Thursday, 19th September 2024

ಭಿನ್ನ ರೀತಿಯ ಹರ್ಪಿಸ್- ಸಿಂಪ್ಲೆಕ್ಸ್

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಹರ್ಪಿಸ್ ಸಿಂಪ್ಲೆಕ್ಸ್ ಕಾಯಿಲೆ ವಯಸ್ಕರಲ್ಲಿ ಅದರಲ್ಲೂ ಹದಿಹರೆಯದವರಲ್ಲಿ ಮತ್ತು ೨೦-೩೦ ವರ್ಷದವರಲ್ಲಿ ಕಣ್ಣಿನ ಕಾರ್ನಿಯಾದ ಸೋಂಕಿನ ರೀತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಚಿಕಿತ್ಸೆಯ ನಂತರ ಸ್ವಲ್ಪ ಕಡಿಮೆಯಾಗಿ ಪುನಃ ಪುನಃ ಸೋಂಕು ಕಾಣಿಸಿ ಕೊಳ್ಳುತ್ತದೆ.

ಮೂರು ವಾರಗಳ ಮೊದಲು ಸರ್ಪಸುತ್ತು ಅಥವಾ ಹರ್ಪಿಸ್ ಜೋಸ್ಟರ್ ಬಗೆಗೆ ಬರೆದಿದ್ದೆ. ಅದರಂತೆಯೇ ಚರ್ಮ ಮತ್ತು ಕಣ್ಣಿನ ಮೇಲೆ ಲಕ್ಷಣಗಳನ್ನು ತೋರಿಸುವ ಹರ್ಪಿಸ್ ಸಿಂಪ್ಲೆಕ್ಸ್ ಜೋಸ್ಟರ್‌ಗೆ ಭಿನ್ನವಾದ ವೈರಸ್. ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಸಿಂಪ್ಲೆಕ್ಸ್
ಸೋಂಕು ಚರ್ಮದ ಮೇಲೆ ಸಣ್ಣ ಸಣ್ಣ ಹುಗುಳು, ಗುಳ್ಳೆಗಳ ರೀತಿ ಕಾಣಿಸಿಕೊಂಡು ನಂತರ ಅದೇ ಹುಣ್ಣಿನ ರೀತಿಗೆ ಬದಲಾಗಬಹುದು.

ಮುಖ್ಯವಾಗಿ ಎರಡು ರೀತಿಯ ಸೋಂಕುಗಳಿವೆ. ೧) ಮುಖದ ಮೇಲೆ ಕಾಣಿಸಿಕೊಳ್ಳುವ ಸೋಂಕು ೨) ಜನನಾಂಗ ಅಥವಾ ಗುಪ್ತಾಂಗ ಗಳ ಮೇಲಿನ ಸೋಂಕು. ಚರ್ಮಕ್ಕೆ ಸಂವೇದನೆ ಉಂಟು ಮಾಡುವ ನರಗಳಲ್ಲಿ ವೈರಸ್ ಬಹಳ ಕಾಲ ನಿಷ್ಕ್ರಿಯವಾಗಿರು ತ್ತದೆ. ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ವೈರಾಣು ನರಗಳಿಂದ ಹೊರಬಂದು ಚರ್ಮದ ಭಾಗದಲ್ಲಿ ಕಾಣಿಸಿಕೊಂಡು, ಅಲ್ಲಿ ಬಹಳವಾಗಿ ತನ್ನ ಸಂಖ್ಯೆಯನ್ನು ವೃದ್ಧಿಸಿ ಕೊಂಡು ವ್ಯಕ್ತಿಗೆ ಕಾಯಿಲೆ ಉಂಟು ಮಾಡುತ್ತದೆ.

ಒಂದು ನಿರ್ದಿಷ್ಟ ಅವಧಿಯ ನಂತರ ಮತ್ತೆ ಪುನಃ ಮೊದಲಿನಂತೆ ನರಗಳ ಒಳಭಾಗ ಸೇರಿ ವೈರಸ್ ನಿಷ್ಕ್ರಿಯಗೊಳ್ಳುತ್ತದೆ. ಮೊದಲ ರೀತಿಯ ಸೋಂಕು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಲಕ್ಷಣ ತೋರುತ್ತದೆ. ಜನಸಂಖ್ಯೆ ಜಾಸ್ತಿಯಿರುವ ತೃತೀಯ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ೫ ವರ್ಷದೊಳಗಿನ ಹೆಚ್ಚಿನ ಎಲ್ಲಾ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲ್ವರ್ಗದಲ್ಲಿನ ಮಕ್ಕಳಲ್ಲಿ ಈ ಸೋಂಕು ಸ್ವಲ್ಪ ಕಡಿಮೆ. ಎರಡನೇ ರೀತಿಯ ಸೋಂಕು ಹದಿಹರೆಯದ ನಂತರ ಕಾಣಿಸಿಕೊಳ್ಳುತ್ತದೆ, ಲೈಂಗಿಕವಾಗಿ ಹರಡುತ್ತದೆ.

