Monday, 16th September 2024

ರಾಜಕೀಯ ಕನಸುಗಳಿಗೆ ಸಾಹಿತ್ಯ ಪರ್ಯಾಯ

ಅಶ್ವತ್ಥಕಟ್ಟೆ

ranjith.hoskere@gmail.com

ನಾಡು, ನುಡಿಯ ವಿಷಯ ಬಂದಾಗ ಅಥವಾ ಆ ಕ್ಷೇತ್ರಗಳು ಎಲ್ಲವನ್ನು ಮೀರಿರಬೇಕು. ಸಾಹಿತ್ಯದಲ್ಲಿ ‘ಪಂಥ’ಗಳಿರುವುದು ತಪ್ಪಲ್ಲ. ಆದರೆ ಪಂಥಗಳಿಗಾಗಿಯೇ ಸಾಹಿತ್ಯವನ್ನು ಸೃಷ್ಟಿಸುವುದು ಅಥವಾ ವಿವಾದ ಮಾಡುವ ಕಾರಣಕ್ಕಾಗಿಯೇ ಸಾಹಿತ್ಯ ದಲ್ಲಿ ಜಾತಿ, ಧರ್ಮ, ಪಂಥವನ್ನು ಸೇರಿಸುವುದು ಕೆಟ್ಟ ಪರಂಪರೆ. ಕರ್ನಾಟಕದಲ್ಲಿ ಇತ್ತೀಚಿನ ದಿನದಲ್ಲಿ ಈ ರೀತಿ ಸಂಸ್ಕೃತಿ ಸದ್ದಿಲ್ಲದೇ ಆರಂಭವಾಗಿದೆ.

ಹೌದು, ಸಾಹಿತ್ಯದ ಉಗಮದಿಂದಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಸಾಹಿತಿಗಳು ಆಗಿನ ಕಾಲಮಾನದ ವಿಚಾರ ಧಾರೆಗೆ ತಕ್ಕಂತೆ ದಾಖಲಿಸುತ್ತ ಬಂದಿದ್ದಾರೆ. ಕನ್ನಡದ ಮಟ್ಟಿಗೆ ನವ್ಯ ಸಾಹಿತ್ಯದಲ್ಲಿ ‘ಬಂಡಾಯ’, ‘ದಲಿತ’ ಸಾಹಿತ್ಯದ ಮೂಲಕ ವೈದಿಕ ಪರಂಪರೆಯನ್ನು ಅಥವಾ ಹಿಂದಿನ ಸಂಪ್ರ ದಾಯವನ್ನು ವಿರೋಧಿಸುತ್ತ, ಸಮಾನತೆಯನ್ನು ಆಗ್ರಹಿಸುವ ಲಕ್ಷಾಂತರ ಸಾಹಿತ್ಯಗಳು ಬಂದು ಹೋಗಿವೆ. ಅದನ್ನು ತಪ್ಪು ಎನ್ನುವುದಕ್ಕೂ ಸಾಧ್ಯವಿಲ್ಲ.

ಏಕೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಪ್ರಭುತ್ವ ಹೇಳಿದ್ದನ್ನು ಮಾತ್ರ ಒಪ್ಪಬೇಕು’ ಎನ್ನುವ ಕಟ್ಟಲೆಗಳಿಲ್ಲ. ಈ ಕಾರಣಕ್ಕಾಗಿಯೇ ಸಾಹಿತ್ಯದಲ್ಲಿ ಪಂಥಗಳಿದ್ದರೂ, ಈ ಎಲ್ಲ ಪಂಥವನ್ನು ಮೀರಿ ಸಾಹಿತ್ಯ ನಿಲ್ಲುತ್ತದೆ. ಹಾಗೇ ನೋಡಿದರೆ, ನೀವು ಯಾವುದೇ ಸಾಹಿತ್ಯ ಸಮ್ಮೇಳನ, ವಿಚಾರಗೋಷ್ಠಿಗಳನ್ನು ತೆಗೆದುಕೊಂಡರೂ ಎರಡೂ ಕಡೆಯವರಿಗೆ ಅವಕಾಶ ನೀಡಲಾಗುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ವಿಚಾರ ವಿನಿಮಯ’ಕ್ಕೆ ಅವಕಾಶವಿದೆಯೇ ಹೊರತು, ನಾನು ಒಪ್ಪದ ವಿಷಯ ತಪ್ಪು ಎಂದು ತಿರಸ್ಕರಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಇತ್ತೀಚಿನ ದಿನದಲ್ಲಿ ಕೆಲವು ಘಟನಾವಳಿಯನ್ನು ಗಮನಿಸಿದರೆ, ನಾನು ನಂಬಿರುವುದೇ ಪರಮ ಸತ್ಯ ಎನ್ನುವ ಧಾರ್ಷ್ಟ್ಯದಲ್ಲಿ ಅನೇಕರು ನಡೆದುಕೊಳ್ಳು ತ್ತಿದ್ದಾರೆ. ಮೊನ್ನೆ ತಾನೇ ಮುಕ್ತಾಯಗೊಂಡ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ಈ ವಿಷಯಗಳನ್ನು ಪ್ರಸ್ತಾಪಿಸಲಾಯಿತು.

