸ್ವಾಗತಾರ್ಹವೇ. ‌

ಇದನ್ನೂ ಓದಿ: Naveen Sagar Column: ಇದು ಅಣ್ಣಾವ್ರು ಹಾಡಿದ್ದ ಪ್ರೇಮ ಕಾಶ್ಮೀರವಲ್ಲ...ರಕ್ತ ಕಾಶ್ಮೀರ!

ಸಿನಿಮಾದವರಿಗೆ ಕ್ರಿಕೆಟ್ಟೂ ಬರತ್ತೆ ಅಂದ್ರೆ ಅದು ಖುಷಿಪಡೋ ವಿಷಯಾನೇ. ಆದರೆ ಕ್ರಿಕೆಟನ್ನೇ ಫುಲ್ ಟೈಮ್ ಮಾಡಿಕೊಂಡು ಬಿಡೋದಂದ್ರೆ? ಓಕೆ ಇವರು ಇಲ್ಲಿ ಕ್ರಿಕೆಟ್ ಆಡಿ ರಾಜ್ಯ ತಂಡಕ್ಕೋ, ರಾಷ್ಟ್ರೀಯ ತಂಡಕ್ಕೋ ಹೋಗ್ತಾರಾ? ಪ್ರೊಫೆಷನಲ್ ಕ್ರಿಕೆಟಿಗರಾಗ್ತಾರಾ? ಇಲ್ಲ. ಯಾವ ಪುರುಷಾ ರ್ಥಕ್ಕಾಗಿ ನಮ್ಮ ಸಿನಿಮಾ ಇಂಡಸ್ಟಿ ಕ್ರಿಕೆಟನ್ನು ಇಷ್ಟು ಸೀರಿಯಸ್ಸಾಗಿ ತಗೊಂಡಿದೆ? ದಶಕಗಳ ಹಿಂದೆ ಹಿರಿಯನಟ ವಿಷ್ಣುವರ್ಧನ್ ಸ್ನೇಹ ಸೌಹಾರ್ಧಕ್ಕಾಗಿ ‘ಸ್ನೇಹಲೋಕ’ ಅಂತ ಒಂದು ಕ್ರಿಕೆಟ್ ತಂಡ ಕಟ್ಟಿದ್ರು. ಭಾನುವಾರ ಅಂದ್ರೆ ಅದು ಸಿನಿಮಾ ಲೋಕಕ್ಕೆ ರಜಾ ದಿನ.

ಆ ರಜಾದಿನದಂದು ಕ್ರಿಕೆಟ್ ಹೆಸರಲ್ಲಿ ಎಲ್ಲರೂ ಸೇರೋದು ಸ್ನೇಹಲೋಕದ ಉದ್ದೇಶವಾಗಿತ್ತು. ಒಂದೊಳ್ಳೆಯ ಕಾನ್ಸೆ ಅದು. ಅದು ಗುಂಪುಗಾರಿಕೆಗಾಗಿ ಹುಟ್ಟಿಕೊಂಡದ್ದಲ್ಲ. ಬಹಳ ಸೌಹಾರ್ದ ಯುತ ಹಾಗೂ ಎಲ್ಲರಿಗೂ ಮುಕ್ತದ್ವಾರವಿದ್ದ ಸ್ನೇಹಲೋಕ ಅದು. ಅಲ್ಲಿ ಕ್ರಿಕೆಟ್ ಪ್ರೈಮರಿ ಆಗಿರಲಿಲ್ಲ. ಆ ನಂತರದಲ್ಲಿ ‘ರಾಜ್ ಕಪ್’ ಅಂತ ಪ್ರಾರಂಭ ಆಯ್ತು. ಇಡೀ ಇಂಡಸ್ಟಿಯನ್ನು ಒಗ್ಗೂಡಿಸೋ ಪರಿಕಲ್ಪನೆಯಲ್ಲಿ ಹುಟ್ಟಿದ ರಾಜ್ ಕಪ್ ಪ್ರಾರಂಭದಲ್ಲಿ ಸಫಲವೂ ಆಯ್ತು.

