Monday, 16th September 2024

ಸಿದ್ದು ಹೇಳ್ತಾರಂತೆ, ಮೋದಿ-ಶಾ ಮಾಡ್ತಾರಂತೆ !

ಮೂರ್ತಿ ಪೂಜೆ

ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯ ಬಿಜೆಪಿಯ ಒಳ ವಲಯಗಳಲ್ಲಿ ಒಂದು ವ್ಯಂಗ್ಯ ಕೇಳುತ್ತಿದೆ. ಮುಂದಿನ ವಿಧಾನಸಭೆಗೆ ಪ್ರತಿ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸುಯೋಗ ಪಕ್ಷದ
ವರಿಷ್ಠರಿಗೆ ಈಗಲೇ ದೊರೆತಿದೆ ಎಂಬುದು ಈ ವ್ಯಂಗ್ಯ.

ಅರ್ಥಾತ್, ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದಿರಲಿ, ಬೇರೆಯವರ ಜತೆ ಕೈ ಜೋಡಿಸಿ ಸರಕಾರ ರಚಿಸುವ ಸ್ಥಿತಿಯಲ್ಲೂ ಇರುವು ದಿಲ್ಲ ಎಂಬ ಮನಃಸ್ಥಿತಿ ರಾಜ್ಯ ಬಿಜೆಪಿಯ ಹಲ ನಾಯಕರಲ್ಲಿದೆ. ಅಂದ ಹಾಗೆ ಮೊನ್ನೆ ವಿಧಾನ ಪರಿಷತ್ತಿಗೆ ಚುನಾವಣೆ ನಡೆದ ನಾಲ್ಕು ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದ ಎರಡು ಕ್ಷೇತ್ರಗಳಲ್ಲಿ ಗೆದ್ದ ಬಸವರಾಜ ಹೊರಟ್ಟಿ ಮತ್ತು ಹಣಮಂತ ನಿರಾಣಿ ಗೆಲುವಿಗಾಗಿ ಬಿಜೆಪಿ ಕೆಲಸ ಮಾಡಿದರೂ ಅವರ ಗೆಲುವಿಗೆ ಬಿಜೆಪಿಯ ವರ್ಚಸ್ಸು ಮುಖ್ಯ ಕಾರಣವಲ್ಲ, ಬದಲಿಗೆ ಅವರಿಗೇ ಇದ್ದ ವೈಯಕ್ತಿಕ ಬಲ ಕಾರಣ.

ಉಳಿದಂತೆ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಬಿಜೆಪಿಯ ರವಿಶಂಕರ್ ಮತ್ತು ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ  ಸೋಲು ಅನುಭವಿಸಿದ ಅರುಣ್ ಶಹಾಪುರ್ ಅವರು ಹೇಳಿ ಕೇಳಿ ಸಂಘ ಪರಿವಾರಕ್ಕೆ ಅತ್ಯಂತ ಆಪ್ತರು. ಹೀಗಾಗಿ ಗೆದ್ದ ಇಬ್ಬರ ಬಗ್ಗೆ ಖುಷಿಪಡುವ ಸ್ಥಿತಿಯಲ್ಲೂ ಬಿಜೆಪಿ ನಾಯಕರಿಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಉಳಿದಿಬ್ಬರ ಸೋಲಿನಲ್ಲಿ ಪಕ್ಷದ ಬಹುತೇಕರ ಕಣ್ಣಿಗೆ ಮುಂದಿನ ವಿಧಾನಸಭೆ ಚುನಾವಣೆಯ ಫಲಿತಾಂಶ ಕಾಣುತ್ತಿದೆ. ಇದೇ ಕಾರಣಕ್ಕಾಗಿ ಇವರು, ಮುಂದಿನ ವಿಧಾನಸಭೆಯ ಪ್ರತಿಪಕ್ಷ ನಾಯಕ ಯಾರು? ಎಂದು ಈಗಲೇ ಆಯ್ಕೆ ಮಾಡುವ ಸುಯೋಗ ಮೋದಿ-ಅಮಿತ್ ಶಾ ಅವರಿಗೆ ಸಿಕ್ಕಿದೆ ಎನ್ನತೊಡಗಿದ್ದಾರೆ.
***