ನಾವು ಹೇಳಿದ್ದ ವಿಷಯ, ವ್ಯಕ್ತಿಗಳೇ ಸರಿ. ಅವರನ್ನಲ್ಲದೇ ಬೇರೆ ಯಾರೇ ಆದರೂ ಅದು ತಪ್ಪು ಎನ್ನುವ ಮನಃಸ್ಥಿತಿ ಎರಡೂ ಕಡೆಯವರಲ್ಲಿಯೂ ಇದ್ದಿದ್ದರಿಂದಲೇ, ಸಾಹಿತ್ಯ ಸಮ್ಮೇಳನದ ಅಂತಿಮ ದಿನ ‘ಪರ್ಯಾಯ ಸಾಹಿತ್ಯ ಸಮ್ಮೇಳನ’ ಬೆಂಗಳೂರಿ ನಲ್ಲಿ ಆಯೋಜನೆಗೊಳ್ಳುವಂತಹ ಪರಿಸ್ಥಿತಿ ಎದುರಾಯಿತು. ಈ ವಿಷಯ ಪ್ರಸ್ತಾಪಿಸುವ ಮೊದಲು, ಸೋಮವಾರವಷ್ಟೇ ಬೆಂಗಳೂರಿನ ಟೌನ್‌ಹಾಲ್ ಮುಂಭಾಗದ ‘ಸಿದ್ದು ನಿಜ ಕನಸು’ ಪುಸ್ತಕಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ನಾಟಕವೇ ನಡೆಯಿತು.

ಅಷ್ಟಕ್ಕೂ ಈ ವಿವಾದಕ್ಕೆ ಕಾರಣವಾಗಿದ್ದು ಏಕೆಂದರೆ ಅಡ್ಡಂಡಾ ಕಾರ್ಯಪ್ಪ ಬರೆದಿರುವ ‘ಟಿಪ್ಪುವಿನ ನಿಜ ಕನಸು’ದ ಮಾದರಿ ಯಲ್ಲಿಯೇ ‘ಸಿದ್ದು ನಿಜ ಕನಸು’ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲು ಕೆಲವರು ಮುಂದಾದರು. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದ್ದರೂ, ಈ ಪುಸ್ತಕದ ಸಿದ್ಧತೆಯಲ್ಲಿರುವ ರೋಹಿತ್ ಚಕ್ರತೀರ್ಥ, ವೃಷಾಂಕ್ ಭಟ್, ಸಂತೋಷ್ ತಮ್ಮಯ್ಯ ಅವರಿರುವುದು ನೋಡಿದರೆ ಇದೊಂದು ಬಿಜೆಪಿಯ ಬೆಂಬಲಿತ ಪುಸ್ತಕ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ಸಿದ್ದರಾಮಯ್ಯ ಅವರು ಮುಸ್ಲಿಂ ಪರ, ಹಿಂದೂ ವಿರೋಧಿ ಎಂದು ಬಿಂಬಿಸುವ ಕಾರಣಕ್ಕಾಗಿಯೇ ಈ ರೀತಿಯ ಪುಸ್ತಕ ಸಜ್ಜಾಗಿದೆ ಎನ್ನುವುದು ಹೆಸರು ಕೇಳುತ್ತಿದ್ದಂತೆ ಸ್ಪಷ್ಟವಾಯಿತು. ಅಡ್ಡಾಂಡ ಕಾರ್ಯಪ್ಪ ಅವರು ಬರೆದಿರುವ ಟಿಪ್ಪುವಿನ
ನಿಜ ಕನಸಿನಲ್ಲಿ, ಇತಿಹಾಸದಲ್ಲಿ ನಡೆದೂ ‘ನಮೂದಾಗದ’ ಘಟನಾವಳಿಯ್ನು ಟಿಪ್ಪುವಿನ ನಿಜ ಕನಸು ನಾಟಕದಲ್ಲಿ ತೆರೆ
ಮೇಲೆ ಹಾಗೂ ಅಕ್ಷರ ರೂಪದಲ್ಲಿ ತಂದಿದ್ದಾರೆ.