ಆದರೆ ಬರ್ತಾ ಬರ್ತಾ ಅಲ್ಲಿ ಕ್ರಿಕೆಟ್ ಕೊಂಚ ಸೀರಿಯಸ್ ಆಯ್ತು. ಸ್ನೇಹಕ್ಕಾಗಿ ಶುರುವಾದ ಕ್ರಿಕೆಟ್‌ನಲ್ಲಿ ಜಿದ್ದು, ಚಿಕ್ಕ ಗುಂಪುಗಾರಿಕೆ, ಸಣ್ಣತನ ಎಲ್ಲವೂ ಹೊರಬರತೊಡಗಿತು. ಗೆಲ್ಲೋದೊಂದೇ ಮೂಲ ಉದ್ದೇಶ ಎಂಬಂತಾಗಿ, ಸ್ನೇಹ-ಸೌಹಾರ್ದ ಮರೆಯಾಗತೊಡಗಿತು. ಕಹಿಘಟನೆಯೂ ನಡೆದು ಹೋಯ್ತು. ಅಲ್ಲಿಂದ ಮುಂದೆ ಶುರುವಾದದ್ದು ಸಿಸಿಎಲ್ ಎಂಬ ಸೆಲೆಬ್ರಿಟಿ ಕ್ರಿಕೆಟ್ ಲೀಗ್. ನಟ ಸುದೀಪ್ ಪರಿಕಲ್ಪನೆಯಲ್ಲಿ ಮೂಡಿದ ಈ ಲೀಗ್ ಇತರ ಭಾಷೆಗಳ ಸಿನಿಮಾ ಇಂಡಸ್ಟಿಯನ್ನೂ ಎಳೆದುಕೊಂಡಿತು.

ಐಪಿಎಲ್‌ನಂತೆ ಈ ಕ್ರಿಕೆಟನ್ನು ರೂಪಿಸಲಾಯ್ತು. ಇಲ್ಲಿಂದ ಕನ್ನಡ ಸಿನಿಮಾರಂಗಕ್ಕೆ ಹತ್ತಿದ್ದು ಕ್ರಿಕೆಟ್ ರೋಗ. ಇವತ್ತು ಟೆಲಿವಿಷನ್ ಪ್ರೀಮಿಯರ್ ಲೀಗ್, ರಾಜ್ ಕಪ್, ಸಿಸಿಎಲ್, ಕೆಸಿಟಿ, ಕ್ವೀನ್ಸ್ ಪ್ರೀಮಿಯರ್ ಲೀಗ್, ಪಟ್ಟಿ ಮಾಡ್ತಾ ಹೋದ್ರೆ ಇನ್ನಷ್ಟು ಸೇರ್ಪಡೆಯಾಗುತ್ತೆ. ತಿಂಗಳಿಡೀ ವರ್ಷವಿಡೀ ಸಿನಿಮಾದವ್ರು ಕ್ರಿಕೆಟ ಬ್ಯುಸಿ. ಯಾವ ನಟನಿಗೆ ಫೋನ್ ಮಾಡಿದ್ರೂ ಶ್ರೀಲಂಕಾ, ಶಾರ್ಜಾ, ದುಬೈ, ಬ್ಯಾಂಕಾಕ್ ಅಂತ ಉತ್ತರ ಬರುತ್ತೆ. ಶೂಟಿಂಗಾ ಅಂತ ಕೇಳಿದ್ರೆ, ಅಲ್ಲ ಕ್ರಿಕೆಟ್ ಅಂತಾರೆ. ಇವರ ಜತೆಗೆ ನಟಿಯರ ದಂಡೂ ಹೋಗಿರುತ್ತೆ. ಆಡೋಕಲ್ಲ, ಚಿಯರ್ ಗರ್ಲ್ಸ್‌ ಥರ ನಲಿಯೋಕೆ, ನುಲಿಯೋಕೆ. ವರ್ಷದಲ್ಲಿ ಆರರಿಂದ ಏಳು ಟೂರ್ನಮೆಂಟ್, ಆರೇಳು ದೇಶ ಅಂದ್ರೆ ಅ ವರ್ಷ ಕಳೆದೋಯ್ತು. ‌