ಜಗತ್ತಿನಲ್ಲಿ ಬಹಳಷ್ಟು ಜನರಲ್ಲಿ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಇರಬಹುದು. ಅಂತಹ ಹೆಚ್ಚಿನವರಲ್ಲಿ ರೋಗ ಲಕ್ಷಣವಿರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಒಂದು ಸಮೀಕ್ಷೆಯ ಪ್ರಕಾರ ಪ್ರಪಂಚದಲ್ಲಿ ೫೦ ವರ್ಷ ದಾಟಿದವರಲ್ಲಿ ೬೫% ಜನರಲ್ಲಿ ಮೊದಲ ಅಥವಾ ಎರಡನೇ ರೀತಿಯ ವೈರಸ್ ಇದ್ದರೆ, ೧೫-೪೯ ವರ್ಷದವರಲ್ಲಿ ೧೩% ಜನರಲ್ಲಿ ವೈರಸ್ ಇರುತ್ತದೆ. ಇನ್ನೊಂದು ಸಂಶೋಧನೆಯ ಪ್ರಕಾರ ೫೦ ವರ್ಷ ವಯಸ್ಸು ತಲುಪಿದ ೯೦% ಜನರ ದೇಹದಲ್ಲಿ ಸಿಂಪ್ಲೆಕ್ಸ್ ವೈರಸ್‌ಗೆ ಆಂಟಿಬಾಡಿ ಉತ್ಪನ್ನವಾಗಿರುತ್ತದೆ. ಅಂದರೆ ಅರ್ಥ ಈ ವೈರಸ್ ಜಗತ್ತಿನ ಹೆಚ್ಚು ಜನರಲ್ಲಿ ಇದ್ದರೂ ಸೋಂಕು ಉಂಟು ಮಾಡುವುದಿಲ್ಲ.

ಸೋಂಕು ಬರುವ ಬಗೆ ಹೇಗೆ?: ಸಕ್ರಿಯವಾದ ಸೋಂಕು ಇರುವ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಬಹುದು. ಸಕ್ರಿಯ ಸೋಂಕಿರುವ ವ್ಯಕ್ತಿಯ ಜೊಲ್ಲು (ಸಲೈವ), ಜನನಾಂಗದ ದ್ರವಗಳಲ್ಲಿ ವೈರಸ್ ಸ್ರವಿಸಲ್ಪಡುತ್ತದೆ. ಸಕ್ರಿಯ ಸೋಂಕಿರುವಾಗ ಉಳಿದ ಅವಧಿಗಿಂತ ೧೦೦ ಅಥವಾ ೧೦೦೦ ಪಟ್ಟು ಹೆಚ್ಚಿನ ವೈರಸ್ ಸ್ರವಿಸಲ್ಪಡುತ್ತದೆ. ಸೋಂಕು ಪೀಡಿತ ದ್ರವಗಳ ನೇರ ಸಂಪರ್ಕದಿಂದ ಸೋಂಕು ಹರಡುತ್ತದೆ. ಮೊದಲ ಬಾರಿ ಸೋಂಕು ಬಂದು ಮತ್ತೆ ಕೆಲವರಲ್ಲಿ ಬರದಿರಬಹುದು. ಆದರೆ ಮತ್ತೆ ಕೆಲವರಲ್ಲಿ ಪುನಃ ಪುನಃ ಸೋಂಕು ಕಾಣಿಸಿಕೊಳ್ಳಬಹುದು. ಎರಡನೇ ಅಥವಾ ಮೂರನೇ ಬಾರಿ ಸೋಂಕು ಕಾಣಿಸಿಕೊಂಡರೆ ದೇಹದಲ್ಲಿ ಆಗಲೇ ಆಂಟಿಬಾಡಿ ಹುಟ್ಟಿಕೊಂಡಿ ರುವುದರಿಂದ ಸೋಂಕಿನ ತೀವ್ರತೆ ತುಂಬಾ ಕಡಿಮೆ ಮಟ್ಟದಲ್ಲಿರುತ್ತದೆ.