ಆದರೆ ಸಿದ್ದರಾಮಯ್ಯ ವಿರುದ್ಧ ಸಿದ್ಧಪಡಿಸಿರುವ ಈ ಪುಸ್ತಕದಲ್ಲಿರುವುದು ‘ಮುಸ್ಲಿಂ ತುಷ್ಟೀಕರಣಕ್ಕೆ ಸಿದ್ದರಾಮಯ್ಯ’ ಮುಂದಾ
ದರೂ ಎನ್ನುವ ಏಕಮೇವ ಅಜೆಂಡಾವಾಗಿದೆ. ಚುನಾವಣಾ ಸಮಯದಲ್ಲಿ ಆರೋಪ- ಪ್ರತ್ಯಾರೋಪಗಳು ಸರ್ವೇ ಸಾಮಾನ್ಯ ಎನ್ನುವುದು ಕೆಲವರ ವಾದವಾದರೂ, ಈ ರೀತಿ ವ್ಯಕ್ತಿಯೊಬ್ಬರನ್ನು ಮುಂದಿಟ್ಟುಕೊಂಡು ‘ತೇಜೋವಧೆ’ ಮಾಡುವುದು ಬಿಜೆಪಿಯಂತಹ ಪಕ್ಷಕ್ಕೆ ಸೂಕ್ತವಾಗಿರುವ ನಡೆಯಲ್ಲ.

ಹಾಗೇ ನೋಡಿದರೆ, ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ನಾಯಕರು ನೀಡಿರುವ ಏಕೈಕ ಗುರಿಯೆಂದರೆ, ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದು ಎನ್ನುವುದು ಬಿಜೆಪಿ ಮೂಲಗಳ ಮಾತಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿಕೊಂಡಿರುವ ರಾಜ್ಯ ಬಿಜೆಪಿ ನಾಯಕರು, ಈ ರೀತಿಯ ಪುಸ್ತಕವನ್ನು ತರಲು ಹೊರಟಿದ್ದಾರೆ. ಆದರೆ ರಾಜಕೀಯ ಕಾರಣಕ್ಕಾಗಿ ಈ ರೀತಿಯ ಪುಸ್ತಕವನ್ನು ರಚಿಸುವುದು, ಅದರಿಂದಾಗುವ ‘ಮತ ಕ್ರೋಡೀಕರಣ’ಕ್ಕೆ ಯೋಜಿಸುವುದು ಕೆಟ್ಟ ಪರಂಪರೆಗೆ ನಾಂದಿ ಹಾಡುವುದರಲ್ಲಿ ಎರಡನೇ ಮಾತಿಲ್ಲ.

ಬಿಜೆಪಿ ಈ ಪುಸ್ತಕದ ಬಗ್ಗೆ ಮಾತನಾಡುತ್ತಿದ್ದಂತೆ, ಕಾಂಗ್ರೆಸಿಗರು ಮೋದಿ ಅವರನ್ನು ಟಾರ್ಗೆಟ್ ಮಾಡಿ ‘ನರಹಂತಕ’ ಎನ್ನುವ ಪುಸ್ತಕಕ್ಕೆ ಸಿದ್ಧತೆ ನಡೆಸಿಕೊಂಡಿದ್ದಾರೆ. ಇದೇ ರೀತಿ ಪುಸ್ತಕಗಳ ಮೂಲಕ ಒಬ್ಬರ ಮೇಲೊಬ್ಬರು, ಆರೋಪ ಮಾಡುವುದೇ ಚುನಾವಣಾ ತಂತ್ರಗಾರಿಕೆ ಎನ್ನುವುದಾದರೆ, ಅಭಿವೃದ್ಧಿ ಅಥವಾ ಜನರಿಗೆ ಬೇಕಾದ ವಿಷಯದ ಬಗ್ಗೆ ಮಾತನಾಡುವುದಾದರೂ ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರಾಜಕೀಯ ಕಾರಣಕ್ಕಾಗಿ ಈ ರೀತಿಯ ‘ಪುಸ್ತಕ ಬಿಡುಗಡೆ’ ಎಷ್ಟು ಕೆಟ್ಟ ಸಂಸ್ಕೃತಿಯೋ, ರಾಜ್ಯದ ಅಸ್ಮಿತೆಯಾಗಿರುವ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ದಂತಹ ಸಮ್ಮೇಳನಗಳು ನಡೆಯುವಾಗ, ಅದಕ್ಕೆ ಪರ್ಯಾಯವಾಗಿ ಸಮ್ಮೇಳನ ನಡೆಸುತ್ತೇವೆ ಎನ್ನುವ ಮನೋಭಾವೂ ಅಷ್ಟೇ ಕೆಟ್ಟ ಸಂಸ್ಕೃತಿ. ರಾಜ್ಯ ಸರಕಾರ, ಸಾಹಿತ್ಯ ಪರಿಷತ್‌ನ ಕಾರ್ಯ ಕಾರಣಿ ಯಾವುದೇ ಇರಲಿ, ಆದರೆ ನಡೆಯುವುದು ಮಾತ್ರ ಕನ್ನಡದ ಸಾಹಿತ್ಯ ಜಾತ್ರೆ ಎನ್ನುವುದನ್ನು ಮರೆಯಬಾರದು.