ಇನ್ನು ಸಿನಿಮಾ ಮಾಡೋಕೆ ಟೈಮೆಲ್ಲಿದೆ? ಯಾಕೆ ಸಿನಿಮಾ‌ ಮಂದಿ ಕ್ರಿಕೆಟ್‌ನಲ್ಲಿ ಕಳೆದು ಹೋಗಿ ದ್ದಾರೆ? ಸುದೀಪ್ ಥರದ ನಟರಿಗೆ ವರ್ಷಕ್ಕೊಂದು ಮೂರು ವರ್ಷಕ್ಕೊಂದು ಸಿನಿಮಾ ಮಾಡಿದರೂ ನಡೆಯುತ್ತೆ. ಅಥವಾ ಇನ್ನು ಸಿನಿಮಾನೇ ಮಾಡದೇ ಕ್ರಿಕೆಟ್ ಆಡ್ಕೊಂಡ್ ಇದ್ರೂ ನಡೆಯುತ್ತೆ. ಆದರೆ ಹೊಸ ನಟ-ನಟಿಯರಿಗೆ? ಮೊದಲು ಸಿನಿಮಾದವರಿಗೆ ಮಾತ್ರ ಎಂಟ್ರಿ ಅಂತ ಇದ್ದ ಈ ಕ್ರಿಕೆಟ್‌ನಲ್ಲಿ, ಚೆನ್ನಾಗಿ ಕ್ರಿಕೆಟ್ ಆಡುವವರನ್ನು ಕರೆ ತರಲು ಒಂದೆರಡು ಸಿನಿಮಾಗಳಲ್ಲಿ ಮುಖ ತೋರಿಸುವ ಶಾಸ್ತ್ರ ಮಾಡಿಸಲಾಯ್ತು.

ಅಂದ್ರೆ ಹಿಂಬಾಗಿಲ ಎಂಟ್ರಿ. ಹೆಸರಿಗೆ ಮಾತ್ರ ಸಿನಿಮಾ ನಟರು. ಆದರೆ ಅಸಲಿಗೆ ಕ್ರಿಕೆಟಿಗರು. ಇದರ ಮಧ್ಯೆ, ಹೇಗಾದ್ರೂ ಕ್ರಿಕೆಟಿಗೆ ಸೇರಿಕೊಂಡ್ರೆ ಸುದೀಪ್ ಮತ್ತಿತರರ ಜತೆ ಗುರುತಿಸಿಕೊಳ್ಳೋದ್ರಿಂದ ಸಿನಿಮಾದಲ್ಲಿ ಅವಕಾಶ ಸಿಗಬಹುದು ಎಂಬ ಆಸೆಗೂ ಒಂದಷ್ಟು ನಟರು ಕ್ರಿಕೆಟಿನ ಕಡೆ ಹೊರಳು ವಂತಾಯ್ತು. ಕ್ರಿಕೆಟ್ ಕಡೆ ಹೋಗಿದ್ದರಿಂದ ಅಲ್ಲೋಬ್ಬ ಇಲ್ಲೋಬ್ಬರಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದೇನೋ ಹೌದು.

ಆದರೆ ಅದರಿಂದ ಸಿನಿಮಾಗಾಗಲೀ, ಅವರಿಗಾಗಲೀ ಯಾವ ಲಾಭವೂ ಆಗಲಿಲ್ಲ. ಈಗ ಸಿನಿಮಾ ಹಂಬಲಕ್ಕಿಂತ ಯಾವುದಾದರೂ ಕ್ರಿಕೆಟ್ ಟೀಮಲ್ಲಿ ಜಾಗ ಸಿಕ್ಕರೆ ಸಾಕು ಎಂದು ಹಪಹಪಿಸ್ತಾ ಇದ್ದಾರೆ ಯುವನಟರು. ಕ್ರಿಕೆಟ್ ಮೂಲಕ ಎಲ್ಲ ಲಕ್ಸುರಿ ಸಿಕ್ತಾ ಇರುವಾಗ ಸಿನಿಮಾ ಯಾಕೆ ಬೇಕು? ಇಲ್ಲಿ ಯಾರ‍್ಯಾರೋ ನಟರಾಗ್ತಿದ್ದಾರೆ, ಯಾರ‍್ಯಾರೋ ನಿರ್ದೇಶಕರಾಗ್ತಿದ್ದಾರೆ.

ಸಿನಿಮಾ ಪೋಷಿಸಬೇಕಿರೋವ್ರು ಕ್ರಿಕೆಟ್‌ನಲ್ಲಿ ಮುಳುಗಿ ಹೋಗಿದ್ದಾರೆ. ಕೆಟ್ಟ ಸಿನಿಮಾಗಳ ಸಂಖ್ಯೆ ಏರ್ತಾ ಇದೆ. ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಇಳೀತಾ ಇದೆ. ಚಿತ್ರರಂಗದ ದೊಡ್ಡ ಭಾಗವೊಂದು ಹಣ ಉಳ್ಳವರನ್ನು ಬಳಸಿಕೊಂಡು ಕ್ರಿಕೆಟ್ ಹೆಸರಲ್ಲಿ ಮೋಜು-ಮಸ್ತಿ ನಡೆಸ್ತಾ ಇದೆ. ಇವರಿಗೆ ಸಿನಿಮಾ ದಲ್ಲಿ ಗೆಲ್ಲುವ ಭರವಸೆ, ನಂಬಿಕೆ ಇಲ್ಲ. ಹಾಕಿದ ಹಣ ವಾಪಸ್ ಬರೋ ಖಾತರಿ ಇಲ್ಲ.