ವೈರಸ್ ಸ್ರವಿಸಲ್ಪಡುವುದು ಎಂದರೇನು ?: ಈ ವೈರಸ್‌ನ ಒಂದು ಭಿನ್ನ ಲಕ್ಷಣ ಎಂದರೆ ವೈರಸ್ ಪದೇ ಪದೇ ಸ್ರವಿಸಲ್ಪಡುತ್ತದೆ. ವೈರಸ್ ಸೋಂಕು ಒಬ್ಬ ವ್ಯಕ್ತಿಗೆ ಆದಾಗ ಆತನ ದೇಹವು ವೈರಸ್ ತುಣುಕುಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಈ ವೈರಸ್ ಬೇರೆಯವರಿಗೆ ಹರಡುತ್ತದೆ. ಸೋಂಕಿನ ನಂತರ ಗುಳ್ಳೆಯಾಗಿ ವೃಣವಾದಾಗ ವೈರಸ್ ಬಹಳ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತದೆ. ಒಬ್ಬ ವ್ಯಕ್ತಿಯಲ್ಲಿ ಯಾವುದೇ ಕಾಯಿಲೆಯ ಲಕ್ಷಣವಿಲ್ಲದಿzಗಲೂ ವೈರಸ್ ೧೦% ದಿನಗಳಲ್ಲಿ ಹೊರಗೆ ಸ್ರವಿಸಲ್ಪಡುತ್ತದೆ. ಕಾಯಿಲೆಯ ಲಕ್ಷಣವಿzಗ ೨೦% ದಿನಗಳಲ್ಲಿ ಹೊರಗೆ ಸ್ರವಿಸಲ್ಪಡುತ್ತದೆ.  ದೇಹದ ಪ್ರತಿರೋಧ ಶಕ್ತಿ ಕುಂದಿಸುವ ಯಾವುದೇ ಕಾಯಿಲೆ ರೋಗಿಯಲ್ಲಿ ಇದ್ದಾಗ ಪುನಃ ಪುನಃ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಸ್ರವಿಸಲ್ಪಡುತ್ತದೆ.

ಪ್ರಾಥಮಿಕ ಹರ್ಪಿಸ್ ಸಿಂಪ್ಲೆಕ್ಸ್: ಆರಂಭದಲ್ಲಿ ತುಂಬಾ ಸಣ್ಣ ಪ್ರಮಾಣದಲ್ಲಿ ಆರಂಭವಾಗುವ ಈ ಸೋಂಕು ಕೆಲವೊಮ್ಮೆ ತೀವ್ರ ಪ್ರಮಾಣ ದಲ್ಲಿಯೂ ಕಾಣಿಸಿಕೊಳ್ಳಬಹುದು. ಎರಡನೇ ರೀತಿಯ ಸೋಂಕು ಹೆಚ್ಚಾಗಿ ಪ್ರಾಥಮಿಕ ಸೋಂಕಿನ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ.

ಬಾಯಿಯಲ್ಲಿ ಕಾಣಿಸಿಕೊಳ್ಳುವ ಹರ್ಪಿಸ್ ಸೋಂಕು: (ಹರ್ಪಿಟಿಕ್ ಜಿಂಜಿವೋಸ್ಟೋಮ ಟೈಟಿಸ್ ) ೧ ರಿಂದ ೫ ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮಗು ವೈರಸ್ ಸೋಂಕಿಗೆ ಒಳಗಾಗಿ ನಾಲ್ಕೈದು ದಿನಗಳ ನಂತರ ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಜ್ವರ ಕೆಲವೊಮ್ಮೆ ತೀವ್ರ ರೀತಿಗೆ ತಿರುಗಬಹುದು. ಆಗ ಮಗು ತುಂಬಾ ಚಡಪಡಿಸಬಹುದು. ಬಾಯಿಯಿಂದ ಕುಡಿಯುವಾಗ, ತಿನ್ನುವಾಗ ಮಗುವಿಗೆ ತುಂಬಾ ನೋವಾಗುತ್ತದೆ. ಉಸಿರು ದುರ್ಗಂಧದಿಂದ ಕೂಡಿರುತ್ತದೆ.