ಅಂದ ಹಾಗೆ ಇಂತಹ ಫಲಿತಾಂಶ ಹೊರಬಂದ ನಂತರ ರಾಜ್ಯ ಬಿಜೆಪಿಯ ಬಹುತೇಕ ನಾಯಕರಿಗೆ ಮತ್ತು ಶಾಸಕರಿಗೆ ಯಡಿಯೂರಪ್ಪ ಅನುಪಸ್ಥಿತಿ ಕಾಡತೊಡಗಿದೆ. ಒಂದು ವೇಳೆ ಇವತ್ತು ಯಡಿಯೂರಪ್ಪ ಅವರೇ ಸಿಎಂ ಸ್ಥಾನದಲ್ಲಿದ್ದಿದ್ದರೆ ವಿಧಾನಪರಿಷತ್ತಿನ ನಾಲ್ಕು ಸ್ಥಾನ ಗಳಲ್ಲೂ ಬಿಜೆಪಿ ಕ್ಯಾಂಡಿ ಡೇಟುಗಳು ಗೆಲ್ಲುತ್ತಿದ್ದರು ಎಂಬುದು ಇವರ ವಾದ. ಯಾಕೆಂದರೆ ಕರ್ನಾಟಕದ ರಾಜಕಾರಣದಲ್ಲಿ ಯಡಿಯೂರಪ್ಪ ಅವರಂತಹ ಎಲೆಕ್ಷನ್ ಸ್ಪೆಷಲಿಸ್ಟ್ ನಾಯಕರೇ ಇಲ್ಲ.

ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಪಲ್ಲಟಗಳಾದ ನಂತರ ದೇವರಾಜ ಅರಸು, ರಾಮ ಕೃಷ್ಣ ಹೆಗಡೆ, ದೇವೇಗೌಡ… ಹೀಗೆ ಯಾರೇ ನಾಯಕರಿರಲಿ, ಉಪಚುನಾವಣೆ ಬಗ್ಗೆ ಚಿಂತಿತರಾಗುತ್ತಿದ್ದರು. ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದರೆ ಪರವಾಗಿಲ್ಲ, ಸೋತರೆ ಅದು ಸರಕಾರದ ವರ್ಚಸ್ಸಿಗೆ ಹೊಡೆತ ಕೊಡುತ್ತದೆ ಅಂತ ಯೋಚಿಸುತ್ತಿದ್ದರು. ಆದರೆ ಉಪಚುನಾವಣೆ ಎಂದರೆ ಸ್ವಲ್ಪವೂ ಚಿಂತಿಸದ ನಾಯಕ ಕರ್ನಾಟಕದಲ್ಲಿದ್ದರೆ ಅದು ಒನ್ ಅಂಡ್ ಓನ್ಲಿ ಯಡಿಯೂರಪ್ಪ.

2008 ಹಾಗೂ 2019ರಲ್ಲೂ ಯಡಿಯೂರಪ್ಪ ಡಜನ್ನುಗಟ್ಟಲೆ ಉಪಚುನಾವಣೆ ಎದುರಿಸಿದರು. ಬಹುತೇಕ ಕಡೆ ಪಕ್ಷದ ಅಭ್ಯರ್ಥಿಗಳ ದಡ ದಾಟಿಸಿದ್ದರು. ಆದರೆ, ಬೊಮ್ಮಾಯಿ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪಕ್ಷ ಹಿಗ್ಗುವಂತೆ ಮಾಡಲಿಲ್ಲ. ಅಷ್ಟೇ ಏಕೆ? ಅವರು ಸಿಎಂ ಆದ ನಂತರ ಮೇಲ್ಮನೆ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಕೂಡ ಕಮಲ ಪಾಳೆಯದ ಚಿಗುರು ಚಿವುಟಿ ಸಮಬಲ ಸಾಧಿಸಿತು. ಇನ್ನು ಐವತ್ತೆಂಟು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ, ಈಗ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೊಮ್ಮಾಯಿ ಬಲದಿಂದ ನಾವು ಗೆzವು ಎಂದು ಹೇಳಿಕೊಳ್ಳಲು ಒಬ್ಬರೂ ಇಲ್ಲ.