ಒಳ್ಳೆಯ ಸಿನಿಮಾ ಮಾಡುವ ಆಸಕ್ತಿಯೂ ಇಲ್ಲ. ಇಡೀ ಚಿತ್ರರಂಗ ಮತ್ತು ಕಿರುತೆರೆ, ಮಾಧ್ಯಮ ಮಂದಿಯನ್ನೂ ಒಳಗೂಡಿಸಿಕೊಂಡು ಕ್ರಿಕೆಟ್-ಬ್ಯಾಡ್ಮಿಂಟನ್ ಇತ್ಯಾದಿಗಳ ಹೆಸರಲ್ಲಿ ಸಿನಿಮಾ ರಂಗವನ್ನು ಮುಗಿಸಿಹಾಕುತ್ತಿದೆ. ಇವರು ಕ್ರಿಕೆಟ್ ಆಡಿ ಏನಾಗಬೇಕಿದೆ. ಯಾವ ದಾಖಲೆಗೆ ಬರುತ್ತೆ ಇವರು ಆಡುವ ಕ್ರಿಕೆಟ್? ಇತ್ತ ಸಿನಿಮಾದಿಂದ ಪೂರ್ತಿಯಾಗಿ ಹೊರಗಾದರೂ ಹೋಗ್ತಾರಾ? ಇಲ್ಲ. ಇವ್ರಿಗೆ ಸಿನಿಮಾದವರು ಅನ್ನೊ ಹಣೆ ಪಟ್ಟಿ ಬೇಕು.

ಸಿನಿಮಾದವರ ಜತೆ ಕ್ರಿಕೆಟ್ ಮೂಲಕ ಗುರುತಿಸಿಕೊಳ್ಳೋ ಹಣ ಉಳ್ಳ ಮಂದಿಗೆ, ಮೋಜು ಮಾಡೋಕೆ ನಟಿಯರು ಸಿಕ್ತಾರೆ. ಇದರ ನಡುವೆ ಯಾರೋ ಬ್ರೈನ್ ವಾಷ್ ಮಾಡಿ ಸಿನಿಮಾಗೂ ಕಾಸು ಹಾಕಿಸ್ತಾರೆ. ಕ್ರಿಕೆಟ್ ಮೋಜು- ಮಸ್ತಿಯ ನಡುವೆ ಹುಟ್ಟಿಕೊಳ್ಳೋ ಈ ಒಡಂಬಡಿಕೆಯಿಂದ ಒಳ್ಳೇ ಸಿನಿಮಾ ಬರುತ್ತಾ? ಖಂಡಿತ ಇಲ್ಲ.

ಸಿನಿಮಾರಂಗ ಸಂಪೂರ್ಣವಾದ ಶ್ರದ್ಧೆ ಮತ್ತು ಶ್ರಮ ಬೇಡುತ್ತೆ. ರಿಷಭ್ ಶೆಟ್ಟಿ, ರಕ್ಷಿತ್, ರಾಜ್ ಶೆಟ್ಟಿ, ಯಶ್ ಮುಂತಾದ ನಟರು ಸಿನಿಮಾ ಬಿಟ್ಟು ಬೇರೆ ಯೋಚಿಸುತ್ತಿಲ್ಲ. ಕನ್ನಡ ಸಿನಿಮಾಗೆ ಬೇಕಿರೋದು ಇಂಥ ಡೆಡಿಕೇಶನ್. ಸೋಲು-ಗೆಲುವು ಸರ್ವೇಸಾಮಾನ್ಯ. ಆದರೆ ಸಿನಿಮಾವನ್ನು ಪಾರ್ಟ್ ಟೈಮ್ ಜಾಬ್ ಮಾಡಿಕೊಂಡವರಿಂದ ಒಳ್ಳೇ ಸಿನಿಮಾ ನಿರೀಕ್ಷಿಸೋಕಾದ್ರೂ ಸಾಧ್ಯವಾ? ನಿಜಕ್ಕೂ ಇವರಿಗೆ ಕ್ರಿಕೆಟ್ ಅಥವಾ ಇನ್ನಿತರ ಆಟಗಳ ಬಗ್ಗೆ ಒಲವಿದ್ದರೆ, ಕನ್ನಡದಲ್ಲಿ ಅತ್ಯುತ್ತಮ ಸ್ಪೋರ್ಟ್ಸ್ ಸಿನಿಮಾಗಳನ್ನು ತಯಾರಿಸುವ ನಿಟ್ಟಿನಲ್ಲಿ ಸ್ಕ್ರಿ ಮಾಡಲಿ, ಕ್ರೀಡಾಪಟುಗಳ ಅದ್ಭುತ ಬಯೋಪಿಕ್ ತಯಾರಾಗಲಿ.