ಆದರೆ ಈ ಬಾರಿ ಇದಕ್ಕೆ ವಿರುದ್ಧವಾಗಿ, ಪರ್ಯಾಯ ಸಮ್ಮೇಳನ ನಡೆಸುವ ಘೋಷಣೆ ಮಾಡಿದ ಕೆಲವು ‘ಬುದ್ಧಿಜೀವಿ’ಗಳು ಅದಕ್ಕೆ ನೀಡಿದ ಕಾರಣವೂ ‘ಧರ್ಮದ’ ಕಾರಣವಾಗಿತ್ತು. ಮುಸ್ಲಿಂ ಧರ್ಮದವರಿಗೆ ಹೆಚ್ಚು ಅವಕಾಶ ನೀಡಿಲ್ಲ ಎನ್ನುವ ಅಂಬೋಣದೊಂದಿಗೆ ಶುರುವಾದ ವಿವಾದ, ಪರ್ಯಾಯ ಸಮ್ಮೇಳನದವರೆಗೆ ತಂದು ನಿಲ್ಲಿಸಿತ್ತು. ಆದರೆ, ಈ ವಿಷಯದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರ ವಾದ ಸರಿಯಾಗಿಯೇ ಇತ್ತು.

‘ನಾವು ನಡೆಸುತ್ತಿರುವುದು ಸಾಹಿತ್ಯ ಸಮ್ಮೇಳನವೇ ಹೊರತು ಧರ್ಮದ ಸಮ್ಮೇಳನವಲ್ಲ. ಇಲ್ಲಿ ಭಾಷೆ, ನಾಡು, ನುಡಿ ಮುಖ್ಯವೇ ಹೊರತು ಧರ್ಮವಲ್ಲ’ ಎನ್ನುವ ಸ್ಪಷ್ಟ ಮಾತನ್ನು ಮೊದಲ ದಿನದಿಂದಲೂ ಹೇಳುತ್ತ ಬಂದರು. ಅದಾದ ಬಳಿಕ,
ಈ ಹಿಂದಿನ ಸಾಹಿತ್ಯ ಸಮ್ಮೇಳನಕ್ಕಿಂತ ಈ ಬಾರಿಯ ಸಮ್ಮೇಳನದಲ್ಲಿ ಮುಸ್ಲಿಮರಿಗೆ ಹೆಚ್ಚಿನ ಸಂಖ್ಯೆಯಲ್ಲಿಯೇ ಅವಕಾಶ ನೀಡಲಾಗಿದೆ. ಇದರೊಂದಿಗೆ ಇಬ್ಬರು ಮುಸ್ಲಿಮರಿಗೆ ಸನ್ಮಾನವನ್ನು ಮಾಡಲಾಗುತ್ತಿದೆ ಎನ್ನುವ ಸ್ಪಷ್ಟನೆ ನೀಡುತ್ತಿದ್ದಂತೆ, ಇದಕ್ಕೆ ಉತ್ತರಿಸುವ ನೆಪದಲ್ಲಿ ‘ಹಿಂದಿ, ಸಂಸ್ಕೃತದ ಹೇರಿಕೆ’ ಎನ್ನುವ ಹೊಸ ವಾದವನ್ನು ಮುಂದಿಟ್ಟರು.