ಹಲ್ಲಿನ ಒಸಡುಗಳು ಊದಿಕೊಂಡು, ಕೆಂಪಗಾಗಿ ರಕ್ತವನ್ನು ಹೊರಸೂಸುತ್ತವೆ. ನಾಲಿಗೆ, ಗಂಟಲು ಮತ್ತು ಕೆನ್ನೆಯ ಒಳಭಾಗದಲ್ಲಿ ಸಣ್ಣ ಸಣ್ಣ ಗುಳ್ಳೆಗಳಾಗಿ ಅವು ನಂತರ ಬಿಳಿಯ ಬಣ್ಣದ ಕಲೆಗಳಾಗಿ ಮಾರ್ಪಡುತ್ತವೆ. ಈ ಬಿಳಿಯ ಕಲೆಗಳು ನಂತರ ಹುಣ್ಣಾಗುತ್ತವೆ. ಆಗ ಅವು ಹಳದಿ ಬಣ್ಣದ ಪದರದಿಂದ ಆವೃತವಾಗಿರುತ್ತವೆ. ಬಾಯಿಯ ಭಾಗಕ್ಕೆ ಸಂಬಂಧಿಸಿದ ಹಾಲ್ರಸ ಗ್ರಂಥಿಗಳು (ಲಿಂಫ್ ಗ್ಲ್ಯಾಂಡ್) ದಪ್ಪ ಗಾಗಿ, ಮುಟ್ಟಿದರೆ ನೋವನ್ನುಂಟುಮಾಡುತ್ತವೆ. ಸಾಮಾನ್ಯವಾಗಿ ೩ ರಿಂದ ೫ ದಿವಸಗಳಲ್ಲಿ ಜ್ವರವು ಹತೋಟಿಗೆ ಬರುತ್ತದೆ. ೨ ವಾರಗಳಲ್ಲಿ ಕಾಯಿಲೆ ಕಡಿಮೆಯಾಗುತ್ತದೆ.

ವಯಸ್ಕರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯ ಲಕ್ಷಣಗಳು: ಜ್ವರ ತಲೆನೋವು, ಮೈ ಕೈ ನೋವು, ಅಸಹಜವಾಗಿ ಸುಸ್ತಾಗುವುದು, ಹಸಿವು ತೀವ್ರವಾಗಿ ಕಡಿಮೆಯಾಗುವುದು, ಸೋಂಕಿನ ಸ್ಥಳದಲ್ಲಿ ತೀವ್ರ ರೀತಿಯ ನೋವು ಕಾಣಿಸುತ್ತದೆ.

ಜನನಾಂಗಗಳ ಮೇಲಿನ ಹರ್ಪಿಸ್ ಸಿಂಪ್ಲೆಕ್ಸ್ : ಎರಡನೇ ರೀತಿಯ ಸೋಂಕು ಲೈಂಗಿಕ ಕ್ರಿಯೆಯಿಂದ ಹರಡುತ್ತದೆ. ಗಂಡಸರ ಜನನಾಂಗ ಶಿಶ್ನದ ಮೇಲೆ ಸಣ್ಣ ಹುಣ್ಣಿನ ರೀತಿಯಲ್ಲಿ ಸೋಂಕು ಆರಂಭದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹುಣ್ಣು ಶಿಶ್ನದ ಮುಂದೊಗಲು, ಚರ್ಮದ ಭಾಗ ಅಥವಾ ಶಿಶ್ನದ ಮುಖ್ಯ ಭಾಗ – ಈ ಮೂರು ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಬಹಳ ನೋವಾಗುತ್ತದೆ. ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಎರಡು ಮೂರು ವಾರಗಳವರೆಗೆ ಇದು ಮುಂದುವರಿಯುತ್ತದೆ.

ಮಹಿಳೆಯರಲ್ಲಿ ಈ ಸೋಂಕಾದಾಗ ಸ್ತ್ರೀ ಜನನಾಂಗದ ಹೊರ ಚರ್ಮ, ಯೋನಿ ಮತ್ತು ಸರ್ವಿಕ್ಸ್ (ಗರ್ಭಕೋಶದ ಕೆಳಗಿನ ಆರಂಭದ ಭಾಗ)ಗಳಲ್ಲಿ ಹುಣ್ಣಿನ ರೀತಿಯಲ್ಲಿ ಲಕ್ಷಣ ತೋರಿಸುತ್ತದೆ. ಬಹಳಷ್ಟು ನೋವಿರುತ್ತದೆ. ಮೂತ್ರ ವಿಸರ್ಜಿಸಲು ಬಹಳ ತೊಂದರೆ ಯಾಗುತ್ತದೆ.