ಹೀಗೆ ಬೊಮ್ಮಾಯಿ ಅಽಕಾರಕ್ಕೆ ಬಂದ ನಂತರದ ಚುನಾವಣೆಗಳ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ ಅವರು ಬಿಜೆಪಿಯನ್ನು ಗೆಲುವಿನ ದಡ ಸೇರಿಸುತ್ತಾರೆ ಎಂಬುದು ಸುಳ್ಳು. ಅಬ್ಬಬ್ಬ ಎಂದರೆ ರಾಜ್ಯ ರಾಜಕಾರಣದಲ್ಲಿ ಒಂದು ಉಪಮೆ ಹುಟ್ಟಬಹುದು. ಅಂದ ಹಾಗೆ ಸಾರೆಕೊಪ್ಪ ಬಂಗಾರಪ್ಪ ಅವರಿಗೆ ಸೋಲಿಲ್ಲದ ಸರದಾರ ಎಂಬ ಬಿರುದು ಇತ್ತು. ಮುಂದಿನ ಚುನಾವಣೆಯ ನಂತರ ಬೊಮ್ಮಾಯಿ ಅವರಿಗೆ ಗೆಲುವಿಲ್ಲದ ಸರದಾರ ಎಂಬ ಬಿರುದು ದಕ್ಕಬಹುದು ಎಂಬುದು ಬಿಜೆಪಿಯ ಒಳವಲಯಗಳ ಮಾತು. ಈ ಮಾತು ಬೊಮ್ಮಾಯಿಯವರ ಅಶಕ್ತಿಯನ್ನು ಮಾತ್ರವಲ್ಲ, ಯಡಿಯೂರಪ್ಪ ಅವರಿದ್ದಿದ್ದರೆ ಪಕ್ಷಕ್ಕೆ ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ ಎಂಬ ಹಳಹಳಿಕೆಯೂ ಹೌದು.

***
ಕುತೂಹಲದ ಸಂಗತಿ ಎಂದರೆ ಕರ್ನಾಟಕದ ಕಮಲ ಪಾಳೆಯದಲ್ಲಿ ಇಂತಹ ನಿರಾಸೆಯ ಕಾರ್ಮೋಡ ಕವಿಯುತ್ತಿದ್ದರೂ ಪಕ್ಷದಲ್ಲಿರುವ ಒಂದು ಗುಂಪು ಮಾತ್ರ ಮೋದಿ-ಅಮಿತ್ ಶಾ ಜೋಡಿ ಏನೋ ಮ್ಯಾಜಿಕ್ ಮಾಡಲಿದೆ. ಕಾದು ನೋಡಿ ಎನ್ನುತ್ತಿದೆ. ಅದರ ಪ್ರಕಾರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಬಿಜೆಪಿ ಶಾಸಕರ ಪೈಕಿ ಕನಿಷ್ಠ ಐವತ್ತು ಮಂದಿಗೆ ಪಕ್ಷದ ಟಿಕೆಟ್ ಸಿಗುವುದಿಲ್ಲ.

ಕೆಲವು ನಿರ್ದಿಷ್ಟ ಕೇಸುಗಳನ್ನು ಹೊರತುಪಡಿಸಿ, ಉಳಿದಂತೆ ಎರಡು ಬಾರಿ ಆಯ್ಕೆಯಾದರೂ ಡೆಡ್ ಕೇಸುಗಳಂತಿರುವವರಿಗೆ ಈ ಬಾರಿ ಗೇಟ್ ಪಾಸ್ ಸಿಗುವುದು ನಿಶ್ಚಿತ ಎನ್ನಲಾಗುತ್ತಿದೆ. ವಸ್ತುಸ್ಥಿತಿ ಎಂದರೆ ಇಂತಹ ಔಟ್ ಡೇಟೆಡ್ ಶಾಸಕರು ಯಾರು? ಅಂತ ಈಗಾಗಲೇ ಪಕ್ಷ ಗುರುತಿಸಿದೆಯಷ್ಟೇ ಅಲ್ಲ, ಅಂತಹ ಶಾಸಕರ ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳು ಯಾರು ಎಂದು ಗುರುತಿಸಿ ಈಗಿನಿಂದಲೇ
ಕೆಲಸ ಶುರು ಮಾಡಿ ಎಂದೂ ವರಿಷ್ಠರು ಸೂಚನೆ ನೀಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಪ್ರಯೋಗ ಮಾಡಿ ಅದ್ಧೂರಿ ಯಶಸ್ಸುಗಳಿಸಿರುವುದು ಬಿಜೆಪಿಯ ಹೆಗ್ಗಳಿಕೆ. ಹೀಗಾಗಿ ಕರ್ನಾಟಕದಲ್ಲೂ ಉತ್ತರ ಪ್ರದೇಶದ ಮಾದರಿಯಲ್ಲಿ ಚುನಾವಣಾ ಟಿಕೆಟ್ ಹಂಚಲಾಗುತ್ತದೆ ಎಂಬುದು ಈ ಗುಂಪಿನ ಮಾತು. ಹೀಗೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ಅನುಸರಿಸಿದ ಒಂದು ಮಾದರಿಯನ್ನು
ಅನುಸರಿಸುವುದು ಮೋದಿ-ಶಾ ಜೋಡಿ ಲೆಕ್ಕಾಚಾರವಂತೆ.