ನಟರಾಗಿ ತಮ್ಮ ಕ್ರೀಡಾ ಒಲವನ್ನು ತೆರೆ ಮೇಲೆ ತೋರಿಸಲಿ. ಅದಿಲ್ಲವಾದಲ್ಲಿ ಸಿನಿಮಾದಿಂದ ಹೊರಗೆ ಹೋಗಿ ಕ್ರಿಕೆಟನ್ನೇ ಪೂರ್ತಿಯಾಗಿ ಸ್ವೀಕರಿಸಲಿ. ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಅಥವಾ ಯಾವುದಾದರೂ ಕ್ರೀಡೆ ಬಗ್ಗೆ ಅದ್ಭುತವಾದ ಸಿನಿಮಾ ಬಂದಿದೆಯಾ ಅಂತ ಇತಿಹಾಸ ಕೆದಕಿದರೆ ಉಹೂಂ.. ಎದೆ ತಟ್ಟಿ ಹೇಳೋಕೆ ಒಂದು ಸಿನಿಮಾ ಕೂಡ ಸಿಗೋದಿಲ್ಲ. ‘ನವತಾರೆ’ ಅಂತೊಂದು ಸಿನಿಮಾ ಬಂದಿತ್ತು.

ಕುಮಾರ್ ಬಂಗಾರಪ್ಪ ಮತ್ತು ನಂಜುಂಡೇಗೌಡರ ಕಾಂಬಿನೇಶನ್ನಲ್ಲಿ. ಕ್ರಿಕೆಟ್ ಬಗ್ಗೆ ಆ ಕಾಲಕ್ಕೆ ಬಂದ ಡೀಸೆಂಟ್ ಸಿನಿಮಾ ಅದು. ಕುಮಾರ್ ಬಂಗಾರಪ್ಪ ಅಂದಿನ ದಿನಗಳಲ್ಲಿ ಸಾಕಷ್ಟು ಭಿನ್ನ ಸಿನಿಮಾಗಳನ್ನು ಮಾಡುವ ತುಡಿತ ಹೊಂದಿದ್ದರು. ಅದರ ಫಲವಾಗಿ ನವತಾರೆ ಸಿನಿಮಾ ಬಂದಿತ್ತು. ಕ್ರಿಕೆಟಿಗರಾದ ಜಿ.ಆರ್.ವಿಶ್ವನಾಥ್, ಕಿರ್ಮಾನಿ ಅದರಲ್ಲಿ ನಟಿಸಿದ್ದರು. ಆ ನಂತರ ಒಂದೇ ಒಂದು ಕ್ರೀಡಾಸಿನಿಮಾ ಬರಲಿಲ್ಲ. ‘ಚೈತ್ರದ ಚಂದ್ರಮ’ದಂಥ ಕಳಪೆ ಸಿನಿಮಾಗಳನ್ನು ಕ್ರಿಕೆಟ್ ಬಗೆಗಿನ ಸಿನಿಮಾ ಅನ್ನೋದೇ ತಪ್ಪು. ಪೈಲ್ವಾನ್, ಮೌರ್ಯ, ಯುವರಾಜ ಇವೆಲ್ಲವೂ ಕುಸ್ತಿ, ಕಿಕ್ ಬಾಕ್ಸಿಂಗ್ ಇತ್ಯಾದಿ ಆಟಗಳನ್ನು ಒಳಗೊಂಡಿದ್ರೂ ಕ್ರೀಡಾಸಿನಿಮಾ ಅನ್ನುವಂತಿರಲಿಲ್ಲ.