ಈ ರೀತಿಯ ಮೊಂಡುವಾದವನ್ನು ನೋಡಿದರೆ, ಸ್ಪಷ್ಟವಾಗುವುದು ಒಂದು ವಿಷಯವೇನೆಂದರೆ ಪರ್ಯಾಯ ಸಮ್ಮೇಳನವನ್ನು ಆಯೋಜಿಸಿದ್ದವರಿಗೆ ಬೇಕಾಗಿದ್ದದ್ದು, ನ್ಯಾಯಕ್ಕಿಂತ ಹೆಚ್ಚಾಗಿ ಒಟ್ಟಾರೆ ಸಮ್ಮೇಳನದಲ್ಲಿ ಒಂದು ವಿವಾದ ಎನ್ನುವ ಮನಃಸ್ಥಿತಿ ಎನ್ನುವುದು ಸ್ಪಷ್ಟವಾಗುತ್ತದೆ. ಈ ವಿಷಯದಲ್ಲಿ ಸಾಹಿತ್ಯ ಪರಿಷತ್ ಸಹ ಒಮ್ಮೆ ಮಾತನಾಡಬಹುದಾಗಿತ್ತು. ಆದರೆ ಎರಡೂ ಕಡೆಯವರು ಪ್ರತಿಷ್ಠೆಗೆ ಬಿದ್ದು, ಅಕ್ಷರ ಜಾತ್ರೆಯಲ್ಲೊಂದು ‘ಕಪ್ಪು ಚುಕ್ಕಿ’ಯನ್ನಿಟ್ಟರು.

ಈ ಎರಡು ಘಟನೆಗಳನ್ನು ನೋಡಿದರೆ, ಎರಡರ ಉದ್ದೇಶವೂ ಒಂದೇ ಆಗಿದೆ. ನಮ್ಮ ಸಿದ್ಧಾಂತ ಅಥವಾ ಪಂಥ ದೊಡ್ಡದು ಎಂದು ತೋರಿಸುವ ನೆಪದಲ್ಲಿ ಮತ್ತೊಂದನ್ನು ವಿರೋಧಿಸುವುದೇ ಆಗಿದೆ. ಎಡ-ಬಲ ಪಂಥದ ಇಬ್ಬರಿಗೂ, ಚರ್ಚೆ ಬೇಕಿಲ್ಲ. ಚರ್ಚೆಯಾಗಿ ಅದಕ್ಕೊಂದು ತಾರ್ತಿಕ ಅಂತ್ಯ ಕಾಣಿಸುವುದು ಬೇಕಿಲ್ಲ. ಬದಲಿಗೆ, ಈ ರೀತಿಯ ಗೊಂದಲ, ಗೋಜಲನ್ನು ಸೃಷ್ಟಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಆತುರದಲ್ಲಿ ಈ ರೀತಿಯ ಎಡವಟ್ಟು ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಏನೇ ಆಗಲಿ, ಸಾಹಿತ್ಯ ಹಾಗೂ ರಾಜಕೀಯ ಜತೆಜತೆಯಲ್ಲಿಯೇ ಹೋಗಬೇಕಾಗಿರುವ ವಿಷಯವಾದರೂ, ರಾಜಕೀಯದ ವಿವಾದಕ್ಕಾಗಿಯೇ ಸಾಹಿತ್ಯವನ್ನು ಬಳಸಿಕೊಳ್ಳುವುದು ಸರಿಯಲ್ಲ.

ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಒಂದು ಸಮುದಾಯವನ್ನು ಓಲೈಸುವುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಜಾತಿ ಆಧರಿತ ಘೋಷಣೆಗಳನ್ನು ಸರ್ವೇ ಸಾಮಾನ್ಯ. ಆದರೆ ಈ ರೀತಿಯ ಪ್ರಚಾರದ ಸಮಯದಲ್ಲಿ ಸಾಹಿತ್ಯಾತ್ಮಕ ಕಟೆಂಟ್ ಪಡೆಯುವುದು ತಪ್ಪಲ್ಲ. ಆದರೆ ಸಾಹಿತ್ಯವನ್ನೇ ಬಳಸಿಕೊಂಡು, ಒಬ್ಬರ ತೇಜೋವಧೆಗೆಂದು ‘ಪುಸ್ತಕ ರೂಪ’ ನೀಡುವುದು ಒಪ್ಪುವ ಮಾತಲ್ಲ.

ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ರಾಜಕೀಯ ವೈಷಮ್ಯದ ಪ್ರಮಾಣ ಕಡಿಮೆ. ಆದರೆ ಇತ್ತೀಚಿನ ಘಟನಾವಳಿಯನ್ನು ಗಮನಿಸಿದರೆ, ಮುಂದೊಂದು ದಿನ ‘ಮಾದರಿ’ ಎನಿಸಿಕೊಂಡಿದ್ದ ಕರ್ನಾಟಕದಲ್ಲಿ ಉತ್ತರ ಭಾರತದಲ್ಲಿ ನಡೆಯುವ ರಾಜಕೀಯ ಸಮರಗಳಿಗೆ ವೇದಿಕೆಯಾಗಲಿದೆ ಎನ್ನುವ ಆತಂಕವಂತೂ ಹೆಚ್ಚಾಗುತ್ತಿದೆ.