ಹರ್ಪಿಸ್ ಸಿಂಪ್ಲೆಕ್ಸ್ ಉಂಟು ಮಾಡುವ ತೊಡಕುಗಳು: ಕಣ್ಣಿನ ಭಾಗದಲ್ಲಿ ಸೋಂಕುಗಳು : ಕಣ್ಣಿನ ರೆಪ್ಪೆ ಊದಿಕೊಳ್ಳಬಹುದು. ಕಣ್ಣಿನ
ಹೊರಪದರ ಕಂಜೈಂಕ್ಟೈವದಲ್ಲಿ ಸೋಂಕು ಆಗಬಹುದು. ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾದ ಮೇಲೆ ಬಿಳಿ ಚುಕ್ಕೆಯ ರೀತಿಯಲ್ಲಿ
ಆರಂಭದಲ್ಲಿ ಕಾಣಿಸಿಕೊಂಡು ನಂತರ ಅವು ಗಮನಾರ್ಹವಾಗಿ ಹುಣ್ಣಾಗಿ ಪರಿವರ್ತನೆಯಾಗಬಹುದು. ಗಂಟಲಲ್ಲಿ ಸೋಂಕಾಗಿ ಬಹಳ
ನೋವುಂಟಾಗಬಹುದು.

ಏಟೋಪಿಕ್ ಡರ್ಮಟೈಟಿಸ್ ಚರ್ಮದ ಕಾಯಿಲೆ ಇರುವ ರೋಗಿಗಳಲ್ಲಿ ಈ ಸೋಂಕು ಕಾಣಿಸಿಕೊಂಡು ಎಕ್ಸೀಮಾ ಗರ್ಪಟಿಕಮ ಎಂಬ
ಚರ್ಮದ ಮೇಲಿನ ದzಗಿ ಲಕ್ಷಣ ತೋರಿಸುತ್ತದೆ. ಮುಖದ ಮೇಲೆ ಹಲವಾರು ಕೀವು ಗುಳ್ಳೆಗಳು ಕಾಣಿಸಿಕೊಂಡು, ಆಗಾಗ ಜ್ವರ ಬರಬಹುದು.

ಮುಖದ ಮೇಲಿನ ಹಲವು ನರಗಳು ಈ ಸೋಂಕಿಗೆ ಒಳಗಾದಾಗ ಆ ನರಗಳಿಗೆ ಸಂಬಂಧಪಟ್ಟ ಮಾಂಸಖಂಡಗಳು ನಿಶ್ಚೇತನಗೊಂಡು ಮುಖದ ಚಲನೆ ತೀವ್ರವಾಗಿ ಕುಂಠಿತಗೊಳ್ಳಬಹುದು. ದೈಹಿಕವಾಗಿ ಕ್ಷೀಣಗೊಂಡ ರೋಗಿಗಳಲ್ಲಿ ತೀವ್ರ ರೀತಿಯ ಗಂಭೀರವಾದ ಹರ್ಪಿಸ್ ಸಿಂಪ್ಲೆಕ್ಸ್ ಸೋಂಕು ಕಾಣಿಸಿಕೊಳ್ಳಬಹುದು.

ಕಣ್ಣಿನ ಹರ್ಪಿಸ್ ಸಿಂಪ್ಲೆಕ್ಸ್‌ನ ಲಕ್ಷಣಗಳು: ೬ ತಿಂಗಳ ಮಗುವಿನಿಂದ ೫ ವರ್ಷದವರೆಗಿನ ಮಕ್ಕಳಲ್ಲಿ ಪ್ರಾಥಮಿಕ ಹರ್ಪಿಸ್‌ನ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ.