ಕಬಡ್ಡಿ ಅಂತೊಂದು ಸಿನಿಮಾ, ಗುರುಶಿಷ್ಯರು ಎಂಬ ಕೊಕ್ಕೋ ಆಟದ ಸಿನಿಮಾ ಹೊರತು ಪಡಿಸಿದರೆ ಕನ್ನಡದಲ್ಲಿ ಕ್ರೀಡಾ ಸಿನಿಮಾಗಳು ಇಲ್ವೇ ಇಲ್ಲ ಅನ್ನಬಹುದು. ಹಿಂದಿ, ತಮಿಳು ಚಿತ್ರರಂಗದಲ್ಲಿ ಅದೆಷ್ಟು ಕ್ರೀಡಾಸಿನಿಮಾಗಳು ಬಂದವು. ಕಮರ್ಷಿಯಲ್ ದೃಷ್ಟಿಯಲ್ಲೂ ಗೆಲ್ಲುವಂತೆ ಕ್ರೀಡಾಪಟುಗಳ ಬಯೋಪಿಕ್ ಸಿನಿಮಾಗಳನ್ನು ನಿರ್ಮಿಸಲಾಯ್ತು.

ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಆತ್ಮಕತೆ ಸಿನಿಮಾ ಆಯ್ತು. ಫರಾನ್ ಅಖ್ತರ್ ನಟನೆಯ ‘ಭಾಗ್ ಮಿಲ್ಕಾ ಭಾಗ್’, ‘ಎಂಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿ’, ಎಂಬತ್ಮೂರರ ವಿಶ್ವಕಪ್ ಗೆಲುವಿನ ಕಹಾನಿ, ಮುತ್ತಯ್ಯ ಮುರಳೀಧರನ್‌ನ ಬಯೋಗ್ರಫಿ ‘800’, ಫೋಗಟ್ ಸೋದರಿಯರ ‘ದಂಗಲ್’, ಕಬೀರ್ ಖಾನ್‌ನ ‘ಚಕ್ ದೇ ಇಂಡಿಯಾ’, ‘ಗೋಲ್ಡ್’, ‘ಸೈನಾ’, ‘ಅಜರ್’ ಎಷ್ಟು ಸಿನಿಮಾಗಳು ಬೇಕು? ಕ್ರಿಕೆಟ್ ಜತೆಗೆ ಸ್ವಾತಂತ್ರ್ಯ ಹೋರಾಟವನ್ನು ಬೆಸೆದ ‘ಲಗಾನ್’ನಂಥ ಕ್ಲಾಸಿಕ್ ಸಿನಿಮಾ ಬರಲಿಲ್ವಾ? ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಮಾಫಿಯಾ ಸುತ್ತ ಹೆಣೆದ ‘ಜನ್ನತ್’ ಎಂಬ ಸಿನಿಮಾ ಮರೆಯ ಲಾದೀತಾ? ‘ಝಂಡ್’, ‘ಚಂದೂ ಚಾಂಪಿಯನ್’, ‘ಘೂಮರ್’ ಎಂಥೆಂಥ ಕ್ರೀಡಾಂಶದ ಸಿನಿಮಾಗಳು. ‌ಕನ್ನಡದವರಿಗೆ ಏನಾಗಿದೆ? ಇವರಿಗೆ ಕಥೆಗಳಿಗೆ ಬರವಾ? ಕನ್ನಡದ ಕ್ರೀಡಾಪಟುಗಳ ಬಯೋಪಿಕ್ ಮಾಡೋ ಆಲೋಚನೆ ಬರೋದಿಲ್ವಾ? ಇಲ್ಲಿನ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಇವರ ಕ್ರೀಡಾ ಬದುಕನ್ನು ಸಿನಿಮಾ ಮಾಡೋಕೆ ಬಾಲಿವುಡ್‌ನವರೇ ಬರಬೇಕಾ? ನಮಗ್ಯಾಕೆ ಹಿತ್ತಲ ಗಿಡ ಮದ್ದಾಗಿ ಕಾಣಿಸೋದಿಲ್ಲ? ಸುನಿಲ್ ಜೋಷಿ, ವಿಜಯ್ ಭಾರದ್ವಾಜ್, ಡೇವಿಡ್ ಜಾನ್ಸನ್ ಇವರೆಲ್ಲರೂ ಇಂಟರೆಸ್ಟಿಂಗ್ ಬದುಕು ಹೊಂದಿರೋ ಕ್ರಿಕೆಟಿಗರೇ.