ಅಂದ ಹಾಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧರ್ಮದ ಅಸ ಬಿಟ್ಟದ್ದಲ್ಲದೆ, ಮೋದಿ ಸಂಪುಟದ ಬಹುತೇಕ ಸಚಿವರು ಪಶ್ಚಿಮ ಬಂಗಾಳಕ್ಕೆ ಹೋಗಿ ಬೀಡು ಬಿಟ್ಟಿದ್ದರು. ಹೀಗೆ ಬೀಡು ಬಿಟ್ಟ ಸಚಿವರು ತಮ್ಮ ತಮ್ಮ ಸಮುದಾಯದ ಪ್ರಮುಖರು, ಧರ್ಮಗುರುಗಳನ್ನು ಒಲಿಸುವ ಪ್ರಯತ್ನ ಮಾಡಿದ್ದರು. ಇಂಥ ಪ್ರಯತ್ನಗಳಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ವಾಗದಿರಬಹುದು. ಆದರೆ, ತೃಣಮೂಲ ಕಾಂಗ್ರೆಸ್ ಆರ್ಭಟದೆದುರು ಸೆಡ್ಡು ಹೊಡೆದು ಪ್ರಮುಖ ಪ್ರತಿಪಕ್ಷವಾಗಿ ಕೂರಲು, ಕಮ್ಯುನಿಸ್ಟರನ್ನು ಆಪೋಶನ ತೆಗೆದುಕೊಳ್ಳಲು ಅದಕ್ಕೆ ಸಾಧ್ಯ ವಾಗಿತ್ತು.

ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದಲ್ಲಿ ಏನೇನೂ ಅಲ್ಲದ ಬಿಜೆಪಿ ಇವತ್ತು ಪ್ರಮುಖ ಪ್ರತಿಪಕ್ಷ. ಅಷ್ಟೇ ಅಲ್ಲ, ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ತಲೆನೋವು ತರುವ ಪ್ರಬಲ ಶಕ್ತಿ. ಹೀಗಾಗಿ ಯಡಿಯೂರಪ್ಪ ನಂತರ ಕರ್ನಾಟಕದಲ್ಲೂ
ಧರ್ಮಾಧಾರಿತ ರಾಜಕಾರಣಕ್ಕೆ ಅಂಟಿಕೊಂಡಿರುವ ಬಿಜೆಪಿ, ಮುಂದಿನ ಚುನಾವಣೆಯಲ್ಲಿ ಯಶಸ್ಸುಗಳಿಸಲು ಬಂಗಾಳದಲ್ಲಿ ಅನುಸರಿಸಿದ ಸೂತ್ರವನ್ನೂ ಅನುಸರಿಸಲಿದೆಯಂತೆ.

ಅಂದ ಹಾಗೆ ಧರ್ಮ ರಾಜಕಾರಣ ದೇಶದ ಇತರ ಭಾಗ ಗಳಲ್ಲಿ ಕೆಲಸ ಮಾಡುವ ರೀತಿಗೂ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೆಲಸ ಮಾಡುವ ರೀತಿಗೂ ವ್ಯತ್ಯಾಸವಿದೆ ಅಂತ ರಾಜ್ಯ ಬಿಜೆಪಿಯ ಕೆಲ ನಾಯಕರು ಹೇಳುತ್ತಿದ್ದರೂ, ಅದನ್ನು ಕೇಳಿಸಿ ಕೊಳ್ಳುವ ಸ್ಥಿತಿಯಲ್ಲಿ ಮೋದಿ-ಅಮಿತ್ ಶಾ ಜೋಡಿ ಇಲ್ಲ. ಅವರು ಹೇಳಿದ್ದನ್ನು ಕೇಳದೆ ಬೊಮ್ಮಾಯಿಗೂ ವಿಧಿಯಿಲ್ಲ.
***

ಅಂದ ಹಾಗೆ ಬಿಜೆಪಿಯ ಅಂತರಂಗದಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳಿಂದ ನಿಜಕ್ಕೂ ತುಂಬ ಖುಷಿಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ. ಇವತ್ತಲ್ಲ, ನಾಳೆ ಅದು ಇಂತಹ ಸ್ಥಿತಿಗೆ ಬರಲಿದೆ ಅಂತ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಬಹಳ ಹಿಂದೆಯೇ ತಮ್ಮ ಪಕ್ಷದ ವರಿಷ್ಠರಿಗೆ ಹೇಳಿದ್ದರಂತೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು, ದಕ್ಷಿಣ ಭಾರತದ ನೆಲೆಯಲ್ಲಿ ಭದ್ರಪಡಿಸಿಕೊಳ್ಳಬೇಕು ಅಂತ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಸರಕಾರ ರಚಿಸಲು ಬೆಂಬಲ ನೀಡಿದ್ದಾರೆ.