ರೋಗಲಕ್ಷಣಗಳು: ಕಣ್ಣಿನ ರೆಪ್ಪೆಯ ಮೇಲೆ ಮತ್ತು ಕಣ್ಣಿನ ಸುತ್ತಮುತ್ತ ಸಣ್ಣ ಸಣ್ಣ ಹಲವಾರು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆ ಗಳು ಕ್ರಮೇಣ ತನ್ನಿಂದ ತಾನೇ ವಾಸಿಯಾಗುತ್ತಾ ಬರುತ್ತವೆ. ಕೆಲವು ಮಕ್ಕಳಲ್ಲಿ ಒಂದೇ ಕಣ್ಣಿನಲ್ಲಿ ಕಂಜಂಕ್ಟವೈಟಿಸ್ ಕಾಯಿಲೆಯ ಲಕ್ಷಣ ಗಳು – ಕಣ್ಣಿನಲ್ಲಿ ನೀರು ಬರುವುದು, ಕಣ್ಣು ವಿಪರೀತ ಕೆಂಪಾಗಿರುವುದು, ಕಣ್ಣಿನಲ್ಲಿ ಕಸ ಬಿದ್ದ ಅನುಭವ – ಕಾಣಿಸಿಕೊಳ್ಳುತ್ತದೆ.

ಕಣ್ಣಿನ ಕಪ್ಪು ಗುಡ್ಡೆ ಕಾರ್ನಿಯಾದ ಸೋಂಕು ನಂತರ ಕಾಣಿಸಿಕೊಳ್ಳುತ್ತದೆ. ಸಣ್ಣ ಸಣ್ಣ ಬಿಳಿಯ ಬಣ್ಣದ ಚುಕ್ಕೆಗಳು ಕಾರ್ನಿಯಾದ ತುಂಬಾ
ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ನಿಧಾನವಾಗಿ ದೊಡ್ಡದಾಗುತ್ತಾ ಹುಣ್ಣಿನ ರೂಪ ಅಥವಾ ಅಲ್ಸರ್ ರೂಪ ಪಡೆದುಕೊಳ್ಳಬಹುದು. ಹರ್ಪಿಸ್ ಸಿಂಪ್ಲೆಕ್ಸ್ ಕಾಯಿಲೆ ವಯಸ್ಕರಲ್ಲಿ ಅದರಲ್ಲೂ ಹದಿಹರೆಯ ದವರಲ್ಲಿ ಮತ್ತು ೨೦-೩೦ ವರ್ಷದವರಲ್ಲಿ ಕಣ್ಣಿನ ಕಾರ್ನಿಯಾದ ಸೋಂಕಿನ ರೀತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಚಿಕಿತ್ಸೆಯ ನಂತರ ಸ್ವಲ್ಪ ಕಡಿಮೆಯಾಗಿ ಪುನಃ ಪುನಃ ಸೋಂಕು ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ : ವೈರಸ್ ವಿರುದ್ಧದ ಇತ್ತೀಚಿನ ಔಷಧ ಗ್ಯಾನ್ ಸೈಕ್ಲೋವಿರ್ ಅಥವಾ ಆ ಗುಂಪಿನ ಔಷಧ ಈ ಸೋಂಕಿನ ಚಿಕಿತ್ಸೆಯಲ್ಲಿ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ. ಅದನ್ನು ಸರಿಯಾದ ಪ್ರಮಾಣದಲ್ಲಿ ಮಾತ್ರೆಯ ರೂಪದಲ್ಲಿ ನಿರ್ದಿಷ್ಟ ಅವಧಿಯವರೆಗೆ ಕೊಡಬೇಕು. ಅದೇ ಔಷಧದ ಮುಲಾಮು ಚರ್ಮದ ಮೇಲೆ ಸೋಂಕಿನ ಆರಂಭದಲ್ಲಿ ಉಪಯೋಗಿಸಲು ಆರಂಭಿಸಿದರೆ ತುಂಬಾ ಪರಿಣಾಮಕಾರಿ. ಪುನಃ ಪುನಃ ಬರುವ ಸೋಂಕನ್ನು ಇದು ತಡೆಗಟ್ಟುತ್ತದೆ. ಕಣ್ಣಿನ ಚಿಕಿತ್ಸೆಯಲ್ಲಿಯೂ ಗ್ಯಾನ್ ಸೈಕ್ಲೋವಿರ್ ಮುಲಾಮು ಮತ್ತು ಮಾತ್ರೆ ಪರಿಣಾಮಕಾರಿ.