ಇವರ ಜೀವನಗಾಥೆ ಯಾಕೆ ಸಿನಿಮಾ ಆಗುತ್ತಿಲ್ಲ? ಕೈ ಕಳೆದುಕೊಂಡ ಹೆಣ್ಮಗಳೊಬ್ಬಳು ಕ್ರಿಕೆಟಿನಲ್ಲಿ ಯಶಸ್ವಿಯಾಗುವ ‘ಘೂಮರ್’ ಎಂಬ ಸಿನಿಮಾ ಗೆಲ್ಲಿಸುವ, ಹೊಗಳಿ ಚಪ್ಪರಿಸುವ ನಾವು, ಪೋಲಿಯೋ ಕೈನ ಬೌಲ್ ಮಾಡಿ ಯಶಸ್ವಿಯಾದ ನಮ್ಮದೇ ನೆಲದ ಬಿ.ಎಸ್.ಚಂದ್ರಶೇಖರ್ ಎಂಬ ಸ್ಪಿನ್ ಮಾಂತ್ರಿಕನ ಕಥೆಯನ್ನ್ಯಾಕೆ ಸಿನಿಮಾ ಮಾಡೋ ಬಗ್ಗೆ ಯೋಚಿಸೋದಿಲ್ಲ? ಕರ್ನಾಟಕದ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆಯ ಬಯೋಪಿಕ್ ಮಾಡಲು ನಮಗೆ ಮನಸು ಬರೋದಿಲ್ಲವೇಕೆ? ಕ್ರಿಕೆಟ್ ಅಥವಾ ಕ್ರೀಡಾ ಪ್ರೀತಿಯನ್ನು ಇಂಥ ಟ್ರಿಬ್ಯೂಟ್ ಮೂಲಕ ತೋರಲು ಸಾಧ್ಯವಿಲ್ಲವೇ? ಕನ್ನಡ ಸಿನಿಮಾ ಮಂದಿ ಮನಸು ಮಾಡಿದರೆ ಕ್ರೀಡೆಯನ್ನು ಒಳಗೊಂಡ ಅತ್ಯುತ್ತಮ ಸ್ಕ್ರಿಪ್ಟ್ ರಚಿಸೋದಕ್ಕೆ ಆಗೋದಿಲ್ವಾ? ಮಾತೆತ್ತಿದ್ರೆ ಇಲ್ಲಿನ ಅಂಡರ್‌ವರ್ಲ್ಡ್ ಕ್ರಿಮಿಗಳ, ಕೆಟ್ಟ ವ್ಯಕ್ತಿತ್ವಗಳ ಅತಿರಂಜಿತ ಬಯೋಪಿಕ್‌ಗಳಿಗೆ ಕೈಹಾಕುವ ಸ್ಯಾಂಡಲ್‌ವುಡ್‌ಗೆ, ಉತ್ತಮ ವ್ಯಕ್ತಿತ್ವ‌ ಗಳ ಬಯೋಪಿಕ್ ಮಾಡೋ ತಾಕತ್ತಿಲ್ಲವಾ? ಪ್ಯಾನ್ ಇಂಡಿಯಾ ವ್ಯಾಪ್ತಿಯನ್ನು ಕನ್ನಡದ ಮಾನ ಹರಾಜು ಹಾಕುವಂಥ ಕೆಟ್ಟ ಸಿನಿಮಾ ಮಾಡೋಕೆ ಬಳಸೋ ಬದ್ಲು ದೇಶ ತಿರುಗಿ ನೋಡುವಂಥ ಅದ್ಭುತ ಸಿನಿಮಾಗಳನ್ನು ಮಾಡೋಕೆ ಬಳಸಲು ಸಾಧ್ಯವಿಲ್ವಾ? ಖಂಡಿತ ಇದೆ.