ಆದರೆ ಒಂದು ಸಲ ಸರಕಾರ ರಚಿಸಿದ ಮೇಲೆ ಯಡಿಯೂರಪ್ಪ ಅವರಿಗೆ ಕಿರುಕುಳ ನೀಡುತ್ತ, ಕೊನೆಗೊಂದು ದಿನ ಕೆಳಗಿಳಿಸುತ್ತಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ದಿನೇಶ್ ಗುಂಡೂರಾವ್ ಅವರ ಜಾಗಕ್ಕೆ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಅವರನ್ನು ತರಬೇಕು ಎಂದು ಸಿದ್ಧರಾಮಯ್ಯ ವರಿಷ್ಠರಿಗೆ ಹೇಳಿದ್ದರು.

ಆದರೆ ಅವತ್ತು ಸೋನಿಯಾ ಮತ್ತು ಅಹ್ಮದ್ ಪಟೇಲ್ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾ ಗಿಸಿದರು. ರಾಜ್ಯ ಕಾಂಗ್ರೆಸ್‌ನಲ್ಲಿ ಇವತ್ತಿಗೂ ಒಳಜಗಳ ಮುಂದುವರಿದಿದ್ದರೆ ಅದಕ್ಕೆ ಇದೇ ಮುಖ್ಯ ಕಾರಣ. ಅದೇನೇ ಇರಲಿ, ಆದರೆ ಯಡಿಯೂರಪ್ಪ ಅವರ ಪತನದ ನಂತರದ ಬೆಳವಣಿಗೆಗಳು ಸಿದ್ಧರಾಮಯ್ಯ ನುಡಿದ ಭವಿಷ್ಯದಂತೆಯೇ ನಡೆಯುತ್ತಿವೆ. ಅಂದ ಹಾಗೆ
ಲೆಹರ್ ಸಿಂಗ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಅಭಿನಂದಿಸಲು ಹೋಗಿದ್ದರಂತೆ.

ಆ ಸಂದರ್ಭದಲ್ಲಿ ವಿಜಯೇಂದ್ರ ಅವರು ತಮ್ಮ ಆಪ್ತರ ಬಳಿ ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಶಿಕಾರಿಪುರ, ವರುಣಾ, ತುಮಕೂರು ಸೇರಿದಂತೆ ಯಾವ ಕ್ಷೇತ್ರದ ಟಿಕೆಟ್ ಕೊಡಿ, ಸ್ಪರ್ಧಿಸುತ್ತೇನೆ. ಆದರೆ ಅದನ್ನು ಈಗಲೇ ಕನ್ ಫರ್ಮ್ ಮಾಡಿ ಎಂದು ವರಿಷ್ಠರಿಗೆ ಹೇಳಿ ತುಂಬ ದಿನಗಳಾಗಿವೆ. ಆದರೆ ಅವರಿನ್ನೂ ಕನ್ ಫರ್ಮ್ ಮಾಡಿಲ್ಲ’ ಎಂದರಂತೆ. ವಸ್ತುಸ್ಥಿತಿ ಎಂದರೆ ಇದು ಕೂಡ ಸಿದ್ಧ
ರಾಮಯ್ಯ ಅವರು ಬಯಸಿದ ಸ್ಥಿತಿಯೇ. ಹೀಗೆ ಅವರಂದು ಕೊಂಡಂತೆಯೇ ಬಿಜೆಪಿಯಲ್ಲಿ ಎಲ್ಲ ನಡೆಯುತ್ತಿರುವುದರಿಂದ ಅವರ ತಂತ್ರ ಗಾರಿಕೆಗೇ ಹೆಚ್ಚಿನ ಯಶಸ್ಸು ಎಂದರ್ಥ ಅನ್ನುವುದು ಬಿಜೆಪಿಯ ಒಳವಲಯಗಳಲ್ಲಿ ಕೇಳುತ್ತಿರುವ ಮಾತು. ಅವರಲ್ಲಿರುವ ಈ ನಿರಾಸೆ ಯನ್ನು ಹೊಡೆದೋಡಿಸಲು ವರಿಷ್ಠರು ಶಕ್ತರಾಗುತ್ತಾರೆಯೇ? ಎಂಬುದೇ ಈಗಿರುವ ಕುತೂಹಲ.