ಡೆಂಡ್ರೈಟಿಕ್ ಅಲ್ಸರ್: ಈ ಕಾಯಿಲೆ ವಯಸ್ಕರಲ್ಲಿ ಕಾಣಿಸಿಕೊಳ್ಳುವ ಮುಖ್ಯ ರೀತಿ. ಸಣ್ಣ ಸಣ್ಣ ಬಿಳಿಯ ಬಣ್ಣದ ಚುಕ್ಕೆಗಳ ರೀತಿಯ ಸೋಂಕು ಕಪ್ಪುಗುಡ್ಡೆ ಕಾರ್ನಿಯಾದ ಮೇಲೆ ಕಾಣಿಸಿಕೊಂಡು ಅದು ದೊಡ್ಡದಾಗುತ್ತಾ ಒಂದು ನಿರ್ದಿಷ್ಟ ರೂಪ ಪಡೆದುಕೊಂಡು ನಿಧಾನವಾಗಿ ಕಾರ್ನಿಯಾದ ಆಳಕ್ಕೆ ಸೋಂಕು ಇಳಿಯುತ್ತಾ ಹುಣ್ಣು ಅಥವಾ ಅಲ್ಸರ್‌ನ ರೂಪ ಪಡೆಯುತ್ತದೆ. ಪ್ಲುರಸಿನ್ ಎಂಬ ಬಣ್ಣದಿಂದ ಈ ರೀತಿಯ ಹುಣ್ಣಿನ ಅಥವಾ ಅಲ್ಸರ್‌ನ ಸರಿಯಾದ ಆಕಾರವನ್ನು ನಿರ್ದಿಷ್ಟಪಡಿಸಿಕೊಳ್ಳಬಹುದು. ಈ ಅಲ್ಸರ್‌ನ ಭಾಗದಲ್ಲಿ ಸಂವೇದನೆಯೇ ಇರುವು ದಿಲ್ಲ. ಅಂದರೆ ಸಹಜ ಆರೋಗ್ಯವಂತ ಕಣ್ಣಿನ ಈ ಭಾಗವನ್ನು ಒಂದು ಹತ್ತಿಯ ಚೂರಿನಿಂದ ಸ್ಪರ್ಶಿಸಿದಾಗ ಕಣ್ಣು ಒಮ್ಮೆಲೇ ಮುಚ್ಚಿಕೊಂಡು ಬಿಡುತ್ತದೆ.

ಹೀಗೆ ಕಾಯಿಲೆಗೆ ಒಳಗಾದ ಕಣ್ಣು ಸ್ಪರ್ಶeನ ಕಳೆದುಕೊಂಡಿರುವುದರಿಂದ ಕಣ್ಣು ಮುಚ್ಚಿಕೊಳ್ಳುವುದೇ ಇಲ್ಲ. ನಿಧಾನವಾಗಿ ಅಲ್ಸರ್ ಗುಣವಾಗುತ್ತಾ ಬರುತ್ತದೆ. ಈ ಅಲ್ಸರ್ ಹಂತದಲ್ಲಿ ಅನಗತ್ಯವಾಗಿ ಸ್ಟೀರಾಯ್ಡ್ ಔಷಧದಿಂದ ಚಿಕಿತ್ಸೆ ಮಾಡಿದರೆ ಹುಣ್ಣು ತುಂಬಾ
ದೊಡ್ಡದಾಗಿ ಜಿಯಾಗ್ರಾಫಿಕಲ್ ಅಲ್ಸರ್ ಹಂತವನ್ನು ತಲುಪಿ ಚಿಕಿತ್ಸೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

ಚಿಕಿತ್ಸೆ: ಕಾಯಿಲೆ ಬೇಗ ಪತ್ತೆಯಾದರೆ ವೈರಸ್ ವಿರುದ್ಧದ ಔಷಧ ಗ್ಯಾನ್ ಸೈಕ್ಲೋವಿರ್ ಸೂಕ್ತ ಸಮಯ ಮತ್ತು ಸೂಕ್ತ ಡೋಸ್‌ನಲ್ಲಿ ಉಪಯೋಗಿಸಿದಾಗ ಸಮಾಧಾನಕರವಾಗಿ ಗುಣವಾಗುತ್ತದೆ.

ಕೊನೆಯ ಗುಟುಕು: ಕಾಯಿಲೆಯ ಲಕ್ಷಣಗಳ ಆರಂಭದ ಸೂಕ್ತ ನೇತ್ರ ವೈದ್ಯರಲ್ಲಿ ಪರೀಕ್ಷೆ ತುಂಬಾ ಮುಖ್ಯ.