ಆದರೆ ಆ ಇಚ್ಛಾಶಕ್ತಿಯೇ ಇಲ್ಲ. ಆ ಆಲೋಚನೆಗಳೇ ಇಲ್ಲ. ಪರಭಾಷೆಯಲ್ಲಿ ಬಂದ ಚಿತ್ರಗಳನ್ನು ರೀಮೇಕ್ ಮಾಡಿಯಾರು ಅಷ್ಟೆ. ಪರಭಾಷೆಯಲ್ಲಿ ಜೆರ್ಸಿ, ಧೋನಿ, ಲಬ್ಬರ್ ಪಂಡು, ಚೆನ್ನೈ 28 ಹೀಗೆ ಕ್ರಿಕೆಟ್ ಅನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಎಂಥೆಂಥ ಕಥಾವಸ್ತು ಸಿನಿಮಾ ಆಗಿದೆ. ನಮ್ಮವರಿ ಗೇಕೆ ಸಾಧ್ಯ ಇಲ್ಲ? ಮೊದಲು ಈ ಕ್ರಿಕೆಟ್ ಶೋಕಿಯನ್ನು ಬದಿಗಿಟ್ಟು ಶ್ರದ್ಧೆಯಿಂದ ಸಿನಿಮಾಗೆ ತೊಡಗಿಸಿಕೊಳ್ಳಬೇಕು. ಅತ್ಯುತ್ತಮ ಸ್ಕ್ರಿಪ್ಟ್ ಗಳಿಗೆ ಕಿವಿಯಾಗಬೇಕು.

ಅದ್ಭುತ ಕಥೆಗಳನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡಲು ಮುಂದಾಗಬೇಕು. ಕ್ರಿಕೆಟ್ಟಿಗೆ ಹಾಕ್ತಾ ಇರೋ ಶ್ರದ್ಧೆಯ ಹತ್ತು ಪರ್ಸೆಂಟ್ ಶ್ರದ್ಧೆಯನ್ನು ಸಿನಿಮಾಗೆ ಹಾಕಿದರೂ ಕನ್ನಡದಲ್ಲಿ ಅತ್ಯದ್ಭುತ ಸಿನಿಮಾಗಳನ್ನು ಕೊಡಬಹುದು. ರಿಯಾಲಿಟಿ ಶೋಗಳಿಗೆ ಜಡ್ಜ್ ಆಗೋದು, ಕ್ರಿಕೆಟ್ ಆಡೋದು ಇಂಥವುಗಳ ಹೆಚ್ಚು ಸುಖ-ಸೇಫ್ಟಿ ಕಾಣ್ತಾ ಇರೋ ಈ ಮಂದಿ ಸಿನಿಮಾವನ್ನು ರಿಸ್ಕ್ ಥರ ನೋಡ್ತಿ ದಾರೆ. ಹಾಗೊಂದು ವೇಳೆ ಸಿನಿಮಾ ಮಾಡಿದರೂ ಅದನ್ನು ಶ್ರದ್ಧೆಯಿಂದ ಮಾಡ್ತಾ ಇಲ್ಲ.

ತಮ್ಮ ಲಾಭಕ್ಕಾಗಿ ಮಾತ್ರ ಸಿನಿಮಾ ಮಾಡ್ತಿದ್ದಾರೆ. ಕನ್ನಡ ಚಿತ್ರರಂಗ ನಿಜಕ್ಕೂ ‘ಐಸಿಯು’ದಲ್ಲಿದೆ. ಕಳೆದ ನಾಲ್ಕು ತಿಂಗಳಲ್ಲಿ ಸಕ್ಸಸ್ ರೇಟ್ ಒಂದು ಪರ್ಸೆಂಟ್ ಕೂಡ ಇಲ್ಲ. ಒಳ್ಳೇ ಸಿನಿಮಾಗಳು ಬರುತ್ತಿಲ್ಲ. ಸ್ಯಾಂಡಲ್‌ವುಡ್ ಈಗ ಪ್ರೇಕ್ಷಕನ ನಂಬಿಕೆಯನ್ನು ಕಳೆದುಕೊಂಡಿದೆ. ನಡುವೆ ಬರೋ ಬೆಟರ್ ಸಿನಿಮಾಗಳೂ ಇದರಿಂದಾಗಿ ನಷ್ಟ ಅನುಭವಿಸುತ್ತಿವೆ. ಕ್ರಿಕೆಟ್ ಹುಚ್ಚು ಮತ್ತು ಕೆಲವು ಭ್ರಮೆಗಳಿಂದ ಹೊರ ಬಂದು ಇಡೀ ಚಿತ್ರರಂಗ ಒಟ್ಟಾಗಿ ಒಳ್ಳೇ ಸಿನಿಮಾ ಮಾಡೋದಕ್ಕೆ ಶ್ರಮ ಹಾಕದಿದ್ದರೆ, ಇಂಡಸ್ಟಿಗೆ ಉಳಿಗಾಲವಿಲ್ಲ.